ಪುಸ್ತಕ ಪರಿಚಯ! ವೀರಸನ್ಯಾಸಿ ವಿವೇಕಾನಂದರು!

ಪುಸ್ತಕ ಪರಿಚಯ! ವೀರಸನ್ಯಾಸಿ ವಿವೇಕಾನಂದರು!

ಪುಸ್ತಕ ಪರಿಚಯ !

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೊರ್ನಿಯ.

ಸ್ವಾಮಿ ಪುರುಷೋತ್ತಮಾನಂದರು "ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತ್ರೆಯನ್ನು" ಮೂರು ಸಂಪುಟಗಳಲ್ಲಿ ಕೆಳಕಂಡಂತೆ ಸುಂದರವಾಗಿ ರಚಿಸಿದ್ದಾರೆ.

* ವೀರಸನ್ಯಾಸಿ ವಿವೇಕಾನಂದ

* ವಿಶ್ವವಿಜೇತ ವಿವೇಕಾನಂದ

* ವಿಶ್ವಮಾನವ ವಿವೇಕಾನಂದ

ಇವು ಹೊಸ ಪುಸ್ತಕಗಳಲ್ಲ, ನಾನು ಈಗಷ್ಟೇ ಓದುತ್ತಿದ್ದೇನೆ. ನಿಮ್ಮೆಲ್ಲರೊಡಗೂಡಿ ಹಂಚಿಕೊಳ್ಳುವ ಆಸೆ ಇಲ್ಲಿ ಬರೆಸಿತಷ್ಟೇ...
ಇದು ಎಲ್ಲರೂ ಓದಬೇಕಾದ ಪುಸ್ತಕಗಳು, ಅದರಲ್ಲೂ ಯುವ ಜನಾಂಗದವರೆಲ್ಲರ ಕರ್ತವ್ಯ ಏಂದರೆ ನನ್ನ ಪ್ರಕಾರ ತಪ್ಪಿಲ್ಲ ಎಂದೆನಿಸುತ್ತೆ. ಇದು ಸಾಮಾನ್ಯ ಪುಸ್ತಕವಲ್ಲ, ಅಂದರೆ ಸಾಮಾನ್ಯ ಪುಸ್ತಕಗಳನ್ನು ಓದುವ ಹಾಗೆ ಹಗುರವಾಗಿ ಓದಿ ಮುಗಿಸಲು ಸಾಧ್ಯವಿಲ್ಲ. ಸಾಧ್ಯವಾದರೂ, ಅದರ ಸಂಪೂರ್ಣ ಅರ್ಥ ಗೌರವ ಸಾಧ್ಯವಾಗಿಲ್ಲದೇ ಇರಬಹುದು. ಇದರಲ್ಲಿ ಸ್ವಾಮಿ ಪುರುಷೋತ್ತಮಾನಂದರು ಬಹಳ ಸರಳ ಭಾಷೆಯಲ್ಲಿ ಸ್ವಾಮಿ ವಿವೇಕಾನಂದರ ಮತ್ತು ರಾಮಕೃಷ್ಣ ರ ಆಧ್ಯಾತ್ಮ ಜೀವನ, ಧರ್ಮೋದ್ಧೇಶ, ಜನಸಾಮಾನ್ಯರ ಜೀವನಾಭಿಲಾಷೆಗೆ ಕೊಡುಗೆ, ಲೋಕಕಲ್ಯಾಣ, ಏಳಿಗೆ, ರಾಷ್ಟಾಭಿವೃದ್ಧಿಯ ಚಿಂತನೆಗಳು, ಇನ್ನೂ ಹಲಾವಾರು ಧ್ಯೇಯಗಳನ್ನು ಜನ ಸಾಮಾನ್ಯರಿಗೆ ಅರ್ಥವಾಗುವಂತೆ ವಿವರಿಸಿದ್ದಾರೆ. ಒಂದು ಸಾಲೂ ಮನವನ್ನು ಬೇಸರಿಸುವುದಿಲ್ಲ, ಓದಿಸಿಕೊಂಡು ಹೋಗುವುದು. ನಾನು ಕೆಲವೊಂದು ಪ್ಯಾರಾಗ್ರಾಫ್ ಎಗರಿಸಿ ಓದಿದಾಗೆಲ್ಲ ಹಿಂತಿರುಗಿ ಅದನ್ನೆಲ್ಲ ಮುಗಿಸಿ, ಮತ್ತೆ ಮತ್ತೆ ಓದುತ್ತಾ ಇದ್ದೀನಿ. ಬಹಳಷ್ಟು ಬಾರಿ ಪ್ರತಿಯೊಂದು ಪದವೂ ಅರ್ಥ ಕೊಡುತ್ತೆ, ವಾಕ್ಯದ ಒಟ್ಟಿನ ಅರ್ಥದ ಜೊತೆಗೆ. ಕೆಲವೊಂದು ತುಂಬಾ ಚುಟುಕಾದ ವಾಕ್ಯಗಳಾದರೂ ಬಹು ಮುಖ್ಯವಾದ ತಾತ್ಪರ್ಯ, ಅರ್ಥವನ್ನು ಹಿಡಿದಿಡಿದಿದೆ. ಇವೆಲ್ಲಾ ಈ ಪುಸ್ತಕಗಳ ವಿಶಿಷ್ಟಗಳು!

ಸ್ವಾಮೀಜಿ (ವಿವೇಕಾನಂದರು) ಸುಂದರರಾಮ ಐಯ್ಯರ್ ಅವರೊಡನೆ ಅವರ ಮನೆಯಲ್ಲಿ ತಿರುವನಂತಪುರದಲ್ಲಿ ಕೆಲವುದಿನಗಳು ತಂಗಿದಾಗ ಅವರೊಡನೆ ಸಂಭಾಷಿಸುವಾಗ ಹೀಗೆ ನುಡಿಯುತ್ತಾರೆ:( ಇದು ಸಂಪುಟ ೨: "ವಿಶ್ವವಿಜೇತ ವಿವೇಕಾನಂದ" ದಿಂದ ಹೆಕ್ಕಿದ್ದು.)

"ನೀವು ನಿಮ್ಮ ದಿನನಿತ್ಯದ ಆಚರಣೆಯಲ್ಲಿ ಮಾತುಕಥೆಗಳಲ್ಲಿ ಒಬ್ಬ ಸಂಪ್ರದಾಯಸ್ಥ ಹಿಂದೂ ಎಂದು ತೋರಿಸಿಕೊಳ್ಳುತ್ತಿದ್ದರೂ ಒಳಗೆ ನೀವೊಬ್ಬ ನಾಸ್ತಿಕರೇ ಸರಿ. ನೀವು ನಿಮ್ಮ ಅಲ್ಪ ಬುದ್ಧಿಯ ಆಧಾರದ ಮೇಲೆ ಭಗವಂತನ ಅಮಿತ ಶಕ್ತಿಯನ್ನು ಸೀಮಿತಗೊಳಿಸುತ್ತಿರುವಿರಲ್ಲ! ಜಗತ್ತಿನ ಹಿತಸಾಧನೆಗೆ ಆತ ಏನು ಮಾಡಬಲ್ಲ ಎಂಬುದರ ಬಗ್ಗೆ ನಿಮಗೇನು ತಿಳಿದಿದೆ?"

ಇನ್ನೊಮ್ಮೆ:.....

"ಸಕ್ರಿಯ ದೇಶಭಕ್ತಿಯೆಂದರೆ ಕೇವಲ ಭಾವುಕಥೆಯಲ್ಲ. ಅಥವಾ ತಾಯ್ನಾಡಿನ ಮೇಲಿನ ಬರಿಯ ಪ್ರೀತಿಭಾವವೂ ಅಲ್ಲ. ಅದು ತನ್ನ ದೇಶಬಾಂಧವರ ಸೇವೆ ಮಾಡಬೇಕೆಂಬ ಉಜ್ವಲ ಉತ್ಸಾಹ. ನಾನು ದೇಶದಾದ್ಯಂತ ಕಾಲ್ನಡಿಗೆಯಲ್ಲೇ ಸಂಚರಿಸಿದ್ದೇನೆ; ನಮ್ಮ ಜನರ ಅಜ್ಘಾನ - ದಾರಿದ್ರ್ಯ - ಸಂಕಟಗಳನ್ನು ಕಣ್ಣಾರೆ ಕಂಡಿದ್ದೆನೆ. ಈಗ ನನ್ನ ಸಮಸ್ತ ಚೇತನವೇ ಹೊತ್ತಿ ಉರಿಯತೊಡಗಿದೆ. ಈ ಹೀನ ಪರಿಸ್ಥಿತಿಯಿಂದ ಭಾರತವನ್ನು ಮೇಲೆತ್ತುವ ಪ್ರಚಂಡ ಬಯಕೆ ನನ್ನನ್ನು ದಹಿಸುತ್ತಿದೆ....ಕರ್ಮ - ಗಿರ್ಮ ಎಂದು ಯಾರೂ ಮಾತನಾಡದಿರಲಿ. ಸಂಕಟಪಡುವುದು ಅವರವರ ಕರ್ಮವಾದರೆ ಅವರನ್ನು ಆ ಸಂಕಟದಿಂದ ಬಿಡಿಸುವುದು ನಮ್ಮ ಕರ್ಮ. ನೀನು ದೇವರನ್ನು ಕಾಣಬೇಕಾದರೆ ಮಾನವನ ಸೇವೆ ಮಾಡು. ನೀನು ನಾರಾಯಣನನ್ನು ಪಡೆಯಬೇಕಾದರೆ ಹಸಿದ ಹೊಟ್ಟೆಯಿಂದ ನರಳುತ್ತಿರುವ ಭಾರತದ ಲಕ್ಷಾಂತರ ದರಿದ್ರ ನಾರಾಯಣರ ಸೇವೆ ಮಾಡಬೇಕು".

ಮುಂದುವರೆಯುವುದು......

Comments

Submitted by rasikathe Fri, 04/26/2013 - 03:41

ಮೊದಲ‌ ಮುದ್ರಣ: 1986 ಎರಡನೇ ಮುದ್ರಣ: 1989 ಮೂರನೇ ಮುದ್ರಣ: 1993 ನಾಲ್ಕನೆಯ‌ ಮುದ್ರಣ: 2000
Submitted by makara Thu, 05/02/2013 - 07:55

ವೀರ ಸಂನ್ಯಾಸಿ ವಿವೇಕಾನಂದ ನಿಜಕ್ಕೂ ಉತ್ತಮ ಪುಸ್ತಕ ಡಾ!ಮೀನಾ ಅವರೆ. ಆ ಪುಸ್ತಕವನ್ನು ಎಷ್ಟು ಬಾರಿ ಓದಿದರೂ ಬೇಸರ ಮೂಡುವುದಿಲ್ಲ ಮತ್ತು ನೀವೆಂದಂತೆ ಒಮ್ಮೊಮ್ಮೆ ಓದಿದಂತೆಲ್ಲಾ ಹೊಸ ಹೊಸ ವಿಚಾರಗಳು ಹೊಳೆಯುತ್ತವೆ. ಸಂನ್ಯಾಸಿ ಪದಕ್ಕೆ ನಿಜವಾದ ಅರ್ಥವನ್ನು ತಂದು ಕೊಟ್ಟವರು ಸ್ವಾಮಿ ವಿವೇಕಾನಂದರು ಎನ್ನುವುದನ್ನು ಬಹಳ ಚೆನ್ನಾಗಿ ಮುನ್ನುಡಿಯಲ್ಲೇ ಬರೆದಿರುವ ಸ್ವಾಮಿ ಪುರುಷೋತ್ತಮಾನಂದರು ಪುಸ್ತಕದಾದ್ಯಂತ ಅದನ್ನು ನಿರೂಪಿಸಿದ್ದಾರೆ. ಆ ಪುಸ್ತಕದ ಮತ್ತೊಂದು ವೈಶಿಷ್ಠ್ಯವೇನೆಂದರೆ ಅವರು ತಾವು ಕೊಟ್ಟಿರುವ ಹೇಳಿಕೆಗಳಿಗೆಲ್ಲಾ ಸೂಕ್ತವಾದ ಉಲ್ಲೇಖನಗಳನ್ನು ಹಾಗೂ ವಿವರಣೆಗಳನ್ನು ಕೊಟ್ಟಿರುವುದು ಆ ಪುಸ್ತಕವನ್ನು ವೈಜ್ಞಾನಿಕ ಲೇಖನದಂತೆ ಬರೆದಿದ್ದಾರೆನ್ನುವುದನ್ನು ಮನಗಾಣಬಹುದು.