೯. ಲಲಿತಾ ಸಹಸ್ರನಾಮ ೧ ಮತ್ತು ೨ರ ವಿವರಣೆ

೯. ಲಲಿತಾ ಸಹಸ್ರನಾಮ ೧ ಮತ್ತು ೨ರ ವಿವರಣೆ

ಚಿತ್ರ

ಲಲಿತಾ ಸಹಸ್ರನಾಮ ೧,೨

೧. ಶ್ರೀ ಮಾತಾ
Śrī Mātā श्री माता (1)
ನಾವು ನಮ್ಮ ತಾಯಿಯನ್ನು ಮಾತಾ ಎಂದು ಸಂಭೋದಿಸುತ್ತೇವೆ; ಮಾತೆ ಎಂದರೆ ತಾಯಿ. ಇಲ್ಲಿ ಶ್ರೀ ಎನ್ನುವ ಪೂರ್ವ ಪ್ರತ್ಯಯವು ಮುಖ್ಯವಾಗಿದೆ; ‘ಶ್ರೀ’ ಎನ್ನುವುದು ಅತ್ಯಂತ ಉನ್ನತವಾದ ಮಾತೃತ್ವವನ್ನು ಪ್ರತಿನಿಧಿಸುತ್ತದೆ. ಮಾನವ ತಾಯಂದಿರು ತಮ್ಮ ಮಕ್ಕಳನ್ನು ಪ್ರೀತಿ ಮತ್ತು ಆದರಗಳಿಂದ ನೋಡಿಕೊಳ್ಳಬಹುದು ಆದರೆ ಅನುಭವಿಸಲೇಬೇಕಾದ ವಿಧಿ ಲಿಖಿತವಾದ ತಮ್ಮ ಪ್ರೀತಿಪಾತ್ರರ ದುಃಖ ಮತ್ತು ಯಾತನೆಗಳನ್ನು ಅವರು ನಿವಾರಿಸಲಾರರು. ಆದರೆ ಲಲಿತಾಂಬಿಕೆಯು ಈ ಮಾನವ ತಾಯಂದಿರಿಗಿಂತ ಹೆಚ್ಚು ಏಕೆಂದರೆ ಅವಳಿಗೆ ತನ್ನ ಮಕ್ಕಳ ದುಃಖ ಮತ್ತು ಯಾತನೆಗಳನ್ನು ಹೋಗಲಾಡಿಸುವ ಶಕ್ತಿ ಇದೆ. ದೇವಿಯು ಈ ಸಮಸ್ತ ವಿಶ್ವವನ್ನೊಳಗೊಂಡ ಬ್ರಹ್ಮಾಂಡದ ತಾಯಿಯಾಗಿದ್ದಾಳೆ, ಆದ್ದರಿಂದ ಇಲ್ಲಿ ಮಕ್ಕಳೆಂದರೆ ಈ ಸಮಸ್ತ ವಿಶ್ವದ ಎಲ್ಲಾ ಜೀವಿಗಳು. ದೇವಿಯನ್ನು ಮಾತೆ ಎಂದು ಕರೆಯಲಾಗಿದೆ, ಏಕೆಂದರೆ ಅವಳು ಸೃಷ್ಟಿ, ಸ್ಥಿತಿ ಮತ್ತು ಲಯ ಕರ್ತಳು. ಈ ಪ್ರಪಂಚವು ಅವಳಿಂದ ಆವಿರ್ಭಾವವಾಗಿ, ಅವಳ ಆಣತಿಯಂತೆ ನಡೆಯುತ್ತದೆ ಮತ್ತು ಲಯಗೊಂಡಾಗ ಈ ವಿಶ್ವವು ಅವಳಲ್ಲಿ ಲೀನವಾಗುತ್ತದೆ. ಸಂಸಾರ ಚಕ್ರವು ಹುಟ್ಟು, ಜೀವನ ಮತ್ತು ಮರಣ ಇವುಗಳ ಪರಿವರ್ತನೆಯಾಗಿದೆ (ಸಂಸಾರ ಎನ್ನುವ ಶಬ್ದಕ್ಕೆ ಇಂದ್ರಿಯ ಗೋಚರವಾದ ಈ ಪ್ರಪಂಚ ಅಥವಾ ರೂಪಾಂತರ ಹೊಂದುತ್ತಿರುವ ಈ ಪ್ರಪಂಚ ಎನ್ನುವ ಅರ್ಥಗಳೂ ಇವೆ). ಸಂಸಾರವನ್ನು ಸಾಗರವೆಂದೂ ಕರೆದಿದ್ದಾರೆ; ಏಕೆಂದರೆ ಈ ಸಂಸಾರ ಸಾಗರದಲ್ಲೇಳುವ ಪ್ರವಾಹದ ವಿರುದ್ಧ ಈಜುವುದು ಬಹು ಪ್ರಯಾಸದ ಕೆಲಸ. ಸಂಸಾರದ ಈ ಪ್ರವಾಹವು ಗ್ರಹಣೇಂದ್ರಿಯಗಳಿಂದ (ಪಂಚೇಂದ್ರಿಯಗಳಿಂದ) ಉಂಟಾಗುತ್ತದೆ. ಈ ಗ್ರಹಣೇಂದ್ರಿಯಗಳು ತಮ್ಮ ಅನುಭವಗಳಿಂದ ಮನಸ್ಸಿನ ಮೇಲೆ ಪ್ರಭಾವವನ್ನುಂಟು ಮಾಡಿ ಆಶೆ ಮತ್ತು ಮೋಹಗಳು ಉಂಟಾಗುವಂತೆ ಮಾಡುತ್ತವೆ. ಕೇವಲ ‘ಶ್ರೀ ಮಾತೆ’ಯು ಮಾತ್ರವೇ ನಮಗೆ ಈ ಸಂಸಾರ ಸಾಗರದ ಅಡೆತಡೆಗಳನ್ನು ದಾಟಲು ಸಹಾಯ ಮಾಡಿ ನಾವು ನಮ್ಮ ಗುರಿಯಾದ ಬ್ರಹ್ಮಸಾಕ್ಷಾತ್ಕಾರವನ್ನು ಪಡೆಯುವಂತೆ ಮಾಡಬಲ್ಲಳು. ಇದು ಅವಳನ್ನು ಪೂಜಿಸುವುದರಿಂದ ಮಾತ್ರವೇ ಸಾಧ್ಯವಾಗುತ್ತದೆ. 
      ‘ಶ್ರೀ ಮಾತಾ’ ಎಂದರೆ ದೇವಿಯರಾದ ಶ್ರೀ ಲಕ್ಷ್ಮೀ, (ಐಶ್ವರ್ಯದ ಅಧಿದೇವತೆ), ಸರಸ್ವತೀ (ವಿದ್ಯೆಯ ಅಧಿದೇವತೆ) ಮತ್ತು ರುದ್ರನ ಹೆಂಡತಿಯಾದ ರುದ್ರಾಣಿ (ಲಯಕಾರಿಣಿ ಅಥವಾ ಲಯದ ಅಧಿದೇವತೆ) ಇವರುಗಳ ತಾಯಿಯೆಂದು ಅರ್ಥ. ಇಲ್ಲಿ ರುದ್ರನು ಶಿವನಿಗಿಂತ ಬೇರೆಯಾದವನು. ಆದ್ದರಿಂದ ಶ್ರೀ ಮಾತೆಯು ಈ ಮೂರೂ ದೇವಿಯರ ತಾಯಿಯೆಂದು ಅರ್ಥ. ದೂರ್ವಾಸನು ಒಬ್ಬ ಮಹಾನ್ ಋಷಿ ಮತ್ತು ಅವನು ದೇವಿಯನ್ನು ಸ್ತುತಿಸುವ ೬೦ ಶ್ಲೋಕಗಳುಳ್ಳ ’ಶ್ರೀ ಶಕ್ತಿಮಹಿಮ್ನಃ ಸ್ತೋತ್ರ’ವನ್ನು ರಚಿಸಿದ್ದಾನೆ. “ಹೇ, ಮಾತೇ! ಪರಮ ದಯಾಮಯಳೇ! ನಾನು ಅನೇಕ ತಾಯಂದಿರಲ್ಲಿ ಜನ್ಮ ತಳೆದಿದ್ದೇನೆ, ಮುಂದೆಯೂ ಕೂಡಾ ಅನೇಕ ತಾಯಂದಿರಲ್ಲಿ ಜನ್ಮ ತಾಳಬಹುದು. ನನ್ನ ಅನೇಕ ಜನ್ಮಗಳಿಂದ ನನಗೆ ಬೇರೆ ಬೇರೆ ತಾಯಂದಿರಿದ್ದಾರೆ, ಹಾಗಾಗಿ ನನ್ನ ತಾಯಂದಿರ ಸಂಖ್ಯೆಯು ಲೆಕ್ಕವಿಲ್ಲದಷ್ಟು. ನಾನು ಮತ್ತೆ ಹುಟ್ಟಿದಾಗ ಅದರೊಂದಿಗೆ ಅನುಭವಿಸಬೇಕಾದ ಯಾತನೆಗಳಿಂದ ನನಗೆ ಅತೀವ ಭಯವಾಗಿದೆ. ಹೇ ತಾಯೇ! ನಾನು ನಿನಗೆ ಶರಣಾಗುತ್ತಿದ್ದೇನೆ, ಪುನರ್ಜನ್ಮ ಪಡೆಯುವುದರಿಂದ ಮುಕ್ತಿಯನ್ನು ನನಗೆ ದಯಪಾಲಿಸು.” ಎಂದು ಸ್ತುತಿಸಿದ್ದಾನೆ. 
       ಯಾವುದೇ ಶಬ್ದಕ್ಕೆ ಪೂರ್ವ ಪ್ರತ್ಯಯವಾಗಿ ’ಶ್ರೀ’ ಶಬ್ದವನ್ನು ಸೇರಿಸಿದಾಗ ಅದು ಮಹತ್ತರವಾದುದನ್ನು ಸೂಚಿಸುತ್ತದೆ. ’ಶ್ರೀ’ ಎನ್ನುವ ಪೂರ್ವ ಪ್ರತ್ಯಯ ಹೊಂದಿದ ಐದು ಶಬ್ದಗಳನ್ನು ನಾವು ದೇವಿಯ ಆರಾಧನೆಯಲ್ಲಿ ಕಾಣಬಹುದು. ಇವುಗಳನ್ನು ಒಟ್ಟಾಗಿ ’ಶ್ರೀ ಪಂಚಕ’ವೆಂದು ಕರೆದಿದ್ದಾರೆ. ಅವು ಯಾವೆಂದರೆ ಶ್ರೀ ಪುರ (ದೇವಿಯ ನಿವಾಸ ಸ್ಥಾನ); ಶ್ರೀ ಚಕ್ರ (ತನ್ನ ಅಂಗರಕ್ಷರೊಂದಿಗೆ ಅವಳು ವಾಸವಾಗಿರುವ ಅರಮನೆ), ಶ್ರೀ ವಿದ್ಯಾ (ವಿಧಿಬದ್ಧ ಪೂಜಾ ವಿಧಾನ), ಶ್ರೀ ಸೂಕ್ತ (ಅವಳನ್ನು ಸ್ತುತಿಸುವ ಶ್ಲೋಕಗಳು) ಮತ್ತು ಶ್ರೀ ಗುರು (ಶಿಷ್ಯನಿಗೆ ಶಕ್ತಿ ಆರಾಧನೆಯ ಆಧ್ಯಾತ್ಮಿಕ ದೀಕ್ಷೆಯನ್ನು ಕೊಡುವ ಗುರು). ಶಕ್ತಿ ಆರಾಧನೆಯ ಪ್ರಧಾನ ತತ್ವವು ತಂತ್ರ ಶಾಸ್ತ್ರವಾಗಿದೆ. ಶ್ರೀ ಎಂದರೆ ವೇದಗಳೆಂದೂ ಅರ್ಥ. ವೇದಗಳು ಪರಬ್ರಹ್ಮನಿಂದ ಆವಿರ್ಭಾವಗೊಂಡವು ಮತ್ತು ಲಲಿತಾಂಬಿಕೆಯೇ ಪರಬ್ರಹ್ಮವೆಂದು ಸಹಸ್ರನಾಮದಲ್ಲಿ ಪದೇ ಪದೇ ಹೇಳಲಾಗಿದೆ. ಶ್ವೇತಾಶ್ವತರ ಉಪನಿಷತ್ತು (೬.೧೮), "ಅವನು ಮೊದಲು ಬ್ರಹ್ಮನನ್ನು ಸೃಷ್ಟಿಸಿದನು ಮತ್ತು ಅವನಿಗೆ ವೇದಗಳನ್ನು ಕೊಡುಗೆಯಾಗಿತ್ತನು. ಮುಕ್ತಿಯ ಬಯಕೆಯನ್ನು ಹೊಂದಿರುವ ನಾನು ಆತ್ಮಜ್ಞಾನದ ರಹಸ್ಯವನ್ನು ವಿಶದ ಪಡಿಸುವ ಆ ಸ್ವಯಂಪ್ರಕಾಶಕನಲ್ಲಿ ಶರಣಾಗತನಾಗುವೆ" ಎಂದು ಹೇಳುತ್ತದೆ. ಈ ನಾಮಾವಳಿಯು ’ಪಂಚದಶೀ ಮಂತ್ರ’ವನ್ನು ಸೂಚಿಸುತ್ತದೆಂದೂ ಹೇಳುತ್ತಾರೆ. ಸಹಸ್ರನಾಮವು ದೇವಿ ಲಲಿತಾಂಬಿಕೆಯನ್ನು ಎಲ್ಲರ ಮಾತೆಯೆಂದು ಸಂಭೋದಿಸಿರುವುದು ಅತ್ಯಂತ ಸೂಕ್ತವಾಗಿದೆ ಏಕೆಂದರೆ ಈ ನಾಮಾವಳಿಯು ಜಗತ್ತು ಮತ್ತು ಅದರಲ್ಲಿರುವ ಎಲ್ಲಾ ಜೀವಿಗಳ ಬಗ್ಗೆ ಅವಳು ಹೊಂದಿರುವ ಕರುಣೆಯನ್ನು ಒತ್ತಿಹೇಳುತ್ತದೆ. ದೇವಿಯನ್ನು ಶ್ರೀ ಮಾತಾ ಎಂದು ಸಂಭೋದಿಸಿರುವುದರಿಂದ ಇದು ಸೃಷ್ಟಿಯನ್ನು ಕುರಿತ ಉಲ್ಲೇಖವಾಗಿದೆ ಏಕೆಂದರೆ ಇದು ಪರಬ್ರಹ್ಮದ ಪ್ರಥಮ ಕ್ರಿಯೆಯಾಗಿದೆ. 
 
Śrī Mahārājñī श्री महाराज्ञी (2)
೨. ಶ್ರೀ ಮಹಾರಾಜ್ಞೀ
        ಈ ನಾಮವೂ ಕೂಡಾ ‘ಶ್ರೀ’ ಎನ್ನುವ ಪೂರ್ವ ಪ್ರತ್ಯಯದಿಂದ ಪ್ರಾರಂಭವಾಗುತ್ತದೆ. ಮಹಾರಾಜ್ಞಿ ಎಂದರೆ ರಾಣಿಯರ ರಾಣಿ ಅಥವಾ ಮಹಾರಾಣಿ. ಈ ಸಹಸ್ರನಾಮದ ಅನೇಕ ನಾಮಾವಳಿಗಳು ಶಕ್ತಿಯುತವಾದ ಬೀಜಾಕ್ಷರಗಳನ್ನು ಹೊಂದಿವೆ. ಈ ಬೀಜಾಕ್ಷರಗಳನ್ನು ನಾಮಾವಳಿಗಳಿಂದ ಬೇರ್ಪಡಿಸುವುದು ಬಹಳ ಪ್ರಯಾಸದ ಕೆಲಸ. ಬೀಜಾಕ್ಷರಗಳು ಸಂಸ್ಕೃತ ಭಾಷೆಯ ಒಂದೇ ಅಕ್ಷರವಾಗಿರಬಹುದು ಅಥವಾ ಅವು ಸಂಯುಕ್ತಾಕ್ಷರಗಳಾಗಿರಬಹುದು. ಪ್ರತಿಯೊಂದು ಬೀಜಾಕ್ಷರವು ಬಹಳ ನಿಗೂಢವಾಗಿದ್ದು, ಬಹಳಷ್ಟು ಶಕ್ತಿಯುತವಾಗಿರುತ್ತದೆ ಮತ್ತು ಅದರ ಅರ್ಥವನ್ನು ಸರಿಯಾಗಿ ತಿಳಿದುಕೊಂಡು ಅವುಗಳನ್ನು ಯಾರು ನಿಯಮಿತವಾಗಿ ಜಪಿಸುತ್ತಿರುತ್ತಾರೋ ಅವರಿಗೆ ವಿಶೇಷ ಸಿದ್ಧಿಗಳು ಉಂಟಾಗುತ್ತವೆ. ಉಚ್ಛಾರಣೆಗೆ ಪ್ರತ್ಯೇಕವಾದ ವಿಧಿವಿಧಾನಗಳಿವೆ. 
       ’ಷೋಡಶೀ ಮಂತ್ರ’ವು ದೇವಿಯ ಉಪಾಸನೆಯ ಎಲ್ಲಾ ಮಂತ್ರಗಳಲ್ಲಿ ಪರಮ ಮಂತ್ರವೆಂದು ಪರಿಗಣಿತವಾಗಿದೆ. ’ಷೋಡಶೀ’ ಅಂದರೆ ಹದಿನಾರು ’ಕಲಾ’ಗಳು ಅಥವಾ ಅಕ್ಷರಗಳು. ಕಲಾ* ಎಂದರೆ ಶುಕ್ಲ ಪಕ್ಷದ ಚಂದ್ರನ ಅಥವಾ ಕೃಷ್ಣ ಪಕ್ಷದ ಚಂದ್ರನ ೧೬ ದಿನಗಳು ಅಂದರೆ ಹುಣ್ಣಿಮೆಯಿಂದ ಅಮವಾಸ್ಯೆಯವರೆಗೆ ಅಥವಾ ಅಮವಾಸ್ಯೆಯಿಂದ ಹುಣ್ಣಿಮೆಯವರೆಗೆ. ಇನ್ನೊಂದು ಮಂತ್ರವಿದೆ ಅದರಲ್ಲಿ ಹದಿನೈದು ಅಕ್ಷರಗಳಿದ್ದು ಅದನ್ನು ’ಪಂಚದಶೀ’ ಎನ್ನುತ್ತಾರೆ. ಈ ಹದಿನೈದು ಅಕ್ಷರದ ಮಂತ್ರಕ್ಕೆ ಮತ್ತೊಂದು ಬೀಜಾಕ್ಷರವನ್ನು ಸೇರಿಸಿದರೆ ಈ ’ಪಂಚದಶೀ ಮಂತ್ರ’ವು ’ಷೋಡಶೀ ಮಂತ್ರ’ವಾಗುತ್ತದೆ. ಸೌಂದರ್ಯಲಹರಿಯ ಮೊದಲನೇ ಶ್ಲೋಕವು, "ಹೇ ತಾಯೇ! ಮೂರು ಗುಂಪಿನ ಅಕ್ಷರಗಳನ್ನು ನಿನ್ನ ಮಂತ್ರವು ಒಳಗೊಂಡಿವೆ" ಎನ್ನುತ್ತದೆ. (’ಪಂಚದಶೀ’ ಮಂತ್ರದ ವಿವರಣೆಯನ್ನು ಶ್ರೀಯುತ ವಿ. ರವಿಯವರು ಇಂಗ್ಲೀಷಿನಲ್ಲಿ ರಚಿಸಿರುವ ಲಲಿತಾ ಸಹಸ್ರನಾಮ ವಿವರಣೆಯ ಗ್ರಂಥದ ಪರಿಚಯದ ಭಾಗದಲ್ಲಿ ಕೊಡಲಾಗಿದೆ ಮತ್ತು ನಾಮಾವಳಿ ೮೫ರಿಂದ ೮೯ರ ಚರ್ಚೆಯಲ್ಲಿ ಕೊಡಲಾಗಿದೆ. ಪಂಚದಶೀ ಮತ್ತು ಷೋಡಶೀ ಮಂತ್ರಗಳ ಕುರಿತಾಗಿ ಮುಂದಿನ ಸಂಚಿಕೆಗಳಲ್ಲಿ ವಿವರವಾಗಿ ತಿಳಿಯೋಣ). ಒಬ್ಬರು ಈ ಷೋಡಶೀ ಮಂತ್ರವನ್ನು ವಿಧಿ ವಿಧಾನಗಳಂತೆ ಕ್ರಮಬದ್ಧವಾಗಿ ಉಚ್ಛರಿಸಿದರೆ (೯,೦೦, ೦೦ ಬಾರಿ - ೯ ಲಕ್ಷ ಬಾರಿ) ಅವರಿಗೆ ಪುನರ್ಜನ್ಮವಿರುವುದಿಲ್ಲವಂತೆ. ಆ ಷೋಡಶೀ ಮಂತ್ರದ ೧೬ನೇ ಬೀಜಾಕ್ಷರವು ಈ ನಾಮದಲ್ಲಿ ಅಡಗಿದೆ. ಸಾಮಾನ್ಯವಾಗಿ ಈ ವಿಷಯವನ್ನು ಕೇವಲ ಗುರುಮುಖೇನವೇ ತಿಳಿಯಬೇಕು. ಷೋಡಶೀ ಮಂತ್ರದ ಹದಿನಾರನೇ ಬೀಜಾಕ್ಷರವಾದ ಶ್ರೀಂ(श्रीं) ಅನ್ನು ಶ್+ರ್+ಈ+ಮ್ ಎನ್ನುವುದು ಲಕ್ಷ್ಮಿಯ ಬೀಜಾಕ್ಷರವಾಗಿದ್ದು ಇದು ಪರಿಪಾಲನೆಯ ಬೀಜವಾಗಿದೆ; ಇದನ್ನು ಈ ನಾಮಾವಳಿಯ ಮೊದಲ ಅಕ್ಷರವು ಒಳಗೊಂಡಿದೆ. 
 
        ಸಹಸ್ರನಾಮದ ಮೊದಲನೇ ನಾಮಾವಳಿಯು ದೇವಿಯ ಸೃಷ್ಟಿ ಶಕ್ತಿಯ ಕುರಿತಾಗಿ ಹೇಳಿದರೆ ಎರಡನೆಯ ನಾಮವು ಅವಳ ಪರಿಪಾಲನಾ ಶಕ್ತಿಯನ್ನು (ಸ್ಥಿತಿ ಶಕ್ತಿಯನ್ನು) ಕುರಿತಾಗಿ ಹೇಳುತ್ತದೆ. ತಾಯಿಯಾಗಿ ಆಕೆಯು ಈ ಜಗತ್ತನ್ನು ಸೃಷ್ಟಿಸುತ್ತಾಳೆ ಮತ್ತು ಮಹಾರಾಣಿಯಾಗಿ ಈ ಜಗತ್ತನ್ನು ಪರಿಪಾಲಿಸುತ್ತಾಳೆ. 
 
(*ಕಲಾ ಎನ್ನುವುದರ ಬಗ್ಗೆ ಇನ್ನಷ್ಟು ವಿಷಯಗಳು ಹೀಗಿವೆ. ಕಲಾ ಎನ್ನುವುದು ಪ್ರಕೃತಿಯ ವಿಶೇಷವಾದ ಚಲನಶೀಲ ಅಥವಾ ಕ್ರಿಯಾಶೀಲ ಶಕ್ತಿಯಾಗಿದೆ. ಇದರರ್ಥ ಶಿವನೊಂದಿಗೆ ಸಮಾನ ಶಕ್ತಿಯಾಗಿ ಇರುವ ಪ್ರಕೃತಿಯಲ್ಲ, ಆದರೆ ಶಿವನು ಯಾವಾಗ ತನ್ನ ಶಕ್ತಿಯೊಂದಿಗೆ ಐಕ್ಯವಾಗಿ ಇರುತ್ತಾನೆಯೋ ಆಗ ಪ್ರಕೃತಿಯು ತನ್ನ ರೂಪಾಂತರದ ವಿವಿಧ ಹಂತಗಳಲ್ಲಿ ಅತ್ಯುನ್ನತವಾದ ಕ್ರಿಯಾಶೀಲ ಚಟುವಟಿಕೆಯನ್ನು ವ್ಯಕ್ತಪಡಿಸುತ್ತಾಳೆ. ಶಿವನು ಯಾವಾಗಲೂ ಎರಡು ರೂಪಗಳಲ್ಲಿರುತ್ತಾನೆ; ಒಂದು ಸಗುಣವಾದರೆ ಇನ್ನೊಂದು ನಿರ್ಗುಣ ರೂಪ. ನಿರ್ಗುಣನಾದ ಶಿವನು ಸೃಷ್ಟಿಯಲ್ಲಿ ಪರಮೋನ್ನತನಾದವನೆಂದು ಪರಿಗಣಿಸಲ್ಪಟ್ಟು ಅವನು ಪ್ರಕೃತಿಯಿಂದ ಬೇರೆಯಾಗಿದ್ದಾನೆ. ಯಾವಾಗ ಶಿವನು ಸಗುಣನೆಂದು ಪರಿಗಣಿಸಲ್ಪಡುತ್ತಾನೆಯೋ ಆಗ ಅವನು ’ಕಲಾ’ಗಳಿಂದ ಕೂಡಿದವನೆಂದು ಅರ್ಥ. ಹದಿನಾರು ಕಲೆಗಳೆಂದರೆ ಹದಿನಾರು ಸ್ವರಗಳು (ಅಕ್ಷರಮಾಲೆ ಅಥವಾ ವರ್ಣಮಾಲೆಯ ಸ್ವರಗಳು), ಅವು ಪರಿಪೂರ್ಣವಾಗಿದ್ದು (ತಮ್ಮ ಅಮೃತೋಪಮ ಗುಣಗಳಿಂದಾಗಿ) ಇಲ್ಲಿ ತಿಳಿದುಕೊಳ್ಳಬೇಕಾದವನು (ಪರಬ್ರಹ್ಮನು/ಪರಶಿವನು) ಪ್ರಮುಖನಾಗುತ್ತಾನೆ. ’ಶ್ರೀ ಮಾತೆ’ಯಾಗಿರುವ ಜಗಜ್ಜನನಿಯು ಈ ಹದಿನಾರು ಅಕ್ಷರ ಅಥವಾ ’ಕಲಾ’ಗಳಿಂದ ಕೂಡಿದವಳಾಗಿದ್ದಾಳೆ. ಇಲ್ಲಿಯ ಗೂಡಾರ್ಥವೇನೆಂದರೆ ಕಲಾದಿಂದ ಪರಿಪೂರ್ಣತೆಯನ್ನು ಹೊಂದುವುದು. ‘ಕಲಾ’ ಅಂದರೆ ಯಾವುದೇ ವಸ್ತುವಿನ ಒಂದು ಅಲ್ಪಭಾಗ ಅಥವಾ ಒಂದು ಭಾಗವೆಂದೂ ವಿಶೇಷವಾಗಿ ಹದಿನಾರರಲ್ಲಿ ಒಂದು ಭಾಗ ಅಥವಾ ಒಂದು ಅಂಶ, ಅಥವಾ ಚಂದ್ರನ ಪರಿಧಿಯಲ್ಲಿ ಹದಿನಾರನೇ ಒಂದಂಶದ ಭಾಗ, ಅಥವಾ ಕಲಾ ಎಂದರೆ ಸಂಖ್ಯೆ ಹದಿನಾರನ್ನು ಸಾಂಕೇತಿಕವಾಗಿ ತಿಳಿಸುವುದು.)
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAM MEANING 1 & 2 http://www.manblunder.com/2009/07/lalitha-sahasranamam-12.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
ರಾಜ ರಾಜೇಶ್ವರಿಯ ಚಿತ್ರದ ಕೃಪೆ: ಗೂಗಲ್

 

Rating
Average: 5 (1 vote)

Comments

Submitted by partha1059 Fri, 04/26/2013 - 22:47

ರುದ್ರನು ಶಿವನಿಗಿಂತ ಬೇರೆಯಾದವನು. >>> ಇಂತ ವಾಕ್ಯಗಳು ನನಗೆ ಯಾವಗಲು ಗಲಿಬಿಲಿ ಮಾಡುತ್ತವೆ, ರುದ್ರನು ಶಿವನು ಬೇರೆ ಹೇಗೆ ಎನ್ನುವದನ್ನು ಸಾದ್ಯವಾದರೆ ವಿವರಿಸಿ.

Submitted by makara Sat, 04/27/2013 - 08:20

In reply to by partha1059

ಪಾರ್ಥರೆ,
ಲಲಿತಾ ಸಹಸ್ರನಾಮದಲ್ಲಿ ಸಾಮಾನ್ಯವಾಗಿ ಶಿವನೆಂದರೆ ಪರಬ್ರಹ್ಮದ ಪ್ರಕಾಶ ರೂಪವೆಂದು ಬಳಕೆಯಲ್ಲಿದೆ. ಆದ್ದರಿಂದ ಸೃಷ್ಟಿ, ಸ್ಥಿತಿ ಮತ್ತು ಲಯಕಾರದ ವಿಷಯ ಬಂದಾಗ ಅಲ್ಲಿ ಲಯಕಾರಕನ ರೂಪದಲ್ಲಿರುವವನು ರುದ್ರನೆಂದು ತಿಳಿಯಬೇಕು. ಹಾಗಾಗಿ ಇಲ್ಲಿ ಶಿವ ಮತ್ತು ರುದ್ರರು ಬೇರೆ ಎಂದು ಕೊಡಲಾಗಿದೆ. ನಿಮಗೆ ಶಿವ ಮತ್ತು ರುದ್ರರ ಬಗೆಗಿನ ಗೊಂದಲಗಳನ್ನು ಹೋಗಲಾಡಿಸಿ ಕೊಳ್ಳಬೇಕೆಂದರೆ ಶೈವ ಮತತದ ಕುರಿತಾದ ಪರಿಚಯವನ್ನು ಮಾಡಿಕೊಡುವ ಈ ಬರಹವನ್ನು ನೋಡಿ.

http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0%B2%A6-%E0%B2%B9%E0%B2%B2%E0%B2%B5%E0%B3%81-%E0%B2%AE%E0%B3%81%E0%B2%96%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%A7-%E0%B2%AE%E0%B3%81%E0%B2%A8%E0%B3%8D%E0%B2%A8%E0%B3%81%E0%B2%A1%E0%B2%BF-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%95%E0%B2%BE%E0%B2%B2%E0%B2%BE%E0%B2%AE%E0%B3%81%E0%B2%96%E0%B2%B0%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%95%E0%B2%BE%E0%B2%AA%E0%B2%BE%E0%B2%B2%E0%B2%BF%E0%B2%95%E0%B2%B0%E0%B3%81/05/08/2012/37808

ನಿಮಗೆ ಇನ್ನೂ ಹೆಚ್ಚಿನ ವಿವರಗಳು ಬೇಕೆಂದರೆ ಈ ಪ್ರಶ್ನೆಯನ್ನು ಶ್ರೀಯುತ ವಿ. ರವಿಯವರಿಗೆ ಕಳುಹಿಸಿ ಕೊಡುತ್ತೇನೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by makara Sat, 04/27/2013 - 08:21

In reply to by partha1059

ಪಾರ್ಥರೆ,
ಲಲಿತಾ ಸಹಸ್ರನಾಮದಲ್ಲಿ ಸಾಮಾನ್ಯವಾಗಿ ಶಿವನೆಂದರೆ ಪರಬ್ರಹ್ಮದ ಪ್ರಕಾಶ ರೂಪವೆಂದು ಬಳಕೆಯಲ್ಲಿದೆ. ಆದ್ದರಿಂದ ಸೃಷ್ಟಿ, ಸ್ಥಿತಿ ಮತ್ತು ಲಯಕಾರದ ವಿಷಯ ಬಂದಾಗ ಅಲ್ಲಿ ಲಯಕಾರಕನ ರೂಪದಲ್ಲಿರುವವನು ರುದ್ರನೆಂದು ತಿಳಿಯಬೇಕು. ಹಾಗಾಗಿ ಇಲ್ಲಿ ಶಿವ ಮತ್ತು ರುದ್ರರು ಬೇರೆ ಎಂದು ಕೊಡಲಾಗಿದೆ. ನಿಮಗೆ ಶಿವ ಮತ್ತು ರುದ್ರರ ಬಗೆಗಿನ ಗೊಂದಲಗಳನ್ನು ಹೋಗಲಾಡಿಸಿ ಕೊಳ್ಳಬೇಕೆಂದರೆ ಶೈವ ಮತತದ ಕುರಿತಾದ ಪರಿಚಯವನ್ನು ಮಾಡಿಕೊಡುವ ಈ ಬರಹವನ್ನು ನೋಡಿ.

http://sampada.net/blog/%E0%B2%B6%E0%B3%88%E0%B2%B5%E0%B2%AE%E0%B2%A4%E0%B2%A6-%E0%B2%B9%E0%B2%B2%E0%B2%B5%E0%B3%81-%E0%B2%AE%E0%B3%81%E0%B2%96%E0%B2%97%E0%B2%B3%E0%B3%81-%E0%B2%AD%E0%B2%BE%E0%B2%97-%E0%B3%A7-%E0%B2%AE%E0%B3%81%E0%B2%A8%E0%B3%8D%E0%B2%A8%E0%B3%81%E0%B2%A1%E0%B2%BF-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%95%E0%B2%BE%E0%B2%B2%E0%B2%BE%E0%B2%AE%E0%B3%81%E0%B2%96%E0%B2%B0%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%95%E0%B2%BE%E0%B2%AA%E0%B2%BE%E0%B2%B2%E0%B2%BF%E0%B2%95%E0%B2%B0%E0%B3%81/05/08/2012/37808

ನಿಮಗೆ ಇನ್ನೂ ಹೆಚ್ಚಿನ ವಿವರಗಳು ಬೇಕೆಂದರೆ ಈ ಪ್ರಶ್ನೆಯನ್ನು ಶ್ರೀಯುತ ವಿ. ರವಿಯವರಿಗೆ ಕಳುಹಿಸಿ ಕೊಡುತ್ತೇನೆ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by ಗಣೇಶ Fri, 04/26/2013 - 23:06

ಶುಕ್ರವಾರ-ಲಲಿತಾ ಸಹಸ್ರನಾಮ ಅಂದ ಕೂಡಲೇ ಶ್ರೀಧರ್‌ಜಿ ನೆನಪಾಗುತ್ತದೆ.>>>ಒಬ್ಬರು ಈ ಷೋಡಶೀ ಮಂತ್ರವನ್ನು ವಿಧಿ ವಿಧಾನಗಳಂತೆ ಕ್ರಮಬದ್ಧವಾಗಿ ಉಚ್ಛರಿಸಿದರೆ (೯,೦೦,೦೦೦ ಬಾರಿ - ೯ ಲಕ್ಷ ಬಾರಿ) ಅವರಿಗೆ ಪುನರ್ಜನ್ಮವಿರುವುದಿಲ್ಲವಂತೆ. -೯೦೦೦೦೦!! ಈ ಜನ್ಮ ಸಾಕಾಗುವುದಿಲ್ಲ...ಏನಾದರೂ ರಿಯಾಯಿತಿ ಇದೆಯಾ? :)(ಸುಮ್ಮನೆ ಹಾಸ್ಯಕ್ಕೆ); ಶ್ಲೋಕದ ವಿವರಣೆ ಚೆನ್ನಾಗಿದೆ.

Submitted by makara Sat, 04/27/2013 - 07:47

In reply to by ಗಣೇಶ

ಗಣೇಶ್..ಜಿ, ಖಂಡಿತಾ ರಿಯಾಯಿತಿ ಇದೆ! ನೀವು ಆರನೇ ಕ್ಲಾಸನ್ನು http://sampada.net/blog/%E0%B3%AC-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE%E0%B2%A6-%E0%B2%AA%E0%B3%82%E0%B2%B0%E0%B3%8D%E0%B2%B5%E0%B2%AD%E0%B2%BE%E0%B2%97/20-4-2013/40692 ತಪ್ಪಿಸಿಕೊಂಡಿದ್ದೀರ ಅದಕ್ಕೇ ಅದರಲ್ಲಿರುವ ವಿಷಯವನ್ನು ನೋಡಿಲ್ಲ ಎಂದು ಕಾಣುತ್ತದೆ. ಅದರಲ್ಲಿ ಕಡೆಯ ಪಂಕ್ತಿಯಲ್ಲಿ ಹೀಗಿದೆ, "ಸ್ವಯಂ ಲಲಿತಾಂಬಿಕೆಯೇ ಯಾರಾದರೂ ತಮ್ಮ ಜೀವಿತ ಕಾಲದಲ್ಲಿ ಒಂದೇ ಒಂದು ಬಾರಿ ಲಲಿತಾ ಸಹಸ್ರನಾಮವನ್ನು ಹೇಳಿದರೂ ಕೂಡಾ ಅವರ ಎಲ್ಲಾ ಬಯಕೆಗಳನ್ನು ಪೂರೈಸುವುದಾಗಿ ವಾಗ್ದಾನವಿತ್ತಿದ್ದಾಳೆ," ಆದ್ದರಿಂದ ನಿಮ್ಮ ಬೇಡಿಕೆಯನ್ನು ದೇವಿಯ ಬಳಿ ಇಡಬಹುದು. ಆಲ್ ದ ಬೆಸ್ಟ್!

ನನ್ನ ಪರವಾಗಿ ಪಾರ್ಥರಿಗೆ ಉತ್ತರಿಸಿದ್ದಕ್ಕೆ ಧನ್ಯವಾದಗಳು.

Submitted by nageshamysore Fri, 07/26/2013 - 03:15

ಶ್ರೀಧರರೆ, ಮೊದಲಿನ ನಾಮಾವಳಿಗೂ ಕವನ ಸೇರಿಸುವ ಕುರಿತು - ಇದು ಮೊದಲನೆ ನಾಮಾವಳಿಯದ್ದು. ಇದು ಪರಿಷ್ಖ್ರತವಾಗಿ ಅಂತಿಮಗೊಂಡ ಮೇಲೆ ಮುಂದಿನ ಕಂತನ್ನು ಸೇರಿಸುತ್ತೇನೆ (ಒಂದೊಂದಾಗಿ-ಸದ್ಯಕ್ಕೆ ಎಲ್ಲದರ ಡ್ರಾಪ್ಟ್-ಕಾಪಿ ಸಿದ್ದವಿದೆ) 

- ಓದುಗರಿಗೆ ತುಸು ಪುನರಾವರ್ತನೆ (ಪಾಠ ರಿವಿಶನ್) :-)

ಲಲಿತಾ ಸಹಸ್ರನಾಮ ೧ ಮತ್ತು ೨ 

೧. ಶ್ರೀ ಮಾತಾ
ಮಾತೆಗಳಾ ಮಾತೆ ಬ್ರಹ್ಮಾಂಡದ ತಾಯಿ ಲಲಿತೆ
ಅವಿರ್ಭಾವ ಪ್ರಪಂಚ ನಡೆಸಾಣತಿ ಲಯ ಲೀನವೆ
ಸಂಸಾರ ಸಾಗರ ಅಡೆತಡೆ ಕಡೆಗಾತ್ಮಸಾಕ್ಷಾತ್ಕಾರ
ಈಜುತೆ ಪ್ರವಾಹದೆದುರೆ ದಾಟಿಸುತಲಿ ಸಂಸಾರ!

ಲಕ್ಷ್ಮಿ ಸರಸ್ವತಿ ರುದ್ರಾಣಿಯರ ತಾಯೆ ಶ್ರೀ ಮಾತ
ಶ್ರೀ ಎನ್ನುವ ಮಹತ್ತರ ಶ್ರೀ ಪಂಚಕಗಳಲಿ ಪೂಜಿತ 
ಶ್ರೀ ಪುರ ಚಕ್ರ ವಿದ್ಯಾ ಸೂಕ್ತ ಗುರು ತಂತ್ರಶಾಸ್ತ್ರವೆ
ಸೃಷ್ಟಿಯೆ ದೇವಿ ಪ್ರಥಮಕ್ರಿಯೆ ಜಗನ್ಮಾತೆ ವರವೆ!

ಇದು ಹತ್ತೊಂಬತ್ತನೆ ನಾಮಾವಳಿಯ ಪ್ರತಿಕ್ರಿಯೆಯಲ್ಲಿ ಸೇರಿಸಿದ್ದು. (ಬಹುಶಃ, ಇಲ್ಲಿಂದಲೆ ಶುರುವಾಗಿದ್ದೆಂದು ಕಾಣುತ್ತದೆ ಕವನ ರೂಪ) 

೧. ಶ್ರೀ ಮಾತಾ - --- 
ಶ್ರೀ ಮಾತಾ ಬ್ರಹ್ಮಾಂಡ ನೀ ಸೃಷ್ಟಿ ಸ್ಥಿತಿ ಲಯ ಕರ್ತೆ 
ಸಂಸಾರಚಕ್ರ ಜನನ ಮರಣ ಜೀವನ ಸಾಗರ ಮುಕ್ತೆ  
ಬ್ರಹ್ಮ ಸಾಕ್ಷಾತ್ಕಾರಾರ್ಥ ಪುನರ್ಜನ್ಮ ವಿಮುಕ್ತಿ ದಾತೆ  
ಪುರ ಚಕ್ರ ವಿದ್ಯಾ ಸೂಕ್ತ ಗುರು ಶ್ರೀಪಂಚಕ ಅರಾಧಿತೆ 
ಪರಬ್ರಹ್ಮವೆ ಲಲಿತೆ ಪ್ರಥಮ ಸೃಷ್ಟಿಕ್ರಿಯಾ ಶ್ರೀಮಾತೆ 
ವೇದಶಾಸ್ತ್ರ ಅವಿರ್ಭಾವಿನಿ ಶ್ರೀ ಲಲಿತಾಂಬಿಕೆ ನಮಸ್ತೆ! 

೨. ಶ್ರೀ ಮಹಾರಾಜ್ಞೀ
ನಿಗೂಢ ಶಕ್ತಿಯುತ ಬೀಜಾಕ್ಷರ, ನಾಮಾವಳಿಯಂತರ್ಗತೆ
ಷೋಡಶೀ ಪರಮ ಮಂತ್ರ, ಪಂಚದಶೀಗೆ ಬೀಜಾಕ್ಷರ ಜತೆ
ಕ್ರಮಬದ್ಧ ವಿಧಿವಿಧಾನದಲುಚ್ಚರಿಸೆ ನವಲಕ್ಷ ಸಲ ಭಕ್ತಾ
ಜಗ ಪರಿಪಾಲಿಪ ಮಹಾರಾಣಿ ಪುನರ್ಜನ್ಮ ವಿಮುಕ್ತಿಸುತ!

ಪ್ರಕೃತಿ ಚಲನ ಕ್ರಿಯಾಶೀಲ ವಿಶೇಷ ಶಕ್ತಿಯೆ ಕಲಾ
ನಿರ್ಗುಣ ಶಿವ ಪರಮೋನ್ನತ ಸಗುಣವೆ ಕಲಾಸಕಲ
ಷೋಡಶ ಸ್ವರ ಪರಿಪೂರ್ಣ ಕಲಾಪೂರ್ಣೆ ಶ್ರೀ ಮಾತ
ಷೋಡಶದಲಿ ಭಾಗಾಂಶವೆ ಹದಿನಾರಾ ಬಿಂಬಿಸುತ!