ಭಾಷಾತರಗತಿಗಳೆಂದರೆ ಹೀಗೇಕೆ ಅಂದುಕೊಳ್ಳುವಿರಿ?

ಭಾಷಾತರಗತಿಗಳೆಂದರೆ ಹೀಗೇಕೆ ಅಂದುಕೊಳ್ಳುವಿರಿ?

 

ಭಾಷಾತರಗತಿಯೊಂದರಲ್ಲಿನ ಶಿಕ್ಷಕ-ವಿದ್ಯಾರ್ಥಿ ನಡುವಿನ ಸಂಭಾಷಣೆಯ ತುಣುಕುಗಳು:

೧.

ಶಿಕ್ಷಕಿ:                      ನೀವೆಲ್ಲ ಸರಿಸುಮಾರು ಎಷ್ಟು ವರ್ಷದಿಂದ ಕನ್ನಡ ಮಾತಾಡ್ತಿದೀರಾ?

ವಿದ್ಯಾರ್ಥಿಗಳು:      ೧೪/೧೫ ವರ್ಷದಿಂದ

ಶಿಕ್ಷಕಿ :                     ಎಷ್ಟು ವರ್ಷದಿಂದ ಕನ್ನಡ ಬರೀತೀದೀರಾ?

ವಿದ್ಯಾರ್ಥಿಗಳು :     ೧೨/೧೩ ವರ್ಷದಿಂದ.

ಶಿಕ್ಷಕಿ :                     ಇಷ್ಟು ವರ್ಷಗಳಿಂದ ಪರಿಚಯವಿರುವ ಈ ಭಾಷೆಯನ್ನು ತಪ್ಪಿಲ್ಲದ ಹಾಗೆ ಮಾತಾಡಲು ಬರೆಯಲು ಬರುತ್ತಾ?

ಹೌದು ಎಂದು ಹೇಳುವವರ ಸಂಖ್ಯೆ ಬೆರಳೆಣೆಕೆಯಷ್ಟು. ಹೀಗೇಕೆ?

೨.

ಶಿಕ್ಷಕಿ :     ಪಿಯುಸಿ ವಿದ್ಯಾರ್ಥಿಗಳಾದ ನೀವೆಲ್ಲ ೧೦ ವರ್ಷಗಳಿಂದ ಭಾಷೆಯನ್ನು ಕಡ್ಡಾಯವಾಗಿ ಇಟ್ಟಿರುವುದರಿಂದ ಓದುತ್ತಾ ಬಂದಿದ್ದೀರಿ. ಒಂದು ವೇಳೆ ಅದು ಪರೀಕ್ಷೆಗೆ ಕಡ್ಡಾಯವಲ್ಲ ಮತ್ತು ಭಾಷಾತರಗತಿಗಳ ಹಾಜರಾತಿಯೂ ಕಡ್ಡಾಯವಲ್ಲ ಎಂದಿದ್ದರೆ ಬಿಟ್ಟಿದ್ದರೆ ಏನು ಮಾಡುತ್ತಿದ್ದೀರಿ?

ಕೆಲವು ವಿದ್ಯಾರ್ಥಿಗಳ ಉತ್ತರ ನಾವು ತರಗತಿಗಳಿಗೆ ಖಂಡಿತ ಬರುತ್ತಿರಲಿಲ್ಲ. ಮತ್ತೆ ಕೆಲವು ವಿದ್ಯಾರ್ಥಿಗಳ ಉತ್ತರ ಶಿಕ್ಷಕರ ಪಾಠ ಇಷ್ಟವಾಗುವಂತಿದ್ದರೆ ಆಗೀಗ ಬರುತ್ತಿದ್ದೆವು. ಮತ್ತೆ ಕೆಲವರ ಪ್ರಕಾರ ಕುತೂಹಲಕ್ಕೆ ಬಂದು ಕೂರುತ್ತಿದ್ದೆವು.

ಶಿಕ್ಷಕಿ :                     ಯಾಕೆ ಹಾಗೆ? ಭಾಷೆಯನ್ನು ಕಲಿಯುವ ಅವಶ್ಯಕತೆಯಿಲ್ಲವೆ?

ಕೆಲವು ವಿದ್ಯಾರ್ಥಿಗಳ ಪ್ರಕಾರ ಅದು ಸುಲಭ ಅದಕ್ಕೆ ತರಗತಿಗಳ ಅಗತ್ಯವಿಲ್ಲ. ಭಾಷೆಯ ವರ್ಣಮಾಲೆಯ ಪರಿಚಯವಾದರೆ ಸಾಕು ಇಟ್ಟಿರುವ ಪಠ್ಯಗಳನ್ನು ನಾವೇ ಓದಿಕೊಳ್ಳಬಹುದು. ಆದರೆ ವಿಜ್ಞಾನ, ಗಣಿತ, ಸಮಾಜಶಾಸ್ತ್ರದಂತಹ ವಿಷಯಗಳನ್ನು ಕಲಿಯಲು ಮಾರ್ಗದರ್ಶಕರ ಅಗತ್ಯವಿದೆ. ಭಾಷೆಗೆ ಅದರ ಅಗತ್ಯ ಹೆಚ್ಚಿಗೆ ಬೇಕಾಗುವುದಿಲ್ಲ.

ಹೌದೆ? ಹಾಗಿದ್ದರೆ ಶಾಲೆಯ ಆರಂಭದ ದಿನದಿಂದ ಪಿಯುಸಿವರೆಗೆ ಭಾಷೆಯನ್ನು ಒಂದು ವಿಷಯವಾಗಿ ಏಕೆ ಭೋದಿಸುತ್ತಾರೆ?

ಭಾಷೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗ. ’ಎದೆಯ ಭಾವಕ್ಕೆ, ದಿನನಿತ್ಯದ ವ್ಯವಹಾರಕ್ಕೆ ಭಾಷೆಯ ಹೊರತು ಯಾನ’ವಿಲ್ಲ. ಹುಟ್ಟಿನೊಂದಿಗೆ ಮೊದಲಾಗುವ ಭಾಷೆಯೊಂದಿಗಿನ ಒಡನಾಟ ಕೊನೆಯಾಗುವುದು ಸಾವಿನಲ್ಲೆ! ಬದುಕಿನ ಅನುಕ್ಷಣ ನಾವು ಬಳಸುವ ಈ ಸಾಧನದ ಪ್ರಾಮುಖ್ಯತೆಯ ಬಗ್ಗೆ ನಾವು ಎಷ್ಟು ಬಾರಿ ಗಂಭೀರವಾಗಿ ಚಿಂತಿಸುತ್ತೇವೆ? ಮಾತು-ಬರಹದ ಬಳಕೆ ಹಾಗೂ ಉಳಿಕೆಯ ಬಗ್ಗೆ ನಾವು ಎಷ್ಟು ಬಾರಿ ಯೋಚಿಸುತ್ತೇವೆ? ನಮ್ಮೆಲ್ಲರ ನಡುವಿನ ಸೇತುವೆಯಾಗಿರುವ ಭಾಷೆಯ ಬಗೆಗಿನ ತಿಳಿವಳಿಕೆ ನಮಗಿರಬೇಕಲ್ಲವೆ?

ಮನೆಮಾತಿನ ಪದಗಳ ಪರಿಚಯದೊಂದಿಗೆ ಮಗುವಿನ ಭಾಷಾಕಲಿಕೆ ಆರಂಭವಾಗುತ್ತದೆ. ವರ್ಣಮಾಲೆಯ ಅಭ್ಯಾಸದೊಂದಿಗೆ ಓದು-ಬರಹದ ಕಲಿಕೆ ಮೊದಲಾಗುತ್ತದೆ. ಭಾವನೆಯಾಗಲಿ, ವ್ಯವಹಾರವಾಗಲಿ ಅಭಿವ್ಯಕ್ತವಾಗುವುದು ಭಾಷೆಯ ಮೂಲಕವೇ ಅಲ್ಲವೇ? ವಿಜ್ಞಾನ ಹಾಗೂ ಮಾನವಿಕ ವಿಷಯಗಳ ಅಧ್ಯಯನ ಕೂಡ ಭಾಷೆಯ ಮೂಲಕವೇ ಅಲ್ಲವೇ? ಹೀಗಿದ್ದೂ ಕೂಡ ಭಾಷಾತರಗತಿಗಳು ವಿಜ್ಞಾನ ಹಾಗೂ ಮಾನವಿಕ ವಿಷಯಗಳು ಮಕ್ಕಳ ಕಲಿಕಾ ಜೀವನದಲ್ಲಿ ಪ್ರವೇಶ ಪಡೆಯುತ್ತಿದ್ದಂತೆ ಹಿನ್ನೆಲೆಗೆ ಸರಿದುಬಿಡುತ್ತದೆಯಲ್ಲ ಯಾಕೆ?

ಭಾಷಾತರಗತಿಗಳೆಂದರೆ ಕೇವಲ ಕತೆ, ಕವನ ಓದುವ ತರಗತಿಗಳು ಎನ್ನುವ ಧೋರಣೆ ಸರಿಯೇ? ಭಾಷೆಯೆಂಬ ಮಾಧ್ಯಮದ ಮೂಲಕ ಅಭಿವ್ಯಕ್ತಗೊಂಡ ಸಾಹಿತ್ಯ ಭಾಷಾ ಕಲಿಕೆಗೆ ನೆರವಾಗುವಂತದ್ದು. ಸಾಹಿತ್ಯಕೃತಿಗಳು ಒಂದು ಭಾಷಿಕ ಜನಾಂಗದ ಸಂಸ್ಕೃತಿಯನ್ನು ನಮಗೆ ತಿಳಿಸಿಕೊಡುತ್ತಿರುತ್ತವೆ. ಭಾಷಾತರಗತಿಗಳಲ್ಲಿ ಇದನ್ನು ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ.

ಭಾಷೆಯಮೂಲಕವೇ ಕಲಿಕಾ ಜೀವನ ನಡೆಯುತ್ತಿದ್ದರೂ ಶಾಲೆಯ ಒಂದು ಹಂತ ತಲಪುವ ವೇಳೆಗಾಗಲೇ ಮಕ್ಕಳ ಮನಸ್ಸಿನಲ್ಲಿ ’ಭಾಷೆ’ಯೊಂದು ಕಲಿಯಲೇಬೇಕಾದ ಮಹತ್ವದ ಸಂಗತಿ ಎಂಬ ಅಂಶ ಮಸುಕಾಗತೊಡಗುತ್ತದೆ. ತಂದೆ-ತಾಯಿಗಳು ಕೂಡ ಪರೋಕ್ಷವಾಗಿ ’ಟಚಿಟಿguಚಿge ತಾನೇ!’      ಎಂಬ ಭಾವ ಮಕ್ಕಳಲ್ಲಿ ಬೆಳೆಯಲು ಕಾರಣರಾಗುತ್ತಾ ಸಾಗುತ್ತಾರೆ. ತಪ್ಪಿಲ್ಲದ ಮಾತು ಹಾಗೂ ಬರವಣಿಗೆಯ ಮಹತ್ವ ಮಕ್ಕಳಿಗೆ ತಿಳಿಸುವುದರತ್ತ ಅತ್ಯಲ್ಪ ಗಮನ ನೀಡುತ್ತಾರೆ. ಒಂದು ಭಾಷೆಯ ಅಳಿವು-ಉಳಿವಿಗೆ ಆ ಭಾಷಿಕರೇ ಹೊಣೆ ಎಂಬುದನ್ನು ಮರೆಯುತ್ತಾರೆ. ಪರಿಣಾಮ ವ್ಯವಹಾರಕ್ಕೆ ಮಾತಾಡಲು ಬಂದರೆ ಸಾಕು, ಸಹಿ ಹಾಕಲು ಬಂದರೆ ಸಾಕು ಎಂಬಂತಹ ಮನೋಭಾವದಲ್ಲಿ ತಪ್ಪು ಉಚ್ಚಾರಣೆ ತಪ್ಪು ಬರವಣಿಗೆಗಳನ್ನೇ ಸರಿ ಎಂಬಂತೆ ರೂಡಿಸಿಕೊಳ್ಳುತ್ತಾರೆ. ವಿದ್ಯಾವಂತರಾಗಿಯೂ ಕೂಡ ಅವಿದ್ಯಾವಂತರಾಗಿ ಉಳಿದುಬಿಡುತ್ತಾರೆ.

ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಾವು ಅಭ್ಯಸಿಸುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಹೀಗೆ ಅವರು ಆಯ್ಕೆ ಮಾಡಿಕೊಂಡ ಭಾಷೆಯನ್ನೇ ಯಾಕೆ ತೆಗೆದುಕೊಂಡಿರಿ ಎಂದು ಕೇಳಿದಾಗ ಅವರು ನೀಡುವ ಕಾರಣಗಳು ಕುತೂಹಲಕಾರಿಯಾಗಿರುತ್ತವೆ:  ಹಿಂದಿಯನ್ನೇ ಏಕೆ ತೆಗೆದುಕೊಂಡಿರಿ? ಅದು ನಮಗೆ ಸುಲಭ ಯಾಕೆಂದರೆ ಬೇರೆ ಭಾಷೆ ಬರೋದಿಲ್ಲ. ಸಂಸ್ಕೃತವನ್ನೇ ಏಕೆ ತೆಗೆದುಕೊಂಡಿರಿ? ಅದರಲ್ಲಿ ಸುಲಭವಾಗಿ ಅಂಕ ತೆಗೆಯಬಹುದು. ಕನ್ನಡ ಏಕೆ ತೊಗೊಂಡಿರಿ? ಮೊದಲಿಂದ ಓದಿದಿವಲ್ಲ ಅದಕ್ಕೆ. ಈ ಕಾರಣಗಳ ಹಿಂದೆ ಮುಖ್ಯವಾಗಿ ಎರಡು ಅಂಶಗಳು ಕೆಲಸ ಮಾಡುತ್ತಿರುವುದನ್ನು ಗಮನಿಸಬಹುದು. ೧. ಆ ಭಾಷೆಯಲ್ಲಿ ಹೆಚ್ಚು ಅಂಕ ತೆಗೆಯಲು ಸಾಧ್ಯವಿರಬೇಕು ೨. ಕಲಿಯಲು ಸುಲಭವಾಗಿರಬೇಕು. ಆದರೆ ಯಾವುದೇ ಭಾಷೆ ಸುಲಭವೂ ಅಲ್ಲ ಕಷ್ಟವೂ ಅಲ್ಲ. ಕಲಿಯುತ್ತಾ ಕಲಿಯುತ್ತಾ ಕರಗತವಾಗುವ ವಿಷಯವದು.

ಭಾಷಾತರಗತಿಗಳೆಂದರೆ ಮಹಾನ ಬೇಸರದ ಅಥವ ಮಹಾನ ಕೊರೆತದ ಅಥವ ವಿಶ್ರಾಂತಿಯ ಅವಧಿ ಎಂಬ ಭಾವವು ವಿದ್ಯಾರ್ಥಿಗಳಲ್ಲಿ ಸುಳಿದಾಡುತ್ತಿರುತ್ತದೆ. ಭಾಷಾಪಠ್ಯಕ್ಕಿಂತ ಗೈಡ್ ಮುಖ್ಯ ಹಾಗಾಗಿ ತರಗತಿಗೆ ಹಾಜರಾಗುವ ಅಗತ್ಯವಿಲ್ಲ. ಪರೀಕ್ಷೆಯಲ್ಲಿ ಉತ್ತರ ಬರೆಯುವುದು ಸೃಜನಶೀಲತೆಯಿಂದಲ್ಲ ಬದಲಿಗೆ ಅದೊಂದು ಉರುಹೊಡೆವ ಗಿಳಿಪಾಠದ ಆಟ ಎಂಬ ಧೋರಣೆ ಬೆಳೆಯುತ್ತದೆ. ಇದಕ್ಕೆ ಕಾರಣ ಭಾಷೆಯ ಮಹತ್ವದ ಬಗ್ಗೆ ತಿಳಿವಳಿಕೆ ಇಲ್ಲದಿರುವುದೋ? ಶಿಕ್ಷಕ ವೃಂದವೋ? ಅಥವ ಪಠ್ಯಕ್ರಮವೋ?

ಭಾಷಾ ತರಗತಿಗಳೆಂದರೆ ಬದುಕಿನ ಬಗೆಗೆ ಹೊಸನೋಟಗಳನ್ನು ಬೆಳೆಸುವ ತಾಣ. ಮಾತೆಂಬುದು ಜ್ಯೋತಿರ್ಲಿಂಗವಾಗುವುದು ಹೇಗೆ ಎಂಬುದನ್ನು ಪಠ್ಯಗಳ ಮೂಲಕ ತಿಳಿಸಿಕೊಡುವ ತಾಣ. ವ್ಯಕ್ತಿತ್ವದ ವಿಕಸನಕ್ಕೆ ನೆರವಾಗುವ ತಾಣ. ಮನಸ್ಸಿನ ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯನ್ನು ಅರಳಿಸುವ ತಾಣ. ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುವ ಭಾಷೆಯನ್ನು ಸಾಣೆ ಹಿಡಿದು ಮೊನಚಾಗಿಸುವ ತಾಣ. ಇದೆಲ್ಲವೂ ಸಾಧ್ಯವಾಗುವುದು ಶಿಕ್ಷಕ ಹಾಗೂ ವಿದ್ಯಾರ್ಥಿಯ ಕ್ರಿಯಾಶೀಲ ಭಾಗವಹಿಸುವಿಕೆಯಿಂದ ಮಾತ್ರ. ಭಾಷೆಯ ಬಗೆಗೆ ಪ್ರೀತಿ ಹಾಗೂ ತಿಳವಳಿಕೆ ಮೂಡಿಸುವಲ್ಲಿ ಭಾಷಾಶಿಕ್ಷಕನ ಪಾತ್ರ ಹಿರಿದು. ಹಾಗೆಯೇ ಪೋಷಕರು ಕೂಡ ಭಾಷೆಯ ಮಹತ್ವ ಅರಿತು ಮಕ್ಕಳಿಗೆ ತಿಳಿಹೇಳಬೇಕು. ಭಾಷೆಯ ಬಗೆಗಿನ ಪ್ರೀತಿ ಹಾಗೂ ತಿಳಿವಳಿಕೆ ವ್ಯಕ್ತಿ ಹಾಗೂ ಸಮಷ್ಟಿಯ ಬೆಳವಣಿಗೆಯಲ್ಲಿ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಭಾಷಾತರಗತಿಗಳೆಂದರೆ... ಎಂಬ ಉದಾಸೀನ ಭಾವ ದೂರವಾಗಬೇಕು. ಅದೇ ರೀತಿ ಪಠ್ಯ ಮತ್ತು ಭೋದನೆ ಎರಡರಲ್ಲೂ ಭಾಷಾತರಗತಿಗಳ ಸ್ವರೂಪವನ್ನು ಬದಲಿಸುವ ಪ್ರಯತ್ನಗಳನ್ನು ಮಾಡಬೇಕಾಗಿದೆ.

 

Rating
No votes yet

Comments

Submitted by makara Sat, 04/27/2013 - 08:46

ಭಾಷಾ ಕಲಿಕೆಯ ಕುರಿತಾದ ಉತ್ತಮ ವಿಶ್ಲೇಷಣೆಯಿಂದ ಕೂಡಿದ ಅಭಿನಂದಾರ್ಹ ಲೇಖನ ಮತ್ತು ವಿಚಾರ ಪ್ರಚೋದಕವಾದ ಬರಹ; ಧನ್ಯವಾದಗಳು, ಹೇಮಾ ಅವರೆ.

Submitted by nageshamysore Sun, 04/28/2013 - 20:52

ನಮಸ್ಕಾರ ಹೇಮಾರವರಿಗೆ,
ಭಾಷೆಯ ಕುರಿತು ನಿಮ್ಮ ಲೇಖನ ಓದುತ್ತ ಈ ಕೆಲ ಸಂಗತಿಗಳನ್ನು ಹೋಲಿಸಿದಾಗ ಸೋಜಿಗವಾಯ್ತು : ಥಾಯ್ಲ್ಯಾಂಡು, ಚೀನ, ಜಪಾನಿನಂತ ದೇಶಗಳಲ್ಲಿ ನೇರ ಆಂಗ್ಲ ಭಾಷೆಯೊಂದನ್ನು ಬಿಟ್ಟರೆ ಬೇರೆಲ್ಲವನ್ನು ಮಾತೃಭಾಷೆಯಲ್ಲೆ ಕಲಿಯುತ್ತಾರೆ (ಉದಾ. ವಿಜ್ಞಾನ, ಸಮಾಜ, ಗಣಿತ - ಎಲ್ಲವೂ). ಯಾವುದಾದರೂ ಇಂಗ್ಲಿಷು ಪದ ಕೇಳಿದಾಗ ಅದರರ್ಥ ಮಾತೃಭಾಷೆಯಲ್ಲಿ ಹುಡುಕಿ ಅರ್ಥ ಮಾಡಿಕೊಳ್ಳುತ್ತಾರೆ. ನಮ್ಮಲ್ಲಿ ತಿರುಗುಮುರುಗು ಪರಿಸ್ಥಿತಿ - ಎಷ್ಟೊ ಪದಗಳಿಗೆ ಇಂಗ್ಲಿಷಿನ ಅರ್ಥ ಗೊತ್ತಿದ್ದು, ಅದರ ಮೂಲಕ ಕನ್ನಡದರ್ಥಕ್ಕಾಗಿ ಹುಡುಕಾಡುತ್ತೇವೆ. ನಿಜವೇನೆಂದರೆ ಮಾತೃಭಾಷೆಯನ್ನು ಸರಿಯಾಗಿ ಕಲಿಯದಿದ್ದರೆ ಯಾರಿಗೂ ಯಾವ ರೀತಿಯ ನಷ್ಟ ಕಾಣದಿದ್ದರೆ, ಯಾರಿಗೆ ತಾನೆ ಕಲಿಯುವ ಒತ್ತಡ ಬಂದೀತು (ಉದಾ. ಕೆಲಸ ಸಿಗಲಿಕ್ಕೆ ಇಂಗ್ಲೀಷು ಇದ್ದರೆ ಸರಿ, ಕನ್ನಡಗೊತ್ತಿದೆಯ ಅಂತ ಕೇಳುವುದೂ ಇಲ್ಲ!). ಇದರಿಂದಾಗಿ, ಕೇವಲ ಸ್ವ ಇಚ್ಚಾಬಲದಿಂದ ಭಾಷೆ ಕಲಿಯುವವರ ಬಿಟ್ಟರೆ ಮಿಕ್ಕೆಲ್ಲ ಅಸಡ್ಡೆ, ಉಢಾಫೆಯೆಂದು ಧಾರಾಳವಾಗಿ ಹೇಳಬಹುದು.
- ನಾಗೇಶ ಮೈಸೂರು, ಸಿಂಗಪುರದಿಂದ

Submitted by hema hebbagodi Mon, 04/29/2013 - 14:11

In reply to by nageshamysore

ಹೌದು ಸರ್ ನಮ್ಮಲ್ಲಿನ ಈ ಪರಿಸ್ಥಿತಿಗೆ ನಾವೇ ಜವಾಬ್ದಾರರು. ಆದರೆ ಭಾಷೆಯೊಂದು ಅಳಿದು ಹೋಗುವುದೆಂದರೆ ಒಂದು ಜನಾಂಗದ ಮಹತ್ವದ ಸ್ಮೃತಿಕೋಶವೇ ಅಳಿದುಹೋಗುತ್ತದೆ! ಅದರ ಅರಿವಾಗುವುದು ಕಳೆದುಕೊಂಡ ನಂತರವೇ! ಇದಕ್ಕೆ ಒಂದು ಸಣ್ಣ ಉದಾಹರಣೆಯಾಗಿ ನಮ್ಮಲ್ಲಿರುವ ಸಂಬಂಧಸೂಚಕ ಪದಗಳು ಚಿಕ್ಕಪ್ಪ ಚಿಕ್ಕಮ್ಮ ಅತ್ತೆ ಮಾವ ಇವು ಕಣ್ಮರೆಯಾಗುತ್ತಿರುವುದನ್ನು ಗಮನಿಸಿ. ಈ ಪದಗಳ ಜಾಗವನ್ನು ಆಂಟಿ ಮತ್ತು ಅಂಕಲ್‍ಗಳು ಆಕ್ರಮಿಸಿ ಎಷ್ಟು ದೊಡ್ಡ ಬದಲಾವಣೆಯಾಗಿದೆಯಲ್ಲವೆ? ನಿನ್ನೆಯಷ್ಟೇ ಹೀಗೆ ಸಮಾರಂಭವೊಂದರಲ್ಲಿ ಭೇಟಿಯಾದ ನನ್ನ ಸಂಬಂಧಿಯೊಬ್ಬರು ಹೇಳಿದರು 'ಈ ವರ್ಷದಿಂದ ನನ್ನ ಮಗಳಿಗೆ ಕನ್ನಡ ಬೇರೆ ಇಟ್ಟಿದಾರೆ. ಬಲು ಕಷ್ಟನಪ್ಪಾ ಕಲಿಸೊದು.' ಅಂತ. ಆಶ್ವರ್ಯವಾಯ್ತು ಆ ಮಗುವಿಗೆ ಈಗಾಗಲೇ ಬರುವ ಭಾಷೆಯೊಂದನ್ನು ಒಂದಿಷ್ಟು ವ್ಯಾಕರಣದೊಡನೆ ಕಲಿಯಲು ಹೇಳಿಕೊಡುವುದನ್ನು ಬಿಟ್ಟು ಹೀಗೆ ಹೇಳುತ್ತಾರಲ್ಲ ಎಂದು.