೧೦. ಲಲಿತಾ ಸಹಸ್ರನಾಮ ೩, ೪ ಮತ್ತು ೫ರ ವಿವರಣೆ

೧೦. ಲಲಿತಾ ಸಹಸ್ರನಾಮ ೩, ೪ ಮತ್ತು ೫ರ ವಿವರಣೆ

 

ಲಲಿತಾ ಸಹಸ್ರನಾಮ ,,

Śrīmat Siṃhāsaneśvarī श्रीमत् सिंहासनेश्वरी (3)

೩. ಶ್ರೀಮತ್ ಸಿಂಹಾಸನೇಶ್ವರೀ

            ಲಲಿತಾಂಬಿಕೆಯು ರಾಣಿಯರಿಗೆ ರಾಣಿಯಾಗಿದ್ದು ಸಿಂಹಾಸನದ ಮೇಲೆ ಆಸೀನಳಾಗಿದ್ದಾಳೆ. ಸಿಂಹವು ತನ್ನ ಕ್ರೂರತ್ವಕ್ಕೆ ಹೆಸರುವಾಸಿಯಾಗಿದ್ದು ಅದು ಪ್ರಾಣಿಗಳಿಗೆಲ್ಲಾ ರಾಜನೆನಿಸಿದೆ. ಪರಮೋನ್ನತ ಮಹಾರಾಣಿಯು ಸಿಂಹವನ್ನು ತನ್ನ ವಾಹನವನ್ನಾಗಿ ಉಪಯೋಗಿಸುತ್ತಿದ್ದಾಳೆ. ಲಲಿತಾಂಬಿಕೆಯ ಈ ವಿವರಣೆಯು ಅವಳು ಅಂತಿಮ ಲಯಕಾರಕಳೆಂದು ಅಭಿವರ್ಣಿಸುತ್ತದೆ. ಸಿಂಹ ಎನ್ನುವದನ್ನು ಸಂಸ್ಕೃತದಲ್ಲಿ ಹಿಂಸಾ ಎನ್ನುವ ಶಬ್ದದ ಮೂಲಕ ನಿಷ್ಪತ್ತಿಗೊಳಿಸಿದ್ದಾರೆ. ಹಿಂಸಾ ಎಂದರೆ ಸಂಸ್ಕೃತದಲ್ಲಿ ನಾಶಮಾಡುವುದು. ಶ್ರೀಮತ್+ಸಿಂಹ+ಆಸನ+ಈಶ್ವರೀ. ದೇವಿಯು ಈ ಜಗತ್ತನ್ನು ವಿನಾಶಗೊಳಿಸುವಲ್ಲಿ ಅತ್ಯುನ್ನತವಾದ ಶಕ್ತಿಯನ್ನು ಹೊಂದಿದ್ದಾಳೆ ಅದಕ್ಕೆ ಗೌರವ ಸೂಚಕವಾಗಿ ಅವಳಿಗೆ ಶ್ರೀಮತ್ ಎನ್ನುವ ಪರಮೋನ್ನತ ಪದವನ್ನು ಬಳಸಿದ್ದಾರೆ; ಸಿಂಹಾಸನದ ಮೇಲೆ ಅವಳು ಕುಳಿತು ಈ ಜಗತ್ತನ್ನು ಆಳುತ್ತಿರುವುದರಿಂದ ಅವಳನ್ನು ಸಿಂಹಾಸನೇಶ್ವರೀ ಎಂದು ಕರೆದಿದ್ದಾರೆ.

           ಈ ಸಹಸ್ರನಾಮದ ಮೊದಲ ಮೂರು ನಾಮಾವಳಿಗಳು ಶ್ರೀ ಎಂಬ ಶಬ್ದದಿಂದ ಪ್ರಾರಂಭವಾಗುತ್ತವೆ. ಶ್ರೀ ಎಂದರೆ ಐಶ್ವರ್ಯ, ಅಭಿವೃದ್ಧಿ, ಮೊದಲಾದ ಅರ್ಥಗಳೂ ಇವೆ. ಈ ಬೀಜಾಕ್ಷರವು ಐಶ್ವರ್ಯದ ಅಧಿದೇವತೆಯಾದ ಲಕ್ಷ್ಮೀದೇವಿಯನ್ನು ಪ್ರತಿನಿಧಿಸುತ್ತದೆ; ಅವಳು ಶ್ರೀ ಮಹಾವಿಷ್ಣುವಿನ ಪತ್ನಿಯಾಗಿದ್ದಾಳೆ. ಈ ನಾಮವು ಲಲಿತಾಂಬಿಕೆಯನ್ನು ಪೂಜಿಸುವ ಭಕ್ತನು ಎಲ್ಲಾ ವಿಧವಾದ ಪ್ರಾಪಂಚಿಕ ಐಶ್ವರ್ಯಗಳನ್ನೂ ಹೊಂದುತ್ತಾನೆ ಎಂದು ತಿಳಿಸುತ್ತದೆ.

           ಜ್ಞಾನಾರ್ಣವವೆಂಬ ಪುರಾತನ ಗ್ರಂಥವೊಂದರ ಪ್ರಕಾರ ಸಿಂಹಾಸನ ಮಂತ್ರಗಳೆಂಬ ಎಂಟು ಮಂತ್ರಗಳಿದ್ದು, ಅವುಗಳನ್ನು ಶ್ರೀ ಚಕ್ರದಲ್ಲಿರುವ ಬಿಂದುವಿನ ನಾಲ್ಕು ಪಾರ್ಶ್ವಗಳಲ್ಲಿ ಉಚ್ಛರಿಸಬೇಕು ಮತ್ತು ಅವುಗಳಲ್ಲೊಂದನ್ನು ಬಿಂದುವಿನಲ್ಲಿಯೇ ಕೈಗೊಳ್ಳಬೇಕು ಎನ್ನುತ್ತದೆ. ಈ ಸಿಂಹಾಸನ ಮಂತ್ರದಲ್ಲಿ ಇಪ್ಪತ್ನಾಲ್ಕು ದೇವತೆಗಳನ್ನು ಪೂಜಿಸಲಾಗುತ್ತದೆ. ಈ ನಾಮದ ಮೂಲಕ ಲಲಿತಾಂಬಿಕೆಯು ಈ ಇಪ್ಪತ್ನಾಲ್ಕು ದೇವತೆಗಳಿಗೂ ಒಡತಿ ಅಥವಾ ಈಶ್ವರೀ ಎಂದು ತಿಳಿಯಬಹುದು. 

            ಮೊದಲ ಮೂರು ನಾಮಗಳು ಲಲಿತಾಂಬಿಕೆಯ ಪರಮೋನ್ನತ ಗುಣಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯ ಶಕ್ತಿಗಳನ್ನು ಕುರಿತಾಗಿ ತಿಳಿಸುತ್ತವೆ. ಅವಳ ನಾಶ ಪಡಿಸುವ ವಿಷಯಕ್ಕೆ ಬಂದರೆ ಅವಳು ಪಾಪದ ಕೆಲಸಗಳನ್ನು ಮಾಡುವವರನ್ನು ವಿನಾಶ ಮಾಡುತ್ತಾಳೆ ಆದರೆ ತನ್ನ ನಿಜ ಭಕ್ತರನ್ನು ಅವಳಲ್ಲಿ ಐಕ್ಯವಾಗಿಸಿಕೊಳ್ಳುತ್ತಾಳೆ. ಈ ಐಕ್ಯವನ್ನೇ ಲಯ ಅಥವಾ ಲೀನವಾಗುವುದೆನ್ನುತ್ತೇವೆ.

Cidagnikuṇḍa-saṃbhūtā चिदग्निकुण्ड-संभूता (4)

೪. ಚಿದಗ್ನಿಕುಂಡ-ಸಂಭೂತಾ

          ಚಿತ್+ಅಗ್ನಿ+ಕುಂಡ+ಸಂಭೂತಾ. ಇಲ್ಲಿ ಚಿತ್ ಎನ್ನುವುದು ನಿರ್ಗುಣ ಬ್ರಹ್ಮ ಅಥವಾ ಗುಣರಹಿತ ಬ್ರಹ್ಮ ಅಥವಾ ಮೂಲ ಪ್ರಜ್ಞೆಯನ್ನು ತಿಳಿಸುತ್ತದೆ. ಅಗ್ನಿಕುಂಡವೆಂದರೆ ಯಾಗಕ್ಕಾಗಿ ಸಿದ್ಧಪಡಿಸಿದ ಅಗ್ನಿ ಕುಂಡ ಇದರ ಮೂಲಕ ದೇವತೆಗಳಿಗೆ ಆಹುತಿಗಳನ್ನು ಅರ್ಪಿಸುತ್ತಾರೆ. ಸಂಭೂತ ಎಂದರೆ ಜನ್ಮತಾಳಿದ ಎಂದು ಅರ್ಥ. ಇಲ್ಲಿ ಅಗ್ನಿ ಕುಂಡವು ಅಂಧಕಾರವನ್ನು ಹೋಗಲಾಡಿಸುವುದರ ಸಂಕೇತವಾಗಿದೆ. ಅಂಧಕಾರವೆಂದರೆ ಅಜ್ಞಾನ ಅಥವಾ ಅವಿದ್ಯಾ ಎಂದು ತಿಳಿಯಬೇಕು.  ಅಗ್ನಿಕುಂಡ ಸಂಭೂತ ಎನ್ನುವುದನ್ನು ಅಗ್ನಿಕುಂಡದಲ್ಲಿ ಜನಿಸಿದ ಎಂದು ಅರ್ಥೈಸಬಾರದು. ಅವಳು ಅಂಧಕಾರವನ್ನು ಹೋಗಲಾಡಿಸುವ ಪೂರ್ಣಚೈತನ್ಯವಾಗಿದ್ದಾಳೆ. ಅವಳು ಅಜ್ಞಾನವನ್ನು ತನ್ನ ಶುದ್ಧವಾದ ಚೈತನ್ಯದಿಂದ ಮತ್ತು ಸ್ವಯಂಪ್ರಕಾಶ ರೂಪದಿಂದ ಮಾಯಾಂಧಕಾರವನ್ನು ನಾಶಗೊಳಿಸುವವಳಾಗಿದ್ದಾಳೆ. ಇದೇ ರೀತಿಯಾದ ವಿವರಣೆಯನ್ನು ಕೃಷ್ಣನು ಭಗವದ್ಗೀತೆಯ ನಾಲ್ಕನೇ ಅಧ್ಯಾಯದ ೩೭ನೇ ಶ್ಲೋಕದಲ್ಲಿ ಕೊಡುತ್ತಾನೆ; "ಯಾವ ರೀತಿ ಬೆಂಕಿಯು ಕಟ್ಟಿಗೆಯ ಕೊರಡುಗಳನ್ನು ಸುಟ್ಟು ಬೂದಿ ಮಾಡುತ್ತದೆಯೋ ಅದೇ ರೀತಿ ಜ್ಞಾನಾಗ್ನಿಯು ಸರ್ವವಿಧವಾದ ಕರ್ಮಗಳನ್ನು ಬೂದಿಯಾಗಿಸುತ್ತದೆ". ನಮ್ಮೊಳಗಿರುವ ಬ್ರಹ್ಮದ ಪರಿಪೂರ್ಣ ಜ್ಞಾನವು ಎಲ್ಲಾ ವಿಧವಾದ ಕರ್ಮಗಳನ್ನು ಅವು ಒಳ್ಳೆಯವಾಗಿರಲಿ ಅಥವಾ ಕೆಟ್ಟವಾದವುಗಳಾಗಿರಲಿ ಸಕಲವನ್ನೂ ನಾಶ ಮಾಡುತ್ತದೆ. ಒಬ್ಬನು ಪುನರ್ಜನ್ಮವನ್ನು ಹೊಂದಬಾರದೆಂದರೆ ಅವನ ಕರ್ಮದ ಖಾತೆಯಲ್ಲಿ ಯಾವುದೇ ರೀತಿಯಾದ ಶೇಷವಿರಬಾರದು.

Devakārya-samudyatā देवकार्य-समुद्यता (5)

ದೇವಕಾರ್ಯ-ಸಮುದ್ಯತಾ

ಲಲಿತಾಂಬಿಕೆಯು ದೇವತೆಗಳಿಗೆ (ದೇವ-ದೇವಿಯರಿಗೆ) ಸಹಾಯ ಮಾಡುವ ಉದ್ದೇಶದಿಂದ ತನ್ನಷ್ಟಕ್ಕೆ ತಾನೇ (ಸ್ವ ಇಚ್ಛೆಯಿಂದ) ಅವತರಿಸಿದ್ದಾಳೆ. ಅವಳು ಯಾವ ವಿಧವಾದ ಸಹಾಯವನ್ನು ದೇವರುಗಳಿಗೆ ಮಾಡಬಲ್ಲಳು? ಅದರ ಹಿನ್ನೆಲೆ ಹೀಗಿದೆ, ಅದೇನೆಂದರೆ ಬಹು ಹಿಂದೆ ದೇವತೆಗಳು ಅಸುರರೊಂದಿಗೆ ಯುದ್ಧ ಮಾಡುವುದರಲ್ಲಿ ನಿರತರಾಗಿದ್ದರು. ಆ ಯುದ್ಧದಲ್ಲಿ ದೇವಿಯು ಅಸುರರ ಮೇಲೆ ದೇವತೆಗಳು ಜಯಗಳಿಸುವಂತೆ ಮಾಡುತ್ತಾಳೆ. ದೇವತೆಗಳು ಕುಕೃತ್ಯಗಳನ್ನು ಮಾಡುವುದಿಲ್ಲವಾದ್ದರಿಂದ ದೇವಿಯು ಅವರಿಗೆ ಸಹಾಯವನ್ನು ಮಾಡುತ್ತಾಳೆ. ಅವಳು ಪರಬ್ರಹ್ಮದ ಭಾಗವಾಗಿರುವಾಗ ರಾಕ್ಷಸರ ವಿನಾಶಕ್ಕಾಗಿ ಏಕೆ ಹೊಸದಾಗಿ ಅವತಾರವೆತ್ತಬೇಕಾಗಿತ್ತು?  ಅವಳು ಪರಬ್ರಹ್ಮದ ಭಾಗವಾಗಿರುವಾಗ ಅದು ಅವಳ ಪ್ರಕಾಶ ರೂಪವನ್ನು ಕುರಿತಾಗಿ ಹೇಳುತ್ತದೆ. ಪ್ರಕಾಶ (ಸ್ವತಃ ತನ್ನ ಸ್ವರೂಪವನ್ನು ತೋರ್ಪಡಿಸುವ ತತ್ವ, ಪ್ರಜ್ಞೆ ಅಥವಾ ಚೈತನ್ಯ; ಅಥವಾ ಯಾವುದರ ಮೂಲಕ ಎಲ್ಲವನ್ನೂ ತಿಳಿಯಬಹುದೋ ಆ ತತ್ವ) ರೂಪವು ಶಿವನನ್ನು ಪ್ರತಿನಿಧಿಸಿದರೆ ಅವಳ ವಿಮರ್ಶ ರೂಪವು (ತನ್ನಿರುವಿಕೆಯ ಪ್ರಜ್ಞೆ ಇದು ಶಿವನ ಸ್ವಯಂ ವ್ಯಕ್ತವಾಗುವ ತತ್ವಕ್ಕೆ/ಶಿವನ ಪ್ರಜ್ಞೆಗೆ ವಿರುದ್ಧವಾಗಿದೆ, ಈ ರೂಪದಲ್ಲಿ ದೇವಿಯು ಪೂರ್ಣ ಜ್ಞಾನ ಮತ್ತು ಚಟುವಟಿಕೆಯುಳ್ಳವಳಾಗಿದ್ದು ಈ ಸಮಸ್ತ ಪ್ರಪಂಚದ ಆಗುಹೋಗುಗಳನ್ನು ನಿಯಂತ್ರಿಸುತ್ತಾಳೆ) ಶಕ್ತಿಯನ್ನು ಪ್ರತಿನಿಧಿಸುತ್ತದೆ. ದೇವಿಯು ಪರಶಿವನಿಂದ ಸೃಷ್ಟಿಸಲ್ಪಟ್ಟ ವಿಮರ್ಶ ರೂಪವಾಗಿ ಅವಳು ಅವನ ಭಾಗವಾಗಿರುವುದರಿಂದ; ಈ ನಾಮವು ಲಲಿತಾಂಬಿಕೆಯ ಪ್ರಕಾಶ ರೂಪವನ್ನು ಸೂಕ್ಷ್ಮವಾಗಿ ಒತ್ತಿಹೇಳುತ್ತದೆ ಅದನ್ನು ನೇರವಾಗಿ ಹೇಳದೇ ಹೋದರೂ. ಈ ನಾಮವು ಅವಳ ಪ್ರಕಾಶ ರೂಪದ  ಕುರಿತಾಗಿ ಚರ್ಚಿಸುತ್ತದೆ.

          ಯೋಗ ವಾಶಿಷ್ಠದಲ್ಲಿ ಒಂದು ಮುಖ್ಯವಾದ ಹೇಳಿಕೆಯಿದೆ; "ನನಗೆ ಎರಡು ವಿಧವಾದ ರೂಪಗಳಿವೆ, ಸಾಮಾನ್ಯವಾದದ್ದು ಮತ್ತು ಅಸಾಮಾನ್ಯವಾದದ್ದು. ಸಾಮಾನ್ಯವಾದ ನನ್ನ ರೂಪಕ್ಕೆ ಕೈಗಳು ಮತ್ತು ಕಾಲುಗಳಿವೆ. ಈ ನನ್ನ ರೂಪವನ್ನು ಅಮಾಯಕರಾದ ಅಥವಾ ತಿಳುವಳಿಕೆಯಿಲ್ಲದ ಜನರು ಪೂಜಿಸುತ್ತಾರೆ. ಇನ್ನೊಂದು ನನ್ನ ಅಸಾಮಾನ್ಯ ರೂಪವಾಗಿದ್ದು ಅದು ಆಕಾರಹಿತವಾಗಿದೆ ಮತ್ತು ಅದಕ್ಕೆ ಆದಿ ಮತ್ತು ಅಂತ್ಯಗಳಿಲ್ಲ. ಮತ್ತು ಈ ನನ್ನ ರೂಪಕ್ಕೆ ಯಾವುದೇ ಗುಣಗಳು ಅಥವಾ ಲಕ್ಷಣಗಳಿಲ್ಲ ಅದನ್ನೇ ಬ್ರಹ್ಮ, ಆತ್ಮ, ಪರಮಾತ್ಮ, ಮೊದಲಾದ ಹೆಸರುಗಳಿಂದ ಕರೆಯುತ್ತಾರೆ.”

ಈ ನಾಮದಲ್ಲಿ ರಾಕ್ಷಸರೆಂದರೆ ಅವಿದ್ಯೆ ಅಥವಾ ಅಜ್ಞಾನ. ದೇವತೆಗಳೆಂದರೆ ಜ್ಞಾನ ಅಥವಾ ವಿದ್ಯೆ. ಅವಳು ಯಾರು ಬ್ರಹ್ಮಜ್ಞಾನವನ್ನು ಪಡೆಯಲು ಇಚ್ಛಿಸುತ್ತಾರೋ ಅವರಿಗೆ ಸಹಾಯವನ್ನು ಮಾಡುತ್ತಾಳೆ ಎಂದು ತಿಳಿಸುತ್ತದೆ.

******

ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAM MEANING  3, 4  & 5 http://www.manblunder.com/2009/07/lalitha-sahasranamam-345.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

 

 

 

Rating
No votes yet

Comments

Submitted by nageshamysore Sat, 01/25/2014 - 18:54

ಶ್ರೀಧರರೆ, ಒಂಭತ್ತರ ನಂತರ ನಾಮವಳಿಯ ಹತ್ತನೆ ಕಂತನ್ನು ಸೇರಿಸುತ್ತಿದ್ದೇನೆ, ಪರಿಷ್ಕರಣೆ-ತಿದ್ದುಪಡಿಗೆ :-)
.
೧೦. ಲಲಿತಾ ಸಹಸ್ರನಾಮದ ವಿವರಣೆ
___________________________________
.
೦೩. ಶ್ರೀಮತ್ ಸಿಂಹಾಸನೇಶ್ವರೀ
ಜಗವನಾಳುವ ಸಿಂಹಾಸನೇಶ್ವರೀ ಅಂತಿಮ ಲಯಕರಿ
ಲಕ್ಷ್ಮಿಯಾಗೆಲ್ಲ ಐಹಿಕ ಐಶ್ವರ್ಯ ಭಕ್ತಗೀವ ಕರುಣಾಕರಿ
ಅಷ್ಟಸಿಂಹಾಸನಮಂತ್ರ ಉಚ್ಚಾರ ಚತುರ್ಪಾರ್ಶ್ವ ಅರಿತೆ
ಜತೆ ಬಿಂದುಪೂಜೆ ಇಪ್ಪತ್ನಾಲ್ಕು ದೇವತೆಗೊಡತಿ ಲಲಿತೆ ||
.
೦೪. ಚಿದಗ್ನಿಕುಂಡ-ಸಂಭೂತಾ
ಅಗ್ನಿಕುಂಡ ಸಂಕೇತ ಅಂಧಕಾರವನಟ್ಟುವ ನಿರ್ಗುಣಪ್ರಜ್ಞೆ
ಅಜ್ಞಾನದ ಕತ್ತಲ ಮಾಯೆಗೆ ಚೈತನ್ಯ ಸ್ವಪ್ರಕಾಶದೆ ಆಜ್ಞೆ
ಜ್ಞಾನಾಗ್ನಿ ಧಗಧಗನುರಿದು ಬೂದಿಯಾಗಿಸುತೆಲ್ಲಾ ಕರ್ಮ
ಕರ್ಮಖಾತೆಯಲಿದ್ದರೆ ಶೂನ್ಯ ಶೇಷವಿದ್ದರಿಲ್ಲ ಪುನರ್ಜನ್ಮ ||
.
೦೫. ದೇವಕಾರ್ಯ - ಸಮುದ್ಯತಾ
ಅಜ್ಞಾನ ಅವಿದ್ಯೆ ರಾಕ್ಷಸ, ಜ್ಞಾನ ವಿದ್ಯೆಯೆ ದೇವತೆ ಮೊತ್ತ
ಅಮಾಯಕಪೂಜೆ ಸಾಮಾನ್ಯರೂಪ, ಅಸಾಮಾನ್ಯ ನಿಮಿತ್ತ
ಆದಿ ಅಂತ್ಯಾಕಾರರಹಿತ, ನಿರ್ಗುಣ ನಿರ್ಲಕ್ಷಣಾ ಪರಮಾತ್ಮ
ಅಸುರದ ಮನಕೆ ಪ್ರಕಾಶರೂಪ, ವಿಮರ್ಶಾರೂಪ ಬ್ರಹ್ಮಾತ್ಮ ||
.
.
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು