ನಿಮ್ಮನ್ನು ಭೂಮಿಗಿತ್ತವಳು ಭಾರವಾದಳೇ!?

ನಿಮ್ಮನ್ನು ಭೂಮಿಗಿತ್ತವಳು ಭಾರವಾದಳೇ!?

Comments

ಬರಹ

ಹೌದು! ಅಮ್ಮ-ತಾಯಿ-ಮಾತೃಶ್ರೀ! ಬಗ್ಗೆ ನಾನು ಹೇಳ್ತಾ ಇರೋದು!

ಏನು ವಿಷಾದ!

ಇತ್ತೀಚೆಗೆ ಯಾವ ಕಡೆ ಸಿಗ್ನಲ್ಲಿನಲ್ಲೂ, ಬೀದಿಗಳಲ್ಲೂ, ಹೋಟೆಲ್ ಮುಂಭಾಗದಲ್ಲೂ.... ಬರೀ ವೃದ್ಧರೇ! ಇವರ ಕೆಲಸವಾದರೂ ಏನು? ಎದುರಿಗೆ ಯಾರೇ ಸಿಕ್ಕರೂ ಕೈ ಚಾಚಿ, ಕೈ ಮುಗಿದು ಬೇಡುವುದು! ಒಂದೋ, ಎರಡೋ ರುಪಾಯಿ ಕೈಗಿತ್ತರೆ, ಅದೇನೋ ತೃಪ್ತಿ ಅವರ ಮುಖದಲ್ಲಿ! ಇರಲಿ, ನೀವೂ ಕೂಡ ಇದನ್ನು ಸಾಕಷ್ಟು ಕಡೆ ಗಮನಿಸಿರಬಹುದು! ವಿಪರ್ಯಾಸವೆಂದರೆ ಎಷ್ಟೋ ಮಂದಿಗೆ ನಡೆಯಲೂ ಸಹ ಆಗದಂಥಹ ವಯಸ್ಸೂ! ಯಾಕೆ ಹೀಗೆ ಎಂದು ಯೋಚಿಸಿದರೆ ಆಗುವ ಬೇಜಾರು, ನೋವು, ತಳಮಳ, ಆತಂಕ ಅಷ್ಟಿಷ್ಟಲ್ಲ.

9 ತಿಂಗಳು ಹೊತ್ತು, ಹೆತ್ತು, ಸಾಕಿ ಸಲಹಿದ ನಮ್ಮ ಮುದ್ದಿನ ಅಮ್ಮಂದಿರು ನಮಗೆ ಬೇಡವಾದರೇ? ಅವರಾದರೋ, ತಮ್ಮ ಮಕ್ಕಳ ಬಗ್ಗೆ ಅಗಾಧವಾದ ಪ್ರೀತಿ, ವಾತ್ಯಲ್ಯ, ಮಮತೆಯಿಂದ ಸಾಕಿ ಬೆಳೆಸಿ, ಸಾಧ್ಯವಾದಷ್ಟೂ ವಿದ್ಯೆ, ಬುದ್ಧಿ ಕೊಡಿಸುತ್ತಾರೆ. ತನಗಿಲ್ಲದಿದ್ದರೂ, ತಾನು ಉಪವಾಸ ಇದ್ದರೂ, ತನ್ನ ಮಕ್ಕಳಿಗೆ ತಿನ್ನಿಸುವ ತಾಯಿ ಬಗ್ಗೆ ಎಷ್ಟು ಬರೆದರೂ, ಹಾಡಿದರೂ, ಹೊಗಳಿದರೂ... ಎಳ್ಳಷ್ಟೂ ಸಾಲದು. ಅಂಥಹ ಕರುಣಾಮಯಿಯನ್ನು ವೃದ್ಧ್ಯಾಪ್ಯದಲ್ಲಿ ಮನೆಯಿಂದ ಹೊರಹಾಕುವುದು (ಬೀದಿಗಟ್ಟುವುದು) ಸರಿಯೇ!

ಪ್ರೀತಿಯ ಪುತ್ರ (ಪುತ್ರಿ) ವೃಂದವೇ, ಇದು ಸರಿಯೇ? - ಅಯ್ಯೋ, ನಿನ್ಯಾಕೆ, ನಮ್ಗೆ ಇಂಥಾ ಪ್ರಶ್ನೆ ಕೇಳಿ?, ಅಂತೀರಾ? ನಮ್ಮ ತಂದೆ-ತಾಯಿ ನಮ್ಮೊಂದಿಗೆ ನೆಮ್ಮದಿಯಿಂದಿದ್ದಾರೆ ಅಂಥಾ ಹಲವರು ಹೇಳ್ತೀರಿ, ಅದು ಅಕ್ಷರಶಃ ನಿಜವೂ ಹೌದು! ಹಾಗಿಲ್ಲದಿದ್ದರೆ... ರಸ್ತೆಯ ತುಂಬೆಲ್ಲಾ ಅವರೇ ಇರುತ್ತಿದ್ದರು. ನಾನು ಹೇಳ್ತಾ ಇರೋದು...

ಹಲವರಿಗೆ ತನ್ನ ತಂದೆ-ತಾಯಿರನ್ನು ದಿನದಲ್ಲೊಮ್ಮೆ ಮಾತಾಡಿಸಲು ಪುರುಸೊತ್ತಿಲ್ಲ, ಆದರೆ ತನ್ನ ಹೆಂಡತಿ ಮಕ್ಕಳೊಂದಿಗೆ ಅಗತ್ಯ/ಅನಗತ್ಯ ವಸ್ತುಗಳ ಖರೀದಿಗಾಗಿ ಶಾಪಿಂಗ್‍ಗೆ, ಮನರಂಜನೆಗಾಗಿ ಸಿನಿಮಾಕ್ಕೆ, ತಿಂಡಿ-ಊಟಕ್ಕಾಗಿ ಹೋಟೆಲ್ ಹೋಗ್ಲಿಕ್ಕೆ ಸಮಯವಿರುತ್ತೆ. ಕಾಲ ಹಾಗೆ ಉರುಳುತ್ತಾ… ಅದೇ ಹಂತ ಎಲ್ಲರಿಗೂ ಬರಿತ್ತೆ... ಆಗ ನಿಮ್ ಗತಿ (ಕಥೆ) ವಿಭಿನ್ನವೇ? ಅದಕ್ಕೆ ಹಿರಿಯವರು ಹೇಳೋದು "ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ" ಅಂತ.

ಅದು ಏನೇ ಇರಲಿ! ನೇರವಾಗಿ ವಿಷಯಕ್ಕೆ ಬರ್ತೀನಿ! ಚಿಕ್ಕಂದಿನಿಂದಲೂ ಮಕ್ಕಳ ಪಾಲನೆ-ಪೋಷಣೆ ಮಾಡುವ ತಂದೆ-ತಾಯಂದಿರು, ತಮ್ಮ ಕೊನೆಯ ಕಾಲದಲ್ಲಿ ತಮಗೆ ಆಸರೆಯಾಗಲಿ ಎಂದು ಭಾವಿಸುವುದು ತಪ್ಪೇನಲ್ಲ. ಅಷ್ಟೂ ಮಾಡದವರೂ ಈ ಭೂಮಿ ಮೇಲೆ ಹುಟ್ಟಿದ್ದು ದಂಡವೇ ಸರಿ ಬಿಡಿ. ಇನ್ನೂ ಈಗಿನ ಕಾಲದ ಮಕ್ಕಳಿಗಂತೂ ಬರೀ ಆಧುನಿಕ ವಸ್ತುಗಳು, ಉಡುಗೆ-ತೊಡುಗೆಗಳು, ಸಿನಿಮ ತಾರೆಯರು ಮತ್ತು ವಿಲಾಸಿ ಜೀವನದೆಡೆಗೆ ತಮ್ಮ ಚಿತ್ತ. (ಎಲ್ಲರಿಗೂ ಅನ್ವಯವಾಗುವುದಿಲ್ಲ - ಕುಂಬಳಕಾಯಿ ಕಳ್ಳ ಅಂದರೇ ಹೆಗಲು ಮುಟ್ಟಿ ನೋಡ್ಕೋಳ್ಳೋ ಅವಶ್ಯಕತೆಯಿಲ್ಲ). ತಮ್ಮ ಮಕ್ಕಳಿಗಾಗಿ ಜೀವನವನ್ನೇ ಮುಡುಪಾಗಿಟ್ಟು, ಸರ್ವವನ್ನು ತ್ಯಾಗ ಮಾಡುವ, ಸದಾ ಕಾಲ ಒಳ್ಳೆಯದನ್ನೇ ಬಯಸುವ ತಂದೆ-ತಾಯಿಗಳಿಗೆ ನೀವೇನು ಕೊಟ್ಟಿದ್ದೀರಿ ಎಂದು ಪ್ರಶ್ನಿಸಿಕೊಳ್ಳಿ. ಉತ್ತರ ಸಕಾರಾತ್ಮಕವಾಗಿದ್ದರೆ ಸಂತೋಷಪಡಿ, ಇಲ್ಲದಿದ್ದರೆ ಸರಿಪಡಿಸಿಕೊಳ್ಳಿ.

ಪಾಪ-ಪುಣ್ಯ ಎನ್ನುವ ಎರಡರಲ್ಲೂ ನಂಬಿಕೆಯಿಲ್ಲದ ಇಂದಿನ ಮಕ್ಕಳ್ಳಲ್ಲಿ ಏನೇ ಹೇಳಿದರೂ, ಮೊಸರಲ್ಲಿ ಕಲ್ಲು ಹುಡುಕೋ ಪ್ರಯತ್ನ ಮಾಡೇ ಮಾಡ್ತಾರೆ.

ಇನ್ನು ಕೆಲವರಿಗೆ ತನ್ನ ತಂದೆ-ತಾಯಂದಿರು ಏನೇ ಹೇಳಿದರೂ ಬರೀ ವಕ್ರವಾಗೆ ಕಾಣಿಸುತ್ತದೆ ಕಾರಣ ನಾವೇ ಸರ್ವವನ್ನೂ ಬಲ್ಲವರೆಂದೂ ಅಲ್ಪ ಜ್ಞಾನದಿಂದ ಕುಪಿತಗೊಳ್ಳುತ್ತಾರೆ. ತಾವು ಗಮನಿಸಿರಬುಹುದು - ಎಷ್ಟೊ ಮಂದಿ ತಂದೆ-ತಾಯಂದಿರು ಅನಗತ್ಯವಾಗಿ ಮಕ್ಕಳೊಂದಿಗೆ ಏನೂ ಹೇಳುವುದಿಲ್ಲ ಕಾರಣ ಅವರು ಕೇಳುವುದೂ ಇಲ್ಲ. ಹೀಗೆ ತಂದೆ-ಮಗ, ತಾಯಿ-ಮಗ, ತಂದೆ-ತಾಯಿ-ಮಕ್ಕಳು ಸಂಬಂಧಕ್ಕೆ ಕೊಡಲಿ ಪೆಟ್ಟು.

ಏನೇ ಆಗಲಿ, ಊರಿಗೆ ಉಪಕಾರ ಮಾಡೋದ್ ಇರಲಿ, ತನ್ನ ತಂದೆ-ತಾಯಿಯಂದಿರನ್ನು ಅನಾಥರನ್ನಾಗಿ ಮಾಡೋ ಮಕ್ಕಳೇ ಹುಟ್ಟದಿರಲಿ, ಹುಟ್ಟಿದ್ರೂ ಅವರಿಗೆ ದೇವರು ತನ್ನ ತಂದೆ-ತಾಯಿಗಳನ್ನು ಚೆನ್ನಾಗಿ ನಡೆಸಿಕೊಳ್ಳೊದನ್ನ ಮತ್ತು ನೋಡ್ಕೊಳ್ಳೊದನ್ನ ಕರುಣಿಸಲಿ.

ನಾನು ಕಣ್ಣಾರೆ ಕಂಡ ಒಂದು ಉದಾಹರಣೆ ಕೋಡ್ತಿನಿ:

ನಮ್ಮೂರಿನಲ್ಲಿ ಒಬ್ಬ ಹೆಣ್ಣು ಮಗಳಿದ್ದಳು. ಅವರನ್ನು ಬೇರೊಂದೂರಿಗೆ ಮದುವೆ ಮಾಡಲಾಗಿತ್ತಂತೆ. ಆಕೆ ನಾವ್ ಕಂಡಾಗ ನಮ್ಮೂರಲ್ಲೇ ಇದ್ದರು. ಆಕೆಗೆ ಎರಡು ಗಂಡು ಮಕ್ಕಳಾದ ಬಳಿಕ ಗಂಡ ಸ್ವರ್ಗಸ್ಥರಾದರಂತೆ. ತದನಂತರ ಹಾಗೆ ತನ್ನ ತವರೂರಿಗೆ ಹಿಂದಿರುಗಿ ಇಲ್ಲಿಯೇ ಕೂಲಿ-ನಾಲಿ ಮಾಡಿ ಹೇಗೋ ಜೀವನ ಸಾಗಿಸುತ್ತಿದ್ದಳು. ಆಕೆಯ ಧೈರ್ಯ ಎಂಥಹ ಗಂಡಸನ್ನು ಮೀರಿಸುವಂಥದ್ದು. ತನ್ನ ಜೀವನಾಧಾರಕ್ಕಾಗಿ ಸ್ವಲ್ಪ ಜಮೀನನ್ನು ಖರೀದಿಸಿದ ಆಕೆ ತನ್ನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿದಳು. ಜೀವನ ಸಾಗುತಿದ್ದಂತೆ ಇಬ್ಬರು ಮಕ್ಕಳಿಗೂ ಮದುವೆಯಾಯಿತು... ಮಕ್ಕಳಾದವು... ಮಕ್ಕಳಿಬ್ಬರೂ ಬೇರೆ ಬೇರೆಯಾದರು... ಸಾಕಷ್ಟು ಕಷ್ಟಪಟ್ಟು ಸಾಕಿದ ತಾಯಿಯನ್ನು ದೂರಮಾಡಿದರು... ಆದರೂ ಆಕೆ ಹೆದರಲಿಲ್ಲ. ತನ್ನ ಜೀವನೋಪಾಯಕ್ಕೆ ದಾರಿ (ಹಾಲು, ಬೆಣ್ಣೆ ಮಾರುವುದು) ಕಂಡುಕೊಂಡಳು.... ಕ್ರಮೇಣ ವಯಸ್ಸಾದಂತೆ ರೋಗಕ್ಕೆ ತುತ್ತಾದಳು... ತಾ ಮಾಡಿಟ್ಟಿದ್ದ ಹಣವೆಲ್ಲಾ ಬರಿದಾಯಿತು... ಇನ್ನು ಮುಂದೆ ಜೀವನ ಸಾಗಿದುವುದು ದುಸ್ತರವೆನಿಸಿತು... ಆಕೆ ನೇರವಾಗಿ ಎಲ್ಲರಿಗೂ ಹೇಳಿ ನೇಣಿಗೆ ಶರಣಾದಳು. ಶವ-ಸಂಸ್ಕಾರ, ತಿಥಿಗೆಂದು ಹಣವನ್ನೂ ಉಳಿಸಿದ್ದಳು... ಅಲ್ಲಿಗೆ ಆಕೆಯ ಕಷ್ಟಗಳೂ ಮುಗಿದಿದ್ದವು - ಅಂತ್ಯ-ಸಂಸ್ಕಾರವೂ ನಡೆಯಿತು. ಈಗ ಬರೀ ನೆನಪು...

ಒಂದು ಸಾರಿ ತಂದೆ-ತಾಯಿಯಂದಿರನ್ನು ಕಳೆದುಕೊಂಡರೆ ಅವರನ್ನು ಯಾರಿಂದಲೂ, ಬೇಕೆನಿಸಿದರೂ, ಹಣದಿಂದಾಗಲಿ, ಯಾವುದರಿಂದಲೂ ಕರೆತರಲಾಗುವುದಿಲ್ಲ. ಇದೆಲ್ಲಾ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರವೇ, ಆದರೂ ನಿಮ್ಮಲ್ಲರಿಗೂ ನಿಮ್ಮ ಕರ್ತವ್ಯದ ಬಗ್ಗೆ ನೆನೆಸುತ್ತಿದ್ದೇನೆ ಅಷ್ಟೇ!

"ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಾಗೆ ಕಣೋ, ಹೈತತಾಯಿಯ ಕಳೆದುಕೊಂಡರೆ ಮತ್ತೆ ಸಿಗುವಳೇನೋ ಅಣ್ಣ ಮತ್ತೆ ಬರುವಳೇನೋ" ಹಾಡು ನೆನಪಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet