ಔಷಧಿ ಪ್ರಯೋಗಗಳ ಬಲಿವ್ಯಕ್ತಿಗಳ ಜೀವಕ್ಕೆ ಕಿಂಚಿತ್ ಬೆಲೆ!

ಔಷಧಿ ಪ್ರಯೋಗಗಳ ಬಲಿವ್ಯಕ್ತಿಗಳ ಜೀವಕ್ಕೆ ಕಿಂಚಿತ್ ಬೆಲೆ!

ಬಹುರಾಷ್ಟ್ರೀಯ ಹಾಗೂ ಭಾರತೀಯ ಔಷಧಿ ಕಂಪೆನಿಗಳು ತಮ್ಮ ಹೊಸ ಔಷಧಿಗಳ ವೈದ್ಯಕೀಯ ಪ್ರಯೋಗಗಳನ್ನು ಮನುಷ್ಯರ ಮೇಲೂ ನಡೆಸುತ್ತವೆ. ಈ ಪ್ರಯೋಗಗಳಿಗೆ ಬಲಿಯಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ ಹಾಗೂ ಶಾಶ್ವತ ಅಂಗವೈಕಲ್ಯ ಅಥವಾ ಕ್ಯಾನ್ಸರಿನಂತಹ ರೋಗಗಳಿಂದ ನರಳುತ್ತಿದ್ದಾರೆ.

ಇಂತಹ "ಬಲಿವ್ಯಕ್ತಿ"ಗಳ ರಕ್ಷಣೆಗೆ ಸರಕಾರ ಮುಂದಾಗಬೇಕೆಂಬ ಬೇಡಿಕೆಯನ್ನು ಹಲವಾರು ಸರಕಾರೇತರ ಸಂಘಟನೆಗಳು ಈ ವರುಷ ಪ್ರಬಲವಾಗಿ ಮುಂದಿಟ್ಟಿವೆ. ಅಂತೂ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ಆರೋಗ್ಯ ಮಂತ್ರಾಲಯದ ಅಧೀನದಲ್ಲಿರುವ ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‍ಓ) ಇಂತಹ ಬಲಿವ್ಯಕ್ತಿಗಳ ಸಾವು ಮತ್ತು ದೈಹಿಕಹಾನಿಗೆ ಪರಿಹಾರ ನೀಡಲು ಸೂತ್ರವೊಂದನ್ನು ಸಿದ್ಧಪಡಿಸಿದೆ.

ಆದರೆ, ಈ ಸೂತ್ರದ ಪ್ರಕಾರ ಉತ್ತಮ ಸಂಬಳ ಪಡೆಯುತ್ತಿರುವ ವ್ಯಕ್ತಿಯು ಔಷಧಿ ಪ್ರಯೋಗದ ಬಲಿವ್ಯಕ್ತಿಯಾದರೆ ಮಾತ್ರ, ತನಗಾದ ನಷ್ಟಕ್ಕೆ ಸೂಕ್ತ ಪರಿಹಾರ ಪಡೆಯಬಹುದು. ಯಾವನೇ ಬಡವ, ನಿರುದ್ಯೋಗಿ, ರೋಗಪೀಡಿತ ಅಥವಾ ನಿರುದ್ಯೋಗಿ ಮಹಿಳೆ ಬಲಿವ್ಯಕ್ತಿಯಾದರೆ, ಅಲ್ಪ ಪರಿಹಾರ ಸಿಕ್ಕೀತು. "ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಬಡ ಹಾಗೂ ನಿರುದ್ಯೋಗಿ ವ್ಯಕ್ತಿಗಳಿಗೇ ಔಷಧಿ ಪ್ರಯೋಗಗಲಲ್ಲಿ ಭಾಗವಹಿಸಲು ಆಮಿಷ ಒಡ್ಡಲಾಗುತ್ತದೆ ಅಥವಾ ಅಂಥವರೇ ಇಲ್ಲಿ ಪುಕ್ಕಟೆ ಚಿಕಿತ್ಸೆ ಸಿಗುತ್ತದೆಂಬ ಆಶೆಯಿಂದ ಭಾಗವಹಿಸುತ್ತಾರೆ" ಎಂದು ತಿಳಿಸುತ್ತಾರೆ, ಡೆಲ್ಲಿಯ ಸಾಮ ಸಂಸ್ಥೆಯ ನಿರ್ದೇಶಕರಾದ ಎನ್. ಬಿ. ಸರೋಜಿನಿ (ಅವರದು ಮಹಿಳೆಯರ ಆರೋಗ್ಯ ವಿಷಯಗಳ ಬಗ್ಗೆ ಕೆಲಸ ಮಾಡುತ್ತಿರುವ ಲಾಭರಹಿತ ಸಂಸ್ಥೆ.) ಅಂಥವರು ಬಲಿವ್ಯಕ್ತಿಗಳಾದರೆ, ಈ ಸೂತ್ರದಿಂದ ನ್ಯಾಯ ಸಿಕ್ಕೀತೇ?



ಅತಾರ್ಕಿಕ ಸೂತ್ರ: ಬಲಿವ್ಯಕ್ತಿಗಳಿಗೆ ನೀಡುವ ಪರಿಹಾರದ ಮೊತ್ತ ಈ ನಾಲ್ಕು ಅಂಶಗಳನ್ನು ಅವಲಂಬಿಸಿದೆ: (ಎ) ಮಾಸಿಕ ಆದಾಯ (ಬಿ) ವಯಸ್ಸು (ಎಫ್) ಯಾವುದೇ ರೋಗದಿಂದ ಪೀಡಿತರಾಗಿದ್ದರೆ ಅದರ ತೀವ್ರತೆ ಮತ್ತು (ಡಿ) ಪ್ರಯೋಗದಿಂದಾಗಿ ದೈಹಿಕ ಹಾನಿ ಆಗಿದ್ದರೆ ಅದರ ಶೇಕಡಾ ಪ್ರಮಾಣ.

ಗುಣಾಂಶ "ಎ"ಯನ್ನು ಬಲಿವ್ಯಕ್ತಿಯ ಮಾಸಿಕ ಆದಾಯದ ಶೇಕಡಾ ೫೦ (ಬಲಿವ್ಯಕ್ತಿ ಮೃತನಾದ ಸಂದರ್ಭದಲ್ಲಿ) ಮತ್ತು ಶೇಕಡಾ ೬೦ (ದೈಹಿಕಹಾನಿಯಾದ ಸಂದರ್ಭದಲ್ಲಿ) ಎಂದು ನಿಗದಿಪಡಿಸಲಾಗಿದೆ. ತನ್ನ ಆದಾಯದ ಇಷ್ಟು ಭಾಗವನ್ನು ವ್ಯಕ್ತಿಯು ಕುಟುಂಬಕ್ಕಾಗಿ ವೆಚ್ಚ ಮಾಡುತ್ತಾನೆ ಎಂದು ಅಂದಾಜಿಸಲಾಗಿದೆ. ಅಂದರೆ, ವ್ಯಕ್ತಿಯು ಮಾಸಿಕ ಆದಾಯದಿಂದ ತನಗಾಗಿ ಮಾಡುವ ವೆಚ್ಚವನ್ನು ಪರಿಗಣಿಸಲಾಗಿಲ್ಲ. "ಈ ಗುಣಾಂಶವು ಬಡವರನ್ನು, ನಿರುದ್ಯೋಗಿಗಳನ್ನು ಮತ್ತು ಉದ್ಯೋಗಕ್ಕೆ ಹೋಗದಿರುವ ಮಹಿಳೆಯರನ್ನು ಕಡೆಗಣಿಸಿದೆ. ಯಾಕೆಂದರೆ, ಇಂಥವರ ಮಾಸಿಕ ಆದಾಯವು ಸರಕಾರವು ನಿಗದಿಪಡಿಸಿದ ಕನಿಷ್ಠ ವೇತನವೆಂದು ಪರಿಗಣಿಸಲಾಗಿದೆ. ಹಾಗಾಗಿ, ಅಧಿಕ ಮಾಸಿಕ ಆದಾಯದ ವ್ಯಕ್ತಿಗಳಿಗೆ ಹೋಲಿಸಿದಾಗ ಇಂಥವರಿಗೆ ಸಿಗುವ ಪರಿಹಾರ ತೀರಾ ಕಡಿಮೆ" ಎಂದು ವಿವರಿಸುತ್ತಾರೆ ಲೋಕೊಸ್ಟ್ ಇಂಡಿಯಾದ ಮೆನೇಜಿಂಗ್ ಟ್ರಸ್ಟಿ ಎಸ್. ಶ್ರೀನಿವಾಸನ್ (ಅದು ಬರೋಡಾದ ಜನೆರಿಕ್ ಔಷಧಿ ಉತ್ಪಾದನಾ ಸಂಸ್ಥೆ).

ಈ ಗುಣಾಂಶವು, ಅಸಂಘಟಿತ ಕಾರ್ಮಿಕರ ಮಾಸಿಕ ವೇತನದಲ್ಲಿ ಹಂಗಾಮಿಗೆ ಅನುಸಾರವಾಗಿ ಆಗುವ ಏರುಪೇರು ಪರಿಗಣಿಸುವುದಿಲ್ಲ ಎಂಬುದನ್ನು ಸರೋಜಿನಿ ಅವರು ಬೆರಳೆತ್ತಿ ತೋರಿಸುತ್ತಾರೆ. ಉದಾಹರಣೆಗೆ ದಿನಗೂಲಿ ಕಾರ್ಮಿಕರು ಕೆಲವು ತಿಂಗಳು ಕನಿಷ್ಠವೇತನಕ್ಕಿಂತ ಜಾಸ್ತಿ ದಿನಗೂಲಿ ಪಡೆಯಬಹುದು.

ಸೂತ್ರದಲ್ಲಿರುವ ಗುಣಾಂಶ "ಬಿ" ಯಾವುದೇ ತರ್ಕರಹಿತವಾದ ಅಂಶ. ಇದರ ಪಟ್ಟಿಯಲ್ಲಿ ಬಲಿವ್ಯಕ್ತಿಯ ಪ್ರಾಯಕ್ಕೆ ಅನುಸಾರವಾಗಿ ಒಂದು ಸಂಖ್ಯೆಯನ್ನು ನಮೂದಿಸಲಾಗಿದೆ. ಉದಾಹರಣೆಗೆ, ೨೦ ವರುಷ ವಯಸ್ಸಿಗೆ ೨೨೪, ಹಾಗೆಯೇ ೩೫ ವರುಷ ವಯಸ್ಸಿಗೆ ೧೯೭.೦೬ ಎಂಬ ಸಂಖ್ಯೆಗಳಿವೆ. ವಯಸ್ಸು ಜಾಸ್ತಿಯಾದಂತೆ ಈ ಸಂಖ್ಯೆ ಕಡಿಮೆಯಾಗುತ್ತದೆ. (೬೫ ವರುಷದ ನಂತರದ ವಯಸ್ಸುಗಳಿಗೆ ಈ ಸಂಖ್ಯೆಯಲ್ಲಿ ಬದಲಾವಣೆಯಿಲ್ಲ.) ಇದರ ತರ್ಕರಾಹಿತ್ಯವನ್ನು ಗಮನಿಸಿ: ಬಲಿವ್ಯಕ್ತಿ ೨೦ ವರುಷ ವಯಸ್ಸಿಗೆ ಮೃತನಾದರೆ, ಅವನು ಬದುಕಬಹುದಾಗಿದ್ದ ವರುಷಗಳು ಜಾಸ್ತಿ; ಆದ್ದರಿಂದ ಗುಣಾಂಶವೂ ಜಾಸ್ತಿ ಇರುವುದು ಸರಿ. ಆದರೆ, ೩೦ ವರುಷ ವಯಸ್ಸಿನ ಬಲಿವ್ಯಕ್ತಿ ಮೃತನಾದರೆ, ಅವನಿಗೆ ಅವಲಂಬಿತರು (ಹೆಂಡತಿ, ಮಕ್ಕಳು, ಹೆತ್ತವರು) ಇರುತ್ತಾರೆ; ಹಾಗಾಗಿ, ಈತನ ಗುಣಾಂಶ ಕಡಿಮೆ ಮಾಡುವುದು ಸರಿಯಲ್ಲ.

ಗುಣಾಂಶ "ಬಿ"ಗೆ ಈ ವಯಸ್ಸು ಆಧಾರಿತ ಪಟ್ಟಿಯನ್ನು ಎಲ್ಲಿಂದ ಎತ್ತಿಕೊಳ್ಳಲಾಗಿದೆ? ಕೆಲಸಗಾರರ ಪರಿಹಾರ ಕಾಯಿದೆ, ೧೯೨೩ರ ಷೆಡ್ಯೂಲ್ ೪ರಿಂದ. ಇದಂತೂ ಸರಕಾರಿ ಅಧಿಕಾರಿಗಳ ಬೇಜವಾಬ್ದಾರಿಯ ಸೂಚಕ. ಯಾಕೆಂದರೆ, ಜೀವನೋಪಾಯಕ್ಕಾಗಿ ದುಡಿಯುವವನನ್ನು ಔಷಧಿ ಪ್ರಯೋಗದಲ್ಲಿ ಭಾಗವಹಿಸುವವನಿಗೆ ಸಮೀಕರಿಸುವುದು ಅಸಂಬದ್ಧ.

ಯಾಕೆಂದರೆ, ದುಡಿದು ಗಳಿಸುವುದು ವ್ಯಕ್ತಿಯೊಬ್ಬ ಜೀವನ ಮಾಡಲು ಅವಶ್ಯ. ಆದರೆ, ಔಷಧಿ ಪ್ರಯೋಗದಲ್ಲಿ ಭಾಗವಹಿಸುವವನು, ಸಂಶೋಧನೆಗೆ ತನ್ನ ದೇಹವನ್ನೇ ಒದಗಿಸಿ, ವೈದ್ಯಕೀಯ ವಿಜ್ನಾನದ ಮುನ್ನಡೆಗೆ ಗಣನೀಯ ಕೊಡುಗೆ ಸಲ್ಲಿಸುತ್ತಾನೆ. ಈ ಕೊಡುಗೆಗಾಗಿ ಆತನಿಗೆ ಸಾಧಾರಣ ಕಾರ್ಮಿಕನಿಗೆ ಪಾವತಿಸುವುದಕ್ಕಿಂತ ಹೆಚ್ಚಿನ ಪರಿಹಾರ ಪಾವತಿಸಲೇ ಬೇಕು. ಔಷಧಿ ಪ್ರಯೋಗಗಳಲ್ಲಿ ಉದ್ಯೋಗದಾತ - ಉದ್ಯೋಗಿ ಎಂಬ ಸಂಬಂಧ ಇರುವುದಿಲ್ಲ ಎಂಬುದನ್ನು ಗಮನಿಸಬೇಕು. ಆ ಸಂಬಂಧ ಇರುವಾಗ, ಉದ್ಯೋಗಿ ಅಥವಾ ಕಾರ್ಮಿಕನಿಗೆ ಅಪಘಾತವಾದರೆ ವಿಮಾ ಪರಿಹಾರ ಸಿಗುತ್ತದೆ.

ಸಾವು ಅಥವಾ ದೈಹಿಕ ಹಾನಿ ಸಂಭವಿಸಿದಾಗ ನೀಡಬೇಕಾದ ಪರಿಹಾರವು, ಬಲಿವ್ಯಕ್ತಿಯ ಪ್ರಾಯ ಆಧರಿಸಿ ಹೆಚ್ಚುಕಡಿಮೆ ಆಗಬೇಕೆಂಬುದು ತಾರ್ಕಿಕ. ಯಾಕೆಂದರೆ, ಸರಾಸರಿ ಆಯುಷ್ಯ ಆಧರಿಸಿ, ಬಲಿವ್ಯಕ್ತಿ ಬದುಕಿರಬಹುದಾಗಿದ್ದ ಹಾಗೂ ದುಡಿಯಬಹುದಾಗಿದ್ದ ವರುಷಗಳು ಎಷ್ಟೆಂದು ಲೆಕ್ಕ ಹಾಕಿ, ಆ ಪ್ರಕಾರ ಪರಿಹಾರದ ಮೊತ್ತ ನಿರ್ಧರಿಸುವುದು ಸರಿಯಾದ ಕ್ರಮ.

ಗುಣಾಂಶ "ಎಫ್" ಔಷಧಿ ಪ್ರಯೋಗದಲ್ಲಿ ಭಾಗವಹಿಸಿ ವ್ಯಕ್ತಿ ರೋಗಪೀಡಿತನೇ ಎಂಬುದನ್ನು ಆಧರಿಸಿದೆ. ಭಾಗವಹಿಸಿದ ವ್ಯಕ್ತಿಗೆ ಮರಣಾಂತಿಕ ರೋಗವಿದ್ದರೆ, ಆತ ಮೃತನಾದರೆ ನೀಡಲಾಗುವ ಪರಿಹಾರ ಶೇಕಡಾ ೫೦ ಮಾತ್ರ. ಔಷಧಿ ಪ್ರಯೋಗಗಳನ್ನು ಆರೋಗ್ಯವಂತ ವ್ಯಕ್ತಿಗಳು ಮತ್ತು ರೋಗಪೀಡಿತ ವ್ಯಕ್ತಿಗಳು - ಇಬ್ಬರ ಮೇಲೆಯೂ ನಡೆಸುವುದು ಅಗತ್ಯ. ಹಾಗಿರುವಾಗ, ರೋಗಪೀಡಿತ ವ್ಯಕ್ತಿಗಳ ಪರಿಹಾರವನ್ನು ಕಡಿಮೆ ಮಾಡುವುದು ಅನ್ಯಾಯ. ಬಲಿವ್ಯಕ್ತಿಗಿದ್ದ ರೋಗದಿಂದಾಗಿ ಅಲ್ಲ, ಬದಲಾಗಿ ಪ್ರಯೋಗದಲ್ಲಿ ನೀಡಲಾಗಿದ್ದ ಔಷಧಿಯಿಂದಾಗಿಯೇ ವ್ಯಕ್ತಿ ಸತ್ತು ಹೋದರೆ? ಎಂಬ ಪ್ರಶ್ನೆಯನ್ನು ಈ ಬಗ್ಗೆ ಎತ್ತಿದ್ದಾರೆ "ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್" ಎಂಬ ವೈಜ್ನಾನಿಕ ನಿಯತಕಾಲಿಕದ ಸ್ಥಾಪಕರಾದ ಅಮರ್ ಜೆಸಾನಿ.

ಅದಲ್ಲದೆ, ಗುಣಾಂಶ "ಎಫ್" ಮೌಲ್ಯ ನಿರ್ಧರಿಸುವ ಜವಾಬ್ದಾರಿಯನ್ನು ಔಷಧಿ ಪ್ರಯೋಗ ಜರಗಿಸುವ ಪ್ರಧಾನ ತನಿಖಾಧಿಕಾರಿಗೆ ನೀಡಲಾಗಿದೆ. ಔಷಧಿ ಉತ್ಪಾದಕ ಕಂಪೆನಿಗಳ ಕಣ್ಗಾವಲಿನಲ್ಲಿ ಕೆಲಸ ಮಾಡುವ ಈ ಪ್ರಧಾನ ತನಿಖಾಧಿಕಾರಿಗಳು, ಬಲಿವ್ಯಕ್ತಿಗಳಿಗೆ ಪಾವತಿಸಬೇಕಾದ ಪರಿಹಾರವನ್ನು ಕನಿಷ್ಠ ಮಾಡಲಿಕ್ಕಾಗಿ "ಎಫ್" ಗುಣಾಂಶವನ್ನು ತಗ್ಗಿಸಬಹುದು.

ಗುಣಾಂಶ "ಡಿ" ಪ್ರಕಾರ, ಔಷಧಿ ಪ್ರಯೋಗದಲ್ಲಿ ಭಾಗವಹಿಸಿದ ವ್ಯಕ್ತಿಗೆ ದೈಹಿಕ ಹಾನಿ ಉಂಟಾದರೆ ಪಾವತಿಸಬೇಕಾದ ಪರಿಹಾರ ಇನ್ನಷ್ಟು ಕಡಿಮೆಯಾಗುತ್ತದೆ. ಎಷ್ಟು ಶೇಕಡಾ ಅಂಗವೈಕಲ್ಯ ಎಂಬುದರ ನಿರ್ಧಾರವೂ ಕೆಲಸಗಾರರ ಪರಿಹಾರ ಕಾಯಿದೆ, ೧೯೨೩ ಅನುಸಾರ. ಇದೂ ಸರಿಯಲ್ಲ. ಯಾಕೆಂದರೆ, ಒಂದು ಉದ್ಯೋಗದಲ್ಲಿ ನಡೆದ ಅಪಘಾತದಿಂದಾದ ಅಂಗವೈಕಲ್ಯವನ್ನು ಔಷಧಿ ಪ್ರಯೋಗದಿಂದಾದ ಅಂಗವೈಕಲ್ಯದ ಜೊತೆ ಸಮೀಕರೀಸುವುದು ಅನ್ಯಾಯ.

ತೋಳ ಕುರಿ ಕಾಯುವಂತೆ ....: ಅಂತಿಮ ಪರಿಹಾರ ಮೊತ್ತವನ್ನು ನಿರ್ಧರಿಸುವ ಅಧಿಕಾರವನ್ನು "ನೀತಿ ಸಮಿತಿ" (ಎಥಿಕ್ಸ್ ಕಮಿಟಿ)ಗೆ ನೀಡಲಾಗಿದೆ. ಈ ಸಮಿತಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವ ಬಗ್ಗೆ ಹಲವು ಆಪಾದನೆಗಳಿವೆ. ನೀತಿ ಸಮಿತಿಯ ಸದಸ್ಯರು ಬೇರೆ ಔಷಧಿ ಪ್ರಯೋಗಗಳಲ್ಲಿ ತನಿಖಾಧಿಕಾರಿಗಳು ಆಗಿರುತ್ತಾರೆ; ಈ ಕಾರಣದಿಂದಾಗಿ, ಅವರು ಔಷಧಿ ಉತ್ಪಾದಕ ಕಂಪೆನಿಗಳನ್ನು ರಕ್ಷಿಸಲು ಮುಂದಾಗಬಹುದು.

ಇವೆಲ್ಲ ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯು, ಔಷಧಿ ಪ್ರಯೋಗಗಳ ಬಲಿವ್ಯಕ್ತಿಗಳಿಗೆ ಪರಿಹಾರ ಪಾವತಿಸಲು ರೂಪಿಸುರುವ ಸೂತ್ರದ ಪ್ರಧಾನ ಅಂಶಗಳು. ಒಟ್ಟಾರೆಯಾಗಿ, ಇವೆಲ್ಲವೂ ಬಲಿವ್ಯಕ್ತಿಗಳಿಗಿಂತ ಜಾಸ್ತಿಯಾಗಿ ಔಷಧಿ ಉತ್ಪಾದಕ ಕಂಪೆನಿಗಳಿಗೆ ಅನುಕೂಲ ಆಗಿರುವಂತೆ ಕಾಣುತ್ತಿದೆ.

ಭಾರತದಲ್ಲಿ ೨೦೦೭ರಂದ ಜೂನ್ ೨೦೧೨ ತನಕ ಔಷಧಿ ಪ್ರಯೋಗಗಳಲ್ಲಿ ಜೀವ ಕಳೆದುಕೊಂಡ ಬಲಿವ್ಯಕ್ತಿಗಳ ಸಂಖ್ಯೆ ೨,೩೭೦. ಇವರಲ್ಲಿ ಕೇವಲ ೩೭ ಬಲಿವ್ಯಕ್ತಿಗಳ ವಾರೀಸುದಾರರಿಗೆ ಪರಿಹಾರ ಪಾವತಿಸಲಾಗಿದೆ. ಆ ಪರಿಹಾರ ಮೊತ್ತದ ಸರಾಸರಿ ರೂ.೨.೨೧ ಲಕ್ಢ! ಯಾವುದೇ ಹೊಸ ಔಷಧಿ ಪರಿಣಾಮಕಾರಿಯಾದರೆ, ಔಷಧಿ ಉತ್ಪಾದಕ ಕಂಪೆನಿಗಳು ಗಳಿಸುವ ಕೋಟಿಗಟ್ಟಲೆ ರೂಪಾಯಿ ಲಾಭಕ್ಕೆ ಹೋಲಿಸಿದಾಗ ಇದು ಕಿಂಚಿತ್ ಹಣ.

ಔಷಧಿ ಪ್ರಯೋಗಗಳಲ್ಲಿ ಸತ್ತವರ ಸಂಖ್ಯೆ ೨೦೧೦ರಲ್ಲಿ ೬೬೮ ಮತ್ತು ೨೦೧೧ರಲ್ಲಿ ೪೩೮. ಆದರೆ ಆ ೬೬೮ ಸಾವುಗಳಲ್ಲಿ ಕೇವಲ ೨೨ ಬಲಿವ್ಯಕ್ತಿಗಳ ಸಾವಿಗೆ ಔಷಧಿ ಪ್ರಯೋಗಗಳು ಕಾರಣ ಎಂದು ನಿರ್ಧರಿಸಲಾಯಿತು. ಯಾಕೆಂದರೆ, ಬಲಿವ್ಯಕ್ತಿಗಳ ಸಾವಿಗೆ  "ಅವರಿಗಿದ್ದ ರೋಗಗಳು ಕ್ರಮೇಣ ಉಲ್ಬಣಿಸಿದ್ದೇ ಕಾರಣ ವಿನಃ ಪ್ರಯೋಗಕ್ಕಾಗಿ ನೀಡಿದ ಔಷಧಿ ಅಲ್ಲ" ಎಂದು ಔಷಧಿ ಉತ್ಪಾದಕ ಕಂಪೆನಿಗಳು ವಾದಿಸಿ, ಬಲಿವ್ಯಕ್ತಿಗಳ ವಾರೀಸುದಾರರಿಗೆ ಪರಿಹಾರ ಪಾವತಿಸಬೇಕಾದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತವೆ.

ಭಾರತವು ಜಾಗತಿಕ ಮಟ್ಟದಲ್ಲಿ ಮನುಷ್ಯರ ಮೇಲೆ ಔಷಧಿಗಳ ಬಹುದೊಡ್ಡ ಪ್ರಯೋಗಶಾಲೆಯಾಗಿ ಬೆಳೆಯುತ್ತಿದೆ. ಇಂತಹ ಔಷಧಿ ಪ್ರಯೋಗಗಳನ್ನು ನಡೆಸುವ ವಹಿವಾಟು ೩೦೦ ಮಿಲಿಯ ಡಾಲರುಗಳು. ಈ ವಹಿವಾಟಿನ ವಾರ್ಷಿಕ ಬೆಳವಣಿಗೆಯ ದರ ಶೇಕಡಾ ೩೦. ಆದ್ದರಿಂದ, ಬಲಿವ್ಯಕ್ತಿಗಳಿಗೆ ಪಾವತಿಸಬೇಕಾದ ಪರಿಹಾರದ ಮೊತ್ತ ನಿರ್ಧರಿಸುವ ಸೂತ್ರವನ್ನು ಹಾಗೂ ಮಾರ್ಗದರ್ಶಿ ನಿಯಮಗಳನ್ನು ಬದಲಾಯಿಸಲೇ ಬೇಕಾಗಿದೆ.

Comments

Submitted by makara Thu, 05/02/2013 - 07:09

ಛೇ! ಮನುಷ್ಯನೂ ಗಿನಿ-ಪಿಗ್ ಆಗಿ ಹೋಗಿದ್ದಾನೆ. ಈ ರೀತಿ ಮಾನವರ ಮೇಲೆ ಅಥವಾ ಇತರ ಪ್ರಾಣಿಗಳ ಮೇಲೆ ಪ್ರಯೋಗ ಮಾಡದೇ ಬೇರೆ ವಿಧಾನದಿಂದ ಔಷಧಿಗಳನ್ನು ತಯಾರಿಸಿದರೆ ಉತ್ತಮ; ಅದರತ್ತ ವಿಜ್ಞಾನಿಗಳ ದೃಷ್ಟಿ ಹರಿದರೆ ಒಳಿತೆನಿಸುತ್ತದೆ. ನಾವೂ ಸಹ ಈ ರೀತಿ ಪ್ರಯೋಗದಿಂದ ಕಂಡುಕೊಂಡ ಔಷಧಿಗಳನ್ನು ಉಪಯೋಗಿಸುವುದಕ್ಕಿಂತ ಪರ್ಯಾಯ ಔಷಧಿಗಳನ್ನು ಬಳಸುವುದು ಉಚಿತವೆನಿಸುತ್ತದೆ. ಇಂತಹ ವಿಷಯದ ಬಗ್ಗೆ ನಮ್ಮೆಲ್ಲರ ದೃಷ್ಟಿ ಹರಿಯುವಂತೆ ಮತ್ತು ಆಲೋಚಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು ಕೃಷ್ಣ ಸರ್.