ಗುಪ್ತ ಗಾಮಿನಿ ( ಕವನ )

Submitted by H A Patil on Mon, 04/29/2013 - 18:43

ತುಂಬು ನೀರಿನ ಕೊಳಕೆ
ತೂತು ಬಿದ್ದಿದೆ
ತಡೆಯ ಕಳಚಿದ ಗಂಗೆ
ಹರಿದಳು
ಅತಳ ವಿತಳ ಪಾತಾಳ
ರಸಾತಳದ ಆಚೆ ಈಚೆ


ಆಳ ಅಗಲ ಉದ್ದ ವಿಸ್ತಾರಗಳ
ಅಳತೆಗೆ ಸಿಕ್ಕದ
ಯಾರಿಗೂ ಸಂಪೂರ್ಣ ದಕ್ಕದ
'ಮೃಗನಯನೆ'
ಹರಿಯುತ್ತ ಬಂದಿದ್ದಾಳೆ
ಅನಾದಿ ಕಾಲದಿಂದ


ದಾಹವಿದ್ದರೆ ಮನಸಿದ್ದರೆ
ಬೊಗಸೆಗೆ ದಕ್ಕುತ್ತಾಳೆ
ಅಮೃತ ಸಿಂಚನ ವೀಯುತ್ತಾಳೆ
ಇಂಗದ ದಾಹವನು
ಹಿಂಗಿಸಿ ತಣಿಸುತ್ತಾಳೆ


ಪಾರ್ಥನ ಶರ ನಮನಕೆ
ಕೋರಿಕೆಗೆ ಕರಗಿದ 'ಗಂಗೆ '
ಸ್ಥಳದಲೆ ಉದ್ಭವಿಸಿ ತಣಿಸಿದ್ದಾಳೆ
ಶರಶಯ್ಯೆಯ ಮೇಲೆ ಮಲಗಿದ
ಕುರು ಕುಲೋತ್ತಮ
ವೃದ್ಧ ಪಿತಾಮಹ ಇಚ್ಛಾಮರಣಿ
ಭೀಷ್ಮನ ದಾಹ


ದಧೀಚಿಯ ತಪಸ್ಸಿಗೆ
ಸದಾಚಾರದ ನಿಲುವಿಗೆ
ಮೆಚ್ಚಿದ ಗಂಗೆ ಹರಿದು ಬಂದಳು
ಹಿಮಾಲಯದುತ್ತುಂಗದಿಂದ
ಸ್ವರ್ಗವನು ದಯಪಾಲಿಸಿದಳು
ದಧೀಚಿಯ ಪಿತಾಮಹ
ಪ್ರಪಿತಾಮಹರಿಗೆ


'ಗುಪ್ತಗಾಮಿನಿ ಗಂಗೆ'
ಕೋರಿಕೆಗೆ ಕರಗಿದ್ದಾಳೆ
ತಪಕೆ ಮೆಚ್ಚಿದ್ದಾಳೆ ಮದಾಂಧರ
ಆಪೋಶನ ಪಡೆದಿದ್ದಾಳೆ
ಆಕೆ ಹೂವಂತೆ ಮೃದುವಾದರೂ
ವಜ್ರದಂತೆ ಕಠಿಣ ಕೂಡ


ಹಮ್ಮಿನಲಿ ಬೀಗಿ ಬಿಲ್ಲಂತೆ ಬಾಗಿ
ಶರದಂತೆ ನುಗ್ಗಿ
ಸೋನೆಯಾಗಿ ಸುರಿದು
ಬಿರುಗಾಳಿಯಂತೆ ಬೀಸಿದ್ದಾಳೆ
ಜಡಿಮಳೆಯಾಗಿ ಜಡಿದಿದ್ದಾಳೆವಿಸ್ತಾರಕೆ ವ್ಯಾಪಿಸಿದ್ದಾಳೆ
ಕಲಕಲ ನಿನಾದ ಮಾಡುತ
ಹರಿದಿದ್ದಾಳೆ
ಜಿಂಕೆಯಂತೆ ಓಡಿದ್ದಾಳೆ
ಅಂತರ್ಗತವಾಗಿ ಇಂಗಿ
ಅವ್ಯಕ್ತಳಾಗಿದ್ದಾಳೆ 'ಗಂಗೆ'
ಗಗನ ಭೂಮಿ ಒಡಲಾಳ
ಅಲ್ಲಿ ಇಲ್ಲಿ ಎಲ್ಲ ಕಡೆಗೂ


          *


 

Rating
No votes yet

Comments

lpitnal@gmail.com

Mon, 04/29/2013 - 20:14

ಹಿರಿಯರಾದ ಹೆಚ್ ಎ ಪಾಟೀಲರವರಿಗೆ ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕವನ ಪುರಾಣ, ಕಾವ್ಯಗಳ ಸಂದರ್ಭಗಳನ್ನು ಸಂದರ್ಭೋಚಿತವಾಗಿ ಬಳಸಿ, ಮೆರುಗು ನೀಡುತ್ತ, ಸಾಗುವ ಪರಿ ಗಂಗೆಯ ಧಾರೆಯಂತೆಯೇ ಅವಿಚ್ಛನ್ನವಾಗಿ ಹರಿದಿದೆ.. ಗಂಗೆಯ ಧಾರೆ ಚಿಮ್ಮುವ, ತೊನೆಯುವ, ತಿರುಗುವ, ತೂರುವ, ತೂಗುವ, ತೆರೆತೆರೆಯಾಗುವ ಸಮ್ಮೋಹಿನಿ ದೃಶ್ಯವೈಭವಗಳನ್ನೇ ಕವನದಲ್ಲಿ ಹಿಡಿದಿಡುತ್ತ, ಅದಕೊಂದು ಕಾವ್ಯ ಲಕ್ಷಣ ಪ್ರಮಾಣೀಕರಿಸಿದ್ದೀರಿ, ತಮ್ಮ ಭಾರತೀಯ ಕಾವ್ಯಗಳ ಪರಿಜ್ಞಾನವನ್ನು ಸಿಹಿ ಸರೋವರದಿಂದ ಅಮೃತದಂತೆ ಸಂಚಯಿಸಿ, ಮೂಡಿಸಿದ ಸುಂದರ ಕವನ 'ಗುಪ್ತ ಗಾಮಿನಿ' ಮನನೀಯ ಕವನ ನೀಡಿದ್ದಕ್ಕೆ ಅಭಿನಂದನೆಗಳು,

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ಈ ಕವನಕ್ಕೆ ತಾವು ಬರೆದ ಕಾವ್ಯಾತ್ಮಕ ಪ್ರತಿಕ್ರಿಯೆ ಓದಿದೆ, ತಮ್ಮಂತಹ ಸಂಪದಿಗರ ವಿಮರ್ಶಾತ್ಮಕ ವಿಮರ್ಶೆ ನಮಗೆ ಪ್ರೇರಣೆ, ಕವನದ ನಾಡಿ ಮಿಡಿತವನ್ನು ಚೆನ್ನಾಗಿ ಗ್ರಹಿಸಿ ಪ್ರತಿಕ್ರಿಯಿಸಿದ್ದೀರಿ, ತಮ್ಮ ಮೆಚ್ಚುಗೆಗಳು ನನ್ನಲ್ಲಿ ಸಂಕೋಚವನ್ನು ಉಂಟು ಮಾಡುತ್ತದೆ ಆದರೂ ಬರೆಯುವ ಉತ್ಸಾಹವನ್ನು ಇಮ್ಮಡಿ ಗೊಳಿಸಿದೆ ಎಂದು ಹೇಳಬಲ್ಲೆ, ಧನ್ಯವಾದಗಳು.

nageshamysore

Tue, 04/30/2013 - 04:10

ಪಾಟೀಲರಿಗೆ ನಮಸ್ಕಾರ,
ಗಂಗಾ ವೈಭವದೊಂದಿಗೆ ಅಂತರಗಂಗೆಯ ಒಳದರ್ಶನವೆ ಆದಂತಾಯ್ತು, ಧನ್ಯವಾದಗಳು.
- ನಾಗೇಶ ಮೈಸೂರು, ಸಿಂಗಾಪುರದಿಂದ