ಚೈನಾದ ಗೋಡೆ ಅಂಥಾ ಉದ್ದವೇನೂ ಇಲ್ಲ ಚಿನ್ನ!

Submitted by bhalle on Tue, 04/30/2013 - 04:46

 

 

ಚೈನಾದ ಗೋಡೆ ಅಂಥಾ ಉದ್ದವೇನೂ ಇಲ್ಲ ಚಿನ್ನ
ನಿನ್ನ ಕಪ್ಪು ಉದ್ದ ಜಡೆ ಮುಂದೆ ಅದು ತುಂಬಾ ಮೋಟ ರನ್ನ
 
ತಾಜ ಮಹಲಿನ ಒನಪು ಅಂಥದ್ದೇನೂ ತಾಜ ಅಲ್ಲ ಚಿನ್ನ
ಬಳುಕುವ ನಿನ್ನ ಮೈ ಥಳುಕಿನ ಮುಂದೆ ಮರ್ಬಲ್ಲು ಬರೀ ಕಲ್ಲು ರನ್ನ
 
ಪಿಸಾ ಟವರಿನ ಸೊಟ್ಟಗಿನ ಮೈ ಅಂಥಾ ಬೆರಗೇನಲ್ಲ ಚಿನ್ನ
ಬಾಗಿಲಿಗೆ ಆತುಕೊಂಡು ನಿಲ್ವ ನಿನ್ ಮುಂದೆ ಪಿಸಾ ಬರೀ ಮೋಸ ರನ್ನ
 
ರೋಮ್ ನಗರದ ಕೊಲಿಸಿಯಮ್ ಬಿರುಕ ಗೋಡೆ ಅದೇನು ಸೊಗಸೋ ನಾ ಕಾಣೆ ಚಿನ್ನ
ನಿನ್ ಕೆಂದುಟಿ ಬಿರುಕ ಮಧ್ಯೆ ಚೆಲ್ವ ಹೂ ನಗೆ ಕಂಡು ರೋಮಕ್ಕೆ ಬಿತ್ತು ವಿರಾಮ ರನ್ನ
 
ಹಗಿಯಾ ಸೋಫಿಯದ ದುಂಡನೆ ಡೂಮ್ ಅಂತೆ ಅದರ ಚಿತ್ತಾರವೇನೋ ಅದ್ಬುತವಂತೆ ಚಿನ್ನ
ಎಣ್ಣೆ ಸ್ನಾನ ಮಾಡಿ ಬಟ್ಟೆ ಕಟ್ಟಿದ್ ನಿನ್ ತುರುಬಿನ ಮುಂದೆ ಆ ಡೂಮ್’ನ ನೀವಾಳ್ಸಿ ಒಗೀಬೇಕು ರನ್ನ
 
ಗೀಝಾದ ಪಿರಮಿಡ್ಡು ಜಗತ್ತಿನ ಅತಿ ಪುರಾತನ ಅದ್ಬುತವಂತೆ ಚಿನ್ನ
ನಿನ್ನೀ ಸೌಂದರ್ಯ ಕಂಡು ಇದ್ ಬದ್ ಸುಂದರೀರೆಲ್ಲ ಪುರಾತನ ಆಗ್ಯಾರಲ್ವೇನೇ ರನ್ನ
 
ಮೊನ್ನೆ ನಾ ಊರಿಗೆ ಹೋಗಿದ್ದಾಗ ಯಾವ್ದೋ ಹುಡುಗಿ ಜೊತೆ ಯಾರೋ ನನ್ ಫೋಟೋ ತೆಗೆದುಬಿಟ್ರು ಚಿನ್ನ
ನಿನ್ ಜಿಂಕೆ ಕಣ್ಣಿಗೆ ಆ ಪಟ ಬಿದ್ರೆ, ಎಳೆ ಚಿಗುರಿನ ನಿನ್ ಬೆರಳ್ನಾಗೆ, ಪರಪರ ಹರಿದುಬಿಡೆ ರನ್ನ ... ಪ್ಲೀಸ್