ಸೃಷ್ಟಿ ರಹಸ್ಯ..! (ಈ ಅಂಡ ಪಿಂಡ ಬ್ರಹ್ಮಾಂಡದ ಸಶೇಷ ಭಾಗ - ನಾಗೇಶ ಮೈಸೂರು )
ಸೃಷ್ಟಿ ರಹಸ್ಯ..! ಅಂಡ ಪಿಂಡ ಬ್ರಹ್ಮಾಂಡದ ವ್ಯಾಪ್ತಿಯಿಂದ ಕೊರೆದಿಟ್ಟ ಬೀಜಾಕ್ಷರ ಸಂಕೇತ ಬೀಜಾಂಡ ಮಿಳಿತವಾಗಿ ದೇಹದೊಳಹೊಕ್ಕು ಗರ್ಭಾಧಿಕಾರ ಪಡೆದ ಗಳಿಗೆಯ ಹಾಗೂ ನಂತರದ ನವಮಾಸದ ಭೌತಿಕ ಚಟುವಟಿಕೆಗಳತಿಶಯದ ಅಂತರಾಳ ಬಿಚ್ಚಿಡುವ ಯತ್ನ 'ಸೃಷ್ಟಿಯ ರಹಸ್ಯ' ಕಾವ್ಯದ ಆಶಯ. ಹಾಗೆಯೆ ಜನ್ಮ ತಳೆದ ನವಜಾತ ಶಿಶು ಜೀವನ ಚಕ್ರ ಪರಿಕ್ರಮಣದ ಗಾಲಿ ಹೊತ್ತು ಎಲ್ಲರಂತೆ ಬಾಲ್ಯ, ಯೌವ್ವನ, ಪ್ರಾಯ, ವೃದ್ದಾಪ್ಯಗಳನ್ನು ಅಪ್ಪುತ್ತ ಆ ಚಕ್ರ ನಿರಂತರವಾಗಿರುವಂತೆ ನೋಡಿಕೊಳ್ಳುವ ಕರ್ಮಬಂಧವೂ ಇಲ್ಲಿ ಅಂತರ್ಗತ. ಅ ಪುನಾರವರ್ತನೆಯ ಚಕ್ರದಲ್ಲಿಯೆ ಬ್ರಹ್ಮ್ಮಂಡದ ಸೃಷ್ಟಿ ರಹಸ್ಯದ ಕೀಲಿ ಕೈ ಅಡಗಿರಬಹುದೆಂಬ ಕುತೂಹಲ / ಪ್ರಶ್ನೆಯಲ್ಲಿ, ಈ ನೈಸರ್ಗಿಕ ಪ್ರಕ್ರಿಯೆಯನ್ನು ಭೌತಿಕ ನೆಲೆಯಿಂದ ತಾತ್ವಿಕ ನೆಲೆಗಟ್ಟಿಗೊಯ್ದು ನಿಲ್ಲಿಸುವ ಹವಣಿಕೆ. ಆ ದೃಷ್ಟಿ ಕೋನದಿಂದ, ಒಂದು ವಿಧದಲ್ಲಿ ಈ ಕವನ 'ಅಂಡ ಪಿಂಡ ಬ್ರಹ್ಮಾಂಡ'ಕ್ಕೆ ಪೂರಕವಾಗಿಯು ಅಥವ ವಿವರ ವಿಷದಿಕರಣದ ಅಂಗವಾಗಿಯು ನೋಡಬಹುದು.
ಆದರೂ ಅಗೋಚರ ಈ ದೇಹ
ಜೀವಗಳ ಕೊಡು ಕೊಳ್ಳು ವ್ಯಾಪಾರ
ಕೋಟ್ಯಾಂತರ ಬೀಜಗಳ ನಡುವೆ
ಒಂದಕಷ್ಟೇ ಕೀಲಿಯ ಅಧಿಕಾರ
ಜಯಿಸಿ ಅಂಡಂತರ ಕದನ ಈಜಿ
ಒಳಗೆ ಅಂಡಾಶಯದಂತರಂಗ
ಹೊಕ್ಕರೆ ಮಧುರ ಮಿಲನ
ಪಿಂಡಾಂಕುರ ಜೀವ ಸಂಚಲನ ಪ್ರಸಂಗ!
ಅಲ್ಲಿಂದ ಆರಂಭ ಸೃಷ್ಟಿಯ ಪಯಣ
ನವ ಮಾಸದ ದಿವ್ಯಗಾನ
ಹಂತ ಹಂತದಲಿ ಸಂಕೇತಾಕ್ಷರ
ಅನಾವರಣ, ಜೀವಕಣ ಮನನ
ಬಲಿತಂತೆ ಬಯಕೆ ಬಲಿತರೆ
ಭ್ರೂಣಹತ್ಯ ಕಾರ್ಯಕಾರಣ ಗೌಣ
ವಿಸ್ಮಯ ವಿಸ್ಮಯದೋಳ್ವಿಸ್ಮಯ
ನವ ಜೀವನ ಜನನ ಆಕ್ರಂದನ!
ನವಜೀವನ ಚೇತನ ಪುನರಾರಂಭ
ಪರಿಭ್ರಮಣ ಸೃಷ್ಟಿ ಆವರ್ತನ
ಶೈಶವಾಸ್ತೆ,ಬಾಲ್ಯ,ಯೌವನ
ಪ್ರಾಯ,ವೃದ್ದಾಪ್ಯ ಸಹಿ ಅನುವರ್ತನ
ಲೌಕಿಕ, ಐಹಿಕ, ಪ್ರಾಪಂಚಿಕ
ಸುಖದುಃಖಗಳ ಸುತ್ತಿಟ್ಟ ಬುದ್ಧಿ ನಮನ
ಜೀವ ಸಮಷ್ಟಿಗರಿಯದಂತೆ ಮಾಡಿರುವ
ಜೀವ ಜಾಲ ಸಮತೋಲನ!
ಜೀವ ಸೃಷ್ಟಿಯೊಳಗಡಗಿದೆಯೇ
ಬ್ರಹ್ಮಾಂಡಸೃಷ್ಟಿ ರಹಸ್ಯ ಬೀಜ
ಒಡೆದಾದರೆ ಜೀವ ರಹಸ್ಯ
ದೊರೆವುದೇ ಕೀಲಿ ವಿಶ್ವ ನಿಜ ಖನಿಜ
ಮನುಕುಲ ತಾನಾಗೆ ಬ್ರಹ್ಮ
ಸರಿ ನಡೆವುದೇ ಸೃಷ್ಟಿ, ಸ್ಥಿತಿ, ಲಯ
ಕರಗತ ಸೂತ್ರ ಕಣ್ಗಾವಲಲಿಡೆ
ದೈವತ್ವಕೇರ್ವುದೇ ತಪ್ಪಿ ಪ್ರಳಯ!
- ನಾಗೇಶ ಮೈಸೂರು, ಸಿಂಗಾಪುರದಿಂದ
ಅಂಡ ಪಿಂಡ ಬ್ರಹ್ಮಾಂಡದ ಲಿಂಕು:
Rating
Comments
ನಾಗೇಶ್ ಅವರೆ,
ನಾಗೇಶ್ ಅವರೆ,
ನಿಮ್ಮ ಈ ಶೇಷ ಭಾಗವೂ ಚೆನ್ನಾಗಿ ಮೂಡಿ ಬಂದಿದೆ. ನೀವು ಬಯೋಟೆಕ್ನಾಲಜಿಯಲ್ಲಿ ಡಾಕ್ಟರೇಟ್ ಮಾಡಿರಬೇಕು; ಇಲ್ಲದಿದ್ದರೆ ಇಷ್ಟೊಂದು ಆಳವಾಗಿ ಮತ್ತು ವಿಸ್ತಾರವಾಗಿ ಜೆನೆಟಿಕ್ ಕೋಡನ್ನು ಅಭ್ಯಸಿಸಿದ್ದಲ್ಲದೇ ಜೀವ ಸೃಷ್ಟಿಯ ಬಗೆಗೆ ಇಂತಹ ಉತ್ತಮ ಹಾಗೂ ಸುಂದರ ಕವನ ಬರೆಯಲು ಸಾಧ್ಯವಿಲ್ಲ. ಏನೇ ಆಗಲಿ ಎರಡನೇ ಕಂತೂ ಸಹ ಚೆನ್ನಾಗಿ ಮೂಡಿ ಬಂದಿದೆ.
In reply to ನಾಗೇಶ್ ಅವರೆ, by makara
ನಮಸ್ಕಾರ ಮತ್ತು ಧನ್ಯವಾದಗಳು
ನಮಸ್ಕಾರ ಮತ್ತು ಧನ್ಯವಾದಗಳು ಶ್ರೀಧರ (ಮಕರ) ರವರೆ, ಅಯ್ಯೊ..! ತುಂಬಾ ದೊಡ್ಡ ಮಾತು..! ಡಾಕ್ಟರಗಿರಿ ಬಿಡಿ ಬಯೊ ಟೆಕ್ನಾಲಜಿಯ ಗಂಧವೂ ಇಲ್ಲದವ..ವಿಧ್ಯಾಭ್ಯಾಸದಿಂದ ಮೆಕ್ಯಾನಿಕಲ್ ಇಂಜಿನಿಯರು, ವೃತ್ತಿಯಿಂದ ಐಟಿ, ಪ್ರವೃತ್ತಿಯಾಗಿ ಒಂದೆರಡು ಕವನ, ಲೇಖನ - ಅದು ಪುಣ್ಯವಶಾತ್ ಸಂಪದ ತರದ ವೇದಿಕೆ ಇರೋದ್ರಿಂದ. ವಿಜ್ಞಾನದ ಕುರಿತು ಸರಳವಾಗಿ ಬರೆಯೊಕೆ ಸಾಧ್ಯಾನಾ ಅನ್ನೊ ಜಿಜ್ಞಾಸೆ ಸದಾ ಕಾಡುತ್ತಿರುತ್ತೆ - ಅಂಥಹ ಒಂದು ಪ್ರಯತ್ನ ಇದಷ್ಟೆ. ಇದಕ್ಕೂ ವಸ್ತು ವಿವರ ಎಲ್ಲಿದೂ ಅಂತೀರಾ? ಒಂದು - ಸುಮಾರು 20 ವರ್ಷಗಳ ಹಿಂದೆ ಪೀಯೂಸಿ ವಿದ್ಯಾರ್ಥಿಯೊಬ್ಬರಿಗೆ ಪಾಠ ಹೇಳಿಕೊಟ್ಟಾಗಿನ ಅಳಿದುಳಿದ ನೆನಪು (ಡಿ.ಏನ್.ಎ, ವ್ಯಾಟ್- ಕ್ರೀಕ್ಸ್ ಮಾಡೆಲ್ ಇತ್ಯಾದಿ), ಮಿಕ್ಕಿದ್ದೆಲ್ಲ ನನ್ನ ಆರನೆ ಪ್ರೈಮರಿ ಮಗನಿಗೆ ಸಿಂಗಾಪುರದಲ್ಲಿ ವಿಜ್ಞಾನದ ಪಾಠ ಹೇಳಿಕೊಡುತ್ತ ಕಲಿತ ಸರಳ ಮೂಲ ಸಿದ್ದಾಂತಗಳ ಪುನರಾವರ್ತನೆ. ಎರಡರ ಜತೆ ಕನ್ನಡದಲ್ಲಿ ವಿಜ್ಞಾನದ ವಸ್ತು ಬರೆವ ಹಂಬಲ ಸೇರಿ ಬಂದದ್ದು "ಅಂಡ ಪಿಂಡ ಬ್ರಹ್ಮಾಂಡ". ಮೂಲ ಆವೃತ್ತಿಯಲ್ಲಿ ಎರಡು ಒಂದೆ ಪದ್ಯವಾಗಿತ್ತು. ಉದ್ದ ಮತ್ತು ವಸ್ತು ವಿಂಗಡನೆಯ ಸಲುವಾಗಿ ಎರಡಾಯ್ತು. ಅದು ಬಿಟ್ಟರೆ ನಾನೊಬ್ಬ ಸಾಮಾನ್ಯ, ಸಾಧಾರಣ ಕನ್ನಡಿಗ :-) ತಮ್ಮ ಪ್ರತಿಕ್ರಿಯೆ ಮತ್ತು ಅಷ್ಟು ಸರಿಯಾಗಿ ಗ್ರಹಿಸಿದ ಸಾಮರ್ಥ್ಯ ನನಗೆ ತುಂಬಾ ಸಂತಸ ತಂದಿದೆ, ಏಕೆಂದರೆ ಈ ತರದ ವಸ್ತು ಸರಳವಿದ್ದರೂ ಸುಲಭದಲ್ಲಿ ಗ್ರಹಿಸಲು ಸಾಧ್ಯವೆ ಎಂದು ನನಗೇ ಅನುಮಾನವಿತ್ತು!
-ನಾಗೇಶ ಮೈಸೂರು ಸಿಂಗಾಪುರದಿಂದ
In reply to ನಮಸ್ಕಾರ ಮತ್ತು ಧನ್ಯವಾದಗಳು by nageshamysore
ಡಾಕ್ಟರೇಟ್ ಮಾಡದೇ ಇಷ್ಟು
ಡಾಕ್ಟರೇಟ್ ಮಾಡದೇ ಇಷ್ಟು ಚೆನ್ನಾಗಿ ಬರೆದಿದ್ದೀರೆಂದ ಮೇಲೆ ಇನ್ನು ಡಾಕ್ಟರೇಟ್ ಮಾಡಿದ್ದರೆ?! ಇದಕ್ಕಾಗಿಯಾದರೂ ನಿಮ್ಮನ್ನು ಅಭಿನಂದಿಸಲೇ ಬೇಕು, ನಾಗೇಶರೆ.
In reply to ಡಾಕ್ಟರೇಟ್ ಮಾಡದೇ ಇಷ್ಟು by makara
ನಮಸ್ಕಾರ ಶ್ರೀಧರರವರೆ, ನನಗೀಗ
ನಮಸ್ಕಾರ ಶ್ರೀಧರರವರೆ, ನನಗೀಗ ನಿಮ್ಮ ಮಾತೆ ನಿಮ್ಮ ಮೂಲಕ ನಿಮ್ಮ ಶ್ರೀಲಲಿತೆಯಿತ್ತ ಡಾಕ್ಟರೇಟು! ನಿಜ ಹೇಳಬೇಕೆಂದರೆ ಈ ಕುರಿತ ವಿಸ್ಮಯ ಮತ್ತು ಮಾನಸಿಕ ಸಂಶೋಧನೆ (ವೈಚಾರಿಕ ಚಿಂತನೆಯ ಮುಖಾಂತರ) ಸುಮಾರು ವರ್ಷಗಳಿಂದ ನಡೆಯುತ್ತಲೆ ಇತ್ತು. ಪರಂಪರಾನುಗತ ನಂಬಿಕೆಯ ಹಿನ್ನಲೆಯನ್ನು ಸಾಮಾಜಿಕ, ವೈಜ್ಞಾನಿಕ, ಪೌರಾಣಿಕ, ಐತಿಹಾಸಿಕ..ಹೀಗೆ ಇನ್ನೂ ಅನೇಕ ಮೂಸೆಗಳಲ್ಲಿಟ್ಟು ಬೇರೆ ಬೇರೆಯಾಗಿ ನೋಡುವುದಷ್ಟೆ ಅಲ್ಲದೆ, ಅವುಗಳ ಸಮಗ್ರತೆಯಲ್ಲೂ ನೋಡಬಹುದೆ ಎನ್ನುವ ಕುತೂಹಲವೂ ಇದರ ಹಿನ್ನಲೆಯೆಂದು ಹೇಳಬಹುದು. ಇದೆ ರೀತಿಯ ಮತ್ತಷ್ಟು ಪ್ರಯೋಗ ಮಾಡುವ ಆಸೆ ಇದೆ - ಆದರೆ ಅದನ್ನು ಇಷ್ಟಪಡುವ/ಜೀರ್ಣಿಸಿಕೊಳ್ಳುವ ಆಸಕ್ತಿದಾಯಕ ಸಮುದಾಯದ ಬಗ್ಗೆ ಅಷ್ಟು ಖಾತ್ರಿಯಿರಲ್ಲಿಲ್ಲ. ನಿಮ್ಮ ಪ್ರತಿಕ್ರಿಯೆಯಿಂದ ಆ ಅನುಮಾನ ಹೆಚ್ಚು ಕಡಿಮೆ ನಿವಾರಣೆಯಾದಂತೆಯೆ. ಮತ್ತಷ್ಟು ಪ್ರಯೋಗಕ್ಕೆ ಇದು ಚೇತನದಾಯಿಯಾಗಲಿದೆ. ಅದಕ್ಕೆ ತಮಗೆ ಚಿರಋಣಿ !
- ನಾಗೇಶ ಮೈಸೂರು, ಸಿಂಗಾಪುರದಿಂದ
In reply to ನಮಸ್ಕಾರ ಶ್ರೀಧರರವರೆ, ನನಗೀಗ by nageshamysore
ನಾಗೇಶ್ ಅವರೆ,
ನಾಗೇಶ್ ಅವರೆ,
ಖಂಡಿತಾ ಎಲ್ಲದರಲ್ಲೂ ಆ ಏಕತ್ವವನ್ನು ನೋಡುವುದು ಸಾಧ್ಯವಿದೆ. ಉದಾಹರಣೆಗೆ, ನೀವೇ ಹೇಳಿದಂತೆ ಸೃಷ್ಟಿ, ಸ್ಥಿತಿ ಮತ್ತು ಲಯ ಎಲ್ಲಾ ವಸ್ತುಗಳಿಗೂ ಅನ್ವಯಿಸುತ್ತದೆ. ಇದು ವಸ್ತುಗಳ ಮಟ್ಟದಲ್ಲಿ ನಡೆದಾಗ ಅದು ಲಯವಾಗುತ್ತದೆ ಅದೇ ಪ್ರಪಂಚದ ಮಟ್ಟದಲ್ಲಿ ನಡೆದಾಗ ಅದು ಪ್ರಳಯವಾಗುತ್ತದೆ ಅಷ್ಟೇ! ಆದರೆ ಪರಬ್ರಹ್ಮವೊಂದೇ ಇದೆಲ್ಲಕ್ಕೂ ಸಾಕ್ಷೀಭೂತವಾಗಿರುತ್ತದೆ ಅದು ಯಾವುದೇ ವಿಧವಾದ ಮಾರ್ಪಾಡನ್ನು ಹೊಂದುವುದಿಲ್ಲ; ಆದ್ದರಿಂದ ಅದೇ ಎಲ್ಲದರ ಹಿಂದಿರುವ ಏಕತೆ ಎನ್ನುತ್ತವೆ ವೇದೋಪನಿಷತ್ತುಗಳು.
ಇನ್ನು ಓದುಗ ಸಮುದಾಯದ ಬಗ್ಗೆ ಆಲೋಚಿಸಬೇಕಾದ ಪ್ರಮೇಯವಿಲ್ಲ. ಏಕೆಂದರೆ, ಸಂಪದಿಗರು ಖಂಡಿತಾ ಇಂತಹ ವಿಷಯಗಳನ್ನು ಅರ್ಥ ಮಾಡಿಕೊಳ್ಳಬಲ್ಲರು ಹಾಗು ಜೀರ್ಣಿಸಿಕೊಳ್ಳಬಲ್ಲರು; ಆದರೆ ಎಲ್ಲರಿಗೂ ಓದಿ ಪ್ರತಿಕ್ರಿಯಿಸಲು ಸಮಯವಿರಲಾರದು. ನಿಮ್ಮ ಮುಂದಿನ ಲೇಖನಗಳ ನಿರೀಕ್ಷೆಯಲ್ಲಿ, ಆಲ್, ದ ಬೆಸ್ಟ್!
ವಂದನೆಗಳೊಂದಿಗೆ, ಶ್ರೀಧರ್
In reply to ನಾಗೇಶ್ ಅವರೆ, by makara
ನಮಸ್ಕಾರ ಶ್ರೀಧರರವರಿಗೆ,
ನಮಸ್ಕಾರ ಶ್ರೀಧರರವರಿಗೆ,
ತಮ್ಮ ಮಾತು ತುಂಬಾ ನಿಜ - ಒಂದರೊಳಗೆಲ್ಲಾ, ಎಲ್ಲದರೊಳಗೊಂದು ಎಂಬ ಭಾವಸಾಕ್ಷಾತ್ಕಾರದ ನಿಜದರ್ಥದರಿವಾದರೆ ಅದೆಷ್ಟೊ ಗೊಂದಲಗಳಿಗೆ ನೇರ ಉತ್ತರ ಸಿಕ್ಕಿದಂತೆ. ತಮ್ಮ ಪ್ರೋತ್ಸಾಹಕ್ಕೆ ನಿಜವಾಗಿ ತುಂಬಾ ಧನ್ಯವಾದಗಳು.
- ನಾಗೇಶ ಮೈಸೂರು ಸಿಂಗಾಪುರದಿಂದ.