೨೧. ಶ್ರೀ ಲಲಿತಾ ಸಹಸ್ರನಾಮ ೪೭ರಿಂದ ೫೨ನೇ ನಾಮಗಳ ವಿವರಣೆ

೨೧. ಶ್ರೀ ಲಲಿತಾ ಸಹಸ್ರನಾಮ ೪೭ರಿಂದ ೫೨ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೪೭ರಿಂದ ೫೨

Marālī-manda-gamanā मराली-मन्द-गमना (47)

೪೭. ಮರಾಲೀ-ಮಂದ-ಗಮನಾ     

       ದೇವಿಯ ನಡಿಗೆಯ ಶೈಲಿಯು ಹೆಣ್ಣು ಹಂಸದಂತಿದೆ. ಆಕೆಯು ಕುಂಡದಿಂದ ಹೊರಬಂದು (೪ನೇ ನಾಮ) ದೇವ-ದೇವಿಯರೆಡೆಗೆ ನಡೆಯುತ್ತಿರಬೇಕಾದರೆ, ಅವಳ ನಡಿಗೆಯನ್ನು ಹಂಸಗಳಿಗೆ ಹೋಲಿಸಿ ಈ ರೀತಿಯಾಗಿ ವರ್ಣಿಸಲಾಗಿದೆ. ನಿಜಾಂಶವೇನೆಂದರೆ, ಅವಳ ನಡಿಗೆಯನ್ನು ಹಂಸಗಳೊಂದಿಗೆ ಹೋಲಿಸಲಾಗದು ಏಕೆಂದರೆ ಅವಳ ನಡಿಗೆಗೆ ಯಾವುದೇ ಹೋಲಿಕೆಯಿಲ್ಲ. ಅವಳ ನಡಿಗೆಯನ್ನು ಸ್ಥೂಲವಾಗಿ ಅರ್ಥಮಾಡಿಕೊಳ್ಳಲು ಇಂತಹ ಉಪಮೆಗಳನ್ನು ಕೊಡುತ್ತಾರಷ್ಟೇ. ಸೌಂದರ್ಯಲಹರಿಯ ೯೧ನೇ ಶ್ಲೋಕವು ಹೇಳುತ್ತದೆ, "ಓ ಆಕರ್ಷಕ ನಡಿಗೆಯುಳ್ಳ ದೇವತೆಯೇ!  ತಾವುಗಳು ಹೆಜ್ಜೆ ಹಾಕುವಾಗ ಸಮತೋಲನೆಯನ್ನು ಕಾಯ್ದುಕೊಳ್ಳಲಾಗದೆ ಎಡುವುತ್ತಿರುವ ಹಾಗು ತಮ್ಮ ನಡಿಗೆಯನ್ನು ಉತ್ತಮಪಡಿಸಿಕೊಳ್ಳುವ ಉದ್ದೇಶಹೊಂದಿವೆಯೋ ಎನ್ನುವಂತೆ ಅಭ್ಯಾಸವನ್ನು ಕೈಗೊಂಡಿರುವ ನಿನ್ನ ’ಸಾಕು ಹಂಸ’ಗಳು ನಿನ್ನ ಪಾದಗಳನ್ನು ಬಿಡಲಾರವು.

      ಈ ನಾಮದೊಂದಿಗೆ ಪಂಚದಶಿಯ ಶಕ್ತಿ ಕೂಟದ ಸೂಕ್ಷ್ಮ ವಿವರಣೆಯು ಅಂತ್ಯಗೊಳ್ಳುತ್ತದೆ.

Mahā-lāvanya-śevadhiḥ महा-लावन्य-शेवधिः (48)

೪೮. ಮಹಾ-ಲಾವಣ್ಯ-ಶೇವಧಿಃ

      ದೇವಿಯು ಸೌಂದರ್ಯದ ಗಣಿಯಾಗಿದ್ದಾಳೆ. ಸೌಂದರ್ಯಲಹರಿಯ ೧೨ನೇ ಶ್ಲೋಕವು, "ಬ್ರಹ್ಮ ಮೊದಲಾದ ಅತ್ಯುತ್ತಮ ಚಿಂತಕರೂ ಕೂಡಾ ನಿನ್ನ ಸೌಂದರ್ಯಕ್ಕೆ ಸರಿಯಾದ ಉಪಮೆಗಳನ್ನು ಹುಡುಕಲು ಬಹಳಷ್ಟು ಕ್ಷೋಭೆಯನ್ನು ಅನುಭವಿಸುತ್ತಾರೆ. ದೇವಲೋಕದ ಅಪ್ಸರೆಯರು ಸಹ ನಿನ್ನ ಲಾವಣ್ಯದ ಒಂದು ಇಣುಕು ನೋಟಕ್ಕಾಗಿ ಮಾನಸಿಕವಾಗಿ ಶಿವನಲ್ಲಿ ಲೀನವಾಗಿ ಹೋಗುತ್ತಾರೆ; ಅದು ಕಠಿಣತಮ ತಪಸ್ಸಿನಿಂದಲೂ ಸಾಧ್ಯವಾಗದ್ದು.”

Sarvāruṇā सर्वारुणा (49)

೪೯. ಸರ್ವಾರುಣ

        ಸರ್ವಂ+ಅರುಣಮ್=ಎಲ್ಲವೂ ಕೆಂಪಾಗಿದೆ. ದೇವಿಗೆ ಸಂಭಂದಿಸಿದುದೆಲ್ಲವೂ ಕೆಂಪಾಗಿಯೇ ಇದೆ. ಈ ಅಂಶವನ್ನು ವಿವಿಧ ನಾಮಗಳಲ್ಲಿ ಒತ್ತಿ ಹೇಳಲಾಗಿದೆ. ಸೌಂದರ್ಯ ಲಹರಿಯ ೯೩ನೇ ಶ್ಲೋಕವು ಹೇಳುತ್ತದೆ, "ಕರುಣಾ ಕಾಚಿದ್ ಅರುಣಾ; ಅಂದರೆ ಕೆಂಪಾಗಿರುವ ಅವಳ ಕರುಣೆಯು ಎಣೆಯಿಲ್ಲದ್ದಾಗಿದೆ ಅದಕ್ಕೆ ಯಾವುದೇ ಹೋಲಿಕೆಯಿಲ್ಲ". ಇದೇ ನಾಮವನ್ನು ನಾವು ಲಲಿತಾ ತ್ರಿಶತಿಯ ೧೩೮ರಲ್ಲೂ ನೋಡಬಹುದು. ಯಜುರ್ವೇದ (೪.೫.೧.೭)ದಲ್ಲಿ ಹೀಗೆ ಹೇಳಲಾಗಿದೆ, "ಸಸ್ಯಸೌ ಯಸ್ತಾಮ್ರೋ ಅರುಣಾ ಉತ ಭಭ್ರುಃ ಸುಮಂಗಲಃ" (ಇದು ಶ್ರೀ ರುದ್ರದ ೧.೭ರಲ್ಲಿ ಲಭ್ಯವಿದೆ) ಅಂದರೆ ಅರುಣನ (ಉದಯಿಸುತ್ತಿರುವ ಸೂರ್ಯನ) ಬಣ್ಣವು ತಾಮ್ರ ಕೆಂಪಾಗಿದ್ದು ಅದು ಮಂಗಳಕರವಾಗಿದೆ. "ಕೆಂಪು ವರ್ಣವು ಮಂಗಳವನ್ನುಂಟು ಮಾಡುತ್ತದೆ" ಎಂದು ಶ್ರುತಿಗಳು ಸಾರುತ್ತವೆ. ಆದ್ದರಿಂದ ದೇವಿಯ ಮೈಕಾಂತಿಯನ್ನು ದೃಢಪಡಿಸಿಕೊಳ್ಳಲು ಬೇರೆ ಯಾವುದೇ ಅಧಿಕಾರಿಕ ಉಲ್ಲೇಖದ ಅವಶ್ಯಕತೆಯಿಲ್ಲ.

Anavadyāṅgī अनवद्याङ्गी (50)

೫೦. ಅನವದ್ಯಾಂಗಿ

        ದೇವಿಯ ಶರೀರದ ಎಲ್ಲಾ ಭಾಗಗಳು ದೋಷರಹಿತವಾಗಿದ್ದು ’ಸಮುದ್ರಿಕಾ ಲಕ್ಷಣ’ಕ್ಕೆ ಅನುಗುಣವಾಗಿದೆ ಅಥವಾ ಸಮುದ್ರಿಕಾ ಶಾಸ್ತ್ರ’ ಬದ್ದವಾಗಿವೆ. ಅವಳು ನಿರ್ಗುಣ ಬ್ರಹ್ಮವೂ ಹೌದು ಮತ್ತು ಸಗುಣ ಬ್ರಹ್ಮವೂ ಹೌದು. ಅವಳು ಸಗುಣ ಬ್ರಹ್ಮವೆಂದು ಕರೆಯಲ್ಪಟ್ಟಾಗ ಅವಳಿಗೆ ಆಕಾರ ಮತ್ತು ಗುಣಗಳಿರುತ್ತವೆ. ಇಲ್ಲಿ ಸಗುಣ ಬ್ರಹ್ಮನ ಕುರಿತಾಗಿ ಚರ್ಚಿಸುತ್ತಿದ್ದೇವೆ. ಬ್ರಹ್ಮವು ಯಾವಾಗಲೂ ದೋಷರಹಿತವಾಗಿರುತ್ತದೆ.

Sarvābharaṇa-bhūṣitā सर्वाभरण-भूषिता (51)

೫೧. ಸರ್ವಾಭರಣ ಭೂಷಿತಾ

       ದೇವಿಯು ಎಲ್ಲಾ ವಿಧವಾದ ಆಭರಣಗಳಿಂದ ಅಲಂಕೃತಳಾಗಿದ್ದಾಳೆ. ಕಾಳಿಕಾ ಪುರಾಣವು ೪೦ರೀತಿಯ ಆಭರಣಗಳನ್ನು ಕುರಿತು ಹೇಳುತ್ತದೆ. ಪರಶುರಾಮ ಕಲ್ಪ ಸೂತ್ರವು ಇದಕ್ಕಿಂತ ಹೆಚ್ಚಿನ ಆಭರಣಗಳನ್ನು ಕುರಿತಾಗಿ ಹೇಳುತ್ತದೆ; ಈ ಗ್ರಂಥವು ’ಶ್ರೀ ಚಕ್ರ’ ಪೂಜಾ ಪದ್ಧತಿಯ ಅಧಿಕಾರಿಕ ಗ್ರಂಥವಾಗಿದೆ. ಲಲಿತಾ ತ್ರಿಶಿತಿಯ ೧೪೦ನೇ ನಾಮವೂ ಇದೇ ಅರ್ಥವನ್ನು ಸೂಚಿಸುತ್ತದೆ.

       ಅನೇಕರು ದೇವಿಯ ಭೌತಿಕ ರೂಪದ ವರ್ಣನೆಯು ಈ ನಾಮಕ್ಕೇ ಕೊನೆಗಳ್ಳುತ್ತದೆ ಎಂದು ಭಾವಿಸುತ್ತಾರೆ. ಕೆಲವು ವಿದ್ವಾಂಸರು ಅವಳ ಭೌತಿಕ ರೂಪದ ವರ್ಣನೆಯು ೫೫ನೇ ನಾಮಕ್ಕೆ ಕೊನೆಗೊಳ್ಳುತ್ತದೆಂದು ಅಭಿಪ್ರಾಯ ಪಡುತ್ತಾರೆ. ಆದರೆ ೪೮ರಿಂದ ೫೧ನೇ ನಾಮಗಳು ಅವಳ ಪ್ರಕಾಶ ಮತ್ತು ವಿಮರ್ಶ ರೂಪಗಳನ್ನು ಸಂಯುಕ್ತವಾಗಿ ವರ್ಣಿಸುತ್ತವೆ.

Śiva-kāmeśvarāṅkasthā शिव-कामेश्वराङ्कस्था (52)

೫೨. ಶಿವ-ಕಾಮೇಶ್ವರಾಂಕಸ್ಥಾ

       ದೇವಿಯ ಕುಳಿತುಕೊಳ್ಳುವ ಭಂಗಿಯು ಈ ನಾಮದಿಂದ ಪ್ರಾರಂಭವಾಗುತ್ತದೆ. ಆಕೆಯು ಶಿವನ ಎಡತೊಡೆಯ ಮೇಲೆ ಕುಳಿತುಕೊಳ್ಳುತ್ತಾಳೆ. ಇದು ಸಗುಣ ಬ್ರಹ್ಮನ ರೂಪವಾಗಿದೆ. ಶಿವನು ಪ್ರಕಾಶ ರೂಪನಾಗಿದ್ದು ಸ್ವಯಂಪ್ರಕಾಶಿತನಾಗಿದ್ದಾನೆ ಮತ್ತು ಶಕ್ತಿಯು ಅವನ ವಿಮರ್ಶ ರೂಪವಾಗಿದ್ದಾಳೆ. ಆದ್ದರಿಂದ ಅವರನ್ನು ಈ ಭಂಗಿಯಲ್ಲಿ ಧ್ಯಾನಿಸುವುದು ಒಳ್ಳೆಯದು. ಅವಳು ಶಿವನ ಎಡತೊಡೆಯ ಮೇಲೆಯೇ ಏಕೆ ಕುಳಿತುಕೊಂಡಿದ್ದಾಳೆ? ಹೃದಯವು ಎಡಭಾಗದಲ್ಲಿರುತ್ತದೆ ಮತ್ತು ದೇವಿಯನ್ನು ಶಿವನ ಹೃದಯವೆನ್ನುತ್ತಾರೆ (ಅಥವಾ ಇದು ಪ್ರೀತಿಯನ್ನು ಸೂಚಿಸುತ್ತದೆ).

       ಕಾಮ ಎಂದರೆ ಸುಂದರ, ಆಸೆ, ಪ್ರೇಮದ ಅಧಿದೇವತೆಯಾದ ಮನ್ಮಥ ಮೊದಲಾದ ಅರ್ಥಗಳಿವೆ. ಕಾಮ ಎಂದರೆ ಜ್ಞಾನವೆನ್ನುವ ಅರ್ಥವೂ ಇದೆ. ಶಿವನೆಂದರೆ ಮಂಗಳಕರನೆಂದು ಅರ್ಥ ಮತ್ತು ಈಶ್ವರನೆಂದರೆ ಅಧಿಪತಿ. ಜ್ಞಾನವು ಶಿವನ ರೂಪವೆನ್ನಲಾಗಿದೆ. ಮನಸ್ಸು ಮತ್ತು ಹೃದಯದ ಗ್ರಹಿಕೆಯೇ ಜ್ಞಾನ. ಇಲ್ಲಿ ಸಗುಣ ಬ್ರಹ್ಮದ ಎಲ್ಲಾ ಲಕ್ಷಣಗಳನ್ನು ಹೇಳಲಾಗಿದೆ. ಇದು ಸಗುಣ ಬ್ರಹ್ಮವಾಗಿದೆ ಏಕೆಂದರೆ ಅದು ರೂಪ ಮತ್ತು ಗುಣ, ಲಕ್ಷಣಗಳನ್ನು ಕುರಿತಾಗಿ ಹೇಳುತ್ತದೆ. ನಿರ್ಗುಣ ಬ್ರಹ್ಮಕ್ಕೆ ಯಾವುದೇ ರೂಪ ಅಥವಾ ಗುಣಲಕ್ಷಣಗಳಿರುವುದಿಲ್ಲ. ಯಾವಾಗ ಮಾಯೆಯು ಬ್ರಹ್ಮದೊಂದಿಗೆ ಸಹಯೋಗವನ್ನು ಹೊಂದಿರುತ್ತದೆಯೋ ಆಗ ಅದು ಸಗುಣ ಬ್ರಹ್ಮವಾಗಿರುತ್ತದೆ. ಈ ಸಗುಣ ಬ್ರಹ್ಮವು ’ಶಕ್ತಿ’ ಅಥವಾ ’ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣೀ’ ರೂಪವೆಂದು ಕರೆಯಲ್ಪಡುತ್ತದೆ. ಹಾಗಾದರೆ ಕಾಮದ ಪ್ರಸ್ತಾವನೆ ಇಲ್ಲೇಕೆ ಬಂತು? ಇಲ್ಲಿ ಕಾಮವೆಂದರೆ ಪ್ರೇಮದ ಅಧಿದೇವತೆಯಾದ ಮನ್ಮಥನಲ್ಲ. ಇಲ್ಲಿ ಕಾಮವೆಂದರೆ ಆ ಶಬ್ದದೊಂದಿಗೆ ತಳುಕು ಹಾಕಿಕೊಂಡಿರುವ ಆಸೆಯಲ್ಲ ಆದರೆ ಅದು ಪರಮೋನ್ನತವಾದದ್ದನ್ನು ಸೂಚಿಸುತ್ತದೆ; ಅಂದರೆ ಶಿವನ ಮಂಗಳಕರ ರೂಪವಾದ ’ಶಕ್ತಿ’ಯ ಮೂಲಕ ಈ ಪ್ರಪಂಚವನ್ನು ಸೃಷ್ಟಿಸ ಬಯಸುವ ಪರಬ್ರಹ್ಮದ ಆಸೆಯನ್ನು ಸೂಚಿಸುತ್ತದೆ. ವಾಸ್ತವವಾಗಿ, ಈ ನಾಮವು ಸ್ಥಿರ (ಜಡ/ಅಚರ) ಮತ್ತು ಚಲನಶೀಲ (ಚರ/ಕ್ರಿಯಾಶೀಲ) ಶಕ್ತಿಗಳ ಐಕ್ಯತೆಯನ್ನು ಕುರಿತಾಗಿ ಹೇಳುತ್ತದೆ ಅಥವಾ ಅದು ಈ ಬ್ರಹ್ಮಾಂಡದ ಸೃಷ್ಟಿಯನ್ನು ಕುರಿತಾಗಿಯೂ ಹೇಳುತ್ತಿರಬಹುದು.

******

       ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 47-52 http://www.manblunder.com/2009/07/lalitha-sahasranamam-46-52.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

Rating
Average: 5 (1 vote)