ನನ್ನ ತೇಜಸ್ವಿ

ನನ್ನ ತೇಜಸ್ವಿ

ಪುಸ್ತಕದ ಲೇಖಕ/ಕವಿಯ ಹೆಸರು
ರಾಜೇಶ್ವರಿ ತೇಜಸ್ವಿ
ಪ್ರಕಾಶಕರು
ಪುಸ್ತಕ ಪ್ರಕಾಶನ
ಪುಸ್ತಕದ ಬೆಲೆ
369

 

ಬೇಸಿಗೆಯ ಧಗೆಯಲ್ಲಿ ಮಳೆಹನಿ ಸಿಂಚನ..

ತಾವು ಪ್ರೀತಿಸಿದವರಿಂದಲೇ ಪ್ರೀತಿ ಪಡೆದು ತಾವು ಬಯಸಿದಂತೆ ಬದುಕುವ ಅವಕಾಶ ಎಲ್ಲೋ ಕೆಲವರಿಗೆ ಸಿಗುವಂತದ್ದು.. ಅಂತಹ ಬದುಕನ್ನು ಪಡೆದ ರಾಜೇಶ್ವರಿ ತೇಜಸ್ವಿಯವರ  ಬದುಕಿನ ನೆನಪುಗಳ ಬುತ್ತಿ ‘ನನ್ನ ತೇಜಸ್ವಿ’.

ತೇಜಸ್ವಿ ನಮ್ಮ ತಲೆಮಾರಿನ ಮಂದಿಗೆ ಹೀರೋನೇ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾವುಗಳು ನಮ್ಮ ಮಕ್ಕಳಿಗೆ ಓದಿಸಲೇಬೇಕಾದ ಲೇಖಕರಲ್ಲಿ ಕೂಡ ತೇಜಸ್ವಿ ಬಹುಮುಖ್ಯರು. ಅವರ ‘ಪರಿಸರದ ಕಥೆ’ ಓದಿ ಹುಚ್ಚರಾದವರು ಅವರನ್ನು ಹುಡುಕಿ ಹೋದವರು ಅದೆಷ್ಟೋ ಮಂದಿ. ಅಂತಹವರಿಗೆ ಈ ಪುಸ್ತಕ ನಿಜಕ್ಕೂ ರಸಗವಳ.

ಈ ಪುಸ್ತಕದಲ್ಲಿ ಏನಿದೆ? ಮೈಸೂರಿನ ಆ ಕಾಲದ ಕಾಲೇಜು ಕ್ಯಾಂಪಸ್‍, ಹಾಸ್ಟಲ್‍ಗಳು, ಕಾಲೇಜಿನ ಚಟುವಟಿಕೆಗಳು.. ಹುಡುಗರು ಹುಡುಗಿಯರು.. ಇದರ ನಡುವೆಯೇ ತೇಜಸ್ವಿ ಮತ್ತವರ ಗೆಳೆಯರ ಗುಂಪು. ತೇಜಸ್ವಿಯವರು ಪತ್ರಗಳು, ಅವರ ಹವ್ಯಾಸಗಳು, ಅವರ ಕುತೂಹಲಭರಿತ ಸಾಹಸಗಳು, ಬಿರಿಯಾನಿ ಪ್ರೀತಿ, ಫಿಶಿಂಗ್‍, ಫೋಟೋಗ್ರಫಿ ಎಂಬ ತಪಸ್ಸು,.. ಎಷ್ಟೆಲ್ಲ. ಪುಸ್ತಕ ಓದಿ ಮುಗಿಸುವ ವೇಳೆಗೆ ‘ನನ್ನ ತೇಜಸ್ವಿ’ ಹೀಗಿದ್ದರಾ? ಒಮ್ಮೆ ನೋಡಬೇಕಿತ್ತು ಅಂತ ನೋಡದೆ ಹೋದವರಿಗೆ ಅನ್ನಿಸುತ್ತದೆ.

ಮೊದಲಿಗೆ ರಾಜೇಶ್ವರಿಯವರು ತಮ್ಮ ಸುದೀರ್ಘ ಆರು ವರ್ಷಗಳ ಪ್ರೀತಿಯ ಅವಧಿಯಲ್ಲಿ ತೇಜಸ್ವಿ ಬರೆದಿದ್ದ ಪತ್ರಗಳ ಮೂಲಕ ತಮ್ಮ ಬದುಕಿನ ಪರಿಚಯ ಮಾಡಿಕೊಡುತ್ತಾರೆ. ಒಮ್ಮೆ ಇವರಿಬ್ಬರು ಅಂದುಕೊಂಡಿದ್ದರಂತೆ ತಮ್ಮ ಮನೆಯ ಅಡಿಪಾಯಕ್ಕೆ ಈ ಪತ್ರಗಳನ್ನೆಲ್ಲ ಹಾಕಿಬಿಡೋಣ ಎಂದು ಅದು ಹೇಗೋ ತಪ್ಪಿಹೋದದ್ದರಿಂದ ಹೀಗೆ ಬೆಳಕು ಕಂಡಿದೆ. ಪ್ರೇಮಪತ್ರಗಳಲ್ಲೂ ‘ತೇಜಸ್ವಿತನ’ ಎದ್ದು ಕಾಣುತ್ತದೆ. ಇಲ್ಲಿ ಮೈಜುಂ ಎನ್ನಿಸುವ ಘಟನೆಗಳಿವೆ. ಒಂದು ಪ್ರೇಮ ಕತೆಯನ್ನು ಓದುವ ಸುಖವಿದೆ. ಹಾಗೆಯೇ ಬದುಕಿನ ಬಗೆಗೆ, ಪ್ರೀತಿಯ ಬಗೆಗೆ, ಸಂಬಂಧಗಳ ಬಗೆಗೆ ತೇಜಸ್ವಿಯ ಧೋರಣೆಗಳೂ ಇಲ್ಲಿ ವ್ಯಕ್ತವಾಗಿವೆ. ಅವರ ತುಮುಲ, ತಾಕಲಾಟ, ಹೋರಾಟಗಳ ಚಿತ್ರವಿಲ್ಲಿದೆ. ಇದನ್ನೊಂದು ಕೋಲಾಜ್‍ ಮಾದರಿಯಲ್ಲಿ ಓದಿಕೊಳ್ಳಬಹುದಾಗಿದೆ.

“ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಒಂದು ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.”

“ರಾಜೇಶ್‍ love ಎಂದರೆ ಏನು ಗೊತ್ತ. ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತ್ವವನ್ನು ಸ್ವೀಕರಿಸುವುದು. ದೈಹಿಕವಾಗಿ ಮಾನಸಿಕವಾಗಿ. ನೀವು ತಿಳಿದಿರೋ ಅಂಥ ಸುಲಭದ್ದಲ್ಲ. ಕೆಲವರು ಮುನ್ನೋಟಕ್ಕೆ ಹೆದರಿ ಅಂಬಿಕೆಯಂತೆ ಬಿಳಿಚಿಕೊಳ್ಳುತ್ತಾರೆ. ಇಲ್ಲ ಅಂಬಾಲಿಕೆಯಂತೆ ಅಂಧರಾಗುತ್ತಾರೆ.”

“ನಿನ್ನನ್ನು ಕಂಡರೆ ನನಗೆ ಒಂದು ಕಡೆ ಅತ್ಯಾಶ್ಚರ್ಯ. ಇನ್ನೊಂದು ಕಡೆ ಎದೆ ಬಿರಿದು ಹೋಗುವಂಥ ಪ್ರೀತಿ ರಾಜೇಶ್‍. ನನಗೆ ಗೊತ್ತು ಒಂದಲ್ಲ ಒಂದು ದಿನ ನಿನ್ನ ಎದೆಯ ಮೇಲೆ ಕಿವಿ ಇಟ್ಟು ಹೃದಯದ ಪಿಸು ಮಾತನ್ನೆಲ್ಲ ಆಲಿಸಿಬಿಡುತ್ತೇನೆ.”

“love ಆಗಲಿ lust ಆಗಲಿ great ಆಗುವುದು ಯಾವಾಗ ಅದರಿಂದ ನಾವು ನಮ್ಮ ಜೀವನವನ್ನು ಇನ್ನೊಂದು ತೀವ್ರತೆಗೆ ಕೊಂಡೊಯ್ಯಬಹುದೆಂಬುದನ್ನರಿತಾಗ ಮಾತ್ರವೆ.”

“ನನ್ನ ಪ್ರೇಮವೂ ನಿನ್ನನ್ನು ನೀನಾಗೆ ಇರುವಂತೆ ಮಾಡದಿದ್ದರೆ ನಾನು ಎಂಥ failure ಆಗುತ್ತೀನಿ ಯೋಚಿಸು.”

“ ಈ ಜೀವನ ಎಷ್ಟೊಂದು ರೋಮಾಂಚಕಾರಿಯೋ ಅದಕ್ಕಿಂತ ಆರರಷ್ಟು boring ಆಗಿದೆ. ಇದು ಸತ್ಯ. ನೀನು excitement hunter ಆಗಬಾರದು. ಈ ಜೀವನದ ಏಕತಾನದ ರಗಳೆಗಳನ್ನು ತಾಳಲಿಕ್ಕೆ ಭಾರೀ bore resistance ಶಕ್ತಿ ಬೇಕು. ಮದುವೆ ಮಹತ್ತರ ಘಟನೆಯಲ್ಲ. ಆನಂತರದ ಬದುಕು ಮುಖ್ಯವಾದುದು. ಸ್ವಾತಂತ್ರ್ಯವನ್ನು ಗಳಿಸಿಕೊಂಡ ದಾರಿ ಮುಖ್ಯವಾದುದು. ಜೀವನದ ಹೋರಾಟ ಬರೀ ಹಣಾಹಣಿಯ ರೂಪದಲ್ಲಿ ಮೈದೋರುತ್ತದೆಂದು ತಿಳಿದಿದೀ. ನೀನು ತಾಳಿಕೊಂಡಿರುವ ಬೋರೂ ಒಂದು ಹೋರಾಟವೇ. ನಿರೀಕ್ಷೆ ಒಂದು ಹೋರಾಟ. ತಾಳ್ಮೆ ಒಂದು ಹೋರಾಟ.”

ಇವೆಲ್ಲ ತೇಜಸ್ವಿ ಪತ್ರಗಳಲ್ಲಿನ ಕೆಲವು ಸ್ಯಾಂಪಲ್‍ಗಳು. ತೀವ್ರ ಪ್ರೀತಿಯ, ತುಂಟತನದ ಮಾತುಗಳೊಂದಿಗೆ, ಪ್ರೀತಿಯ ಬೈಗುಳಗಳೊಂದಿಗೆ ಬದುಕಿನ ಬಗೆಗಿನ ತೇಜಸ್ವಿಯ ದೃಷ್ಟಿಕೋನ ಇಲ್ಲಿ ಕಾಣಿಸಿಕೊಳ್ಳುತ್ತದೆ. ಅವರ ಕತೆ, ಕಾದಂಬರಿಗಳ ಹೊಳಹುಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಇದರೊಂದಿಗೆ ಇವರ ದಾಂಪತ್ಯದ ರಸಗಳಿಗೆಗಳು. ಅದರಲ್ಲಿನ ಏಳುಬೀಳುಗಳು, ಕುವೆಂಪು-ಹೇಮಾವತಿಯರ ವ್ಯಕ್ತಿಚಿತ್ರಗಳು, ತಂಗಿ, ತಮ್ಮಂದಿರ ವ್ಯಕ್ತಿತ್ವಗಳು, ಆ ಮನೆಯ ವಾತಾವರಣ ಅನಾವರಣಗೊಳ್ಳುತ್ತಾ ಸಾಗುತ್ತದೆ. ಹಾಗೆಂದು ಇದೇನು ಕೇವಲ ಖಾಸಗಿ ಕಥೆಯನ್ನಷ್ಟೇ ಹೇಳುವುದಿಲ್ಲ. ಆ ದಶಕದಲ್ಲಿ ತೇಜಸ್ವಿ ಸಕ್ರಿಯವಾಗಿ ಭಾಗವಹಿಸಿದ ಹಲವು ಚಳುವಳಿಗಳು, ಹೋರಾಟಗಳು ಮುಂತಾದ ಸಾಮಾಜಿಕ ಜೀವನದ ಹಲವು ಚಟುವಟಿಕೆಗಳನ್ನು ಕಟ್ಟಿಕೊಡುತ್ತದೆ.

ಒಟ್ಟಂದದಲ್ಲಿ ಇಡೀ ಪುಸ್ತಕದ ತುಂಬ ರಾಜೇಶ್ವರಿಯವರ ಆರಾಧನಾ ದೃಷ್ಟಿಕೋನವೇ ಆವರಿಸಿಕೊಂಡಿದೆ. ತಾನು ಪ್ರೀತಿಸಿದವನ ವ್ಯಕ್ತಿತ್ವದಲ್ಲಿ ತನ್ನ ‘ಸ್ವ’ವನ್ನು ಕರಗಿಸಿಕೊಂಡ ಪ್ರೇಮಿಯೇ ಇಲ್ಲಿರುವುದು. ಈ ಧೋರಣೆ ಸರಿಯೇ ಅಥವ ತಪ್ಪೇ ಎಂಬುದಲ್ಲ. ಅದಿರುವುದು ಹಾಗೇ ಎಂದು ಓದುತ್ತಾ ಒಪ್ಪಿಕೊಂಡುಬಿಡುತ್ತೇವೆ. ತೇಜಸ್ವಿ ಬದುಕಿರುವವರೆಗೂ ಎಂದೂ ಬರೆಯುವ ಕನಸನ್ನು ಕೂಡ ಕಂಡಿರದ ರಾಜೇಶ್ವರಿ ಈಗ ಬರೆಯಲಾರಂಭಿಸಿದ್ದಾರೆ. ಇಬ್ಬರು ಸರಸ್ವತಿ ಪುತ್ರರ ನಡುವಿನ ತಮ್ಮ ಬದುಕಿನ ಚಿತ್ರವನ್ನು ಸರಳವಾಗಿ ಒಂದು ಭಾವಗೀತೆಯ ರೀತಿಯಲ್ಲಿ ಹೇಳುತ್ತಾ ಹೋಗುತ್ತಾರೆ. ಕೆಲವೆಡೆ ಓದಿನ ಓಟ ಕುಂಠಿತಗೊಂಡರೂ, ಹಲವೆಡೆ ಅವರ ಕಾವ್ಯಾತ್ಮಕ ಶೈಲಿ ಮನಸೆಳೆಯುತ್ತದೆ. ಮುಂದೆ ಓದಲು ಪ್ರೇರೇಪಿಸುತ್ತದೆ.

ಪತ್ರಗಳು, ಸೊಸೆ ಕಡಂತೆ ಕುವೆಂಪು, ಕೊನೆಯ ದಿನಗಳು, sit-out ಹೇಳುವ ಕಥೆ-ವ್ಯಥೆ... ಅಧ್ಯಾಯಗಳು ಮನಸ್ಸನ್ನು ಆರ್ದ್ರಗೊಳಿಸುತ್ತವೆ. ಪುಸ್ತಕದ ಕೊನೆಯಲ್ಲಿ ... “ನೀನು ನನಗೆ ಕಂಪನಿ ಕೊಟ್ಯೆಲ್ಲೇ ಮಾರಾಯ್ತಿ. ನನಗಂತೂ ಎಲ್ಲವೂ ಆಶ್ಚರ್ಯವಾಗುತ್ತೆ. ಈವತ್ತು ಈ ತುದಿಯಲ್ಲಿ ನಿಂತು ನೋಡಿದರೆ- ಆ ದಿನ ಭೂತನಕಾಡಿನಲ್ಲಿ ಹುಣ್ಣಿಮೆ ದಿನದಿಂದ ನೆನೆದರೆ- ಆ ತುದಿಯಲ್ಲಿದ್ದಾಗ ಮುನ್ನುಗುವುದೊಂದೇ. ಆಮೇಲೆ ಏನೇನೆಲ್ಲ ನಡೆಯಿತು ಮಾರಾಯ್ತಿ. ನೆನೆಸಿಕೊಂಡರೆ ಎಲ್ಲವೂ ಆಶ್ಚರ್ಯವಾಗುತ್ತೆ...” ಎಂದು ತೇಜಸ್ವಿ ತಮ್ಮ ಕೊನೆಯ ದಿನಗಳಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಕೊನೆಯಲ್ಲಿ “ ನನ್ನ ತೇಜಸ್ವಿ ಕಾಡಿನ ಉಸಿರಿನಲ್ಲಿ ಉಸಿರಾಗಿ ಹೋದರು. ಅವರ ವಾಸನೆ ನನ್ನ ಉಸಿರಿನಲ್ಲಿದೆ, ನನಗೆ ಅವರು ಬೇಕು” ಎಂದು ಬರೆದಿರುವುದನ್ನು ಓದುವಾಗ ಗಾಢ ಮೌನ ಆವರಿಸದೆ ಇರದು.