ಭಾಗ - ೧: ಕೃಷ್ಣ ಕಥಾ ಸಮರ್ಥನೆ - ಗೋಪಿಕಾವಸ್ತ್ರಾಪಹರಣ ಹಾಗು ರಾಸಲೀಲೆಯ ಪ್ರಸಂಗಗಳು
ಇತ್ತೀಚೆಗೆ ಸಂಪದದಲ್ಲಿ ಪ್ರಕಟವಾದ ಶ್ರೀಮತಿ ಸುಮನ್ ದೇಸಾಯಿಯವರ ಲೇಖನ "ಕೄಷ್ಣ ಲೀಲೆ ಅಲ್ಲಾ,,ಕಾಮದಾಟ.................. http://sampada.net/%E0%B2%95%E0%B3%84%E0%B2%B7%E0%B3%8D%E0%B2%A3-%E0%B2%B2%E0%B3%80%E0%B2%B2%E0%B3%86-%E0%B2%85%E0%B2%B2%E0%B3%8D%E0%B2%B2%E0%B2%BE%E0%B2%95%E0%B2%BE%E0%B2%AE%E0%B2%A6%E0%B2%BE%E0%B2%9F ಓದಿದ ಮೇಲೆ ಕೃಷ್ಣನ ಹೆಸರನ್ನು ಸರ್ವಸಂಗ ಪರಿತ್ಯಾಗಿಗಳೆನಸಿಕೊಂಡವರು ಹೇಗೆಲ್ಲಾ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರಲ್ಲಾ ಎನ್ನುವ ವ್ಯಥೆಯಾಯಿತು. ಅದರೊಂದಿಗೆ, ಶ್ರೀಮತಿ ದೇಸಾಯಿಯವರ ಅಭಿಪ್ರಾಯಗಳಿಗೆ ಪೂರಕವಾಗಿ ಒಂದಷ್ಟು ಮಾಹಿತಿಯನ್ನು ಒದಗಿಸಬೇಕೆನಿಸಿತು. ಹಾಗೆಯೇ ಕೆಲವೊಂದು ಲೇಖನಗಳಲ್ಲಿ ಕೃಷ್ಣನನ್ನು ಕೆಟ್ಟದ್ದಾಗಿ ಚಿತ್ರಿಸುವುದು ಮತ್ತು ಅವಹೇಳನಕಾರಿಯಾಗಿ ಅವನ ಬಗ್ಗೆ ಬರೆದಿರುವುದನ್ನು ಓದುತ್ತಿರುವಾಗ ಇದಕ್ಕೆಲ್ಲಾ ಸೂಕ್ತ ಉತ್ತರವನ್ನು ಕಂಡುಕೊಳ್ಳಬೇಕೆನಿಸಿತು. ಈ ದಿಶೆಯಲ್ಲಿ ಕಾರ್ಯಪ್ರವೃತ್ತನಾಗಿದ್ದವನಿಗೆ ಅಕಸ್ಮಾತ್ತಾಗಿ ’ಶ್ರೀ ಕೃಷ್ಣ ಕಥಾಸಾರ ಸರ್ವಸ್ವ’ ಎನ್ನುವ ಸ್ವಾಮಿ ಹರ್ಷಾನಂದ ವಿರಚಿತ ಕೃತಿಯು ಕಣ್ಣಿಗೆ ಬಿತ್ತು. ಆ ಕೃತಿಯು ಮೂಲವಾಗಿ ಇಂಗ್ಲೀಷಿನಲ್ಲಿ ಬರೆಯಲ್ಪಟ್ಟಿದ್ದರೂ ಅದನ್ನು ಸುಂದರವಾಗಿ ಕನ್ನಡಕ್ಕೆ ಶ್ರೀಯುತ ಎ. ಎಂ. ಮುದ್ದಲಿಂಗಣ್ಣ ಎನ್ನುವವರು ಅನುವಾದಿಸಿದ್ದಾರೆ. ಇದನ್ನು ಅಧ್ಯಕ್ಷರು, ಶ್ರೀ ರಾಮಕೃಷ್ಣ ಆಶ್ರಮ, ಯಾದವಗಿರಿ, ಮೈಸೂರು ಇವರು ಪ್ರಕಟಿಸಿರುತ್ತಾರೆ. ಅದರಿಂದ ಆಯ್ದ ಅಧ್ಯಾಯದ ಭಾಗವೇ, "ಕೃಷ್ಣಕಥಾ ಸಮರ್ಥನೆ". ಇದನ್ನು ಎರಡು ಭಾಗಗಳಲ್ಲಿ ಪ್ರಕಟಿಸುತ್ತಿದ್ದೇನೆ. ಮೊದಲನೆಯದರಲ್ಲಿ, ಕೃಷ್ಣನ ಗೋಪಿಕಾವಸ್ತ್ರಾಪಹರಣ ಮತ್ತು ರಾಸಲೀಲೆಯ ಪ್ರಸಂಗಗಳು ಹಾಗೂ ಅವನ ೧೬,೦೦೦ ಹೆಂಡತಿಯರ ಕುರಿತಾದ ವ್ಯಾಖ್ಯಾನಗಳಿದ್ದರೆ ಎರಡನೆಯ ಭಾಗದಲ್ಲಿ ಕೃಷ್ಣನು ಮಹಾಭಾರತ ಯುದ್ಧದಲ್ಲಿ ಪಾಂಡವರನ್ನು ಗೆಲ್ಲಿಸಲು ಅನುಸರಿಸಿದ ವಿಧಾನಗಳ ಕುರಿತಾದ ಟೀಕೆಗಳ ವಿಶ್ಲೇಷಣೆಯಿದೆ.
ಅಶಕ್ತರ, ಅಸಮರ್ಥರ ರಕ್ಷಣೆಗಾಗಿ ತನ್ನ ಇಡೀ ಜೀವನವನ್ನೇ ವಿನಿಯೋಗಿಸಿಕೊಂಡ ಕೃಷ್ಣನ ಜೀವನದ ಕಥೆಗೆ ಸಮರ್ಥನೆ ಬೇಕೆ? ಕೃಷ್ಣನ ಜೀವನದ ಬಗ್ಗೆ ರಾಶಿ ರಾಶಿಯಾಗಿ ಬೆಳೆದು ಬಂದಿರುವ ಅಸಂಬದ್ಧ ಟೀಕೆಗಳನ್ನು, ದೂಷಣೆಗಳನ್ನು ಗಮನಿಸಿದಾಗ ಸಮರ್ಥನೆ ಬೇಕು ಎನಿಸುತ್ತದೆ. ಈ ಟೀಕೆ ಮತ್ತು ದೂಷಣೆಗಳೆಲ್ಲ ಬಂದಿರುವುದು ಭಾರತೀಯ ಸಂಸ್ಕೃತಿಯ ಜೀವಾಳವನ್ನರಿಯದ ಪರಕೀಯರಿಂದ ಮತ್ತು ಆ ಸಂಸ್ಕೃತಿಯ ಗಂಧವೇ ಇಲ್ಲದ ಹೀನ ಸಂಸ್ಕಾರದ ಭಾರತೀಯರಿಂದಲೂ ಕೂಡ.
ಈ ಟೀಕೆ ದೂಷಣೆಗಳೆಲ್ಲಾ ಬಂದಿರುವುದು ಮಹಾಭಾರತದಲ್ಲಿ ಮತ್ತು ಭಾಗವತದಲ್ಲಿ ನಿರೂಪಿಸಿರುವ ಕೃಷ್ಣನ ಕಥೆಯ ಆಧಾರದ ಮೇಲೆ ಎಂಬುದು ನಾವು ಮೊದಲು ಗಮನಿಸಬೇಕಾದ್ದು. ಈ ಎರಡೂ ಗ್ರಂಥಗಳು ಕೃಷ್ಣನ ಮಹತ್ವವನ್ನಷ್ಟೇ ಅಲ್ಲ, ಅವನ ದೈವತ್ವವನ್ನೂ ನಿರ್ವಿವಾದವಾಗಿ ಪ್ರತಿಪಾದಿಸುತ್ತಾ ಅವನನ್ನು ಪರಮೇಶ್ವರನೆಂದು ನಿರೂಪಿಸಿವೆ. ಕೃಷ್ಣನನ್ನು ಹಳಿಯುವವರು ಈ ನಿರೂಪಣೆಯನ್ನು ಗಮನಿಸದೆ ಆ ಗ್ರಂಥಗಳು ಅವನ ಬಗ್ಗೆ ಹೇಳಿರುವ ಉಳಿದ ವಿಷಯಗಳನ್ನು ಗಮನಿಸಿ ಟೀಕಿಸುವುದು, ಮೊಟ್ಟೆಯನ್ನು ಇಬ್ಬಾಗವಾಗಿ ಸೀಳಿ ಒಂದು ಭಾಗವನ್ನು ಮರಿ ಮಾಡಲಿಕ್ಕೆ ಇನ್ನೊಂದನ್ನು ಆಮ್ಲೆಟ್ ಮಾಡಲಿಕ್ಕೆ ಬಳಸಿಕೊಂಡ ಗಾವಿಲ ಮಹಾಶಯನ ಅವಿವೇಕಕ್ಕಿಂತ ಭಿನ್ನವೇನಲ್ಲ.
ಕುಚೋದ್ಯದ ಮಾತಂತಿರಲಿ; ಕೃಷ್ಣನ ಬಗ್ಗೆ ನಡೆದಿರುವ ಟೀಕೆ ನಿಂದನೆಗಳು ಅಸಮರ್ಥನೀಯ ಎಂದು ಸಮರ್ಪಕವಾಗಿ ವಿವರಿಸಿದರೆ ಸಾಕಲ್ಲ?
ಕೃಷ್ಣನ ನಿಂದನೆ ನಡೆದಿರುವುದು ಪ್ರಮುಖವಾಗಿ ಎರಡು ವಿಷಯಗಳ ಬಗ್ಗೆ; ಒಂದು ವೃಂದಾವನದ ಗೋಪಿಯರೊಡನೆ ಕೃಷ್ಣನಿಗಿದ್ದ ಸಂಬಂಧದ ಬಗ್ಗೆ; ಎರಡು ಪಾಂಡವರಿಗೆ ಜಯಗಳಿಸಿ ಕೊಡುವ ಸಲುವಾಗಿ ಕೃಷ್ಣನು ಬಳಸಿದ ತಂತ್ರಗಳ ಬಗ್ಗೆ, ಯುಕ್ತಿಗಳ ಬಗ್ಗೆ.
ಮೊದಲನೆಯದು, ಭಾಗವತದಲ್ಲಿ ವಿವರಿಸಿರುವ ಗೋಪೀವಸ್ತ್ರಾಪಹರಣ, ರಾಸಲೀಲಾ - ಈ ಎರಡು ಸಂಗತಿಗಳಿಗೆ ಸಂಬಂಧಪಟ್ಟದ್ದು. ವಿಷ್ಣು ಪುರಾಣದಲ್ಲಾಗಲೀ ಹರಿವಂಶದಲ್ಲಾಗಲೀ ವಸ್ತ್ರಾಪಹರಣದ ವಿಷಯವಿಲ್ಲ, ರಾಸಲೀಲೆಯ ವಿಷಯ ಮೂರು ಗ್ರಂಥಗಳಲ್ಲೂ ಇದೆ.
ಸ್ನಾನ ಮಾಡುತ್ತಿದ್ದ ಗೋಪಿಯರ ಉಡುಪುಗಳನ್ನೆತ್ತಿಕೊಂಡು ಕೃಷ್ಣನು ಅವನ ಸಖರೊಡನೆ ಹತ್ತಿರದ ಮರವನ್ನೇರಿ ಕುಳಿತಾಗ ಗೋಪಿಯರು ಅವುಗಳನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ. ಅವುಗಳನ್ನು ಪಡೆಯಲು ನೀರಿನಿಂದ ಹೊರಬಂದು ಕೈಯ್ಯನ್ನೆತ್ತಿ ನಿಲ್ಲಿ ಎನ್ನುತ್ತಾನೆ, ಎಂದು ಭಾಗವತ (೧೦.೨೨)ದಲ್ಲಿ ಹೇಳಿರುವುದು ಸಾರಾಂಶ.
ಅದೇ ಗ್ರಂಥದಲ್ಲಿ (೧೦.೨೨.೧) ಗೋಪಿಯರು ಋತುಮತಿ ಪೂರ್ವ ವಯಸ್ಸಿನ ಕುಮಾರಿಯರೆಂದೂ, (೧೦.೨೨.೩)ರಲ್ಲಿ ಕೃಷ್ಣ ಕೇವಲ ಏಳು ವರ್ಷದ ಬಾಲಕನಾಗಿದ್ದನೆಂದೂ ಹೇಳಿದೆ. ಆದ್ದರಿಂದ ಕೃಷ್ಣನು ಕಾಮವಿಕಾರದಿಂದ ಆ ರೀತಿ ವರ್ತಿಸಿದನೆನ್ನುವುದು ಮೂರ್ಖತನವಾಗುತ್ತದೆ. ವಾಸ್ತವವಾಗಿ ಆ ಗೋಪಕನ್ಯೆಯರು ಕೃಷ್ಣನು ತಮ್ಮ ಭಾವೀ ಪತಿಯಾಗಬೇಕೆಂಬ ಸಂಕಲ್ಪದಿಂದ ಆ ದಿನ ಕಾತ್ಯಾಯನೀ ವ್ರತಾಚರಣೆಯಲ್ಲಿ ನಿರತರಾಗಿದ್ದರು ಎಂದು ಅದೇ ಭಾಗವತದಲ್ಲಿ (೧೦.೨೨.೪) ಹೇಳಿದೆ.
ಕೃಷ್ಣನು ಶೈಶವದಿಂದಲೂ ಅವನ ಅತಿಮಾನುಷ ಶಕ್ತಿಯನ್ನು ಕಣ್ಣಾರೆ ಕಂಡ ಅವರು ಅವನ ಮಹತ್ವದ ಹಾಗೂ ದೈವತ್ವದ ಬಗ್ಗೆ ಅಚಲವಾದ ಶ್ರದ್ಧೆಯುಳ್ಳವರಾಗಿ ತಾವು ಅವನ ಸತಿಯರು ಎಂಬ ಭಾವ ಅವರ ಹೃದಯಾಂತರಾಳದಲ್ಲಿ ಮೂಡಿತ್ತು. ಜೀವಕ್ಕೆ ದೇವನ ಬಗ್ಗೆ ಉಂಟಾಗುವ ಈ ಭಾವವನ್ನೇ ಕಾಂತಭಾವ ಅಥವಾ ಮಧುರಭಾವ ಎಂದಿರುವುದು; ಭಕ್ತಿ ಮತ್ತು ಅನುಭಾವ ಸಾಹಿತ್ಯದಲ್ಲಿ. ಕ್ರೈಸ್ತ ಮತ್ತು ಸೂಫೀ ಧರ್ಮದಲ್ಲಿ ಇದು ವಿಶೇಷವಾಗಿ ಕಾಣಿಸುತ್ತದೆ. ದೇವನೆಡೆಗೆ ಸಾಗಬಯಸುವ ಜೀವವು ತನ್ನನ್ನು ಬಂಧಿಸುವ ಘೃಣಾ (ಕ್ರೋಧ), ಶಂಕಾ (ಸಂಶಯ), ಭಯ, ಲಜ್ಜಾ, ಮುಂತಾದ ಅಷ್ಟಪಾಶಗಳನ್ನು (ಎಂಟು ಬಗೆಯ ದೌರ್ಬಲ್ಯಗಳನ್ನು) ತ್ಯಜಿಸಬೇಕು. ಭಾಗವತದಲ್ಲಿ ನಿರೂಪಿತವಾಗಿರುವ ಕೃಷ್ಣ-ಗೋಪಿಯರ ಪ್ರಸಂಗವೂ ಇದೇ ಅರ್ಥದ್ದು. ಜೀವ ಅಥವಾ ಆತ್ಮನು ತನ್ನನ್ನು ಬಂಧಿಸಿರುವ ಎಲ್ಲಾ ಪಾಶಗಳನ್ನು ಕಡಿದುಕೊಂಡು ಪರಮಾತ್ಮನಿಗೆ ಸಂಪೂರ್ಣ ಶರಣಾಗುವುದನ್ನು ಇದು ಸಂಕೇತಿಸುತ್ತದೆ, ಆದ್ದರಿಂದ ಕೃಷ್ಣ ಗೋಪಿಯರ ಪ್ರಸಂಗವನ್ನು ಸರಿಯಾದ ಹಿನ್ನಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು.
ಭಾಗವತದ ಹತ್ತನೆಯ ಸ್ಕಂದದ ೨೯ರಿಂದ ೩೩ರವರೆಗಿನ ರಾಸ ಪಂಚಾಧ್ಯಾಯೀ ಎಂದು ಕರೆಯಲಾದ ಐದು ಅಧ್ಯಾಯಗಳು ವಿಶೇಷವಾಗಿ ಗೋಪಿಯರೊಡನೆ ಕೃಷ್ಣನ ಕ್ರೀಡೆಯನ್ನು ವರ್ಣಿಸುತ್ತವೆ.
ಒಂದು ಬೆಳದಿಂಗಳ ರಾತ್ರಿ ಕೃಷ್ಣನು ಯಮುನಾ ತೀರದಲ್ಲಿ ಕುಳಿತು ಮನಮೋಹಕ ರಾಗಗಳನ್ನು ತನ್ನ ವೇಣುವಿನಿಂದ ನುಡಿಸುತ್ತಿದ್ದಾನೆ. ಅದನ್ನು ಕೇಳಿ ತಡೆಯಲಾರದೆ ಗೋಪಿಯರು ಅವನ ಬಳಿಗೆ ಓಡಿ ಬರುತ್ತಾರೆ, ಕೃಷ್ಣ ವಿಚಲಿತನಾಗದೆ ಆ ಸಮಯದಲ್ಲಿ ಅವರು ಅಲ್ಲಿಗೆ ಬಂದದ್ದೇಕೆ, ಮನೆಗಳಿಗೆ ಮರಳಿ ಎನ್ನುತ್ತಾನೆ, ಅವರು ಅದಕ್ಕೊಪ್ಪದೆ ಅವನ ಸನ್ನಿಧಿಯಲ್ಲಿ ಆನಂದ ಪಡುವ ಇಚ್ಛೆಯಿರುವುದರಿಂದ ಅದಕ್ಕೆ ಅನುಮತಿ ನೀಡಬೇಕೆಂದು ಬೇಡುತ್ತಾರೆ. ಕೃಷ್ಣನು ಅವರ ಇಚ್ಛೆಯನ್ನು ಮನ್ನಿಸಿ ಅವರು ತನಗೆ ಸಂಪೂರ್ಣವಾಗಿ ಸಮರ್ಪಿಸಿ ಕೊಂಡಿರುವರೆಂಬುದನ್ನು, ತನಗಾಗಿ ಸರ್ವವನ್ನೂ ತ್ಯಾಗಮಾಡಲು ಸಿದ್ಧರಾಗಿರುವರೆಂಬುದನ್ನು ಮನಗಂಡು ಅವರೊಡನೆ ವಿಲಾಸದಿಂದ ಕ್ರೀಡಿಸುತ್ತಾನೆ. ಸ್ವಲ್ಪ ಕಾಲಾನಂತರ ಪ್ರತಿಗೋಪಿಯ ಮನದಲ್ಲಿ ಜಗದೊಡೆಯನೇ ತನ್ನ ಮನದನ್ನನಾಗಿ ಬಿಟ್ಟನೆಂಬ ಹಮ್ಮು ನುಸುಳುತ್ತದೆ, ಇದನ್ನರಿತ ಕೃಷ್ಣನು ಅವರಿಗೆ ಪಾಠ ಕಲಿಸುವುದಕ್ಕಾಗಿ ಇದ್ದಕ್ಕಿದ್ದಂತೆ ಅವರಿಂದ ಕಣ್ಮರೆಯಾಗುತ್ತಾನೆ. ಕಂಗಾಲಾದ ಗೋಪಿಯರು ಅವನ ದರ್ಶನಕ್ಕಾಗಿ ಅತ್ಯಂತ ಆರ್ತರಾಗಿ ಹಂಬಲಿಸುತ್ತಾ ಗೋಳಿಡುತ್ತಾ ಪ್ರಾರ್ಥಿಸುತ್ತಾ ಅಲೆದಾಡುತ್ತಾರೆ. ಈ ರೀತಿ ಅವರನ್ನು ದಂಡಿಸಿದ ನಂತರ ಕೃಷ್ಣನು ಪ್ರತಿಗೋಪಿಗೂ ಒಬ್ಬೊಬ್ಬ ಕೃಷ್ಣನಂತೆ ಕಾಣಿಸಿಕೊಳ್ಳುತ್ತಾನೆ. ಅಪಾರ ಆನಂದದ ರಾಸಕ್ರೀಡೆ ಸಾಗುತ್ತದೆ. ಆದರೂ ಪ್ರತಿ ಗೋಪಿಯ ಮನೆಯವರಿಗೆ ಅವಳು ಮನೆಯಲ್ಲೇ ಇರುವಂತೆ ಭಾಸವಾಗುತ್ತದೆ. ಇದು ರಾಸಕ್ರೀಡಾ-ಪ್ರಕರಣದ ಸಾರಾಂಶ.
ಇಲ್ಲಿ ಏಳುವ ಪ್ರಶ್ನೆ ಏನೆಂದರೆ, ಇತರರ ಪತ್ನಿಯರೊಡನೆ ವಿಹರಿಸಿದ ಕೃಷ್ಣನು ಸಾಮಾನ್ಯ ವಿಟನಂತೆ ವರ್ತಿಸಿ ಧರ್ಮದ ಆದ್ಯ ನಿಯಮವನ್ನೇ ಉಲ್ಲಂಘಿಸಿದಂತಾಗಲಿಲ್ಲವೇ ಎಂಬುದು.
ಕೃಷ್ಣನ ಕಥೆಯನ್ನು ಕೇಳುತ್ತಿದ್ದ, ಪರೀಕ್ಷಿದ್ರಾಜನೇ ಈ ಪ್ರಶ್ನೆಯನ್ನು ಕೇಳುತ್ತಾನೆ (ಭಾಗವತ ೧೦.೩೩, ೨೭-೨೯ನ್ನು ನೋಡಿ).
ಇಲ್ಲಿ ಗಮನಿಸಬೇಕಾದ ಒಂದು ಕೌತುಕದ ಸಂಗತಿಯಿದೆ. ಯಧಿಷ್ಠಿರನು ರಾಜಸೂಯ ಯಾಗವನ್ನು ಮಾಡಿದ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದವರಲ್ಲಿ ಬಹುಜನ ಅಗ್ರಪೂಜೆಗೆ ಕೃಷ್ಣನನ್ನು ಆರಿಸಿದಾಗ ಅವನ ಬದ್ಧವೈರಿಯಾದ ಚೇದಿರಾಜ ಶಿಶುಪಾಲನು ಅದನ್ನು ಕಟುವಾಗಿ ವಿರೋಧಿಸಿ ಅವನ ಮೇಲೆ ಹೇಯವಾದ ಬೈಗುಳಗಳ ಮಳೆಗರೆದನಲ್ಲಾ, ಆಗ ಗೋಪಿಯರೊಡನೆ ಕೃಷ್ಣನ ಅಕ್ರಮ ಸಂಬಂಧದ ವಿಷಯವನ್ನೇ ಎತ್ತಲಿಲ್ಲ! (ಮಹಾಭಾರತ ಸಭಾಪರ್ವ, ಅಧ್ಯಾಯ ೩೯ ಮತ್ತು ೪೦ ನೋಡಿ). ಕೃಷ್ಣನ ಕಥೆ ನಮಗೆ ಮೊಟ್ಟ ಮೊದಲು ಪರಿಚಯವಾಗುವುದು ಮಹಾಭಾರತದಲ್ಲೇ ಅಂದ ಮೇಲೆ, ಕೃಷ್ಣ-ಗೋಪಿಯರ ಸಂಬಂಧದ ಪ್ರಸಂಗ ಅಲ್ಲೇ ಇಲ್ಲದ ಮೇಲೆ, ಅದು ಅನಂತರ ಕೃಷ್ಣಭಕ್ತಿ ಪಂಥದ ಪ್ರಚಾರಕ್ಕಾಗಿ ಯಾರೋ ಕವಿ ಕಲ್ಪಿಸಿಕೊಂಡ ಕಥೆಯಾಗಿ ಪ್ರಕ್ಷಿಪ್ತವಾಗಿ ಸೇರಿರಬಹುದಾಗಿದ್ದ ಪಕ್ಷದಲ್ಲಿ ಕೃಷ್ಣನ ನಿಂದಕರ ವಾದಕ್ಕೆ ನೆಲೆಯೇ ಇಲ್ಲವಾಗುತ್ತದೆ.
ಆದರೂ ಕೃಷ್ಣನ ಕಥೆಯನ್ನು ಪೂರ್ತಿಗೊಳಿಸಲು ಮಹಾಭಾರತದ ಅನುಬಂಧವಾಗಿ ಬಂದಿರುವ ಗ್ರಂಥವೆಂದು ಪರಿಗಣಿಸಲಾಗಿರುವ ಹರಿವಂಶವೂ ರಾಸಲೀಲಾ ಪ್ರಸಂಗವನ್ನು ಪ್ರಸ್ತಾಪಿಸಿರುವುದರಿಂದ ಕೃಷ್ಣನ ನಿಂದನೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಪ್ರಯತ್ನ ಮಾಡಬಹುದು. ಈ ನಿಂದನೆಯು ಭಾಗವತವನ್ನು ಆಧರಿಸಿರುವುದರಿಂದ ಇದರ ಖಂಡನೆಯೂ ಕೂಡ ಭಾಗವತವನ್ನೇ ಆಧರಿಸಿ ನಡೆಯಬೇಕು.
ಕೃಷ್ಣನ ಮಹತ್ವ ಹಾಗೂ ದೈವತ್ವವು ಗೋಪಿಯರು ಅರಿಯದ ವಿಷಯವೇನಲ್ಲ (ಭಾಗವತ ೧೦.೨೯.೩೨, ೩೩, ೩೭; ೧೦. ೩೧.೩, ೪, ೯ ನೋಡಿ). ವ್ರಜ(ವೃಂದಾವನ)ದ ಎಲ್ಲ ಜನರಂತೆ ಅವರೂ ಕೃಷ್ಣನ ದಿವ್ಯ ಸೌಂದರ್ಯಕ್ಕೆ ಮಾರುಹೋಗಿದ್ದರು. ಅವರ ಸ್ತ್ರೀತ್ವದಿಂದಾಗಿ ಅವರು ಅವನನ್ನು ತಮ್ಮ ಪ್ರಿಯತಮನೆಂದು ಭಾವಿಸಿ ಅವನ ಬಳಿಸಾರುತ್ತಿದ್ದರು. ಈ ತರದ ಪ್ರೇಮ ಮಾನವ ಇತಿಹಾಸದಲ್ಲಿ ಅಪರಿಚಿತವಾದುದೇನಲ್ಲ. ಪಾಶ್ಚಾತ್ಯ ಹಾಗೂ ಪೌರ್ವಾತ್ಯ ದೇಶಗಳ ಎಷ್ಟೋ ಜನ ಅನುಭಾವೀ ಸಂತರು ಭಗವಂತನಲ್ಲಿ ಈ ರೀತಿಯ ಸತಿ-ಪತಿ ಭಾವವನ್ನು ತಾಳಿದ್ದರು. ಭಾರತ ದೇಶದ ಆಂಡಾಳ್, ಅಕ್ಕಮಹಾದೇವಿ, ಮೀರಾಬಾಯಿ, ಸ್ಪೇನ್ ದೇಶದ ಆವಿಳಾದ ಸಂತ ತೆರೀಸ, ಇರಾಕ್ ದೇಶದ ಬಾಸ್ರಾದ ರಬಿಯಾ, ಇವರೆಲ್ಲ ಆ ಭಾವವನ್ನು ತಾಳಿದ್ದ ಪ್ರಸಿದ್ಧ ಅನುಭಾವೀ ಸಂತರು.
ಕೃಷ್ಣ ಸ್ತ್ರೀ ಲೋಲನೂ ಅಲ್ಲ, ವಿಟನೂ ಅಲ್ಲ, ಅವನ ಬಳಿಸಾರ್ದ ಗೋಪಿಯರ ಪ್ರೇಮವು ಕಾಮತೃಷ್ಣೆಯಿಂದ ಕಳಂಕಿತವಾಗಿತ್ತು. ಶುದ್ಧ ಪ್ರೇಮವನ್ನು ಕಲುಷಿತಗೊಳಿಸುವ ಇದೊಂದು ರೋಗವೆಂದರಿತ ಕೃಷ್ಣನು ಅವರನ್ನು ಕನಿಕರದಿಂದ ಕಂಡು ತಾನು ಆ ರೋಗದಿಂದ ನಿರ್ಲಿಪ್ತನಾಗಿ ಅವರ ಪ್ರೇಮಕ್ಕೆ ಸ್ಪಂದಿಸಿದನು (ಭಾಗವತ ೧೦.೩೩.೨೬ ನೋಡಿ). ಅದು ಹೆಚ್ಚು ಕಡಿಮೆ ಮಕ್ಕಳ ಚೇಷ್ಟೆಗಳಿಗೆ ಅವರ ಪಾಲಕರೂ ಶಿಕ್ಷಕರೂ ಸಹಜವಾಗಿ ಎಂಬಂತೆ, ಆದರೂ ಗಂಭೀರವಾಗಿ ಸ್ಪಂದಿಸಿ, ಕ್ರಮೇಣ ಅವರನ್ನು ವಿವೇಕದ ಹಾದಿಗೆ ಒಯ್ಯುವಂತಿತ್ತು. ಕೃಷ್ಣನ ಈ ತಂತ್ರ ಸಫಲವಾಗಿ ಗೋಪಿಯರು ನಿಷ್ಕಲ್ಮಶವಾದ ಪ್ರೇಮದಲ್ಲಿ ಪದಾರ್ಪಣ ಮಾಡುವಂತಾಯಿತು (ಭಾಗವತ ೧೦.೪೭.೧೮, ೪೬; ೧೦.೮೨.೪೦, ೪೮, ೪೯ನ್ನು ನೋಡಿ). ಗೋಪಿಯರು ಜಾರೆಯರಾಗಿರಲಿಲ್ಲ; ಪತಿನಿಷ್ಠರಾಗಿದ್ದರು. ತಮ್ಮ ಪತಿಗಳ ಹೊರತಾಗಿ ಅವರಿಗೆ ಪ್ರೇಮವಿದ್ದದ್ದು ಕೃಷ್ಣನಲ್ಲಿ ಮಾತ್ರ, ಮತ್ತಾರಲ್ಲೂ ಇರಲಿಲ್ಲ. ಕೃಷ್ಣನನ್ನು ಅವರು ಪ್ರೇಮಿಸಿದ್ದು ಅವನು ಜಗತ್ ಪ್ರಭುವೆಂದು ಪೂರ್ಣವಾಗಿ ಅರಿತಿದ್ದರಿಂದ.
ಅತ್ಯಾಶ್ಚರ್ಯದ ಸಂಗತಿಯೆಂದರೆ, ವ್ರಜದ (ವೃಂದಾವನದ) ಗೋಪರು ತಮ್ಮ ಪತ್ನಿಯರು ತಮ್ಮಿಂದ ದೂರಮಾಡಲ್ಪಟ್ಟರೆಂದು ಎಂದೂ ಭಾವಿಸಲಿಲ್ಲ (ಭಾಗವತ ೧೦.೩೩.೩೮).
ಇದೆಲ್ಲ ಕೃಷ್ಣ-ಗೋಪಿಯರ ವೈಯಕ್ತಿಕ ದೃಷ್ಟಯಿಂದ ನೋಡಿದಾಗ ಸರಿ ಆದರೆ ಸಮಾಜದ ಸಂಪ್ರದಾಯದ ದೃಷ್ಟಿಯಿಂದ ನೋಡಿದಾಗ ಕೃಷ್ಣನು ಧರ್ಮದ ಹದ್ದುಮೀರಿ ನಡೆದಂತಾಗಲಿಲ್ಲವೇ? ಹೌದೆನ್ನುವುದಾದರೆ ಅವನು ಲೋಕಕ್ಕೆ ಶತಶತಮಾನಗಳ ಕಾಲ ಒಂದು ಕೆಟ್ಟ ಆದರ್ಶವನ್ನು ನೀಡಿ ಹೋದಂತಾಗಲಿಲ್ಲವೇ? ಭಾಗವತದ ಕಥೆಯನ್ನು ಹೇಳುತ್ತಿದ್ದ ಶುಕಮುನಿಯನ್ನು ಪರೀಕ್ಷಿದ್ರಾಜನು ಕೇಳಿದ ಪ್ರಶ್ನೆಯೂ ಇದೇ (ಭಾಗವತ ೧೦.೩೩.೨೭-೨೯).
ಈ ಪ್ರಶ್ನೆಗೆ ಉತ್ತರ ನೀಡುತ್ತಾ ಶುಕನು ಮಾನವರನ್ನು ಈಶ್ವರರು (ಅವತಾರ ಪುರುಷರು), ಜೀವನ್ಮುಕ್ತರು, ಸಾಮಾನ್ಯರು (ಸಂಸಾರಿಗಳು) ಎಂದು ಮೂರು ವಿಧವಾಗಿ ವಿಂಗಡಿಸುತ್ತಾನೆ.
ದೇಹದಿಂದಿರುವಾಗಲೇ ದೈವಸಾಕ್ಷಾತ್ಕಾರವಾದವರು ಜೀವನ್ಮುಕ್ತರು. ಉಪನಿಷತ್ಗಳಂಥ ವೈದಿಕ ಗ್ರಂಥಗಳ ಪ್ರಕಾರ ಅಂಥವರು ಧರ್ಮಕ್ಕೂ ಅತೀತರಾದ್ದರಿಂದ ಲೋಕದ ವಿಧಿ-ನಿಷೇಧಗಳಿಗೆ ಬದ್ಧರಲ್ಲ. ಘೋರಪಾಪಗಳಿಂದಲೂ ಅವರು ಕಲುಷಿತರಾಗರು (ಕೌಷೀತಕಿ ಉಪನಿಷದ್ ೩.೧).
ಜೀವನ್ಮುಕ್ತರಿಗೆ ಈ ಶಕ್ತಿ ಲಭ್ಯವಾಗುವುದು ಅವರ ಚೇತನ ಭಗವಂತನ ಪಾದಾರವಿಂದಗಳಲ್ಲಿ ಧ್ಯಾನಮಗ್ನವಾಗಿರುವುದರಿಂದ. ಸಾಕ್ಷಾತ್ ಈಶ್ವರನೇ ಅದ ಕೃಷ್ಣನ ಬಗ್ಗೆ ಇನ್ನು ಹೇಳುವುದೇನಿದೆ! ಅವನು ಲೋಕಕಲ್ಯಾಣಾರ್ಥವಾಗಿ ಅಸಾಧಾರಣವಾದ ಉದ್ದೇಶಗಳನ್ನು ಸಾಧಿಸಬೇಕಾದಾಗ ಧರ್ಮದ ನಿಯಮಗಳಿಗೆ ಅತೀತನಾಗಿ ನಿಲ್ಲಬಲ್ಲ. ಅವನಂಥ ಈಶ್ವರ ಕಾರ್ಯಗಳನ್ನು ಸಾಮಾನ್ಯ ಜನರು ಅನುಕರಿಸಲಾರರು, ಅನುಕರಿಸಬಾರದು. ಶಿವನು ಮಾರಕ ವಿಷವಾದ ಹಾಲಾಹಲವನ್ನು ಕುಡಿದನು. ಬೆಂಕಿ ತಾನು ಮುಟ್ಟಿದ್ದನ್ನೆಲ್ಲಾ ಸುಡುವುದು. ಸಾಮಾನ್ಯ ಜನಕ್ಕೆ ಇಂಥಾದ್ದು ಸಾಧ್ಯವೇ? ಕೃಷ್ಣನು ಗೋಪಿಯರ ಪ್ರೇಮಕ್ಕೆ ಸ್ಪಂದಿಸಿದ್ದು ಗೋಪಿಯರಿಗಾಗಿ, ಸುತರಾಂ ತನಗಾಗಿ ಅಲ್ಲ. ಹಾಗೆ ಸ್ಪಂದಿಸುವಾಗ ಪ್ರತಿಯೊಬ್ಬ ಗೋಪಿಯನ್ನೂ ನಲಿಸುವುದಕ್ಕಾಗಿ ತನ್ನ ಮಾಯಾ ಶಕ್ತಿಯಿಂದ ಅನುರೂಪ ಕೃಷ್ಣರ ಸಂಖ್ಯೆಯನ್ನು ಹೆಚ್ಚಿಸಿಕೊಂಡದ್ದು ಮಾತ್ರವಲ್ಲ, ಗೋಪಿಯರ ರೂಪವನ್ನು ತಾಳಿ ಅದೇ ಸಮಯದಲ್ಲಿ ಅವರವರ ಗೃಹಕೃತ್ಯಗಳನ್ನು ನಡೆಸುತ್ತಾ ಅವರವರ ಮನೆಯಲ್ಲೂ ಇದ್ದನು. ಆದ್ದರಿಂದ ಕೃಷ್ಣನಂಥ ಈಶ್ವರರು ನಡೆಸುವ, ಧರ್ಮಕ್ಕೆ ಅತೀತವಾದ ಕಾರ್ಯಗಳನ್ನು ಸಾಮಾನ್ಯ ಜನ ಅನುಕರಿಸಲಾರರು, ಅನುಕರಿಸಬಾರದು. ಯಾರಾದರೂ ಕೃಷ್ಣ ಮಾಡಿದ್ದನ್ನೆಲ್ಲಾ ಮಾಡಬಲ್ಲವನಾದರೆ ಅವನು ಕೃಷ್ಣನಂತೆ ಈಶ್ವರನೇ ಆದುದರಿಂದ ಅವನು ಧರ್ಮಕ್ಕೆ ಅತೀತನಾಗಿ ವರ್ತಿಸಬಲ್ಲ!
ಅಕಳಂಕ ಚೇತನರೂ ಅಕಳಂಕರಲ್ಲದವರನ್ನು ಎಂದಿಗೂ ಮನ್ನಿಸದವರೂ ಆದ ಸ್ವಾಮಿ ವಿವೇಕಾನಂದರು ವೃಂದಾವನದ ಕೃಷ್ಣನ ಬಗ್ಗೆ ಆಡಿರುವ ದಿವ್ಯ ನುಡಿಗಳಿವು: "ಆಹ್! ಅರಿತುಕೊಳ್ಳಲು ಅತ್ಯಂತ ಕಷ್ಟವಾದ ಅವನ ಅದ್ಭುತ ಜೀವನ ಪಥವನ್ನು ಜಿತೇಂದ್ರಿಯರೂ ಪರಿಶುದ್ಧ ಹೃದಯರೂ ಇನ್ನೂ ಆಗಿಲ್ಲದವರು ಯಾರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಾರದು. ವೃಂದಾವನದ ಆ ಚೆಲುವಿನ ಕ್ರೀಡೆಯಲ್ಲಿ ಪ್ರತಿಮಾರೂಪದಲ್ಲಿ ತೋರ್ಪಟ್ಟ ಆ ಪ್ರೇಮದ ಅನಂತತೆಯನ್ನು ಪ್ರೇಮಮತ್ತರಾಗಿಲ್ಲದವರೂ, ಜೀವನವೇ ಪ್ರೇಮಮಯವಾಗಿಲ್ಲದವರೂ ಅರಿಯಲಾರರು! ಇಂದು ಅಥವಾ ಮುಂದೆ ಏನನ್ನೂ ಬಯಸದ, ಸ್ವರ್ಗವನ್ನೂ ಬೇಡ ಎನ್ನುವ, ಶುದ್ಧಪ್ರೇಮದ ಮೂರ್ತರೂಪರಾದ ಗೋಪಿಯರ ಪ್ರೇಮಮಯ ಹೃದಯದ ತುಡಿತವನ್ನು ಅರಿಯಬಲ್ಲವರಾರು? ಪ್ರೇಮಕ್ಕಾಗಿಯೇ ಪ್ರೇಮ, ಕರ್ತವ್ಯಕ್ಕಾಗಿಯೇ ಕರ್ತವ್ಯ ಎಂಬ ಈ ದಿವ್ಯ ಆದರ್ಶವು ಧರ್ಮದ ಇತಿಹಾಸದಲ್ಲಿ ಒಂದು ಮಹಾ ರಸಘಟ್ಟ. ಇದು ಮೊಟ್ಟಮೊದಲಿಗೆ ಮಾನವ ಇತಿಹಾಸದಲ್ಲಿ ಹೊಮ್ಮಿ ಬಂದದ್ದು, ಅವತಾರ ಶ್ರೇಷ್ಠನಾದ ಕೃಷ್ಣನ ಮುಖದಿಂದ. ಅದೂ ಭಾರತದ ನೆಲದಲ್ಲಿ."*
(*The Complete Works of Swami Vivekananda, Calcutta, Advaita Ashrama, 1984, Vol. 3, P. 257)
ಕೃಷ್ಣ-ಗೋಪಿಯರ ಸಂಬಂಧದ ಬಗೆಗಿನ ಟೀಕೆಗೆ ಸಂಬಂಧಿಸಿದುದೇ ಆದ ಇನ್ನೊಂದು ಟೀಕೆ ಅವನ ೧೬,೦೦೦ ಪತ್ನಿಯರನ್ನು ಕುರಿತದ್ದು. ಯಾವ ನಿಟ್ಟಿನಿಂದ ನೋಡಿದರೂ ಅಷ್ಟೊಂದು ಜನ ಪತ್ನಿಯರನ್ನು ಹೊಂದಿರುವುದು ತತ್ತರಗೊಳಿಸುವ ಸಂಗತಿಯೇ. ’ಅಷ್ಟಮಹಿಷಿ’ಯರೆನಿಸಿಕೊಂಡ ಅವನ ಎಂಟು ಜನ ರಾಣಿಯರಲ್ಲಿ ರುಕ್ಮಿಣೀ ಮತ್ತು ಸತ್ಯಭಾಮ ಇವರು ಮುಖ್ಯರಾದವರು, ಉಳಿದ ೧೬,೦೦೦ ಜನ ಅವನು ನರಕಾಸುರನ ಬಂಧನದಿಂದ ಬಿಡಿಸಿದ ರಾಜಕುವರಿಯರು. ತಮ್ಮ ಬಂಧುಗಳಿಂದ ತಿರಸ್ಕರಿಸಲ್ಪಟ್ಟ ಅವರಿಗೆ ಆಶ್ರಯ ನೀಡುವ ಸಲುವಾಗಿ ಅವರನ್ನು ತಾನೇ ಮದುವೆಯಾಗಬೇಕಾಯಿತು. ಅರಸರಲ್ಲಿ ಬಹುಪತ್ನಿತ್ವಕ್ಕೆ ಆಗ ಅವಕಾಶವಿತ್ತು. ದೇವರ್ಷಿಯಾದ ನಾರದನು ಒಮ್ಮೆ ಅ ಪತ್ನಿಯರ ಮನೆಗಳಿಗೆ ಹೋಗಿದ್ದಾಗ ಪ್ರತಿಯೊಬ್ಬರ ಮನೆಯಲ್ಲೂ ಕೃಷ್ಣನನ್ನು ಕಂಡದ್ದು ಗಮನಿಸಬೇಕಾದ ಸಂಗತಿ (ಭಾಗವತ ೧೦.೬೯)
ಕೆಲವೊಮ್ಮೆ ಈ ಪ್ರಸಂಗಕ್ಕೆ ಗೂಡಾರ್ಥವನ್ನು ನೀಡುವುದೂ ಉಂಟು. ೧೬,೦೦೦ ಎಂದರೆ ವಾಸ್ತವವಾಗಿ ಹದಿನಾರೇ, ಅದರ ಮುಂದಿನ ಮೂರು ಸೊನ್ನೆಗಳು ಕವಿ ಕಲ್ಪಿತ. ಮಾನವ ವ್ಯಕ್ತಿತ್ವದ ೧೬ ಅಂಗಗಳೇ ಅವು, ಜೀವಾತ್ಮದೊಡನೆ ಸಂಬಂಧವುಳ್ಳವು. ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಪಂಚಪ್ರಾಣಗಳು ಮತ್ತು ಮನಸ್ಸು - ಈ ಹದಿನಾರು ಅಂಗಗಳನ್ನು ಪತ್ನಿಯರೆಂದು ಅಲಂಕಾರಿಕವಾಗಿ ಹೇಳಲಾಗಿದೆ. ಅದ್ವೈತ ವೇದಾಂತದ ಪ್ರಕಾರ ಜೀವಾತ್ಮವು ಪರಮಾತ್ಮವೇ ಆಗಿರುವುದರಿಂದ, ಪರಮಾತ್ಮನಾದ ಕೃಷ್ಣನು ೧೬(೦೦೦) ಪತ್ನಿಯರನ್ನುಳ್ಳವ ಎನ್ನುವುದು ಕವಿಯ ಅಲಂಕಾರಿಕ ನಿರೂಪಣೆ.
ಕೃಷ್ಣ-ಗೋಪಿಯರ ಪ್ರೇಮವನ್ನು ಅಲಂಕಾರಿಕವಾಗಿ ಚಿತ್ರಿಸಲಾಗಿದೆ. ಕೃಷ್ಣನೇ ಪರಮಾತ್ಮನೆಂದೂ ಅವನಿಂದ ದೂರವಾಗಿ ಅವನೊಡನೆ ಪುನರ್ಮಿಲನಕ್ಕಾಗಿ, ಅವನ ಸಾಯುಜ್ಯಕ್ಕಾಗಿ ಪರಿತಪಿಸುವ ಗೋಪಿಯರೇ ಜೀವಾತ್ಮರೆಂದು ಭಾವ.
Comments
ಶ್ರೀಧರ ಬಂಡ್ರಿಯವರೇ, ನಮಸ್ಕಾರ.
ಶ್ರೀಧರ ಬಂಡ್ರಿಯವರೇ, ನಮಸ್ಕಾರ. ಕುತ್ಸಿತ ಟೀಕೆಗಳು, ನಿಂದನೆಗಳು ಒಂದು ರೀತಿಯಲ್ಲಿ ಉಪಕಾರವನ್ನೇ ಮಾಡುತ್ತವೆ. ಆಗ ಇಂತಹ ಕೃತಿಗಳೂ ಹೊರಬರುತ್ತವೆ. ನಿಮ್ಮ ಈ ಬರಹಗಳಿಗೂ ಇವೇ ಪ್ರೇರಣೆ. ಮುಂದುವರೆಸಿರಿ.
ನಿಂದಕರ ವಂದಿಸುವೆ ನಡೆಯ ತೋರಿಹರು|
ಮನೆಮುರುಕರಿಂ ಮನವು ಮಟ್ಟವಾಗಿಹುದು||
ಕುಹಕಿಗಳ ಹರಸುವೆ ಮತ್ತೆ ಪೀಡಕರ|
ಜರೆವವರು ಗುರುವಾಗರೇ ಮೂಢ||
In reply to ಶ್ರೀಧರ ಬಂಡ್ರಿಯವರೇ, ನಮಸ್ಕಾರ. by kavinagaraj
ನಿಮ್ಮ ಮಾತು ನಿಜ ಕವಿಗಳೆ.
ನಿಮ್ಮ ಮಾತು ನಿಜ ಕವಿಗಳೆ. ನಿಂದಕರೇ ಹಲವಾರು ಬಾರಿ ಗುರುವಾಗುತ್ತಾರೆ. ಅವರು ಎತ್ತಿದ ಪ್ರಶ್ನೆಗೆ ಉತ್ತರ ಹುಡುಕುತ್ತಾ ನಿಜವಾದ ಸತ್ಯವನ್ನು ನಾವು ಅರಿಯುತ್ತೇವೆ. ಆದರೆ ಒಂದೇ ಒಂದು ಭಯವೇನೆಂದರೆ ಅವರು ಕೆಲವೊಮ್ಮೆ ಹೇಳುವ ಅರ್ಧಂಬರ್ಧ ಸತ್ಯಗಳಿಂದ ವಿಷಯಗಳ ಕುರಿತಾದ ಸಂಪೂರ್ಣ ತಿಳುವಳಿಕೆ ಇಲ್ಲದವರು ಗೊಂದಲದಲ್ಲಿ ಬೀಳಬಹುದು. ಅಂತಹವರಿಗೆ ಧೈರ್ಯ ತುಂಬುವುದು ಮತ್ತು ಅವರ ದೃಷ್ಟಿಕೋನವನ್ನು ಇನ್ನಷ್ಟು ವಿಶಾಲವಾಗಿಸುವುದೇ ಈ ಬರಹಗಳ ಉದ್ದೇಶ. ದೈವವಶಾತ್ ನನಗೆ ಇಂತಹ ಗೊಂದಲಗಳು ಎದ್ದಾಗಲೆಲ್ಲ ರಾಮಕೃಷ್ಣ ಆಶ್ರಮದ ಪುಸ್ತಕಗಳಲ್ಲಿ ಉತ್ತರ ಸಿಕ್ಕು ಮನಸ್ಸು ಪ್ರಶಾಂತವಾಗುತ್ತದೆ. ಅದನ್ನೇ ನಾನು ನಿಮ್ಮಂತಹ ಸಹೃದಯೀ ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ. ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಮತ್ತು ಸಮಯೋಚಿತವಾದ ಉವಾಚಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಶ್ರೀಧರ ಬಂಡ್ರಿಯವರೇ, ನಮಸ್ಕಾರ. by kavinagaraj
ನಿಮ್ಮ ಮಾತು ನಿಜ ಕವಿಗಳೆ.
ನಿಮ್ಮ ಮಾತು ನಿಜ ಕವಿಗಳೆ. ನಿಂದಕರೇ ಹಲವಾರು ಬಾರಿ ಗುರುವಾಗುತ್ತಾರೆ. ಅವರು ಎತ್ತಿದ ಪ್ರಶ್ನೆಗೆ ಉತ್ತರ ಹುಡುಕುತ್ತಾ ನಿಜವಾದ ಸತ್ಯವನ್ನು ನಾವು ಅರಿಯುತ್ತೇವೆ. ಆದರೆ ಒಂದೇ ಒಂದು ಭಯವೇನೆಂದರೆ ಅವರು ಕೆಲವೊಮ್ಮೆ ಹೇಳುವ ಅರ್ಧಂಬರ್ಧ ಸತ್ಯಗಳಿಂದ ವಿಷಯಗಳ ಕುರಿತಾದ ಸಂಪೂರ್ಣ ತಿಳುವಳಿಕೆ ಇಲ್ಲದವರು ಗೊಂದಲದಲ್ಲಿ ಬೀಳಬಹುದು. ಅಂತಹವರಿಗೆ ಧೈರ್ಯ ತುಂಬುವುದು ಮತ್ತು ಅವರ ದೃಷ್ಟಿಕೋನವನ್ನು ಇನ್ನಷ್ಟು ವಿಶಾಲವಾಗಿಸುವುದೇ ಈ ಬರಹಗಳ ಉದ್ದೇಶ. ದೈವವಶಾತ್ ನನಗೆ ಇಂತಹ ಗೊಂದಲಗಳು ಎದ್ದಾಗಲೆಲ್ಲ ರಾಮಕೃಷ್ಣ ಆಶ್ರಮದ ಪುಸ್ತಕಗಳಲ್ಲಿ ಉತ್ತರ ಸಿಕ್ಕು ಮನಸ್ಸು ಪ್ರಶಾಂತವಾಗುತ್ತದೆ. ಅದನ್ನೇ ನಾನು ನಿಮ್ಮಂತಹ ಸಹೃದಯೀ ಓದುಗರೊಂದಿಗೆ ಹಂಚಿಕೊಳ್ಳುತ್ತೇನೆ. ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಮತ್ತು ಸಮಯೋಚಿತವಾದ ಮೂಢ ಉವಾಚಕ್ಕೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ನಮಸ್ಕಾರ ಶ್ರೀಧರರಿಗೆ,
ನಮಸ್ಕಾರ ಶ್ರೀಧರರಿಗೆ,
ಒಂದೆಡೆ ಕೃಷ್ಣನ ವ್ಯಕ್ತಿತ್ವವನ್ನು ಸಾಮಾನ್ಯ ವ್ಯಕ್ತಿತ್ವಕ್ಕೆ ಸಮೀಕರಿಸಿ ದೋಷಾರೂಪಣೆಗೊಳಪಡಿಸಿದರೆ, ಮತ್ತೊಂದೆಡೆ ಈ ಕೃಷ್ಣ ಎನ್ನುವುದು ಒಂದು ವ್ಯಕ್ತಿತ್ವವನ್ನು ಮೀರಿದ ಮಹಾನ್ ಸಂಕೇತ, ಅದನ್ನು ಬರಿಯ ಸಾಮಾನ್ಯ ಮಾನವ ಗುಣಾವಗುಣಗಳ ನೆಲೆಗಟ್ಟಿನಲ್ಲಿ ನೋಡಿ ವಿವರಿಸಲಸಾಧ್ಯವೆಂಬುದನ್ನು ಮರೆತುಬಿಡುತ್ತಾರೆ. ಕೃಷ್ಣವೆಂಬುದು ಒಂದು ಬೆಳಕಿನ ಪುಂಜವಿದ್ದಂತೆ; ಸುತ್ತಲು ಬೆಳಕು ಚೆಲ್ಲುವ ಹವಣಿಕೆಯಲ್ಲಿ ಎಲ್ಲರನು ಸಂತೈಸಿ, ಓಲೈಸುವ ಹುನ್ನಾರದಲ್ಲಿ ಪವಾಡಗಳ ಮೇಲೆ ಪವಾಡಗಳ ಮಳೆ ಸುರಿಸುತ್ತ ಎಲ್ಲರನ್ನು ತಣಿಸಿದ - ಎಷ್ಟೊ ರಕ್ಕಸರ ದಮನದಿಂದ ಹಿಡಿದು, ಎಷ್ಟೊ ಗೋಪಿಯರ ಲೀಲೆಯ ತನಕ. ಬೆಳಕು ಚೆಲ್ಲುವ ದೀಪದ ಕೆಳಗಿನ ಕತ್ತಲು ನಿಸರ್ಗ ಸಹಜ ಪ್ರಕ್ರಿಯೆ; ಆದರೆ ಇಲ್ಲಿ ಆ ಕತ್ತಲು ಕೃಷ್ಣನ ವ್ಯಕ್ತಿತ್ವದ ನಿಗೂಢ ಭಾಗ - ಪ್ರಾಪಂಚಿಕ ನಿರೀಕ್ಷೆಗಳಿಗನುಸಾರವಾಗಿ ಬರಿಯ ಸಾಮಾನ್ಯನಂತೆ ನಡೆಯದೆ ಕೆಲವೊಮ್ಮೆ ಸಾಧಾರಣ, ಮತ್ತೆ ಕೆಲವೊಮ್ಮೆ ಅಸಾಧಾರಣ ಲೀಲೆಗಳನ್ನು ತೋರಿದ ಕೃಷ್ಣನ ಪಾತ್ರ, ಆ ಅವತರಣಿಕೆಗಾಗಿ ಹಿನ್ನಲೆಯಲ್ಲಿ ಅದೆಷ್ಟು ಸಿದ್ದತೆ, ಅನುಸಂಧಾನತೆ ಮಾಡಿಕೊಳ್ಳಬೇಕಿತ್ತೊ? ಅದರ ಕಾರ್ಯಾಕಾರಣದರಿವಿಲ್ಲದೆ ನಮಗೆ ತೋಚಿದಂತೆ ನಾವೆ ವಿಶ್ಲೇಷಿಸಿಕೊಂಡು, ದೋಷಾರೋಪಣೆ ಮಾಡಿದರೆ, ಅದು ಕೇವಲ ನಮ್ಮ ಪಕ್ವತೆಯ / ಅಪರಿಪಕ್ವತೆಯ ಮಿತಿಯ ಪ್ರಕಟಣೆಯಾದೀತಷ್ಟೆ ಹೊರತು ಸತ್ಯದ ಸುಳ್ಳಾಗಲಿ, ಸುಳ್ಳಿನ ಸತ್ಯವಾಗಲಿ ಆಗುವುದಿಲ್ಲ. ಎಂದಿನಂತೆ ತಮ್ಮ ಪ್ರಬುದ್ಧ ಲೇಖನ ವಿಚಾರ ಪ್ರಚೋದಕ, ಧನ್ಯವಾದಗಳು.
-ನಾಗೇಶ ಮೈಸೂರು, ಸಿಂಗಪುರದಿಂದ
In reply to ನಮಸ್ಕಾರ ಶ್ರೀಧರರಿಗೆ, by nageshamysore
ಕೃಷ್ಣನ ವ್ಯಕ್ತಿತ್ವವನ್ನು ಬಹಳ
ಕೃಷ್ಣನ ವ್ಯಕ್ತಿತ್ವವನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದೀರಿ, ನಾಗೇಶ್ ಅವರೆ. ನಮ್ಮ ಬುದ್ದಿಮತ್ತೆಗೆ ಮೀರಿದ ಅವನ ವ್ಯಕ್ತಿತ್ವವನ್ನು ನಮ್ಮ ಪರಿಮಿತ ಬುದ್ಧಿವಂತಿಕೆಯ ಮೂಸೆಯಲ್ಲಿ ಕಟ್ಟಿಹಾಕಲು ಪ್ರಯತ್ನಿಸುವುದು ಮೂರ್ಖತನವೇ ಸರಿ. ಧನ್ಯವಾದಗಳು ಮತ್ತು ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ