ಚೇಳು

ಚೇಳು

ಪುಸ್ತಕದ ಲೇಖಕ/ಕವಿಯ ಹೆಸರು
ವಸುಧೇಂದ್ರ
ಪ್ರಕಾಶಕರು
ಛಂದ ಪುಸ್ತಕ
ಪುಸ್ತಕದ ಬೆಲೆ
65

“ಚೇಳು” ಇತ್ತೀಚಿನ ಕತೆಗಾರರಲ್ಲಿ ಮುಖ್ಯರಾದ ವಸುಧೇಂದ್ರರ ಕಥಾಸಂಕಲನ. ಇದಕ್ಕೆ ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ ಬಂದಿದೆ. ಇದರಲ್ಲಿ ಒಟ್ಟು ಏಳು ಕತೆಗಳಿವೆ. ವಸ್ತು ಹಾಗೂ ನಿರೂಪಣೆಯಲ್ಲಿ ಹೊಸತನವನ್ನು ತಮ್ಮ ಕತೆಗಳಲ್ಲಿ ತರುವ ವಸುಧೇಂದ್ರ ನಮ್ಮ ನಡುವಿನ ಮುಖ್ಯ ಕತೆಗಾರ. ಈ ಸಂಕಲನದ ಕತೆಗಳಲ್ಲಿ ಸಾಫ್ಟ್‍ವೇರ್‍ ಲೋಕದ ತಲ್ಲಣಗಳು, ಜಾಗತೀಕರಣದ ಪ್ರಭಾವಗಳು ಹೇಗೆ ಬದುಕನ್ನು ಆವರಿಸಿವೆ ಎಂಬುದನ್ನು ಕಟ್ಟಿಕೊಡುತ್ತಾರೆ.

ಮೊದಲ ಕತೆ ‘ಚೇಳು’ ವೆಂಕಮ್ಮ ಎಂಬ ಹೆಣ್ಣೊಬ್ಬಳ ಬದುಕಿನ ಪಲ್ಲಟಗಳನ್ನು, ಪಾರಂಪರಿಕ ಜ್ಞಾನಗಳು ಜಾಗತೀಕರಣದ ಭರಾಟೆಯಲ್ಲಿ ಮೂಲೆಗುಂಪಾಗುವುದನ್ನು ಹೇಳುತ್ತವೆ. ಮದುವೆಯಾಗಿ ಕೆಲ ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಕಾರಣಕ್ಕೆ ಅವಳ ಗಂಡ ಕೋಮಣ್ಣ ಹೇಳಿದ, ಮಾಡಿಸಿದ ವ್ರತ,ಪೂಜೆಗಳನ್ನೆಲ್ಲ ಮಾಡಿದರೂ ಪ್ರಯೋಜನವಾಗುವುದಿಲ್ಲ. ಕಡೆಗೆ ತನ್ನೂರಿಗೆ ಬಂದ ಭೈರಾಗಿಯೊಬ್ಬನನ್ನು ಕೋಮಣ್ಣ ತನ್ನ ಸಮಸ್ಯೆ ಪರಿಹರಿಸುವಂತೆ ಕೇಳಿಕೊಳ್ಳುತ್ತಾನೆ. ಮೊದಲಿಗೆ ನಿರಾಕರಿಸಿದ ಭೈರಾಗಿ ನಂತರ ಕೋಮಣ್ಣನ ಬಲವಂತಕ್ಕೆ ಮಣಿಯುತ್ತಾನೆ. ಮೂರು ದಿನಗಳ ಪೂಜೆಗೆ ವೆಂಕಮ್ಮನನ್ನು ರಾತ್ರಿ ಒಬ್ಬಳನ್ನೇ ಕಳಿಸಲು ಹೇಳುತ್ತಾನೆ. ಮೊದಲ ರಾತ್ರಿಯ ನಂತರವೇ ವೆಂಕಮ್ಮ ಮತ್ತೆ ಹೋಗಲು ನಿರಾಕರಿಸಿದರೂ ಕೋಮಣ್ಣ ಬಲವಂತದಿಂದ ಕಳಿಸಿಕೊಡುತ್ತಾನೆ. ನಂತರ ಅನುಮಾನ ಬಂದು ಅವಳನ್ನು ಹಿಂಬಾಲಿಸಿದಾಗ ನಡೆಯುತ್ತಿರುವ ಸಂಗತಿ ಬಯಲಾಗುತ್ತದೆ. ಹೆಂಡತಿಯನ್ನು ತಪ್ಪಿತಸ್ಥಳನ್ನಾಗಿ ಮಾಡಿ ಅವಳ ಸಂಬಂಧ ಕಡಿದುಕೊಳ್ಳುತ್ತಾನೆ. ಮಗಳ ವಿಷಯ ತಿಳಿದ ತಂದೆತಾಯಿಗಳು ಊರಿಂದ ಬಂದು ಅವಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ತಾಯಿ ಮಗಳ ವರ್ತನೆಗೆ ರೋಸಿ ಹೀಗೇಕೆ ಮಾಡಿದೆ ಎಂದು ಕೇಳಿದಾಗ ವೆಂಕಮ್ಮ ‘ಹೇಗಾದರೂ ಮಕ್ಕಳಾಗಲಿ ಅನ್ನಿಸಿತು’ ಎಂದು ತಣ್ಣಗೆ ಉತ್ತರಿಸುತ್ತಾಳೆ. ಅಲ್ಲಿಂದ ಅವಳ ಬದುಕಿನಲ್ಲಿ ಬಂಧು-ಭಾಂದವರೆಲ್ಲ ದೂರವಾಗಿ ಒಂಟಿಯಾಗುತ್ತಾಳೆ. ಭೈರಾಗಿ ಹೇಳಿಕೊಟ್ಟ ಚೇಳಿನ ವಿಷವಿಳಿಸುವ ವೈದ್ಯ ಅವಳ ಬದುಕಿಗೆ ಆಧಾರವಾಗುತ್ತದೆ. ಆದರೆ ಚೇಳಿನ ಸಂತತಿಯನ್ನೇ ನಾಶ ಮಾಡಬಲ್ಲ ಔಷಧ ಬಂದು ವೆಂಕಮ್ಮ ಇಳಿವಯಸ್ಸಿನಲ್ಲಿ ಮತ್ತೆ ನಿರಾಶ್ರಿತಳಾಗುತ್ತಾಳೆ. ಊರಿಗೆ ಹೊಸಬರು ಬಂದಾಗ ‘ನಿಮ್ಮೂರಲ್ಲಿ ಚೇಳಿದ್ದರೆ ನನ್ನ ಕರೆದುಕೊಂಡು ಹೋಗಿ ವಿಷವಿಳಿಸುತ್ತೇನೆ’ ಎಂದು ಕೇಳಿಕೊಳ್ಳುವ ಸ್ಥಿತಿಗೆ ಬಂದು ನಿಲ್ಲುತ್ತಾಳೆ. ತನ್ನ ವೈದ್ಯದಿಂದ ಊರ ಜನರ ಪ್ರಾಣ ಕಾಪಾಡುವ ಸಂದರ್ಭದಲ್ಲಿ ಗೌರವದಿಂದ ನಡೆಸಿಕೊಳ್ಳುತ್ತಿದ್ದ ಮಂದಿ ಚೇಳನ್ನು ಕೊಲ್ಲುವ ಔಷಧ ಸಿಕ್ಕ ತಕ್ಷಣ ಆಕೆಯನ್ನು ತುಚ್ಛವಾಗಿ ಕಾಣಲಾರಂಭಿಸುತ್ತಾರೆ. ವೆಂಕಮ್ಮನಿಗೆ ತನ್ನ ಕೊನೆಗಾಲ ಬಂತೆಂದು ಅನ್ನಿಸಲಾರಂಭಿಸುತ್ತದೆ. ತನಗೆ ತಿಳಿದ ವಿದ್ಯೆ ತನ್ನೊಂದಿಗೆ ನಾಶವಾಗಬಾರದೆಂದು ಯಾರಿಗಾದರೂ ಹೇಳಿಕೊಡೋಣವೆಂದು ಅಂದುಕೊಂಡರು ಅವಳಿಂದ ವಿದ್ಯೆ ಕಲಿಯಲು ಯಾರೂ ಸಿಗದೆ ಆಕೆ ಅದೇ ಚೇಳಿನ ಔಷಧ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

‘ಕ್ಷಿತಿಜ ಹಿಡಿಯ ಹೊರಟವರು’, ‘ಗುಳ್ಳೆ’, ‘ಹಲೋ ಭಾರತಿ’ ಕತೆಗಳು ನಮ್ಮ ಕಾಲದ ಹೊಸ ಉದ್ಯಮ ಸಾಫ್ಟವೇರ್‍, ಕಾಲ್‍ಸೆಂಟರ್‍ಗಳ ಬದುಕಿನ ತಲ್ಲಣ, ಭ್ರಮನಿರಸನ, ಸಂಬಂಧಗಳು, ನೈತಿಕತೆ ಇವುಗಳ ತಾಕಲಾಟಗಳನ್ನು ಹಿಡಿದಿಡುತ್ತವೆ. ಕ್ಷಿತಿಯ ಹುಡುಕಾಟ, ಭ್ರಮನಿರಸನ, ತಾಕಲಾಟಗಳು, ‘ಗುಳ್ಳೆ’ ಮತ್ತು ‘ಹಲೋ ಭಾರತಿ’ ನಾಯಕರ ಮಾನವೀಯತೆ, ನೈತಿಕತೆ, ಕರ್ತವ್ಯಗಳ ನಡುವಿನ ಘರ್ಷಣೆಗಳು ಬದಲಾದ ಜಾಗತಿಕ ಪರಿಸರದಲ್ಲಿ ವ್ಯಕ್ತಿ ಎದುರಿಸುತ್ತಿರುವ ಸವಾಲುಗಳನ್ನು ನಮ್ಮ ಮುಂದಿಡುತ್ತವೆ. ‘ಗುಳ್ಳೆ’ ಕಾರ್ಪೋರೆಟ್‍ ಜಗತ್ತಿನಲ್ಲಿ ಮನುಷ್ಯ ಕೂಡ ರಸ ಹಿಂಡಿದ ಕಬ್ಬಿನ ಜಲ್ಲೆಯಂತೆ ನಿರುಪಯುಕ್ತನಾಗುವ ವ್ಯವಸ್ಥೆಯ ಅಮಾನುಷ ಮುಖವನ್ನು ತೆರೆಯುತ್ತದೆ. ‘ಕ್ಷಿತಿಜ ಹಿಡಿಯ ಹೊರಟವರು’ ಕತೆ ಹಣ, ಕೀರ್ತಿಯ ಬೆನ್ನುಹತ್ತಿ ಡೆಡ್‍ಲೈನ್‍ಗಳನ್ನು ಮುಟ್ಟುವ ಆತಂಕದಲ್ಲಿ ಕಳೆದುಹೋಗುತ್ತಿರುವ ಸಮಯ ವಿವರಿಸಲಾಗದ ಖಿನ್ನತೆ, ಒಂಟಿತನಕ್ಕೆ ಬದುಕು ಬಲಿಯಾಗುತ್ತಿರುವುದನ್ನು ನಾಯಕಿ ಕ್ಷಿತಿಯ ಬದುಕಿನ ಹಿನ್ನೆಲೆಯಲ್ಲಿ ಕಟ್ಟಿಕೊಡುತ್ತದೆ. ‘ಹಲೋಭಾರತಿ’ ಕಾಲ್‍ಸೆಂಟರಿನ ಸುತ್ತ ಹೆಣೆದ ಕತೆ. ಪರದೇಶದ ಜನಕ್ಕೆ ಫೋನ್‍ಸೆಕ್ಸ್‍ ಮೂಲಕ ಮನರಂಜನೆ ನೀಡುವ ಪ್ರಾಜೆಕ್ಟ್ ಮಂಜೂರು ಮಾಡಿಸಿಕೊಳ್ಳಲು ನಡೆಸುವ ಸಿದ್ಧತೆಗಳು, ಪರೀಕ್ಷೆಗಳು, ಕಡಿಮೆ ಬೆಲೆಗೆ ದುಡಿಯಲು ಸಿಗುವ ಮಾನವ ಸಂಪನ್ಮೂಲ ಮತ್ತೊಂದು ಭಾಗದ ಜನರ ಹೊಟ್ಟೆಗೆ ಕುತ್ತು ತರುತ್ತಿರುವುದು ಇಂತಹ ಸಂಗತಿಗಳನ್ನು ತಿಳಿಸುತ್ತಾ ಹೋಗುತ್ತದೆ. ಪ್ರಕೃತಿ ಸಹಜ ರತಿಕ್ರಿಯೆಗೂ ಕಾಲ್‍ಸೆಂಟರ್‍ ತೆರೆವ ಜಾಗತೀಕರಣದ ವ್ಯಂಗ್ಯ, ಬದುಕು ಹಿಡಿಯುತ್ತಿರುವ ದಿಕ್ಕನ್ನು ಸೂಚಿಸುತ್ತದೆ.

‘ಅನಘ’ ನಮ್ಮ ಕಥಾಜಗತ್ತಿಗೆ ಅಪರೂಪವಾದ ‘ಸಲಿಂಗ ಕಾಮ’ದ ಎಳೆಯನ್ನು ಹೊಂದಿದೆ. ‘ಹೊಟ್ಟೆಯೊಳಗಿನ ಗುಟ್ಟು’ ಸಂಬಂಧಗಳ ಸಂಕೀರ್ಣತೆ ಹಾಗೂ ಅವುಗಳ ಮಾನವೀಯ ನೆರಳಿನಲ್ಲಿ ಬದುಕು ಸಾಗುವ ಪರಿಯನ್ನು ಹೇಳುವಂತದ್ದು. ನರಸಕ್ಕ ಮತ್ತು ಕಥಾನಾಯಕನ ತಾಯಿಯ ನಡುವಿನ ಸಂಬಂಧ ಮಾತಿನಳವಿಗೆ ನಿಲುಕದ್ದು. ತಾಯಿಯ ಶ್ರಾದ್ಧ ಮಾಡಿದ ದಿನ ಯಾರೂ ಬೇಡಿದರೂ ಪಿಂಡ ಮುಟ್ಟಲೊಲ್ಲದ ಕಾಗೆ ನರಸಕ್ಕನ ಪ್ರಾರ್ಥನೆಗೆ ಒಲಿದದ್ದು ಎಲ್ಲರ ಹುಬ್ಬೇರುವಂತೆ ಮಾಡುತ್ತದೆ. ಹಾಗಾದರೆ ಅವಳು ಬೇಡಿದ್ದೇನು ಸತ್ತ ತಾಯಿಯ ಆತ್ಮಕ್ಕೆ ಸಿಕ್ಕಿದ್ದೇನು ಎನ್ನುವ ಗುಟ್ಟು ಗುಟ್ಟಾಗಿಯೇ ಉಳಿದುಬಿಡುತ್ತದೆ. ಎಷ್ಟು ಕೇಳಿಕೊಂಡರು ನರಸಕ್ಕ ಬಾಯಿಬಿಡುವುದಿಲ್ಲ. ಸಂಬಂಧವನ್ನು ಸತ್ತವರೊಂದಿಗೆ ಕೂಡ ನಿಭಾಯಿಸುವ ಆಕೆಯ ವರ್ತನೆ ಕೇಶವ, ಪದ್ಮ ಮತ್ತಿತರಿಗೆ ಅರ್ಥವಾಗದ ಒಗಟಾಗಿ ಕಾಡುತ್ತದೆ. ‘ಶ್ರೀದೇವಿಯ ಮಹಾತ್ಮೆ’ ನಸು ಹಾಸ್ಯದ ಲೇಪನದೊಂದಿಗೆ ಮುಗ್ಧ ಹುಡುಗಿಯೊಬ್ಬಳ ಬದುಕಿನ ಪುಟ್ಟ ಚಿತ್ರವನ್ನು ಕಟ್ಟಿಕೊಡುತ್ತದೆ.

ಈ ಏಳು ಕತೆಗಳನ್ನು ಓದಿದ ನಂತರ ಮನಸ್ಸಿನಲ್ಲಿ ನಿಲ್ಲುವುದು ‘ಚೇಳು, ‘ಹಲೋ ಭಾರತಿ’, ಹಾಗೂ ‘ಹೊಟ್ಟೆಯೊಳಗಿನ ಗುಟ್ಟು’ ಕತೆಗಳು. ಕತೆಗಳ ನಿರೂಪಣೆ ಮನಸ್ಸಿಗೆ ತಟ್ಟುವಂತಿದೆ. ಕತೆಯ ವಸ್ತುವಿನಲ್ಲಿ ಹೊಸತನವಿದೆ. ನಸು ಹಾಸ್ಯದ ಲೇಪನ ಕತೆಗಳನ್ನು ಸರಾಗವಾಗಿ ಓದಿಸಿಕೊಳ್ಳುತ್ತಲೇ ಬದುಕು ಹಿಡಿಯುತ್ತಿರುವ ಹಾದಿಯ ಬಗ್ಗೆ ಚಿಂತನೆಗೆ ಹಚ್ಚುತ್ತವೆ.