ಬದನೆ ಕಾಯಿ ಚಟ್ಟಿ

ಬದನೆ ಕಾಯಿ ಚಟ್ಟಿ

ಬೇಕಿರುವ ಸಾಮಗ್ರಿ

ಹಸಿರು ಉದ್ದದ ಬದನೆ ಕಾಯಿ – 4, ದೋಸೆ ಅಕ್ಕಿ – 2 ಕಪ್, ಉದ್ದಿನ ಬೇಳೆ – ¼ ಕಪ್, ಧನಿಯ – ¼ ಕಪ್, ಜೀರಿಗೆ – 2 ಚಮಚ, ಬ್ಯಾಡಗಿ ಮೆಣಸಿನ ಕಾಯಿ – ಖಾರಕ್ಕೆ ತಕ್ಕಂತೆ, ಹುಣಿಸೆ ಹಣ್ಣು – 1 ಸಣ್ಣ ನೆಲ್ಲಿ ಗಾತ್ರ, ಉಪ್ಪು – ರುಚಿಗೆ ತಕ್ಕಂತೆ.

ತಯಾರಿಸುವ ವಿಧಾನ

ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಯನ್ನು ತೊಳೆದು ನೆನೆಸಿಡಿ. ಬದನೆ ಕಾಯಿಯನ್ನು ಉರುಟುರುಟಾಗಿ ತೆಳ್ಳಗೆ ಕತ್ತರಿಸಿಕೊಂಡು ನೀರಿನಲ್ಲಿ ಹಾಕಿಡಿ. ನೆನೆದ ಅಕ್ಕಿ, ಉದ್ದಿನ ಬೇಳೆ , ಧನಿಯ, ಜೀರಿಗೆ, ಒಣ ಮೆಣಸಿನ ಕಾಯಿ, ಹುಣಿಸೆ ಹಣ್ಣು ಮತ್ತು ಉಪ್ಪನ್ನು ಒಟ್ಟಿಗೆ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನುಣ್ಣಗೆ ರುಬ್ಬಿದ ಹಿಟ್ಟು ಸಾಧಾರಣ ದೋಸೆ ಹಿಟ್ಟಿನ ಹದ ಇರಬೇಕು. ಈ ಹಿಟ್ಟಿಗೆ ಕತ್ತರಿಸಿಕೊಂಡ ಬದನೆ ಕಾಯಿಯನ್ನು ಹಾಕಿ. ಅರ್ಧ ಗಂಟೆಯ ನಂತರ ದೋಸೆ ಕಾವಲಿಯ ಮೇಲೆ ತೆಳ್ಳಗೆ ಹರಡಿ ಎರಡೂ ಬದಿ ಬೇಯಿಸಿ. ರುಚಿಯಾದ ಚಟ್ಟಿ ತಯಾರಾಯಿತು. ಬಿಸಿ ಬಿಸಿ ಅನ್ನವನ್ನು ಕೊಬ್ಬರಿ ಎಣ್ಣೆಯೊಂದಿಗೆ ಕಲೆಸಿಕೊಂಡು ತುತ್ತಿಗೊಂದು ತುಂಡು ಚಟ್ಟಿಯನ್ನು ಸೇರಿಸಿಕೊಂಡು ತಿನ್ನಲು ರುಚಿಯಾಗಿರುತ್ತದೆ. ಖಾರ ಕಡಿಮೆ ಹಾಕಿ ಹಾಗೆಯೂ ತಿನ್ನಬಹುದು.

Comments

Submitted by Shobha Kaduvalli Thu, 05/23/2013 - 17:00

In reply to by ಸುಮ ನಾಡಿಗ್

ಹೌದು ಸುಮಾ ಅವರೇ... ಹೀರೆ ಕಾಯಿಯಿಂದಲೂ ಮಾಡಬಹುದು. ಹಾಗೆಯೇ ಚಗ್ತೆ ಸೊಪ್ಪು ಮತ್ತು ಕೆಸುವಿನ ಸೊಪ್ಪಿನಿಂದಲೂ ಇದೇ ವಿಧಾನದಿಂದ ಚಟ್ಟಿಯನ್ನು ಮಾಡಬಹುದು. ಎಲ್ಲವೂ ತುಂಬಾ ರುಚಿಯಾಗಿರುತ್ತದೆ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

Submitted by nageshamysore Wed, 05/22/2013 - 20:13

ನಾನೇನು ಪಾಕಶಾಸ್ತ್ರ ಪ್ರವೀಣನಲ್ಲದಿದ್ದರೂ (ತಿನ್ನಲಂತೂ ಅಡ್ಡಿಯಿಲ್ಲ!) - ಬದನೆಕಾಯಿಯ ಈ ಖಾದ್ಯ ವಿಶಿಷ್ಟವೆನಿಸುತ್ತದೆ. ಸಾಧಾರಣ ಬೇರೆ ತರಕಾರಿಗಳಲ್ಲಿ ಹೆಚ್ಚು ನೋಡಿದ / ತಿಂದ ಅಭ್ಯಾಸ :-)
-ನಾಗೇಶ ಮೈಸೂರು, ಸಿಂಗಾಪುರದಿಂದ

Submitted by smitha melkote Thu, 05/23/2013 - 03:36

ಬದನೇಕಾಯಿ ಚಟ್ಟಿ ಮಸಾಲೆಯೊಂದಿಗೆ ಬೆoದಿರುತ್ತೆಯೇ ? ನನ್ನ ಗೆಳತಿ ಕೋಸು ಹೆಚ್ಚಿ ಮತ್ತು ಈರುಳ್ಳಿ ಜೊತೆಗೆ ಮಾಡಿ ಕೊಟ್ಟಿದ್ದಾಳೆ . ಇದರ ಜೊತೆಗೆ ಚಟ್ನಿ ಬೇಡ ಅದಕ್ಕೆ ತಿಂಡಿಯ ಹೆಸರೇ ಚಟ್ಟಿ ಇರಬಹುದು. ಮಾಡುವ ವಿಧಾನ ತಿಳಿಸಿದ್ದಕ್ಕೆ ಧನ್ಯವಾದಗಳು .
ಸ್ಮಿತಾ

Submitted by Shobha Kaduvalli Thu, 05/23/2013 - 17:06

In reply to by smitha melkote

ತೆಳ್ಳಗಿನ ಬಿಲ್ಲೆಗಳನ್ನಾಗಿ ಕತ್ತರಿಸುವುದರಿಂದ ಬದನೆ ಕಾಯಿ ಬೆಂದಿರುತ್ತದೆ... ಅದೂ ಅಲ್ಲದೆ ಬದನೆ ಬಹಳ ಮೆದು ತರಕಾರಿಯಾದ್ದರಿಂದ ಬೇಗ ಬೇಯುತ್ತದೆ. ಮಸಾಲೆಯುಕ್ತ ಹಿತ್ತಾದ್ದರಿಂದ ಚಟ್ನಿಯ ಅಗತ್ಯವಿರುವುದಿಲ್ಲ..... ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

Submitted by ಗಣೇಶ Sun, 05/26/2013 - 23:56

In reply to by Shobha Kaduvalli

ಶೋಭಾ ಅವರೆ, ಮೊದಲಿಗೆ ಶೀರ್ಷಿಕೆಯನ್ನು ಬದನೆಕಾಯಿ ಚಟ್ನಿ ಎಂದೇ ಓದಿದ್ದೆ. ಸುಮ ನಾಡಿಗ್ ಅವರು ಹೇಳಿದಂತೆ ಹೀರೇ ಕಾಯಿ ದೋಸೆ, ಬದನೆಕಾಯ್ ದೋಸೆ ಎಂದೇ ನಾವಿದನ್ನು ಕರೆಯುತ್ತಿದ್ದುದು. ಈ "ಚಟ್ಟಿ" ಶಬ್ದ ನನಗೆ ಹೊಸದು. ಚಟ್ಟಿ ಶಬ್ದ ಏಕೆ ಬಂದಿರಬಹುದು ಎನ್ನುವುದನ್ನು ಸ್ಮಿತಾ ಅವರು ಚೆನ್ನಾಗಿ ವಿವರಿಸಿದ್ದಾರೆ>>"ಇದರ ಜೊತೆಗೆ ಚಟ್ನಿ ಬೇಡ ಅದಕ್ಕೆ ತಿಂಡಿಯ ಹೆಸರೇ ಚಟ್ಟಿ ಇರಬಹುದು." :) ಸ್ಮಿತಾ ಮತ್ತು ಶೋಭಾ ಅವರಿಗೆ ಧನ್ಯವಾದಗಳು.

Submitted by Shobha Kaduvalli Mon, 05/27/2013 - 13:52

ಈ "ಚಟ್ಟಿ" ಎಂಬ ಪದದ ಅರ್ಥ ನನಗೂ ಗೊತ್ತಿಲ್ಲ. ನಮ್ಮ ಮನೆಯಲ್ಲಿ ನಮ್ಮ ತಾಯಿ ಈ ಪದಾರ್ಥವನ್ನು ಆ ಹೆಸರಿನಿಂದ ಹೇಳುತ್ತಿದ್ದರು. ಕನ್ನಡ ರತ್ನ ಕೋಶದಲ್ಲೂ ಈ ಶಬ್ದಕ್ಕೆ ಅರ್ಥ "ಮಡಕೆ" ಎಂದು ಇದೆಯಾಗಲಿ ಅಡುಗೆ ಪದಾರ್ಥ ಎಂಬ ಅರ್ಥ ಇಲ್ಲ. ಪ್ರತಿಕ್ರಿಯೆಗೆ ಧನ್ಯವಾದಗಳು ಗಣೇಶ್ ರವರೆ.