'ಅಪೂರ್ವ ಕವನದ' ಕುರಿತು ಡೀವೀಜಿಯವರ ಮಾತು

'ಅಪೂರ್ವ ಕವನದ' ಕುರಿತು ಡೀವೀಜಿಯವರ ಮಾತು

ನಮ್ಮಲ್ಲಿ ಆಗಾಗ್ಗೆ ಬರೆದ ಕವನ, ಲೇಖನ, ಬರಹಗಳನ್ನು ಸಿಂಗಪುರದ ಗೆಳೆಯರ ಬಳಗದ ಜತೆ ಹಂಚಿಕೊಳ್ಳುವುದು ಸಾಮಾನ್ಯದ ರೂಢಿ. ಹೀಗೆ ಒಮ್ಮೆ ಕವನವೊಂದನ್ನು ಹಂಚಿಕೊಂಡಾಗ ಅದನ್ನು ಓದಿ ಪ್ರತಿಕ್ರಿಯಿಸಿದ ವಾಣಿ ರಾಮದಾಸ್ ರವರು, ಒಳ್ಳೆಯ ಕವನದ ಕುರಿತು ಡೀವೀಜಿಯವರ ಕೆಳಗಿನ ಮಾತುಗಳನ್ನು ಉದಾಹರಿಸಿ, ಒಂದು ಅಪೂರ್ವ ಕವನವಾಗಲಿಕ್ಕೆ ಮಾನಸಿಕ ಹಾಗೂ ಬೌದ್ಧಿಕ ಸ್ತರದಲ್ಲಿ ಏನೆಲ್ಲ ಪ್ರಕ್ರಿಯೆ, ಸಿದ್ದಾಂತಗಳ ಅಗತ್ಯವಿರುವುದೆಂಬ ಒಂದು ಸೂಕ್ಷ್ಮ ಒಳನೋಟವನ್ನು ತೋರಿಸಿಕೊಟ್ಟರು (ಅಂದ ಹಾಗೆ, ವಾಣಿಯವರ ಜ್ಞಾನ, ನೆನಪು ಹಾಗೂ ಓದಿನ ಶಕ್ತಿ ಅಗಾಧವಾದದ್ದು; ತಟ್ಟನೆ ಸೂಕ್ತವಾದ ನೆನಪಿಂದ ಹೆಕ್ಕಿ ತಮ್ಮ ಸರಳ ವಿಶ್ಲೇಷಣೆಯ ಸಾರಾಂಶದ ಜತೆಗೆ ಉಲ್ಲೇಖಿಸುವ ಅವರ ಅಸಾಧಾರಣ ಸಾಮರ್ಥ್ಯ ನನ್ನನ್ನು ಸದಾ ವಿಸ್ಮಿತನನ್ನಾಗಿಸುತ್ತದೆ!) 

====================================================================================
ಕವಿಯ ಮನಸ್ಸಿನಲ್ಲಿ ಇರುವ ಭಾವವಾಗಲೀ ಅನುಭವವಾಗಲೀ ಭಾಷೆಯಲ್ಲಿ ಪ್ರತಿಮೆಗಳ ಮೂಲಕ ವ್ಯಕ್ತಗೊಂಡಾಗ ಅದು ಏನಾಗುತ್ತದೆಂಬುದು ಪೂರ್ವನಿಶ್ಚಿತವಲ್ಲ. ಬರೆದದ್ದ ರೊಡನೆ ಕವಿಯ ಅರಿವಿಗೇ ಬಾರದ ಅನೇಕ ಅಂಶಗಳು, ಪ್ರತಿಮೆ ರೂಪಕಗಳೊಡನೆ ಚಿಮ್ಮುವ ಒಳಮನಸ್ಸಿನ ಅಂಶಗಳು, ಭಾಷೆಯೊಡನೆ ಬಂದು ಬೆರೆಯುವ ಸಾಮಾಜಿಕಾಂಶಗಳು ಇವು ಬಂದು ಸೇರದೆ ಕಾವ್ಯಕ್ಕೆ ಸಹಜವಾದ ರೂಪಕ್ಕೆ ಜೀವಸತ್ವ ಬಂದು ಸೇರುವುದಿಲ್ಲ... ಒಂದು ಕಲೆ ಅಥವಾ ಕವನ ಸಫಲವಾಗುವುದು ಅದರಲ್ಲಿ ಕಲೆಗಾರ ಕಾಲವನ್ನು ತಡೆಹಿಡಿದು ನಿಲ್ಲಿಸಿದಾಗ. ಹೀಗೆ ನಿಲ್ಲಿಸುವುದು ಸಾಧ್ಯವಾಗುವುದು ಭೂತ ಭವಿಷ್ಯತ್ತು ವರ್ತಮಾನಗಳನ್ನು ಒಂದೇ ಬಿಂದುವಿನಲ್ಲಿ ತಂದು ಕೇಂದ್ರೀಕರಿಸಿದಾಗ. ಇಂಥ ಕವನಗಳು ತೀರ ಅಪೂರ್ವವಾದಂಥವು. (ಡೀವೀಜಿಯವರ ಮಾತು)
====================================================================================
 
ಬರೆಯಹೊರಟ ಕವಿಯೊಬ್ಬನ ಭಾವಾಯಣ, ಕಲ್ಪನೆಯ ಮೂಸೆಯಲಿ ಅವನಿಂದಲೆ ಹುಟ್ಟಿದ್ದಾದರೂ, ಅದು ಬರಹ ರೂಪಕ್ಕಿಳಿದಾಗ, ಕವನದ ಪ್ರತಿಮೆ - ಸಂಕೇತಗಳ ರೂಪದಲ್ಲಿ ವ್ಯಕ್ತಗೊಂಡಾಗ, ಆ ಹೊರ ಹರಿವಿನ ಮೇಲೆ ಅವನಿಗ್ಯಾವ ತರದ ಹತೋಟಿ , ನಿಯಂತ್ರಣವೂ ಇರದ ಬಗ್ಗೆಯನ್ನು ಎಷ್ಟು ಸೊಗಸಾಗಿ ಹೇಳಿದ್ದಾರೆ ನೋಡಿ? ಆ ಮಾತಿನ ಶಕ್ತಿ, ಅರ್ಥ ಮತ್ತು ಎಷ್ಟು ನಿಜವೆಂಬ ಅನಿಸಿಕೆ ಸ್ವತಃ ಕವಿಯಾಗಿದ್ದವರಿಗೆ ಮತ್ತು ಕವಿ ಸಹೃದಯವಿರುವ ಓದುಗರಿಗೆ ಅತ್ಯಂತ ಸುಲಭವಾಗಿ ವೇದ್ಯವಾಗುತ್ತದೆ. ಏನೊ ಬರೆಯಲೆಂದು ಹೊರಟು ಏನೊ ಆಗುತ್ತಾ ಹೋಗುವ ಪರಿ ಕೆಲವೊಮ್ಮೆ ಅತ್ಯಂತ ಅಮೂಲ್ಯವಾದ, ಅಪರೂಪದ ಸರಕನ್ನು ಸೃಷ್ಟಿಸಿಬಿಡಬಹುದು; ಹಾಗೆಯೆ ಅಪರೂಪದ್ದೆಂದು ಬರೆಯಹೊರಟ ವಸ್ತು ವಿಶೇಷವೆ ವಿರೂಪವಾಗಿ ಕಳಪೆಯ ಮಟ್ಟದ ಕಾಟಾಚಾರದ ವಸ್ತುವೂ ಆಗಿಬಿಡಬಹುದು. ಅಂತಿಮ ರೂಪ, ಪರಿಣಾಮ ಏನಾಗಿಬಿಡುವುದೆಂಬುದು ಪೂರ್ವನಿಶ್ಚಿತವಲ್ಲದ್ದು. ಹಾಗೆಯೆ ಬರೆಸುವ ಹುನ್ನಾರ , ಹುರುಪಿನ ಜತೆಗೆ ಅರಿವಿಗೆ ಬಾರದ ಇನ್ನೆಷ್ಟೊ ತರದ ಅಂಶಗಳು ಮತ್ತು ಪರಿಸರದ ನೇರ ಅಥವ ಪರೋಕ್ಷ ಪ್ರಭಾವಗಳು ಮಿಳಿತಗೊಂಡು, ಕವಿತ್ವ ಕೇವಲ ಇದೆಲ್ಲವನ್ನು ಸಂಕಲಿಸಿ ಹೊರಚೆಲ್ಲುವ ನಿಮಿತ್ತ ಮಾತ್ರ ಮಾಧ್ಯಮವಾಗಿ ಪರಿವರ್ತಿತವಾಗುವ ನಿಗೂಢ ಪ್ರಕ್ರಿಯೆಯೆ ಇಲ್ಲಿ ಅಡಕವಾಗಿದೆ. ಆದರೆ ಈ ಅನಿರ್ಬಂಧತೆಯ ಅನಿಶ್ಚಿತದ ಗುಣವೆ, ಕಾವ್ಯಕ್ಕೆ ಸಹಜ ರೂಪ ಕೊಡುವ ಜೀವಸತ್ವವೂ ಆಗುವುದೆಂಬ ಮಾತಿನಲ್ಲಿ ಎಂತಹ ಕಾವ್ಯಸತ್ವವಿದೆ, ನಿಜತ್ವವಿದೆ ಗಮನಿಸಿ. 
 
ಹಾಗೆಯೆ ಸಫಲ ಕಲೆ ಅಥವ ಕಾವ್ಯವೊಂದರ ಗುಣ ಲಕ್ಷಣಗಳ ಕುರಿತು ಅವಲೋಕಿಸುತ್ತ, ಈ ಕಲೆ ಯಾ ಕಾವ್ಯದ ಸಾಫಲ್ಯ ಅವಲಂಬಿತವಾಗಿರುವುದು, ಆ ಕಲೆಗಾರ ಅಥವ ಕವಿ ಕಾಲವನ್ನು ಸ್ತಂಭಿಸಿ ಹಿಡಿದು ನಿಲಿಸಲು ಶಕ್ತನಾದಾಗ ಎನ್ನುತ್ತಾರೆ. ಕಾಲದ ಕಲ್ಪನೆಯ ಜತೆಗೆ ಸೃಜನಶೀಲ ಸೃಷ್ಟಿಯನ್ನು ಹೊಂದಿಸುವ ಅಥವ ಜೋಡಿಸುವ ಕಲ್ಪನೆಯೆ ಎಷ್ಟು ಅಗಾಧವಾದದ್ದು ಮತ್ತು  ಮಹೋನ್ನತವಾದದ್ದು! ಕವನದ ಸೃಷ್ಟಿಯಲ್ಲೂ ಇಂತಹ ಕಾಲಾತೀತತೆ ಮಿಳಿತಗೊಂಡಲ್ಲಿ ಮಾತ್ರ ಆ ಸೃಷ್ಟಿಗಳು ಸಾಫಲ್ಯದ ಹಾದಿ ಹಿಡಿದು ಕಾಲಾಂತರಕ್ಕೂ ಅಮರವಾಗಿ ನಿಲ್ಲಬಲ್ಲ ಶಕ್ತಿಯಾಗುವುದು - ಮಂಕುತಿಮ್ಮನ ಕಗ್ಗದ ಹಾಗೆ. ಹಾಗೆ ಕಾಲಾತೀತವಾಗುವುದೇನು ಅಷ್ಟು ಸುಲಭವಲ್ಲ - ಅದನ್ನು ಸಾಧಕನ ಹಾಗೆ ಸಾಧಿಸಬೇಕಾದರೆ ಕವಿ ಭೂತ, ವರ್ತಮಾನ, ಭವಿಷ್ಯತ್ತುಗಳನ್ನು ಸಂಕಲಿಸಿ ಒಂದು ಕಾಲಾತೀತ ಬಿಂದುವಿನತ್ತ ತಂದು ಕೂರಿಸಬೇಕಾಗುತ್ತದೆ. ಹಾಗೆಂದು ಇದು ಪ್ರಜ್ಞಾಪೂರ್ವಕವಾಗಿ, ಯೋಚಿತ ಹಾಗೂ ಯೋಜಿತ ರೀತಿಯಲ್ಲಿ ಆಗುವ ಕೆಲಸವಲ್ಲ. ಮೊದಲೆ ನುಡಿದಂತೆ ಇವೆಲ್ಲ ಪೂರ್ವನಿಶ್ಚಿತ ಮೂಸೆಯಿಂದ ಬರುವಂತದ್ದಲ್ಲ. ಅಗೋಚರ ಬೌದ್ಧಿಕ ಹಾಗೂ ಮಾನಸಿಕ ಸ್ತರದಲ್ಲಿ ನಡೆವ ಯಾವುದೊ ಶಕ್ತಿ ಕ್ರಿಯೆ ಸೃಷ್ಟಿಸಬಹುದಾದ ಆಯಾಚಿತ ಆಯಾಮ. ಅಂತಹ ಸೃಷ್ಟಿಯ ಸಾಧ್ಯತೆ ಎಲ್ಲರಿಗೂ ಆಗುವಂತದ್ದಲ್ಲ, ಎಲ್ಲರಿಗು ಒಲಿದು ಬಂದಂತದ್ದಲ್ಲ - ಡೀವೀಜಿಯಂತಹ ಕೆಲವು ಸರಸ್ವತಿ ವರಪುತ್ರರನ್ನು ಹೊರತುಪಡಿಸಿದರೆ! ಅವರ ಅಪೂರ್ವವಾದ ಕವನಗಳನ್ನು ಆಸ್ವಾದಿಸಿ, ಮೆಚ್ಚುವುದಷ್ಟೆ ನಮ್ಮಂತಹ ಪಾಮರರು ಮಾಡಬಹುದಾದ ಕೆಲಸ.
 
ಅವರ ಮೇಲಿನ ಸಾಲುಗಳನ್ನು ಅನುಸರಿಸಿ ಅಪೂರ್ವ ಕವನವೊಂದು ಹೇಗಿರುತ್ತದೆಂಬ ಅವರ ಭಾವ ಸೂಕ್ತಿಯನ್ನು ನನ್ನ ತೊದಲು ನುಡಿಯ ಸರಳ ಪದಗಳೊಡನೆ ಕಾವ್ಯದ ರೂಪದಲ್ಲಿ ದಾಖಲಿಸಲು ಇಲ್ಲಿ ಯತ್ನಿಸಿದ್ದೇನೆ. ಕವನ ಕಾಲಾತೀತವಾಗದಿದ್ದರೂ, ಅದರ ಮೂಲಭಾವದ ಕತೃವಿನ ಅಜರಾಮರತೆಯಿಂದಾಗಿ ಇದು ಕವಿ ಸಹೃದಯರಿಗೆ ಮೆಚ್ಚಿಕೆಯಾಗುವುದೆಂಬ ಆಶಯ ನನಗೆ. ಅಂತೆಯೆ ಡೀವೀಜಿಯವರು ಪದಗಳಲ್ಲಿ ಹೇಳಿ ಹಿಡಿದಿಟ್ಟ ಭಾವ ಸಂಘರ್ಷವೆಲ್ಲ ಕವನದಲ್ಲಿ ಹಿಡಿದಿಡಲಾಗಿಲ್ಲ ಎಂಬ ಅಳುಕೂ ಇದೆ. ಅದು ಏನೆ ಇರಲಿ - ಡೀವೀಜಿಯಂತಹ ಮಹಾನ್ ಚೇತನಗಳಿಗೆ ನಮಿಸುವ ಒಂದು ಅರ್ಪಣಾ ಕಾವ್ಯವಾಗಿ, ಅವರಿಗೆ ಸಲ್ಲಿಸುವ ಗೌರವದ ದಕ್ಷಿಣೆಯೆಂಬ ಭಾವದಲ್ಲಾದರೂ ಇದು ಪ್ರಸ್ತುತವೆಂಬ ಅನಿಸಿಕೆಯೊಡನೆ ಜತೆಗೆ ಸೇರಿಸುತ್ತಿದ್ದೇನೆ.
 
ಅಪೂರ್ವ ಕಾವ್ಯ..!
----------------------
 
ಭೂತ ಭವಿತ ವರ್ತಮಾನ
ವಿಲೀನವೇಕ ಬಿಂದು ಮನ
ಕಾಲವಾಗಿಬಿಡಲೆ ಸ್ತಂಭನ
ಕಾವ್ಯವಾಗುವುದಂತೆ ಘನ!
 
ಕಟ್ಟುವಾ ಗಳಿಗೆ ವ್ಯವಧಾನ
ಹಾವಾಭಾವಮನವಿತರಣ
ಬ್ರಹ್ಮಾಂಡವಾಗೆ ಅವಸಾನ
ಅಖಂಡ ಕವಿಕಾವ್ಯ ದ್ರೋಣ!
 
ಭ್ರೂಣಾವಸ್ತೆಗದೃಶ್ಯ ಪವಾಡ
ಕಾಣಿಸದಲೆ ಕಾಣುವ ಗೂಢ
ಗರ್ಭದೊಳಗೇನೆಲ್ಲಾ ನಿಭಿಢ
ಉಬ್ಬಿದುದರವಷ್ಟೆ ಕಣ್ಗೆ ಜಡ!
 
ಭಾವಾನುಭವ ಪ್ರತಿಮಾಗಮ
ಪೂರ್ವನಿಶ್ಚಿತವಿರ ಸಮಾಗಮ
ರೂಪಕ ನಿಸರ್ಗತೆ ಪರಿಸರಮ
ಮೇಳೈವಿಸೆಲ್ಲ ಉಗಮಾಗಮ!
 
ಬಂದೆಲ್ಲ ಸೇರಿದಾ ಜೀವ ಸತ್ವ
ಅವರವರ ಭಾವಭಕುತಿ ತತ್ವ
ಅರಿತಂತಪಾರತೇ ಮನಃಸತ್ವ
ಕವಿ ಕಾವ್ಯ ನೆಪವಾಗಿ ನೇಪಥ್ಯ!
 
ಕವಿಭಾವಾನುಭಾವ ತಳಹದಿ
ಅರಿವಿಗೆ ಬಾರದಷ್ಟು ಒಳಗುದಿ
ಭಾಷೆ ಸಾಮಾಜಿಕತೆಗೆಲ್ಲ ಗುದ್ದಿ
ಕಾವ್ಯವೆ ತಾನಾಗಿಬಿಡೆಮುತ್ಸದ್ಧಿ!
 
ತಡೆ ಹಿಡಿನಿಲಿಸಿದರೆ ಕವಿಗಾಲ
ಕಟ್ಟೋಡದಂತೆ ಬಿಗಿದಪ್ಪಿ ಕಾಲ
ಕವನೆಯಾಗುವವಳಂತೆ ಸಫಲ
ಸಮ್ಮಿಳಿತಗೊಂಡಾಗಲ್ಲಿ ತ್ರಿಕಾಲ!
 
-------------------------------------------------------------------------------------
ನಾಗೇಶ ಮೈಸೂರು, ಸಿಂಗಾಪುರ
-------------------------------------------------------------------------------------
(ಸ್ಪೂರ್ತಿ: ಡಿವೀಜಿಯವವ ಮಾತು)

Comments

Submitted by makara Thu, 05/23/2013 - 23:32

ಒಂದು ಕಾವ್ಯ ಅಥವಾ ಬರಹ ಕಾಲಾತೀತವಾಗಬೇಕಾದರೆ ಅದಕ್ಕೆ ದೈವೀಪ್ರೇರಣೆಯಿರಬೇಕು. ಆಗ ಮಾತ್ರ ಅದು ಶಾಶ್ವತವಾದೀತು. ಬರಹವು ಸತ್ಯನಿಷ್ಠವಾಗಿದ್ದರೂ ಸಹ ಅದು ಬಹುಕಾಲ ನಿಲ್ಲಬಲ್ಲುದು ಇಲ್ಲದಿದ್ದರೆ ಕಾಲನ ಹೊಡೆತಕ್ಕೆ ಸಿಕ್ಕು ಜರ್ಝರಿತವಾಗುವುದು. ಇದು ನಾನು ಡಿ.ವಿ.ಜಿ.ಯವರ ಮಾತುಗಳನ್ನು ಅರ್ಥ ಮಾಡಿಕೊಂಡ ರೀತಿ. ಇದನ್ನು ಬಹಳ ಚೆನ್ನಾಗಿ ನಿಮ್ಮ ಕವನದಲ್ಲಿ ಹಿಡಿದಿಟ್ಟಿದ್ದೀರ ನಾಗೇಶರೆ. ನಿಮ್ಮ ಕಾವ್ಯದ ಭಾಷೆಯನ್ನು ಇನ್ನಷ್ಟು ಸರಳಗೊಳಿಸಲು ಸಾಧ್ಯವೇ? ಇದು ಒಂದು ಸಲಹೆಯಷ್ಟೇ! (ಅದು ಹೇಗೋ ಈ ಬರಹ ನನ್ನ ಕಣ್ಣನ್ನು ತಪ್ಪಿಸಿಕೊಂಡಿತ್ತು, ನೀವು ನನ್ನ ಲೇಖನಕ್ಕೆ ಬರೆದ ಪ್ರತಿಕ್ರಿಯೆಯಿಂದ ಇದನ್ನು ಹುಡುಕಿಕೊಂಡು ಬರುವುದಕ್ಕೆ ಸಾಧ್ಯವಾಯಿತು. ಇಲ್ಲದಿದ್ದರೆ ಒಂದು ಉತ್ತಮ ವಿಷಯವನ್ನು ತಿಳಿದುಕೊಳ್ಳುವುದು ತಪ್ಪಿಹೋಗುತ್ತಿತ್ತು.)
Submitted by nageshamysore Fri, 05/24/2013 - 05:23

In reply to by makara

ಶ್ರೀಧರ ಜಿ, ನಿಜ ಹೇಳಬೇಕೆಂದರೆ ನನಗೆ ನಿಮ್ಮ ಪ್ರತಿಕ್ರಿಯೆ ಓದುವುದೆ ಒಂದು ರೀತಿಯ ಸೊಗಸು - ಎಷ್ಟೆಲ್ಲಾ ವಿಷಯ ತಿಳಿದಂತಾಗುತ್ತದೆ ಮತ್ತು ಅದನ್ನು ನೀವು ಅಷ್ಟು ಸರಳವಾಗಿ ಬರೆಯು ರೀತಿಗೆ ಅಚ್ಚರಿಯಾಗುತ್ತದೆ ( ನಿಮ್ಮ ಲಲಿತಾ ಸಹಸ್ರ ನಾಮದಂತಹ ಕ್ಲಿಷ್ಟ ವಸ್ತುಗಳ ಅನುವಾದವೂ ಸೇರಿದಂತೆ). ನಿಮ್ಮ ಸಲಹೆಯನ್ನು ಖಂಡಿತ ಗಮನದಲ್ಲಿಟ್ಟುಕೊಂಡು, ಅಳವಡಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಬರೆಯುವಾಗ, ಈ ಮೇಲೆ ಡೀವೀಜಿಯವರು ಹೇಳಿದ ಕವಿ ಮನದ ಪ್ರಕ್ರಿಯೆಯೆ ನನ್ನಲ್ಲು ನಡೆಯುವುದರಿಂದ ಸೃಷ್ಟಿಯಾಗುವ ವಸ್ತುವಿನ ಮೇಲೆ ನೇರ ಹತೋಟಿಯಿರುವುದಿಲ್ಲವಾದರು, ಬರೆದಾದ ನಂತರ ಪರಾಮರ್ಶಿಸಿ ಸರಳಿಕರಿಸುವ ಸಾಧ್ಯತೆ ಖಂಡಿತ ಇದೆ (ನನ್ನ ಸದ್ಯದ ವಿಧಾನದಲ್ಲಿ ನಾನು ಸಾಧರಣ ಕವನ ಬರೆದಾದ ಮೇಲೆ ಹೆಚ್ಚು ಬದಲಿಸುವುದಿಲ್ಲ - ಮೂಲ ಸೃಷ್ಟಿಗೆ ಅಪಚಾರವಾಗದಿರಲೆಂದೊ, ಅಥವಾ ಸೋಮಾರಿತನವೊ!). ಸರಳವಾದಷ್ಟು ಹೆಚ್ಚು ಜನರನ್ನು ಸುಲಭವಾಗಿ ತಲಪುವುದರಿಂದ ನಿಮ್ಮ ಸಲಹೆ ಸರ್ವಮಾನ್ಯ! ಇದನ್ನು ಬರೆಯ ಹೊರಟಾಗಲೂ ಡೀವೀಜಿಯವರಂತಹ ಮಾತುಗಳನ್ನು ಕವನವಾಗಿಸುವಂತಹ ಧಾರ್ಷ್ಟ್ಯ, ಸಾಹಸ ತರವೆ ಎಂಬ ಪ್ರಶ್ನೆಯ ಜತೆಗೆ ಸಾಧ್ಯವೆ ಎಂಬ ಕುತೂಹಲವು ಸೇರಿಕೊಂಡಿತ್ತು. ಆದರು, ಅವರ ಮೂಲ ಆಶಯಕ್ಕೆ ಧಕ್ಕೆಯಾಗಿಸದಂತೆ ಎಚ್ಚರದಲ್ಲಿ ಬರೆವ ಪ್ರಕ್ರಿಯೆಯಲ್ಲಿ ತುಸು ಸರಳತೆಯ ಕಳುವೂ ಆಗಿರಬೇಕು. ಅಂದ ಹಾಗೆ ಅವರ ಮಾತುಗಳಲ್ಲಿ ನನಗೆ ತೀರಾ ಮೆಚ್ಚಿಕೆಯಾದದ್ದು ಅಥವಾ ಗಹನವಾದದ್ದೆಂದರೆ - ಕಾಲಾತೀತತೆಯ ಬಗ್ಗೆ ಅವರು ಬರೆದ ನುಡಿಗಳು; ಆ ಸಾಲುಗಳನ್ನು ಓದಿದಷ್ಟು ಹೊಸ ಹೊಸ ಅರ್ಥವ್ಯಾಪ್ತಿಗಳು ಹೊಳೆಯುತ್ತವೆ! ತ್ರಿಕಾಲಗಳನ್ನು ಏಕೀಕರಿಸಿ ಒಂದು ಕೇಂದ್ರದಲ್ಲಿ ತಂದು ನಿಲಿಸಿದಾಗಲೆ ಕವಿ ಕಾವ್ಯ ಸಾಫಲ್ಯ ಎಂದು ಓದಿದಾಗ ಆ ಉನ್ನತಸ್ತರದ, ಎತ್ತರದ ಗಹನತೆಗು ನಮ್ಮ ಎಳಸಾಟದ ಪ್ರಲಾಪಕ್ಕು ಇರುವ ಕಂದಕದ ಅರಿವಾಗುತ್ತದೆ! ಸಲಹೆಗೆ ಮತ್ತೆ ಧನ್ಯವಾದಗಳು :-) - ನಾಗೇಶ ಮೈಸೂರು, ಸಿಂಗಪುರದಿಂದ
Submitted by makara Fri, 05/24/2013 - 07:49

In reply to by nageshamysore

..ಕಾಲಾತೀತತೆಯ ಬಗ್ಗೆ ಅವರು ಬರೆದ ನುಡಿಗಳು; ಆ ಸಾಲುಗಳನ್ನು ಓದಿದಷ್ಟು ಹೊಸ ಹೊಸ ಅರ್ಥವ್ಯಾಪ್ತಿಗಳು ಹೊಳೆಯುತ್ತವೆ! ತ್ರಿಕಾಲಗಳನ್ನು ಏಕೀಕರಿಸಿ ಒಂದು ಕೇಂದ್ರದಲ್ಲಿ ತಂದು ನಿಲಿಸಿದಾಗಲೆ ಕವಿ ಕಾವ್ಯ ಸಾಫಲ್ಯ ಎಂದು ಓದಿದಾಗ ಆ ಉನ್ನತಸ್ತರದ, ಎತ್ತರದ ಗಹನತೆಗು ನಮ್ಮ ಎಳಸಾಟದ ಪ್ರಲಾಪಕ್ಕು ಇರುವ ಕಂದಕದ ಅರಿವಾಗುತ್ತದೆ<<< +1