ಜಮಾನಾದ ಕಥೆಗಳು - ಕಳೆದು ಹೋದ ಬಾವಿ
ಕಳೆದು ಹೋದ ಬಾವಿ
೮೦ರ ದಶಕದಲ್ಲಿ ಮಹಾರಾಷ್ಟ್ರದ ಪೋಲೀಸ್ ಠಾಣೆಯಲ್ಲಿ ಒಂದು ವಿಚಿತ್ರ ಕಂಪ್ಲೇಂಟ್ ದಾಖಲಾಯಿತು. ಅದನ್ನು ಕೊಟ್ಟವನು ಒಬ್ಬ ಸಣ್ಣ ರೈತ ಮತ್ತು ಕಂಪ್ಲೇಂಟಿನ ವಿಷಯ, ಕಳೆದು ಹೋಗಿರುವ ತನ್ನ ಬಾವಿಯನ್ನು ಹುಡುಕಿಕೊಡಲು ಅವನು ಮನವಿ ಸಲ್ಲಿಸಿದ್ದ. ಪ್ರಾರಂಭದಲ್ಲಿ ಇವನ ಮನವಿಯನ್ನು ಸ್ವೀಕರಿಸಲು ಯಾವ ಪೋಲೀಸ್ ಠಾಣೆಯವರು ಸಿದ್ಧರಿರಲಿಲ್ಲ. ಕಾರಣವೇನೆಂದರೆ ಬಾವಿ ಎಲ್ಲಿಯಾದರೂ ಕಳ್ಳತನವಾಗುವುದುಂಟೇ? ಆದರೆ ಆ ರೈತ ಬಡ ಪೆಟ್ಟಿಗೆ ಜಗ್ಗುವವನಲ್ಲ, ಅವನು ಕೇಳಿದ ಸ್ವಾಮಿ ಯಾವುದೇ ಒಂದು ವಸ್ತು ಕಳ್ಳತನವಾಗಿದೆ ಎಂದರೆ ಏನು ಮಾಡಬೇಕು ಹೇಳಿ ನಾನು ಅದೇ ರೀತಿ ಮಾಡುತ್ತೇನೆ ಎಂದ. ಆಗ ಇವನಿಗೆ ವಿಷಯವನ್ನು ಅರ್ಥಮಾಡಿಸುವ ಉದ್ದೇಶದಿಂದ ಒಬ್ಬ ಪೋಲೀಸ್ ಪೇದೆ ತಿಳಿ ಹೇಳಿದ, ನೋಡಣ್ಣ, ಯಾವುದೋ ಒಂದು ವಸ್ತು ಕಳುವಾಗಿದೆ ಎನ್ನುವುದಕ್ಕೆ ನೀವು ಪುರಾವೆ ಒದಗಿಸಬೇಕು. ಮೊದಲನೆಯದಾಗಿ ಆ ವಸ್ತು ನಿನ್ನದೆನ್ನುವುದಕ್ಕೆ ಯಾವುದಾದರೂ ದಾಖಲೆ ಇರಬೇಕು ಮತ್ತು ಅದು ಯಾವ ರೀತಿ ಅಂದರೆ ಎಲ್ಲಿ, ಹೇಗೆ ಕಳ್ಳತನವಾಯಿತು ಎನ್ನುವುದರ ವಿವರ ಕೊಟ್ಟರೆ ಅದರ ಆಧಾರದ ಮೇಲೆ ಪೋಲೀಸಿನವರು ಬಂದು ಪಂಚನಾಮೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದ. ಇದನ್ನು ಕೇಳಿದ ಆ ರೈತ ಆಗಲಿ ಮಹಾಸ್ವಾಮಿ ಬಾವಿ ಇದ್ದದ್ದಕ್ಕೆ ಮತ್ತು ಅದು ನನಗೆ ಸಂಭಂದಿಸಿದ್ದಕ್ಕೆ ಮತ್ತು ಅದು ಈಗ ನಾಪತ್ತೆಯಾಗಿರುವುದಕ್ಕೆ ಸೂಕ್ತ ದಾಖಲೆ ಒದಗಿಸುತ್ತೇನೆ ಎಂದ.
ಮನೆಗೆ ಹೋದವನೆ ತನ್ನ ಹೆಸರಿನಲ್ಲಿದ್ದ ಹೊಲದ ಪಹಣಿ ಪತ್ರಿಕೆ (ಹೊಲದ ಹಕ್ಕು ಪತ್ರ)ಯ ನಕಲು ತೆಗೆದುಕೊಂಡು ಬಂದ. ಅದನ್ನು ನೋಡಿದ ಪೋಲೀಸಪ್ಪ ಹೊಲ ನಿನ್ನ ಹೆಸರಿನಲ್ಲಿರುವುದಕ್ಕೇನೋ ದಾಖಲೆ ಇದೆ. ಆದರೆ ಅಲ್ಲಿ ಬಾವಿ ಇರುವುದಕ್ಕೆ ಪುರಾವೆ ಇದೆಯೇ? ಎಂದು ಪ್ರಶ್ನಿಸಿದ. ಆಗ ರೈತ, ತಾನು ಬ್ಯಾಂಕಿಗೆ ಬಾವಿ ತೆಗೆಸಲು ಸಾಲಕ್ಕಾಗಿ ಬರೆದಿದ್ದ ಅರ್ಜಿಯನ್ನು ತೋರಿಸಿದ. ಆಗ ಮತ್ತೆ ಪೋಲೀಸಪ್ಪ ಅದೇನೋ ಸರಿ ಇದು ನೀನು ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಹಾಕಿದ್ದೇನೋ ನಿಜ. ಆದರೆ ಅವರು ನಿನಗೆ ಲೋನ್ ಸ್ಯಾಂಕ್ಷನ್ ಮಾಡಿದ್ದಕ್ಕೆ ಮತ್ತು ನೀನು ಅವರಿಂದ ಪಡೆದ ಹಣದಿಂದ ಬಾವಿ ತೆಗೆಸಿದ್ದಕ್ಕೆ ಪುರಾವೆ ಬೇಕಲ್ಲವೆ, ಎಂದು ಮರುಪ್ರಶ್ನಿಸಿದ. ಅದಕ್ಕೂ ರೈತಣ್ಣನ ಹತ್ತಿರ ಉತ್ತರವಿತ್ತು, ಅವನು ಬ್ಯಾಂಕಿನ ಮ್ಯಾನೇಜರರಿಂದ ತನಗೆ ಬಂದ ಅರ್ಜಿ ಪುರಸ್ಕಾರ ಪತ್ರ ಮತ್ತು ಅವನ ಖಾತೆಗೆ ಮುಂಗಡ ಹಣ ಜಮಾ ಮಾಡಿದ ಪತ್ರವನ್ನು ತೋರಿಸಿದ. ಇದು ಸರಿ ಆದರೆ ನೀವು ಬಾವಿ ತೆಗೆಸಿದ್ದಕ್ಕೆ ದಾಖಲೆ ಎಲ್ಲಿ? ಪುನಃ ಪೋಲೀಸಪ್ಪನ ಪ್ರಶ್ನೆ. ಅದಕ್ಕೂ ರೈತನ ಬಳಿ ಉತ್ತರ ಸಿದ್ಧವಿತ್ತು. ಅವನು ತಾನು ಬಾವಿ ತೆಗೆಸಲು ಸೂಕ್ತ ಸ್ಥಳವನ್ನು ಸೂಚಿಸಲು ಭೂಗರ್ಭ ಶಾಸ್ತ್ರಜ್ಞರು ಕೊಟ್ಟ ನಕ್ಷೆಯಿತ್ತು. ಮತ್ತು ಅಲ್ಲಿ ಬಾವಿ ತೆಗೆದ ನಂತರ ಅದನ್ನು ಕ್ರಮಬದ್ಧವಾಗಿ ತೆಗೆದಿದ್ದಾನೆ ಎನ್ನುವುದಕ್ಕೆ ಬ್ಯಾಂಕಿನ ಸಿವಿಲ್ ಇಂಜಿನೀಯರು ಕೊಟ್ಟ ಮತ್ತು ಫೀಲ್ಡ್ ಆಫೀಸರುಗಳು ಕೊಟ್ಟ ದಾಖಲೆ ಪತ್ರಗಳು ಇದ್ದವು. ಇಷ್ಟೆಲ್ಲಾ ಪುರಾವೆಗಳು ಸಾಕಲ್ಲವೆ ಸರ್ ಎಂದ ನಮ್ಮ ರೈತಣ್ಣ.
ಈಗ ಪೋಲೀಸ್ ಪಂಚನಾಮೆ ಷುರುವಾಯಿತು. ನಿಮಗೆ ಇಲ್ಲಿ ಬಾವಿ ಇಲ್ಲದೇ ಇರುವುದು ಯಾವಾಗ ಗೊತ್ತಾಯಿತು? ಆಗ ರೈತಣ್ಣ ಹೇಳಿದ ನೋಡಿ ಸ್ವಾಮಿ ನನ್ನ ಬಾವಿಯ ಸಾಲದ ಅಂತಿಮ ಕಂತನ್ನು ಬ್ಯಾಂಕಿನವರು ಇಂಜಿನೀಯರರ ಪ್ರಮಾಣ ಪತ್ರವನ್ನು ನೋಡಿ ಮಂಜೂರು ಮಾಡಿದರು. ಈಗ ಅದಕ್ಕೆ ವಿದ್ಯುತ್ ಕನೆಕ್ಷನ್ನಿಗಾಗಿ ಅರ್ಜಿ ಹಾಕೋಣವೆಂದು ಬಂದು ನೋಡಿದರೆ ಇಲ್ಲಿ ಬಾವಿಯೇ ಕಾಣುತ್ತಿಲ್ಲ. ಆದ್ದರಿಂದ ನಾನು ನಿಮಗೆ ಈ ಮೂಲಕ ಕಂಪ್ಲೇಂಟ್ ಮಾಡಿದೆ. ಸ್ಥಳ ಪರಿಶೀಲನೆ ಮಾಡಿದ ಪೋಲೀಸಿನವರಿಗೆ ಅಲ್ಲಿ ಯಾವುದೇ ಬಾವಿ ಇದ್ದ ಕುರುಹಾಗಲಿ ಅದನ್ನು ಅಲ್ಲಿ ತೆಗೆಸಿದ್ದಕ್ಕಾಗಲಿ ಯಾವುದೇ ಪುರಾವೆಗಳು ಸಿಗಲಿಲ್ಲ. ಆಗ ಕೋಪಗೊಂಡ ಅಲ್ಲಿನ ಇನ್ಸ್‌ಪೆಕ್ಟರ್ ನಿಜ ಬೊಗಳುತ್ತೀಯಾ ಇಲ್ಲಾ ನಿನಗೆ ನಮ್ಮ ಪೋಲೀಸ್ ವಿಧಾನದಲ್ಲಿ ಬುದ್ಧಿ ಕಲಿಸಬೇಕಾ ಎಂದು ಗದರಿದ. ಅಷ್ಟೊತ್ತಿನವರೆಗೆ ಸುಮ್ಮನೆ ಇದ್ದ ರೈತ ಗಳಗಳನೆ ಅಳಲು ಷುರು ಮಾಡಿದ. ವಾಸ್ತವವಾಗಿ ಅಲ್ಲಿ ನಡೆದದ್ದೇನೆಂದರೆ, ಈ ರೈತ ತನ್ನ ಬಾವಿ ಸಾಲ ಮಂಜೂರಾತಿಗಾಗಿ ಬ್ಯಾಂಕಿನ ಫೀಲ್ಡ್ ಆಫೀಸರ್, ಅಲ್ಲಿನ ಮ್ಯಾನೇಜರ್ ಮತ್ತು ಇತರೇ ಸಿಬ್ಬಂದಿಗೆ ಸಾಕಷ್ಟು ಹಣವನ್ನು ಲಂಚವಾಗಿ ಕೊಟ್ಟಿದ್ದ, ಇದು ಸಾಲದೆಂಬದಂತೆ ಭೂಗರ್ಭ ಶಾಸ್ತ್ರಜ್ಞರಿಗೆ, ಬ್ಯಾಂಕಿನ ಇಂಜಿನೀಯರಿಗೆ (ಬಾವಿ ತೆಗೆಸುವುದಾಗಿ ನಂಬಿಸಿ ಪ್ರಮಾಣ ಪತ್ರ ಪಡೆದಿದ್ದ); ಹೀಗೆ ಎಲ್ಲರಿಗೂ ದುಡ್ಡು ಕೊಟ್ಟ ಕಡೆಯಲ್ಲಿ ಅವನ ಕೈಗೆ ಬಂದದ್ದು ಕೇವಲು ನಾಲ್ಕರಿಂದ ಐದುನೂರುಗಳು. ಇವನನ್ನು ಬ್ಯಾಂಕಿನಲ್ಲಿ ಹಲವಾರು ಬಾರಿ ನೋಡಿ ಪರಿಚಯ ಮಾಡಿಕೊಂಡಿದ್ದ ಅಲ್ಲಿನ ಜವಾನ ಅಣ್ಣಾ ಎಲ್ಲರನ್ನೂ ನೋಡಿಕೊಂಡಿದ್ದೀಯ ಸ್ವಲ್ಪ ನನ್ನನ್ನೂ ವಿಚಾರಿಸಿಕೊಳ್ಳಬಾರದೇ ಎಂದಾಗ ತನ್ನ ಕೈಯ್ಯಲ್ಲಿದ್ದ ಐನೂರು ರೂಪಾಯಿಗಳನ್ನೂ ಅವನಿಗಿತ್ತು ಖಾಲಿ ಕೈಯ್ಯಲ್ಲಿ ಮನೆಗೆ ಹೋದ. ಆಗ ಏನು ಮಾಡಬೇಕೆಂದು ತೋಚದೆ ಅವನು ಈ ರೀತಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದ. ಆಮೇಲೆ ಆ ಕೇಸು ಏನಾಯಿತೋ ತಿಳಿಯದು. ಇಂತಹ ಸಾವಿರಾರು ಪ್ರಕರಣಗಳು ನಮ್ಮ ಸ್ವತಂತ್ರ ಭಾರತದ ಇತಿಹಾಸದಲ್ಲಿ ಹುದುಗಿಹೋಗಿವೆ. ನಾವು ಅಭಿವೃದ್ದಿ ಹೊಂದಿದ ದೇಶದವರಾಗಲು ಮನಸ್ಸು ಮಾಡುವ ತನಕ ಇಂತಹವುಗಳೆಲ್ಲಾ ನಡೆಯುತ್ತಲೇ ಇರುತ್ತವೆ.
Comments
ಶ್ರೀಧರ ಅವರೆ, ಬಹುಶಃ ಅದನ್ನೆ
ಶ್ರೀಧರ ಅವರೆ, ಬಹುಶಃ ಅದನ್ನೆ ನವೀಕರಿಸಿ ಹೊಸ ಕಂಪ್ಲೈಂಟು ಕೊಡಬಹುದೇನೊ - ಅದೆ ಕಳುವಾದ ಬಾವಿಯೊಳಗಿದ್ದ ಬಾವಿ ಕಪ್ಪೆಯು ಕಳುವಾಗಿ ಹೋಗಿದೆ ಅಂತ! ಸಮುದ್ರದ ಕಪ್ಪೆಯ ಕೈವಾಡ ಇದ್ದರೂ ಇರಬಹುದು ಅಂತ ಅನುಮಾನಿತರ ಪಟ್ಟಿಯನ್ನು ಸೇರಿಸಬಹುದು..! ತಮಾಷೆಗೆ ಹೇಳಿದೆ, ಆದರೆ ಪ್ರಸಂಗ ಮತ್ತು ಅದರ ಹಿಂದಿನ ನೀತಿ ಚೆನ್ನಾಗಿದೆ. ಬದಲಾದೀತೆ ಯಾವುದಾದರೂ ಜಮಾನದಲ್ಲಿಯಾದರೂ - ಎಂಬುದೆ ಯಕ್ಷ ಪ್ರಶ್ನೆ!
-ನಾಗೇಶ ಮೈಸೂರು, ಸಿಂಗಪುರದಿಂದ
In reply to ಶ್ರೀಧರ ಅವರೆ, ಬಹುಶಃ ಅದನ್ನೆ by nageshamysore
ಚೆನ್ನಾಗಿದೆ ನಾಗೇಶರೆ ನಿಮ್ಮ
ಚೆನ್ನಾಗಿದೆ ನಾಗೇಶರೆ ನಿಮ್ಮ ಕಲ್ಪನೆ :) ಪ್ರತಿ ಜಮಾನಾದಲ್ಲೂ ಕಥೆ ಅದೇ ಆದರೂ ತಂತ್ರಗಳು ಭಿನ್ನವಾಗಿರುತ್ತವೆ. ಹಾಡು ಹಳೆಯದಾದರೇನು, ರಾಗ ಮಾತ್ರ ನವ-ನವೀನ!
In reply to ಚೆನ್ನಾಗಿದೆ ನಾಗೇಶರೆ ನಿಮ್ಮ by makara
ಶ್ರೀಧರರವರೆ, ನಿನ್ನೆ ಡಿವಿಜಿಯವರ
ಶ್ರೀಧರರವರೆ, ನಿನ್ನೆ ಡಿವಿಜಿಯವರ 'ಅಪೂರ್ವ ಕವನ' ಹೇಗಿರಬೇಕೆಂಬುದರ ಕುರಿತಾದ ಲೇಖನ ಬರೆದು ಸಂಪದದಲ್ಲಿ ಪ್ರಕಟಿಸುವಾಗ ಇದೆ ಹಾಡು ನೆನಪಾಯ್ತು, 'ರಾಗ ಹಳೆಯದಾದರೇನು , ಭಾವ ನವ ನವೀನ'ಅಂತ. ನೀವು ಅದನ್ನೆ ಉಲ್ಲೇಖಿಸುತ್ತಿದ್ದಿರಾ ನೋಡಿ!
-ನಾಗೇಶ ಮೈಸೂರು, ಸಿಂಗಪುರದಿಂದ
In reply to ಶ್ರೀಧರರವರೆ, ನಿನ್ನೆ ಡಿವಿಜಿಯವರ by nageshamysore
ಗ್ರೇಟ್ ಮೈಂಡ್ಸ ಥಿಂಕ್ ಅಲೈಕ್
ಗ್ರೇಟ್ ಮೈಂಡ್ಸ ಥಿಂಕ್ ಅಲೈಕ್ ಎನ್ನೋಣವೇ ನಾಗೇಶರೆ :))
ಹ..ಹ..ಹಾ!!! ಚೆನ್ನಾಗಿದೆ.
ಹ..ಹ..ಹಾ!!! ಚೆನ್ನಾಗಿದೆ. ಧನ್ಯವಾದ, ಶ್ರೀಧರರೇ.
In reply to ಹ..ಹ..ಹಾ!!! ಚೆನ್ನಾಗಿದೆ. by kavinagaraj
ಬರಹಕ್ಕೆ ಮೆಚ್ಚುಗೆ
ಬರಹಕ್ಕೆ ಮೆಚ್ಚುಗೆ ಸೂಚಿಸಿದ್ದಕ್ಕೆ ಧನ್ಯವಾದಗಳು, ಕವಿಗಳೆ.
ಶ್ರೀಧರರೆ, ಆ ಜಮಾನದ ಈ ಕಥೆ ಈ
ಶ್ರೀಧರರೆ, ಆ ಜಮಾನದ ಈ ಕಥೆ ಈ ಜಮಾನದಲ್ಲೂ ನಡೀತ ಇದೆ.. ಕಥೆಯಲ್ಲಿ ರೈತ ಅಳುವ ಸನ್ನಿವೇಶ ಊಹಿಸಿಕೊ೦ಡು ಖೇದವಾಯಿತು.
In reply to ಶ್ರೀಧರರೆ, ಆ ಜಮಾನದ ಈ ಕಥೆ ಈ by spr03bt
ನಿಮ್ಮ ಮಾತು ನಿಜ ಶಿವಪ್ರಕಾಶ್
ನಿಮ್ಮ ಮಾತು ನಿಜ ಶಿವಪ್ರಕಾಶ್ ಅವರೆ, ನಿಜಕ್ಕೂ ಆ ರೈತನ ಪರಿಸ್ಥಿತಿಯನ್ನು ನೆನೆಸಿಕೊಂಡರೆ ದುಃಖವಾಗುತ್ತದೆ. ಈ ದೇಶದ ದುರಂತವೆಂದರೆ ಎಲ್ಲರೂ ರೈತನೇ ದೇಶದ ಬೆನ್ನೆಲುಬು ಅಂತಾ ಹೇಳಿ ಅವನ ಬೆನ್ನಿನ ಎಲುಬನ್ನೇ ಮುರಿಯುತ್ತಿದ್ದಾರೆ. ಆಗಾಗ ಬೊಗಳುವ ನಾಯಿಗೆ ತುಂಡು ಬ್ರೆಡ್ಡು ಎಸೆಯುವಂತೆ ಕೆಲವೊಂದು ಹಳಸಲು ಸ್ಕೀಂಗಳನ್ನು ಇಲ್ಲಾ ಸಾಲಮನ್ನಾಗಳನ್ನು ಮಾಡಿ ಅವನ ಪರಿಸ್ಥಿತಿಯನ್ನು ಇನ್ನಷ್ಟು ಶೋಚನೀಯವಾಗಿಸುತ್ತಿದ್ದಾರೆ. ನೋಡೋಣ ರೈತನೂ ನಗುವ ದಿನಗಳು ಬಂದಾವು.
>>>ಆಮೇಲೆ ಆ ಕೇಸು ಏನಾಯಿತೋ
>>>ಆಮೇಲೆ ಆ ಕೇಸು ಏನಾಯಿತೋ ತಿಳಿಯದು..-> ಏನಾಗಿರುತ್ತದೆ? ರೈತನಿಗೆ ಜೈಲು ಶಿಕ್ಷೆ. ಜಮೀನು ಬ್ಯಾಂಕ್ ವಶಕ್ಕೆ :(
In reply to >>>ಆಮೇಲೆ ಆ ಕೇಸು ಏನಾಯಿತೋ by ಗಣೇಶ
ಅಷ್ಟೇ ಅಂತೀರಾ ಗಣೇಶ್..ಜಿ, ಸರಿ
ಅಷ್ಟೇ ಅಂತೀರಾ ಗಣೇಶ್..ಜಿ, ಸರಿ ಬಿಡಿ ಇನ್ನೇನಿರುಲು ಸಾಧ್ಯ :((
ನಿಮ್ಮ ಕತೆಯನ್ನು ಓದಿ ಹಿಂದೆ
ನಿಮ್ಮ ಕತೆಯನ್ನು ಓದಿ ಹಿಂದೆ ಎಲ್ಲೋ ಓದಿದ್ದ ಭ್ರಷ್ಟಾಚಾರದ ಕತೆಯ ನೆನಪಾಯಿತು.
ಒಮ್ಮೆ ಭಾರತದ ಮಂತ್ರಿಯೋರ್ವರು ವಿದೇಶ ಪ್ರಯಾಣ ಮಾಡಿದ್ದರು. ಭವ್ಯವಾದ ಸ್ವಾಗತ ಮಾಡಿ ಭಾರತದ ಮಂತ್ರಿಯನ್ನು ಆ ವಿದೇಶದ ಮಂತ್ರಿ ಸಮುದ್ರದ ಕಿನಾರೆಯಲ್ಲಿರುವ ಯಲ್ಲಿರುವ ತಮ್ಮ ಬಂಗಲೆಗೆ ಕರೆದುಕೊಂಡು ಹೋದರಂತೆ. ಅಷ್ಟು ದೊಡ್ಡ ಬಂಗಲೆಯನ್ನು ನೋಡೇ ಇರದ ನಮ್ಮ ಮಂತ್ರಿಗಳು ಕೇಳೇಬಿಟ್ಟರಂತೆ, ಇಷ್ಟೊಂದು ದೊಡ್ಡ ಬಂಗಲೆ ಕಟ್ಟಲು ಹೇಗೆ ಸಾಧ್ಯವಾಯಿತು ಎಂದು. ಅದಕ್ಕೆ ಆ ಮಂತ್ರಿ ಮುಗುಳ್ನಕ್ಕು, ಎದುರುಗಡೆ ಕೈ ಮಾಡಿ, ಆ ಸಮುದ್ರಕ್ಕೆ ಕಟ್ಟಲಾಗಿರುವ ಸೇತುವೆಯನ್ನು ತೋರಿಸಿ, ಸೇತುವೆ ಪ್ರಾಜೆಕ್ಟಿಗೆ ಸ್ಯಾಂಕ್ಷನ್ ಆದ ೧೦% ಹಣ ಅಷ್ಟೇ, ಈ ಬಂಗಲೆ ಎದ್ದಿತು ಅಂದರಂತೆ.
ಮುಂದೊಮ್ಮೆ ಆ ವಿದೇಶದ ಮಂತ್ರಿ ಭಾರತದ ಪ್ರವಾಸಕ್ಕೆ ಬಂದರು, ಆಗ ಭಾರತದ ಮಂತ್ರಿ ಅವರಿಗೆ ಸ್ವಾಗತ ಮಾಡಿ, ಸಮುದ್ರದ ಕಿನಾರೆಯಲ್ಲಿರುವ ತಮ್ಮ ಬಂಗಲೆಗೆ ಕರೆದೊಯ್ದರಂತೆ. ಈಗ ಹೌಹಾರುವ ಸರದಿ ವಿದೇಶದ ಮಂತ್ರಿಯದ್ದು. ಅದಕ್ಕೆ ಕಾರಣ ಭಾರತದ ಮಂತ್ರಿಯ ಬಂಗಲೆ ವಿದೇಶದ ಮಂತ್ರಿಯ ಬಂಗಲೆಕ್ಕಿಂತ ಸುಮಾರು ೧೦ ಪಟ್ಟು ಹೆಚ್ಚಿತ್ತಂತೆ. ಆ ಮಂತ್ರಿಗಳು ಇದು ಹೇಗೆ ಸಾಧ್ಯವಾಯಿತೆಂದು ಕೇಳಿದಾಗ, ಅದಕ್ಕೆ ನಮ್ಮ ಮಂತ್ರಿ , ಎದುರುಗಡೆ ಕೈ ಮಾಡಿ, ಆ ಸಮುದ್ರಕ್ಕೆ ಕಟ್ಟಲಾಗಿರುವ ಸೇತುವೆ ಕಾಣುತ್ತಿದೆಯೇ ಎಂದರಂತೆ. ಅಲ್ಲಿ ಏನೂ ಇಲ್ಲವಲ್ಲ ಅಂದರಂತೆ ವಿದೇಶದ ಮಂತ್ರಿ. ಅದಕ್ಕೆ ನಮ್ಮ ಮಂತ್ರಿ ಆ ಸೇತುವೆ ಪ್ರಾಜೆಕ್ಟಿಗೆ ಸ್ಯಾಂಕ್ಷನ್ ಆದ ೧೦೦ % ಹಣದಲ್ಲಿ ಈ ಬಂಗಲೆ ಎದ್ದಿದೆ ಅಂದರಂತೆ!!
In reply to ನಿಮ್ಮ ಕತೆಯನ್ನು ಓದಿ ಹಿಂದೆ by ಸುಧೀ೦ದ್ರ
ಸಖತ್ ಜೋಕೊಂದನ್ನು ಉದಾಹರಣೆಯಾಗಿ
ಸಖತ್ ಜೋಕೊಂದನ್ನು ಉದಾಹರಣೆಯಾಗಿ ಕೊಟ್ಟಿದ್ದೀರ ಸುಧೀಂದ್ರ ಅವರೆ, ಧನ್ಯವಾದಗಳು. ಈ ರಸ್ತೆ ಎಲ್ಲಿಗೆ ಹೋಗುತ್ತೆ ಅಂತಾ ಕೇಳಿದರೆ ರಸ್ತೆ ಎಲ್ಲೂ ಹೋಗೋಲ್ಲ ಅದು ಇಲ್ಲೇ ಇರುತ್ತದೆ ಎನ್ನುವುದು ಹಳೆಯ ಜೋಕಾದರೆ, ಈ ರಸ್ತೆ ಎಲ್ಲಿ ಹೋಗುತ್ತದೆ ಎಂದು ಕೇಳಿದರೆ ಅದು ಪಿ.ಡಬ್ಲು.ಡಿ. ಇಂಜಿನೀಯರನ ಮನೆಗೆ ಎನ್ನುವುದು ಜಮಾನಾದ ಜೋಕಾಗಿತ್ತು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ನಿಮ್ಮ ಕತೆಯನ್ನು ಓದಿ ಹಿಂದೆ by ಸುಧೀ೦ದ್ರ
:)))
:)))