೩೧. ಶ್ರೀ ಲಲಿತಾ ಸಹಸ್ರನಾಮ ೭೨ರಿಂದ ೭೬ನೇ ನಾಮದ ವಿವರಣೆ

೩೧. ಶ್ರೀ ಲಲಿತಾ ಸಹಸ್ರನಾಮ ೭೨ರಿಂದ ೭೬ನೇ ನಾಮದ ವಿವರಣೆ

 

ಲಲಿತಾ ಸಹಸ್ರನಾಮ ೭೨-೭೬

Bhaṇḍasainya-vadhodhyukta-śakthivikrama-harṣitā भण्डसैन्य-वधोध्युक्त-शक्थिविक्रम-हर्षिता (72)

೭೨.ಭಂಡಸೈನ್ಯ-ವಧೋಧ್ಯುಕ್ತ-ಶಕ್ಥಿವಿಕ್ರಮ-ಹರ್ಷಿತಾ

            ದೇವಿಯ ಶಕ್ತಿಗಳು (ಸೈನ್ಯವು) ಭಂಡಾಸುರನ ಸೈನ್ಯವನ್ನು ನಾಶಮಾಡಿದಾಗ ಆಕೆಯು ಹರ್ಷಗೊಂಡಳು.

            ಭಂಡ ಎಂದರೆ ಅಜ್ಞಾನ ಮತ್ತು ದ್ವಂದ್ವತೆಯಿಂದ ಪೀಡಿತವಾದ ಜೀವಿ, ಸೈನ್ಯ (ಸೈನಿಕ ದಳ) ಕೂಡಾ ದ್ವೈತವನ್ನು ಸೂಚಿಸುತ್ತದೆ (ಏಕೆಂದರೆ ಇದು ತಾನು ಹಾಗೂ ಪರಬ್ರಹ್ಮವು ಬೇರೆಯೆಂದು ಗುರುತಿಸುತ್ತದೆಯಾದ್ದರಿಂದ), ಮತ್ತು ವಧಾ ಎಂದರೆ ವಿನಾಶ. ಒಬ್ಬರು ತಮ್ಮಲ್ಲಿರುವ ದ್ವಂದ್ವ ಭಾವನೆಯನ್ನು ನಾಶಗೊಳಿಸಿಕೊಂಡರೆ ಶ್ರೀ ಲಲಿತೆಯು ಹರ್ಷಿಸುತ್ತಾಳೆ. ಯಾವಾಗ ಈ ದ್ವಂದ್ವ ಅಥವಾ ದ್ವೈತ್ವದ ಭಾವನೆಯು ಮಾಯವಾಗುತ್ತದೆಯೋ ಅದು ಮಾಯೆಯ ಮುಸುಗು ಕಳಚಿರುವುದಕ್ಕೆ ಸಂಕೇತವಾಗಿದೆ. ದ್ವಂದ್ವತೆಯನ್ನು ಮನಸ್ಸಿನ ಸಹಾಯದಿಂದ ಆಂತರ್ಯದ ಪರಿಶೀಲನೆ (ಅತ್ಮಾವಲೋಕನ) ಮಾಡಿಕೊಂಡಾಗ ತೆಗೆದುಹಾಕಬಹುದು.

Nityā-pārākramāṭopa-nirīkṣaṇa-samutsukā नित्या-पाराक्रमाटोप-निरीक्षण-समुत्सुका (73)

೭೩.ನಿತ್ಯಾ-ಪಾರಾಕ್ರಮಾಟೋಪ-ನಿರೀಕ್ಷಣ-ಸಮುತ್ಸುಕಾ

            ನಿತ್ಯಾ ಎಂದರೆ ತಿಥಿ ನಿತ್ಯ ದೇವಿಯರು (೭೧ನೇ ನಾಮಾವಳಿಯ ವ್ಯಾಖ್ಯಾನವನ್ನು ನೋಡಿ). ಈ ಹದಿನೈದು ತಿಥಿನಿತ್ಯ ದೇವಿಯರ ಯುದ್ಧದಲ್ಲಿ ಮೆರೆದ ಶೌರ್ಯವನ್ನು ಕಂಡು ಶ್ರೀ ಲಲಿತೆಯು ಸಂತೋಷಗೊಂಡಳು.

           ಯಾವಾಗ ಮಾಯೆಯ ಮುಸುಕು ತೆಗೆಯಲ್ಪಡುತ್ತದೋ, ಆಗ ಬ್ರಹ್ಮದ ಕುರಿತಾದ ಜ್ಞಾನವು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಾ ಹೋಗುತ್ತದೆ. ಒಮ್ಮೆ ಗಳಿಸಿಕೊಂಡ ಆಧ್ಯಾತ್ಮಿಕ ಜ್ಞಾನವು ಅಷ್ಟು ಸುಲಭವಾಗಿ ಹಿಮ್ಮುಖವಾಗಿಸಲಾಗದು (ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಹಾಗೆ ಹಿಮ್ಮುಖವಾಗಬಹುದು). ಇದು ಈ ನಾಮಾವಳಿಯ ಗೂಡಾರ್ಥವಾಗಿದೆ.

Bhaṇḍaputravadhodyukta-bālā-vikrama-nanditā भण्डपुत्र-वधोद्युक्त-बाला-विक्रम-नन्दिता (74)

೭೪. ಭಂಡಪುತ್ರ-ವಧೋದ್ಯುಕ್ತ-ಬಾಲಾ-ವಿಕ್ರಮ-ನಂದಿತಾ

            ಬಾಲಾ ಎನ್ನುವುದು ಶ್ರೀ ಲಲಿತೆಯ ಒಂಭತ್ತು ವರ್ಷದ ಮಗಳ ಹೆಸರು. ಭಂಡಾಸುರನಿಗೆ ಮೂವತ್ತು ಜನ ಮಕ್ಕಳಿದ್ದರು. ಶ್ರೀ ಲಲಿತೆಯು ತನ್ನ ಮಗಳಿಗೆ ಯುದ್ಧಭೂಮಿಗೆ ಹೋಗಬೇಡವೆಂದು ಸಲಹೆಯನ್ನಿತ್ತರೂ ಕೂಡಾ ’ಬಾಲಾ’ಳು ಅದಕ್ಕೆ ಕಿವಿಗೊಡದೆ ಭಂಡಾಸುರನ ಎಲ್ಲಾ ಮೂವತ್ತು ಮಂದಿ ಮಕ್ಕಳ ಮೇಲೆ ಯುದ್ಧವನ್ನು ಹೂಡಿ ಅವರೆಲ್ಲರನ್ನೂ ಸಂಹರಿಸಿದಾಗ ದೇವಿಯು ಆನಂದಗೊಂಡಳು.

            ಶ್ರೀ ವಿದ್ಯಾ ಪದ್ಧತಿಯಲ್ಲಿ, ಮೊದಲು ಯಾವಾಗಲೂ ಬಾಲಾ ಮಂತ್ರದ ದೀಕ್ಷೆಯನ್ನು ಕೊಡಲಾಗುತ್ತದೆ. ಬಾಲಾ ಮಂತ್ರದ ಮೂಲಕ ಒಬ್ಬನು ಸಿದ್ಧಿಯನ್ನು ಸಾಧಿಸಿದರೆ; ಅವನು ಕೆಲವೊಂದು ವಿಶೇಷ ಶಕ್ತಿಗಳನ್ನು ಕೆಲವು ಅಪರೂಪದ ಸಸ್ಯಗಳನ್ನು ಉಪಯೋಗಿಸುವುದರಿಂದ ಪಡೆಯುತ್ತಾನೆ. ಕೆಲವು ಸಸ್ಯಗಳಿಗೆ ದೈವೀ ಗುಣಗಳಿದ್ದು ಅವು ಅಸಾಮಾನ್ಯ ಶಕ್ತಿಗಳನ್ನು ಒಬ್ಬನಿಗೆ ಉಂಟಾಗುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ; ಆದರೆ ಅದಕ್ಕೆ ಮೊದಲು ಆ ವ್ಯಕ್ತಿಯು ಬಾಲಾ ಮಂತ್ರದ ಮೂಲಕ ಸಿದ್ಧಿಯನ್ನು ಪಡೆದಿರಬೇಕು. 

           ’ಬಾಲಾ’ಳು ಲಲಿತಾಂಬಿಕೆಯ ಅಂಗದೇವತೆಯಾಗಿದ್ದಾಳೆ. ಶ್ರೀ ಲಲಿತೆ, ಮಂತ್ರಿಣೀ ಮತ್ತು ವಾರಾಹೀ ದೇವಿ ಇವರುಗಳಿಗೆ ಅಂಗ ದೇವಿಯರು, ಉಪಾಂಗ ದೇವಿಯರು ಮತ್ತು ಪ್ರತ್ಯಂಗ ದೇವಿಯರು ಇರುತ್ತಾರೆ. ಲಲಿತಾಂಬಿಕೆಗೆ ಅನ್ನಪೂರ್ಣಾ ದೇವಿಯು ಉಪಾಂಗ ದೇವಿಯಾದರೆ ಅಶ್ವಾರೂಢಾ ದೇವಿಯು ಪ್ರತ್ಯಂಗ ದೇವಿಯಾಗಿದ್ದಾಳೆ. ಅಂಗ, ಉಪಾಂಗ ಮತ್ತು ಪ್ರತ್ಯಂಗಗಳು ಸ್ಥೂಲ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮವಾದ ದೇವಿಯ ಅಂಗಗಳನ್ನು ಸಂಕೇತಿಸುತ್ತವೆ. ಭಂಡಾಸುರನ ಮಕ್ಕಳು ಮೂವತ್ತು ತತ್ವಗಳನ್ನು ಪ್ರತಿನಿಧಿಸುತ್ತವೆ. ನಾವು ಇವುಗಳನ್ನು ಜಯಿಸದ ಹೊರತು ನಮಗೆ ಸಾಕ್ಷಾತ್ಕಾರವು ಉಂಟಾಗುವುದಿಲ್ಲ. ಬಾಲಾ ಮಂತ್ರವನ್ನು ಸಿದ್ಧಿಸಿಕೊಳ್ಳಲು ನಾವು ಮಾಡುವ ಅಲ್ಪ ಪ್ರಯತ್ನವು ಕೆಡುಕನ್ನುಂಟು ಮಾಡುವ ಎಲ್ಲಾ ತತ್ವಗಳನ್ನು (ವಸ್ತುಗಳನ್ನು) ನಾಶಪಡಿಸುತ್ತವೆ.

Mantriṇyambā-viracita-viśaṅgavadha-toṣitā मन्त्रिण्यम्बा-विरचित-विशङ्गवध-तोषिता (75)

೭೫. ಮಂತ್ರಿಣ್ಯಾಂಬಾ-ವಿರಚಿತ-ವಿಶಙ್ಗವಧ-ತೋಷಿತಾ

          ವಿಶಂಗನು ಮಂತ್ರಿಣೀ (ಶ್ಯಾಮಲಾ) ದೇವಿಯಿಂದ ಹತನಾದದ್ದಕ್ಕೆ ದೇವಿಯು ಸಂತಸ ಹೊಂದಿದಳು. ವಿಶಂಗ ಮತ್ತು ವಿಶುಕ್ರರು ಭಂಡಾಸುರನ ಇಬ್ಬರು ಸಹೋದರರು. ಇವರನ್ನು ಭಂಡಾಸುರನು ತನ್ನ ತೋಳುಗಳಿಂದ ಸೃಷ್ಟಿಸಿದ್ದನು.

          ಈ ನಾಮದಲ್ಲಿ ’ವಿ’(वि)ಬೀಜವು ಅಡಗಿದೆ. ಇದರ ಮೂಲಾಕ್ಷರವು ’ವ’(व) ಮತ್ತು ಇದು ಎರಡು ವಸ್ತುಗಳನ್ನು ಸೂಚಿಸುತ್ತದೆ. ಮೊದಲನೆಯದಾಗಿ ಇದು ಅತೀಂದ್ರಿಯ ಶಕ್ತಿಗಳನ್ನು ಪಡೆಯಲು ಸಹಾಯ ಮಾಡುತ್ತದೆ ಮತ್ತು ಎರಡನೆಯದಾಗಿ ಇದು ದುಷ್ಟ ಶಕ್ತಿಗಳಿಂದಾದ ಕೆಡುಕುಗಳನ್ನು ಹೋಗಾಲಾಡಿಸುತ್ತದೆ. ಮಂತ್ರಿಣೀ ದೇವಿಯು ಮಂತ್ರಗಳ ಬಲವನ್ನು ಪ್ರತಿನಿಧಿಸುತ್ತಾಳೆ. ವಿಶಂಗ ಎಂದರೆ ಸ್ಪರ್ಷೇಂದ್ರಿಯಗಳಿಂದ (ಗ್ರಹಣೇಂದ್ರಿಯ/ಪಂಚೇಂದ್ರಿಯ) ಉದ್ಭವವಾಗುವ ದುರಾಸೆಗಳು. ಮಂತ್ರಿಣೀ ದೇವಿಯು ಲಲಿತಾಂಬಿಕೆಯ ಭಕ್ತರಿಗೆ ಕೆಡುಕುಂಟು ಮಾಡುವ ಅಂತಹ ದುರಾಸೆಗಳನ್ನು ನಾಶಮಾಡುತ್ತಾಳೆ.

Viśukra-prāṇaharaṇa-Vārāhī-vīrya-nanditā विशुक्र-प्राणहरण-वाराही-वीर्य-नन्दिता (76)

೭೬.ವಿಶುಕ್ರ-ಪ್ರಾಣಹರಣ-ವಾರಾಹೀ-ವೀರ್ಯ-ನಂದಿತಾ

          ವಿಶುಕ್ರನು ಹಿಂದಿನ ನಾಮಾವಳಿಯಲ್ಲಿ ತಿಳಿಸಿದಂತೆ ಭಂಡಾಸುರನ ತಮ್ಮನಾಗಿದ್ದಾನೆ. ವಾರಾಹೀ ದೇವಿಯು ವಿಶುಕ್ರನನ್ನು ಸಂಹರಿಸಿಳು ಮತ್ತು ಅವಳ ಶೌರ್ಯವನ್ನು ನೋಡಿ ಲಲಿತಾಂಬಿಕೆಯು ಹರ್ಷಿಸಿದಳು.

          ೭೪,೭೫ ಮತ್ತು ೭೬ನೇ ನಾಮಗಳು ಬಾಲಾ, ಮಂತ್ರಿಣೀ ಮತ್ತು ವಾರಾಹೀ ದೇವಿಯರ ಕುರಿತು ಹೇಳುತ್ತವೆ. ಕಲೆ ಅಥವಾ ಕಲ್ಮಶಗಳನ್ನು ಸಂಸ್ಕೃತದಲ್ಲಿ ಮಲವೆನ್ನುತ್ತಾರೆ. ಈ ಮೂರು ದೇವಿಯರು ನಮ್ಮ ಪಂಚೇಂದ್ರಿಯಗಳಿಂದ ಒಳಸೇರುವ ಮಾನಸಿಕ ಅಶುದ್ಧತೆಗಳನ್ನು ನಾಶಮಾಡುತ್ತಾರೆ. ಈ ಕಲೆ ಅಥವಾ ಮಲಿನತೆಗಳನ್ನೇ ಮಲವೆನ್ನುವುದು, ಅದರಲ್ಲಿ ಅತ್ಯಂತ ಕೆಟ್ಟದ್ದು ಅಹಂಕಾರ. ಬಾಲಾ ಎನ್ನುವುದನ್ನು ಬಲಾ ಅಥವಾ ಶಕ್ತಿ ಎಂದು ವಿಶ್ಲೇಷಿಸಬಹುದು. ಒಬ್ಬನು ದಿವ್ಯ ಶಕ್ತಿಯನ್ನು ಪಡೆಯಬೇಕಾದರೆ ಅವನಲ್ಲಿ ಸಾಕಷ್ಟು ಬಲವಿರಬೇಕು, ಇದನ್ನು ಸಹಸ್ರಾರ ಮತ್ತು ತಲೆಯ ಹಿಂದಿರುವ ಚಕ್ರಗಳಿಂದ ತುಂಬಲಾಗುತ್ತದೆ. ಮಂತ್ರಿಣೀ ಎನ್ನುವುದು ಬಹುಶಃ ದೇವಿಯ ಮಂತ್ರಗಳಿಂದ ಉಂಟಾಗುವ ಶಕ್ತಿ; ಉದಾಹರಣೆಗೆ - ಪಂಚದಶೀ ಮತ್ತು ಷೋಡಶೀ. ಪುರಾತನ ಗ್ರಂಥಗಳ ಪ್ರಕಾರ ಪ್ರತಿಯೊಂದು ಮಂತ್ರವನ್ನು ಒಂದು ನಿಶ್ಚಿತ ಸಂಖ್ಯೆಯವರೆಗೆ ಜಪಿಸಿದ ನಂತರ ಇತರೇ ವಿಧಿಗಳನ್ನು ಕೈಗೊಳ್ಳಬೇಕು; ಇದನ್ನು ಪುರಶ್ಚರಣ ಎನ್ನುತ್ತಾರೆ. ವಾರಾಹೀ ದೇವಿಯು ಮೂವರು ದೇವಿಯರಲ್ಲಿ ಬಹಳ ಶಕ್ತಿವಂತಳೆಂದು ಪರಿಗಣಿಸಲ್ಪಟ್ಟಿದ್ದಾಳೆ; ಆಕೆಯ ಯಾವುದೇ ರೀತಿಯ ಅಶಿಸ್ತನ್ನು ಸಹಿಸುವುದಿಲ್ಲ. ಬಹುಶಃ ’ವಾರಾಹಿ’ ಎಂದರೆ ದೇವಿಯ ಉಪಾಸನೆಯಲ್ಲಿ ಪಾಲಿಸಬೇಕಾದ ಕಟ್ಟುನಿಟ್ಟಾದ ಆಚಾರ ಸಂಹಿತೆಗಳಿರಬೇಕು. ದೈಹಿಕ ಬಲ, ಮನಸ್ಸಿನ ನಿಗ್ರಹ (ಇದು ಮಂತ್ರಗಳ ಉಚ್ಛಾರಣೆಯಿಂದ ಉಂಟಾಗುತ್ತದೆ) ಮತ್ತು ಕೆಲವೊಂದು ನಿಯಮಗಳನ್ನು ಪಾಲಿಸುವುದು (ಇಂದ್ರಿಯ ನಿಗ್ರಹ ಮೊದಲಾದವು) ಈ ಮೂರೂ ಒಬ್ಬ ಮನುಷ್ಯನು ಅಂತರಾತ್ಮನಾದ ಪರಮಾತ್ಮನನ್ನು ಅರಿಯಲು ಸಹಾಯಕವಾಗಿವೆ. ಯಾವಾಗ ಅಂತಹ ಸ್ಥಿತಿಗೆ ಭಕ್ತನು ತಲುಪುತ್ತಾನೆಯೋ ಆಗ ಅವನು ತನ್ನ ದೇಹವನ್ನು ಕೇವಲ ಕವಚವಾಗಿ ಉಪಯೋಗಿಸಿಕೊಂಡು ದೇವಿಯಲ್ಲಿ ಲೀನವಾಗುವ ಅಂತಿಮ ಬಿಡುಗಡೆಯನ್ನು ಪಡೆಯುತ್ತಾನೆ. 

Rating
No votes yet

Comments

Submitted by nageshamysore Wed, 05/22/2013 - 22:41

ಶ್ರೀಧರ ಅವರೆ, ನಾನು ದೇವಿಯ ಅದೆಷ್ಟೊ ಹೆಸರುಗಳನ್ನು ಕೇಳಿದ್ದೆ - ಅನ್ನಪೂರ್ಣೆ, ವಾರಾಹಿ ಇತ್ಯಾದಿ ಇತ್ಯಾದಿ. ಆದರೆ ಅವೆಲ್ಲ ಒಂದೆ ಬೇರಿನ ನೂರೆಂಟು ಶಾಖೆಗಳ ಹಾಗೆ ದೇವಿಯ ಬಗೆ ಬಗೆ ರೂಪಗಳೆಂಬ ಅರಿವನ್ನು ಪ್ರಜ್ಞಾಪೂರ್ವಕವಾಗಿ ಉಂಟುಮಾಡುತ್ತಿದೆ ನಿಮ್ಮ ಬರಹ, ಅದರ ಅಗಾಧತೆ ಮತ್ತು ವ್ಯಾಪ್ತಿಯ ವಿಸ್ತಾರವನ್ನು ಪರಿಚಯಿಸುತ್ತ!
-ನಾಗೇಶ ಮೈಸೂರು, ಸಿಂಗಪುರದಿಂದ

Submitted by makara Thu, 05/23/2013 - 08:40

In reply to by nageshamysore

ನಿಮ್ಮ ಮಾತು ನಿಜ ನಾಗೇಶರೆ. ಲಲಿತಾ ಸಹಸ್ರನಾಮ ಎಲ್ಲಾ ದೇವರುಗಳ ಬೇರುಗಳನ್ನು ಒಳಗೊಂಡಿದೆ. ಅದಕ್ಕಾಗಿಯೇ ಏನೋ ಯಾರಾದರೂ ಜೀವಿತಕಾಲದಲ್ಲಿ ಒಂದೇ ಒಂದು ಬಾರಿ ಲಲಿತಾ ಸಹಸ್ರನಾಮವನ್ನು ಪಠಿಸಿದರೆ ಅವರಿಗೆ ಮುಕ್ತಿಯುಂಟಾಗುವುದೆಂದು ಸ್ವಯಂ ಲಲಿತಾಂಬಿಕೆಯೇ ವಾಗ್ದಾನವಿತ್ತಿದ್ದಾಳಂತೆ. ವಂದನೆಗಳೊಂದಿಗೆ, ಶ್ರೀಧರ್.