೩೨. ಶ್ರೀ ಲಲಿತಾ ಸಹಸ್ರನಾಮ ೭೭ರಿಂದ ೮೦ನೇ ನಾಮದ ವಿವರಣೆ

೩೨. ಶ್ರೀ ಲಲಿತಾ ಸಹಸ್ರನಾಮ ೭೭ರಿಂದ ೮೦ನೇ ನಾಮದ ವಿವರಣೆ

ಲಲಿತಾ ಸಹಸ್ರನಾಮ ೭೭-೮೦

Kāmeśvara-mukhāloka-kalpita-śrīgaṇeśvarā कामेश्वर-मुखालोक-कल्पित-श्रीगणेश्वरा (77)

೭೭.ಕಾಮೇಶ್ವರ-ಮುಖಾಲೋಕ-ಕಲ್ಪಿತ-ಶ್ರೀಗಣೇಶ್ವರಾ

        ಕಾಮೇಶ್ವರನೆಡೆಗೆ ಲಲಿತೆಯ ಕೇವಲ ಒಂದು ಕಣ್ಣೋಟದಿಂದ ಗಣೇಶನ ಜನನವಾಯಿತು. ಗಣೇಶನು ಶಿವ ಪಾರ್ವತಿಯರ ಮೊದಲನೇ ಮಗ. ಭಂಡಾಸುರನು ಯುದ್ಧ ಸಮಯದಲ್ಲಿ ತನ್ನ ಸೈನ್ಯವು ವಿನಾಶವಾಗುತ್ತಿರುವುದನ್ನು ನೋಡುತ್ತಿದ್ದ.  ತನ್ನ ಸೈನ್ಯಕ್ಕೆ ಇನ್ನಷ್ಟು ನಷ್ಟ ಜರುಗುವುದನ್ನು ತಪ್ಪಿಸಲು ಭಂಡಾಸುರನು ‘ಜಯವಿಘ್ನ’ವೆಂಬ ಒಂದು ಯಂತ್ರವನ್ನು ಶ್ರೀ ಲಲಿತೆಯ ಸೈನ್ಯದ ಮಧ್ಯೆ ಸ್ಥಾಪಿಸಲು ಆದೇಶವಿತ್ತನು. ಸರಿಯಾದ (ಶಕ್ತಿಯುತ) ಮಂತ್ರಗಳನ್ನು ಅಳವಡಿಸಿದಾಗ ಯಂತ್ರಗಳು ಬಹಳ ಶಕ್ತಿಯುತವಾಗಿರುತ್ತವೆ. ಯಾವಾಗ ಜಯವಿಘ್ನ ಯಂತ್ರವು ಇರಿಸಲ್ಪಟ್ಟಿತೋ ಆಗ ಶ್ರೀ ಲಲಿತೆಯ ಸೈನ್ಯದ ಆತ್ಮ ವಿಶ್ವಾಸವು ಕುಗ್ಗುತ್ತಾ ಬಂತು. ಮಂತ್ರಗಳ ಅಧಿಕಾರಿಣಿಯಾಗಿರುವ ಮಂತ್ರಿಣೀ ದೇವಿಯು ಇದನ್ನು ಗಮನಿಸಿ ಲಲಿತಾಂಬಿಕೆಗೆ ಅದರ ವೃತ್ತಾಂತವನ್ನು ತಿಳಿಸಿದಳು. ಯಾರು ಪೂರ್ಯಾಷ್ಟಕವನ್ನು ಜಯಿಸಿದ್ದಾರೋ ಅವರಿಗೆ ಮಾತ್ರ ಈ ಯಂತ್ರವನ್ನು ತೆಗೆಯಲು ಸಾಧ್ಯವಿದೆ. ಪೂರ್ಯಾಷ್ಟಕವೆಂದರೆ ಅವು ಈ ಎಂಟು ಅಂಶಗಳನ್ನು ಒಳಗೊಂಡಿರುತ್ತದೆ; ಅವು ಯಾವುವೆಂದರೆ - ೧) ಐದು ಕರ್ಮೇಂದ್ರಿಯಗಳು ೨) ಐದು ಜ್ಞಾನೇಂದ್ರಿಯಗಳು (ಗ್ರಹಣೇಂದ್ರಿಯಗಳು/ಪಂಚೇಂದ್ರಿಯಗಳು) ೩) ನಾಲ್ಕು ಅಂತಃಕರಣಗಳು - ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂಕಾರಗಳು ೪) ಐದು ಪ್ರಾಣಗಳು (ಪ್ರಾಣ, ಅಪಾನ, ಮೊದಲಾದವುಗಳು) ೫) ಪಂಚಭೂತಗಳು (ಆಕಾಶ, ವಾಯು ಮೊದಲಾದವು) ೬) ಕಾಮ (ಆಸೆ) ೭) ಅಜ್ಞಾನ ಮತ್ತು ೮) ಕರ್ಮ. ಪೂರ್ಯಾಷ್ಟಕವು ಒಟ್ಟು ೨೭ ವಸ್ತುಗಳನ್ನು ಹೊಂದಿರುತ್ತದೆ ಮತ್ತು ಇವುಗಳೊಂದಿಗೆ ಶಿವನ ಗುಣಗಳನ್ನು ಸೇರಿಸಿದರೆ ಅವು ಒಟ್ಟು ೨೮ ಆಗುತ್ತವೆ. ಗಣಪತಿಯ ಮೂಲ ಮಂತ್ರವು ಇಪ್ಪತ್ತೆಂಟು ಆಗಿದೆ. ಪೂರ್ಯಾಷ್ಟಕದ ಎಲ್ಲಾ ೨೭ ಅಂಶಗಳು ನಾಶವಾದಾಗ ಅದು ಶಿವನ ಗುಣಗಳಿದ್ದಲ್ಲಿಗೆ ನಮ್ಮನ್ನು ಒಯ್ಯುತ್ತದೆ. ಶಿವನ ಗುಣವೆಂದರೆ (ಸಗುಣ ಬ್ರಹ್ಮ), ಶುದ್ಧನಾದ ಶಿವ ಅಥವಾ ನಿರ್ಗುಣ ಬ್ರಹ್ಮ(ಗುಣರಹಿತ ಶಿವ)ದ ಸಾಕ್ಷಾತ್ಕಾರದ ಪರಮಾನಂದವನ್ನು ಹೊಂದಿದ ಮೇಲೆ ನಮಗೆ ಮುಕ್ತಿಯು ಉಂಟಾಗುತ್ತದೆ.

          ಶಿವ ಸೂತ್ರದ ೩.೪೨ನೇ ಶ್ಲೋಕವು, “ಭೂತಕಂಚುಕೀ ತದಾ ವಿಮುಕ್ತೋ ಭೂಪತಿಸಮಃ ಪರಃ” ಅಂದರೆ ಅವನಿಗೆ (ಯೋಗಿಗೆ) ಪಂಚಭೂತಗಳು ಕೇವಲ ಹೊದಿಕೆಗಳಂತೆ. ಆ ಒಂದು ಕ್ಷಣದಲ್ಲಿಯೇ ಅವನು ಸಂಪೂರ್ಣವಾಗಿ ಮುಕ್ತನಾಗುತ್ತಾನೆ, ಶಿವನಂತೆ ಪರಮೋನ್ನತನಾಗುತ್ತಾನೆ.

          ಈ ನಾಮವು ಮುಕ್ತಿಗೆ ಕೊಂಡೊಯ್ಯುವ ಹಂತಗಳನ್ನು ತಿಳಿಸುತ್ತದೆ. 

Mahāgaṇeśa-nirbhinna-vighnayantrā-praharṣitā महागणेश-निर्भिन्न-विघ्नयन्त्रा-प्रहर्षिता (78)

೭೮. ಮಹಾಗಣೇಶ-ನಿರ್ಭಿನ್ನ-ವಿಘ್ನಯಂತ್ರಾ-ಪ್ರಹರ್ಷಿತಾ

          ಈ ನಾಮವು ಹಿಂದಿನ ನಾಮದ ಮುಂದುವರಿಕೆಯಾಗಿದೆ. ಭಂಡಾಸುರನು ಇರಿಸಿದ್ದ ಜಯವಿಘ್ನ ಯಂತ್ರವನ್ನು ತೆಗೆಯಲು ಗಣೇಶನನ್ನು ಸೃಷ್ಟಿಸಲಾಯಿತು. ಗಣೇಶನು ಆ ಯಂತ್ರವನ್ನು ನಿರ್ಮೂಲನೆ ಮಾಡಿ ಲಲಿತಾಂಬಿಕೆಯ ಸೈನ್ಯವು ತನ್ನ ಆತ್ಮವಿಶ್ವಾಸವನ್ನು ಪುನಃ ಸ್ಥಾಪಿಸಿಕೊಳ್ಳುವಲ್ಲಿ ಸಹಾಯ ಮಾಡಿದನು. ಗಣೇಶನು ಆ ಯಂತ್ರವನ್ನು ತೆಗೆದಾಕ್ಷಣ ಶ್ರೀ ಲಲಿತೆಯು ಆನಂದಗೊಂಡಳು. ನಾವು ಈ ಎರಡೂ ನಾಮಗಳ ಅಂದವನ್ನು ಗಮನಿಸಬೇಕು. ಎಲ್ಲಾ ವಿಧವಾದ ದುಷ್ಕೃತ್ಯಗಳನ್ನು ಈ ಯಂತ್ರವು ಪ್ರತಿನಿಧಿಸುತ್ತದೆ. ಮಾಯೆಯು ಕೆಟ್ಟ ಕೆಲಸಗಳನ್ನು ಮಾಡುವುದಕ್ಕೆ ಮೂಲ ಕಾರಣವಾಗಿದೆ. ಲಲಿತಾಂಬಿಕೆಯು ಈ ಮಾಯೆಯನ್ನು ಉಂಟು ಮಾಡುತ್ತಾಳಾದ್ದರಿಂದ ಆಕೆ ಮಾತ್ರವೇ ಈ ಮಾಯೆಯ ಮುಸುಗನ್ನು ಸರಿಸಬಲ್ಲಳು. ಒಮ್ಮೆ ಆಕೆಯು ಈ ಮಾಯೆಯ ಮುಸುಗನ್ನು ತೆಗೆಯಲು ನಿರ್ಧರಿಸಿದ ಮೇಲೆ ಶುದ್ಧನಾದ ಶಿವನ ಸಾಕ್ಷಾತ್ಕಾರವಾಗುತ್ತದೆ. ಆದರೆ ಲಲಿತೆಯು ತನ್ನಷ್ಟಕ್ಕೆ ತಾನೇ ಈ ಮಾಯೆಯ ಮುಸುಗನ್ನು ತೆಗೆಯುವುದಿಲ್ಲ ಆದರೆ ಅವಳು ಒಬ್ಬನ ಪ್ರಯತ್ನಗಳನ್ನು ನೋಡಿದ ಮೇಲೆ ಮಾಯೆಯ ಮುಸುಗನ್ನು ಸರಿಸುತ್ತಾಳೆ. ಆದ್ದರಿಂದ ಶ್ರೀ ಲಲಿತೆಯನ್ನು ಗುರುವೆಂದು ಈ ಸಹಸ್ರನಾಮದ ೭೧೩ನೇ ನಾಮಾವಳಿಯಲ್ಲಿ ಸಂಭೋದಿಸಲಾಗಿದೆ.

Bhaṇḍāsurendra-nirmukta-śastra-pratyastra-varṣiṇī भण्डासुरेन्द्र-निर्मुक्त-शस्त्र-प्रत्यस्त्र-वर्षिणी (79)

೭೯. ಭಂಡಾಸುರೇಂದ್ರ-ನಿರ್ಮುಕ್ತ-ಶಸ್ತ್ರ-ಪ್ರತ್ಯಸ್ತ್ರ-ವರ್ಷಿಣೀ

          ಭಂಡಾಸುರನ ಶಸ್ತ್ರಗಳಿಗೆ ಪ್ರತಿಯಾಗಿ ತನ್ನ ಅಸ್ತ್ರಗಳನ್ನು ದೇವಿಯು ಪ್ರಯೋಗಿಸುತ್ತಾಳೆ. ಇಲ್ಲಿ ಎರಡು ವಿಧವಾದ ಆಯುಧಗಳನ್ನು ಹೆಸರಿಸಲಾಗಿದೆ. ಅಸ್ತ್ರವೆಂದರೆ ಯಾವುದನ್ನು ಯುದ್ಧ ಮಾಡುವಾಗ ಶತ್ರುಗಳಿಗೆ ಅಭಿಮುಖವಾಗಿ ಎಸೆಯುತ್ತೇವೆಯೋ ಅದು; ಆಧುನಿಕ ಯುಗದ ಬಾಂಬುಗಳನ್ನು ಇವಕ್ಕೆ ಹೋಲಿಸಬಹುದು. ಇನ್ನೊಂದು ಶಸ್ತ್ರ ಅದನ್ನು ಯಾವಾಗಲೂ ಕೈಯ್ಯಲ್ಲಿ ಬಂದೂಕಿನಂತೆ ಹಿಡಿದಿರಬೇಕು. ನಾವು ಪರಮಾನಂದವನ್ನು ಹೊಂದುವ ಪ್ರಯತ್ನದಲ್ಲಿ ಲಲಿತಾಂಬಿಕೆಯು ತನ್ನ ಆಯುಧಗಳಿಂದ ನಮ್ಮ ಅಜ್ಞಾನವನ್ನು ನಾಶಪಡಿಸಿ ನಮಗೆ ಸಹಾಯ ಮಾಡುತ್ತಾಳೆ. ನಮ್ಮನ್ನು ಗುರಿಯಾಗಿರಿಸಿ ಅವಳ ಕೈಯ್ಯಿಂದ ಹೊರಬರುವ ಆಯುಧಗಳು ಮಾಯೆಯಿಂದುಂಟಾಗುವ ದ್ವೈತವನ್ನು ಹೋಗಲಾಡಿಸುತ್ತದೆ.

          ೭೭,೭೮ ಮತ್ತು ೭೯ನೇ ನಾಮಾಗಳು ಒಟ್ಟಾಗಿ ಆತ್ಮಸಾಕ್ಷಾತ್ಕಾರದ ದೀಕ್ಷೆಯನ್ನು ಹೊಂದಲು ಅವಶ್ಯವಾಗಿರುವ ಹಂತಗಳನ್ನು ತಿಳಿಸುತ್ತವೆ ಮತ್ತು ದೇವಿಯು ಆ ಅತ್ಯುನ್ನತ ಗುರಿಯನ್ನು ಹೊಂದಲು ನಮಗೆ ಹೇಗೆ ಸಹಾಯಕಳಾಗಿದ್ದಾಳೆಂದು ತಿಳಿಸುತ್ತವೆ.

Karāṅguli-nakhotpanna-nārāyaṇa-daśākṛitiḥ कराङ्गुलि-नखोत्पन्न-नारायण-दशाकृतिः (80)

೮೦. ಕರಾಂಗುಲಿ-ನಖೋತ್ಪನ್ನ-ನಾರಾಯಣ-ದಶಾಕೃತಿಃ

          ದೇವಿಯು ತನ್ನ ನಖಗಳಿಂದ (ಉಗುರುಗಳಿಂದ) ಶ್ರೀ ವಿಷ್ಣುವಿನ ದಶಾವತಾರಗಳನ್ನು ಸೃಷ್ಟಿಸಿದಳು. ಭಂಡಾಸುರನು ರಾವಣನಂತಹ ಹತ್ತು ಜನ ರಾಕ್ಷಸರನ್ನು ತನ್ನ ಕ್ಷಿಪಣಿಯಾದ ‘ಸರ್ವಾಸುರಾಸ್ತ್ರದ’ ಮೂಲಕ ಸೃಷ್ಟಿಸಿದನು. ಈ ಹತ್ತು ರಾಕ್ಷಸರನ್ನು ಶ್ರೀ ಮಹಾ ವಿಷ್ಣುವು ತನ್ನ ದಶಾವತಾರದ ಕಾಲದಲ್ಲಿ ಸಂಹರಿಸಿದ್ದನು. ನಾರಾಯಣ ಅಂದರೆ ಜೀವ ಮತ್ತು ಈಶ್ವರ. ದಶಾಕೃತಿಃ ಎಂದರೆ ಮನುಷ್ಯನ ಐದು ಅವಸ್ಥೆಗಳಾದ ಜಾಗೃತ, ನಿದ್ರಾ, ಸುಷುಪ್ತಿ, ತುರೀಯಾ (ಮೊದಲ ಮೂರು ಸ್ಥಿತಿಗಳನ್ನು ಕಟ್ಟಿಹಾಕುವ ಪಾರಮಾರ್ಥಿಕ ಸ್ಥಿತಿ) ಮತ್ತು ತುರ್ಯಾತೀತ (ಇದು ತುರೀಯಾವಸ್ಥೆಗಿಂತ ಉನ್ನತವಾದ ಹಂತವಾಗಿದ್ದು; ಇಲ್ಲಿ ಯಾವುದೇ ವಿಧವಾದ ದ್ವಂದ್ವವಿರುವುದಿಲ್ಲ) ಮತ್ತು ಬ್ರಹ್ಮದ ಐದು ಅವಸ್ಥೆಗಳಾದ ಸೃಷ್ಟಿ, ಸ್ಥಿತಿ, ವಿನಾಶ, ಒಳಸೆಳೆದುಕೊಳ್ಳುವಿಕೆ (ತಿರೋಧಾನ) ಮತ್ತು ಲೀನವಾಗುವಿಕೆ. ಮನುಷ್ಯನ ಐದು ಅವಸ್ಥೆಗಳು ಮತ್ತು ಬ್ರಹ್ಮದ ಐದು ಅವಸ್ಥೆಗಳು ಸೇರಿ ದಶಾಕೃತಿಗಳಾಗಿವೆ. ಬಹುಶಃ ಇಲ್ಲಿ ಪ್ರಸ್ತಾಪಿಸಲಾಗಿರುವ ನಾರಾಯಣನು ಮಹಾವಿಷ್ಣುವಾಗಿರಲಾರನು. ವಿಷ್ಣುವು ಶ್ರೀ ಲಲಿತೆಯ ಸಹೋದರನಾಗಿದ್ದಾನೆ ಆದ್ದರಿಂದ ವಾಗ್ದೇವಿಗಳು ಈ ಅರ್ಥವನ್ನು ಸೂಚಿಸಲು ಇಲ್ಲಿ ಬಯಸಿರುವುದಿಲ್ಲ. ಸರಿಯಾದ ವಿವರಣೆಯು ಹೀಗೆ ಇದೆ; ಅದೇನೆಂದರೆ ದೇವಿಯು ತನ್ನ ಉಗುರುಗಳಿಂದ ಮನುಷ್ಯನ ಐದು ಸ್ಥಿತಿಗಳನ್ನು ಮತ್ತು ಬ್ರಹ್ಮದ ಐದು ಕ್ರಿಯೆಗಳನ್ನು ಸೃಷ್ಟಿಸುತ್ತಾಳೆ. ಅವಳ ಉಗುರಿನ ಸೃಷ್ಟಿಯೆಂದರೆ ಆ ಹತ್ತು ಅಂಶಗಳ ಸೃಷ್ಟಿ ಕ್ರಿಯೆಯನ್ನು ದೇವಿಯು ಅಷ್ಟು ಸುಲಭವಾಗಿ ಮಾಡಬಲ್ಲಳೆನ್ನುವುದನ್ನು ಸೂಚಿಸುತ್ತದೆ.

         ದೇವಿಯ ಪ್ರಕಾಶ ಮತ್ತು ವಿಮರ್ಶ ರೂಪಗಳನ್ನು ಇದುವರೆಗಾಗಲೇ ಚರ್ಚಿಸಲಾಗಿದೆ. ಈ ಸಹಸ್ರನಾಮದ ಪ್ರತಿಯೊಂದು ನಾಮವೂ ಅವಳ ಈ ಎರಡೂ ರೂಪಗಳಲ್ಲಿ ಒಂದನ್ನು ಹೆಸರಿಸುತ್ತವೆ.

ತುರಿಯಾ ಮತ್ತು ತುರಿಯಾತೀತ ಅವಸ್ಥೆಗಳ ಬಗ್ಗೆ ಹೆಚ್ಚಿನ ವಿವರನೆ:

          ತುರೀಯಾವಸ್ಥೆಯು ಪ್ರಜ್ಞೆಯ ನಾಲ್ಕನೇ ಹಂತವಾಗಿದ್ದು ಇದು ಸಾಮಾನ್ಯ ಮೂರು ಅವಸ್ಥೆಗಳಾದ ಜಾಗ್ರತ್, ಸ್ವಪ್ನ ಮತ್ತು ಸುಷುಪ್ತಿಗಳಿಗಿಂತ  ಉನ್ನತವಾದ ಹಂತವಾಗಿದೆ. ತುರೀಯಾವಸ್ಥೆಯು ಈ ಮೂರು ಸ್ಥಿತಿಗಳನ್ನು ಒಂದಾಗಿ ಕಟ್ಟಿ ಹಾಕುತ್ತದೆ. ತುರೀಯಾವಸ್ಥೆಯು ಪರಾಭೌತಿಕ ಪ್ರಜ್ಞೆಯಾಗಿದ್ದು ಇದು ಸ್ಥೂಲ ಜೀವಿಯ (ವ್ಯಕ್ತಿಯ) ಮಾನಸಿಕ ಪ್ರಜ್ಞೆಗೆ ಅತೀತವಾದದ್ದಾಗಿದೆ. ಈ ಅವಸ್ಥೆಯು ದೈವಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ತುರ್ಯಾತೀತವು ತುರಿಯಾವಸ್ಥೆಯನ್ನು ಮೀರಿದ ಮಾನಸಿಕ ಸ್ಥಿತಿಯಾಗಿದ್ದು ಇಲ್ಲಿ ಅನೇಕವಾಗಿರುವ ಬ್ರಹ್ಮವು ಪುನಃ ಏಕವಾಗಿ ವ್ಯಕ್ತವಾಗುತ್ತದೆ ಮತ್ತು ಈ ಸ್ಥಿತಿಯಲ್ಲಿ ಒಬ್ಬನು ಬ್ರಹ್ಮದಲ್ಲಿ ಸಂಪೂರ್ಣವಾಗಿ ಐಕ್ಯವಾಗಿ ಈ ಇಡೀ ಪ್ರಪಂಚವು ಒಂದೇ ಆಗಿ ಕಾಣಿಸುತ್ತದೆ ಮತ್ತು ಅವನು ನಿರಂತರ ಬ್ರಹ್ಮಾನಂದದಲ್ಲಿ ಇರುತ್ತಾನೆ.

*******

         ವಿ.ಸೂ.: ಹಿಂದಿನ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SHASRANAMAM 72-76 http://www.manblunder.com/2009/08/lalitha-shasranamam-72-76.html  ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ ಮತ್ತು ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 77-80 http://www.manblunder.com/2009/08/lalitha-sahasranamam-77-80.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 
Rating
No votes yet

Comments

Submitted by nageshamysore Fri, 05/24/2013 - 05:50

ಶ್ರೀಧರವರೆ, ಪೂರ್ಯಾಷ್ಟಕದ 27 ವಸ್ತುಗಳಿಂದೊಡಗೂಡಿದ ಎಂಟು ಅಂಶಗಳನ್ನು ಮತ್ತು ದಶಾಕೃತಿಯ ಅವಸ್ಥೆಗಳನ್ನು ಚೆನ್ನಾಗಿ ವಿವರಿಸಲಾಗಿದೆ ಈ ಲೇಖನದಲ್ಲಿ. ದಶಾಕೃತಿಯಲ್ಲಿ ಮಾನವನ ಐದು ಅವಸ್ಥೆಗಳಲ್ಲಿ ಜಾಗೃತ, ನಿದ್ರಾ, ಸುಷುಪ್ತಿಯ ಬಗ್ಗೆ ಕೇಳಿದ್ದೆ, ಅವನ್ನು ಮೀರಿಸಿದ ಇನ್ನೆರಡು ಅವಸ್ಥೆಗಳನ್ನು ತಿಳಿದುಕೊಂಡಂತಾಯ್ತು (ತುರೀಯಾ, ತುರ್ಯಾತೀತ). ಹಾಗೆಯೆ ಉಳಿದ ಐದು ಬ್ರಹ್ಮದ ಅವಸ್ಥೆಗಳಲ್ಲಿ ಸೃಷ್ಟಿ, ಸ್ಥಿತಿ, ವಿನಾಶ ಸಾಮಾನ್ಯವಾಗಿ ಎಲ್ಲರಿಗು ಪರಿಚಿತವಾದದ್ದು; ಮತ್ತೆರಡು ಅವಸ್ಥೆಗಳಾದಂತಹ ಒಳಸೆಳೆದುಕೊಳ್ಳುವಿಕೆ (ತಿರೋಧಾನ) ಮತ್ತು ಲೀನವಾಗುವಿಕೆಯ ಬಗೆಗಿನ ಅರಿವು ಹೊಸತು. ಮಾನಸಿಕ ಪ್ರಜ್ಞೆಗೆ ಅತೀತವಾದ ಕೆಲವು ಸ್ಥಿತಿಗಳನ್ನು / ಅವಸ್ಥೆಗಳನ್ನು ಕನಿಷ್ಟ ಓದಿಯಾದರೂ ಅರಿತಂತಾಯ್ತು, ಧನ್ಯವಾದಗಳು!
- ನಾಗೇಶ ಮೈಸೂರು, ಸಿಂಗಪುರದಿಂದ

Submitted by makara Fri, 05/24/2013 - 07:45

In reply to by nageshamysore

ಶಿವ-ಶಕ್ತಿ ಐಕ್ಯಸ್ವರೂಪದ ಚಿತ್ರಕ್ಕಾಗಿ ಗೂಗಲ್‌ನಲ್ಲಿ ಹುಡುಕುತ್ತಿದ್ದಾಗ ಶ್ರೀಯುತ ರವಿಯವರು ತಮ್ಮ ಬರಹದಲ್ಲಿ ಬಳಸಿರುವ ಕಾಮೇಶ್ವರ-ಕಾಮೇಶ್ವರೀ ಐಕ್ಯ ಸ್ವರೂಪದ ಚಿತ್ರವು ದೊರೆಯಿತು. ಅದರ ಬಗೆಗಿನ ವಿವರಗಳನ್ನು ಓದುತ್ತಾ ಹೋಗುತ್ತಿದ್ದಂತೆ ಸಾಕಷ್ಟು ವಿಷಯಗಳನ್ನು ಅರಿಯುವಂತಾಯಿತು. ಇಂತಹ ಅನೇಕ ಮಹತ್ವದ ಮತ್ತು ಸ್ವಾರಸ್ಯಕರವಾದ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂದರೆ ಅದಕ್ಕೆ ಸೂಕ್ತವಾದ ಮಾಧ್ಯಮವೆಂದರೆ ಸಂಪದ ಎನಿಸಿತು. ಹಾಗಾಗಿ ಕೂಡಲೇ ಈ ಲಲಿತಾ ಸಹಸ್ರನಾಮದ ಭಾಷಾಂತರ ಕಾರ್ಯವನ್ನು ಕೈಗೆತ್ತಿಕೊಂಡೆ ಮತ್ತು ಇದಕ್ಕೆ ಅವರ ಅನುಮೋದನೆಯೂ ದೊರೆಯಿತು, ಇದರಿಂದಾಗಿ ನಿಮ್ಮಂತಹ ಉತ್ತಮ ಮಿತ್ರರ ಪರಿಚಯವೂ ಆಗುತ್ತಿದೆ.
ಮನುಷ್ಯನ ಐದು ಅವಸ್ಥೆಗಳಲ್ಲಿ ಮೊದಲನೆಯದು ಜಾಗ್ರತ್ ಅಥವಾ ನಿದ್ರಾ (ಏಕೆಂದರೆ ನಾವು ಕಣ್ಣು ಮುಚ್ಚಿಕೊಂಡಾಗ ಇನ್ನೂ ಎಚ್ಚರದ ಸ್ಥಿತಿಯಲ್ಲಿರುತ್ತೇವೆ), ಎರಡನೆಯದು ಸ್ವಪ್ನ, ಮೂರನೆಯದು ಸುಷುಪ್ತಿ (ದೀರ್ಘನಿದ್ರಾವಸ್ಥೆ ಅಥವಾ ಈ ಸ್ಥಿತಿಯಲ್ಲಿ ಬಾಹ್ಯದಲ್ಲಿ ಅಥವಾ ಅಂತರಂಗದಲ್ಲಿ ನಡೆಯುವ ಯಾವುದೇ ವಿಷಯಗಳು ನೆನಪಿನಲ್ಲಿರುವುದಿಲ್ಲ) ಮತ್ತು ನಾಲ್ಕನೆಯದು ತುರಿಯಾ ಮತ್ತು ಐದನೆಯದು ತುರ್ಯಾತೀತ. ಮೊದಲ ಮೂರು ಅವಸ್ಥೆಗಳನ್ನು ತಪ್ಪಾಗಿ ಬರೆದಿದ್ದೇನೆ; ಆದ್ದರಿಂದ ಈ ಸವರಣ.
ನಿಮ್ಮ ನಿರಂತರ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು, ನಾಗೇಶರೆ.
ವಂದೆನೆಗಳೊಂದಿಗೆ, ಶ್ರೀಧರ್ ಬಂಡ್ರಿ