ದೋಸೆ

ದೋಸೆ

ಆಸೆ  ದೋಸೆ ಆಸೆ..   ಹೇಳಲಾರೆ  ನಾನು  ತಾಳಲಾರೆ !!!!
 
ಲೇಖನಿಯಲ್ಲಿ  ದೋಸೆ  ಪದ  ಮೂಡುವಾಗಲೂ  ನನ್ನ  ಬಾಯಲ್ಲಿ  ನೀರು  ಸುರಿಸುವಂತಾ  ಅದ್ಭುತ ಶಕ್ತಿ ಇರುವ  ತಿಂಡಿ !!! ಫೋನ್ ನಲ್ಲಿ  ನನಗೆ  ಯಾರೋ  ದೋಸೆ  ಮಾಡುತಿದ್ದಾರೆ   ತಿಂಡಿಗೆ ಎಂದರೆ ನನಗೆ  ಎಲ್ಲಿಲ್ಲದ  ಉತ್ಕಟ  ಬಯಕೆ  ದೋಸೆ ತಿನ್ನಬೇಕೆಂದು ..   ನನ್ನ  ಈ   ಅತಿಶಯವಾದ ದೋಸೆ  ಪ್ರೇಮವೇ  ನನ್ನ  ಈ  ಚುಟುಕು  ಬರಹಕ್ಕೆ  ಕಾರಣ !!!
 
ಅಕ್ಕಿ , ಉದ್ದು ,  ಅವಲಕ್ಕಿ  ಮತ್ತು  ಮೆಂತ್ಯ  ನೀರಿನಲ್ಲಿ  ನೆನೆಸಿ  ನಂತರ  ರುಬ್ಬಿ,  ಹುದುಗಿಸಿದ  ಹಿಟ್ಟನ್ನು   ದೋಸೆ  ಕಾವಲಿಯ  ಮೇಲೆ ಎಣ್ಣೆ  ಹಾಕಿ   ಬಿಟ್ಟರೆ..   ಆಹಾ  ಚುಯ್ ಅಂತ  ಬರುವ   ಶಬ್ದ ಯಾರಿಗಾದರೂ    ತಿನ್ನಬೇಕೆಂಬ ಆಸೆ  ಉಂಟು  ಮಾಡುವ   ಉನ್ನತ  ತಿಂಡಿಯೇ   "ದೋಸೆ"   ಒಂದೊಂದು  ಮನೆಯಲ್ಲಿ  ಒಂದೊಂದು  ಪ್ರಮಾಣದಲ್ಲಿ  ಬೆರೆಸಿ  ಮಾಡಿದ  ದೋಸೆಗೆ   ಬೇರೆ  ಬೇರೆ  ರುಚಿ..    ದಕ್ಷಿಣ  ಭಾರತದ  ಬಹಳ  ಮನೆಗಳಲ್ಲಿ ಇದೇ   ಬೆಳಗಿನ  ಉಪಹಾರ .   ಬೆಳಿಗ್ಗೆ  ಮನೆಯಲ್ಲಿ  ಸಾದಾ  ದೋಸೆ  ತಿಂದು ,  ಜನ  ಸಾಯಂಕಾಲ   ಗೆಳೆಯರ  ಜೊತೆಗೂಡಿ  ಹೋಟೆಲ್ ನಲ್ಲಿ  ಮಸಾಲ  ದೋಸೆ  ತಿನ್ನಲು  ಅಡ್ಡಿಯಿಲ್ಲ !!!
 
ದೋಸೆ  ಜೊತೆಗಾರ   ಚಟ್ನಿ,  ಚಟ್ನಿಪುಡಿ , ತುಪ್ಪ, ಸಕ್ಕರೆ,  ಉಪ್ಪಿನ ಕಾಯಿ,  ಸಾಂಬಾರ್ ,  ಈರುಳ್ಳಿ  ಆಲೂಗಡ್ಡೆ ಪಲ್ಯ  ಏನಿದ್ದರೂ   ಇಲ್ಲದಿದ್ದರೂ  ದೋಸೆ  ಖರ್ಚಾಗುವುದು  ಖಂಡಿತ  ..  ನಾನು  ಈ  ಪಾಶ್ಚಾತ್ಯ  ದೇಶಕ್ಕೆ  ಬಂದ  ಮೇಲೆ   ನನ್ನ  ಮಕ್ಕಳಿಗೆ  ದೋಸೆಯ ಜೊತೆ  ಅವರ    ರುಚಿಗೆ  ತಕ್ಕ   Nuttella ,  ಜಾಮ್   ಅದಕ್ಕೂ  ಅಡ್ಜಸ್ಟ್  ನಮ್ಮ ದೊಸೆ.
 
ಬೆಂಗಳೂರಿನಲ್ಲಿ  ಅಲ್ಲಲ್ಲಿ  ಕಂಡು ಬರುವುದು  ಜನಗಳ  ಗುಂಪು   ಏನಪ್ಪಾ  ಅಂತ  ಹತ್ತಿರ  ಹೋದರೆ   ದೊಡ್ಡ   ಫಲಕ   " ದೋಸೆ ಕ್ಯಾಂಪ್ "    ದೊಡ್ಡ  ಕಾವಲಿ   ವಿಧ  ವಿಧವಾದ  ದೋಸೆ  ಬಿಡುತ್ತಾ ..   ಚಿಕ್ಕ  ಚಿಕ್ಕ  ಗಾಡಿಗಳ  ಮೇಲೆ  ..    ರಸ್ತೆಗಳ ಬಳಿ   ದೋಸೆ  ವ್ಯಾಪಾರ ...    ಜನಗಳು   ದೋಸೆ  ತಿಂದು  ನೀರು  ಕುಡಿದ ನಂತರ   ಮುಂದಿನ ಕೆಲಸಕ್ಕೆ  ಹೊರಡುತ್ತಾರೆ ..   ಹೋಟೆಲ್ನಲ್ಲಿ  ಕಾಯಬೇಕು ,  ಕೂರಬೇಕು   ಎಂದೇ  ಇಲ್ಲ..   ಹೇಗೋ  ಒಂದು  ರೀತಿ  ದೋಸೆ  ಸಿಕ್ಕಿದರೆ  ಸಾಕು.. 
 
ದಾವಣಗೆರೆ  ಬೆಣ್ಣೆ  ಮಸಾಲೆ  ಅಂತ   .  ಅದನ್ನು  ತಿನ್ನಲು  ದಾವಣಗೆರೆಗೆ    ಹೊಗಬೇಕಿಲ್ಲ ..  ಬೆಂಗಳೂರಿನ  ಮೂಲೆ  ಮೂಲೆಯಲ್ಲಿ   ಹೊಟೆಲ್  ಹೆಸರು  ಇಟ್ಟುಕೊಂಡು  ದೋಸೆ    ವ್ಯಾಪಾರ ..    ನಾನು  ಆಸೆ  ತಾಳಲಾರದೆ  ನುಗ್ಗಿದೆ..   ಗುಂಡಗಿನ  ದೊಡ್ಡ   ಬೆಣ್ಣೆ   ದೋಸೆ  ಮೇಲೆ  ಅಲಂಕರಿಸಿತ್ತು ..  ರುಚಿಯೇನೋ  ಚೆನ್ನಾಗಿತ್ತು..   ಆಮೇಲೆ  ನನಗೆ  ಅಲ್ಲಾಡಲು  ಆಗಲ್ಲಿಲ್ಲ   ಅಷ್ಟು  ಭಾರ  ಹೊಟ್ಟೆ !!!    
ಮೈಸೂರ್  ಮಸಾಲ  ದೋಸೆ   ಇದನ್ನು  ತಿನ್ನಲು   ಮೈಸೂರಿನ ಕಡೆ  ಪ್ರಯಾಣ  ಮಾಡಬೇಕಿಲ್ಲ ...   ಬೆಂಗಳೂರಿನ  ಎಲ್ಲ  ಹೊಟೆಲ್ ಗಳಲ್ಲೂ   ಲಭ್ಯ .   ಇನ್ನು  ಪೇಪರ್  ದೋಸೆ  ತೆಳ್ಳಗೆ  ಪೇಪರಿನ  ಹಾಗೆ  ಮಾಡುವ  ದೋಸೆ  ..   ಬೆಳಗಿನ  ನ್ಯೂಸ್  ಪೇಪರ್  ಬದಲಾಗಿ  ಇದನ್ನು  ಬಳಸಲು  ಹೊಗಬೇಡಿ ..  ಯಾಕೆಂದರೆ    ಪೇಪರ್  ದೋಸೆ ನಲ್ಲಿ  ಏನೂ   ಸಮಾಚಾರ  ವಿರುವುದಿಲ್ಲ !!!   ಇನ್ನು  ಮಂಗಳೂರಿನವರು  ಮಾಡುವ  ನೀರ್  ದೋಸೆ  ...   ಬರೀ  ನೀರು  ಸಾಕೋ  ಅಥವಾ  ಬೇರೆ  ಏನಾರೂ  ಬೇಕೋ  ಮಾಡಲು  ಎಂದು   ಮಾಡಿದವರನ್ನೇ   ಕೇಳಬೇಕು ..   ಉತ್ತಪ್ಪ   ಅವರ ಅಪ್ಪ  ಯಾರು  ಗೊತ್ತೇ  ದೋಸೆಯೇ  ...  ಗಟ್ಟಿಯಾದ  ಹುದುಗಿದ  ದೋಸೆ  ಹಿಟ್ಟಿಗೆ  ಈರುಳ್ಳಿ ,  ಕೊತ್ತಂಬರಿ ಸೊಪ್ಪು,  ತೆಂಗಿನಕಾಯಿ , ಹಸಿಮೆಣಸಿನಕಾಯಿ , ಶುಂಟಿ  ಮಿಶ್ರಣ  ಮಾಡಿ    ಹಿಟ್ಟಿನ ಮೇಲೆ  ಹರಡಿ  ಎಣ್ಣೆ  ಸ್ವಲ್ಪ  ಜಾಸ್ತಿಯೇ  ಹಾಕಿ  ಬೇಯಿಸಿದರೆ   ಈರುಳ್ಳಿ  ದೋಸೆ   ಉರುಫ್ ಉತ್ತಪ್ಪ  !!!  ಮನೆಯಲ್ಲಿ  ಏನೂ  ತಿಂಡಿ  ಮಾಡಲು  ತೋಚದಿದ್ದಾಗ  ಬರುವುದೇ  ಧಿಡೀರ್  ದೊಸೆ..  ಮೈದಾ , ಅಕ್ಕಿಹಿಟ್ಟು, ರವೆ , ಮೊಸರು  ಹಾಕಿ,  ಜೀರಿಗೆ, ಉಪ್ಪು   ಹಾಕಿದರೆ ಮುಗಿಯಿತು ..  ಸಕ್ಕತ್ತ್    ಮಜಾ ತಿನ್ನಲು  ..  
 
ನಾವು  ಇತ್ತೀಚೆಗೆ  ಕೊಯಂಬತೂರಿಗೆ  ಹೋದಾಗ   ರಾತ್ರಿಊಟಕ್ಕೆ    ಅನ್ನಪೂರ್ಣ ಎಂಬಲ್ಲಿಗೆ  ಹೋದೆವು  ..   ನನ್ನ  ಪತಿದೇವರು   ಮೊದಲೇ ಆ  ಊರನ್ನು  ಬಲ್ಲವರು  ನನಗೆ..  ಇಲ್ಲಿ  ಈರುಳ್ಳಿ  ದೋಸೆ  ಚೆನ್ನಾಗಿರುತ್ತೆ  ಎಂದರು ..  ಸರಿ  ನಾನೋ  ದೋಸೆ ಪ್ರಿಯಳು ..   ರಾತ್ರಿ  ಹತ್ತು ಗಂಟೆ   ಎಂದು  ಪರಿಗಣಿಸದೇ  ಈರುಳ್ಳಿ  ದೋಸೆ  ಆರ್ಡರ್  ಮಾಡಿದೆ ..     ಸರ್ವರ್   ಬರಲು  ೨ ನಿಮಿಷದ  ಮುಂಚೆ  ಆಹಾ  ಎಂಥಾ  ಘಮ ಘಮ  ಮೂಗಿಗೆ  ಬಡಿಯಿತು  ..     ಈರುಳ್ಳಿಯನ್ನು  ಸಣ್ಣಗೆ  ಹೆಚ್ಚಿ  ತುಪ್ಪದಲ್ಲಿ  ಹದವಾಗಿ  ಬಾಡಿಸಿ ..  ದೋಸೆ  ಹಿಟ್ಟಿನ  ಬೆಲೆ  ಹರಡಿ  ಎಣ್ಣೆ/ತುಪ್ಪ  ಹಾಕಿ  ಬೇಯಿಸಿ  ಚಟ್ನಿಯ  ಸಂಗಡ  ತಂದು ಕೊಟ್ಟನು ..  ನಾನoತಾ  ದೋಸೆಯನ್ನು  ಜೀವಮಾನವಿಡೀ  ತಿoದಿರಲಿಲ್ಲ    ಅಷ್ಟು   ರುಚಿಯಾಗಿತ್ತು..  !!!    ಅದಕ್ಕೆ  ಏನು ನಾಮಕರಣ   ಗೊತ್ತೇ  " Onion  ghee  roast "
 
ಬೆಂಗಳೂರಿನಲ್ಲಿ   ಈಗೀಗ  ತಿಂದ  ದೋಸೆ ಯನ್ನು   ಎಣ್ಣೆಯಲ್ಲಿ  ಬೇಯಿಸಿರುತ್ತಾರೋ  ಅಥವಾ  ಕರಿದಿರುತ್ತಾರೂ  ತಿಳಿಯದು ...    ಎಣ್ಣೆರಾಯನ  ಮಳೆ   ತರ   ದೋಸೆಯಿಂದ   ಹರಿಯುತ್ತಿರುತ್ತಾನೆ ..   ಇಂತಾ  ದೋಸೆ  ತಿಂದ   ನಮಗೆ ಹೊಟ್ಟೆ  ಕೆಡುವುದಂತೂ  ಖಂಡಿತ !!!   ಗಾಂಧೀ ಬಜಾರ್   ವಿಧ್ಯಾರ್ಥಿ  ಭವನ  ದೋಸೆಗೆ  ಫೇಮಸ್ !!!  ಬರೀ  ವಿಧ್ಯಾರ್ಥಿಗಳಲ್ಲದೆ    ದೊಡ್ಡವರೂ , ಚಿಕ್ಕವರೂ , ಕೆಲಸಕ್ಕೆ  ಹೋಗುವವರೂ ಸರ್ವರೂ  ಹೋಗುವಂತಾ  ಹೊಟೆಲ್ !!  ಇಲ್ಲಿ  ತಿಂದ  ಮೇಲೆ  ನನ್ನ  ಹೊಟ್ಟೆ  ಕೆಡಲಿಲ್ಲ   ಅದಕ್ಕೆ  ಫೇಮಸ್  ಆಗಿರಬಹುದು  ಎಂಬ ತೀರ್ಮಾನಕ್ಕೆ  ನಾನು  ಬ೦ದೆ ..     ಮಲ್ಲೇಶ್ವರಂ ನಲ್ಲಿರುವ    CTR ..  ಇದು  ಹಳೆಯ  ಹೆಸರು  ಹೊಸ  ಹೆಸರು  ಶ್ರೀ  ಸಾಗರ್  ಆದರೂ  ಜನ  ಹಳೆಯ  ಹೆಸರನ್ನೇ   ನೆನಪಿನಲ್ಲಿಟ್ಟುಕೊ೦ಡಿದ್ದಾರೆ ..   ಇಲ್ಲಿ  ಒಂದೇನು  ಎರಡು  ತಿಂದರೂ  ಅರಗಿಸಿಕೊಳ್ಳಬಹುದು ..  ಅಂತಾ  ಪ್ರಖ್ಯಾತಿ  ಪಡೆದಿದೆ. 
 
ಪಾಶ್ಚಾತ್ಯ  ದೇಶಕ್ಕೆ  ಬಂದ  ಮೇಲೆ   ನನ್ನ  ಸಹೋದ್ಯೋಗಿಗೂ   ದೋಸೆ   ತಿನ್ನಿಸಿಬಿಟ್ಟೆ ..  ಅವಳೂ   Indian  Pancake   ಅಂದುಕೊಂಡು  ಚಪ್ಪರಿಸಿ  ತಿನ್ನೋದೇ !!   ಇಲ್ಲಿಯ ಇಂಡಿಯನ್  ರೆಸ್ಟೋರೆಂಟ್ ಗಳಲ್ಲೀ   ಕೂಡ  ದೋಸೆ  ಮೆನು ನಲ್ಲಿ   ಅಳವಡಿಸಿದ್ದಾರೆ !!!
 
ದೋಸೆ  ತಿಂದ  ಮರುಕ್ಷಣವೇ  ಚಿಕ್ಕ  ಲೋಟ  ಫಿಲ್ಟರ್  ಕಾಫಿ  ಸಿಕ್ಕಿಬಿಟ್ಟರಂತೂ    ಸ್ವರ್ಗಕ್ಕೆ  ಮೂರೇ   ಗೇಣು !!!
 
ಸರ್ವೇ  ಜನ  ದೋಸೆ ತಿಂದು  ಸುಖಿನೋ  ಭವಂತು !!!