೩೩. ಶ್ರೀ ಲಲಿತಾ ಸಹಸ್ರನಾಮ ೮೧ ಮತ್ತು ೮೨ನೇ ನಾಮಗಳ ವಿವರಣೆ

೩೩. ಶ್ರೀ ಲಲಿತಾ ಸಹಸ್ರನಾಮ ೮೧ ಮತ್ತು ೮೨ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೮೧-೮೨

Mahā-pāśupatāstrāgni-nirdagdhāsura-sainikā महा-पाशुपतास्त्राग्नि-निर्दग्धासुर-सैनिका (81)

೮೧. ಮಹಾ-ಪಾಶುಪತಾಸ್ತ್ರಾಗ್ನಿ-ನಿರ್ದಗ್ಧಾಸುರ-ಸೈನಿಕಾ

          ದೇವಿಯು ಅಸುರರ ಸೈನ್ಯವನ್ನು ಮಾಹಾಪಾಶುಪತಾಸ್ತ್ರದಿಂದ ಸುಟ್ಟು ಹಾಕಿದಳು. ಈ ಅಸ್ತ್ರದಿಂದುಂಟಾಗುವ ಮಹತ್ತರವಾದ ಬೆಂಕಿಯಿಂದ ಶತ್ರುಗಳ ಪಾಳಯವು ಸಂಪೂರ್ಣವಾಗಿ ನಾಶವಾಗುತ್ತದೆ.

          ಲಿಂಗ ಪುರಾಣವು, ’ಪಾಶುಪತಾ’ ಎನ್ನುವುದು ಒಂದು ದಿವ್ಯವಾದ ಆಚಾರಪದ್ಧತಿಯಾಗಿದ್ದು ಅದು ಮೋಹಪಾಶಗಳಿಂದ ಮುಕ್ತವಾಗುವುದಕ್ಕೆ ಬಹಳ ಸೂಕ್ತವಾಗಿದೆ, ಎಂದು ಹೇಳುತ್ತದೆ. ಇದು ಶಿವನ ಅರ್ಚನೆಯ ವಿಧಿಯಾಗಿದೆ. ಶಿವನನ್ನು ವಿವಿಧ ರೂಪಗಳಾದ ಶಿವ, ಮಹಾದೇವ, ಸದಾಶಿವ, ಪಶುಪತಿ, ಕಾಮೇಶ್ವರ ಮೊದಲಾದವುಗಳ ಮೂಲಕ ಪೂಜಿಸಲಾಗುತ್ತದೆ ಮತ್ತು ಈ ಪ್ರತಿಯೊಂದು ರೂಪಕ್ಕೂ ವಿಭಿನ್ನವಾದ ವ್ಯಾಖ್ಯಾನವಿದೆ. ಶಿವನು ಪ್ರಪಂಚದ ಸಮಸ್ತ ಸೃಷ್ಟಿಗೆ ಒಡೆಯನಾಗಿರುವುದರಿಂದ ಅವನನ್ನು ಪಶುಪತಿ ಎನ್ನುತ್ತಾರೆ.  ಪಶುಗಳೆಂದರೆ ಎಲ್ಲಾ ರೀತಿಯ ಜೀವಿಗಳು. ನಾಮ ೨೭೧ ಮತ್ತು ೨೭೨ಗಳು ಈಶ್ವರ ಮತ್ತು ಸದಾಶಿವನಿಗಿರುವ ವ್ಯತ್ಯಾಸಗಳನ್ನು ತಿಳಿಸುತ್ತವೆ.

          ಲಿಂಗ ಪುರಾಣದ ಪ್ರಕಾರ, ಪಾಶುಪತಾಸ್ಥ ಮಂತ್ರವು ಆರು ಅಕ್ಷರಗಳ ಮಂತ್ರವಾಗಿದ್ದು, "ಓಂ ನಮ ಶಿವಾಯ" (ॐ नमशिवाय). ಸಾಮಾನ್ಯವಾಗಿ ಓಂ ಅನ್ನು ಯಾವುದೇ ಮಂತ್ರಗಳಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ ಏಕೆಂದರೆ ಎಲ್ಲಾ ಮಂತ್ರಗಳು ಓಂ ನಿಂದ ಪ್ರಾರಂಭವಾಗುತ್ತವೆ. ಅ (अ) + ಉ (उ) + ಮ (म) ಹಾಗು ಒಂದು ಬಿಂದುವು ಸೇರಿ ಓಂ (ॐ) ಆಗುತ್ತದೆ; ಇದು ಭಗವಂತನ ಮೂರು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ಸೂಚಿಸುತ್ತವೆ.ಆದ್ದರಿಂದ ಓಂ (ॐ) ಎನ್ನುವುದನ್ನು ಎಲ್ಲಾ ಮಂತ್ರಗಳಿಗೆ ಪೂರ್ವ ಪ್ರತ್ಯಯವಾಗಿ ಉಪಯೋಗಿಸುತ್ತಾರೆ. ನಮ ಶಿವಾಯ ಎನ್ನುವುದನು ಪಂಚಾಕ್ಷರ (ಐದು ಅಕ್ಷರಗಳ) ಮಂತ್ರವೆನ್ನುತ್ತಾರೆ. ಪಾಶುಪತಾಸ್ಥ ಮಂತ್ರದಲ್ಲಿ ಓಂ(ॐ) ಅನ್ನೂ ಪರಿಗಣೆನೆಗೆ ತೆಗೆದುಕೊಳ್ಳುವುದರಿಂದ ಅದನ್ನು ಷಡಾಕ್ಷರೀ ಮಂತ್ರವೆಂದು ಕರೆದಿದ್ದಾರೆ. ಈ ಮಂತ್ರವು ಶಿವನ ಉನ್ನತ ರೂಪವಾದ ಸದಾಶಿವನನ್ನು ಕುರಿತದ್ದಾಗಿದೆ. (ಶಿವನ ಐದು ಮುಖಗಳೆಂದರೆ ಈಶಾನ, ತತ್ಪುರುಷ, ಅಘೋರ, ವಾಮದೇವ ಮತ್ತು ಸದ್ಯೋಜಾತ). ಈ ನಾಮದಲ್ಲಿ ಪ್ರಸ್ತಾಪಿಸಲಾಗಿರುವ ಪಾಶುಪತಾಸ್ತ್ರ ಅಥವಾ ಅಸ್ತ್ರವೆಂದರೆ ಅದು ದ್ವೈತವನ್ನು ನಾಶಗೊಳಿಸಿ ಅದ್ವೈತದೆಡೆಗೆ ಕೊಂಡೊಯ್ಯುವ ಮಾನಸಿಕ ಉನ್ನತಿಯ ಸಾಧನವಾಗಿದೆ. ಮನಸ್ಸಿನ ಪುರೋಗತಿಯು ಅಭ್ಯಾಸದ ಮೇಲೆ ಅವಲಂಬಿತವಾಗಿದೆ. ಶತ್ರು ಪಾಳಯವೆಂದರೆ ದ್ವೈತದಿಂದ ಉತ್ಪನ್ನವಾಗುವ ಅಜ್ಞಾನ. ನಿರಂತರ ಪ್ರಯತ್ನದಿಂದ, ದ್ವೈತವು ಅದ್ವೈತಕ್ಕೆ ದಾರಿಯನ್ನುಂಟು ಮಾಡಿಕೊಡುತ್ತದೆ.

Kāmeśvarāstra-nirdagdha-sabhaṇḍāsura-śūnyakā कामेश्वरास्त्र-निर्दग्ध-सभण्डासुर-शून्यका (82)

೮೨.  ಕಾಮೇಶ್ವರಾಸ್ತ್ರ-ನಿರ್ದಗ್ಧ-ಸಭಂಡಾಸುರ-ಶೂನ್ಯಕಾ

          ಭಂಡಾಸುರನ ರಾಜಧಾನಿಯು ಶ್ಯೂನ್ಯಕ ಪಟ್ಟಣವಾಗಿದೆ. ಕಾಮೇಶ್ವರನ ಅಸ್ತ್ರದ ಬೆಂಕಿಯಿಂದ ಭಂಡಾಸುರನ ಶೂನ್ಯಕ ಪಟ್ಟಣವು ಅವನೊಂದಿಗೆ ಸುಡಲ್ಪಟ್ಟವು. ಹಿಂದಿನ ನಾಮದಲ್ಲಿ ಪಶುಪತಿಯ ಅಸ್ತ್ರವನ್ನು ಕುರಿತು ಪ್ರಸ್ತಾಪಿಸಿದರೆ ಈ ನಾಮದಲ್ಲಿ ಕಾಮೇಶ್ವರನ ಅಸ್ತ್ರದ ಕುರಿತಾಗಿ ಚರ್ಚಿಸಲಾಗಿದೆ. ಈ ನಾಮದೊಂದಿಗೆ ಭಂಡಾಸುರ ಮತ್ತು ಅವನ ಸೈನಿಕರ ಸಾವು ಹಾಗು ಅವನ ಪಟ್ಟಣದ ವಿನಾಶದೊಂದಿಗೆ ಅವನೊಂದಿಗಿನ ಯುದ್ಧವು ಕೊನೆಗೊಳ್ಳುತ್ತದೆ.

          ಶಿವನ ಕಾಮೇಶ್ವರ ರೂಪವು ಅವನ ಪಶುಪತಿಯ ರೂಪಕ್ಕಿಂತ ಉನ್ನತವಾದದ್ದು. ಕಾಮೇಶ್ವರ ರೂಪವು ಪರಬ್ರಹ್ಮವಾಗಿದೆ. ಈ ನಾಮದಲ್ಲಿ ಗುಣಗಳನ್ನು ಚರ್ಚಿಸುತ್ತಿರುವುದರಿಂದ ಇದು ಸಗುಣ ಬ್ರಹ್ಮನ ಕುರಿತದ್ದಾಗಿದೆ. ಯಾವಾಗ ನಾವು ಬ್ರಹ್ಮದ ಕುರಿತಾಗಿ ಮಾತನಾಡುತ್ತೇವೆಯೋ ಆಗ ಅದು ಯಾವಾಗಲೂ ಅತ್ಯುನ್ನತ ಚೈತನ್ಯದ ಕುರಿತದ್ದಾಗಿರುತ್ತದೆ. ಇಲ್ಲಿ ಪರಮಚೈತನ್ಯದ ಕುರಿತಾಗಿ ಚರ್ಚಿಸುತ್ತಿಲ್ಲ ಏಕೆಂದರೆ ವಾಗ್ದೇವಿಗಳು ಇಲ್ಲಿ ದೇವಿಯ ವಿವಿಧ ಗುಣಗಳನ್ನು ಕುರಿತು ಉಲ್ಲೇಖಿಸುತ್ತಿರುವುದರಿಂದ ಅದು ಅವಳ ಸಗುಣ ಬ್ರಹ್ಮದ ರೂಪವಾಗಿದೆ.

          ಕಾಮೇಶ್ವರನ ಕುರಿತಾದ ವ್ಯಾಖ್ಯಾನವೊಂದಿದೆ. ಅವನು ಎಲ್ಲರಿಂದಲೂ ಇಷ್ಟಪಡಲ್ಪಟ್ಟವನಾಗಿದ್ದಾನೆ ಮತ್ತು ಅವನನ್ನು ಎಲ್ಲರೂ ಇಷ್ಟಪಡುತ್ತಾರೆ. ಈ ರೀತಿಯಾಗಿ ಅವನ ವಿಷಯ ಮತ್ತು ವಸ್ತು ಎರಡೂ ಆಗಿದ್ದಾನೆ. ವಸ್ತುವು ಶಿವನಾಗಿದ್ದು ಇಷ್ಟಪಡುವುದು ವಿಷಯವಾಗಿದೆ. ಸಾಮಾನ್ಯವಾಗಿ ಶಿವನು ಯಾವಾಗಲೂ ವಿಷಯವೆಂದು ಕರೆಯಲ್ಪಟ್ಟಿದ್ದಾನೆ. ವಾಗ್ದೇವಿಗಳು ಈ ಸಹಸ್ರನಾಮದ ಭಾಗವನ್ನು ಕೊನೆಗೊಳಿಸುತ್ತಾ ಸೂಕ್ಷ್ಮವಾಗಿ ಪರಿತ್ಯಾಗದ ಕುರಿತಾಗಿ ಸೂಚನೆಯನ್ನು ಕೊಡುತ್ತಾರೆ. ತ್ಯಾಗವು ನಿರ್ಗುಣ ಬ್ರಹ್ಮವನ್ನು ಅರಿಯುವಲ್ಲಿ ಒಂದು ಹಂತವಾಗಿದೆ. ಎಲ್ಲಾ ರೀತಿಯ ತ್ಯಾಗಗಳು ಪರಮಾತ್ಮನೆಡೆಗೆ (ನಿರ್ಗುಣ ಬ್ರಹ್ಮದೆಡೆಗೆ) ಒಲವು ಹೊಂದಿವೆ. ಇದನ್ನು ಬೃಹದಾರಣ್ಯಕ ಉಪನಿಷತ್ತಿನ ೨ನೇ ಅಧ್ಯಾಯದ, ೪ನೇ ಪರಿಚ್ಛೇದದ ೫ನೇ ಶ್ಲೋಕವು, ಅತ್ಮವು ಸಾಕ್ಷಾತ್ಕರಿಸಿಕೊಳ್ಳಲ್ಪಡಬೇಕು, ಆತ್ಮದ ಕುರಿತಾಗಿ ಕೇಳಬೇಕು (ಶ್ರವಣ ಮಾಡಬೇಕು), ಮನನ ಮಾಡಬೇಕು ಮತ್ತು ನಿಧಿದ್ಯಾಸನ (ಧ್ಯಾನ ಮಾಡಬೇಕು) ತನ್ಮೂಲಕ ಎಲ್ಲವೂ ತಿಳಿಯುತ್ತದೆ" ಎನ್ನುವುದರ ಮೂಲಕ ದೃಢಪಡಿಸುತ್ತದೆ. ಇದಕ್ಕಿಂದ ಮುಂದೆ ಮತ್ತೇನೂ ಇಲ್ಲ.

          ಕಾಮೇಶ್ವರನು ಪರಮಾತ್ಮ ಅಥವಾ ಬ್ರಹ್ಮವಾಗಿದ್ದಾನೆ. ಭಂಡಾಸುರನು ನಮ್ಮ ಅಹಂಕಾರವನ್ನು ಪ್ರತಿನಿಧಿಸುತ್ತಾನೆ. ಸೈನ್ಯವು ಸೂಕ್ಷ್ಮ ದೇಹ (ಮನಸ್ಸನ್ನು) ಕುರಿತದ್ದಾಗಿದೆ. ಯಾವಾಗ ಅಹಂಕಾರ ಮತ್ತು ಸೂಕ್ಷ್ಮ ದೇಹದ ಚಟುವಟಿಕೆಗಳನ್ನು ನಿವಾರಿಸಿಕೊಳ್ಳುತ್ತೇವೆಯೋ ಆಗ ಕೇವಲ ಬ್ರಹ್ಮವೊಂದೇ ಉಳಿಯುತ್ತದೆ. ಭಂಡಾಸುರನು ಅವನ ಸೈನ್ಯದ ಸಮೇತ ನಾಶಮಾಡಲ್ಪಟ್ಟಿರುವುದರಿಂದ, ಅಲ್ಲಿ ಉಳಿಯುವುದೇನೆಂದರೆ ಶೂನ್ಯ ಅಥವಾ ನಿರ್ವಾತ. ಇದರ ಅರ್ಥವೇನೆಂದರೆ ದ್ವಂದ್ವತೆಯು (ದ್ವೈತವು) ಹೋಗಿ ಅದು ಬ್ರಹ್ಮಸಾಕ್ಷಾತ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ಈ ಗುರಿಯನ್ನು ಧ್ಯಾನ ಮತ್ತು ಆತ್ಮಾವಲೋಕನದ ಮೂಲಕ ಮುಟ್ಟಬಹುದು.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 81, 82 http://www.manblunder.com/2009/08/lalitha-sahasranamam-8182.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 
Rating
Average: 5 (1 vote)

Comments

Submitted by nageshamysore Fri, 05/24/2013 - 16:00

ಶ್ರೀಧರರೆ, ಕಾವ್ಯದಲ್ಲಿ ನಾವು ಪ್ರತಿಮೆಗಳನ್ನು ಸಂಕೇತವಾಗಿ ಬಳಸುವಂತೆ, ಇಲ್ಲಿ ಕಾಮೇಶ್ವರನನ್ನು ಬ್ರಹ್ಮವಾಗಿಸಿ, ಅಹಂ ಅನ್ನು ಭಂಡಾಸುರನ ಸಂಕೇತದಲ್ಲಿ ಆವಾಹಿಸಿ, ಕಡಿವಾಣಕ್ಕೆ ಸಿಗದ ಮನಸನ್ನು ಅಂಕೆಯಲ್ಲಿಡಲಾಗದ ಸೈನ್ಯಕ್ಕೆ ಸಮೀಕರಿಸಿದೆ. ಅಲ್ಲಿಗೆ ಮನಸನ್ನು ಅಂಕೆಯಿಡಬಲ್ಲ ಅಹಂ ಅನ್ನು ಗೆದ್ದರೆ ಉಳಿಯುವ ಶೂನ್ಯವೆ ಬ್ರಹ್ಮವೆಂದಾಯ್ತು. ಹಾಗೆಯೆ ದ್ವೈತದ ಅರ್ಥ ದ್ವಂದ್ವ ಎಂದೂ ತಿಳಿದಿರಲಿಲ್ಲ, ಈಗ ತಿಳಿದಂತಾಯ್ತು. ಅದೇ ತರ್ಕದಲ್ಲಿ, ಅದ್ವೈತವೆಂದರೆ ದ್ವಂದ್ವವಿಲ್ಲದ ಏಕತ್ವವೆಂದಾಗುವುದೆ?
- ನಾಗೇಶ ಮೈಸೂರು, ಸಿಂಗಾಪುರದಿಂದ

Submitted by makara Fri, 05/24/2013 - 19:05

In reply to by nageshamysore

ನಾಗೇಶರೆ,
.... ಕಾವ್ಯದಲ್ಲಿ ನಾವು ಪ್ರತಿಮೆಗಳನ್ನು ಸಂಕೇತವಾಗಿ ಬಳಸುವಂತೆ, ಇಲ್ಲಿ ಕಾಮೇಶ್ವರನನ್ನು ಬ್ರಹ್ಮವಾಗಿಸಿ, ಅಹಂ ಅನ್ನು ಭಂಡಾಸುರನ ಸಂಕೇತದಲ್ಲಿ ಆವಾಹಿಸಿ, ಕಡಿವಾಣಕ್ಕೆ ಸಿಗದ ಮನಸನ್ನು ಅಂಕೆಯಲ್ಲಿಡಲಾಗದ ಸೈನ್ಯಕ್ಕೆ ಸಮೀಕರಿಸಿದೆ. ಅಲ್ಲಿಗೆ ಮನಸನ್ನು ಅಂಕೆಯಿಡಬಲ್ಲ ಅಹಂ ಅನ್ನು ಗೆದ್ದರೆ ಉಳಿಯುವ ಶೂನ್ಯವೆ ಬ್ರಹ್ಮವೆಂದಾಯ್ತು....+೧

......ಹಾಗೆಯೆ ದ್ವೈತದ ಅರ್ಥ ದ್ವಂದ್ವ ಎಂದೂ ತಿಳಿದಿರಲಿಲ್ಲ, ಈಗ ತಿಳಿದಂತಾಯ್ತು. ಅದೇ ತರ್ಕದಲ್ಲಿ, ಅದ್ವೈತವೆಂದರೆ ದ್ವಂದ್ವವಿಲ್ಲದ ಏಕತ್ವವೆಂದಾಗುವುದೆ? .... ಇದರ ಬಗೆಗೆ ಸ್ವಲ್ಪ ವಿವರಣೆ ಅಗತ್ಯವೆನಿಸುತ್ತದೆ.
ಹುಡುಕು ಪದ: ದ್ವಂದ್ವ
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು http://baraha.com/kannada/index.php
ದ್ವಂದ್ವ ನಾಮಪದ
(ಸಂ) ೧ ಎರಡು ಜೊತೆ ೨ ಪರಸ್ಪರ ವಿರುದ್ಧ ವಸ್ತುಗಳ ಜೋಡಿ ೩ ಜಗಳ, ಕಲಹ ೪ ಸಂದೇಹ, ಸಂಶಯ ೫ ರಹಸ್ಯ, ಗುಟ್ಟು ೬ ಒಂದು ಸಮಾಸದ ಹೆಸರು ೭ ಬೇರೆ ಬೇರೆ ಎಂಬ ಭಾವನೆ, ದ್ವೈತಭಾವ ....ಎನ್ನುವ ಅರ್ಥಗಳನ್ನು ಪಟ್ಟಿ ಮಾಡುತ್ತದೆ. ಆದ್ದರಿಂದ ಇಲ್ಲಿ ಸಾಂದರ್ಭಿಕವಾಗಿ ದ್ವಂದ್ವ ಶಬ್ದವನ್ನು ದ್ವೈತವೆಂದು ತೆಗೆದುಕೊಂಡಿದ್ದೇನೆ. ಆದರೆ ತರ್ಕದಲ್ಲಿ ದ್ವಂದ್ವವಿಲ್ಲದಿರುವುದನ್ನು ಸ್ಪಷ್ಟವಾಗಿರುವುದು ಎಂದು ಹೇಳಬಹುದು. ಆ ದೃಷ್ಟಿಯಿಂದ ಬೇಕಾದರೆ ಅದ್ವೈತವೆಂದು ವಿಶಾಲಾರ್ಥದಲ್ಲಿ ಬಳಸಬಹುದೇ ಹೊರತು ಸಾಮಾನ್ಯ ಅರ್ಥದಲ್ಲಿ ಹಾಗೆ ಬಳಸುವುದು ಉಚಿತವಲ್ಲವೆಂದುಕೊಳ್ಳುತ್ತೇನೆ. ಇದರ ಬಗ್ಗೆ ಯಾರಾದರೂ ಹಿರಿಯರು ಸ್ಪಷ್ಟತೆಯನ್ನು ಒದಗಿಸಬಹುದೆಂದು ಆಶಿಸುತ್ತೇನೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ