ಶೌಚಾಲಯವೂ, ಭ್ರಷ್ಟಾಚಾರವೂ !!

ಶೌಚಾಲಯವೂ, ಭ್ರಷ್ಟಾಚಾರವೂ !!

 

 

 

     ಹಾಸನ ನಗರದ ಸ್ಟೇಡಿಯಮ್ಮಿನಲ್ಲಿ ಒಂದು ಆಧುನಿಕ ಶೌಚಾಲಯ ನಿರ್ಮಾಣವಾಗಿ ೪-೫ ವರ್ಷಗಳಾಗಿವೆ. ಆಗ ಈ ಕಾಮಗಾರಿಗೆ ಸುಮಾರು ೫-೧೦ ಲಕ್ಷ ರೂ. ಖರ್ಚು ತೋರಿಸಿರಬಹುದು, ಅಥವ ಇನ್ನೂ ಹೆಚ್ಚು ತೋರಿಸಿರಲೂಬಹುದು. ಅದನ್ನು ಇದುವರೆವಿಗೂ ಸಾರ್ವಜನಿಕ ಉಪಯೋಗಕ್ಕೆ ತೆರೆದಿಲ್ಲ. ಏಕೆ ತೆರೆದಿಲ್ಲವೆಂದು ಅದನ್ನು ಕಟ್ಟಿಸಿದವರಾಗಲೀ, ಜನರಾಗಲೀ ಇದುವರೆವಿಗೂ ತಲೆ ಕೆಡಿಸಿಕೊಂಡಿಲ್ಲ. ಹಾಗೆಂದು ಅಲ್ಲಿ ಬೇರೆ ಶೌಚಾಲಯಗಳು ಇವೆಯೇ ಎಂದರೆ ಅದೂ ಇಲ್ಲ. ದಿನ ನಿತ್ಯ ನೂರಾರು ಜನರು ಅಲ್ಲಿ ವಾಯುಸೇವನೆಗೆ, ವಿಶ್ರಾಂತಿಗೆ ಬಂದು ಹೋಗುತ್ತಾರೆ. ಹಲವಾರು ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತವೆ. ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಮುಂತಾದ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುವುದು ಇಲ್ಲಿಯೇ. ಆಗ ಸಾವಿರಾರು ಜನರು ಸೇರುತ್ತಾರೆ. ಇಲ್ಲಿನ ಶಾಸಕರ ಮನೆ ಇರುವುದೂ ಸ್ಟೇಡಿಯಮ್ ಸಮೀಪದ ಬಡಾವಣೆಯಲ್ಲಿಯೇ. ಅವರು ಇದೇ ಮಾರ್ಗವಾಗಿ ಓಡಾಡುತ್ತಾರೆ. ಆದರೂ ಶೌಚಾಲಯ ಉಪಯೋಗಕ್ಕೆ ತೆರೆದಿಲ್ಲ ಮತ್ತು ಜನರಿಗೂ ಅದು ಬೇಕಿಲ್ಲವೆಂದರೆ ಏನೆನ್ನಬೇಕು? ಇಲ್ಲಿ ಶೌಚಾಲಯದ ಅಗತ್ಯವಿಲ್ಲವೇ ಎಂದರೆ ತುಂಬಾ ಅಗತ್ಯವಿದೆ. ಗಂಡಸರು ಎಲ್ಲೋ ದಿಬ್ಬದ ಮರೆಯಲ್ಲಿ, ಗಿಡದ ಮರೆಯಲ್ಲಿ ಮತ್ತು ವಿಶೇಷವೆಂದರೆ ಇದೇ ಶೌಚಾಲಯದ ಹಿಂಬದಿಯಲ್ಲಿ ಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಹೆಂಗಸರು ಏನು ಮಾಡಬೇಕು? ಸ್ತ್ರೀಶಕ್ತಿ ಸಂಘಗಳು, ಪ್ರಬುದ್ಧ ಮಹಿಳಾಮಣಿಗಳೂ ಈ ಬಗ್ಗೆ ಚಕಾರವೆತ್ತಿಲ್ಲ. ಜನರು ಇದೇ ವ್ಯವಸ್ಥೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ. ಶೌಚಾಲಯದ ನಿರ್ಮಾಣಕ್ಕೆ ಆದ ವೆಚ್ಚ ವ್ಯರ್ಥವಾದಂತಾಯಿತಲ್ಲವೇ? ಇದು ಸಾರ್ವಜನಿಕರ ಹಣದ ದುರುಪಯೋಗವಲ್ಲವೇ? ಇದು ಭ್ರಷ್ಟಾಚಾರವಲ್ಲವೇ? ಜನರು ಜಾಗೃತರಾಗಿದ್ದರೆ ಈ ಶೌಚಾಲಯಕ್ಕೆ ಆದ ವೆಚ್ಚ ಸಮರ್ಪಕವಾಗಿ ಬಳಕೆಯಾಗಿದೆಯೇ ಎಂಬುದನ್ನು ಪರಿಶೀಲಿಸುವುದರ ಜೊತೆಗೆ, ಅದನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯುವಂತೆ ನೋಡಿಕೊಳ್ಳುತ್ತಿದ್ದರು ಮತ್ತು ತೆರೆದ ನಂತರವೂ ಅದು ಸರಿಯಾಗಿ ನಿರ್ವಹಣೆಯಾಗುವಂತೆ ನಿಗಾ ವಹಿಸುತ್ತಿದ್ದರು ಅಥವ ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಇಲ್ಲಿ ಹಾಗಾಗಿಲ್ಲ. ಹಾಗಾದರೆ ಭ್ರಷ್ಟಾಚಾರಕ್ಕೆ ನಿಜವಾದ ಹೊಣೆಗಾರರು ಯಾರು? ನಾವೇ ಅಲ್ಲವೇ? ಇಂದು ವ್ಯಾಪಕವಾಗಿರುವ ಭ್ರಷ್ಟಾಚಾರದ ಮೂಲಬೇರು ಎಲ್ಲಿದೆಯೆಂದರೆ ಜನರಿಗೆ ಅಗತ್ಯವಾದ ಮೂಲಭೂತ ಕಾರ್ಯಕ್ರಮಗಳ ಜಾರಿ ಸರಿಯಾಗಿ ಆಗುತ್ತಿದೆಯೇ ಎಂಬುದನ್ನು ಗಮನಿಸುವಲ್ಲಿನ ವೈಫಲ್ಯದಲ್ಲಿ, ನಮ್ಮ ಅಜಾಗರೂಕತೆಯಲ್ಲಿ, ಅನ್ಯಾಯವೆಂದು ಗೊತ್ತಿದ್ದೂ ಸಹಿಸಿಕೊಂಡಿರುವಲ್ಲಿ!

-ಕ.ವೆಂ.ನಾಗರಾಜ್.

Comments

Submitted by makara Fri, 05/24/2013 - 21:05

ಕವಿಗಳೆ, ಭ್ರಷ್ಟಾಚಾರಕ್ಕೆ ಶೌಚಾಲಯವಾದರೇನು, ಆಸ್ಪತ್ರೆಯಾದರೇನು ಅದರಿಂದ ಕಂಟ್ರ‍್ಯಾಕ್ಟರು ಮತ್ತು ಸಂಭಂದಿತ ಅಧಿಕಾರಿಗಳು ದುಡ್ಡು ಮಾಡಿಕೊಳ್ಳಬೇಕಷ್ಟೇ! ಎಲ್ಲಿಯವರೆಗೆ ಜನ ತಮ್ಮ ಹಕ್ಕುಗಳನ್ನು ಅರಿತು ಅದಕ್ಕಾಗಿ ಹೋರಾಡುವುದಿಲ್ಲವೋ ಮತ್ತು ಅನ್ಯಾಯವನ್ನು ಕಂಡು ಪ್ರತಿಭಟಿಸುವುದಿಲ್ಲವೋ ಆಗ ಎಲ್ಲವೂ ಅವರ ಮೂಗಿನಡಿಯಲ್ಲಿ ಹೀಗೆಯೇ ನಡೆಯುತ್ತಿರುತ್ತವೆ. ಕಡೇ ಪಕ್ಷ ನಾವು ಆರಿಸಿ ಕಳುಹಿಸಿರುವ ಪ್ರತಿನಿಧಿಯನ್ನೂ ನಾವು ಕೇಳುವ ಪರಿಸ್ಥಿತಿಯಲ್ಲಿ ಇಲ್ಲ; ಏಕೆಂದರೆ ನಾವು ನಮ್ಮ ವೋಟುಗಳನ್ನು ಅವನ ನೋಟುಗಳಿಗೆ ಮಾರಿಕೊಂಡುಬಿಟ್ಟಿದ್ದೇವೆ :((
Submitted by kavinagaraj Sat, 05/25/2013 - 06:50

In reply to by makara

ಭ್ರಷ್ಟಾಚಾರಕ್ಕಾಗಿ ಇತರರನ್ನು ದೂಷಿಸುವುದು ತರವಲ್ಲ, ಅದಕ್ಕೆ ನಾವೇ ಹೊಣೆಯೆಂಬ ನನ್ನ ಅನಿಸಿಕೆಗೆ ಪೂರಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಕ್ಕೆ ವಂದನೆ, ಶ್ರೀಧರರೇ.
Submitted by partha1059 Fri, 05/24/2013 - 21:57

ಬಹುಷಃ ಅದು ಪ್ರಾರಂಬೋತ್ಸವಕ್ಕೆ ಯಾವ ಮಂತ್ರಿವರ್ಯರಿಗು ಸಮಯಾವಕಾಶ ಆಗಿಲ್ಲ ಅನ್ನಿಸುತ್ತೆ ಹಾಗಾಗಿ ಇನ್ನು ಸಾರ್ವಜನಿಕರಿಗೆ ಮುಚ್ಚಿರಬಹುದು, ಮುಂದೆ ಯಾರಾದರ ಮಂತ್ರಗಳು ಬಂದು ಅದನ್ನು ಲೋಕಾರ್ಪಣಗೊಳಿಸಬಹುದು ಬಿಡಿ
Submitted by kavinagaraj Sat, 05/25/2013 - 06:52

In reply to by partha1059

ಇದೂ ಒಂದು ಕಾರಣವಿದ್ದರೂ ಇದೊಂದೇ ಕಾರಣವಿರಲಾರದು. ಯುವಜನ ಸೇವಾ ಇಲಾಖೆಯ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯತೆ, ಜನರ ಅನಾಸಕ್ತಿ ಪ್ರಮುಖ ಕಾರಣವೆಂದು ತೋರುತ್ತದೆ. ಧನ್ಯವಾದ, ಪಾರ್ಥರೇ.
Submitted by nageshamysore Sat, 05/25/2013 - 07:02

ಕವಿ ನಾಗರಾಜರವರೆ, ಯಾವುದೊ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಬೇಕಾದರೆ ಆದರ ಎಲ್ಲಾ ಅಂಗಗಳು ತಮ್ಮ ತಮ್ಮ ಪಾಲು ನಿರ್ವಹಿಸಬೇಕು. ಇಲ್ಲಿಯು ಅಷ್ಟೆ, ಬಹುಶಃ ಎಲ್ಲರು ಇದು ಬೇರೆ ಯಾರದೊ ಕೆಲಸ ಅಂದುಕೊಂಡು ತಮ್ಮ ಪಾಡಿಗೆ ತಾವಿದ್ದುಬಿಟ್ಟಿದ್ದಾರೆ, ವ್ಯವಸ್ಥೆಗೆ ಒಗ್ಗಿಕೊಂಡು. ಇನ್ನು ಸ್ವಯಂಪ್ರೇರಣೆಯಿಂದ ಮಾಡಿಸಬೇಕಾದವರ ಕಥೆ ಬಿಡಿ - ಕಟ್ಟಿಸಿ ಆದ ಮೇಲೆ ಅಷ್ಟು ಆಸಕ್ತಿಯಾಗಲಿ, ಆದಾಯವಾಗಲಿ ಇರುವುದಿಲ್ಲವಲ್ಲ? -  ನಾಗೇಶ ಮೈಸೂರು, ಸಿಂಗಪುರದಿಂದ
Submitted by venkatb83 Mon, 05/27/2013 - 16:44

In reply to by kavinagaraj

ಅದು ಶೌಚಾಲಯ ಎಂದು ಅರಿವಿಗೆ ಬರುವ ಯಾರೊಬ್ಬ ತುರ್ತು ಸ್ತಿತಿಯಲ್ಲಿರುವ (೧ ಅಥವಾ ೨ ಕ್ಕೆ ) ದಾರಿ ಹೋಕನ ಕಣ್ಣಿಗೆ ಇದು ಬಿದ್ದರೆ ಅದರ ಬಾಗಿಲು ಮುರಿದೋ ಇಲ್ಲ ಲಾಕ್ ಹೊಡೆದೋ ಓಪನಿಂಗ್ ಸೆರೆಮನಿ ಮಾಡಬಹುದು ...!! ಇಲ್ಲವಾದರೆ ಕಳ್ಳ ಕಾಕರು ಬಾಗಿಲು ಕಿಟಕಿ ಕಮೋಡ್ ಹೊತ್ತೊಯ್ದಾರು ..!! ಅನಾವಶ್ಯಕವಾಗಿ ಎಲ್ಲೆಲಿಯೋ ಹಣ ಪೋಲು ಮಾಡುವ ಯೋಜನೆ ಜಾರಿ ಮಾಡುವರು , ಇಲ್ಲಿ ಒಳ್ಳೆ ಕೆಲಸ ಆಗಿದೆ ಆದರೆ ಅದರ ಓಪನಿಂಗ್ ಆಗಿಲ್ಲ ಅಂದರೆ ಬಹುಶ ಅದನ್ನೂ ಉದ್ಘಾಟಿಸಲು ನೇತಾರರಿಗೆ ಸಮಯವಿಲ್ಲ ಅಥವಾ ಇದು ಸುಸು(ಸ)ಮಯವಲ್ಲ .... ! ಆದ್ರೆ ಅದರ ಅವಶ್ಯಕತೆ ಇರೋರು ಏನು ಮಾಡಬೇಕು .. ಒಂದಾದರೆ ಗೋಡೆ ...!! ೨ ಆದರೆ ...!! ಇನ್ನೊಂದು ಮುಖ್ಯ ವಿಚಾರ -ಇದೇ ಏಷ್ಟೋ ವಾಸಿ ..!! ನಮ್ಮೂರಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಿಸಿದ್ದಾರೆ .... ಸಂತೋಷದ ಸಂಗತಿ ಎಂದಿರ ?> ವೇಯ್ಟ್ ವೇಯ್ಟ್ -ಆದರೆ ಅದು ಕಡತದಲ್ಲಿ ಮಾತ್ರ -ಅದರ ಹೆಸರಲ್ಲೂ ಹಣ ನುಂಗಾಕಿರುವರು ... :(( ಈಗಲೂ ಜನ ಬಯಲಿಗೆ ಹೋಗೋದು ...!! ಯಾರ್ಗೆಳನ ನಮ್ ಪ್ರಾಬ್ಲಮ್ಮು ?? \।
Submitted by kavinagaraj Tue, 05/28/2013 - 11:55

In reply to by venkatb83

ನಾನು ಕೇಳಿದ ಗಾಳಿಮಾತಿದು. ಚುನಾವಣಾ ಪ್ರಚಾರಕ್ಕೆ ರಾಹುಲಗಾಂಧಿ ಬಂದಿದ್ದಾಗ ಅವರ ಉಪಯೋಗಕ್ಕೆ ಇದನ್ನು ತೆರೆದಿದ್ದರಂತೆ. ಆಗಲೂ ಅಲ್ಲಿ ನೀರಿನ ಸಮಸ್ಯೆಯಿತ್ತಂತೆ. ಭಾವೀ ಪ್ರಧಾನಿಯೆಂದು ಪ್ರಚುರಿಸಲ್ಪಡುತ್ತಿರುವ ಅವರು ಇದನ್ನು ಉಪಯೋಗಿಸಿ ಉದ್ಘಾಟಿಸಿದ್ದರೂ ಹಿಡಿದ ಗ್ರಹಣ ಬಿಟ್ಟಿಲ್ಲ! ಸ್ಟೇಡಿಯಮ್ಮಿನಲ್ಲೇ ಇರುವ ಯುವಜನ ಸೇವಾಧಿಕಾರಿಯ ಕಛೇರಿಯ ಮುಂದೆ . . .ವಿಸರ್ಜಿಸಿ ಪ್ರತಿಭಟಿಸಲು ಸಿದ್ಧರಾಗಬೇಕು! ಆಗ ಸರಿಯಾದೀತು!!!