ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ "ಹಾವ್ ಪಾರ್ ವಿಲ್ಲಾ"

ಸಿಂಗಪುರದಲ್ಲಿನ ಚೀಣಿ ದೃಶ್ಯ ಕಾವ್ಯ "ಹಾವ್ ಪಾರ್ ವಿಲ್ಲಾ"

ಕಾಸಿಲ್ಲದೆಯು ಕೈಲಾಸ ತೋರುವ ಅಪರೂಪದ ತಾಣ!

ನಮಗೆ ನಿಮಗೆಲ್ಲ ತಿಳಿದ ಹಾಗೆ ಸಿಂಗಪುರ ವಾಣಿಜ್ಯ ಕೇಂದ್ರವಾಗಿ ಮಾತ್ರವಲ್ಲದೆ, ಒಂದು ಪ್ರಮುಖ ಪ್ರವಾಸಿ ತಾಣವಾಗಿಯು ಹೆಸರುವಾಸಿ. ಅದರಲ್ಲೂ ನಮ್ಮ ದೇಶದಿಂದ, ಅದರಲ್ಲೂ ಇತ್ತೀಚೆಗೆ ಹೆಚ್ಚೆಚ್ಚು ಬರುತ್ತಿರುವ ಕರ್ನಾಟಕದ ಪ್ರವಾಸಿಗಳಿಂದಾಗಿ ಪ್ರಮುಖ ಜಾಗಗಳಲ್ಲಿ ಕನ್ನಡದ ನುಡಿಗಳು ಕಿವಿಗೆ ಬೀಳುವುದೂ ಸಾಮಾನ್ಯ. ಈಗ ಟೈಗರ ಟ್ರಾವೆಲ್ಸಿನಂತಹ ಬಡ್ಜೆಟ್ಟು ವಿಮಾನ ಯಾನಗಳ ಸಾಧ್ಯತೆಯಿಂದಾಗಿ ಸಾಕಷ್ಟು ಜನರ ಜೇಬಿಗೆಟುಕುವ ಮಟ್ಟಕ್ಕೆ ಬಂದಿರುವ ಸಿಂಗಪುರ ಯಾತ್ರೆ ಹೆಚ್ಚೆಚ್ಚು ಜನರನ್ನು ಆಕರ್ಷಿಸಿ , ತನ್ನತ್ತ ಸೆಳೆಯುತ್ತಿರುವುದಂತೂ ನಿಜ.
ಆದರೆ ಈ ಲೇಖನ ಸಿಂಗಪುರ ಯಾತ್ರೆಯ ಕುರಿತದ್ದಲ್ಲ ಬಿಡಿ. ಇಲ್ಲಿ ಹೇಳಹೊರಟಿದ್ದು ಸಾಮಾನ್ಯವಾಗಿ ಪ್ರವಾಸಿಗರ ಭೇಟಿಯ ಪಟ್ಟಿಯಲ್ಲಿರದ, ಆದರೆ ಕುತುಹಲಕಾರಿಯಾದ ಒಂದು ಜಾಗದ ಕುರಿತು. ಮೊದಲಿಗೆ ಸಾಮಾನ್ಯ ವಿಷಯಗಳನ್ನು ನೋಡಿ ನಂತರ ವಿಶೇಷತೆಗಳತ್ತ ಗಮನ ಹರಿಸೋಣ.
~.~
ಜಾಗದ ಹೆಸರು : ಹಾವ್ ಪಾರ್ ವಿಲ್ಲಾ
ಹತ್ತಿರದ ಟ್ರೈನ್ ಸ್ಟೇಷನ್ (ಎಂ.ಆರ್.ಟಿ): ಹಾವ್ ಪಾರ್ ವಿಲ್ಲಾ ಸ್ಟೇಷನ್ (ಮೊದಲು ಹಾರ್ಬರ ಪ್ರಂಟ್ ಸ್ಟೇಶನ್ ತಲುಪಿ, ನಂತರ ಈಸ್ಟ್- ವೆಸ್ಟ್ ಲೈನಿನಲ್ಲಿ ಜುರಾಂಗ್ ದಿಕ್ಕಿನಲ್ಲಿ ಚಲಿಸುವ ಟ್ರೈನು ಹಿಡಿಯಿರಿ.ಅಲ್ಲಿಂದ ಕೇವಲ ಎರಡು ಮೂರು ಸ್ಟೇಷನ್ನಿನ ದೂರವಷ್ಟೆ)
ನೋಡಲುಬೇಕಾದ ಸಮಯ: ಕನಿಷ್ಟ 2 ಗಂಟೆಯಿಂದ ಗರಿಷ್ಟ ಅರ್ಧ ದಿನ
ಟಿಕೆಟ್ಟು ದರ: ಉಚಿತ / ಪುಕ್ಕಟೆ ! ( ಸಿಂಗಪುರದಲ್ಲಿ ಯಾವುದು ಪುಕ್ಕಟೆ ಸಿಗದಿದ್ದರು ಇದು ಮಾತ್ರ ಹೌದು!)
ಮುನ್ನೆಚ್ಚರಿಕೆ: ಕೈಯಲ್ಲೊಂದು ಛತ್ರಿ , ಕುಡಿಯುವ ನೀರು, ಬೇಕಿದ್ದರೆ ತುಸು ಕುರುಕಲು ತಿಂಡಿ ( ಅಲ್ಲೊಂದು ಪುಟ್ಟ ರೆಸ್ಟೊರೆಂಟಿದ್ದರು ಕೆಲವೊಮ್ಮೆ ಮುಚ್ಚಿದ್ದನ್ನು ನೋಡಿದ್ದೇನೆ, ಆದಕಾರಣ)
Name in English : Haw Par Villa
~.~


ಮೊದಲ ವಿಷಯ ಮೊದಲು - ಇದರ ಹೆಸರಲಿರುವ ಹಾವ್ ಮತ್ತು ಪಾರ್ ಎಂಬುದು ಇಬ್ಬರು ಚೀಣಿ ಸಹೋದರರ ಹೆಸರು. ವಿಲ್ಲಾ ಎಂದರೆ ನಿಮಗೆಲ್ಲ ಗೊತ್ತೆ ಇದೆ - ಹೀಗಾಗಿ ಇವರಿಗೆ ಸೇರಿದ ಮಹಲ್ಲು, ಬಂಗಲೆ ಮತ್ತು ಉದ್ಯಾನವನದ ಆಸ್ತಿಗಿಟ್ಟ ಹೆಸರು "ಹಾವ್ ಪಾರ್ ವಿಲ್ಲಾ" . ಸಿಂಗಪುರದಲ್ಲಿ ವಿಲ್ಲಾದಾರರೆಂದರೆ ಆಗರ್ಭ ಶ್ರೀಮಂತರೆಂದೇನೊ ಎಲ್ಲರಿಗು ಅರ್ಥವಾಗಿತ್ತದೆ..ಆದರೆ ನಿಜಕ್ಕೂ ಯಾರೀ ಹಾವ್ ಮತ್ತು ಪಾರ್? ನಾ ಹೇಳಹೊರಟಿರುವ ವಿಷಯಕ್ಕೆ ಯಾವ ರೀತಿ ಸಂಬಂಧಿಸಿದ್ದಾರೆ ಎನ್ನುವುದು ಕುತೂಹಲಕಾರಿ ವಿಷಯವೆ. ನಮಗೆ ಈ ಚೈನಿ ಹೆಸರುಗಳು ಅಷ್ಟು ಪರಿಚಯವಿಲ್ಲದ ಕಾರಣ, ತುಸು ಸುಲಭದ ಹಾದಿ ನೋಡೋಣ..ಬಹುಶಃ ನಿಮಗೆಲ್ಲ "ಟೈಗರ ಬಾಮ್" ನ ಹೆಸರು ಪರಿಚಿತವಿದೆಯೆಂದುಕೊಳ್ಳುತ್ತೇನೆ (ಗೊತ್ತಿರದವರಿಗೆ ತುಂಡುತ್ತರ: ಇದು ನಮ್ಮ ಅಮೃತಾಂಜನದ ತರಹ ಮುಲಾಮು - ತಲೆ, ಕೈ, ಕಾಲು ನೋವಿಗೆಲ್ಲ ಶಮನ ನೀಡಲೆಂದು ಹಚ್ಚುವ ಕ್ರೀಮು. ಸಾಧಾರಣ ತಲೆ ನೋವು ಬರುವವರಿಗೆ ಇದು ಚೆನ್ನಾಗಿ ಪರಿಚಿತವಿರಬೇಕೆಂದುಕೊಳ್ಳುತ್ತೇನೆ. 'ನಿಮಗೆ ತಲೆ ನೋವು ಬರುವುದಿಲ್ಲವೆ' ಅಂತ ಕೇಳಬೇಡಿ - ಅದೆಲ್ಲ ಬರುವುದು ತಲೆಯಿದ್ದವರಿಗೆ ಮಾತ್ರ!). ಈ ಟೈಗರ ಬಾಮ್ ಕಂಪನಿಯ ವಾರಸುದಾರರೆ ಈ ಇಬ್ಬರು ಸೋದರರು. ತಮ್ಮ ಸುತ್ತಲಿನ ಜಾಗೆಯನ್ನೆ ಆಕರ್ಷಕ ಉದ್ಯಾನವಾಗಿ ಪರಿವರ್ತಿಸಿ, ಅಲ್ಲೊಂದು ಮನಮೋಹಕ ದೃಶ್ಯಕಾವ್ಯವನ್ನು ಸೃಷ್ಟಿಸಿದ್ದು ಈ ಕುಟುಂಬದ ಕಲ್ಪನೆಯ ಮೂಸೆಯಿಂದ ಬಂದ ಕೂಸೆ. ಕಟ್ಟಿಸಿದ್ದೆ ಅಲ್ಲದೆ ತಾವೆ ಮೇಲುಸ್ತುವಾರಿ ನಡೆಸುತ್ತಾ, ತಮ್ಮ ನಿಯಂತ್ರಣ, ಖರ್ಚು ವೆಚ್ಚದ ವ್ಯಾಪ್ತಿಯಲ್ಲೆ ಇನ್ನು ಇಟ್ಟುಕೊಂಡಿದ್ದಾರೆ. ಹೀಗೆ, ಇದು ಸಿಂಗಪುರ ಟೂರಿಸಮ್ಮಿನ ವ್ಯಾಪ್ತಿಗೆ ಬರದಿರಲು ಇದು ಖಾಸಗಿ ಆಸ್ತಿ ಎಂಬುದು ಒಂದು ಕಾರಣ. ಹಾಗೆಯೆ ಟಿಕೆಟ್ಟಿಲ್ಲದೆ ಪ್ರವೇಶ ಸಾಧ್ಯವಾಗಿರುವುದು ಇದೆ ಕಾರಣಕ್ಕೆ.
ಅಂದ ಹಾಗೆ ಇಲ್ಲಿಗೆ ಬರುತ್ತಿದ್ದ ಹಾಗೆ ಎಲ್ಲರ ಕಣ್ಣಿಗೆ ರಾಚುವುದು ಇಲ್ಲಿನ ವರ್ಣಪೂರ್ಣ ಕಲಾ ದೃಶ್ಯ ವೈಭವ. ಇಡಿ ಉದ್ಯಾನವನ್ನು ಎರಡರೆ ಗಂಟೆಗಳಲ್ಲಿ ನೋಡಿಬಿಡಬಹುದಾದರು, ನೀವು ಅಲ್ಲಿ ಇಂಗ್ಲಿಷಿನಲ್ಲಿರುವ ಫಲಕಗಳು, ಮಾಹಿತಿ ರೂಪದ ಕಥೆಗಳು, ಟಿಪ್ಪಣಿಗಳನ್ನೆಲ್ಲ ಓದುತ್ತಾ, ಆಸ್ವಾದಿಸುತ್ತ ಹೋದರೆ, ಕನಿಷ್ಟ ಅರ್ಧ ದಿನವಾದರೂ ಹಿಡಿದೀತು; ಹಾಗೇನಾದರೂ ಇಂಗಿತವಿದ್ದರೆ ತುಸು ಹೆಚ್ಚು ಸಮಯ ಮೊದಲೆ ಯೋಜಿಸಿಕೊಳ್ಳಿ.
ಮೊದಲಿಗೆ ಇಲ್ಲಿ ನೀವು ಕಾಣುವುದು ಬಣ್ಣ ಬಣ್ಣಗಳ ಶಿಲ್ಪಚಿತ್ರಕಲಾ ವೈಭವವೆಂದೆ ಅನಿಸಿದರೂ, ನಿಜಕ್ಕು ಇಲ್ಲಿ ಅಂತರ್ಗತವಾಗಿರುವುದು ಚೀಣಿ ಸಂಸ್ಕೃತಿ, ನಂಬಿಕೆ , ನಡೆ-ನುಡಿ ನಡುವಳಿಕೆಗಳನ್ನು ಪ್ರತಿಬಿಂಬಿಸುವ ಒಂದು ಸಾಂಸ್ಕೃತಿಕ ಕಲಾಮೇಳ. ಹಳತಿನೊಡನೆ ತುಸು ಹೊಸತನ್ನು ಸೇರಿಸಿ, ಪೂರ್ವಾಚಾರದ  ನೀತಿಪಾಠದ ಸಾಮತಿ ಹೇಳುವ , ಹಳೆಯ ರೋಚಕ ಕಥೆಗಳ ದೃಶ್ಯ ವೈಭವದ ಮೂಲಕ ಆಗಿನ ಚೇತೋಹಾರಿ ಕಥೆ ಹೇಳುವ ಸಚಿತ್ರ. ಹಾಗೆ ಹೇಳುತ್ತಲೆ ಪ್ರಜ್ಞಾಪೂರ್ವಕವಾಗಿಯೊ ಅಥವ ಆಯಾಚಿತವಾಗಿಯೊ - ಮೂಲದ ಮತ್ತು ಬೆರೆತು ಹೋದ ಇತರೆ ಸಂಸ್ಖೃತಿಗಳ , ನಂಬಿಕೆಗಳ ತುಣುಕುಗಳನ್ನು ಬಿಚ್ಚಿಡುವ ಮೋಹಕ ತಾಣ. ಇಲ್ಲಿ ಸುತ್ತಾಡುತ್ತಿದ್ದಂತೆ ನೀವೆಲ್ಲೊ ಬೇರೆಯದೆ ಜಗದಲ್ಲಿ ಬಂದು ವಿಹರಿಸುತ್ತಿರುವಂತೆ ಭಾಸವಾಗುತ್ತದೆ.
ಹಾಗೆ ನೋಡುತ್ತಾ ಸಾಗಿದಲ್ಲಿ ಚೀನಿ ಚಾರಿತ್ರಿಕ, ಪೌರಾಣಿಕ, ಜಾನಪದ ಕಥೆಗಳೆಲ್ಲ ದೃಶ್ಯ ಕಾವ್ಯವಾಗಿ ಬಿಚ್ಚಿಟ್ಟುಕೊಳ್ಳುತ್ತ ಹೋಗುತ್ತದೆ. ಹೆಸರಾಂತ - ಜರ್ನಿ ಟು ದಿ ವೆಸ್ಟ್ ( ಮಂಕಿ ಕಿಂಗನ ಕಥೆ - ಹನುಮಂತನ ರೀತಿಯದೆ ಆದ ವ್ಯಕ್ತಿಯ ಕಲ್ಪನೆ ಚಿತ್ರಣ ಬರಿ ನಮಗೆ ಮಾತ್ರವಲ್ಲ, ಅವರ ಜಾನಪದದಲ್ಲು ಇದೆ ನೋಡಿ!). ಹಾಗೆಯೆ ಚಿತ್ರ ವಿಚಿತ್ರ ದೇಹಾಕಾರದ ಪ್ರಾಣಿ, ಮನುಷ್ಯರು, ಅವರ ಹಿನ್ನಲೆ ಕಥೆಗಳು, ಮಕ್ಕಳಿಂದ ಹಿರಿಯರತನಕ ಎಲ್ಲರಿಗು ಸಲ್ಲುವ ನೀತಿ ಭೋಧಕ ಕಥೆಗಳು - ಹೀಗೆ ಎಲ್ಲವೂ ಕಾಣಸಿಗುತ್ತದೆ.
ಹೀಗೆ ನೋಡುವ ದೃಶ್ಯಗಳಿಂದಲೆ ಒಂದೆಡೆ ಅವರ ನಂಬಿಕೆ, ಪರಂಪರೆಯ ತುಣುಕು ಸಿಕ್ಕರೆ, ಆ ಕಲಾ ವೈಭವ, ರಾಚುವಂತ ಬಣ್ಣದ ಉಪಯೋಗ, ಸುತ್ತಲಿನ ಪರಿಸರವನ್ನು ವರ್ಣಮಯವಾಗಿ, ಕಲಾತ್ಮಕವಾಗಿ, ರಸಮಯವಾಗಿ ಇರಿಸಬೇಕೆಂಬ ಕಾಳಜಿ, ಕಲೆಗಾರಿಕೆಯ ಮೇಲೆ ಆ ಜನರಿಗಿರುವ ಮೋಹ, ಅಭಿಮಾನ, ಅಭಿರುಚಿಯನ್ನು ತೋರಿಸುತ್ತದೆ. ಅಷ್ಟು ವಿಸ್ತಾರದ ಜಾಗದಲ್ಲಿ ಈ ರೀತಿಯ ಒಂದು ಕಲಾಸಾಂಸ್ಕೃತಿಕ ಮೇಳವನ್ನು ನಿರ್ಮಿಸಬೇಕೆಂದರೆ, ಆಗುವ ಖರ್ಚೆ ಅಪಾರ. ಅದನ್ನು ವರ್ಷಾನುಗಟ್ಟಲೆ ಕಾಪಾಡಿ , ಉಳಿಸಿಕೊಳ್ಳುವುದೆಂದರೆ ಇನ್ನು ಹೆಚ್ಚಿನ ಸಾಹಸವೆ. ನಿಜವಾದ ಅಭಿಮಾನವಿರದಿದ್ದಲ್ಲಿ ಹಾಗೆ ಇಲ್ಲಿಯತನಕ ಕಾಯ್ದುಕೊಂಡು ಬರುವುದು ಸಾದ್ಯವಾಗುತ್ತಿರಲಿಲ್ಲ. ಕಾಲದ ಹೊಡೆತಕ್ಕೆ ಸಿಕ್ಕಿ ಜರ್ಝರಿತವಾಗಿ ಎಂದೊ ನಾಶವಾಗಿ ಹೋಗುತ್ತಿತ್ತು. ಆ ಸೂಕ್ಷ್ಮತೆಯ ಅರಿವನ್ನು ಸಾಧಾರಣ ನೋಡುಗರಲ್ಲು ತಾನಾಗೆ ಉಂಟುಮಾಡಬಲ್ಲ ಜಾದೂ ಇಲ್ಲಿರುವ ದೃಶ್ಯ ಮೆರವಣಿಗೆಗಿದೆ.
ಎಷ್ಟೊ ಹಳೆಯ ಹಾಗೂ ಹೊಸತಿನ ನೀತಿ ಭೋಧಕ ಕಥೆಗಳನ್ನು ಚಿತ್ರ ರೂಪದಲ್ಲಿ ಸರಣಿಯ ಹಾಗೆ ನೋಡುತ್ತಿದ್ದರೆ, ಮಾತಿನ ವರ್ಣನೆಯಿಲ್ಲದೆ ಕಥೆ ಕಣ್ಮುಂದೆ ನಿಂತಂತಾಗುತ್ತದೆ. ಅದೇ ರೀತಿಯಲ್ಲಿ ಅವರಲ್ಲಿರುವ ಮೂಢನಂಬಿಕೆಗಳ ಅಥವಾ ವಿಪರ್ಯಾಸಕ ಪ್ರಬುದ್ದತೆಗಳ ಪರಿಚಯವಾಗುತ್ತದೆ. ಸಾಗಿದಂತೆಲ್ಲ ಅಲ್ಲಲ್ಲಿ ನಡುವೆ ವಿಶ್ರಮಿಸುವ ತಾಣದ ಸೌಲಭ್ಯವೂ ಕಾಣಿಸುತ್ತದೆ. ಹಾಗೆಯೆ ಬೃಹದಾಕಾರದ ಚೀನಿ 'ನಗುವ ಬುದ್ಧನ' ದರ್ಶನವೂ ಆಗುತ್ತದೆ. ಆ ಬುದ್ದ ನಮ್ಮ ಬುದ್ಧನ ಕಲ್ಪನೆಯಂತಿರದೆ ಬೇರೆಯಾಗಿ ಕಂಡರೆ ಅಚ್ಚರಿಗೊಳ್ಳಬೇಡಿ - ಏಕೆಂದರೆ ಇದು 'ಚೀನಿಕರಿಸಿದ ಬುದ್ಧ'! (ಅಂದ ಹಾಗೆ ಎಂಜಿಆರ ರವರ "ಉಲಗಂ ಸುಟ್ರ ವಾಲಿಬಂ" ತಮಿಳು ಚಿತ್ರದ ಹಾಡೊಂದು ಈ ಹಾವ್ ಪಾರ್ ವಿಲ್ಲಾದಲ್ಲಿ ಚಿತ್ರಿತವಾಗಿದೆ, ಅಲ್ಲಿಯು ನೀವೀ ಬುದ್ಧನನ್ನು ಕಾಣಬಹುದು)
ಇದೆಲ್ಲಕ್ಕು ಮಿಕ್ಕಿದ ಹಾವ್ ಪಾರ್ ವಿಲ್ಲಾದ ಹೈಲೈಟೆಂದೆ ಹೇಳಬಹುದಾದ ದೃಶ್ಯ ಕಾವ್ಯ ಸರಣಿಯೆಂದರೆ - "ನರಕದ ಹತ್ತು ಆಸ್ಥಾನಗಳು (ಟೆನ್ ಕೋರ್ಟ್ಸ್ ಆಫ್ ಹೆಲ್)". ಇಲ್ಲಿ ಚೀನಿ ನಂಬಿಕೆಯ ನರಕದ ಹತ್ತು ಆಸ್ಥಾನದ ಬಿಡಿಬಿಡಿಯಾದ ಚಿತ್ರಣವಿದೆ. ನಮ್ಮಲ್ಲಿನ ನಂಬಿಕೆಯಂತೆ, ಇಲ್ಲು ಸತ್ತ ಮೇಲೆ ಜನರ ಆತ್ಮಗಳು ಮೇಲಿನ ಲೋಕಕ್ಕೆ ಹೋದಾಗ ಮೊದಲಿಗೆ ಕನ್ನಡಿಯೊಂದರಲ್ಲಿ ಅವರವರ ಪ್ರತಿಬಿಂಬ ನೋಡಿಸಲಾಗುತ್ತದೆಯಂತೆ. ಆ ವಿಶೇಷ ಕನ್ನಡಿ ಅವರವರ ಭೂಲೋಕದ ಪಾಪದನುಸಾರ ಅವರ 'ಮಾರ್ಕ್ಸ್ ಕಾರ್ಡ್' ಚಿತ್ರಣವನ್ನು ಕೊಟ್ಟು ಬಿಡುವುದಂತೆ - ಒಂದು ರೀತಿ ನಮ್ಮ ಚಿತ್ರ ಗುಪ್ತರ ಲೆಕ್ಕದ ಹಾಗೆ!
ಸರಿ ಅಲ್ಲಿ ನಿಮ್ಮ ಗ್ರೇಡ್ ಕಾರ್ಡ್ ತೆಗೆದುಕೊಂಡು ಬಂದರೆ ಮುಂದೆ ಸೇತುವೆ ದಾಟುವ ಕೆಲಸ - ಪುಣ್ಯಾತ್ಮರಿಗೆ "ಚಿನ್ನದ ಸೇತುವೆ" (ರಾಮ, ರಾಮ ಅಲ್ಲೂ ಚಿನ್ನದ ಮೋಹವೆ ಅನ್ನಬೇಡಿ, ಚಿನ್ನ ಎಲ್ಲೆಲ್ಲು ಚಿನ್ನವೆ ಅಂತೆ), ತುಸು ಪುಣ್ಯ ಪ್ಲಸ್ ತುಸು ಪಾಪಾತ್ಮರಿಗೆ "ಬೆಳ್ಳಿಯ ಸೇತುವೆ"ಯ ಬಾಗಿಲು ತೆರೆಯುತ್ತದಂತೆ. ಎರಡು ಸೇತುವೆಯೂ ಇಲ್ಲದವರೆಂದರೆ ಪೂರ್ತಿ ಪಾಪಾತ್ಮರೆಂದು ಬೋರ್ಡು ಹಾಕಿ, ಸೇತುವೆ ಹತ್ತಲೆ ಬಿಡುವುದಿಲ್ಲವಂತೆ!
ಸರಿ , ಸೇತುವೆ ದಾಟಿ ಬಂದರೆ ಚಿನ್ನದ ಸೇತುವೆ ನೇರ 'ನಾರಿ ಸ್ವರ್ಗಕ್ಕೆ ದಾರಿ' ಎನ್ನುವ ಹಾಗೆ ಯಾವ ಪಾಪದ ಶಿಕ್ಷೆಯೂ ಇಲ್ಲದೆ ನೇರ ಸ್ವರ್ಗ ಲೋಕಕ್ಕೆ ರವಾನಿಸುತ್ತದಂತೆ. ಬೆಳ್ಳಿ ಸೇತುವೆಯಲ್ಲಿ ಮೊದಲು ನರಕದ ಕದ ತಟ್ಟಿ ಮಾಡಿದ ಪಾಪಕ್ಕೆ ಶಿಕ್ಷೆ ಅನುಭವಿಸಿ ನಂತರ ಮಾಡಿದ್ದ ಪುಣ್ಯದ ಲೆಕ್ಕದಲ್ಲಿ ಸ್ವರ್ಗದ ಮೂತಿ ನೋಡುವ ಅವಕಾಶ ( ಸರತಿಯಲ್ಲಿ ಯಾವುದು ಮೊದಲೊ, ಯಾವುದು ನಂತರವೊ ಗೊತ್ತಿಲ್ಲ - ಮೊದಲು ನರಕವೆ ವಾಸಿ, ಎನ್ನಿ)
ಅಂತೂ ಅಲ್ಲಿಂದ ಮುಂದಕ್ಕೆ ಶುರು ಒಂದೊಂದಾಗಿ ಹತ್ತು ನರಕದ ಆಸ್ಥಾನಗಳ ಪರಿಚಯ. ಪಾಪಿಗಳನ್ನೆಲ್ಲ ಹೊತ್ತು ತಂದು ಅಲ್ಲಿನ ಆಸ್ಥಾನ / ಕಚೇರಿಯ ಮುಖ್ಯಸ್ಥನ ಮುಂದೆ ನಿಲ್ಲಿಸಿ ಅವನಿಗೆ ಅವನ ಪಾಪದ ಲೆಕ್ಕಾಚಾರ ಮತ್ತು ವಿಧಿಸುವ ಶಿಕ್ಷೆಯನ್ನು ವಿವರಿಸುತ್ತಾರೆ (ನಮ್ಮ ಹಳೆ ಚಲನ ಚಿತ್ರದಲ್ಲಿನ ಯಮನ ಆಸ್ಥಾನ ನೆನಪಿಗೆ ಬಂತೆ? ಇದು ಹೆಚ್ಚು ಕಡಿಮೆ ಹಾಗೆಯೆ - ಆದರೆ, ಡ್ರೆಸ್ಸು ಮಾತ್ರ ನಮ್ಮ ಹಾಗಲ್ಲ ಅಷ್ಟೆ. ಹಾಗೆಯೆ ಪ್ರತಿ ಮುಖ್ಯಸ್ತನಿಗೂ ಚೀನಿ ಹೆಸರಿದೆ). ಪ್ರಚಂಡ ಪಾಪಿಯಾದರೆ ಹೆಚ್ಚು ಆಸ್ಥಾನಗಳ ದರ್ಶನವಾಗುತ್ತದೆ, ಸುಮಾರಿನ ಪಾಪಿಗೆ ಕಡಿಮೆ. ಈ ಆಸ್ಥಾನಗಳೆಲ್ಲ ನಮ್ಮ ಈಗಿನ ಮಾಡ್ರನ್ ಸ್ಪೆಶಲಿಷ್ಟ್ ಆಸ್ಪತ್ರೆಗಳ ಹಾಗೆ. ಒಂದೊಂದು ಒಂದೊಂದು ಕೌಶಲದಲ್ಲಿ ಪಕ್ಕಾ. ಒಂದು 'ಶೀತ ಸಾಗರ'ದಲ್ಲಿ ಬೆತ್ತಲೆ ಮುಳುಗಿಸುವ ಪರಿಯಾದರೆ, ಮತ್ತೊಂದು ಲೋಹವೆ ಸುಟ್ಟು ಕರಗುವಷ್ಟು ಉಷ್ಣತೆಯ ಕಂಬಕ್ಕೆ ಬೆತ್ತಲೆ ಕಟ್ಟಿ 'ಹೊಟ್ಟೆಯುರಿಸುವ' ಸವಾರಿ; ಮಗದೊಂದು ಬಿಸಿಬಿಸಿ ಎಣ್ಣೆಯಲ್ಲಿ ಬೋಂಡ , ಬಜ್ಜಿಯಂತೆ ಪಾಪಿಗಳನ್ನು ಕರಿಯುವ ಬಾಣಲೆಯಾದರೆ, ಮತ್ತೊಂದರಲ್ಲಿ ಹೃದಯದಿಂದ ಹಿಡಿದು ದೇಹದ ಎಲ್ಲಾ ಭಾಗಕ್ಕೂ ಭಲ್ಲೆ, ಕತ್ತಿ, ಚೂರಿಗಳಿಂದ ಚುಚ್ಚುವ ಶೂಲಗಳು. ಬಂಡೆ , ಚಪ್ಪಡಿಗಳಡಿ ಸಿಕ್ಕಿಸಿದ ದೇಹಗಳ ಕಥೆ ಒಂದೆಡೆಯಾದರೆ, ಕಸಾಯಿಖಾನೆಯ ಹಾಗೆ ದೊಡ್ಡ ಮಚ್ಚಿಡಿದ ಕಟುಕನ ಕೈಯಲ್ಲಿ 'ಕೈಮಾ' ಆಗುವ ದೃಶ್ಯ ಇನ್ನೊಂದೆಡೆ. ಮತ್ತೀಕಡೆ ನೋಡಿ, ದೊಡ್ಡ ಕೊಳವೆಯಾಕಾರದ ಭಾರದ ದಪ್ಪ ಕೋಲೊಂದು ಹಿಂದೆ ಮುಂದೆ ತೂಗಾಡುತ್ತ , ಗೋಡೆಗೆ ಕಟ್ಟಿಸಿದ ಪಾಪಿಯೊಬ್ಬನನ್ನು ಅಪ್ಪಳಿಸಿ ಅಪ್ಪಳಿಸಿ ಚಪ್ಪಡಿ ಮಾಡುತ್ತಿದೆ. ಎಲ್ಲಾ ಕಡೆಯೂ, ಪ್ರತಿ ಆಸ್ಥಾನದಲ್ಲೂ ಯಾರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುವ ಕಿಂಕರರು ಬೇರೆ ಮತ್ತೆ ಮತ್ತೆ ತಪ್ಪಿಸಿಕೊಳ್ಳಲೆತ್ನಿಸಿದವರನ್ನು ಒಳ ತಳ್ಳುತ್ತಿದ್ದಾರೆ (ನಿಜವಾದ ಪಾಪಿಗಳ ಪಾಪ ಹೆಚ್ಚೊ ಅಥವ ಆ ಆ ಕಿಂಕರರ ಪಾಪ ಹೆಚ್ಚೊ, ಗೊತ್ತಾಗದಿದ್ದರು ತಲೆಕೆಡಿಸಿಕೊಳ್ಳದೆ ಮುಂದುವರೆಯುವ ಬನ್ನಿ!)
'ಶಿವ ಶಿವ ಇದೇನಪ್ಪಾ ನರಕ' ಎಂದು ಮೂಗು ಮುರಿಯುವ ಮೊದಲೆ ಒಂದು ಪುಟ್ಟ ವಿವರಣೆ. ಪ್ರತಿ ಆಸ್ಥಾನದಲ್ಲು ಒಂದೊಂದು ಮಾಹಿತಿ ಫಲಕ ನೇತುಹಾಕಲಾಗಿದೆ - ಆ ಆಸ್ಥಾನದಲ್ಲಿ ಯಾವ ಯಾವ ತಪ್ಪಿಗೆ ಯಾವ ಶಿಕ್ಷೆ ಎಂದು ಆಗಲೆ ಬರೆದಿಟ್ಟುಬಿಟ್ಟಿದ್ದಾರೆ! ಕಳ್ಳತನಕ್ಕೇನು, ಸುಳ್ಳಾಡಿದರೆ ಏನು, ಕೊಲೆಗಾದರೆ ಯಾವ ಶಿಕ್ಷೆ, ಅತ್ಯಾಚಾರಕ್ಕೇನು (ಇದನ್ನು ಸ್ವಲ್ಪ ಅರ್ಜೆಂಟಾಗಿ ನಮ್ಮ ದೇಶದ ಅತ್ಯಾಚಾರಿ ಸಂಸ್ಖೃತಿಯನ್ನು ಅಪ್ಪುತ್ತ ದಾರಿ ತಪ್ಪುತ್ತಿರುವ ಯುವ ಜನಾಂಗಕ್ಕೆ ತೋರಿ, ಏನಾದರು ಪರಿಣಾಮವಾಗುವುದೊ ನೋಡಬಹುದೇನೊ?), ಮೋಸಾ-ವಂಚನೆಗೇನು, ತೆರಿಗೆ ಕಟ್ಟದೆ ಮೋಸ ಮಾಡಿದ್ದಕ್ಕೇನು ( ದೇವಾ..ಬದುಕಿದ್ದಾಗ ತೆರಿಗೆ ಕಟ್ಟುವುದೆ ಶಿಕ್ಷೆ, ಸತ್ತ ಮೇಲೆ ಸರಿಯಾಗಿ ಕಟ್ಟಲಿಲ್ಲವೆಂದು ಶಿಕ್ಷೆಯೆ?), ಸಂಗಾತಿಗೆ ವಂಚಿಸಿದ್ದಕ್ಕೇನು....ಹೀಗೆ ಎಲ್ಲಕ್ಕು ಪಟ್ಟಿಯಲ್ಲಿ ಸ್ಥಾನ! ನಾನಂತೂ ಜತೆಯಲ್ಲಿದ್ದ ಮಗನಿಗೆ ತೋರಿಸಲೆಂದು, 'ಶಾಲೆಗೆ ಚಕ್ಕರ ಹಾಕಿದರೇನು ಶಿಕ್ಷೆ, ಹೋಂವರ್ಕ್ ಯಾರು ಹೇಳದೆ / ಯಾರ ಹತ್ತಿರವು ಹೇಳಿಸಿಕೊಳ್ಳದೆ ತಾನೆ ತಾನಾಗಿ ಮಾಡದಿದ್ದರೇನು ಶಿಕ್ಷೆ' ಎಂದೆಲ್ಲ ಎಲ್ಲಾದರೇನೊ ಬರೆದಿದೆಯೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿದರೂ, ಏನೂ ಕಾಣಿಸಲಿಲ್ಲ. ಕೊನೆಗೆ, ಇಲ್ಲಿ ಎಲ್ಲ ಬರೆದಿಲ್ಲವೆಂದು, ಬರೆದ ವಿವರ ಆ ಆಸ್ಥಾನಾಧಿಕಾರಿಯ ಪುಸ್ತಕದಲ್ಲಿದೆಯೆಂದು ತೋರಿಸಿ ಸಂಭಾಳಿಸಬೇಕಾಯ್ತು. ಅಲ್ಲಿ ಹೋಗಿ ಬಂದ ಮೇಲು ಒಂದೆರಡು ವಾರ ಆ ಭಯವಿದ್ದುದನ್ನು ಗಮನಿಸಿದರೆ, ಅದನ್ನೆಲ್ಲ ಮಕ್ಕಳು ನೋಡಿದರೆ ಉತ್ತಮವೆಂದು ಕಾಣುತ್ತದೆ. ನೀವೂ ನಿಮ್ಮ ಮಕ್ಕಳನ್ನು ಜತೆಗೆ ಕರೆದೊಯ್ಯುವುದೆ ವಾಸಿಯೆಂದು ನನ್ನನಿಸಿಕೆ!
ಒಟ್ಟಾರೆ, ಪಾಪಿಗಳ ನರಕಾಸ್ಥಾನದ ಯಾತ್ರೆ ಮುಗಿಸಿ (ಇನ್ನು ಬದುಕುಳಿದಿದ್ದರೆ), ಸತ್ತೆನೊ ಕೆಟ್ಟನೊ ಎಂದು ಹೊರಗೆ ಬಂದರೆ ಆ ಆತ್ಮಕ್ಕೆ ಸುಧಾರಿಸಿಕೊಳ್ಳಲು ಜಾಗ ಕಾದಿರುತ್ತದೆ. ಅಲ್ಲಿ ವಯಸ್ಸಾದ ಚೀನಿ  ವೃದ್ಧೆಯೊಬ್ಬಳು (ಮೇಡಂ ಚಾಂಗೊ, ಮೇಡಂ ವಾಂಗೊ - ಕ್ಷಮಿಸಿ, ಹೆಸರು ಸರಿಯಾಗಿ ನೆನಪಿಲ್ಲ), ಬಂದವರನ್ನೆಲ್ಲಾ ಆದರಿಸಿ , ಚಹಾ ಕೊಟ್ಟು ಸತ್ಕರಿಸುತ್ತಾಳೆ (ಅಷ್ಟೊಂದು ಚೆನ್ನಾಗಿ ಬೆಂಡೆತ್ತಿದ ಮೇಲೆ ಅಷ್ಟೂ ಮಾಡದಿದ್ದರೆ ಹೇಗೆ ಹೇಳಿ?). ಹಾಗೆ ಅವರು ಚಹಾ ಕುಡಿಯುತ್ತಿದ್ದಂತೆ, ಅದುವರೆಗು ನಡೆದಿದ್ದು, ಆಗಿದ್ದು ಎಲ್ಲಾ ಮರೆತು ಹೋಗಿ ಅವರ ನೆನಪಿನ ಸ್ಮೃತಿಪಟಲದಿಂದ ಪೂರ್ತಿ ಮರೆಯಾಗುವಂತೆ ಅಳಿಸಿ ಹೋಗುತ್ತದೆ. ಹೀಗೆ ಕೊನೆಯ ಹಂತವನ್ನು ದಾಟಿದ ನಂತರ ಅವರನ್ನು ಅವರವರ ಕರ್ಮಾನುಸಾರ, ಫಲಾನುಫಲ ಪಡೆದು ಮುಂದಿನ ಜನ್ಮವೆತ್ತುತ್ತಾರೆ (ಹಾವೊ, ಹಂದಿಯೊ, ಚೇಳೊ, ಕುರಿಯೊ, ಮನುಜರೊ....ಆಗಿ!) ಹೀಗೆ ಸಂಸಾರ ಚಕ್ರ ನಿರಂತರವಾಗಿ ಮುಗಿಯುತ್ತ, ನಡೆಯುತ್ತಾ ಸಾಗುತ್ತದೆ ಎನ್ನುತ್ತದೆ ಅಲ್ಲಿರುವ ಕಡೆಯ ದೃಶ್ಯ ಫಲಕ.
ಅಂದ ಹಾಗೆ  - ನಾನು ಇಲ್ಲಿಯವರೆಗು ಹೇಳುತ್ತಿದ್ದುದ್ದು ಹಾವ್ ಪಾರ್ ವಿಲ್ಲಾದ ನರಕದ ಕುರಿತೆ, ನಮ್ಮದನ್ನಲ್ಲ. ಅಲ್ಲೆ ಸಂಸಾರ ಚಕ್ರದ ಹೆಸರು ಇದೆ, ಯಮನ ಕಲ್ಪನೆಯು, ಹೆಸರೂ ಇದೆ - ಇವೆಲ್ಲಾ ಯಾವುದೊ ಕಾಲದಲ್ಲಿ ಸಂಕರಗೊಂಡ ಸಂಸ್ಖೃತಿಯ ಪ್ರಭಾವವೊ, ಅಥವಾ ಅಲ್ಲೆಲ್ಲಾ ಗಾಢವಾಗಿ ಪಸರಿಸಿರುವ ಬೌದ್ಧ ಧರ್ಮದ ಪ್ರಭಾವದಿಂದ, ಜತೆಯಾಗಿ ಹರಿದು ಹೋದ ಕಲ್ಪನೆ, ನಂಬಿಕೆಗಳ ಸಾಗಾಣಿಕೆಯೊ, ಅಥವಾ ಅವರದೆ ಆದ ಸ್ವಂತ ನಂಬಿಕೆಯೆ ನಮ್ಮದರಂತಿರುವ ಕಾಕತಾಳೀಯತೆಯೊ - ಒಟ್ಟಿನಲ್ಲಿ ಇದನ್ನೆಲ್ಲ ಕಂಡು ಈ ಎರಡು ಸಂಸ್ಕೃತಿಗಳ ಪರಂಪರಾಗತ ನಂಬಿಕೆಗಳ ನಡುವೆಯಿರುವ ಸಾಮ್ಯತೆಗೆ ಅಚ್ಚರಿ ಪಡಲೇನಡ್ಡಿಯಿಲ್ಲ.
ಹೀಗೆ, ನೀವು ಕಳೆಯುವ ಕೆಲವು ಗಂಟೆಗಳು ನಿಮಗೆ ಚೀಣಿ ಸಂಸ್ಖೃತಿಯ, ಜಾನಪದದ, ಪರಂಪರೆಯ ಹಾಗೂ ಚೀನಿ ಪೌರಾಣಿಕ / ಚಾರಿತ್ರಿಕ ತುಣುಕುಗಳ ಪಕ್ಷಿನೋಟವನ್ನೆ ಬಿಚ್ಚಿಡುತ್ತದೆನ್ನಲು ಅಡ್ಡಿಯಿಲ್ಲ. ಹಾಗೆಯೆ ನೀವು ಅದನ್ನೆಲ್ಲ ನೋಡುವ , ತಿಳಿಯುವ ಆಸಕ್ತಿಯಿರದವರಾದರೆ ಕೇವಲ ಸಾಮಾನ್ಯ ಉದ್ಯಾನವನವೊಂದನ್ನು ನೋಡಿದಂತೆ ಸುತ್ತಾಡಿ ಬರಲೂ ಅಡ್ಡಿಯಿಲ್ಲ. ಹೇಗೆ ಮಾಡಿದರೂ ಟಿಕೆಟ್ಟಿಲ್ಲದ ಬಿಟ್ಟಿ ಯಾತ್ರೆಯಾದ್ದರಿಂದ, ಹಿಡಿಸದಿದ್ದರು ಹಣದ ನಷ್ಟವಂತೂ ಆಗುವುದಿಲ್ಲ (ಸಮಯವಂತು ಬೇಕೆ ಬೇಕಲ್ಲ!). ಬೇರೇನಿಲ್ಲದಿದ್ದರೂ, ಈ ಬಣ್ಣದ ಲೋಕದ ದೃಶ್ಯ ಚಿತ್ರಣದಿಂದಾಗಿ, ಬೇರೆ ಯಾರಲ್ಲೂ ಇರದಂತ ಅದ್ಭುತ ಪೋಟೋಗಳು ನಿಮ್ಮ ಸಂಗ್ರಹಕ್ಕೆ ಸೇರುವುದು ಖಂಡಿತ.
ಅಂದ ಹಾಗೆ, ಒಂದು ಮಾತು - ಈ ಉದ್ಯಾನದ ಒಳಗಡೆಯೆ, ಒಂದು ಮ್ಯುಜಿಯಂ ಸಹ ಇದೆ - ಆದರೆ ಇದಕ್ಕೆ ದುಡ್ಡು ಕೊಟ್ಟು ಹೋಗಬೇಕು! ಮೂಜಿಯಮ್ಮಿನಲ್ಲಿ ನಿಜವಾದ ಆಸಕ್ತಿಯಿರುವವರು ಮಾತ್ರ ಹೋಗಲೆಂದು ಹಾಗೆ ಮಾಡಿದ್ದಾರೇನೊ!
ಇನ್ನು ಕಡೆಯದಾಗಿ ಎರಡು ಮಾತು:
ಮೊದಲನೆಯದು, ನಾವೆಲ್ಲಾ ಋಣಾನುಬಂಧ, ಕರ್ಮ ಸಿದ್ದಾಂತದಲ್ಲಿ ನಂಬಿಕೆಯಿರೊ ಜನ. ಪುಕ್ಕಟೆ ನೋಡಿ ಋಣಭಾರ ಯಾಕೆ ಹೊರಬೇಕು ಹೇಳಿ? ಸಿಂಗಪುರದಿಂದ ವಾಪಸ್ಸು ಬರುವ ಮೊದಲು, ಅಲ್ಲಿಯ ಯಾವುದಾದರೂ ಅಂಗಡಿಯಲ್ಲಿ ಒಂದು ಚಿಕ್ಕ ಟೈಗರ ಬಾಮ್ ಶೀಷೆಯನ್ನು ಖರೀದಿಸಿಬಿಡಿ! ಕನಿಷ್ಟ ಪರೋಕ್ಷವಾಗಿಯಾದರೂ ಚಂದಾ ಕಟ್ಟಿದಂತಾಗುತ್ತದೆ ( ಇಲ್ಲ ಈಗ ಭಾರತದಲ್ಲೂ ಸಿಕ್ಕುತ್ತದೆ, ಅಲ್ಲೆ ಕೊಳ್ಳುತ್ತೇವೆ, ಸ್ವಲ್ಪ ಅಗ್ಗದಲ್ಲಿ ಸಿಗುತ್ತದೆ ಎಂದರೆ ಅದು ಸರಿಯೆ!)
ಎರಡನೆಯದು, ಇಷ್ಟೆಲ್ಲ ದೃಶ್ಯ ಕಾವ್ಯ ಹಾಗೆ ಹೀಗೆ ಎಂದೆಲ್ಲ ಹೇಳಿ, ಒಂದೂ ಚಿತ್ರ ಹಾಕದಿದ್ದರೆ ಹೇಗೆ? ಎಂಬುದು. ಆದರೆ ನನಗೆ ಚಿತ್ರ ಹಾಕಲು ಎರಡು ತೊಂದರೆಗಳಿವೆ - ನಾನು ಬರೆಯಲು ಬಳಸುವ ಐಪ್ಯಾಡಿನಿಂದ ಚಿತ್ರಗಳನ್ನು ಅಪ್ಲೋಡು ಮಾಡಲು ಸಂಪದದಲ್ಲಿ ಆಗುತ್ತಿಲ್ಲ. ಏನೊ, ತಾಂತ್ರಿಕ ಅಡಚಣೆ ಯಿರುವಂತೆ ಕಾಣುತ್ತಿದೆ. ಅಲ್ಲದೆ, ನಾನೆ ತೆಗೆದ ನೂರಾರು ಹಾವ್ ಪಾರ್ ವಿಲ್ಲದ ಚಿತ್ರಗಳು ನನ್ನ ಸಂಗ್ರಹದಲ್ಲಿವೆ. ಸಿಂಗಪುರಕ್ಕೆ ಬರಲಾಗದವರಿಗೆ, ಅದನ್ನೆಲ್ಲ ಈ ಲೇಖನದ ಜತೆ ತೋರಿಸುವ ಇರದೆಯಿದ್ದರೂ, ಗಾತ್ರ ಮತ್ತು ತಾಂತ್ರಿಕ ಅಡಚಣೆ ದಾರಿ ಕೊಡುತ್ತಿಲ್ಲ. ಅದಕ್ಕಾಗಿ, ಆ ಚಿತ್ರಗಳನ್ನೆಲ್ಲ ನನ್ನ ಸ್ವಂತ ಬ್ಲಾಗಿನ ಸೈಟಿನ ಖಾಲಿ ಪುಟವೊಂದರಲ್ಲಿ ಹಾಕಿ ಇಲ್ಲಿ ಬರಿಯ ಕೊಂಡಿಯನ್ನು ಮಾತ್ರ ನೀಡಿದ್ದೇನೆ. ಆ ಚಿತ್ರಗಳನ್ನು ನೋಡಿದರೆ ನಿಮಗೆ ಈ ಜಾಗದ ದೂರ ನೋಟದ ಅರಿವಾಗುವುದರ ಜತೆಗೆ, ನಾನು ಕೊಟ್ಟಿರುವ ವಿವರಣೆಯನ್ನು ಅರ್ಥೈಸಲು ಸುಲಭವಾಗುವುದೆಂದು ನಂಬಿದ್ದೇನೆ.
----------------------------------------------------------------------------------------------------------------------------
1. ನಾ ತೆಗೆದ ಚಿತ್ರಗಳು:
https://nageshamysore.wordpress.com/%e0%b2%b8%e0%b2%bf%e0%b2%82%e0%b2%97%e0%b2%be%e0%b2%aa%e0%b3%81%e0%b2%b0%e0%b2%a6-%e0%b2%b9%e0%b2%be%e0%b2%b5%e0%b3%8d-%e0%b2%aa%e0%b2%be%e0%b2%b0-%e0%b2%b5%e0%b2%bf%e0%b2%b2%e0%b3%8d%e0%b2%b2/
2. ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿಗಾಗಿ ನೋಡಿ:
http://en.wikipedia.org/wiki/Haw_Par_Villa
ಸೂಚನೆ: ಹೆಚ್ಚಿನ ಚಿತ್ರಗಳಿಗೆ ಹಾವ್ ಪಾರ್ ವಿಲ್ಲ ಇಮೇಜಸ್ (haw par villa images) ಅಂತ ಗೂಗಲ್ ಮಾಡಿ - ಬೇಕಾದಷ್ಟು ಚಿತ್ರಗಳನ್ನ ನೋಡಬಹುದು!
------------------------------------------------------------------------------------------------------------------------------
ಉಪ ಸಂಹಾರ: ಆ ಧರ್ಮರಾಯ ಹೇಳಿದ ಒಂದು ಸುಳ್ಳಿಗಾಗಿ ಕನಿಷ್ಟ ನರಕ ಹೇಗಿರುತ್ತದೆಂದು ಒಂದು ಬಾರಿ ನೋಡಬೇಕಾದ ಅನಿವಾರ್ಯ ಬಂತಂತೆ. ನಾವು ಹುಲು ಮಾನವರು, ಸುಳ್ಳಿಲ್ಲದೆ ಬದುಕಲೆ ಅರಿಯದವರು ಕನಿಷ್ಟ ನರಕ ನೋಡಿಯಾದರೂ ಅಭ್ಯಾಸ ಮಾಡಿಕೊಂಡರೆ, ಮುಂದೆ ಶಿಕ್ಷೆಯನ್ನನುಭವಿಸುವಾಗ ಸುಲಭವಾದೀತು. ಹಾಗೆಯೆ, ಈ ತಾಣದ ಕುರಿತು ಈ ಹಿಂದೆ ಯಾರಾದರೂ ಸಂಪದದಲ್ಲಿ ಬರೆದಿದ್ದರೊ ಗೊತ್ತಿಲ್ಲ. ಹಾಗೇನಾದರೂ ಪುನರಾವರ್ತನೆಯಾಗಿದ್ದಲ್ಲಿ, 'ಪಾಪಿ ನರಕಕ್ಕೆ ಹೋಗು' ಅಂತ ಮಾತ್ರ ಶಪಿಸಬೇಡಿ!
- ನಾಗೇಶ ಮೈಸೂರು, ಸಿಂಗಪುರದಿಂದ, 24.05.2013

Comments

Submitted by makara Fri, 05/24/2013 - 21:42

......'ಶಾಲೆಗೆ ಚಕ್ಕರ ಹಾಕಿದರೇನು ಶಿಕ್ಷೆ, ಹೋಂವರ್ಕ್ ಯಾರು ಹೇಳದೆ / ಯಾರ ಹತ್ತಿರವು ಹೇಳಿಸಿಕೊಳ್ಳದೆ ತಾನೆ ತಾನಾಗಿ ಮಾಡದಿದ್ದರೇನು ಶಿಕ್ಷೆ' ಎಂದೆಲ್ಲ ಎಲ್ಲಾದರೇನೊ ಬರೆದಿದೆಯೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕಿದರೂ, ಏನೂ ಕಾಣಿಸಲಿಲ್ಲ....ಅಲ್ಲಾ ನಾಗೇಶರೆ, ಶಾಲೆಯೇ ಮಕ್ಕಳಿಗೆ ದೊಡ್ಡ ನರಕ; ಅಲ್ಲಿ ಅವರಾಗಲೇ ಶಿಕ್ಷೆ ಅನುಭವಿಸಿರುತ್ತಾರಾದ್ದರಿಂದ ಅವರಿಗೆ ನರಕದಲ್ಲಿ ಶಿಕ್ಷೆಯೇನೂ ಇರದು ಬಿಡಿ :)) .......ಸಿಂಗಪುರದಿಂದ ವಾಪಸ್ಸು ಬರುವ ಮೊದಲು, ಅಲ್ಲಿಯ ಯಾವುದಾದರೂ ಅಂಗಡಿಯಲ್ಲಿ ಒಂದು ಚಿಕ್ಕ ಟೈಗರ ಬಾಮ್ ಶೀಷೆಯನ್ನು ಖರೀದಿಸಿಬಿಡಿ!....... ಏಕೆ ನಾಗೇಶರೆ ಅವರ ಕಲಾ ದೃಶ್ಯ ವೈಭವವನ್ನು ನೋಡಿ ತಲೆ ನೋವು ಬರುತ್ತದೆಯೇ? ಅದಕ್ಕೇ ಏನೋ ಅವರು ಅದಕ್ಕೆ ಯಾವುದೇ ವಿಧವಾದ ಶುಲ್ಕ ವಿಧಿಸಿಲ್ಲ. ಅದನ್ನು ನೋಡಿದ ಮೇಲೆ ಅವರು ಟೈಗರ್ ಬಾಮ್ ಖರ್ಚಾಗುತ್ತದೆಯಲ್ಲವೇ? :)) ಮೇಲಿನವು ಕೇವಲ ಹಾಸ್ಯಕ್ಕಾಗಿ ಹೇಳಿದ್ದು; ನಿಜಕ್ಕೂ ಒಂದು ಸುಂದರ ಪ್ರೇಕ್ಷಣೀಯ ಸ್ಥಳದ ಪರಿಚಯ ಮಾಡಿಸಿದ್ದೀರ. ಇಷ್ಟೆಲ್ಲಾ ಬರೆದಿದ್ದಾರೆ ಅವುಗಳ ಬಗ್ಗೆ ಒಂದೆರಡು ಚಿತ್ರಗಳನ್ನಾದರೂ ಹಾಕಬಾರದೇ ಎಂದು ಯೋಚಿಸುತ್ತಿದ್ದಾಗ ಕಡೆಯಲ್ಲಿ ಚಿತ್ರ ಸಂಗ್ರಹದ ಕೊಂಡಿ ಕಾಣಿಸಿತು. ಅದನ್ನು ಚಿವುಟಿಸಿ ನೋಡಿದಾಗ ನಿಜಕ್ಕೂ ಅದ್ಭುತವೆನಿಸುವ ಕಲಾಕೃತಿಗಳ ಮತ್ತು ಚೀನಿ ಸಂಸ್ಕೃತಿಯ ಪರಿಚಯವಾಯಿತು. ಲೇಖನ ತುಸು ದೀರ್ಘವಾಯಿತು, ಇದನ್ನು ಎರಡು ಭಾಗಗಳಲ್ಲಿ ಹಾಕಿದ್ದರೆ ಚೆನ್ನಾಗಿತ್ತು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by nageshamysore Sat, 05/25/2013 - 05:02

In reply to by makara

ಶ್ರೀಧರರವರೆ, ನಿಜವಾದ ಹಾಸ್ಯವೆಂದರೆ ಜಾಗವಿಷ್ಟು ಚೆನ್ನಾಗಿದ್ದರು ಮತ್ತು ಪ್ರವೇಶ ಶುಲ್ಕ ಇರದಿದ್ದರೂ, ಇದುವರೆಗೆ ಸಿಂಗಪುರಕ್ಕೆ ಭೇಟಿಯಿತ್ತ ಕನಿಷ್ಟ ಶೇಕಡ 90-95 ಜನ, ಈ ಜಾಗಕ್ಕೆ ಹೋಗಿರುವುದಿಲ್ಲ! ಬರಿಯ ಹೆಸರಾಂತ ಜಾಗಗಳಾದ ಸೆಂಟೋಸ, ಬರ್ಡ್ಸ್ ಪಾರ್ಕ್, ಜೂ, ನೈಟ್ ಸಫಾರಿ, ಗ್ರೇಟ್ ಸಿಂಗಪುರ್ ವ್ಹೀಲ್ಸ್, ಯುನಿವರ್ಸಲ್ ಸ್ಟುಡಿಯೊ....ಹೀಗೆ ಪಟ್ಟಿಯಲ್ಲಿ ತುಂಬಿರುತ್ತವೆ; ಎಲ್ಲಾ ಸರಿಯಾದ ದುಡ್ಡಿನ ಬಾಬತ್ತೆ! ನನಗಂತೂ ಇಲ್ಲಿನ ವಾಣಿಜ್ಯೀಕರಿಸಿದ ತಾಣಗಳ ನಡುವೆ ಇದೊಂದು ವಿಶೇಷ ಜಾಗವೆಂಬ ಅಭಿಪ್ರಾಯ. ಸಾಮಾನ್ಯ ಜನರಿಂದ ಗಿಜಿಗುಡುವ ಪ್ರವಾಸಿ ತಾಣಗಳ ನಡುವೆ ಈ ಜಾಗ ಸಾಮಾನ್ಯ ಬಿಕೊ ಎನ್ನುತ್ತಿರುತ್ತದೆ ( ಅದಕ್ಕೆ ನಾನೂ ಆಗಾಗ್ಗೆ, ಗಲಾಟೆಯಿರದ ತಾಣಕ್ಕೆ ಹೋಗಬೇಕೆನಿಸಿದಾಗ ಇಲ್ಲಿಗೆ ಹೋಗಿ ಕೂರುತ್ತೇನೆ). ಇತ್ತೀಚಿನ ಹೊಸತೆಂತೆಂದರೆ ಇದರ ಎದುರಿಗೆ ಟ್ರೈನು ನಿಲ್ಲುತ್ತದೆ. ಮೊದಲಿಗೆ ಬಸ್ಸಿನಲ್ಲಿ ಮಾತ್ರ ಸಾಧ್ಯವಿತ್ತು. ಲೇಖನದ ಉದ್ದ ಬಗ್ಗೆಯ ಅಂಶಕ್ಕೆ ಧನ್ಯವಾದ, ಮುಂದಿನ ಬಾರಿಯಿಂದ ಗಮನವಿಟ್ಟುಕೊಳ್ಳುತ್ತೇನೆ ಭಾಗವಾಗಿ ಪ್ರಕಟಿಸಲು. ಚಿಕ್ಕದಾಗಿ ಬರೆಯಲೆಂದೆ ಹೊರಟೆ,ಜಾಗ ಮಹಿಮೆಯೊ, ಏನೊ ಉದ್ದ ಗಮನಕ್ಕೆ ಬರಲಿಲ್ಲ :-) - ನಾಗೇಶ ಮೈಸೂರು, ಸಿಂಗಪೂರದಿಂದ
Submitted by partha1059 Sat, 05/25/2013 - 08:26

ನಾಗೇಶರಿಗೆ ನಮಸ್ಕಾರ , ನಿಮ್ಮ ಬರಹ ಓದುತ್ತಿದ್ದರೆ ಪುನಃ ನಮ್ಮದೆ ಧರ್ಮ ನಂಭಿಕೆಗಳೆ ಅಲ್ಲು ಇರುವಂತಿದೆ.. ಆದರು ಚೀನ ಹಾಗು ಭಾರತದ ನಡುವೆ ಸಾಂಸ್ಕೃತಿಕ ಸಂಭಂದಗಳು ಮೊದಲಿನಿಂದಲು ಕಡಿಮೆಯೆ ಅದಕ್ಕೆ ಕಾರಣ ತಿಳಿಯುತ್ತಿಲ್ಲ. ನಮ್ಮದೆ ನರಕ 'ಕೊಂಬಿಪಾಕ' ವೊ ಏನೊ ಹೇಳುತ್ತಾರಲ್ಲ ಹಾಗೆ ಇದೆ, ನಿಮ್ಮ ಲಿಂಕ್ ನಲ್ಲಿ ಚಿತ್ರಗಳು ಇವೆಯಾದರು ಅವೆಲ್ಲ ಚಿಕ್ಕ ಸೈಜ್ ನಲ್ಲಿ ಕಾಣುತ್ತವೆ, ದೊಡ್ಡದಾಗಿ ಕಾಣುವದಿಲ್ಲ. ನೀವು ಹೇಳಿದಂತೆ ಗೂಗಲ್ ನಲ್ಲಿ ಸಾಕಷ್ಟು ಚಿತ್ರಗಳಿವೆ. ಮಾಹಿತಿಗಾಗಿ ಧನ್ಯವಾದ
Submitted by nageshamysore Sat, 05/25/2013 - 12:46

In reply to by partha1059

ಪಾರ್ಥ ಸಾರ್, ನಮಸ್ಕಾರ. ಪೋಟೊ ಬಗ್ಗೆ ನಿಮ್ಮ ಮಾತು ನಿಜ, ಸ್ವಲ್ಪ ಚಿಕ್ಕದಾಗಿ ಹೋಯ್ತು - ಜಾಗದ ಇಕ್ಕಟ್ಟಿನಿಂದಾಗಿ. ಇನ್ನು 30-40 ಇದ್ದರು, ಹಿಡಿಸಲಾಗಲಿಲ್ಲ. ಆಗ ಗೂಗಲ್ ಮಾಡಿ ನೋಡಿದಾಗ ತುಂಬ ಚೆನ್ನಾದ ಚಿತ್ರಗಳು ಕಾಣಿಸಿದವು. ಅದರಿಂದಾಗಿ, ನನ್ನದನ್ನು ಮತ್ತಷ್ಟು ಪರಿಷ್ಕರಿಸದೆ ಹಾಗೆ ಬಿಟ್ಟು, ಆ ಸೂಚನೆ ಸೇರಿಸಿದೆ. ಸಾಂಸ್ಕೃತಿಕವಾಗಿ ಹೇಳುವುದಾದರೆ ಇಲ್ಲಿಂದ ಬೌದ್ಧ ಧರ್ಮದ ಪಯಣದ ಬಗ್ಗೆ ಸಾಕಷ್ಟು ಮಾಹಿತಿ ಇರುವುದಾದರೂ, ಹಿಂದೂ ಸಂಸ್ಕೃತಿಯ ವಿನಿಮಯದ ಸುಳಿವು ಅಷ್ಟಾಗಿ ಕಾಣಿಸುವುದಿಲ್ಲ. ಆದರೆ, ನನಗೊಮ್ಮೆ ಒಂದು ಕುತೂಹಲಕಾರಿ ವಿಷಯ ಗಮನಕ್ಕೆ ಬಂತು -  ಚೀನಾದಲ್ಲಿದ್ದಾಗ. ಅಲ್ಲಿನ ಟಿವಿಯೊಂದರಲ್ಲಿ, ಅಪರೂಪಕ್ಕೆಂಬಂತೆ, ಇಂಗ್ಲಿಷ್ ಸಬ್-ಟೈಟಲ್ಲಿನೊಡನೆ ಒಂದು ಚಿತ್ರ ಬಂತು. ಆ ಕಥೆಯ ಎಳೆಯೇನೆಂದರೆ, ಯಾವುದೊ ಕಾರಣದಿಂದ ದಕ್ಷಿಣ ಭಾರತದ ಅಪರಿಮಿತ ಹಾಗು ವಿಶೇಷ ಶಕ್ತಿಯಿದ್ದಂತ ಯೋಗಿ ಸ್ವರೂಪಿ ವ್ಯಕ್ತಿಯೊಬ್ಬ ಚೀನಾಕ್ಕೆ ಬರುತ್ತಾನೆ (ಧರ್ಮ ಎಂದವನ ಹೆಸರೆಂದು ಕಾಣುತ್ತದೆ). ಅಲ್ಲಿ ಬಂದವನೆ ಮೊದಮೊದಲೆ ನದಿ ನೀರಿನಲ್ಲಿ ಏನೊ ಅಪಾಯದಲ್ಲಿದ್ದ ವ್ಯಕ್ತಿಯೊಂದನ್ನು ರಕ್ಷಿಸುತ್ತಾನೆ ; ಹಾಗೆ ನದಿ ನೀರಿಗೆ ನಡೆಯುವಾಗ ವಿಶೇಷವೆಂದರೆ, ಅವನಲ್ಲಿ ದೋಣಿಯಾಗಲಿ ಯಾವುದೆ ಸಲಕರಣೆಯಾಗಲಿ ಇರದಿದ್ದರೂ, ನೆಲದ ಮೇಲೆ ನಡೆವಂತೆ ನೀರ ಮೇಲೆ ಹುಲ್ಲನ್ನೆಸೆದು ಅದರ ಮೇಲೆ ನಡೆದು ಹೋಗಿ ಕಾಪಾಡುತ್ತಾನೆ. ಅವನ ವಿಶೇಷ ಶಕ್ತಿಗೆ ಬೆರಗಾದ ಅಲ್ಲಿನ ಜನ ಅವನನ್ನೆ ಗುರುವಾಗಿಸಿಕೊಂಡು ಆರಾಧಿಸತೊಡಗುತ್ತಾರೆ. ದೊಡ್ಡ ಶಿಷ್ಯ ಬಳಗವೂ ಬೆಳೆಯುತ್ತದೆ. ಅವನೊಬ್ಬ 'ಮಾರ್ಷಲ್ ಅರ್ಟ್ಸ್' ಸಹ ಕರತಲಾಮಲಿಸಿಕೊಂಡ ಯೋಗಿ. ಅದನ್ನೆ ಅವರಿಗು ಕಲಿಸುತ್ತಾನೆ. ಹೀಗೆ ಅವನಿಂದ ಆರಂಭವಾದ ಗುರು ಪರಂಪರೆ ಅಲ್ಲಿಯೆ ಒಂದು ಪಂಥವಾಗಿ ವ್ಯಾಪಿಸಿಹೋಗುತ್ತದೆ. ಆದರೆ, ಅವನ ಅಳಿವಾದ ಮೇಲೆ ಮೂಲ ಭಾರತೀಯತೆ ಕಾಲದಲಿ ಕರಗಿ ಬರಿ ಚೀನಿ ಸ್ವತ್ತಾಗಿಬಿಡುತ್ತದೆ. ಚೀನಾದ ಅದೆಷ್ಟೊ ಈ ತರದ ಹೊಡೆದಾಟದ ಕಲೆಗೆ ಅವನೆ ಮೂಲ ಗುರು ಎಂಬಂತೆ ಅಲ್ಲಿ ಚಿತ್ರಿತವಾಗಿದೆ (ತೀರಾ ಈಚೆಗೆ ಒಂದು ತಮಿಳು ಚಿತ್ರವೂ ಇದೆ ತರದ ಕಥೆಯಾಗಿ ಬಂದ ಹಾಗೆ ನೆನಪು). ಇಂತಹ ಎಷ್ಟೊ ಸಂಕರಗಳು ಹಿಂದೆ ನಡೆದಿದ್ದು, ಅವುಗಳ ಮೂಲಕ ಈ ತರದ ನಂಬಿಕೆಗಳು ಸಾಗಾಣಿಕೆಯಾಗಿದೆಯೊ ಏನೊ?  ಅಲ್ಲದೆ, ಬಲವಾದ ತಮ್ಮದೆ ಮೂಲ ಧರ್ಮದ ಒತ್ತಾಸೆಯಿಲ್ಲದ ಕಾರಣ ಚೀನಿಯರಿಗೆ ಯಾವುದೆ ಧರ್ಮಕ್ಕೆ ಬದಲಾಗಲೂ ಅಥವ ಹಿಂಬಾಲಿಸಲು ನಮ್ಮಷ್ಟು ಮುಜುಗರವೂ ಆಗುವುದಿಲ್ಲ. ಇಲ್ಲೆ ಹಿಂದು ಧರ್ಮ ಪಾಲಿಸುತ್ತ ನಮ್ಮ ದೇವಸ್ಥಾನಕ್ಕೆ ಬರುವ ಚೀನೀಯರು ಇದ್ದಾರೆ, ಚರ್ಚಿಗೆ ಹೋಗುವ ಚೀನಿಯರೂ ಇದ್ದಾರೆ. ಆದರೆ ಬೌದ್ಧ ಧರ್ಮದ ಪ್ರಭಾವ ಹೆಚ್ಚು ಪ್ರಖರವಾಗಿ ಆದಂತೆ ಕಾಣುತ್ತದೆ. ಹಾಗೆಯೆ ಚಾಳುಕ್ಯ, ಹರ್ಷವರ್ಧನರ ಕಾಲದಲ್ಲಿ ಇಲ್ಲಿಗೆ ಬಂದಿದ್ದ ಚೀನಿ ರಾಯಭಾರಿ "ಹ್ಯು ಯೆನ್ ತ್ಸಾಂಗ್" , ಸಾಕಷ್ಟು ಕಾಲ ಇಲ್ಲೆ ಇದ್ದು ಇಲ್ಲಿನ ರೀತಿ ನೀತಿಗಳ ಬಗ್ಗೆ ಅಧ್ಯನ ನಡೆಸಿ, ಪುಸ್ತಕ ಕೂಡ ಬರೆದನಂತೆ, ಚೀನಿ ಭಾಷೆಯಲ್ಲಿ. ಬಹುಶಃ ಇದೆಲ್ಲದರ ಕಲಸು ಮೇಲೋಗರ ಪ್ರಭಾವವಿದ್ದರೂ ಇರಬಹುದೇನೊ? ಆದರೆ ಸಿಂಗಪುರಿನಂತಹ ಆಧುನಿಕ ಸಂಸ್ಖೃತಿಯಲ್ಲಿ ಪ್ರಾಯಶಃ ಹೊಸ ನಾಗರೀಕತೆಯ ಪ್ರಗತಿಯನ್ನಷ್ಟೆ ಎತ್ತಿ ತೋರಿಸುವ ಇಚ್ಚೆಯಿಂದಲೊ ಏನೊ, ಈ ತರಹದ ಹಳತಿನ ವಿಷಯಗಳನ್ನು ಎತ್ತಿ ತೋರಿಸದ ಅಡಗಿದ ಸ್ತರಗಳಲ್ಲೆ ಇಟ್ಟಿರಬೇಕು - ಬರಿ ಹೊಸತಿಗೆ ಮಾತ್ರ ಹೆಚ್ಚು ಪ್ರಾಮುಖ್ಯತೆ ಕೊಡುತ್ತ! - ನಾಗೇಶ ಮೈಸೂರು, ಸಿಂಗಪುರದಿಂದ
Submitted by nageshamysore Sat, 05/25/2013 - 20:19

(ಹಾವ್ ಪಾರ್ ವಿಲ್ಲದ ಮತ್ತಷ್ಟು ಆಕರ್ಷಣೆಗಳಲ್ಲಿ ಬಿಟ್ಟು ಹೋಗಿರುವ ಎರಡು ಮುಖ್ಯ ವಿಷಯ ನೆನಪಿಸಿದ್ದಾರೆ ಗೆಳೆಯ ಸುರೇಶ ಭಟ್ಟ ಸಿಂಗಪುರದಿಂದ. ಅವರಿಗೆ ವಂದನೆ ಸಲ್ಲಿಸುತ್ತ ಅದರ ಲಘು ಟಿಪ್ಪಣಿ, ಈ ಕೆಳಗೆ ಸೇರಿಸುತ್ತಿದ್ದೇನೆ) --------------------------------------------------------------------------------------------------------------------------------- ಇಲ್ಲಿರುವ ಮತ್ತೊಂದು ಪ್ರಮುಖ ಆಕರ್ಷಣೆಯೆಂದರೆ, ಒಂದೆ ಸಾಲಿನಲ್ಲಿ ನಿಂತ ಮೂರು ವಯೋವೃದ್ಧರ ಶಿಲ್ಪಾಕೃತಿಗಳು. ಇವರನ್ನು ಅನುಕ್ರಮವಾಗಿ ಫೂ (ಅಂದರೆ ಅದೃಷ್ಟ - ಗುಡ್ ಫಾರ್ಚೂನ್), ಲೂ (ಎಂದರೆ ಐಶ್ವರ್ಯಾ, ಸಂಪತ್ತು - ಪ್ರಾಸ್ಪರಿಟಿ) ಮತ್ತು ಕೊನೆಯದಾದ ಶೌ (ದೀರ್ಘಾಯಸ್ಸು - ಲಾಂಜೆಟಿವಿಟಿ). ಹೆಸರುಗಳೆ ಹೇಳುವಂತೆ ಎಲ್ಲಾ ಪಡೆದುಕೊಂಡು ಬಂದಿದ್ದರೆ ಅದೃಷ್ಟದ ನೆರಳಲ್ಲಿ ಶ್ರೀಮಂತಿಕೆ, ಅಧಿಕಾರ, ಸಂಪತನ್ನೆಲ್ಲ ಗಳಿಸಿ ಅದನ್ನು ಸುಖವಾಗಿ ಅನುಭವಿಸಲು ಸಾಕಾಗುವಷ್ಟು ಧೀರ್ಘಾಯಸ್ಸು - ಇವು ಮೂರನ್ನು ಕೊಟ್ಟು , ಕೈಬಿಡದೆ ಕಾಪಾಡಿ ಎಂದು ಇವರು ಮೂವರ ಮುಂದೆ ಬೇಡಿಕೊಂಡುಬಿಡಿ. ಯಾರಿಗೆ ಗೊತ್ತು, ಅವರ ದಯೆಯಿಂದಲೆ ಸುಖ ದೊರಕುವುದಾದರೆ ಯಾಕೆ ಬಿಡಬೇಕು ಹೇಳಿ? ಅಂದಹಾಗೆ, ಅವರನ್ನು ಒಲಿಸಲು ನಮ್ಮ ದೇವರ ಮುಂದೆ ಮಾಡುವಂತೆ ಅಡ್ಡ ಬೀಳಬೇಕೆಂದೇನಿಲ್ಲ. ಅಲ್ಲೆ ಹತ್ತಿರದಲ್ಲಿ ಕಟ್ಟಿರುವ ದೊಡ್ಡ ತೂಗು ಗಂಟೆಯನ್ನೊಮ್ಮೆ ಬಾರಿಸಿಬಿಡಿ, ಸಾಕು! (ನೋಡಲು ಜಾಗಟೆ ಇದ್ದ ಹಾಗೆ ಕಂಡ ನೆನಪು..) ಹಾಗೆಯೆ ಮತ್ತೊಂದು ಪ್ರಮುಖವಾದದ್ದು ಚೀನಿ ರಾಶಿಗಳ ಚಕ್ರ. ಚೀನಿ ರಾಶಿಗಳು ಡ್ರಾಗನ್, ಕುದುರೆ, ಹಂದಿ, ನಾಯಿ, ಕೋಳಿ, ಇಲಿ ಮೊದಲಾದ ಹನ್ನೆರಡು ಪ್ರಾಣಿಗಳನ್ನು ಸಂಕೇತಿಸುತ್ತದೆ. ಪ್ರತಿ ಪ್ರಾಣಿಗು ಒಂದೊಂದು ವರ್ಷ ಮೀಸಲು - ಹೀಗಾಗಿ ಹನ್ನೆರಡು ವರ್ಷಕ್ಕೊಮ್ಮೆ ಅದೆ ಪ್ರಾಣಿಯ ವರ್ಷ ಪುನರಾವರ್ತನೆಯಾಗುತ್ತದೆ. ನೀವು ಯಾವ ರಾಶಿಯ ಪ್ರಾಣಿ ವರ್ಗಕ್ಕೆ ಸೇರಿದ್ದಿರೆಂದು ಕುತೂಹಲವೆ? ಚಿಂತೆ ಬೇಡ - ಆ ಚಕ್ರದಲ್ಲಿ ನಿಮ್ಮ ಹುಟ್ಟಿದ ಹಬ್ಬದ ವರ್ಷವನ್ನು ನೋಡಿ, ಅದಕ್ಕೆ ಹೊಂದಿಸಿಟ್ಟ ಪ್ರಾಣಿಯನ್ನು ನೋಡಿದರಾಯ್ತು. ಅಲ್ಲೆ ಕೆಳಗೆ ಆ ಪ್ರಾಣಿಯ (ಅರ್ಥಾತ್ ಆ ರಾಶಿಗೆ ಸೇರಿದ ಜನರ) ವ್ಯಕ್ತಿತ್ವ, ಭವಿಷ್ಯ ಬರೆದಿರುತ್ತದೆ. ಕಾಸು ಕೊಡದೆ ಭವಿಷ್ಯ ಓದಿ ಸಂತಸ ಪಟ್ಟುಕೊಂಡು ಬನ್ನಿ! ಅಂದ ಹಾಗೆ ಸಿಂಗಪುರ ನೋಡಿರುವ ಮಂದಿಗೆ ಸಿಮ್ ಲಿಮ್ ಚೌಕದ ನೆನಪಿದ್ದರೆ ( ಅದೆ ಅಡ್ಡಾದಿಡ್ಡಿ ಎಲೆಕ್ಟಾನಿಕ್ಸ್ ಐಟಮ್ ಕೊಳ್ಳುವ ಜಾಗ ಸ್ವಾಮಿ), ಅದರ ಹತ್ತಿರದಲ್ಲೆ ಇರುವ ಶಾಪಿಂಗ್ ಮಾಲಿಗು ಇದೆ ಹೆಸರಿದೆ - ಫು ಲೂ ಶೌ ಅಂತ - ಅದು ಈ ವಯೋವೃದ್ದರ ಹೆಸರೆ. ಮೂರು ವಸ್ತುವು ಅಲ್ಲೆ ಮಾರಲಿಟ್ಟಿರುವ ಸಾಧ್ಯತೆ ಇರುವುದರಿಂದ ಒಮ್ಮೆ ಸಾಧ್ಯವಾದರೆ ಭೇಟಿ ಕೊಡಿ! ---------------------------------------------------------------------------------------------------------------------------------   ಹಾಗೆಯೆ ಗೆಳೆಯ ಹರೀಶರವರು ಸಿಂಗಪುರದಿಂದ, ಮಾಹಿತಿಯಲ್ಲಿ ನುಸುಳಿಕೊಂಡಿರುವ ತಪ್ಪೊಂದರತ್ತ ಗಮನ ಸೆಳೆದಿದ್ದಾರೆ - ಟ್ರೈನಿನ ಕುರಿತಾದ ವಿವರಣೆಯಲ್ಲಿ ಈಸ್ಟ್ ವೆಸ್ಟ್ ಲೈನು ಎಂದು ತಪ್ಪಾಗಿ ಹೋಗಿದೆ, ಅದು - ಸರ್ಕಲ್ ಲೈನ್ ಎಂದಾಗಬೇಕಿತ್ತು. ತಪ್ಪಿಗೆ ಕ್ಷಮೆಯಿರಲಿ, ಮತ್ತು ಗೆಳೆಯ ಹರಿಶರಿಗೆ ತುಂಬ ಕೃತಜ್ಞತೆ ಹಾಗೂ ಧನ್ಯವಾದಗಳು. ಅಲ್ಲಿ ಒಂದೆ ಲೈನು ಇರುವುದರಿಂದ ಗೊಂದಲವಾಗುವ ಸಾಧ್ಯತೆ ಕಮ್ಮಿಯಾದರೂ, ತಪ್ಪು ಹೆಸರಿನಿಂದ ತಪ್ಪು ದಾರಿಗೆ (ತಪ್ಪಾದ ಸ್ಟೇಷನ್ನಿಗೆ ಎನ್ನೋಣವೆ) ಎಳೆದೊಯ್ಯಬಹುದಾದ ದೂರದ ಸಾಧ್ಯತೆಯು ಇರುವುದರಿಂದ ಈ ತಿದ್ದುಪಡಿಯ ತಪ್ಪೊಪ್ಪಿಗೆ :-) - ನಾಗೇಶ ಮೈಸೂರು, ಸಿಂಗಪುರದಿಂದ
Submitted by nageshamysore Sun, 05/26/2013 - 05:01

In reply to by nageshamysore

ಅಂದ ಹಾಗೆ ಸಿಂಗಪುರ ನೋಡಿರುವ ಮಂದಿಗೆ ಸಿಮ್ ಲಿಮ್ ಚೌಕದ ನೆನಪಿದ್ದರೆ ( ಅದೆ ಅಡ್ಡಾದಿಡ್ಡಿ ಎಲೆಕ್ಟಾನಿಕ್ಸ್ ಐಟಮ್ ಕೊಳ್ಳುವ ಜಾಗ ಸ್ವಾಮಿ), ಅದರ ಹತ್ತಿರದಲ್ಲೆ ಇರುವ ಶಾಪಿಂಗ್ ಮಾಲಿಗು ಇದೆ ಹೆಸರಿದೆ - ಫೂ ಲೂ ಶೌ ಅಂತ - ಅದು ಈ ವಯೋವೃದ್ದರ ಹೆಸರೆ. ಮೂರು ವಸ್ತುವು ಅಲ್ಲೆ ಮಾರಲಿಟ್ಟಿರುವ ಸಾಧ್ಯತೆ ಇರುವುದರಿಂದ ಒಮ್ಮೆ ಸಾಧ್ಯವಾದರೆ ಭೇಟಿ ಕೊಡಿ!   ಹಾಗೆಯೆ ಗೆಳೆಯ ಹರೀಶರವರು ಸಿಂಗಪುರದಿಂದ, ಮಾಹಿತಿಯಲ್ಲಿ ನುಸುಳಿಕೊಂಡಿರುವ ತಪ್ಪೊಂದರತ್ತ ಗಮನ ಸೆಳೆದಿದ್ದಾರೆ - ಟ್ರೈನಿನ ಕುರಿತಾದ ವಿವರಣೆಯಲ್ಲಿ ಈಸ್ಟ್ ವೆಸ್ಟ್ ಲೈನು ಎಂದು ತಪ್ಪಾಗಿ ಹೋಗಿದೆ, ಅದು - ಸರ್ಕಲ್ ಲೈನ್ ಎಂದಾಗಬೇಕಿತ್ತು. ತಪ್ಪಿಗೆ ಕ್ಷಮೆಯಿರಲಿ, ಮತ್ತು ಗೆಳೆಯ ಹರಿಶರಿಗೆ ತುಂಬ ಕೃತಜ್ಞತೆ ಹಾಗೂ ಧನ್ಯವಾದಗಳು. ಅಲ್ಲಿ ಒಂದೆ ಲೈನು ಇರುವುದರಿಂದ ಗೊಂದಲವಾಗುವ ಸಾಧ್ಯತೆ ಕಮ್ಮಿಯಾದರೂ, ತಪ್ಪು ಹೆಸರಿನಿಂದ ತಪ್ಪು ದಾರಿಗೆ (ತಪ್ಪಾದ ಸ್ಟೇಷನ್ನಿಗೆ ಎನ್ನೋಣವೆ) ಎಳೆದೊಯ್ಯಬಹುದಾದ ದೂರದ ಸಾಧ್ಯತೆಯು ಇರುವುದರಿಂದ ಈ ತಿದ್ದುಪಡಿಯ ತಪ್ಪೊಪ್ಪಿಗೆ :-) - ನಾಗೇಶ ಮೈಸೂರು, ಸಿಂಗಪುರದಿಂದ
Submitted by ಗಣೇಶ Sun, 05/26/2013 - 00:37

ಕಾಸಿಲ್ಲದೇ ಸಿಂಗಾಪುರದ ಹಾವ್ ಪಾರ್ ವಿಲ್ಲಾ ಸುತ್ತಾಡಿಸಿದ ನಾಗೇಶರಿಗೆ ಧನ್ಯವಾದಗಳು. ಮೊದಲಿಗೆ ಬಹಳ ಉದ್ದವಿದೆ ಇನ್ನೊಮ್ಮೆ ಓದೋಣ ಅಂತ ಇದ್ದೆ. ಓದುತ್ತಾ ಹೋದ ಹಾಗೇ ಮುಗಿದದ್ದೇ ಗೊತ್ತಾಗಲಿಲ್ಲ. ಮೊದಲಿಂದ ಕೊನೆಯವರೆಗೂ ಹಾಸ್ಯದಿಂದೊಡಗೂಡಿದ ಈ ಸುತ್ತಾಟ ನನಗೆ ಬಹಳ ಇಷ್ಟವಾಯಿತು.>>>ಸುಳ್ಳಿಲ್ಲದೆ ಬದುಕಲೆ ಅರಿಯದವರು ಕನಿಷ್ಟ ನರಕ ನೋಡಿಯಾದರೂ ಅಭ್ಯಾಸ ಮಾಡಿಕೊಂಡರೆ, ಮುಂದೆ ಶಿಕ್ಷೆಯನ್ನನುಭವಿಸುವಾಗ ಸುಲಭವಾದೀತು.:) :) ಚಿತ್ರಗಳನ್ನು ಕೆಲವು ನೋಡಿದೆ. ಪೂರ್ತಿ ನೋಡಿದರೆ ಭಯದಲ್ಲಿ ರಾತ್ರಿ ನಿದ್ರೆ ಬರದಿದ್ದರೆ:(
Submitted by nageshamysore Sun, 05/26/2013 - 14:47

In reply to by ಗಣೇಶ

ಗಣೇಶ ಜಿ, ಬೆಸ್ಟು ಚಿತ್ರಾನ ಹಗಲ್ಹೊತ್ತಲ್ಲಿ ನೋಡಿಬಿಡಿ - ನನ್ನ ಫೋಟೊ ಚಿಕ್ಕದು, ಗೂಗಲ್ನಲ್ಲಿ ತುಂಬ ಚೆನ್ನಾಗಿರೊ ಫೋಟೊಗಳಿವೆ. ಯಾವುದಕ್ಕು ಶ್ರೀಧರ ಜಿ ನಾಮಾವಳಿ ಓದಿಬಿಟ್ಟು ಆಮೇಲೆ ಫೋಟೊ ನೋಡೋದು ಸೇಫ್ ಅನ್ಸುತ್ತೆ - ಆ ದೇವಿ ರಕ್ಷಣೆನು ಇರುತ್ತೆ, ಭಯವಾದರೆ! - ನಾಗೇಶ ಮೈಸೂರು
Submitted by lpitnal@gmail.com Sun, 05/26/2013 - 11:23

ಆತ್ಮೀಯ ನಾಗೇಶಜಿ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಹಾವ್ ಪಾರ್ ವಿಲ್ಲಾ' ಪರಿಚಯ ಚನ್ನಾಗಿದೆ, ಬಹಳಷ್ಟು ಗೆಳೆಯರು ಈಗಾಗಲೇ ವಿಮರ್ಶಿಸಿದ್ದಾರೆ. ಉತ್ತಮ ಶೈಲಿ, ಓದಿಸಿಕೊಂಡು ಹೋಗುವ ಬರಹ. ಒಳ್ಳೆಯ ಪ್ರವಾಸಿ ತಾಣವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
Submitted by nageshamysore Sun, 05/26/2013 - 14:52

In reply to by lpitnal@gmail.com

ಆತ್ಮೀಯ ಇಟ್ನಾಳರಿಗೆ ವಂದನೆಗಳು, ಲೇಖನ ಶೈಲಿ ತಮಗೂ ಹಿಡಿಸಿದ್ದು ತುಂಬ ಸಂತಸವಾಯ್ತು. ಸಾಮಾನ್ಯ ಈ ರೀತಿಯ ಪರಿಚಯದ ಲೇಖನಗಳಲ್ಲಿ ಹಾಸ್ಯದ ಲೇಪನ ಇರುವುದು ಕಮ್ಮಿ ಎನಿಸಿ, ಈ ರೀತಿಯಲ್ಲಿ ಬರೆಯಲು ಯತ್ನಿಸಿದೆ. ತಮ್ಮ ಎಂದಿನ ಪ್ರೋತ್ಸಾಹಕ್ಕೆ ವಂದನೆಗಳು - ನಾಗೇಶ ಮೈಸೂರು