೩೪. ಶ್ರೀ ಲಲಿತಾ ಸಹಸ್ರನಾಮ ೮೫ರಿಂದ ೮೯ನೇ ನಾಮಗಳ ವಿವರಣೆ

೩೪. ಶ್ರೀ ಲಲಿತಾ ಸಹಸ್ರನಾಮ ೮೫ರಿಂದ ೮೯ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೮೫-೮೯

Śrīmadvāgbhava-kūṭaika-svarūpa-mukha-paṅkajā श्रीमद्वाग्भव-कूटैक-स्वरूप-मुख-पङ्कजा (85)

೮೫.ಶ್ರೀಮದ್ವಾಗ್ಭವ-ಕೂಟೈಕ-ಸ್ವರೂಪ-ಮುಖ-ಪಂಕಜಾ

           ದೇವಿಯ ಪಂಚದಶೀ ಮಂತ್ರದ ವಿವರಣೆಯು ಈ ನಾಮದಿಂದ ಪ್ರಾರಂಭವಾಗುತ್ತದೆ. ಪಂಚದಶೀ ಮಂತ್ರದ ಕುರಿತಾಗಿ ಕೂಲಂಕುಷವಾಗಿ ಪರಿಚಯದ ಭಾಗದಲ್ಲಿ ಕೊಡಲಾಗಿದೆ. ಈಗ, ಅವಳ ಸೂಕ್ಷ್ಮ ರೂಪದ ವರ್ಣನೆಯು ಪ್ರಾರಂಭವಾಗುತ್ತದೆ. ಅವಳ ಸೂಕ್ಷ್ಮ ರೂಪವು ಮೂರು ಭಾಗಗಳನ್ನು ಹೊಂದಿದೆ - ಸೂಕ್ಷ್ಮ ರೂಪ, ಅತೀ ಸೂಕ್ಷ್ಮ ರೂಪ ಮತ್ತು ಸೂಕ್ಷ್ಮಾತಿಸೂಕ್ಷ್ಮ ರೂಪ. ಸೂಕ್ಷ್ಮರೂಪವೆಂದರೆ ಪಂಚದಶೀ ಮಂತ್ರ. ಅವಳ ಅತೀ ಸೂಕ್ಷ್ಮರೂಪವೆಂದರೆ ಅವಳ ಕಾಮ-ಕಲಾ ರೂಪ (ನಾಮ ೩೨೨ - ಕಾಮ ಕಲಾ ಆಗಿದೆ). ಅವಳ ಸೂಕ್ಷ್ಮಾತಿಸೂಕ್ಷ್ಮ ರೂಪವೆಂದರೆ ಕುಂಡಲಿನೀ ಶಕ್ತೀ (ನಾಮ ೧೧೦). ಈ ನಾಮದಲ್ಲಿ, ಅವಳ ಮುಖವನ್ನು ಪಂಚದಶೀ ಮಂತ್ರದ ಮೊದಲನೇ ಕೂಟವಾದ ವಾಗ್ಭವ ಕೂಟಕ್ಕೆ ಹೋಲಿಸಲಾಗಿದೆ, ಇದು ಜ್ಞಾನ ಮತ್ತು ವಿವೇಕವನ್ನು ಕೊಡುತ್ತದೆ. ಪಂಚದಶೀ ಮಂತ್ರದ ಒಟ್ಟು ಶಕ್ತಿಯನ್ನು ಸೂಚಿಸಲು ಈ ನಾಮದಲ್ಲಿ ಶ್ರೀಮದ್ ಅನ್ನು ಪೂರ್ವ ಪ್ರತ್ಯಯವಾಗಿ ಉಪಯೋಗಿಸಲಾಗಿದೆ. ಶ್ರೀಮದ್ ಎನ್ನುವುದು ಮಂತ್ರಕ್ಕೆ ಸಲ್ಲಿಸಲಾಗಿರುವ ಗೌರವವನ್ನೂ ಸೂಚಿಸುತ್ತದೆ. ಈ ಕೂಟವನ್ನು ಮೊದಲು ವಿವರಿಸಿರುವುದರಿಂದ ಈ ನಾಮದಲ್ಲಿ ಶ್ರೀ ಪ್ರತ್ಯಯವನ್ನು ಬಳಸಲಾಗಿದೆ.

Kaṇṭhādhaḥ kaṭiparyantha-madhyakūṭa-svarūpiṇī कण्ठाधः - कटिपर्यन्थ-मध्यकूट-स्वरूपिणी (86)

೮೬. ಕಂಠಾಧಃ ಕಟಿಪರ್ಯಂಥ-ಮಧ್ಯಕೂಟ-ಸ್ವರೂಪಿಣೀ

          ಪಂಚದಶೀ ಮಂತ್ರದ ಮಧ್ಯ ಕೂಟ ಅಥವಾ ಮಧ್ಯದ ಪಂಕ್ತಿಯು ದೇವಿಯ ಕುತ್ತಿಗೆ ಮತ್ತು ಸೊಂಟದ ಭಾಗದವರೆಗಿನ ಭಾಗವನ್ನು ಪ್ರತಿನಿಧಿಸುತ್ತದೆ. ಹಿಂದಿನ ನಾಮವು ಜ್ಞಾನ ಶಕ್ತಿಯಾದರೆ, ಈ ನಾಮವು ಇಚ್ಛಾ ಶಕ್ತಿ ಆಗಿದೆ ಮತ್ತು ಮುಂದಿನ ನಾಮವು ಕ್ರಿಯಾ ಶಕ್ತಿಯಾಗಿದೆ.

Śakti-kūṭaikatāpanna-kaṭyadhobhāga-dhārinī शक्ति-कूटैकतापन्न-कट्यधोभाग-धारिनी (87)

೮೭.ಶಕ್ತಿ-ಕೂಟೈಕತಾಪನ್ನ-ಕಟ್ಯಧೋಭಾಗ-ಧಾರಿನೀ

          ಮೂರು ಕೂಟಗಳಲ್ಲಿ ಕಡೆಯದಾದ ಶಕ್ತಿ ಕೂಟವನ್ನು ಅವಳ ಸೊಂಟದಿಂದ ಕೆಳಗಿನ ಭಾಗಗಳಿಗೆ ಹೋಲಿಸಲಾಗಿದೆ.

Mūlamantrātmikā मूलमन्त्रात्मिका (88)

೮೮. ಮೂಲಮಂತ್ರಾತ್ಮಿಕಾ

          ಮೂಲವೆಂದರೆ ಬೇರು, ಆದ್ದರಿಂದ ಮೂಲಮಂತ್ರವೆಂದರೆ ಮಂತ್ರದ ಬೇರಾಗಿದೆ. ಇಲ್ಲಿ ಮಂತ್ರವೆಂದರೆ ಪಂಚದಶೀ ಮಂತ್ರ. ಅವಳು ಪಂಚದಶೀ ಮಂತ್ರದ ಬೇರಾಗಿದ್ದಾಳೆ ಮತ್ತು ಇದು ಎಲ್ಲಾ ಮಂತ್ರಗಳ ಮೂಲವಾಗಿದೆ. ವಾಸ್ತವವಾಗಿ ಅವಳ ’ಕಾಮಕಲಾ’ ರೂಪವು ಪಂಚದಶೀ ಮಂತ್ರದ ಬೇರಾಗಿದ್ದು ಅದನ್ನು ೩೨೨ನೇ ನಾಮಾವಳಿಯಲ್ಲಿ ಚರ್ಚಿಸಲಾಗುವುದು. ಪಂಚದಶೀ ಮಂತ್ರವು ಅವಳ ಭೌತಿಕ ರೂಪದ ಮೇಲೆ ಅಳವಡಿಸಲಾಗಿದೆ. 

Mūlakuṭatraya-kalebarā मूलकुटत्रय-कलेबरा (89)

೮೯. ಮೂಲಕೂಟತ್ರಯ-ಕಲೇಬರಾ

          ತ್ರಯವೆಂದರೆ ಮೂರು; ಆಂದರೆ ಪಂಚದಶೀ ಮಂತ್ರದ ಮೂರು ಕೂಟಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ’ಕಾಮಕಲಾ’ವು ಪಂಚದಶೀ ಮಂತ್ರದ ಮೂಲವಾಗಿದೆ. ಆದ್ದರಿಂದ ಕಾಮಕಲಾ ರೂಪವು ಅವಳ ಸ್ಥೂಲ ಮತ್ತು ಸೂಕ್ಷ್ಮ ರೂಪಗಳೆರಡನ್ನೂ ಪ್ರತಿನಿಸಿಧಿಸುತ್ತದೆ. ಮೂರು ವಿಧವಾದ ಸೂಕ್ಷ್ಮರೂಪಗಳಲ್ಲಿ, ಮೊದಲನೇ ಸೂಕ್ಷ್ಮರೂಪವಾದ ’ಪಂಚದಶೀ’ಯನ್ನು ನಾಮ ೮೫ರಿಂದ ೮೮ರವರೆಗೆ ಚರ್ಚಿಸಲಾಗಿದೆ. ಎರಡನೆಯ ಸೂಕ್ಷ್ಮರೂಪ ಅಥವಾ ಅತೀ ಸೂಕ್ಷ್ಮರೂಪವಾದ ಕಾಮಕಲಾವನ್ನು ಇಲ್ಲಿ ಚರ್ಚಿಸಲಾಗಿದೆ. ಅಂಗೈಯ್ಯಗಲದ ಕಪ್ಪೆ ಚಿಪ್ಪಿನಲ್ಲಿ ತಿರುಳಾಗಿ ಹೇಳಬೇಕೆಂದರೆ, ‘ಕಾಮಕಾಲಾ’ವು ಹಂಸ ಮತ್ತು ಸೋಹಂಗಳ ಸಂಯೋಗವಾಗಿದೆ (ಈ ಹಂಸ ಮಂತ್ರವು ಬ್ರಹ್ಮಾಂಡದ ಮತ್ತು ವೈಯ್ಯಕ್ತಿಕ ಆತ್ಮದ ಕುರಿತದ್ದಾಗಿದೆ); ಇದು ಮೂರು ಬಿಂದುಗಳು ಮತ್ತು ಒಂದು ತ್ರಿಕೋಣವನ್ನು ಒಳಗೊಂಡಿದೆ. ಇದು ಲಲಿತಾಂಬಿಕೆಯ ನೈಜವಾದ ಭೌತಿಕ ಚಿತ್ರಣವಾಗಿದೆ. ಇಲ್ಲಿ ಈಂ (ईं) ಬೀಜವು ಒಳಗೊಂಡಿದೆ. ಈ ಬೀಜಾಕ್ಷರವು ಅತ್ಯಂತ ಶಕ್ತಿಯುತವಾಗಿದ್ದು ಷೋಡಶೀ ಮಂತ್ರದಲ್ಲಿ ಇದರ ಸರಿಯಾದ ಬಳಕೆಯು ಗೊತ್ತಿದ್ದರೆ ಅದು ಸಮೃದ್ಧಿಯನ್ನು ಹರಿಸುತ್ತದೆ; ಆದರೆ ಇದನ್ನು ಗುರುಮುಖೇನವೇ ಅರಿಯಬೇಕು. ಈ ನಾಮದೊಂದಿಗೆ ಶ್ರೀ ಲಲಿತೆಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ರೂಪಗಳ ವರ್ಣನೆಯು ಮುಕ್ತಾಯಗೊಳ್ಳುತ್ತದೆ. ಈಗ ನಾವು ಅವಳ ಸೂಕ್ಷ್ಮಾತಿ ಸೂಕ್ಷ್ಮರೂಪವಾದ ’ಕುಂಡಲಿನೀ’ಯನ್ನು ೯೦ರಿಂದ ೧೧೧ನೇ ನಾಮಗಳವರೆಗೆ ಚರ್ಚಿಸೋಣ.

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 85-89 http://www.manblunder.com/2009/08/lalitha-sahasranamam-85-89.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (1 vote)

Comments

Submitted by makara Sun, 05/26/2013 - 10:54

೮೭. ಶಕ್ತಿ-ಕೂಟೈಕತಾಪನ್ನ-ಕಟ್ಯಧೋಭಾಗ-ಧಾರಿನೀ ......ತಪ್ಪು
೮೭. ಶಕ್ತಿ-ಕೂಟೈಕತಾಪನ್ನ-ಕಟ್ಯಧೋಭಾಗ-ಧಾರಿಣೀ ......ಒಪ್ಪು

೮೯. ಮೂಲಕೂಟತ್ರಯ-ಕಲೇಬರಾ ....ತಪ್ಪು
೮೯. ಮೂಲಕೂಟತ್ರಯ-ಕಲೇವರಾ .....ಒಪ್ಪು
ಮೇಲಿನ ನಾಮದ ಚರ್ಚೆಯಲ್ಲಿ ಬಂದಿರುವ, ಕಾಮಕಲಾ - ಇದು ಮೂರು ಬಿಂದುಗಳು ಮತ್ತು ಒಂದು ತ್ರಿಕೋಣವನ್ನು ಒಳಗೊಂಡಿದೆ. ಇದು ಲಲಿತಾಂಬಿಕೆಯ ನೈಜವಾದ ಭೌತಿಕ ಚಿತ್ರಣವಾಗಿದೆ. ಇಲ್ಲಿ ಈಂ (ईं) ಬೀಜವು ಒಳಗೊಂಡಿದೆ. ......ಎಂದು ಹೇಳಿರುವ ಈ ನಾಮದ ವ್ಯಾಖ್ಯಾನದಲ್ಲಿ ಹೆಸರಿಸಲಾಗಿರುವ ಬಿಂದುಗಳು ಹಾಗೂ ತ್ರಿಕೋಣದ ಕುರಿತಾಗಿ ಹೆಚ್ಚಿನ ವಿವರಗಳನ್ನು ಸೌಂದರ್ಯಲಹರಿಯ ೧೯ನೇ ಶ್ಲೋಕದ ವಿವರಣೆಯ ಅಡಿಯಲ್ಲಿ ವಿಶದವಾಗಿ ಚರ್ಚಿಸಲಾಗಿದೆ. ಅದರ ವಿವರಗಳಿಗಾಗಿ ಕೆಳಗಿನ ಕೊಂಡಿಯನ್ನು ನೋಡಿ - http://sampada.net/blog/%E0%B3%A9%E0%B3%AB-%E0%B2%B6%E0%B3%8D%E0%B2%B0%…

Submitted by nageshamysore Sun, 05/26/2013 - 18:02

ಶ್ರೀಧರರೆ, ಸ್ಥೂಲ ಮತ್ತು ಸೂಕ್ಷ್ಮರೂಪಗಳ ವಿವರಣೆಯಲ್ಲಿ (89ನೆ ನಾಮ) 'ಕಲೇವರ'ದ ಅರ್ಥ ಸರಿಯಾಗಿ ತಿಳಿಯಲಿಲ್ಲ. ಅದಕ್ಕೇನಾದರೂ ವಿಶೇಷ ಅರ್ಥವಿದೆಯೆ? - ನಾಗೇಶ ಮೈಸೂರು, ಸಿಂಗಪುರದಿಂದ

Submitted by makara Sun, 05/26/2013 - 19:18

In reply to by nageshamysore

ಕಲೇವರಕ್ಕೆ ವಿಶೇಷವಾದ ಅರ್ಥವೇನೂ ಇಲ್ಲ, ನಾಗೇಶ್ ಅವರೆ. ಅದನ್ನು ಈ ಸಂದರ್ಭದಲ್ಲಿ ದೇಹ ಎನ್ನುವ ಅರ್ಥದಲ್ಲಿ ಉಪಯೋಗಿಸಲಾಗಿದೆ. ಪಂಚದಶೀ ಮಂತ್ರದ ಮೂರು ಕೂಟಗಳಿಗೆ ದೇಹವಾಗಿರುವವಳು ದೇವಿ ಎಂದು ಇಲ್ಲಿ ಅರ್ಥೈಸಿಕೊಳ್ಳಬೇಕು.

Submitted by ಗಣೇಶ Sun, 05/26/2013 - 23:19

In reply to by makara

>>ಕಲೇವರಕ್ಕೆ ವಿಶೇಷವಾದ ಅರ್ಥವೇನೂ ಇಲ್ಲ!! ಅದೇ ಕಲೇವರ ನಮ್ಮ ಜ್ಯೂಸೀ ನ್ಯೂಸ್ ಚಾನಲ್‌ನವರ ಕೈಗೆ ಸಿಗಲಿ.. ೩ ಎಪಿಸೋಡ್ ಆಗುವಷ್ಟು ಅರ್ಥ ಹುಡುಕುವರು. :)

Submitted by makara Mon, 05/27/2013 - 09:17

In reply to by ಗಣೇಶ

ಗಣೇಶ್..ಜಿ, ಸಧ್ಯಕ್ಕೆ ಲಲಿತಾ ಸಹಸ್ರನಾಮ ವಿವರಣೆಗಳನ್ನು ಓದುವಷ್ಟು ನಿಮ್ಮ ಜ್ಯೂಸಿ ನ್ಯೂಸ್ ಚಾನೆಲ್ಲಿನವರಿಗೆ ಸಮಯವಿಲ್ಲ ಬಿಡಿ. ಸಧ್ಯಕ್ಕೆ ನಾನು ಬಚಾವ್ :))