೩೫. ಶ್ರೀ ಲಲಿತಾ ಸಹಸ್ರನಾಮ - ಕಾಮಕಲಾ ರೂಪದ (ಸೌಂದರ್ಯಲಹರಿಯ ೧೯ನೇ ಶ್ಲೋಕದ) ವಿವರಣೆ

೩೫. ಶ್ರೀ ಲಲಿತಾ ಸಹಸ್ರನಾಮ - ಕಾಮಕಲಾ ರೂಪದ (ಸೌಂದರ್ಯಲಹರಿಯ ೧೯ನೇ ಶ್ಲೋಕದ) ವಿವರಣೆ

ಚಿತ್ರ

೩೪. ಶ್ರೀ ಲಲಿತಾ ಸಹಸ್ರನಾಮ ೮೫ರಿಂದ ೮೯ನೇ ನಾಮಗಳ ವಿವರಣೆಯ ಲೇಖನದಲ್ಲಿ http://sampada.net/blog/%E0%B3%A9%E0%B3%AA-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AE%E0%B3%AB%E0%B2%B0%E0%B2%BF%E0%B2%82%E0%B2%A6-%E0%B3%AE%E0%B3%AF%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/26-5-2013/40978- ಪ್ರಸ್ತಾಪಿಸಲಾಗಿರುವ ಕಾಮಕಲಾ ರೂಪದ ಮೂರು ಬಿಂದುಗಳು ಹಾಗು ತ್ರಿಕೋಣದ ಕುರಿತಾದ ಹೆಚ್ಚಿನ ವಿವರಗಳಿಗೆ ಪೂರಕವಾಗಿ ಈ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. 

******

ಸೌಂದರ್ಯ ಲಹರಿ ಸ್ತೋತ್ರ - ೧೯

मुखं बिन्दुं कृत्वा कुचयुगमधस्तस्य तदधो

हरार्धं ध्यायेद्यो हरमहिषि ते मन्मथकलाम्।

स सद्यः संक्षोभं नयति वनिता इत्यतिलघु

त्रिलोकिमप्याशु भ्रमयति रवीन्दुस्तनयुगाम्॥

ಮುಖಂ ಬಿಂದುಂ ಕೃತ್ವಾ ಕುಚಯುಗಮಧಸ್ತಸ್ಯ ತದಧೋ

ಹರಾರ್ಧಂ ಧ್ಯಾಯೇದ್ಯೋ ಹರಮಹಿಷಿ ತೇ ಮನ್ಮಥಕಲಾಮ್|

ಸ ಸದ್ಯಃ ಸಂಕ್ಷೋಭಂ ನಯತಿ ವನಿತಾ ಇತ್ಯತಿಲಘು

ತ್ರಿಲೋಕಿಮಪ್ಯಾಶು ಭ್ರಮಯತಿ ರವೀಂದುಸ್ತನಯುಗಾಮ್||

            ಮುಖಂ ಬಿಂದುಂ ಕೃತ್ವಾ - ಮುಖವನ್ನು ಬಿಂದುವಾಗಿ ಕಲ್ಪಸಿಕೊಂಡು; ಕುಚಯುಗಮಧಸ್ತಸ್ಯ - ಬಿಂದುವಿನ ಕೆಳಗೆ ನಿನ್ನ ಸ್ತನಗಳನ್ನು (ಕಲ್ಪಸಿಕೊಂಡು); ತದಧೋ - ಅದರ (ಸ್ತನಗಳ) ಕೆಳಗಡೆ; ಹರಾರ್ಧಂ - ಹ ಅಕ್ಷರದ ಅರ್ಧವನ್ನು; ಧ್ಯಾಯೇದ್ಯೋ - ಧ್ಯಾನಿಸುತ್ತಾ; ಹರಮಹಿಷಿ ತೇ - ಶಿವನ ಅರ್ಧಾಂಗಿಯಾದ ನೀನು; ಮನ್ಮಥಕಲಾಮ್ - ಮನ್ಮಥನ ಕಲಾ ಆಗಿ; ಸ ಸದ್ಯಃ ಸಂಕ್ಷೋಭಂ ನಯತಿ - ನಿಶ್ಚಯವಾಗಿಯೂ ಮನೋವಿಕಾರವನ್ನುಂಟು ಮಾಡುತ್ತೀಯ; ವನಿತಾ ಇತ್ಯತಿಲಘು - ಸ್ತ್ರೀಯರನ್ನು ಸುಲಭವಾಗಿ; ತ್ರಿಲೋಕಿಮಪ್ಯಾಶು - ತ್ವರಿತವಾಗಿ ಮೂರು ಲೋಕದವರಿಗೂ; ಭ್ರಮಯತಿ - ಭ್ರಮೆಯುಂಟು ಮಾಡುತ್ತೀಯ (ಬಂಧಿಸುತ್ತೀಯ); ರವೀಂದುಸ್ತನಯುಗಾಮ್ - ಸೂರ್ಯ ಮತ್ತು ಚಂದ್ರರನ್ನು ಸ್ತನಯುಗ್ಮಗಳಾಗಿ ಹೊಂದಿದವಳೇ.

           ಈ ಶ್ಲೋಕದ ಒಟ್ಟಾರೆ ಅರ್ಥವು ಹೀಗಿದೆ, ನಿನ್ನ ಮುಖವನ್ನು ಬಿಂದುವಾಗಿರಿಸಿ, ಆ ಮುಖದ ಕೆಳಗಿರುವ ನಿನ್ನ ಎರಡು ಸ್ತನಗಳಿಂದೊಗೂಡಿದ ಮತ್ತು ಅದಕ್ಕಿಂತಲೂ ಕೆಳಗಿರುವ ಶಿವನ ಸೃಷ್ಟಿಯ ಮೂಲವಾಗಿರುವ ತ್ರಿಕೋಣವನ್ನು ಹೊಂದಿರುವ ನಿನ್ನ ಕಾಮಕಲಾ ರೂಪವನ್ನು ಯಾರು ಧ್ಯಾನಿಸುತ್ತಾರೆಯೋ ಆ ಸಾಧಕನು, ಸೂರ್ಯ ಮತ್ತು ಚಂದ್ರರನ್ನು ಸ್ತನಯುಗ್ಮಗಳಾಗಿ ಹೊಂದಿದ (ದೇವತೆಗಳೇ ಮೊದಲಾದ) ಮೂಜಗದ ಸ್ತ್ರೀಯರ ಮನಸ್ಸಿನಲ್ಲಿ ಕಲರವವನ್ನುಂಟು ಮಾಡುತ್ತಾನೆ".

           ಈ ಶ್ಲೋಕವು ದೇವಿಯ ಅತಿಸೂಕ್ಷ್ಮರೂಪವಾದ ಕಾಮಕಲಾ ರೂಪದ ಮೇಲೆ ಧ್ಯಾನಿಸುವುದರ ಕುರಿತಾಗಿ ಹೇಳುತ್ತದೆ. ದೇವಿಯ ಸೂಕ್ಷ್ಮಾತೀಸೂಕ್ಷ್ಮ ರೂಪವು ಕುಂಡಲಿನೀ ರೂಪವಾಗಿದೆ. ದೇವಿಯನ್ನು ಹಲವು ವಿಧದ ಸ್ಥೂಲ ರೂಪಗಳಲ್ಲಿ ಪೂಜಿಸುತ್ತಾರೆ. ಈ ಶ್ಲೋಕವನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಮುಂಚೆ ದೇವಿಯ ಕಾಮಕಲಾ ರೂಪವನ್ನು ಅರ್ಥ ಮಾಡಿಕೊಳ್ಳಬೇಕು. ಲಲಿತಾ ಸಹಸ್ರನಾಮದ ೩೨೨ನೇ ನಾಮವಾದ ಕಾಮಕಲಾ ರೂಪದ ವ್ಯಾಖ್ಯಾನವನ್ನು ಇಲ್ಲಿ ಕೊಡಲಾಗಿದೆ. ಕಾಮಕಲಾ ಎನ್ನುವುದನ್ನು ಸಂಸ್ಕೃತದ ಬೀಜಾಕ್ಷರವಾದ ईं (ಈಂ) ಮೂಲಕ ಪ್ರತಿನಿಧಿಸಲಾಗುತ್ತದೆ.

          ದೇವಿಯು ಕಾಮಕಲಾ ರೂಪದಲ್ಲಿದ್ದಾಳೆ. ಇದು ಆಕೆಯ ಅತಿಸೂಕ್ಷ್ಮರೂಪವಾಗಿದ್ದು ಇದು ಕೇವಲ ಆಕೆಯ ಸಂಗಾತಿಯಾದ ಶಿವನಿಗೆ ಮಾತ್ರ ತಿಳಿದಿದೆ. ಅವಳ ಸೂಕ್ಷ್ಮಾತೀಸೂಕ್ಷ್ಮ ರೂಪವು ಸಹಸ್ರಾರದಲ್ಲಿನ ಕುಂಡಲಿನೀ ರೂಪವಾಗಿದ್ದು; ಅಲ್ಲಿ ಆಕೆಯು ತನ್ನ ಸಂಗಾತಿಯೊಡನೆ ಸಂಯೋಗ ಹೊಂದುತ್ತಾಳೆ. ಕೆಳಗಿನ ಚಕ್ರಗಳಲ್ಲಿ ಕುಂಡಲಿನಿಯು ಅತ್ಯಂತ ಸೂಕ್ಷ್ಮವಾಗಿರದೆ ಅದು ಸೂಕ್ಷ್ಮಾತೀಸೂಕ್ಷ್ಮ ರೂಪವನ್ನು ಸಹಸ್ರಾರದಲ್ಲಿದ್ದಾಗ ಮಾತ್ರವೇ ಹೊಂದುತ್ತದೆ. ಕಾಮ ಎನ್ನುವುದು ಬಯಸುವ ವಸ್ತುವನ್ನು ಕುರಿತದ್ದಾಗಿದೆ; ಅಥವಾ ಆಸೆ ಪಡುವ ವಸ್ತುವಾಗಿದೆ. ಇಲ್ಲಿ ಶಿವನು ಅತ್ಯಂತ ಬಯಕೆಯ ವಸ್ತುವಾಗಿದ್ದಾನೆ; ಏಕೆಂದರೆ ಅವನೊಬ್ಬನೇ ಅಂತಿಮ ಸತ್ಯನು ಅಥವಾ ಪರಮಾರ್ಥನಾಗಿದ್ದಾನೆ. ಶಿವನು ಅಂತಿಮ ಪರಿಪಾಲಕನಾಗಿದ್ದು, ಅವನನ್ನು ಕಾಮೇಶ್ವರನೆಂದು ಸಂಭೋದಿಸಲಾಗಿದೆ. ಹೀಗೆ ಅವನನ್ನು ಕರೆಯುವುದರಿಂದ ಅವನು ಆಸೆಯ (ಕಾಮ) ಲಕ್ಷ್ಯವಾಗುತ್ತಾನೆ  ಅದಲ್ಲದೇ ಪರಮೋನ್ನತ ಪಾಲಕನಾಗುತ್ತಾನೆ (ಈಶ್ವರ). ಹೀಗೆ ಅವನು ಕಾಮ+ ಈಶ್ವರ= ಕಾಮೇಶ್ವರ’ನಾಗಿದ್ದಾನೆ. ಕಲಾ ಎನ್ನುವುದು ಶಿವನ ವಿಮರ್ಶ ರೂಪವಾದ ಮಹಾತ್ರಿಪುರಸುಂದರೀ ಆಗಿದೆ. ಶಿವನೊಬ್ಬನೇ ಸ್ವಯಂ ಪ್ರಕಾಶಕನಾಗಿದ್ದು, ಶಕ್ತಿಯು ಅವನ ಹೊಳಪಿನಿಂದ ಈ ಜಗತ್ತನ್ನು ಬೆಳಗಿಸುತ್ತಾಳೆ. ಅವರಿಬ್ಬರ ಸಂಯುಕ್ತ ರೂಪವೇ ಕಾಮಕಲಾ.

          ಕಾಮಕಲಾವು ಮೂರು ಬಿಂದುಗಳನ್ನು ಒಳಗೊಂಡಿದ್ದು ಅವು ತ್ರಿಭುಜವನ್ನು ಉಂಟುಮಾಡುತ್ತವೆ, ಮತ್ತು ಈ ತ್ರಿಕೋಣದ ಕೆಳಗೆ ಒಂದು ತಲೆ ಕೆಳಗಾದ ತ್ರಿಕೋಣವಿದ್ದು (ಹಾರ್ದ-ಕಲಾ) ಅದರಲ್ಲಿ ಪಂಚದಶೀ ಮಂತ್ರದ ತ್ರಿಕೂಟಗಳನ್ನು ಇರಿಸಲಾಗುತ್ತದೆ. ಈ ಕೆಳಗಿನ ತಲೆಕೆಳಗಾದ ತ್ರಿಕೋಣದಿಂದ ಎಲ್ಲಾ ತ್ರಿಕೂಟಗಳು ಹುಟ್ಟಿ ಅವೆಲ್ಲವೂ ಅಂತಿಮವಾಗಿ ಈ ಜಗತ್ತಿನ ಸೃಷ್ಟಿಯೆಡೆಗೆ ಕೊಂಡೊಯ್ಯುತ್ತವೆ. ಅದರಲ್ಲಿ ಎರಡು ಸಮಾನಾಂತರ ಚುಕ್ಕೆಗಳು ಅವಳ ಸ್ತನಗಳಾಗಿದ್ದು ಅವುಗಳ ಮೂಲಕ ಈ ಪ್ರಪಂಚವು ಪೋಷಿಸಲ್ಪಡುತ್ತದೆ ಮತ್ತು ಇವೆರಡೂ ಚುಕ್ಕೆಗಳ ಮೇಲಿರುವ ಒಂಟಿ ಚುಕ್ಕಿಯು ಆಕೆಯ ಮೂರನೆಯ ಕಣ್ಣಾಗಿದೆ. ಕಾಮ ಎಂದರೆ ಸೃಷ್ಟಿಸಬೇಕೆನ್ನುವ ಉದ್ದೇಶ ಮತ್ತು ಕಲಾ ಎಂದರೆ ಒಂದು ಪ್ರಮುಖ ವಸ್ತುವಿನ ಭಾಗವಾಗಿರುತ್ತದೆ ಮತ್ತು ಇಲ್ಲಿ ಅದು ಶಿವನಾಗಿದೆ. ಕಾಮ ಮತ್ತು ಕಲಾ ಇವರೆಡರ ಸಂಯೋಗವು ಕಾಮೇಶ್ವರ ಮತ್ತು ಕಾಮೇಶ್ವರೀ ರೂಪಗಳ ಆವಿರ್ಭಾವದೆಡೆಗೆ ಕರೆದೊಯ್ಯುತ್ತದೆ. ಶಿವ ಮತ್ತು ಶಕ್ತಿಯರು ಕೇವಲ ಅವರ ಕಾಮ ರೂಪಗಳಲ್ಲಿ ಒಂದಾಗುತ್ತಾರೆ, ಅಂದರೆ ಕಾಮ+ಈಶ್ವರೀ ಮತ್ತು ಕಾಮ+ಈಶ್ವರ. ಇವರೆಡೂ ಸೃಷ್ಟಿಯನ್ನುಂಡು ಮಾಡುವ ಅವರಿಬ್ಬರ ಅತ್ಯುನ್ನತ ರೂಪಗಳಾಗಿವೆ. ದೇವಿಯನ್ನು ಕಾಮಕಲಾ ರೂಪದಲ್ಲಿ ’ಮಹಾ-ತ್ರಿಪುರ-ಸುಂದರೀ’ ಎಂದು ಕರೆಯಲಾಗುತ್ತದೆ ಅದಲ್ಲದೇ ಆಕೆಯನ್ನು ’ಬಿಂದುತ್ರಯ ಸಮಷ್ಠಿ ರೂಪಾ ದಿವ್ಯಾಕ್ಷರ ರೂಪಿಣಿ’ ಎಂದೂ ಕರೆಯಲಾಗುತ್ತದೆ. ಮಹಾ ಎಂದರೆ ಅತ್ಯುನ್ನತವಾದದ್ದು, ತ್ರಿಪುರ ಎಂದರೆ ಮೂರು ನಗರಗಳು (ಇವು ಸೃಷ್ಟಿಗೆ ಕಾರಣವಾದ ಮತ್ತು ದೇವಿಯಿಂದ ಪರಿಪಾಲಿಸಲ್ಪಡುವ ಎಲ್ಲಾ ವಿಧವಾದ ತ್ರಿಕೂಟಗಳನ್ನು ಸೂಚಿಸಬಹುದು). ತ್ರಿಪುರ ಎನ್ನುವುದರ ಅಂತರಾರ್ಥವು ಆಕೆಯ ಮೂರು ಕ್ರಿಯೆಗಳಾದ ಸೃಷ್ಟಿ, ಸ್ಥಿತಿ ಮತ್ತು ಲಯಗಳಾಗಿವೆ.  ಸುಂದರೀ ಎಂದರೆ ಅಂದವಾಗಿರುವವಳು ಅಥವಾ ಚೆಲುವೆ. ಆದ್ದರಿಂದ ಮಹಾ-ತ್ರಿಪುರ-ಸುಂದರೀ ಎಂದರೆ ಸುಂದರವಾದ ಪರಮೋನ್ನತ ಮಾತೆ; ಮತ್ತಾಕೆ ಸೃಷ್ಟಿಸಿ, ಪೋಷಿಸಿ ಮತ್ತು ಲಯವಾಗಿಸುವಾಕೆ. ಈ ಮೂರು ಕ್ರಿಯೆಗಳು ಈ ಕಾಮಕಲಾ ನಾಮದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

        ಈ ಮೂರು ಬಿಂದುಗಳು ಅತ್ಯಂತ ಶಕ್ತಿಯುತವಾಗಿವೆ. ಅವುಗಳು ಕ್ರಮವಾಗಿ ಸೂರ್ಯ, ಚಂದ್ರ ಮತ್ತು ಅಗ್ನಿಯನ್ನು ಪ್ರತಿನಿಧಿಸುತ್ತವೆ. ಬಿಂದುವನ್ನು ಅತ್ಯುನ್ನತವಾದ ಬೆಳಕೆಂದು ಕರೆಯುತ್ತಾರೆ. ಆದ್ದರಿಂದ ಪರಮೋನ್ನತವಾದ ಬೆಳಕಿನ ರೂಪವು ಬೆಳಕಿನ ಮೂಲವಾಗಿದ್ದು ಅದರಿಂದ ಇತರೆಲ್ಲಾ ಬೆಳಕುಗಳು ಉದ್ಭವಿಸಿರಬೇಕು. ಸ್ವಯಂಪ್ರಕಾಶಕನಾಗಿರುವ ಬೆಳಕೇ ಶಿವನಾಗಿರುವುದರಿಂದ ಅವನನ್ನು ಪ್ರಕಾಶ ರೂಪ ಎಂದು ಕರೆಯುತ್ತಾರೆ. ಶಕ್ತಿಯು ಪ್ರಕಾಶ ರೂಪದಿಂದ ಪಡೆದುಕೊಂಡ ಬೆಳಕನ್ನು ಪ್ರತಿಫಲಿಸುವುದಲ್ಲದೇ ಎಲ್ಲೆಡೆ ಅದನ್ನು ಹಂಚುತ್ತಾಳೆ ಆದ್ದರಿಂದ ಆಕೆಯನ್ನು ವಿಮರ್ಶ ರೂಪ ಎಂದು ಕರೆಯಲಾಗಿದೆ. ವಿಮರ್ಶ ಎನ್ನುವುದನ್ನು ಕಾರಣದಿಂದೊಡಗೂಡಿದ ಜ್ಞಾನವೆನ್ನಬಹುದು. ಶಿವನ ಬೆಳಕು ಶಕ್ತಿಯು ಅವನೊಡನೆ ಇಲ್ಲದಿದ್ದರೆ ಪ್ರತಿಫಲಿಸದು. ಆದ್ದರಿಂದ ಈ ಮೂರು ಬಿಂದುಗಳು ದೇವಿಯ ವಿವಿಧ ರೂಪಗಳಾಗಿದ್ದು ಅವು ಪ್ರತಿಯೊಂದೂ ಒಂದೊಂದು ದೈವೀ ಶಕ್ತಿಗಳನ್ನು ಪ್ರತಿನಿಧಿಸುತ್ತವೆ; ಅವೆಂದರೆ ವಾಮ, ಜ್ಯೇಷ್ಠ ಮತ್ತು ರೌದ್ರೀ. ಈ ಮೂರು ದೇವತೆಗಳು ಅವಳ ಮೂರು ಕ್ರಿಯಗಳಾದ ಸೃಷ್ಟಿ, ಪೋಷಣೆ ಮತ್ತು ಲೀನವಾಗುವಿಕೆಯನ್ನು ಪ್ರತಿನಿಧಿಸುತ್ತಾರೆ. ಇದುವರೆಗಿನದು ಮೇಲಿನ ತ್ರಿಕೋಣದ ಕುರಿತಾದದ್ದು. ಇಲ್ಲಿ ಯಾವುದೇ ತ್ರಿಕೋಣವಿಲ್ಲ ಆದರೆ ಕೇವಲ ಮೂರು ಬಿಂದುಗಳು ಮಾತ್ರ ಇವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು (ಬಿಂದುವಿನ ಕುರಿತು ಹೆಚ್ಚಿನ ವಿವರಣೆಯನ್ನು ೯೦೫ನೇ ನಾಮದಲ್ಲಿ ನೋಡೋಣ). ಇದನ್ನು ತ್ರಿಕೋಣವೆಂದು ಏಕೆ ಕರೆಯಲಾಗಿದೆ ಎಂದರೆ ಈ ಮೂರು ಚುಕ್ಕೆಗಳನ್ನು ನೇರವಾದ ಗೆರೆಗಳಿಂದ ಸೇರಿಸಿದಾಗ ಒಂದು ತ್ರಿಕೋಣವು ಉಂಟಾಗುವುದರಿಂದ.

          ಮೇಲಿನ ಗ್ರಹಿಕೆಯ ತ್ರಿಕೋಣವು ಕೆಳಗಿನ ಹಾರ್ದ-ಕಲಾ ಅಥವಾ ತಲೆಕೆಳಗಾದ ತ್ರಿಕೋಣದೊಂದಿಗೆ ಬೆಸಗೊಂಡಿರುತ್ತದೆ. ಆ ತ್ರಿಕೋಣದ ಮೂರು ರೇಖೆಗಳು ಪ್ರತಿಯೊಂದೂ ಪಂಚದಶೀ ಮಂತ್ರದ ಒಂದೊಂದು ಕೂಟಗಳನ್ನು ಪ್ರತಿನಿಧಿಸುತ್ತವೆ. ಪರಮೋನ್ನತವಾದ ಪಂಚದಶೀ ಮಂತ್ರದ ತ್ರಿಕೂಟಗಳಿಂದ ಉಂಟಾದ ಕೆಳಗಿನ ತಲೆಕೆಳಗಾದ ತ್ರಿಕೋಣದಲ್ಲಿ ಎಲ್ಲಾ ಮಂತ್ರಗಳೂ ಉದ್ಭವಿಸಿ ಅವು ಸೃಷ್ಟಿಯೆಡೆಗೆ ಕೊಂಡೊಯ್ಯುತ್ತವೆ. ಆದ್ದರಿಂದ ಕೆಳಗಿನ ತ್ರಿಕೋಣವನ್ನು ಈ ಪ್ರಪಂಚದ ಸೃಷ್ಟಿಗೆ ಕಾರಣವಾದ ಸೃಷ್ಟಿಯ ಅಂಗವೆಂದು ಕರೆಯಲಾಗುತ್ತದೆ. ಮೇಲಿನ ತ್ರಿಕೋಣದಲ್ಲಿರುವ ಎರಡು ಕೆಳಗಿನ ಬಿಂದುಗಳು ಪಾಲನೆ ಅಥವಾ ಪೋಷಣೆಗಳಾಗಿದ್ದರೆ ಅತ್ಯಂತ ಮೇಲಿರುವ ಚುಕ್ಕೆಯು ವಿನಾಶಕ್ಕೆ ಕಾರಣವಾಗಿದೆ. ಈ ಮೂರು ಬಿಂದುಗಳನ್ನು ಸೂರ್ಯ, ಚಂದ್ರ ಮತ್ತು ಅಗ್ನಿ ಎಂದೂ ಕರೆಯಲಾಗುತ್ತದೆ; ಬಹುಶಃ ಅವು ಪಾಲನೆ (ಸೂರ್ಯ -ಅವನಿಲ್ಲದಿದ್ದರೆ ಈ ಪ್ರಪಂಚವು ಕಾರ್ಯನಿರ್ವಹಿಸಲಾರದು), ಪಾಲನೆ (ಚಂದ್ರ- ಚಂದ್ರನು ಪ್ರೀತಿಯ ಸಂಕೇತವಾಗಿದ್ದಾನೆ) ಮತ್ತು ಅಗ್ನಿ (ಬೆಂಕಿಯ ಒಂದು ಗುಣವು ನಾಶಪಡಿಸುವುದಾಗಿದೆ). ಇದನ್ನು ವಾಸ್ತವವಾಗಿ ಪಂಚದಶೀ ಮಂತ್ರದ ಮೂರು ಕೂಟಗಳಿಗೆ ಹೋಲಿಸಬಹುದು ಅದರಲ್ಲಿ ಆ ಕೂಟಗಳನ್ನು ಅಗ್ನಿ, ಸೂರ್ಯ ಮತ್ತು ಚಂದ್ರ ಕೂಟಗಳೆಂದು ಕರೆಯಲಾಗುತ್ತದೆ.

          ಇದರ ದೀರ್ಘವಾದ ವಿವರಣೆಯನ್ನು ಕೊಡುವುದು ಸಮಂಜಸವಲ್ಲ, ಏಕೆಂದರೆ ಅದನ್ನು ಶ್ರೀ ವಿದ್ಯಾ ಉಪಾಸನೆಯನ್ನರಿತ ಯೋಗ್ಯ ಗುರುವಿನಿಂದ ತಿಳಿದುಕೊಳ್ಳಬೇಕು. ಆದರೆ ಯಾರಿಗೆ ಗುರುವಿಲ್ಲವೋ, ಆದರೆ ಶ್ರೀ ಮಾತೆಯೊಂದಿಗೆ ದೀರ್ಘವಾದ ಒಡನಾಟವಿಟ್ಟುಕೊಂಡಿದ್ದಾರೆಯೋ ಅವರು ’ಕಾಮಕಲಾ’ದ ಮಹತ್ವವನ್ನು ಅರಿಯುವುದರಿಂದ ವಂಚಿತರಾಗಬಾರದು. ಆದ್ದರಿಂದ ಮಧ್ಯಮ ಸ್ಥಾಯಿಯ ವಿಶ್ಲೇಷಣೆಯನ್ನು ಇಲ್ಲಿ ಕೊಡಲಾಗಿದೆ. ಷೋಡಶೀ ಮಂತ್ರದಲ್ಲಿ ಸೂಕ್ತವಾದ ಸಮಯದಲ್ಲಿ ’ಕಾಮಕಲಾ’ವನ್ನು ಉಪಯೋಗಿಸಿದಾಗ ಅದು ಮಂತ್ರ ಸಿದ್ಧಿಯನ್ನು ಶೀಘ್ರವಾಗಿಸುತ್ತದೆ. 

          ಈ ಶ್ಲೋಕವು ಎರಡು ತ್ರಿಭುಜಗಳ ಕುರಿತಾಗಿ ಹೇಳುತ್ತದೆ, ಮೇಲಿನ ಮತ್ತು ಕೆಳಗಿನದು ಅಥವಾ ಒಂದರ ಮೇಲೆ ಮತ್ತೊಂದಿರುವುದು. ದೇವಿಯ ಮುಖ ಮತ್ತು ಎರಡು ಸ್ತನಗಳು ಮೇಲಿನ ತ್ರಿಕೋಣವನ್ನು ರೂಪಿಸುತ್ತವೆ ಮತ್ತು ಈ ವಿಶ್ವವನ್ನು ಆವಿರ್ಭವಿಸುವ ಅವಳ ಅಂಗವು ಕೆಳಗಿನ ತ್ರಿಭುಜವನ್ನು ರೂಪಿಸುತ್ತದೆ. ಈ ಶ್ಲೋಕವು ದೇವಿಯ ಮುಖವು ಬಿಂದುವಾಗಿದ್ದು ಅದರ ಕೆಳಗಡೆ ಅವಳೆರಡು ಸ್ತನಗಳಿವೆ ಮತ್ತು ಆ ಸ್ತನಗಳ ಕೆಳಗೆ ಯೋನಿಯಿದ್ದು ಅದರ ಮೂಲಕ ಈ ಪ್ರಪಂಚವು ಆವಿರ್ಭವಿಸುತ್ತದೆ. ಕೆಳಗಿನ ತ್ರಿಕೋಣವನ್ನು ಸಂಸ್ಕೃತದ ಹ (ह) ಅಕ್ಷರದ ಅರ್ಧವೆಂದು ವಿವರಿಸಲಾಗಿದೆ; ಅದು ಇ (इ) ಅನ್ನು ಉಲ್ಲೇಖಿಸುತ್ತದೆ. ನಾವು इ (ಇ) ರಚನೆಯನ್ನು ಗಮನಿಸಿದರೆ ಅದು ह (ಹ) ಅಕ್ಷರದ ಭಾಗವಾಗಿದೆ ಆದ್ದರಿಂದ ಅದನ್ನು ಈ ಶ್ಲೋಕದಲ್ಲಿ ಹರ ಅರ್ಧಮ್ - ಹ ದ ಅರ್ಧ ಎಂದು ಹೇಳಲಾಗಿದೆ. ಕಾಮಕಲಾವು ಅರ್ಧಚಂದ್ರವನ್ನು (ಅರ್ಧ ಚಂದ್ರವು ವಾಸ್ತವವಾಗಿ ಇಂಗ್ಲೀಷ್ ಅಕ್ಷರದ U ಅನ್ನು ಹೋಲುತ್ತದೆ) इ (ಇ) ಅಕ್ಷರದ ಮೇಲಿರಿಸಿ ಅದರ ಮೇಲೆ ಬಿಂದುವನ್ನು ಇರಿಸಲಾಗುತ್ತದೆ ಆಗ ಅದು ಸ್ವಲ್ಪ ಹೆಚ್ಚು ಕಡಿಮೆ ईं (ಈಂ) ರೀತಿ ಕಾಣುತ್ತದೆ. ಇದನ್ನೇ ಕೆಳಗಿನ ತ್ರಿಭುಜವೆಂದು ಕರೆಯಲಾಗುತ್ತದೆ ಮತ್ತು ಈ ತ್ರಿಭುಜದ ಒಂದೊಂದು ಪಾರ್ಶ್ವದ ಮೇಲೆ ಪಂಚದಶೀ ಮಂತ್ರದ ಒಂದೊಂದು ಕೂಟವನ್ನು ಇರಿಸಲಾಗುತ್ತದೆ. ನಾವು ಈ ತ್ರಿಕೋಣವನ್ನು ಎದುರಿನಿಂದ ನೋಡಿದಾಗ, ಅದರ ಬಲಭಾಗದ ಮೇಲೆ ವಾಗ್ಭವ ಕೂಟವನ್ನು (ಕ ಏ ಈ ಲ ಹ್ರೀಂ क ए ई ल ह्रीं)  ಇರಿಸಿದರೆ, ಮೇಲಿನ ಭಾಗದಲ್ಲಿ ಕಾಮರಾಜ ಕೂಟವನ್ನು (ಹ ಸ ಕ ಹ ಲ ಹ್ರೀಂ ह स क ह ल ह्रीं) ಮತ್ತು ಎಡ ಭಾಗದಲ್ಲಿ ಶಕ್ತಿ ಕೂಟವನ್ನು (ಸ ಕ ಲ ಹ್ರೀಂ स क ल ह्रीं) ಇರಿಸಲಾಗುತ್ತದೆ. ಈ ತಲೆಕೆಳಗಾದ ತ್ರಿಕೋಣವನ್ನು ವಿಶ್ವದ ಯೋನಿ ಅಥವಾ ಬ್ರಹ್ಮಯೋನಿ ಎಂದು ಕರೆಯಲಾಗಿದ್ದು, ಇದರ ಮೂಲಕ ಸಮಸ್ತ ಸೃಷ್ಟಿಯ ಆವಿರ್ಭಾವವು ಉಂಟಾಗುತ್ತದೆ. ಇದನ್ನು ಲಲಿತಾ ಸಹಸ್ರನಾಮದ ೮೯೫ನೇ ನಾಮವಾದ ಯೋನಿ ನಿಲಯದ ವಿವರಣೆಯಲ್ಲಿಯೂ ನೋಡಬಹುದು.

          ಈ ಶ್ಲೋಕವು ಬಿಂದುವೆಂದು ಕರೆಯಲ್ಪಡುವ ದೇವಿಯ ಮುಖ ಹಾಗೂ ಅದರ ಕೆಳಗಿರುವ ಅವಳ ಎರಡು ಸ್ತನಗಳ ಮೇಲೆ ಒಬ್ಬರು ಧ್ಯಾನಿಸಬೇಕೆಂದು ಹೇಳುತ್ತದೆ. (ಇಲ್ಲಿ ಕೊಟ್ಟಿರುವ ಚಿತ್ರವು ಹೆಚ್ಚಿನದನ್ನು ವಿವರಿಸುತ್ತದೆ. ಯಾವಾಗ ಒಬ್ಬ ಸಾಧಕನಗೆ ಜಗನ್ಮಾತೆಯ ಈ ಶ್ಲೋಕದಲ್ಲಿ ವಿವರಿಸಿರುವಂತೆ ದೇವಿಯ ಅತೀ ಸೂಕ್ಷ್ಮವಾದ ಈ ರೂಪದ ಮೇಲೆ ಧ್ಯಾನಿಸಲು ಸಾಧ್ಯವಾಗುವುದೋ ಅವನು ಅತ್ಯಂತ ಶಕ್ತೋತ್ಸಾಹಗಳಿಂದ ತುಂಬಿಕೊಂಡು ಅವನು ಮೂರು ಲೋಕಗಳ ಸುಂದರಿಯರಿಗೆ (ಸ್ವರ್ಗಲೋಕದ ದೇವಕನ್ಯೆಯರನ್ನೊಳಗೊಂಡು) ಆಕರ್ಷಣೀಯವಾಗಿ ಕಾಣಿಸುತ್ತಾನೆ. ಈ ಸುಂದರಿಯರು ಸೂರ್ಯ ಮತ್ತು ಚಂದ್ರರನ್ನು ತಮ್ಮ ಸ್ತನಯುಗ್ಮಗಳಾಗಿ ಉಳ್ಳವರೆಂದು ಹೇಳಲಾಗುತ್ತದೆ. ಅವರು ತಮ್ಮ ಸ್ತನಗಳಾಗಿ ಸೂರ್ಯ ಮತ್ತು ಚಂದ್ರರನ್ನೇ ಹೊಂದಿದ್ದರೂ ಸಹ ಯಾರು ದೇವಿಯ ಕಾಮಕಲಾ ರೂಪದ ಮೇಲೆ ಧ್ಯಾನಿಸುತ್ತಾರೆಯೋ ಅವನಿಗೆ ಅವರು ಆಕರ್ಷಿತರಾಗುತ್ತಾರೆ. ಕಾಮಕಲಾ ರೂಪವನ್ನು ಮನ್ಮಥ ಕಲಾಮ್ (ಉದ್ರೇಕ ಎನ್ನುವ ಅರ್ಥವನ್ನೂ ಈ ಶಬ್ದವು ಹೊಂದಿದೆ) ಎಂದು ಸೂಕ್ಷ್ಮವಾಗಿ ಈ ಶ್ಲೋಕದಲ್ಲಿ ವಿವರಿಸಲಾಗಿದೆ. ಕೆಲವೊಂದು ವ್ಯಾಖ್ಯಾನಗಳ ಪ್ರಕಾರ ದೇವಿಯ ಸ್ತನಗಳನ್ನು ಸೂರ್ಯ ಚಂದ್ರರೆಂದು ವರ್ಣಿಸಲಾಗುತ್ತದೆ. ಯಾವಾಗ ಒಬ್ಬನು ದೇವಿಯ ಈ ಕಾಮಕಲಾ ರೂಪದ ಮೇಲೆ ಧ್ಯಾನವನ್ನು ಕೈಗೊಳ್ಳುತ್ತಾನೆಯೋ ಆಗ ಮೂರು ಲೋಕದ ಸ್ತ್ರೀಯರೂ ಅವನ ಬಗೆಗೆ ತೃಷೆಯುಳ್ಳವರಾಗುತ್ತಾರೆ. ಏಕೆಂದರೆ, ಅವನು ದೇವಿಯನ್ನು ಈ ಪ್ರಪಂಚದ ಉಗಮ ಸ್ಥಾನವಾದ ಪಂಚದಶೀ ಮಂತ್ರದ ಸ್ವರೂಪದಲ್ಲಿ ಮನಗಾಣುವುದರಿಂದ ಇದು ಉಂಟಾಗುತ್ತದೆ.

           ಈ ಶ್ಲೋಕದ ಕುರಿತಾಗಿ ಅನೇಕ ಸಂಗತಿಗಳನ್ನು ಚರ್ಚಿಸಬಹುದು. ಒಬ್ಬ ಸಾಧಕನು ತನ್ನ ಸಾಧನೆಯಲ್ಲಿ ಬಾಹ್ಯ ಆಕರ್ಷಣೆಗಳಿಂದ ವಿಚಲಿತನಾಗದೇ ಇದ್ದಾಗ ಪರಿಪೂರ್ಣತೆಯನ್ನು ಹೊಂದುತ್ತಾನೆ ಮತ್ತು ಅವನು ಉತ್ತೀರ್ಣನಾಗಬೇಕಾದ ಒಂದು ವಿಧವಾದ ಪರೀಕ್ಷೆ ಇದು. ಈ ಶ್ಲೋಕವನ್ನು ಕುಂಡಲಿನೀ ಧ್ಯಾನದಲ್ಲಿ ಚರ್ಚಿಸಲ್ಪಡುವ ಇಡಾ, ಪಿಂಗಳ (ಎರಡು ಸ್ತನಗಳು) ಮತ್ತು ಸುಷುಮ್ನಾ ಎನ್ನುವ ಮೂರು ನಾಡಿಗಳು ದೇವಿಯ ಮುಖದಲ್ಲಿ ಒಂದುಗೂಡುವ ಸಂಗತಿಯಾಗಿ ಸಹ ಪರಿಗಣಿಸಬಹುದು. ಆಜ್ಞಾ ಚಕ್ರವನ್ನು ದೇವಿಯ ಹಣೆಯಲ್ಲಿರುವ ಬಿಂದುವೆಂದು ಸಹ ವಿವರಿಸಬಹುದು. ಇದನ್ನು ಕುಂಡಲಿನೀ ಧ್ಯಾನದ ತಾಂತ್ರಿಕ ದೀಕ್ಷೆಯಾಗಿಯೂ ವಿವರಿಸಬಹುದು.

          ಈ ಶ್ಲೋಕದಲ್ಲಿ ಮುಖ್ಯವಾಗಿ ಅಡಕವಾಗಿರುವ ವಿಷಯವೇನೆಂದರೆ ಅದು ಧ್ಯಾನವಾಗಿದೆ. ದೇವಿಯ ಪಂಚದಶೀ ಮಂತ್ರದ ಮೂಲಕ ಧ್ಯಾನಿಸುವುದರಿಂದ ಮಾತ್ರವೇ ಆಕೆಯನ್ನು ಹೊಂದಬಹುದು. ವಿಜಯಿಯಾದ ಸಾಧಕನು ಆಧ್ಯಾತ್ಮಿಕವಾಗಿ ಪುನರ್ಜನ್ಮ ಪಡೆಯುತ್ತಾನೆ (ಈ ಹುಟ್ಟಿನಲ್ಲಿಯೇ ಅವನು ಮರುಹುಟ್ಟು ಪಡೆಯುತ್ತಾನೆ); ದೇವಿಯ ಯೋನಿ ಎಂದು ಕರೆಯಲ್ಪಡುವ ಈ ಮಂತ್ರದ ಮೂಲಕ ಅವನು ಮುಂದೆ ಸಾಗಿ ಅವಳ ಸ್ತನಗಳ ಬಳಿ ಸಾರಿ ಆಕೆಯಿಂದ ಆಧ್ಯಾತ್ಮಿಕ ಪೋಷಣೆಯನ್ನು ಪಡೆಯುತ್ತಾನೆ. ಅವಳು ಮುಂದೆ ಅವನನ್ನು ಅವಳ ಆಜ್ಞಾ ಚಕ್ರದೆಡೆಗೆ ಸಾಗುವುದಕ್ಕೆ ಅಪ್ಪಣೆಯನ್ನಿತ್ತು ಈ ಯೋಗಿಯನ್ನು (ಸಾಧಕನನ್ನು) ಶಿವನೊಂದಿಗೆ ಐಕ್ಯಳಾಗಿಸುತ್ತಾಳೆ. ಆಧ್ಯಾತ್ಮಿಕ ಹುಟ್ಟನ್ನು ಈ ಜನ್ಮದಲ್ಲಿನ ಮರುಹುಟ್ಟೆಂದು ಪರಿಗಣಿಸಬಹುದು ಒಂದು ವೇಳೆ ಶಿವನೊಂದಿಗೆ ಐಕ್ಯವಾಗಿ ಮುಕ್ತಿಯನ್ನು ಪಡೆಯುವ ಏಕೈಕ ಉದ್ದೇಶವನ್ನು ಹೊಂದಿದ್ದರೆ. ಕೇವಲ ದೇವಿ ಮಾತ್ರಳೇ ಈ ಕೆಲಸವನ್ನು ಮಾಡಲು ಶಕ್ಯಳಾಗಿದ್ದಾಳೆ, ಸ್ವಯಂ ಶಿವನಿಗೂ ಇದು ಸಾಧ್ಯವಿಲ್ಲ. ಆದ್ದರಿಂದ ಲಲಿತಾಸಹಸ್ರನಾಮದ ೭೨೭ನೇ ನಾಮವು ಅವಳನ್ನು ಶಿವಜ್ಞಾನಪ್ರದಾಯಿನೀ ಎಂದು ಹೇಳುತ್ತದೆ.

          ಒಂದು ವೇಳೆ ಇಲ್ಲಿ ಹೆಸರಿಸಿರುವ ಮೂರು ಲೋಕಗಳನ್ನು ಪ್ರಜ್ಞೆಯ ಮೂರು ಅವಸ್ಥೆಗಳಾದ ಜಾಗೃತ್, ಸ್ವಪ್ನ ಮತ್ತು ಸುಷುಪ್ತಿಯಾಗಿ ವಿಶ್ಲೇಷಿಸಿದರೆ ಆಗ ದೇವಿಯು; ಪ್ರಜ್ಞೆಯ ಈ ಮೂರೂ ಹಂತಗಳಲ್ಲಿ ಅಸ್ತಿತ್ವದಲ್ಲಿರುತ್ತಾಳೆಂದು ಅರ್ಥೈಸಬಹುದು ಅಥವಾ ಸಾಧಕನು ಮಾನವ ಪ್ರಜ್ಞೆಯ ಈ ಮೂರೂ ಅವಸ್ಥೆಗಳಲ್ಲಿ ಪರಮಾನಂದದ ಸ್ಥಿತಿಯಲ್ಲಿರುತ್ತಾನೆ ಎಂದು ಹೇಳಬಹುದು.

          ಈ ಶ್ಲೋಕದ ವಿಶ್ಲೇಷಣೆಯು ತಂತ್ರಶಾಸ್ತ್ರದ ಮೇಲೆ ಆಧಾರಿತವಾಗಿದೆ ಮತ್ತು ಇದನ್ನು ಬಹಳಷ್ಟು ಬಹಿರಂಗಗೊಳಿಸುವುದನ್ನು ತಂತ್ರಶಾಸ್ತ್ರಗಳು ನಿಷೇಧಿಸುತ್ತವೆ. ವಾಸ್ತವವಾಗಿ ಈ ರಹಸ್ಯಗಳನ್ನು ಒಬ್ಬ ಸದ್ಗುರುವಿನ ಮೂಲಕವೇ ತಿಳಿದುಕೊಳ್ಳಬೇಕು ಎಂದು ಹೇಳಲಾಗುತ್ತದೆ. ಆದರೆ ಈ ವಿಶ್ಲೇಷಣೆಯಲ್ಲಿ ಬಹುತೇಕ ಎಲ್ಲಾ ವಿಷಯಗಳನ್ನೂ ಸ್ವಲ್ಪ ಹೆಚ್ಚೂ ಕಡಿಮೆ ಸಂಪೂರ್ಣವಾಗಿ ಚರ್ಚಿಸಲಾಗಿದೆ.

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ SAUNDARYALAHARI VERSE - 19 http://www.manblunder.com/2012/08/saundaryalahari-verse-19.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

ಚಿತ್ರಕೃಪೆ: http://3.bp.blogspot.com/-_NOTH3O1tAM/UDyBTf7F-CI/AAAAAAAABgY/_kwBd3GLcvU/s200/Project1.png

 
Rating
No votes yet