ವಿಷಾಪಹಾರಿ 'ಡ್ರಾಗನ್ನಿನ ಕಣ್ಣು', ಈ ರುಜಾಪಹಾರಿ 'ಲೊಂಗನ್' ಹಣ್ಣು!

ವಿಷಾಪಹಾರಿ 'ಡ್ರಾಗನ್ನಿನ ಕಣ್ಣು', ಈ ರುಜಾಪಹಾರಿ 'ಲೊಂಗನ್' ಹಣ್ಣು!

ಹಣ್ಣಿನ ಹೆಸರು: ಲೊಂಗನ್ (Longan); ಈ ಹಣ್ಣನ್ನು ಈ ಹಿಂದೆ ಯಾರಾದರೂ ಪರಿಚಯಿಸಿದ್ದರೊ ಗೊತ್ತಿಲ್ಲ. ಸಿಂಗಪುರದಲ್ಲಿ ಸಾಧಾರಣ ಕಾಣುವ ಹಣ್ಣಾದ ಕಾರಣ ಈ ಕಿರು ಪರಿಚಯ.
ಉಷ್ಣವಲಯದ ಹಣ್ಣುಗಳಲ್ಲೊಂದಾದ ಈ ಹಣ್ಣು ಸಿಂಗಪುರದಂತ ಭೂಮಧ್ಯ ರೇಖೆಯ ದೇಶಗಳಲ್ಲಿ ಬೆಳೆಯುವ, ದೊರಕುವ ಹಣ್ಣು. ಸುಮಾರು ಕಿರು ನಿಂಬೆ ಹಣ್ಣಿನ ಅಥವ ಹೆಚ್ಚು ಕಡಿಮೆ ನಮ್ಮ ಗೋಲಿಯಷ್ಟೆ ಗಾತ್ರದ, ಗೋಲಾಕಾರದ ಈ ಹಣ್ಣಿನ ಬಿಳಿ ತಿರುಳು, ಒಂದು ರೀತಿಯ ಕಂದು-ಹಳದಿ ಮಿಶ್ರ ಬಣ್ಣದ ಹೊರ ಕವಚವನ್ನು ಹೊಂದಿರುತ್ತದೆ. ತುಸು ಮೆಲುವಾದ ಒತ್ತಡ ಹಾಕಿದರೆ ಕೈ ಬೆರಳುಗಳಿಂದಲೆ ಸಿಡಿ ತೆರೆಸಿ, ಬಿಚ್ಚಿಸಬಹುದಾದ ಹೊರಕವಚವಿದು - ಸರಳ ಹೋಲಿಕೆಯಲ್ಲಿ ಕಡಲೆಕಾಯಿಯ ಕವಚ ತೆರೆಯುವಂತೆ (ಅಥವ ಬೇಯಿಸಿದ ಮೊಟ್ಟೆಯ ಕವಚ ತೆರೆದ ಹಾಗೆ ಅಂತಲು ಹೇಳಬಹುದು). ಕವಚದ ಒಳಗೆ ಕೂತ ಬಿಳಿ ಗೋಲಾಕಾರದ ತಿರುಳೆ ತಿನ್ನಲು ಬರುವ ಲೊಂಗನ್ ಹಣ್ಣು. ಹಣ್ಣಿನ ಮಧ್ಯದಲ್ಲಿ ಸಪೋಟ ಬೀಜದ ತರಹದ ಒಂದು ಕಪ್ಪು ಬೀಜವಿರುತ್ತದೆ, ಆದರೆ ತುಸು ದೊಡ್ಡ, ಗುಂಡಾದ ಗಾತ್ರದಲ್ಲಿ. ಅದು ಬಿಟ್ಟರೆ, ಮಿಕ್ಕೆಲ್ಲ (ಬಿಳಿ ಭಾಗ) ತಿನ್ನಲು ಯೋಗ್ಯವಾದ ರುಚಿಕರವಾದ ಭಾಗ. ಮೆಲುವಾದ ಸಿಹಿಯಲ್ಲಿ, ರಸಪೂರಿತವಾದ ಹಣ್ಣು ಕೆಲವು ಆರೋಗ್ಯಪೂರ್ಣ ಗುಣಗಳನ್ನು ಹೊಂದಿದೆಯಂತೆ. ಮರದಲಿ ದ್ರಾಕ್ಷಿಯ ಗೊಂಚಲಿನ ಹಾಗೆ ಬೆಳೆಯುವ ಈ ಹಣ್ಣು ಟಿವಿ ನೋಡುತ್ತಲೊ, ಏನಾದರು ಓದುತ್ತ ಕಾಲಹರಣ ಮಾಡುತ್ತ ಒಂದೊಂದೆ 'ಗುಳುಂ' ಎನಿಸಲು ಚೆನ್ನವಿರುತ್ತದೆ - ಆದರೆ ಸುಲಭದ ಕಬಳಿಸುವಿಕೆಗೆ ಮೊದಲೆ ಸಿಪ್ಪೆ ಬಿಡಿಸಿ, ಬೀಜ ತೆಗೆದು ಬಟ್ಟಲೊಂದರಲ್ಲೆತ್ತಿಟ್ಟುಕೊಂಡುಬಿಟ್ಟಿರೆ ಒಳಿತು! ಬೇರೆ ಹಣ್ಣುಗಳ ಜತೆ, ಈ ಹಣ್ಣಿನ ಚೂರನ್ನು ಸಲಾಡಿನ ತರದಲ್ಲಿ ಇಡುವುದನ್ನು ನಾನು ನೋಡಿದ್ದೇನೆ.
ಡಾಕ್ಟರ ಮರ್ಕೋಲ ಅವರ ಸೈಟಿನ ಮಾಹಿತಿಯ ಪ್ರಕಾರ (ಹೆಚ್ಚು ಮಾಹಿತಿಗೆ ಕೊಂಡಿಯನ್ನು ಗಿಂಡಿ http://articles.mercola.com/sites/articles/archive/2011/04/01/5-tropical-fruits-that-can-change-your-life.aspx) ಇದನ್ನು ಉಷ್ಣವಲಯ ದೇಶಗಳ ಐದು ಪ್ರಮುಖ ಹಣ್ಣುಗಳ ಪಟ್ಟಿಗೆ ಸೇರಿಸುತ್ತಾರೆ (ಉಳಿದ ನಾಲ್ಕೆಂದರೆ ತೆಂಗಿನ ಕಾಯಿ, ಮಾವಿನಹಣ್ಣು, ಮ್ಯಾಂಗೊಸ್ಟೀನ್ ಮತ್ತು ಅವೊಕಾಡೊ (ಬೆಣ್ಣೆಹಣ್ಣು)). ಚೀನಾ ಮೂಲದ ಈ ಹಣ್ಣನ್ನು, ಚೀನ ಮತ್ತು ವಿಯಟ್ನಾಮುಗಳಲ್ಲಿ ಔಷಧಿಯ ಹಾಗು ವಿಷ ಪರಿಹಾರಕದ ರೂಪದಲ್ಲಿ ಬಳಸುತ್ತಾರೆಂದು ಹೇಳುತ್ತಾರೆ. ಇದು ಒತ್ತಡ ಪರಿಹಾರಕ ಮತ್ತು ಆರಾಮದಾಯಿ ಗುಣಗಳ ತವರಂತೆ. ಇದರಲ್ಲಿ ಹೆಚ್ಚಿನ ಕಬ್ಬಿಣ, ಪೊಟಾಶಿಯಮ್ ಇರುವುದರ ಜತೆಗೆ ವಿಟಮಿನ್ ಏ ಮತ್ತು ಸೀ ಕೂಡ ಹೇರಳವಂತೆ. ಇದು ಕ್ಯಾನ್ಸರು ನಿರೋಧಕ ಮತ್ತು ಪಿತ್ತಜನಕಾಂಗದ ರಕ್ಷಕವೂ ಕೂಡಾ ಎನ್ನುತ್ತಾರೆ.


ಈ ಹಣ್ಣಿನ ಕುರಿತು 'ವಿಕ್ಕಿ' ಏನು ಹೇಳುತ್ತದೆ? (ಹೆಚ್ಚು ವಿವರಕ್ಕೆ ಕೊಂಡಿಯನ್ನು ಗಿಂಡಿ http://en.wikipedia.org/wiki/Longan)
'ಡಿಮೊಕಾರ್ಪಸ್ ಲೊಂಗನ್' ಅಥವ ಬರಿ 'ಲೊಂಗನ್' ಹೆಸರಿನಿಂದ ಕರೆಯಲ್ಪಡುವ ಈ ಮರವನ್ನು 'ಲೈಚಿ' ಹಣ್ಣಿನದೆ ಆದ 'ಸೋಪ್ ಬೆರ್ರಿ' ಗುಂಪಿಗೆ ಸೇರಿಸುತ್ತಾರೆ - ಬಹುಶಃ, ಒಳಗಿನ ಜಾರುವ, ಮೃದುವಾದ ತಿರುಳಿನ ಕಾರಣದಿಂದಲೊ ಏನೊ. ಈ ಮರ ದಕ್ಷಿಣ ಏಶಿಯ ಮತ್ತು ಆಗ್ನೇಯ ಏಶಿಯದಲ್ಲಿ ಬೆಳೆಯುತ್ತದೆಂದು ವಿಕ್ಕಿ ಹೇಳುತ್ತದೆ - ಅಂದರೆ ಭಾರತದಲ್ಲು ಎಲ್ಲೊ ಕೆಲವು ಕಡೆ ಬೆಳೆಯಬಹುದೆಂದು ಕಾಣುತ್ತದೆ, ಬಹುಶಃ ಬೇರೆಯ ಹೆಸರಿರಬಹುದು. ಈ ಕೆಳಗಿನ ಮೂಲದ ಪ್ರಕಾರ ಈ ಹಣ್ಣು ಬರಿ ಚೀನ ಮೂಲ ಮಾತ್ರವಲ್ಲ ಭಾರತದ್ದು ಕೂಡಾ ಆಗಿರಬೇಕು (ಅಸ್ಸಾಂ ಸುತ್ತ ಮುತ್ತಲ ಪ್ರಾಂತ್ಯದಲ್ಲಿ). ಕೆಳಗಿನ ಮಾಹಿತಿ ಗಮನಿಸಿ, ಮತ್ತು ಹೆಚ್ಚು ವಿವರಣೆಗೆ ಕೊಂಡಿಯನ್ನು ಗಿಂಡಿ (http://www.hort.purdue.edu/newcrop/morton/longan.html)
" Groff says that the longan was introduced into India in 1798 but, in Indian literature, it is averred that the longan is native not only to China but also to southwestern India and the forests of upper Assam and the Garo hills, and is cultivated in Bengal and elsewhere as an ornamental and shade tree. It is commonly grown in former Indochina (Thailand, Cambodia, Laos and Vietnam and in Taiwan). The tree grows but does not fruit in Malaya and the Philippines. There are many of the trees in Reúnion and Mauritius."
ಇನ್ನು ಇದರ ಹೆಸರಿನ ಮೂಲದ ಕುರಿತು : ಲೊಂಗನ್ ಎನ್ನುವ ಹೆಸರು ಚೀನಿ ಮೂಲದ್ದು. 龍眼 'ಲೊಂಗ್' ಮತ್ತು 'ಯನ್' ಎಂಬ ಎರಡು ಚೀನಿ ಪದಗಳ ಸಂಗಮ ರೂಪ. ಇದರರ್ಥ "ಡ್ರಾಗನ್ನಿನ ಕಣ್ಣು" ಎಂದು. ಇದರ ಸಿಪ್ಪೆಯನ್ನು ಅರೆ ಸಿಡಿಸಿ ತೆರೆದಾಗ ಇದು ಕಣ್ಣಿನ ಹಾಗೆಯೆ ಕಾಣುವುದರಿಂದ ಈ ಹೆಸರು - ಅದರಲ್ಲು ಒಳಗಿನ ತಿರುಳ ಬಿಳಿ ಹಣ್ಣಿನ ಅರೆ-ಪಾರದರ್ಶಕತೆಯಿಂದಾಗಿ, ಮಧ್ಯದಲ್ಲಡಗಿದ ಗುಂಡನೆಯ ಕಪ್ಪು ಬೀಜವು ಕಣ್ಣಿನ ಪಾಪೆಯ ಹಾಗೆ ಕಾಣುವುದರಿಂದ. ಕವಚದ ಒಳಗಿನ ತೇವಾಂಶ ಕಡಿಮೆಯಿದ್ದರೆ, ಸೂರ್ಯಕಾಂತಿ ಬೀಜ ಬಿಡಿಸುವಂತೆ ಸುಲಭವಾಗಿ ಬಿಚ್ಚಿಕೊಳ್ಳುವ ಈ ಹಣ್ಣು, ಅದೆ ಹೆಚ್ಚು ತೇವಾಂಶವಿದ್ದರೆ ಕೊಂಚ ಸತಾಯಿಸುತ್ತದೆ. ಆದರೆ ಕವಚ ಬಿಚ್ಚಿತೆಂದರೆ - 'ಕೊಂದ ಪಾಪ ತಿಂದು ಪರಿಹಾರ' ಅಂದುಕೊಂಡು ಸವಿಯಬಹುದು.
ಕೊನೆಗೊಂದು ಚಿತ್ರದ ತುಣುಕಿಗೆ ಈ ಕೆಳಗಿನ ಕೊಂಡಿಯನ್ನು ಗಿಂಡಿ: (ಚಿತ್ರ ಕೃಪೆ: ಇದೆ ಕೊಂಡಿಗೆ ಸಲ್ಲುತ್ತದೆ)
http://passionateeater.blogspot.sg/2009/02/longans-dragon-eyes.html
- ನಾಗೇಶ ಮೈಸೂರು, ಸಿಂಗಪುರದಿಂದ, 25.04.2013
 
 

Comments

Submitted by nageshamysore Sun, 05/26/2013 - 16:43

ಗಣೇಶ್ ಜಿ, ನಿಮ್ಮ ಪಾನೀಯದ ಲೇಖನದಲ್ಲಿನ ನಿಮ್ಮ ಆದೇಶದಂತೆ ( ಹಿಂದೆ ರೇಡಿಯೊದಲ್ಲಿ 'ಕೇಳುಗರ ಕೋರಿಕೆ' ಬರುತ್ತಿತ್ತಲ್ಲ ಹಾಗೆ, ಇದನ್ನು 'ಓದುಗರ ಬಯಕೆ' ಅನ್ನಬಹುದಾ?), ಸಿಂಗಪುರದಲ್ಲಿ ಸಿಕ್ಕುವ ಒಂದು ಹಣ್ಣಿನ ಹೆಡೆಮುರಿ ಕಟ್ಟಿ ತಂದು ಸಂಪದಿಗರ ಮುಂದೆ ನಿಲ್ಲಿಸಿದ್ದೇನೆ. ಅಪ್ಪಿ ತಪ್ಪಿ ಈ ಹಣ್ಣೇನಾದರೂ ಅಲ್ಲಿ ಸಿಕ್ಕಿದರೆ ನೀವೂ ಈ 'ಡ್ರಾಗನ್ ಕಣ್ಣ'ನ್ನು ಒಂದು ಕೈ ನೋಡೆ ಬಿಡಬಹುದು. ಬಿಲ್ಕುಲ್ ಸಿಗಲಿಲ್ಲ ಅನ್ನುವುದಾದರೆ, ಕನಿಷ್ಟ ಇದರ ಹತ್ತಿರದ ನೆಂಟ, 'ಲೈಚಿ' ಹಣ್ಣು ಸಿಕ್ಕಿದರು ಸಾಕು, 'ಲೊಂಗನ್ನಿನ ಹಾಗೆ ಇದೆ' ಅಂದುಕೊಂಡು ಸವಿಯಬಹುದು! - ನಾಗೇಶ ಮೈಸೂರು, ಸಿಂಗಪುರದಿಂದ
Submitted by ಗಣೇಶ Sun, 05/26/2013 - 23:41

In reply to by nageshamysore

ನಾಗೇಶ್ ಅವರೆ, ನನ್ನ ಕೋರಿಕೆಯನ್ನು ಇಷ್ಟು ಬೇಗ ಮನ್ನಿಸಿದಕ್ಕೆ ಧನ್ಯವಾದಗಳು. ಹಣ್ಣಿನ ಬಗ್ಗೆ ಕೊಂಡಿಗಳ ಸಹಿತ ವಿವರವಾಗಿ ತಿಳಿಸಿದಕ್ಕೆ ಧನ್ಯವಾದಗಳು. ಈ ಹಣ್ಣು ನನಗೆ ಬಹಳ ಇಷ್ಟ. ಈ ಹಣ್ಣಿಗಾಗೇ ಮಲ್ಲೇಶ್ವರದ ೮ನೇ ಕ್ರಾಸ್‌‌ಗೆ ಹೋಗುವೆನು. ಲೀಚಿ ಹಣ್ಣಿಗಾಗಿ ಒಮ್ಮೆ ಹೋದಾಗ ಇದು ಕಂಡಿತು. ಮೊದಲ ಬಾರಿ ಈ ಹಣ್ಣಿನ ಗೊಂಚಲನ್ನು ನೋಡಿದಾಗ ಯಾವುದೋ ಕಾಯಿ ಇರಬೇಕು, ಹಣ್ಣಾದ ಮೇಲೆ ತೆಗೆದುಕೊಳ್ಳುವೆ ಅಂದರೂ ರಸ್ತೆ ಬದಿ ಮಾರಾಟಗಾರ ಒತ್ತಾಯಿಸಿದಾಗ ತೆಗೆದುಕೊಂಡು ತಿಂದೆ. ಅಲ್ಲಿಗೆ ಈ ಹಣ್ಣಿಗೆ ನಾನು ಫಿದಾ ಆದೆ. ಇದರ ರುಚಿ ಎದುರಿಗೆ ಲೀಚಿ ಏನೂ ಇಲ್ಲ. "ಡ್ರಾಗನ್ ಕಣ್ಣು" -ಒಳ್ಳೆಯ ಹೆಸರು:)
Submitted by makara Sun, 05/26/2013 - 19:36

ಸಂಜೆ ಸಂಪದದೊಳಗೆ ಲಾಗ್-ಆನ್ ಆದ ಕೂಡಲೇ ಕಣ್ಣಿಗೆ ಬಿದ್ದದ್ದು ಈ ಡ್ರಾಗನ್ ಕಣ್ಣು. ಒಂದು ಹೊಸ ಹಣ್ಣನ್ನು ಸಂಪದಿಗರಿಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು, ನಾಗೇಶರೆ. ಚಿತ್ರವನ್ನೂ ನೇರವಾಗಿ ಬರಹದಲ್ಲಿ ಸೇರಿಸಿದ್ದರೆ ಚೆನ್ನಾಗಿತ್ತು. ನಿಮ್ಮ ಕೊಂಡಿಯನ್ನು ಗಿಂಡಿ ಹಣ್ಣು ಹಿಂಡುವುದನ್ನು ನೋಡುವ ಪ್ರಮೇಯವಿರುತ್ತಿರಲಿಲ್ಲ :))
Submitted by nageshamysore Sun, 05/26/2013 - 19:48

In reply to by makara

ಶ್ರೀಧರರೆ, ಸಂಪದಕ್ಕನಿಗೆ ನನ್ನ ಐಪ್ಯಾಡಿನ / ಐಫೋನಿನ ಮೇಲೆ ಮುನಿಸು. ಇವೆರಡರಲ್ಲೂ ಚಿತ್ರ ಸೇರಿಸುವ ಗುಂಡಿಯೆ ನಿಷ್ಕ್ರೀಯವಾಗಿ ಹೋಗುವ ಕಾರಣ, ವಿಧಿಯಿಲ್ಲದೆ ಕೊಂಡಿಯನ್ನು ಗಿಂಡುವ ದಾರಿ ಹಿಡಿಯಬೇಕಾಗಿದೆ (ಬರಿ ಅಪ್ಲೋಡು ಗುಂಡಿ ಸಕ್ರಿಯ, ಆದರೆ 'ಬ್ರೌಸ್ ಗುಂಡಿ ನಿಷ್ಕ್ರೀಯ - ಚಿತ್ರಗಳು ನನ್ನಲ್ಲೆ ಇದ್ದರು ಹಾಕಲಾಗದ ಅಸಹಾಯಕತೆ - ಸಮುದ್ರದ ಜತೆ ನೆಂಟಸ್ತನ, ಉಪ್ಪಿಗೆ ಬಡತನ ಅನ್ನುವ ಹಾಗೆ!). ಇದಕ್ಕೇನಾದರೂ ಪರಿಹಾರ ಸಿಕ್ಕಿದರೆ ಚಿತ್ರ ಸೇರಿಸಲು ನಾನಂತು ಸಿದ್ದ!  - ನಾಗೇಶ ಮೈಸೂರು, ಸಿಂಗಪುರದಿಂದ
Submitted by venkatb83 Mon, 05/27/2013 - 16:30

ನೀವ್ ಕೊಟ್ಟ ಲಿಂಕ್ ನಲ್ಲಿ(http://passionateea…) ಮೊದಲು ಇರೋದು ಈ ವಿಚಿತ್ರ ಭಯ ಬೀಳಿಸುವ ಹೆಸರು ಕೇಳಿ ನೋಡಿ ಓದಿ ಈ ಹಣ್ಣು ಹೇಗೋ ಏನೋ ಎಂದು ತಿನ್ನದೇ ಇರಬೇಡಿ ಎಂದು ...!! ಹೆಸರಲ್ಲೇನಿದೆ ? ಎಲ್ಲ ಇದೆ ...!! ಈ ಹಣ್ಣು ತೆರೆದಾಗ ಒಳಗೆ ಕಾಣಿಸುವ ಕಪ್ಪು ಬೀ.. ಕಂಡಾಗ ನಮಮ್ದೆ ಕಣ್ಣು ನೆನಪಾಯ್ತು ಥೇಟ್ ಹಾಗೆಯೇ..!! ಇದೆ ರೀತಿಯ ಆದರೆ ಅರ್ಧ ಮುಷ್ಟಿ ಗಾತ್ರದ ಹಣ್ಣುಗಳು ಬೇಸಗೆಯಲ್ಲಿ ನಮಮ್ ಕಡೆ ಸಿಗ್ತವೆ ಅವುಗಳ ಹೆಸರು ನೆನಪಾಗ್ತಿಲ್ಲ -ತಿಂದರೆ ಸಿಹಿ ಕೊಬ್ಬರಿ ತಿಂದ ಹಾಗೆ -ಆದ್ರೆ ಅದರ ಸ್ವಲ್ಪ ಅಗಲ ... ಆ ಹಣ್ಣಿನ ಬಗ್ಗೆ ಬಹುಶ ಶ್ರೀಧರ್ ಜೀ ಏನಾರ ಹೇಳಿಯಾರು ... ಉತ್ತಮ ಮಾಹಿತಿ ..ಏಏ ಹಣ್ಣು ಬೆಂಗಳೂರಲ್ಲೂ ಸಿಗುತ್ತೆ ಅಂತ ಗಣೇಶ್ ಅಣ್ಣ ಅವರು ಹೇಳಿದ ಮೇಲೆ ಗೊತಾಯ್ತು .... ಅವ್ರು ಮತ್ತು ಆ ಹನ್ನಿಗಗೈ ಮಲಮಲ್ಲೇಶ್ವರ ೮ ನೆ ಕ್ರಾಸ್ ಹತ್ರ ನಮ್ಮ ನಾಕಾ ಬಂಧಿ ...!! ಶುಭವಾಗಲಿ .. \।/
Submitted by makara Mon, 05/27/2013 - 17:39

In reply to by venkatb83

ಸಪ್ತಗಿರಿಗಳೇ ನೀವು ಹೇಳುವ ಬಿಳಿ ತಿರುಳು ಇರುವ ಹಣ್ಣೆಂದರೆ ತಾಳಿ ಕೊಬ್ಬರಿ ಅಥವಾ ತಾಟಿ ನುಂಗು ಇರಬೇಕು. ಇದು ತಾಳೇ ಗಿಡದ ಬಲಿಯದ ಕಾಯಿಯೊಳಗೆ ಇರುವ ಪೂರ್ತಿ ಗಟ್ಟಿಯಾಗಿ ಇರದ ಕೊಬ್ಬರಿ. ಇದು ಹೈದರಾಬಾದಿನಲ್ಲಿ ಕೂಡಾ ಮಾರಾಟಕ್ಕೆ ಸಿಗುತ್ತದೆ. ಆದರೆ ಅದರೊಳಗೆ ಯಾವುದೇ ಬೀಜ ಇರುವುದಿಲ್ಲ.
Submitted by nageshamysore Mon, 05/27/2013 - 18:23

In reply to by makara

ಸಪ್ತಗಿರಿಯವರೆ, ಶ್ರೀಧರರವರೆ,ಇಲ್ಲಿ ಸಿಂಗಪುರದಲ್ಲು ಈ ತಾಟಿನಿಂಗು ಸಿಗುತ್ತದೆ, ಥೈಲ್ಯಂಡಿನಲ್ಲಿ ಹೆಚ್ಚು ಕಾಣುತ್ತದೆ. 'ಸೀ ಕೊಕನಟ್' ಅನ್ನೊ ಹೆಸರಿನಲ್ಲಿ ಕರೆದ ಹಾಗೆ ನೆನಪು...- ನಾಗೇಶ ಮೈಸೂರು, ಸಿಂಗಪುರದಿಂದ
Submitted by ಗಣೇಶ Sat, 06/01/2013 - 00:42

In reply to by venkatb83

>>>ಮಲ್ಲೇಶ್ವರ ೮ ನೆ ಕ್ರಾಸ್ ಹತ್ರ ನಮ್ಮ ನಾಕಾ ಬಂಧಿ ...!!:) -ಸಪ್ತಗಿರಿವಾಸಿಯವರೆ, ನನ್ನ ಕ್ಯಾಂಪ್ ಈಗ ಶಿಫ್ಟ್ ಆಗಿದೆ- ಮಾವು ಮೇಳ ಮುಗಿಯುವವರೆಗೆ- ಲಾಲ್ ಬಾಗ್‌:)
Submitted by smitha melkote Thu, 05/30/2013 - 04:34

A very good information on this fruit. Thanks Smitha Melkote
Submitted by nageshamysore Thu, 05/30/2013 - 04:55

In reply to by smitha melkote

ಸ್ಮಿತಾರವರೆ, ನಿಮಗಿಷ್ಟವಾದ ದೋಸೆಯ ಜತೆ ಈ ಹಣ್ಣಿನ ಜಾಮೊ, ಸಾಸೊ ತಿಂದರೆ ಚೆನ್ನಾಗಿರುತ್ತದೆಂದು ಕಾಣುತ್ತದೆ, ಪ್ರಯತ್ನಿಸಿ ನೋಡಿ - ಪ್ರತಿಕ್ರಿಯೆಗೆ ಧನ್ಯವಾದಗಳು! ನಾಗೇಶ ಮೈಸೂರು, ಸಿಂಗಪುರದಿಂದ