ಬೈಗುಳಾಯಣ

ಬೈಗುಳಾಯಣ

ಇತ್ತೀಚೆಗೆ ಮೈಸೂರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಚನ್ನಪಟ್ಟಣದ ಬಳಿ ಸೈಕಲಿನಲ್ಲಿ ಎಳನೀರು ಮಾರುವವನ ಕಂಡು ಕಾರು ನಿಲ್ಲಿಸಿದೆವು. ಕಾಯಿ ಕೊಚ್ಚಲು ಆತ ಶುರುಮಾಡಿದಂತೆ  ಒಬ್ಬ ಚಿಕ್ಕ ಹುಡುಗ ಅವನ ಪಕ್ಕ ಬಂದು ನಿಂತ. ದೂರ ಸರೀಲೇ, ಕತ್ತೆ ಮಗನೆ ಎಂದು ಎಳನೀರು ಮಾರುವ ಕಿರುಚಿದ. ಪಾಪದ್ದು,  ಪುಟ್ಟ ಪೆಚ್ಚಾಗಿ ಅತ್ತ ಓಡಿತು. ಯಾಕಪ್ಪಾ ಸಿಡುಕ್ತೀಯಾ ಎಂದ ನನ್ನ ಮಾತಿಗೆ ನನ್ನ ಮಗ ಕಣಮ್ಮಿ, ಇಂಗ್ಲೀಷ್ ಮೀಡಿಯಮ್‍ಗೆ ಹಾಕಿವ್ನಿ ಎಂದು ಎಳನೀರು ಕೊಡುತ್ತಾ ಹೇಳಿದನವ.


ಎಳನೀರು ಕುಡಿದು ಕಾಸನ್ನು ಕೊಡುತ್ತಾ "ಕತ್ತೆ ಮಗ" ಎಂದು ಆ ಮಗುನ ಬೈದೆ ಅಲ್ವಾಪ್ಪ,  ಹಾಗಾದ್ರೆ ನೀನು ಕತ್ತೆ ಆದ ಹಾಗಾಯಿತು ಎಂದ ನನ್ನ ಮಾತಿಗೆ ಜೋರಾಗಿ ನಗುತ್ತಾ "ಹೌದಲ್ಲವ್ರಾ, ಇನ್ಮ್ಯಾಕೆ ಬೈಯೋಕ್ಕೆ ಮೊದಲು ಯೋಚಿಸ್ತೀವ್ನಿ ಎಂದು ಚಿಲ್ಲರೆ ಕೈಗಿತ್ತ.


ಚಿಕ್ಕಂದಿನಲ್ಲಿ "ಕತ್ತೇನ್ ತಂದು" ಇದು ನಮ್ಮಮ್ಮ ಇಷ್ಟವಾದ ಬೈಗುಳ ಮಂತ್ರ- ಅದ್ಯಾಕೆ ಕತ್ತೇನ ತರಬೇಕು ಎಂದು ನಾನು ಕೇಳಲಿಲ್ಲ.  "ಪಿಶಾಚಿ" ಇದು ನನ್ನ ಮಗನಿಗೆ ನಾ ಬೈಯುವ ಪದ- ನೀನ್ ಪೀಶಾಚಿ ನೋಡಿದೀಯ ಇಂದು ಇಂದಿನವರೆಗೂ ಸಧ್ಯ ನನ್ನ ಮಗರಾಯ ನನ್ನನ್ನು ಕೇಳಿಲ್ಲ. ಪುಣ್ಯ ಮಾಡಿದ್ದೆ.


ಕಾರು ಮುನ್ನಡೆದಂತೆ ಬೈಗುಳದ ಬಗ್ಗೆ ಗೀಚಲು ಶುರು ಮಾಡಿದೆ....ಇದೋ ಅದೇ ಬೈಗುಳಾಯಣ...


ಕೆಲವರ ಹಿಂದು ಬಾಯಲ್ಲಿ ನಿರರ್ಗಳವಾಗಿ ಬೈಗುಳ ಮಂತೋಚ್ಛಾರಣೆ ಸದಾ ನಡೆಯುತ್ತಲೇ ಇರುತ್ತದೆ. ಅದೂ ಬೋ, ಸೋ, ಸು ಅಲ್ಲದೇ ಇನ್ನೊ ಅನೇಕಾನೇಕ ಅವ್ಯಾಚ ಶಬ್ದಗಳು ಕೇಳಿದಾಗ ಕೆಲವೊಮ್ಮೆ ನಮಗೇ ಕಿವಿ ಮುಚ್ಚಿಕೊಳ್ಳಬೇಕು ಎನಿಸುತ್ತೆ. ಮು-, ಬೊ-, ಸೂ- ಮಗನೆ ಎಂದು ಯಾರಾದರೂ ಬೈದದ್ದು ಕೇಳಿದಾಗ ಖಂಡಿತವಾಗಿ ಅನಿಸುತ್ತೆ ಓರ್ವ ತಾಯಿಯನ್ನು ಬಯ್ಯುತ್ತಾರಲ್ಲಾ ಎಂದು ಮನ ಮರುಗುತ್ತೆ.  ತಾಯಿನ ಆ ಮಾತು ಬೈಯೋಕೆ ನಮ್ಮ ಯೋಗ್ಯತೆ ಏನು ಎಂದು ಒಮ್ಮೆಯಾದ್ರೂ ಯೋಚಿಸಿದೀರೇನು?


ಥೂ ನಿನ್ನ, ಥೂ ಶನಿಯೆ (ಶನಿದೇವರ ಹೆದರಿಕೆಯೇ ಇಲ್ಲದೆ), ಕತ್ತೆ ಮಗನೆ ಇದು ಬಲು ಕಾಮನ್. ಕೋತಿ, ಕತ್ತೆ, ಗೂಬೆಗಳ ಮುಂದೆ ಮುಂಡೆ ಸೇರಿಸಿ ಬೈಯುವುದು ಇನ್ನೂ ಕೆಲವರ ಪರಿಪಾಠ. ಅದು ಹ್ಯಾಗ್ರಿ ಕೋತಿನೂ, ಗೂಬೇನೂ ಮುಂಡೆ ಆಗೋಕ್ಕೆ ಸಾಧ್ಯ. ಪೆದ್ ನನ್ಮಗ, ಗೂಬೆ ನನ್ಮಗ ಎಂದು ಬೈದಾಗ ಪೆದ್ದು, ಗೂಬೆ ಎಂದು ನಮ್ಮನ್ನೇ ಬೈದುಕೊಂಡಂತೆ ಆಗಲಿಲ್ಲವೇ?


ನಮ್ಮ ಬೈಗುಳಕ್ಕೆ ’ಕೋತಿ", "ಕತ್ತೆ", ಗೂಬೆಗಳು ಹ್ಯಾಗೆ ಸಿಲುಕಿತೋ ದೇವನೇ ಬಲ್ಲ. ಅನೇಕ ಪಕ್ಷಿಗಳನ್ನು ಹುಡುಗಿಯರ ವರ್ಣಿಸಲು ಬಳಸುತ್ತಾರೆ ಅದ್ಯಾಕೆ "ಗೂಬೆ" ಯ ಮುಂದೆ ಪೆದ್ದು, ಮುಂಡೆ ಅಂಟಿತೋ. ಹಿಂದಿಯಲ್ಲಿ "ಸ್ಸಾಲ" (ಭಾವ ಮೈದುನನಿಗೂ ಸ್ಸಾಲ ಎನ್ನುತ್ತರೆ) ಅಥವಾ "ಉಲ್ಲೂಕ ಪಟ್ಟ"  ಬಲು ಕಾಮನ್. ಇನ್ನೊಂದು ನೋವಿನ ಸಂಗತಿ-ಅತಿ ಹೆಚ್ಚು ಬಳಕೆಯಾಗುವ ಪದ "ಗಾಂಧಿ". ಅದ್ಯಾಕೆ "ಗಾಂಧಿ" ಪದ ಕೆಟ್ಟ ಅರ್ಥದಲ್ಲಿ ? ಬಲ್ಲವನೇ ಬಲ್ಲ. ಥರ್ಡ್‍ಕ್ಲಾಸ್ ಅದು ಗಾಂಧಿ ಕ್ಲಾಸ್ ಎಂದರ್ಥ.


ಪಿಟೀಲು, ಕೊರಿಯೋದು, ಕುಯ್ಯೋದು...


ಸೊಳ್ಳೆ ಕಚ್ಚಿದಾಗ ಕೆರೆಯುವುದಕ್ಕೆ ಇದು ಸಾಮಾನ್ಯವಾಗಿ ಬಳಸುವ ಪದ. ಆದರೆ ಸುಮ್ಮನೆ ಮಾತನಾಡುತ್ತಲೇ ಇರುವವರನ್ನು, ಹೊಗಳು ಭಟ್ಟರನ್ನು, ಸದಾ ಸುಳ್ಳು ಹೇಳುವವರನ್ನು, ಬೋರ್ ಆಗುವಂತೆ ಪಾಠ ಮಾಡುವ ಶಿಕ್ಷಕರಿಗೆ ಬಳಸುವ ಪದ "ಅಯ್ಯೋ, ಪಿಟೀಲು ನುಡಿಸ್ತಾನೆ, ಥು ಸುಮ್ಮನೆ ಲೆಕ್ಚರ್ ಕೊಡ್ತಾನೆ" ಅಥವಾ ಇನ್ನೂ ಸ್ವಲ್ಪ ಮರ್ಯಾದೆಯಿಂದ ಪಿಟೀಲು ರಾಜ- ಪಿಟೀಲು ರಾಣಿ.


ಅಶ್ವಮೇಧ, ‍ ಎಣ್ಣೆ


ರೇಸಿಗೆ ಹಣ ಹಾಕುವುದು, ರೇಸಾಟ ಆಡುವುದು ಇದಕ್ಕೆ ಅಶ್ವಮೇಧಯಾಗ ಎಂದಾದಲ್ಲಿ ಇಸ್ಪೀಟು ಆಡುವವರಿಗೆ "ಎಲೆ ಹಾಕೋಕ್ಕೆ ಹೋಗಿದಾನೆ". ಕುಡಿಯುವುದಕ್ಕೆ ಹೋಗುವವರಿಗೆ "ಎಣ್ಣೆ ಹಾಕೋಕ್ಕೆ ಹೋಗಿದಾನೆ" ಅಥವಾ ಪೆಟ್ರೋಲ್ ತುಂಬಿಸ್ತಾವ್ನೆ.


ಇನ್ನು ಹೊರದೇಶದಲ್ಲಿ ಮಕ್ಕಳ ಬಾಯಲ್ಲಿ ಮೊದಲು ಬರುವ ಶಬ್ದ "ಶಿಟ್" ಅದು ಎಲ್ಲಕ್ಕೂ ಬಳಕೆಯಾಗುತ್ತೆ.


ಇವೆಲ್ಲಾ ಹೇಗೆ ಬಂತು, ಯಾಕೆ ಬಂತು ಎಂದು ಹೇಳಲು ಆಗುವುದಿಲ್ಲ, ಮೂಲ ಹುಡುಕುವ ಗೋಜಿಗೂಇಲ್ಲ. ಇಷ್ಟರಲ್ಲಿ ಬಂದೇ ಬಿಡ್ತು ನನ್ನೂರು-ಮೈಸೂರು. ಅನಿಸಿದ್ದು ಲೋಕದ ಡೊಂಕ -....ಸಧ್ಯ ನಮ್ಮ ಬಾಯಲ್ಲಿ ನುಸುಳದಿದ್ದಲ್ಲಿ ಸಾಕು. ಇಂದಿನಿಂದ ನನ್ನ ಹೊಸ ರೂಲ್ಸ್ ಬೈಯ್ಯುವ ಮುನ್ನ ಯೋಚಿಸಬೇಕು?


 

Comments

Submitted by nageshamysore Mon, 05/27/2013 - 17:12

ವಾಣಿಯವರೆ ನಮಸ್ಕಾರ, ಒಟ್ಟಾರೆ 'ಬೈದ್ರೂ ಎಷ್ಟು ಕಲಾತ್ಮಕವಾಗಿ ಬೈಯ್ತಾನೆ ನೋಡ್ರಿ' - ಅಂತ ಮೆಚ್ಚೊ ಹಾಗೆ ಬೈಯೋದು ಕಲ್ತೋಬೇಕೂಂತಾಯ್ತು! ಹಾಳಾದ್ದು ಬೈಯೊದಕ್ಕೆ ಸೆನ್ಸಾರ್ಶಿಪ್ಪು ಅದರೆ ಅದರ ಗಮ್ಮತ್ತೆ ಹೊರಟೋಗಲ್ವ, ಸಪ್ಪೆಯಾಗೋಗಲ್ವ ಅಂತ ಕೆಲವರು ಬೇಜಾರು ಮಾಡ್ಕೊಂಡ್ರೂ, ಬೈಗುಳದ 'ಅಫ್ಟರ ಎಫೆಕ್ಟ್' ನೆನೆಸಿಕೊಂಡ್ರೆ, ನಿಮ್ಮ ಪಾಲಿಸೀನೆ ಒಳ್ಳೇದೂನ್ಸುತ್ತೆ! - ನಾಗೇಶ ಮೈಸೂರು, ಸಿಂಗಪೂರದಿಂದ
Submitted by ramvani Tue, 05/28/2013 - 04:07

In reply to by nageshamysore

ನಮಸ್ಕಾರ ನಾಗೇಶ್, ಬೈಯುವ ಗಮ್ಮತ್ತು ಇರೋದಿಲ್ಲ ನಿಜ, ಕಲಾತ್ಮಕವಾಗಿ ಬೈಯುವ ಕಲೆಯನ್ನು ಮಾಸ್ಟರ್ ಹಿರಣ್ಣಯ್ಯನವರಿಗೆ ಕೊಟ್ಟಿದ್ದಾನೆ. ಅದು ಖಂಡಿತವಾಗಿ ನನ್ನ ನಿಮ್ಮಂತವರಿಗೆ ಬರುವುದಿಲ್ಲ. ಅದಕ್ಕೆ ಪಾಲಿಸಿ ಹಿಡಿದದ್ದು. ಧನ್ಯವಾದಗಳು, ವಾಣಿ
Submitted by makara Mon, 05/27/2013 - 22:48

ವಾಣಿಯವರೆ, ಉತ್ತರ ಕರ್ನಾಟಕದಲ್ಲಿ ಅದರಲ್ಲೂ ವಿಶೇಷವಾಗಿ ಬಿಜಾಪುರ ಜಿಲ್ಲೆಯಲ್ಲಿ ಜನ ಒಬ್ಬರನ್ನೊಬ್ವರು ಮೆಚ್ಚಿಕೊಂಡರೂ ’ಎನ್ಲೇ ನಿನ್ನವ್ನ” ಅಂತಾರೆ ಒಬ್ಬನ ಬಗ್ಗೆ ಸಿಟ್ಟಿಗೆದ್ದರೂ ಸಹ ’ಯಾಕ್ಲೇ ನಿನ್ನವ್ನ’ ಎನ್ನುತ್ತಾರೆ. ಹೀಗೆ ’ನಿನ್ನವ್ನ’ ಎನ್ನುವುದು ಒಂದು ಬಹುಪಯೋಗಿ ಪದ; ಇಲ್ಲಿ ಸಂದರ್ಭಕ್ಕನುಸಾರವಾಗಿ ಅರ್ಥ ವ್ಯತ್ಯಾಸವಾಗುತ್ತದೆ. ಇದರ ಹಿಂದಿರುವ ಭಾವ ಮುಖ್ಯವೇ ಹೊರತು ಶಬ್ದಶಃ ಅರ್ಥವಲ್ಲ; ಆದ್ದರಿಂದ ಇಲ್ಲಿ ಯಾರೂ ಒಬ್ಬರನ್ನೊಬ್ಬರು ತಪ್ಪು ತಿಳಿಯುವ ಪ್ರಶ್ನೆ ಬರುವುದಿಲ್ಲ. ಬಳ್ಳಾರಿ, ರಾಯಚೂರು, ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಸಹ, ಆ ಸೂ..ಮಗ ಎಂತಾ ಕೆಲಸ ಮಾಡಿದ ಅಂತಾ ಬೈಯ್ಯುತ್ತಾರೆ ಅದೇ ರೀತಿ ಒಳ್ಳೆಯ ಕೆಲಸ ಮಾಡಿದಾಗಲೂ ಆ ಸೂ..ಮಗ ಚೊಲೋ ಕೆಲ್ಸಾ ಮಾಡ್ಯಾನ ಅಂತಾ ಪ್ರಶಂಸಿಸುತ್ತಾರೆ! :)) ಇದರ ಬಗೆಗೆ ಹೆಚ್ಚಿನ ವಿವರಗಳು ಬೇಕಾದರೆ ಗಂಗಾವತಿ ಪ್ರಾಣೇಶ್ ಅವರ ಯಾವುದಾದರೂ ಹಾಸ್ಯ ಧಾರೆಯ ಕಾರ್ಯಕ್ರಮಗಳನ್ನು ನೋಡಿ. ಅವರ ಕೆಲವೊಂದು ಕಾರ್ಯಕ್ರಮಗಳು ಯೂ-ಟ್ಯೂಬಿನಲ್ಲಿಯೂ ಲಭ್ಯ.
Submitted by ramvani Tue, 05/28/2013 - 04:11

In reply to by makara

ಅಹುದು, ನೆನಪಿಗೆ ಬಂತು, ಕೆಲವೊಂದು ವರುಷ ದಾವಣಗೆರೆಯಲ್ಲಿದ್ದೆವು ಅಲ್ಲಿ "ಮಂಗ್ಯಾನ ಮಗನೆ" . ಸಂಧರ್ಭಕ್ಕೆ ತಕ್ಕಂತೆ ಆಡುವ ಅಭ್ಯಾಸಬಲದ ಆಡುಭಾಷೆಗಳು. ವಂದನೆಗಳು, ವಾಣಿ.
Submitted by partha1059 Tue, 05/28/2013 - 07:58

ಹಾಗೆ ಈ ಟೀವಿಯಲ್ಲಿನ ಬಿಗ್ ಬಾಸ್ ನೋಡಿ ಹೊಸಪದಗಳನ್ನು ನಿಮ್ಮ ಬರಹದ ಪಟ್ಟಿಗೆ ಸೇರಿಸಬಹುದು "ಮುಂ...ಮೋಚಿತು" (I dont care ಅನ್ನುವ ಅರ್ಥಕ್ಕೆ ಸಮೀಪ)
Submitted by hema hebbagodi Tue, 05/28/2013 - 12:46

ಬರಹ ಚೆನ್ನಾಗಿದೆ. ಬೈಗುಳಗಳನ್ನು ತಮಾಷೆಯಾಗಿ ನೋಡುವುದರ ಜೊತೆಗೆ ಸ್ವಲ್ಪ ಗಂಭೀರವಾಗಿ ನೋಡುತ್ತಾ ಹೋದರೆ ಅದೊಂದು ಸಮಾಜಶಾಸ್ತ್ರೀಯ ಅಧ್ಯಯನ ಸಹ ಆಗುತ್ತದೆ. ಹಿಂದೊಮ್ಮೆ ಲೈಬ್ರರಿಯಲ್ಲಿ 'ಬೈಗುಳಗಳ ಬಗ್ಗೆ ಒಂದು ಸಂಶೋಧನ ಪ್ರಬಂಧವನ್ನು ನೋಡಿದ್ದೆ'. ಪೂರ್ತಿ ಓದಲಾಗಲಿಲ್ಲ. ಆದರೆ ಕುತೂಹಲಕಾರಿಯಾಗಿತ್ತು.
Submitted by ramvani Tue, 05/28/2013 - 15:21

In reply to by hema hebbagodi

ನಮಸ್ಕಾರ ಹೇಮಾ, ಬೈಗುಳದ ಬಗ್ಗೆ ಸಂಶೋಧನ ಪ್ರಬಂಧ, ವಾಹ್. ಒಂದೊಂದು ಬೈಗುಳದ ಅರ್ಥವನ್ನು ಅರಿಯುತ್ತ ಹೋದಂತೆ ಅಚ್ಚರಿ ತರುತ್ತಿದ್ದೆ. ನಿಮ್ಮ ಪ್ರತಿಕ್ರಿಯೆಗೆ, ಹೊಸತೊಂದು ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು. , ವಾಣಿ.
Submitted by kavinagaraj Tue, 05/28/2013 - 15:36

ವಾಣಿಯವರೇ, ಬೈಗುಳದ ಬಗ್ಗೆ ಹೇಳಿದ್ದು ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಬಹುದಾದುದು, ಕಲ್ಪನೆಗೆ ಬರುವಂತಹದು ಬಹಳ! ಧನ್ಯವಾದ.