೩೭. ಶ್ರೀ ಲಲಿತಾ ಸಹಸ್ರನಾಮ ೯೨ರಿಂದ ೯೬ನೇ ನಾಮಗಳ ವಿವರಣೆ

೩೭. ಶ್ರೀ ಲಲಿತಾ ಸಹಸ್ರನಾಮ ೯೨ರಿಂದ ೯೬ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೯೨-೯೬

Kulāṅganā कुलाङ्गना (92)

೯೨. ಕುಲಾಂಗನಾ

          ದೇವಿಯು ಪತಿವ್ರತೆಯರ ಕುಟುಂಬದ ವಂಶಜಳು. ಪತಿವ್ರತಾ ಸ್ತ್ರೀಯರು ತಾವು ಹುಟ್ಟಿದ ವಂಶದ ಹಾಗು ತನ್ನ ಪತಿಯ ವಂಶದ ಎರಡೂ ವಂಶಗಳ ಮರ್ಯಾದೆಗಳನ್ನು ಕಾಪಾಡುತ್ತಾರೆ. ಇನ್ನೊಂದು ವ್ಯಾಖ್ಯಾನದಲ್ಲಿ ಹೀಗೆ ಹೇಳಲ್ಪಟ್ಟಿದೆ, ಅದೇನೆಂದರೆ ಪತಿವ್ರತಾ ಸ್ತ್ರೀಯರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಲಲಿತಾಂಬಿಕೆಯು ಪರಮಪತಿವ್ರತೆಯಾಗಿರುವುದರಿಂದ ಆಕೆಯು ತನ್ನನ್ನು ಅವಿದ್ಯಾ ಅಥವಾ ಅಜ್ಞಾನದ ಸೆರೆಗಿನಿಂದ ಕಾಪಾಡಿಕೊಳ್ಳುತ್ತಾಳೆ. ಪತಿವ್ರತಾ ಸ್ತ್ರೀಯರ ಕುರಿತಾಗಿ ಶಂಕರಾಚಾರ್ಯರ ವಿಶ್ಲೇಷಣೆಯು ಈ ರೀತಿಯಾಗಿದೆ. ಅವರು ರಚಿಸಿರುವ ಸೌಂದರ್ಯ ಲಹರಿಯ ೯ನೇ ಶ್ಲೋಕವು, "ನೀನು ಸಹಸ್ರಾರದಲ್ಲಿ ಶಿವನೊಂದಿಗೆ ರಹಸ್ಯವಾಗಿ ಸಮಾಗಮ ಹೊಂದುತ್ತೀಯ" ಎಂದು ವರ್ಣಿಸುತ್ತದೆ. ಅದರ ವಿವರಣೆ ಏನೆಂದರೆ, ಷಟ್ಚಕ್ರಗಳನ್ನು ಭೇದಿಸುವ ಮೂಲಕ ಮತ್ತು ೨೫ ತತ್ವಗಳನ್ನು* ಜಯಿಸುವ ಮೂಲಕ, ಆಕೆಯು ಕುಂಡಲಿನೀ ರೂಪದಲ್ಲಿ ಸಹಸ್ರಾರವನ್ನು ತಲುಪಿ ಅಲ್ಲಿ ದೇವಿಯು ಸದಾಶಿವ ತತ್ವದೊಂದಿಗೆ ಐಕ್ಯವಾಗುತ್ತಾಳೆ. ಈ ಐಕ್ಯತೆಯು ಮತ್ತೊಂದು ತತ್ವವೆಂದು ಪರಿಗಣಿಸಲ್ಪಟ್ಟು ಇದನ್ನು ‘ಸಾದಾಖ್ಯ’ ತತ್ವವೆನ್ನುತ್ತಾರೆ. ಈ ತತ್ವವನ್ನು ‘ಪರಬ್ರಹ್ಮ’ವೆಂದೂ ಕರೆಯುತ್ತಾರೆ; ಏಕೆಂದರೆ ಇಲ್ಲಿ ಲಲಿತಾಂಬಿಕೆಯು ಸದಾಶಿವನೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುತ್ತಾಳೆ. ಈ ಹಂತವನ್ನು ‘ತಾದಾತ್ಮ್ಯ’ವೆಂದೂ ಕರೆಯುತ್ತಾರೆ.

          (*೨೫ ತತ್ವಗಳ ಕುರಿತ ಹೆಚ್ಚಿನ ವಿವರಣೆಗಳಿಗಾಗಿ "ಸಾಂಖ್ಯ” - ಹಿಂದೂ ತತ್ವಶಾಸ್ತ್ರದರ್ಶನದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೫ (೧) ಮತ್ತು ೫ (೨)ನ್ನು ನೋಡಿ

http://sampada.net/blog/%E0%B2%B8%E0%B2%BE%E0%B2%82%E0%B2%96%E0%B3%8D%E0%B2%AF-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%B9%E0%B2%BF%E0%B2%82%E0%B2%A6%E0%B3%82-%E0%B2%A4%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6-%E0%B2%86%E0%B2%B0%E0%B3%81-%E0%B2%AA%E0%B2%A6%E0%B3%8D%E0%B2%A7%E0%B2%A4%E0%B2%BF%E0%B2%97%E0%B2%B3%E0%B3%81-%E0%B2%92%E0%B2%82%E0%B2%A6%E0%B3%81-%E0%B2%AA%E0%B2%B0%E0%B2%BF%E0%B2%9A%E0%B2%AF-%E0%B2%AD%E0%B2%BE%E0%B2%97-%E0%B3%AB-%E0%B3%A7/11/04/2012/36328 )

          ‘ಶ್ರೀ ವಿದ್ಯಾ’ ಉಪಾಸನೆಯು ಬಹಳ ನಿಗೂಢವಾದದ್ದೆಂದು ಪರಿಗಣಿತವಾಗಿದೆ. ಇದನ್ನು ‘ನವಾವರಣ ಪೂಜೆ’ ಎನ್ನುತ್ತಾರೆ. ಇದನ್ನು ಸರಿಯಾದ ರೀತಿಯಲ್ಲಿ ಆಚರಿಸಿದರೆ, ಇದು ಖಂಡಿತವಾಗಿ ಒಬ್ಬನಿಗೆ ಈ ಪ್ರಪಂಚದಲ್ಲಿರುವುದನ್ನೆಲ್ಲಾ ಪ್ರಸಾದಿಸುತ್ತದೆ. ಈಗಿನ ಕಾಲದಲ್ಲಿ ಕೈಗೊಳ್ಳುವ ಬಹುತೇಕ ನವಾವರಣ ಪೂಜೆಗಳು ಕೇವಲ ಒಣಪ್ರತಿಷ್ಟೆ ಮತ್ತು ಶ್ರೀಮಂತಿಕೆಯನ್ನು ಮೆರೆಸುವ ಸಾಧನಗಳಾಗಿವೆ. ಶ್ರೀಮಂತಿಕೆ ಮತ್ತು ಜಂಭಗಳಿಗೆ ಶ್ರೀ ಲಲಿತೆಯ ಪೂಜೆಯಲ್ಲಿ ಯಾವುದೇ ಸ್ಥಾನವಿಲ್ಲ. ಎರಡನೆಯದಾಗಿ, ಈಗಿನ ಪೂಜಾ ಪದ್ಧತಿಗಳು ಶಾಸ್ತ್ರವಿಧಿತ ಆಚರಣೆಗಳಿಗಿಂತ ಭಿನ್ನವಾಗಿವೆ. ಯಾವುದೇ ಪೂಜೆಯಾಗಲಿ ಅಥವಾ ಯಾಗವಾಗಲಿ ಶಾಸ್ತ್ರರೀತ್ಯಾ ನೆರವೇರಿಸಲ್ಪಡದಿದ್ದರೆ ಅದು ನಿರೀಕ್ಷಿತ ಫಲವನ್ನು ಕೊಡುವುದಿಲ್ಲ. ಅನುಕೂಲಸಿಂಧು ಪ್ರವೃತ್ತಿಯಿಂದ ಪೂಜಾ ಪದ್ಧತಿಗಳಲ್ಲಿ ರಾಜಿ ಮಾಡಿಕೊಳ್ಳಬಾರದು.

Kulāntasthā कुलान्तस्था (93)

೯೩. ಕುಲಾಂತಸ್ಥಾ

           ಕುಲಾ ಎಂದರೆ ಶ್ರುತಿ ಮೊದಲಾದ ಶಾಸ್ತ್ರಗಳೆಂದೂ ಅರ್ಥ. ಆಕೆಯು ಶಾಸ್ತ್ರಗಳಲ್ಲಿ ನಿವಸಿಸುತ್ತಾಳೆ. ಈ ನಾಮವು ಬಹುಶಃ ಎಲ್ಲಾ ಶಾಸ್ತ್ರಗಳಿಗೆ ಮೂಲವಾದ ಮತ್ತು ಅಕ್ಷರಗಳಿಗೆ ಅಧಿದೇವತೆಯಾದ ಸರಸ್ವತೀ ದೇವಿಯನ್ನು ಕುರಿತದ್ದಾಗಿರಬಹುದು. ಕುಲಾ ಎಂದರೆ ಸುಷುಮ್ನಾ ನಾಡಿಯಾಗಿದ್ದು ಅದನ್ನು ’ಕುಲಾ’ದ ಮಾರ್ಗವೆಂದು ಕರೆಯಲಾಗಿದೆ. ನಾಮಾವಳಿ ೯೦ರಲ್ಲಿ ನೋಡಿದಂತೆ ’ತ್ರಿಪುಟಿ’ಯಲ್ಲಿ ಆಕೆಯು ತಿಳಿದುಕೊಳ್ಳುವುದಕ್ಕೆ ಯೋಗ್ಯಳಾಗಿದ್ದಾಳೆ (ಜ್ಞೇಯವಾಗಿದ್ದಾಳೆ). ಆಕೆಯು ಕುಲಾ ಜ್ಞಾನದ ಲಕ್ಷ್ಯವಾಗಿದ್ದಾಳೆ. ಕುಲಾ ಎಂದರೆ ಶಕ್ತಿ ಎಂದು ಅರ್ಥ. ಶಕ್ತಿಯು ಎಲ್ಲಾ ಕಡೆ ಇರುತ್ತಾಳೆ ಅಥವಾ ಅವಳು ಸರ್ವಾಂತರಯಾಮಿ. ಈ ಪರಿಸ್ಥಿತಿಯನ್ನು ಕೇನ ಉಪನಿಷತ್ತು ಬಹಳ ಚೆನ್ನಾಗಿ ವಿವರಿಸುತ್ತದೆ; "ಪ್ರತಿಬೋಧ ವಿಧಿತಮ್" ಎನ್ನುವುದರ ಅರ್ಥ "ಸಾಧಕನ ಎಲ್ಲಾ ಅವಸ್ಥೆಗಳಲ್ಲೂ ಅರಿಯಲ್ಪಟ್ಟದ್ದು".

Kaulinī कौलिनी (94)

೯೪. ಕೌಲಿನೀ

          ಆಕೆಯು ಕೌಲ ಪದ್ಧತಿಯ ಕೇಂದ್ರವಾಗಿದ್ದಾಳೆ. ಕೌಲ ಪೂಜಾ ಪದ್ಧತಿಯು ಶಾಕ್ತ ಪಂಥದ ತಾಂತ್ರಿಕ ಪೂಜೆಯ ಒಂದು ವಿಧವಾಗಿದೆ (ಶಕ್ತಿಯನ್ನು ಪೂಜಿಸುವ ವಿಧಾನವನ್ನು ಶಾಕ್ತ ಪೂಜೆ ಎನ್ನುತ್ತಾರೆ). ಆಕೆಯು ಕೌಲ ಪೂಜಾ ಪದ್ಧತಿಯ ಕೇಂದ್ರವಾಗಿರುವುದರಿಂದ ಆಕೆಯನ್ನು ಕೌಲಿನೀ ಎಂದು ಕರೆದಿದ್ದಾರೆ. ಆಕೆಯು ಸರ್ವಾಂತರಯಾಮಿಯಾಗಿ ಎಲ್ಲಾ ಕಡೆಗಳಲ್ಲಿ ಪೂಜಿಸಲ್ಪಡುವುದರಿಂದ, ಆಕೆಯನ್ನು ಕೌಲಿನೀ ಎನ್ನುತ್ತಾರೆ (ತ್ರಿಪುಟಿಯ ಪ್ರಕಾರ ಪೂಜೆಮಾಡುವವನು, ಪೂಜಿಸಲ್ಪಟ್ಟದ್ದು ಮತ್ತು ಪೂಜೆ). ತಂತ್ರ ಶಾಸ್ತ್ರವು ಶಕ್ತಿಯನ್ನು ಕುಲಾ ಮತ್ತು ಶಿವನನ್ನು ಅಕುಲಾ ಎಂದು ವರ್ಣಿಸುತ್ತವೆ. ಅವರಿಬ್ಬರ ಐಕ್ಯತೆಯನ್ನು ಕೌಲ ಎಂದು ಕರೆದರೆ ಅವಳನ್ನು ಕುಂಡಲಿನೀ ಎಂದು ಕರೆಯುತ್ತಾರೆ. ಈ ಸಮಾಗಮವು ಸಹಸ್ರಾರದಲ್ಲಿ ನಡೆಯುತ್ತದೆ. ಕೆಲವೊಂದು ತಂತ್ರ ಶಾಸ್ತ್ರಗಳಲ್ಲಿ ಸಹಸ್ರದಳದ ಕಮಲವಾದ ಸಹಸ್ರಾರವಲ್ಲದೆ ಬೇರೊಂದು ಸಹಸ್ರದಳದ ಕಮಲವು ಈ ಸಹಸ್ರಾರಕ್ಕಿಂತ ಕೆಳಗಡೆ ಇದೆ ಎಂದು ಹೇಳಲಾಗಿದೆ. ಈ ಎರಡನೇ ಸಹಸ್ರದಳ ಕಮಲದ ಮಧ್ಯದಲ್ಲಿ ಕುಲಾ ದೇವಿಯು ಪೂಜಿಸಲ್ಪಟ್ಟರೆ ಅದರ ದಳಗಳಲ್ಲಿ ಕುಲ ಶಕ್ತಿಗಳು ಪೂಜಿಸಲ್ಪಡುತ್ತಾರೆ. ಕೌಲಿನೀ ಎಂದರೆ ಕುಲದೇವಿ; ಒಬ್ಬರ ವಂಶದ ಅಧಿದೇವತೆ. ಸಹಸ್ರನಾಮದ ರಚನಕಾರರಾದ ವಾಗ್ದೇವಿಗಳಲ್ಲಿ ಒಬ್ಬರ ಹೆಸರು ಕೌಲಿನೀ ದೇವಿ. ಚಕ್ರಗಳ ಬಾಹ್ಯ ಪೂಜೆಯನ್ನು ಬಹುಶಃ ಶ್ರೀ ಚಕ್ರದ ಬಾಹ್ಯ ಪೂಜೆಯನ್ನೂ ಕೂಡಾ ಕೌಲಿನೀ ಎಂದು ಕರೆಯುತ್ತಾರೆ.

Kulayoginī कुलयोगिनी (95)

೯೫. ಕುಲಯೋಗಿನೀ

         ಕೌಲವೆಂದರೆ ಮಾನಸಿಕ ಪೂಜೆ. ಇಲ್ಲಿ ಇದರ ಅರ್ಥವೇನೆಂದರೆ ದೇವಿಗೆ ಆರು ಚಕ್ರಗಳಲ್ಲಿ ಮಾನಸಿಕ ಪೂಜೆಯನ್ನು ಸಲ್ಲಿಸುವುದು. ಮಾನಸಿಕ ಪೂಜೆಯನ್ನು ಕೇವಲ ಯೋಗದಿಂದ ಮಾತ್ರ ಕೈಗೊಳ್ಳಲು ಸಾಧ್ಯ. ಕುಲ ಎಂದರೆ ಮೂಲಾಧಾರ ಚಕ್ರ ಮತ್ತು ಅಕುಲ ಎಂದರೆ ಸಹಸ್ರಾರ ಚಕ್ರ. ಇವೆರಡರ ನಡುವೆ ಕೊಂಡಿಯನ್ನು ಯೋಗ ಪದ್ಧತಿಗಳ ಮೂಲಕವಷ್ಟೇ ಏರ್ಪಡಿಸಬಹುದು. ಆದ್ದರಿಂದ ಅವಳನ್ನು ಕುಲಯೋಗಿನೀ ಎಂದು ಕರೆಯಲಾಗಿದೆ.

Akulā अकुला (96)

೯೬. ಅಕುಲಾ

           ದೇವಿಗೆ ಯಾವುದೇ ರೀತಿಯ ವಂಶಾವಳಿ ಇಲ್ಲ; ಆದ್ದರಿಂದ ಆಕೆಯು ಅಕುಲಾ. ಆಕೆಯು ಶಿವನಿಂದ ಸೃಷ್ಟಿಸಲ್ಪಟ್ಟಿರುವುದರಿಂದ ಆಕೆಗೆ ತಂದೆ-ತಾಯಿಗಳು ಇಲ್ಲ. ಅಕುಲಾ ಎಂದರೆ ಕುಲಾ ಎಂದು ಕರೆಯಲ್ಪಡುವ ಷಟ್ಚಕ್ರಗಳಿಗೆ ಅತೀತವಾದದ್ದು ಅಂದರೆ ಸಹಸ್ರಾರಕ್ಕಿಂತಲೂ ಉನ್ನತವಾದದ್ದು. ಸಹಸ್ರಾರವನ್ನು ಚಕ್ರವೆಂದು ಕರೆಯಲ್ಪಡುವುದಿಲ್ಲ. ಸುಷುಮ್ನಕ್ಕೆ ಎರಡೂ ತುದಿಗಳಲ್ಲಿ ಒಂದೊಂದು ಪದ್ಮಗಳಿವೆ ಎಂದು ಹೇಳುತ್ತಾರೆ. ಅದರಲ್ಲಿ ಸಹಸ್ರದಳ ಪದ್ಮವು ಕಿರೀಟ ಭಾಗದಲ್ಲಿದ್ದರೆ ಅದನ್ನು ಅಕುಲ ಸಹಸ್ರಾರವೆನ್ನುತ್ತಾರೆ. ದೇವಿಯು ಇಲ್ಲಿ ವಾಸಿಸುವುದರಿಂದ ಆಕೆಯನ್ನು ಅಕುಲಾ ಎಂದು ಕರೆದಿದ್ದಾರೆ. ಇನ್ನೊಂದು ಕಮಲವು (ಪದ್ಮವು) ಬುಡದ ತುದಿಯಲ್ಲಿದ್ದು ಅದಕ್ಕೆ ಎರಡು ದಳಗಳಿರುತ್ತವೆ ಮತ್ತು ಇದನ್ನು ಕುಲ ಸಹಸ್ರಾರ ಎನ್ನುತ್ತಾರೆ. ಈ ಕುಲ ಸಹಸ್ರಾರವು ನಾಲ್ಕು ದಳದ ಪದ್ಮವಾಗಿರುವ ಮೂಲಾಧಾರ ಚಕ್ರವಲ್ಲವೆನ್ನುವುದನ್ನು ಗಮನಿಸಿ.

          ೯೦ನೇ ನಾಮದಿಂದ ೯೬ನೇ ನಾಮದವರೆಗೆ ಗಮನಿಸಿದರೆ ಕುಲ ಎನ್ನುವ ಒಂದೇ ಒಂದು ಶಬ್ದವನ್ನು ಏಳು ವಿವಿಧ ಸಂದರ್ಭಗಳಲ್ಲಿ ಹೇಗೆ ಉಪಯೋಗಿಸಲಾಗಿದೆ ಎನ್ನುವುದು ಕಂಡುಬರುತ್ತದೆ. ಈ ಸಂದರ್ಭದ ವಿಶೇಷತೆ ಏನೆಂದರೆ ೯೦ನೇ ನಾಮವು ಅಮೃತದ ರುಚಿಯ ಬಗ್ಗೆ ಮಾತನಾಡಿದರೆ ೯೬ನೇ ನಾಮವು ದೇವಿಯು ಕುಲಕ್ಕೆ ಅತೀತಳಾದವಳು ಎನ್ನುವುದರೊಂದಿಗೆ ಕೊನೆಗಳ್ಳುತ್ತದೆ.

******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 92-96 http://www.manblunder.com/2009/08/lalitha-sahasranamam-92-96.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (1 vote)

Comments

Submitted by nageshamysore Tue, 05/28/2013 - 19:23

ಶ್ರೀಧರರೆ, ಕುಲದ ವಿವಿಧಾವತಾರಗಳನ್ನು ಈ ಏಳು ನಾಮಗಳಲ್ಲಿ ನೋಡಿದ ಮೇಲೆ ಕುಲದ ವಿವಿಧಾರ್ಥವೆ ಸರ್ವಂತರ್ಯಾಮಿಯೇನೊ ಅನಿಸಿತು. ಅರ್ಥ ವ್ಯಾಪ್ತಿ ನಾಮಕ್ಕೆ ತಕ್ಕಹಾಗೆ ಬದಲಾದರೂ, ವಿಷಯದ ಗಹನತೆಯ ದೃಷ್ಟಿಯಿಂದ ಸರ್ವಾಂತರ್ಯಾಮಿತ್ವವನ್ನು ಪರೋಕ್ಷವಾಗಿ ಈ ಕುಲ ನಾಮಗಳ ಮೂಲಕ ವ್ಯಕ್ತಪಡಿಸಿದೆಯೇನೊ ಅನ್ನುವ ಭಾವ....
- ನಾಗೇಶ ಮೈಸೂರು, ಸಿಂಗಪುರದಿಂದ

Submitted by makara Tue, 05/28/2013 - 22:15

In reply to by nageshamysore

ಬಹಳ ಉತ್ತಮ ವಿಮರ್ಶೆ ನಾಗೇಶರೆ. ಕುಲವೆನ್ನುವುದು ಸರ್ವಾಂತರಯಾಮಿಯಾದರೂ ಸಹ ದೇವಿಯು ಕುಲಕ್ಕೇ ಅತೀತಳು; ಇದು ಅಕೆಯ ಹಿರಿಮೆಯನ್ನು ತೋರಿಸುತ್ತದೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ