ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಸರತ್ತು

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಸರತ್ತು

ಮಹಾರಾಷ್ಟ್ರದ ಮರಾಠವಾಡಾದ ಲಾತುರ್‍ನಿಂದ ವಿದರ್ಭದ ನಾಗಪುರಕ್ಕೆ ೫೨೫ ಕಿಮೀ ದೂರದ ಪಾದಯಾತ್ರೆಯನ್ನು ಜನವರಿ ೨೦೧೨ರಲ್ಲಿ ಮುನ್ನಡೆಸಿದವರು ರೈತರ ಶೇತ್‍ಕಾರಿ ಸಂಘಟನೆಯ ಮಾಜಿ ಅಧ್ಯಕ್ಷ ಹಾಗೂ ಈಗಿನ ಶಾಸಕ ಪಾಷಾ ಪಟೇಲ್.

ಹಾದಿಯುದ್ದಕ್ಕೂ ಮುಖ್ಯಕೇಂದ್ರಗಳಲ್ಲಿ ರೈತರ ಸಭೆ. ಆ ಸಭೆಗಳಲ್ಲಿ ಪಾಷಾ ಪಟೇಲ್ ಪ್ರಶ್ನಿಸಿದ್ದು ಸರಕಾರವು ಕಬ್ಬಿನ "ಕನಿಷ್ಠ ಬೆಂಬಲ ಬೆಲೆ" (ಎಂಎಸ್‍ಪಿ) ನಿರ್ಧರಿಸುವ ವಿಧಾನವನ್ನು. "ಸರಕಾರವು ಎಂಎಸ್‍ಪಿ ನಿರ್ಧರಿಸುವ ವಿಧಾನವೇ ಸರಿಯಾಗಿಲ್ಲ. ಆದ್ದರಿಂದ ರೈತರಿಗೆ ಬೆಳೆ ಬೆಳೆಸಲು ಮಾಡಿದ ವೆಚ್ಚವೂ ದಕ್ಕುವುದಿಲ್ಲ" ಎಂದವರು ಸಭೆಯಲ್ಲಿ ಹೇಳುವಾಗ ನೆರೆದ ರೈತರಿಂದ ದೀರ್ಘ ಕರತಾಡನ.

ವಾರಂಗದಲ್ಲಿ ಈ ಪಾದಯಾತ್ರೆಯನ್ನು ಇನ್ನಿಬ್ಬರು ರೈತ ಮುಂದಾಳುಗಳು ಸೇರಿಕೊಂಡರು: ಇಚಾಲ್‍ಕಾರಂಜಿ ಕ್ಷೇತ್ರದ ಸಂಸದರಾದ ರಾಜು ಶೆಟ್ಟಿ ಮತ್ತು ಸದಾಬಾವು ಖೋಟ್. ಅವರ ಸ್ವಾಭಿಮಾನಿ ಶೇತ್‍ಕಾರಿ ಸಂಘಟನೆಯು ಕಬ್ಬಿಗೆ ನ್ಯಾಯಯುತ ಕನಿಷ್ಠ ಬೆಂಬಲ ಬೆಲೆಗಾಗಿ ಹಲವಾರು ವರುಷಗಳಿಂದ ನಿರಂತರ ಹೋರಾಟ ನಡೆಸಿದೆ. ಯಾಕೆಂದರೆ ಪ್ರಬಲ ರಾಜಕೀಯ ಧುರೀಣರ ಹಿಡಿತದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳು, ಕಬ್ಬಿಗೆ ಅಧಿಕ ಬೆಲೆ ನೀಡಬೇಕೆಂಬ ರೈತರ ಬೇಡಿಕೆಯನ್ನು ವಿರೋಧಿಸುತ್ತಲೇ ಇವೆ.

ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವ ವಿಧಾನವನ್ನು ಬದಲಾಯಿಸಬೇಕು ಎಂಬುದು ರಾಜು ಶೆಟ್ಟಿ ಅವರ ಒತ್ತಾಯ. ರೈತರ ಕೃಷಿಯ ಒಳಸುರಿಗಳ ವೆಚ್ಚಕ್ಕೂ ಅವರ ಕೃಷಿ ಉತ್ಪನ್ನಗಳ ಬೆಲೆಗೂ ಹೊಂದಾಣಿಕೆಯಿಲ್ಲ. "ಹಲವಾರು ವರುಷಗಳಿಂದ ನಮ್ಮದು ಮಾರುಕಟ್ಟೆ ಆಧಾರಿತ ಆರ್ಥಿಕತೆ ಎಂಬ ಮಾತನ್ನು ಕೇಳುತ್ತಿದ್ದೇವೆ. ಆದರೆ ದೇಶದ ಶೇಕಡಾ ೬೪ ಜನರಿಗೆ ತಾವು ಬೆಳೆಸಿದ ಕೃಷಿ ಉತ್ಪನ್ನಗಳ ಬೆಲೆ ನಿರ್ಧರಿಸುವ ಸ್ವಾತಂತ್ರ್ಯವಿಲ್ಲ" ಎಂದು ಪಾಷಾ ಪಟೇಲ್ ವಿವರಿಸುತ್ತಾರೆ.

ಮಹಾರಾಷ್ಟ್ರದಲ್ಲಿ ವಿವಿಧ ಬೆಳೆಗಳ ಫಸಲಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ನಿರ್ಧರಿಸುವುದು "ಕೃಷಿ ವೆಚ್ಚಗಳ ಮತ್ತು ಬೆಲೆಗಳ ಕಮಿಷನ್". ಇದಕ್ಕೆ ಆಧಾರ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳು ನಡೆಸುವ ಸರ್ವೆ. ಆದರೆ ಸರ್ವೆ ಮಾಡುವಾಗ ಅನೇಕ ಅಂಶಗಳನ್ನು ಅಲಕ್ಷಿಸಲಾಗುತ್ತದೆ. ಉದಾಹರಣೆಗೆ, ಕೃಷಿ ಜಮೀನಿನ ಬಾಡಿಗೆ (ಗೇಣಿ), ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲದ ಅಧಿಕ ಬಡ್ಡಿ, ಪ್ರಾಕೃತಿಕ ವಿಕೋಪಗಳಿಂದ ಆಗುವ ನಷ್ಟ ಇತ್ಯಾದಿ.

ಕೈಗಾರಿಕಾ ಉತ್ಪನ್ನಗಳ ಬೆಲೆ ನಿರ್ಧರಿಸುವಾಗ ಘಟಕದ ಜಮೀನಿನ ಹೂಡಿಕೆಯ ವೆಚ್ಚವನ್ನೂ ಪರಿಗಣಿಸಲಾಗುತ್ತದೆ. "ಕೃಷಿಯಲ್ಲಿಯೂ ಈಗಿನ ಮಾರ್ಕೆಟ್ ದರಗಳ ಅನುಸಾರ, ಜಮೀನಿನ ಹೂಡಿಕೆ ಹಾಗೂ ಅದರ ಬಡ್ಡಿಯನ್ನು ವೆಚ್ಚವೆಂದು ಪರಿಗಣಿಸಬೇಕು" ಎಂದು ವಾದಿಸುತ್ತಾರೆ ಲಾತುರ್‍ನ ಹತ್ತಿ ಬೆಳೆಗಾರ ಶಿವಾಜಿ ಪಾಟೀಲ್.

ಆ ಸಮಿತಿಯು ಪುರುಷ ಕಾರ್ಮಿಕರ ದಿನಮಜೂರಿ ರೂ.೮೨ ಮತ್ತು ಮಹಿಳಾ ಕಾರ್ಮಿಕರ ದಿನಮಜೂರಿ ರೂ.೫೭ ಎಂದು ಪರಿಗಣಿಸಿದೆ! ಇದು ಸರಕಾರವೇ ನಿಗದಿ ಪಡಿಸಿರುವ ಕನಿಷ್ಠ ಮಜೂರಿಗಿಂತ ಕಡಿಮೆ!

"ವಿಶ್ವವಿದ್ಯಾಲಯದ ಪರಿಣತರು ಸರಿಯಾದ ರೀತಿಯಲ್ಲಿ ಸರ್ವೆ ನಡೆಸುವುದಿಲ್ಲ. ಅವರು ತಿಳಿಸುವ ಅಂಕೆಸಂಖ್ಯೆಗಳೆಲ್ಲ ಕಾಲ್ಪನಿಕ" ಎನ್ನುತ್ತಾರೆ ಪಾಷಾ ಪಟೇಲ್. ಉದಾಹರಣೆಗೆ ಸೋಯಾಬೀನ್ ಬೆಳೆಯ ನೀರಾವರಿ ವೆಚ್ಚ ೨.೫ ಎಕರೆಗೆ ಕೇವಲ ರೂ.೪.೭೭ ಎಂದು ಪರಿಗಣಿಸಿದ್ದಾರೆ. ಇದ್ಯಾವ ಸೀಮೆಯ ಲೆಕ್ಕಾಚಾರ?

ಈ ಪ್ರದೇಶದಲ್ಲಿ ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕಗಳ ಬಳಕೆ ಜಾಸ್ತಿಯಾಗಿರುವ ಕಾರಣ ಕೃಷಿ ವೆಚ್ಚದಲ್ಲೂ ಏರಿಕೆಯಾಗಿದೆ. ಉದಾಹರಣೆಗೆ ರಾಸಾಯನಿಕ ಗೊಬ್ಬರಗಳ ಬಳಕೆ ೧೯೭೧ರಲ್ಲಿ ಹೆಕ್ಟೇರಿಗೆ ೧೩ ಕಿಗ್ರಾ ಇದ್ದದ್ದು ೨೦೦೦ದಲ್ಲಿ ೯೬ ಕಿಗ್ರಾ ಏರಿದೆ. ಪೀಡೆನಾಶಕಗಳ ಬಳಕೆ ೧೯೭೧ರಲ್ಲಿ ೨೪,೦೦೦ ಟನ್‍ಗಳಿಂದ ೨೦೦೦ದಲ್ಲಿ ೭೬,೦೦೦ ಟನ್‍ಗಳಿಗೆ ಏರಿದೆ. ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವಾಗ ಈ ಸತ್ಯಾಂಶಗಳನ್ನು ಪರಿಗಣಿಸಿಲ್ಲ.

ವಿದರ್ಭ, ಮರಾಠವಾಡಾ ಮತ್ತು ಉತ್ತರ ಮಹಾರಾಷ್ಟ್ರದಲ್ಲಿ ೮೭ ಲಕ್ಷ ಹೆಕ್ಟೇರ್‍ಗಳಲ್ಲಿ ಹತ್ತಿ, ಭತ್ತ ಮತ್ತು ಸೋಯಾಬೀನ್ ಬೆಳೆಯುತ್ತಾರೆ. ಆದರೆ ಅಲ್ಲಿ ಶೇಕಡಾ ೬೦ ಜಮೀನಿಗೆ ನೀರಾವರಿ ಲಭ್ಯವಿಲ್ಲ. ಹಾಗಾಗಿ ರೈತರು ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಾರೆ. ವರುಷಕ್ಕೆ ಒಂದೇ ಬೆಳೆ ಬೆಳೆಸಲು ಸಾಧ್ಯ. ಆ ಒಂದು ಬೆಳೆಯೂ ದಕ್ಕದಿದ್ದರೆ ರೈತರಿಗೆ ಊಟಕ್ಕೂ ತತ್ವಾರ. ಆದ್ದರಿಂದಲೇ ನೂರಾರು ರೈತರು ಆತ್ಮಹತ್ಯೆಗೆ ಶರಣು.

ಬೆಂಗಳೂರಿನಲ್ಲಿ ೨೫ ಮೇ ೨೦೧೩ರಂದು ಮುಕ್ತಾಯವಾದ ಮೊದಲನೇ ರಾಷ್ಟ್ರೀಯ ಕಬ್ಬು ಬೆಳೆಗಾರರ ಸಮಾವೇಶದಲ್ಲಿ ಹತ್ತು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕಬ್ಬಿಗೆ ದೇಶಾದ್ಯಂತ ಏಕರೂಪದ ದರ ನಿಗದಿ ಮಾಡಿ, ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗ್ಳೇ ಪಾವತಿಸಬೇಕು. ಕಬ್ಬು ಬೆಳೆ ವಿಮೆ ಜ್ಯಾರಿಗೆ ತರಬೇಕು - ಇವು ಕಬ್ಬು ಬೆಳೆಗಾರರ ಹಿತರಕ್ಷಣೆಗಾಗಿ ಕೈಗೊಂಡ ಪ್ರಮುಖ ನಿರ್ಣಯಗಳು.

ಈ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಮೇ ೨೦೧೩ರಲ್ಲಿ ಸ್ಪಷ್ಟ ಬಹುಮತದಿಂದ ಅಧಿಕಾರ ವಹಿಸಿಕೊಂಡಿರುವ ಕಾಂಗ್ರೆಸ್ ಸರಕಾರವು ರೈತಸಂಘಟನೆಗಳೊಂದಿಗೆ ಇತ್ತೀಚೆಗೆ ನೇರ ಸಂವಾದ ನಡೆಸಿದ್ದು ಸ್ವಾಗತಾರ್ಹ. ಇನ್ನಾದರೂ ಸರಕಾರ ನ್ಯಾಯಯುತ ರೀತಿಯಲ್ಲಿ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸಲಿ.

Comments

Submitted by nageshamysore Wed, 05/29/2013 - 03:09

ಅಡ್ಡೂರರವರಿಗೆ ನಮಸ್ಕಾರ, ನಿನ್ನೆ ರಾತ್ರಿ ತಾನೆ ಕಂಪನಿಗಳಲ್ಲಿ ಹೇಗೆ ತಾವು ಮಾರುವ ವಸ್ತುಗಳ ಬೆಲೆ ನಿರ್ಧರಿಸುತ್ತಾರೆ ಮತ್ತು ಒಂದೆ ವಸ್ತುವು ಹೇಗೆ ಬೇರೆ ಬೇರೆ ದರಗಳಲ್ಲಿ ಮಾರುಕಟ್ಟೆಯಲ್ಲಿ ಮಾರಲ್ಪಡುತ್ತದೆ ಎಂಬುದನ್ನು ಅಲ್ಲಿ ವಿವರಿಸಿದ್ದೆ (ಕೆಳಗಿನ ಕೊಂಡಿ ಗಮನಿಸಿ). ಇಲ್ಲಿ ನಿಮ್ಮ ಲೇಖನ ನೋಡುತ್ತಿದ್ದರೆ ಎಂಥಹ ವಿಪರ್ಯಾಸ! ಉತ್ಪಾದಿಸುವ ರೈತ ಬೆಲೆ ನಿಗದಿಸುವಂತಿಲ್ಲ, ಯಾರೊ ನಿಗದಿಸಿದ ಬೆಂಬಲ ಬೆಲೆ ಅನುಕರಿಸಬೇಕು. ಇದು ನಮ್ಮ ಮಾರುಕಟ್ಟೆ ನೀತಿಯ ಮತ್ತೊಂದು ಮುಖ! ವಿಚಾರಪೂರ್ಣ ಲೇಖನ - ನಾಗೇಶ ಮೈಸೂರು , ಸಿಂಗಪುರದಿಂದ (http://sampada.net/…)
Submitted by spr03bt Thu, 05/30/2013 - 15:22

ಎ೦ದಿನ೦ತೆ ಉತ್ತಮವಾದ ಲೇಖನ ಆಡ್ಡೂರರೆ. ಕೃಷಿಯ ಬಗೆಗಿನ ನಿಮ್ಮ ಲೇಖನಗಳು ಬಹಳ ಚೆನ್ನಾಗಿವೆ. ವ೦ದನೆಗಳು.