ಬೌದ್ಧಧರ್ಮ ಭಾರತದಿಂದ ದೂರ ಸರಿಯಲು ಕಾರಣಗಳು

ಬೌದ್ಧಧರ್ಮ ಭಾರತದಿಂದ ದೂರ ಸರಿಯಲು ಕಾರಣಗಳು

“ಶಂಕರಾಚಾರ್ಯರು ನರೆಂದ್ರ ಮೋದಿಗಿಂತಲೂ ದೊಡ್ಡ ಕೊಲೆಗಡುಕ” ಎಂಬ ಹೇಳಿಕೆಯನ್ನು ಸಾಹಿತಿಯೊಬ್ಬರು ಉದುರಿಸಿದ್ದಾರೆ. ಅವರು ಯಾರನ್ನು ಮೆಚ್ಚಿಸಲು ಹೀಗೆ ಹೇಳಿದ್ದಾರೆ ಎಂಬುದನ್ನು ಅವರೇ ಹೇಳಬೇಕು.ಕೆಲವರಿಗೆ ಮೋದಿಯನ್ನು ಬೈದರೆ ಸಂತೋಷ, ಅವರ ಕಣ್ಣಿಗೆ ಡೋಂಗಿ ಮತಸಾಮರಸ್ಯ ಮಾತ್ರ ಅಭಿವೃದ್ಧಿಯಾಗಿ ಕಾಣಿಸುತ್ತದೆ. ಸಿಖ್ಖ ಗಲಭೆಯ ಮರಗುಳಿ ರೋಗ ಅವರಿಗೆ. ಗಾಂಧಿ ಹತ್ಯೆಯ ನಂತರ ನಡೆದ ದಂಗೆಗಳಲ್ಲಿ ಮನೆ ಮಠ ಕಳೆದುಕೊಂಡವರ ಗೋಳು ನೆನಪಿಗೆ ಬರುವದಿಲ್ಲ.

ಈಗ ಪ್ರಸ್ತುತ ವಿಷಯಕ್ಕೆ ಬರೋಣ. ಶಂಕರಾಚಾರ್ಯರು ದೊಡ್ಡ ತತ್ವಜ್ಞಾನಿಗಳು, ಸಾವಿರಾರು ಗ್ರಂಥ ಬರೆದ ಲೇಖಕರು, ಯಜ್ಞ ಯಾಗಾದಿಗಳಲ್ಲಿ ಬಲಿ ಮತ್ತಿತರ ಪ್ರಾಣಿಹಿಂಸೆ ನಿಲ್ಲಿಸಿದ ಸಮಾಜ ಸುಧಾರಕರು. ಸನಾತನ ಹಿಂದೂ ಧರ್ಮವನ್ನು ಉಳಿಸಿದ ಸಂತರು. ಈಗ ಹೇಳುವ ಅವರು ಬದುಕಿದ ಕಾಲಮಾನವೇ ಸಂಶಯಾಸ್ಪದವಾಗಿದ್ದು ಅದು ಇನ್ನೂ ಹಿಂದೆ ಹೋಗಬೇಕು (ನೋಡಿ ಬಾಬು ಕೃಷ್ಣಮೂರ್ತಿ ಅನುವಾದಿತ ಪುಸ್ತಕ ‘ಯಾವುದು ಚರಿತ್ರೆ’). 

ಬೌದ್ಧ ದರ್ಮವೂ ಈ ನೆಲದ ಧರ್ಮವೇ. ಮನು ಹೇಳಿದ್ದು ‘ಅಹಿಂಸಾ ಪರಮೋ ಧರ್ಮ’ ಬುದ್ಧ ಹೇಳಿದ್ದು ಅದನ್ನೆ. ಎಲ್ಲರೂ ಬೌದ್ಧರಾಗಿ ವೇದಗಳಲ್ಲಿ ತಾತ್ಸಾರ ಬದುಕಿನಲ್ಲಿ ವೈರಾಗ್ಯ ಬೆಳೆಸಿಕೊಂಡಾಗ ಶಂಕರರು ಅವತರಿಸಿ ಅದೇ ಮಾರ್ಗದಲ್ಲಿ ತಿಳಿಸಿ ಹೇಳಿ ವೇದಗಳ ಪ್ರಾಮಾಣ್ಯವನ್ನು, ಸಂಸಾರ ಜಂಜಡದ ನಶ್ವರತ್ವವನ್ನು, ಬದುಕಿನೊಡನಿರಬೇಕಾದ ಪ್ರೀತಿಯನ್ನು, ನಮಲ್ಲೇ ಇರುವ ಭಗವಂತನ ಶ್ರದ್ಧೆಯನ್ನು ಒತ್ತಿ ಹೇಳಿದರು. ಅವರು ಯಾರನ್ನೂ ಕತ್ತಿಯ ತುದಿಗೆ ಹಿಡಿದು ಮತಾಂತರಿಸಲಿಲ್ಲ. ಅಂತಹುದರಲ್ಲಿ ಹಿಂದು ಧರ್ಮಕ್ಕೆ ನಂಬಿಕೆಯಿಲ್ಲ. ಎಲ್ಲ ಧರ್ಮಗಳೂ ತಮ್ಮ ಪ್ರಸ್ತುತ ಧರ್ಮದಲ್ಲಿ ನಂಬಿಕೆ ಕಳಕೊಂಡು ನಮ್ಮಲ್ಲಿಗೆ ಬನ್ನಿ ಎಂದರೆ, ನಮ್ಮ ವಿವೇಕಾನಂದರೇ ಹೇಳುವಂತೆ ಯಾವ ಧರ್ಮದಲ್ಲೇ ಇರಿ, ಸಾತ್ವಿಕತೆಯಲ್ಲಿ ದೇವರಲ್ಲಿ ನಂಬಿಕೆ ಇಡಿ. ಮತಾಂತರದಿಂದ ಮುಕ್ತಿ ಸಾಧ್ಯವಿಲ್ಲ, ಆತ್ಮಶ್ರದ್ಧೆಯಿಂದ ಮಾತ್ರ ಮುಕ್ತಿ. ಹೆಚ್ಚಿನ ರಾಜರು ಬೌದ್ಧರೋ ಜೈನರೋ ಆಗಿದ್ದರು, ಶಂಕರಾಚಾರ್ಯರಿಗೆ ಕ್ಷಾತ್ರ ಬಲವಿತ್ತೆ? ಇದ್ದದ್ದು ಕೇವಲ ಬ್ರಹ್ಮಬಲ, ತೆಜೋಬಲ. ಶಂಕರರು ತಿಳಿ ಹೇಳಿದರೇ ಹೊರತು ಯಾವುದನ್ನು ಹೇರಲಿಲ್ಲ.

ಇನ್ನು ಬುದ್ಧಿಜೀವಿ ಸೋಗಲಾಡಿಗಳಿಗೆ ಬುದ್ಧ ಹೇಳಿದ ಆತ್ಮೋದ್ಧಾರ, ಪರೋಪಕಾರ ಮುಂತಾದವುಗಳ ಸಾಧನೆ ಮಾಡಬೇಕೆನಿಸುವುದಿಲ್ಲ. ಬಸವ ಹೇಳಿದ ‘ಅರಸು ವಿಚಾರ, ಸ್ಥಿರೆಯ ಸಿಂಗಾರ ಸ್ಥಿರವಲ್ಲ ಕಾಣಿರೋ’ ಎಂಬ ಮಾತು ರುಚಿಸುವುದಿಲ್ಲ. ಯಾವುದನ್ನು ಮಂಡಿಸುವ ಮೊದಲು ಆಳ ಅಧ್ಯಯನ ಮಾಡಬೇಕು, ಯಾವುದನ್ನು ಜಾರಿಗೆ ತಂದರೂ ಅದರ ಉಪಯೋಗ-ದುರುಪಯೋಗಳ ದೂರದೃಷ್ಟಿ ಇರಬೇಕು ಎಲ್ಲವೂ ಸಾಮರಸ್ಯ ಮೂಡಿಸಬೇಕು ಹೊರತು ಜಗಳ ಹಚ್ಚಬಾರದು ಎಂಬ ಅಂಬೇಡ್ಕರ್ ರ ಆದರ್ಶ ಕಾಣಿಸುವುದಿಲ್ಲ. ಕೇವಲ ಕಾಣಿಸುವುದು ಒಂದೇ, ಜಾತ್ಯಾತೀತತೆ. ಜಾತಿಗಳ ನಡುವೆ ಸಾಮರಸ್ಯ, ಸಮಾನತೆ ಇರಲೇಬೇಕು, ಆದರೆ ಮೇಲೆ ಹೇಳಿದ ವಿಷಯಗಳೂ ನಗಣ್ಯವಲ್ಲ.

ಹಾಗಾದರೆ ಬೌದ್ಧ ಧರ್ಮ ಭಾರತದಿಂದ ದೂರ ಸರಿದಿದ್ದು ಏಕೆ? ಎಂಬ ಪ್ರಶ್ನೆಗೆ ಸಂಜೀವ ನಯ್ಯರ್ ಎನ್ನುವವರು ಸ್ವಾಮಿ ವಿವೇಕಾನಂದ ಮತ್ತು ಅಂಬೇಡ್ಕರ್ ಅವರನ್ನು ಆಧರಿಸಿ ತಮ್ಮ ಬ್ಲಾಗ್ ನಲ್ಲಿ ಬರೆದ ಬರಹ ಗಮನ ಸೆಳೆಯಿತು ಅದನ್ನು ತಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

ಕಾರಣ 1.

ಭಿಕ್ಷುಗಳು ಬದುಕು ಮತ್ತು ಅದರ ಮೌಲ್ಯಗಳನ್ನು ಅರಿಯದೇ ಹೋಗಿದ್ದರಿಂದ, ಎಲ್ಲರೂ ಭಿಕ್ಷುಗಳಾಗಲೂ ಸಾಧ್ಯವಿಲ್ಲ ಎಲ್ಲರಲ್ಲೂ ಆ ಸಾಮರ್ಥ್ಯ ಇರುವುದಿಲ್ಲ. ಆ ಸಿದ್ಧಾಂತ ಹೆಚ್ಚಾಗಿ ಭಿಕ್ಷು ಜೀವನಕ್ಕೆ ಒತ್ತುಕೊಟ್ಟು, ಸಂಸಾರಸ್ಥರ ಸಮಸ್ಯೆ ಅರಿಯದೇ ಹೋಗಿ, ಗೃಹಸ್ಥರು ಅದರಿಂದ ವಿಮುಖವಾದರು ಅದು ಕೇವಲ ಭಿಕ್ಷುಗಳಿಗೆ ಮಾತ್ರ ಸೀಮಿತವಾಯಿತು.

ಬದುಕು ಕೇವಲ ದುಃಖಮಯ, ನಶ್ವರ, ಸಂಸಾರ ತ್ಯಜಿಸು ಸನ್ಯಾಸಿಯಾಗು ಎಂಬ ಭಿಕ್ಷುಗಳ ವ್ಯಾಖ್ಯಾನ ಜೀವನೋತ್ಸಾಹ ಕುಗ್ಗಿಸುವ ಕಾರ್ಖಾನೆಯಾದಾಗ, ಬದುಕುವ ಸ್ಪೂರ್ತಿಯುಳ್ಳ ಜನರಿಗೆ ಅದೊಂದು ಮೇಲೇರಲಾಗದ ತಗ್ಗು ಅದರಲ್ಲಿ ಬೀಳದಿರುವದೇ ಲೇಸು ಎಂದೆನಿಸಿತು. ಶಂಕರರೂ ದೇವನೊಬ್ಬನೇ ಸತ್ಯ ಜಗತ್ತು ಸುಳ್ಳು ಎಂದೇ ಹೇಳಿದರೂ, ಯೌವ್ವನ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಎಂಬ ವೇದಗಳಲ್ಲಿ ಹೇಳಿದ ಅವಸ್ಥಾ ಚತುರ್ಥಗಳನ್ನು ಅಲ್ಲಗಳೆಯಲಿಲ್ಲ. ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷ ಎಲ್ಲವೂ ಬೇಕು ಎಂದು ಹೇಳಿದ್ದು ಜನರಿಗೆ ರುಚಿಸಿತು.

ಕಾರಣ 2

ಯಾವುದೇ ಧರ್ಮ ಮುಕ್ತಿ ಎನ್ನುವದು ಒಂದು ಇದೆ ಎನ್ನುವುದನ್ನು ನಂಬುವುದಾದರೆ ಅಲ್ಲಿಗೆ ಕೇವಲ ಒಬ್ಬೊಬ್ಬನೆ ಹೋಗಲು ಸಾಧ್ಯ ಹಿಂಡು ಹಿಂಡಾಗಿ ಅಲ್ಲ. ವಿಹಾರಗಳಲ್ಲಿ ಸ್ತ್ರೀ-ಪುರುಷರನ್ನು ಸಮಾನರಾಗಿ ಕಂಡು, ವರ್ಣಭೇದವಿಲ್ಲದೇ ಎಲ್ಲರೂ ಎಲ್ಲ ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ಬೌದ್ಧಧರ್ಮದ ಹೆಗ್ಗಳಿಕೆಯೇ ಆದರೂ ಸರ್ವಸ್ವವನ್ನು ತ್ಯಾಗಮಾಡಿ ವಿಹಾರಕ್ಕೆ ತಮ್ಮ ಸಂಪತ್ತನ್ನು ಧಾರೆಯರೆದ ಭಕ್ತರಿಗೆ ಅತಿ ವೈರಾಗ್ಯ ಬೋಧಿಸಿ, ವಿಹಾರದ ಮುಖ್ಯಸ್ಥರು ವಿಲಾಸದಲ್ಲಿ ತೊಡಗಿದ್ದು, ಉನ್ನತ ಮೌಲ್ಯ ಹೊಂದಿದ್ದ ಧರ್ಮ, ಪ್ರಚಾರಕರ ಹೇಳುವುದು-ಮಾಡುವುದು ಬೇರೆ ಎಂಬ ದ್ವಂದ್ವ ನೀತಿಯಿಂದ ನಂಬಿಕೆ ಕಳೆದುಕೊಳ್ಳುವಂತಾಯಿತು.

ಹಿಂದೂ ಧರ್ಮದ ಹಲವು ಮುಖಂಡರ ವಿಲಾಸಿ ಜೀವನ ಜನರಿಗೇ ಬೇಸರ ತಂದಾಗ ವ್ಯಕ್ತಿಯನ್ನು ಕಿತ್ತೆಸೆದ ಅನೇಕ ಉದಾಹರಣೆಗಳಿವೆ ಆದರೆ ಧರ್ಮವನ್ನು ಕಿತ್ತೆಸೆದ ಉದಾಹರಣೆ ಇಲ್ಲಾ ಏಕೆಂದರೆ ಯಾವುದೇ ಸಿದ್ಧಾಂತ ಹೇಳಿದರೂ ಅದನ್ನು ಒಪ್ಪುವ ಮತ್ತು ಅದನ್ನು ತಮ್ಮ ಧರ್ಮದ ಒಂದು ದರ್ಶನವನ್ನಾಗಿಸಿ ಮುನ್ನಡೆಸುವ ಸಾಮರ್ಥ್ಯ ಕೇವಲ ಹಿಂದು ಧರ್ಮಕ್ಕಿದೆ ಅದರ ಉದಾತ್ತ ಚಿಂತನೆಯ ಬಲದಿಂದ.

ಕಾರಣ 3

ಎಲ್ಲ ವಿಹಾರಗಳಿಗೆ ಬೆಂಗಾವಲಾಗಿದ್ದವರು ಬೌದ್ಧ ಧರ್ಮಕ್ಕೆ ಮಾರುಹೋದ ಅಂದಿನ ರಾಜರು. ಈ ರಾಜ ಅಹಿಂಸಾ ತತ್ವ ಪಾಲಿಸಿದರೆ, ಶತ್ರು ಪಾಳ್ಯದ ರಾಜರು ಬಿಡಬೇಕೆ? ಅವರು ದಂಡೆತ್ತಿ ಬಂದರು ಈ ರಾಜರು ಸೋತರು ಸೋಲಿಗೆ ಕಾರಣ ಹುಡುಕಲಾಗಿ, ಸಾಮರ್ಥ್ಯದ ವೀರರೆಲ್ಲ ಭಿಕ್ಷುಗಳಾಗಿ ವಿಹಾರ ಸೇರಿ ವಿರಾಗಿಗಳಾಗಿದ್ದು, ದೇಶ ರಕ್ಷಣೆಯ ವಿಷಯದಲ್ಲೂ ವೈರಾಗ್ಯ ಎಷ್ಟೋ ರಾಜರಿಗೆ ಹಿಡಿಸದಿದ್ದದ್ದು. ಅಶೋಕನ ಅಹಿಂಸಾ ಚಳುವಳಿಯ ನಂತರದ ಶತಕಗಳಲ್ಲಿ ಗ್ರೀಕ್ ಮುಂತಾದ ಪರಕೀಯರ ದಾಳಿ, ದೇಶರಕ್ಷಣೆಯ ವಿಷಯದಲ್ಲಿ ಅಹಿಂಸಾ ತತ್ವ ತರವಲ್ಲ ಎಂಬ ಅರಿವು ಮುಂದಿನ ರಾಜರಿಗಾಗಿ, ಅವರು ಈ ಮತವನ್ನು ವಿರೋಧಿಸದಿದ್ದರೂ ಅದನ್ನು ‘ರಾಜ ಮತ’ ವನ್ನಾಗಿ ಮಾಡಲಿಲ್ಲ.

ಹಿಂದೂ ಧರ್ಮ ರಾಜ ಮತವಾದರೂ ಆಗದಿದ್ದರೂ ಅವಿನಾಶಿ ಏಕೆಂದರೆ ಇದಕ್ಕೆ ಸಮಸ್ಯೆಗಳನ್ನು ಎದುರಿಸಿ ಗೆಲ್ಲುವ ಶಕ್ತಿಯಿದೆ ಏಕೆಂದರೆ ಇದು ಮನುಜ ಮತ(ಧರ್ಮ ಅವರವರ ವೈಯಕ್ತಿಕ ಆಚರಣೆ ಸಮೂಹಸನ್ನಿಯಲ್ಲ ಎಂಬ ನಂಬಿಕೆ). ಹಿಂದು ಧರ್ಮ ಬದುಕಿನೆಡೆಗೆ ಅಪಾರ ಶ್ರದ್ಧೆಯನ್ನು ಹೊಂದಿದೆ ಮತ್ತು ವರ್ತಮಾನದ ಬೆಳಕಲ್ಲಿ ಭವಿಷ್ಯವನ್ನು ಉತ್ಸಾಹವನ್ನೆಂದೂ ಕಳೆದುಕೊಂಡಿಲ್ಲ.

ಕಾರಣ 4

ಬುದ್ಧಧರ್ಮ ಕೇವಲ ವಿಹಾರಗಳಿಗೆ ಸೀಮಿತವಾಗಿ, ಅವರ ಧರ್ಮಸೂತ್ರಗಳಲ್ಲಿಯ ನೈತಿಕ ಮೌಲ್ಯಗಳ ಕೊರತೆ, ಹೊಸ ಸಮಸ್ಯೆಯನ್ನು ಎದುರಿಸಲಾಗದ ಸೈದ್ಧಾಂತಿಕ ಪೊಳ್ಳುತನ ಮತ್ತು ಮುಸ್ಲಿಂ ದಾಳಿ ಆರಂಭವಾಗಿ ಅವರ ಎಷ್ಟೋ ವಿಹಾರಗಳ ನಾಶ. ಬಿಹಾರದ ನಲಂದಾ, ವಿಕ್ರಮ ಶಿಲಾ, ಉದ್ಧಾನಪುರ ಮುಂತಾದ ವಿಹಾರಗಳ ಮೇಲೆ ತುರ್ಕರ ಆಕ್ರಮಣ. ಅವರ ಧರ್ಮಗ್ರಂಥಗಳ ದಹನ. ಮುಂತಾದ ಘಟನೆಗಳು ವಿಹಾರದ ಭಿಕ್ಷುಗಳ ಆತ್ಮಸ್ಥೈರ್ಯ ಕುಗ್ಗಿಸಿ, ಭಿಕ್ಷುಗಳಾಗಲು ಬಹುಜನರು ಹಿಂಜರಿಯುವಂತಾಯಿತು.

ಧರ್ಮಕ್ಕೆ ಕುತ್ತು ಬಂದಾಗ ಆಚರಣೆಗಳನ್ನು ಮಾರ್ಪಡಿಸಿಕೊಂಡಾದರೂ ಧರ್ಮ ಬಿಡದ ಅಚಲ ಶ್ರದ್ಧೆ ಹಿಂದೂ ಧರ್ಮಕ್ಕಿದೆ. ಗ್ರೀಕ, ಶಕ, ಹೂಣ, ತುರುಷ್ಕ, ಯುರೋಪಿಯನ್ನರು, ಒಳಗಿನ ಢೋಂಗಿ ಜಾತ್ಯತೀತ ಹುಳುಗಳು ಎರಗಿ ಬಂದರೂ ನಮ್ಮ ಭೂಭಾಗ ಆಕ್ರಮಿಸಿಕೊಂಡರೂ ನಮ್ಮ ಧರ್ಮವನ್ನು ಸಂಪೂರ್ಣ ನಾಶಗೊಳಿಸಲಾಗಲಿಲ್ಲ ಕಾರಣ ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಅಚಲ ಶ್ರದ್ಧೆ ಮತ್ತು ಆಯಾ ಕಾಲದಲ್ಲಿ ಉದಿಸಿದ ಧರ್ಮ ಸಂಸ್ಥಾಪಕರು-ಸುಧಾರಕರು.

1950 ರ ಮೇನಲ್ಲಿ ಕೋಲಂಬೋದಲ್ಲಿ ಬೌದ್ಧ ಧರ್ಮದ ಯುವಕರನ್ನುದ್ದೇಶಿಸಿ ಅಂಬೇಡ್ಕರ ಹೇಳಿದ ಮಾತುಗಳು (ಆಧಾರ:   Dr Ambedkar Life & Mission by Dhananjay Keer))

“ಬೌದ್ಧಧರ್ಮ ಲೌಕಿಕವಾಗಿ ಭಾರತದಲ್ಲಿ ಬಹುವಾಗಿ ಇಲ್ಲ ಎನಿಸಿದರೂ ಅದರ ಅಂತರ್ಪವಾಹ ಇನ್ನೂ ಹರಿಯುತ್ತಿದೆ. ಶಂಕರಾಚಾರ್ಯರ ನಂತರ ಬೌದ್ಧಧರ್ಮ ನಾಶವಾಯಿತು ಎಂಬುದನ್ನು ನಾನು ಒಪ್ಪುವದಿಲ್ಲ. ಹಿಂದೂ ಧರ್ಮವನ್ನು ಮೂರು ಅವಧಿಯಲ್ಲಿ ನೋಡಬಹುದು ವೈದಿಕಧರ್ಮ, ಬ್ರಾಹ್ಮಣಧರ್ಮ, ಹಿಂದೂಧರ್ಮ. ಬ್ರಾಹ್ಮಣಧರ್ಮ ಕಾಲದಲ್ಲಿಯೇ ಬೌದ್ಧಧರ್ಮ ಉದಯಿಸಿದ್ದು. ಶಂಕರಾಚಾರ್ಯರು ಮತ್ತವರ ಗುರುಗಳು ಮೊದಲು ಬೌದ್ಧರಾಗಿದ್ದರು ಎಂಬುದು ನನ್ನ ಅಭಿಪ್ರಾಯ” ಎಂದು ಅಂಬೇಡ್ಕರ ಹೇಳುತ್ತಾರೆ.

ಬೌದ್ಧ ಧರ್ಮನಾಶಕ್ಕೆ ಅಂಬೇಡ್ಕರ್‍ ಕೊಡುವ ಕಾರಣಗಳು:

·         ಶೈವ-ವೈಷ್ಣವ ದರ್ಶನಗಳಲ್ಲಿಯ ಮೂರ್ತಿಪೂಜೆ, ಸಾಂಪ್ರದಾಯಿಕ ಆಚರಣೆ ಯಾವುದನ್ನು ಬುದ್ಧ ವಿರೋಧಿಸಿದ್ದನೋ ಅವುಗಳನ್ನು ಮತ್ತೆ ಬೌದ್ಧಧರ್ಮದೊಳಗೆ ಸೇರಿಸಿಕೊಂಡಿದ್ದು, ಬೌದ್ಧಧರ್ಮದ ಮೂಲ ಆಶಯಗಳಿಗೆ ಧಕ್ಕೆ ತಂದಿದ್ದು ಮತ್ತು ಪರ-ವಿರೋಧಗಳ ನಡುವೆ ಅದು ಹಿಂದು ಧರ್ಮಕ್ಕಿಂತ ಏನೂ ಭಿನ್ನವಾಗಿ ತೋರದಿದ್ದದ್ದು.

·         ಅಲ್ಲಾವುದ್ದೀನ ಖಿಲ್ಜಿಯ ಆಕ್ರಮಣದಿಂದ ಬಹು ವಿಹಾರಗಳು ನಾಶವಾಗಿ, ಸಾವಿರಾರು ಭಿಕ್ಷುಗಳ ಕೊಲೆಯಾಗಿ, ಹಲವು ಜನ ನೇಪಾಳ, ಟಿಬೇಟ್ ಚೀನಾದೆಡೆಗೆ ಹೋದರು. ಉಳಿದವರು ಹಿಂದೂ ಧರ್ಮ ಅನುಸರಿಸಿದರು.

·         ಹಿಂದೂ ಧರ್ಮದಲ್ಲಿ ಸಾಕಷ್ಟು ಸುಧಾರಣೆ ಆಗಿ ಆಚರಣೆಗಳು ಸರಳೀಕರಣಗೊಂಡು, ಬೌದ್ಧಧರ್ಮಾಚರಣೆ ಕಠಿಣವೆನಿಸತೊಡಗಿದ್ದು.

ಶಂಕರಾಚಾರ್ಯರೂ ಯಾವ ಧರ್ಮವನ್ನು ನಾಶ ಮಾಡಲು ಪ್ರಯತ್ನಿಸಲಿಲ್ಲಾ. ತಮ್ಮ ತತ್ವ ಸಿದ್ಧಾಂತವನ್ನು ಮುಂದಿಟ್ಟರು. ನಂಬಿಕೆ ಬಂದವರು ಒಪ್ಪಿಕೊಂಡರು ಅಷ್ಟೇ. ಅದರಲ್ಲಿಯೂ ಎಲ್ಲರಿಗೂ ಸಮ್ಮತವಾಗದ ಹಲವು ಅಂಶಗಳಿರಬಹುದು. ಅವುಗಳನ್ನು ಖಂಡಿಸಲು ಎಲ್ಲರಿಗೂ ಹಕ್ಕಿದೆ. ಚರ್ಚೆ ಸೈದ್ಧಾಂತಿಕವಾಗಿರಬೇಕು ಯಾರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಅಕ್ಷರಲೋಕದ ತಿಳಿದವರಿಗೆ ಶೋಭೆ ತರುವುದಿಲ್ಲ ಅಲ್ಲವೇ.

 

 

Comments

Submitted by kavinagaraj Tue, 05/28/2013 - 14:44

ಪ್ರೊ. ಹೆಚ್ಚೆಲ್ಕೆಯವರ ಉದ್ಗಾರಕ್ಕೆ ಪ್ರತಿಯಾಗಿ ಈ ಲೇಖನ ಬಂದಿರುವುದಾದರೂ, ಉತ್ತಮ ವೈಚಾರಿಕ ಅಂಶಗಳನ್ನು ಒಳಗೊಂಡಿವೆ. ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ (32 ವರ್ಷಗಳೆನ್ನುತ್ತಾರೆ) ಮೃತರಾದರೂ ಆ ಚಿಕ್ಕ ವಯಸ್ಸಿನಲ್ಲೇ ಅದ್ಭುತ ಜ್ಞಾನಸಂಪತ್ತನ್ನು ಅರ್ಜಿಸಿ ಹಂಚಿದವರು. ದೇಶವನ್ನು ಪರ್ಯಟನೆ ಮಾಡಿ ತಮ್ಮ ವಿಚಾರಗಳನ್ನು ಚರ್ಚೆ, ವಾದಗಳು, ಸಂವಾದಗಳು, ಬರಹಗಳು, ಉಪನ್ಯಾಸಗಳ ಮೂಲಕ ಮುಂದಿಟ್ಟವರು. ಅವರು ಚರ್ಚೆ, ವಾದ-ವಿವಾದಗಳಲ್ಲಿ ಪ್ರತಿಪಕ್ಷದವರನ್ನು ಜಯಸಿದವರೇ ಹೊರತು, ಯಾವುದೇ ಸೈನ್ಯ ಕಟ್ಟಿಕೊಂಡು ಹೋರಾಡಿದವರಲ್ಲ. ವೃಥಾಪವಾದ ಮಾಡುವವರಿಗೆ ಬೇರೆ ಏನೋ ಉದ್ದೇಶವಿದ್ದೀತು! ಉತ್ತಮ ವಿಚಾರ ಮಂಡನೆಗ ಧನ್ಯವಾದ.
Submitted by abdul Tue, 05/28/2013 - 19:30

"ಬಿಹಾರದ ನಲಂದಾ, ವಿಕ್ರಮ ಶಿಲಾ, ಉದ್ಧಾನಪುರ ಮುಂತಾದ ವಿಹಾರಗಳ ಮೇಲೆ ತುರ್ಕರ ಆಕ್ರಮಣ. ಅವರ ಧರ್ಮಗ್ರಂಥಗಳ ದಹನ. ಮುಂತಾದ ಘಟನೆಗಳು ವಿಹಾರದ ಭಿಕ್ಷುಗಳ ಆತ್ಮಸ್ಥೈರ್ಯ ಕುಗ್ಗಿಸಿ, ಭಿಕ್ಷುಗಳಾಗಲು ಬಹುಜನರು ಹಿಂಜರಿಯುವಂತಾಯಿತು" ಈ ಹೇಳಿಕೆಯೂ, “ಶಂಕರಾಚಾರ್ಯರು ನರೆಂದ್ರ ಮೋದಿಗಿಂತಲೂ ದೊಡ್ಡ ಕೊಲೆಗಡುಕ” ಎನ್ನುವ ಹೇಳಿಕೆಯೂ ಅಸಹನೆಯ ನಾಣ್ಯದ ಎರಡು ಮುಖಗಳು. ಬೌಧ ಧರ್ಮದ ಮೂಲೋತ್ಪಾಟನೆ ಹೇಗೆ 'ಶಶಾಂಕ' ನಂಥ ಹಿಂದೂ ರಾಜರುಗಳಿಂದ ಎನ್ನುವ ವಿಷಯ ಸಹ ಗಮನಿಸಬೇಕು. "ಅಲ್ಲಾವುದ್ದೀನ ಖಿಲ್ಜಿಯ ಆಕ್ರಮಣದಿಂದ ಬಹು ವಿಹಾರಗಳು ನಾಶವಾಗಿ, ಸಾವಿರಾರು ಭಿಕ್ಷುಗಳ ಕೊಲೆಯಾಗಿ....." ಅಲ್ಲಾಉದ್ದೀನ್ ಖಿಲ್ಜಿಯ ಆಕ್ರಮಣದ ಕಾರಣ ಅಲ್ಲ ವಿಹಾರಗಳು ನಾಶವಾಗಿದ್ದು, ಬದಲಿಗೆ ಆ ಆಕ್ರಮಣದ ಸಮಯ ಉಂಟಾದ ಅರಾಜಕತೆಯ ಪ್ರಯೋಜನ ಪಡೆದುಕೊಂಡು ನಳಂದ, ಮತ್ತು ವಿಹಾರಗಳು ನಾಶವಾದವು ಎಂದು ಓದಿದ್ದೇನೆ. http://jainology.bl… ಕೊನೆಯದಾಗಿ, ಇತಿಹಾಸದ ಗೋರಿ ಅಗೆಯುವ ನಮ್ಮೀ ಪ್ರವೃತ್ತಿ ಇತರೆ ಅಭಿವೃದ್ಧಿ ಶೀಲ ದೇಶಗಳ ಥರ ಮುಂದುವರೆಯಲು ನಮ್ಮನ್ನು ಬಿಡುತ್ತಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಹಿನ್ನಡೆಗೆ ಈ regressive ಮೆಂಟಾಲಿಟಿ ಕಾರಣ. http://www.buddhist… ಈ ಮೇಲಿನ ಕೊಂಡಿಯಲ್ಲಿ ಬೌದ್ಧ ಧರ್ಮದ ನಿರ್ನಾಮಕ್ಕೆ ಯಾವುದೇ ಧರ್ಮವನ್ನೂ ದೂರಿಲ್ಲ. ಒಂದು ಕಿವಿಮಾತು: ನಾನು ಹೇಳಿದ ವಿಷಯಗಳ ಬಗ್ಗೆಯಾಗಲೀ, ನಾನು ಕೊಟ್ಟ ಕೊಂಡಿಗಳ ಬಗ್ಗೆಯಾಗಲೀ ಅತೀ ಹೆಚ್ಚು ಪ್ರಾಮುಖ್ಯತೆ ಬೇಡ. ಇತಿಹಾಸ ಎನ್ನುವ ಗೋರಿ ಸ್ಮಶಾನಕ್ಕೆ ಸೀಮಿತವಾಗಿರಲಿ. ಎಲ್ಲರನ್ನೂ ಅರಿತು ಕೊಳ್ಳುತ್ತಾ, ಎಲ್ಲರನ್ನೂ ಮನ್ನಿಸುತ್ತಾ ನಡೆಯುವ ಮನಃಸ್ಥಿತಿ ನಮ್ಮದಾಗಲಿ.