ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೨: ಲೂಟಿಕೋರರಿಗಿದು ಸುಭಿಕ್ಷಕಾಲ

ಅರ್ಥ ಕಳೆದುಕೊಂಡ ಇಲಾಖಾ ವಿಚಾರಣೆಗಳು - ೨: ಲೂಟಿಕೋರರಿಗಿದು ಸುಭಿಕ್ಷಕಾಲ

     ಬಿಜಾಪುರ ಜಿಲ್ಲೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರಾಗಿದ್ದವರೊಬ್ಬರು ಮಾಡಿದ ಅವ್ಯವಹಾರದ ಪ್ರಸಂಗ ಉಲ್ಲೇಖನೀಯವಾದುದು. ಪ್ರತಿ ತಿಂಗಳೂ ೩೦೦ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಮಗ್ರಿಗಳನ್ನು ಬಿಡುಗಡೆ ಮಾಡುವಾಗ ೫೦ ಅಂಗಡಿಗಳಿಗೆ ಅಕ್ಕಿ ಮತ್ತು ಬೇರೆ ೫೦ ಅಂಗಡಿಗಳಿಗೆ ಗೋಧಿಯನ್ನು ಬಿಡುಗಡೆ ಮಾಡುತ್ತಿರಲಿಲ್ಲ. ಅದರ ಮುಂದಿನ ತಿಂಗಳಿನಲ್ಲಿ ಇನ್ನು ಬೇರೆ ಬೇರೆ ೫೦ ಅಂಗಡಿಗಳಿಗೆ ಅಕ್ಕಿ, ಗೋಧಿ ಕೊಡುತ್ತಿರಲಿಲ್ಲ. ಹೀಗೆ ಇದನ್ನು ರೊಟೇಶನ್ನಿನಂತೆ ಮಾಡುತ್ತಿದ್ದರು. ಪ್ರತಿ ತಿಂಗಳಿನಲ್ಲಿಯೂ ೫೦ ಅಂಗಡಿಗಳ ಅಕ್ಕಿ ಮತ್ತು ೫೦ ಅಂಗಡಿಗಳ ಗೋಧಿ ಸೋಲಾಪುರದ ದಾರಿ ಹಿಡಿಯುತ್ತಿದ್ದವು. ಅಲ್ಲಿ ಅದನ್ನು ಹಿಟ್ಟು, ರವೆಗಳಾಗಿ ಪರಿವರ್ತಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು. ಹೀಗೆ ಬಹಳ ಕಾಲದಿಂದ ನಡೆಯುತ್ತಿದ್ದ ವ್ಯವಹಾರದಿಂದ ಆ ಉಪನಿರ್ದೇಶಕರು ಆರ್ಥಿಕವಾಗಿ ಭಾರೀಕುಳ ಆದರು. ಒಮ್ಮೆ ಬಿಜಾಪುರದ ಜಿಲ್ಲಾಧಿಕಾರಿಯವರ ಕೈಗೆ ಈ ರೀತಿ ಆಹಾರ ಪದಾರ್ಥಗಳ ಕಳ್ಳಸಾಗಣೆಯಾಗುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಪ್ರಾಮಾಣಿಕ ಜಿಲ್ಲಾಧಿಕಾರಿಯಾಗಿದ್ದರಿಂದ ಅವರು ಮತ್ತು ಸಹಾಯಕ ಆಯುಕ್ತರು ಸ್ವತಃ ಸಗಟು ಗೋಡೌನಿಗೆ ಹೋಗಿ ಸತತವಾಗಿ ಐದು ದಿನಗಳ ಕಾಲ ಅವಿರತ ತಪಾಸಣೆ ಮಾಡಿದರು. ದಾಸ್ತಾನಿನಲ್ಲಿ ವ್ಯತ್ಯಾಸ ಇರುವುದು, ಅವ್ಯವಹಾರ ನಡೆದಿರುವುದು ಧೃಢಪಟ್ಟಿತು. ಉಪನಿರ್ದೇಶಕರು ಜಿಲ್ಲಾಮಟ್ಟದ ಅಧಿಕಾರಿಯಾಗಿದ್ದರಿಂದ ಅವರ ವಿರುದ್ಧ ಸರ್ಕಾರದ ಮಟ್ಟದಲ್ಲೇ ಕ್ರಮ ಜರುಗಿಸಬೇಕಿದ್ದಿತು. ಬೇರೆ ಜಿಲ್ಲಾಧಿಕಾರಿಯವರಾಗಿದ್ದರೆ ಪ್ರಕರಣ ಮುಚ್ಚಿಹೋಗುತ್ತಿತ್ತೋ ಏನೋ! ಆದರೆ, ಆ ಜಿಲ್ಲಾಧಿಕಾರಿಯವರು ಸ್ವತಃ ಮುತುವರ್ಜಿ ವಹಿಸಿ ಯಾವುದೇ ಮಾಹಿತಿಗಳನ್ನೂ ಬಿಡದಂತೆ ದಾಖಲೆಗಳ ಸಹಿತ ವರದಿ ಸಿದ್ಧಪಡಿಸಿಕೊಂಡು ಗೃಹ ಇಲಾಖೆಯ ಕಮಿಷನರರನ್ನು ಮುಖತಃ ಭೇಟಿ ಮಾಡಿ ಪ್ರಕರಣದ ಗಂಭೀರತೆಯನ್ನು ವಿವರಿಸಿದರು. ಆ ಸಂದರ್ಭದಲ್ಲಿ ಆಹಾರ ಮಂತ್ರಿಯಾಗಿದ್ದ ಶ್ರೀಮತಿ ಮನೋರಮಾ ಮಧ್ವರಾಜರನ್ನೂ ಅವರ ಮನೆಗೇ ಹೋಗಿ ಭೇಟಿ ಮಾಡಿ ಅವ್ಯವಹಾರದ ವಿಷಯ ಗಮನಕ್ಕೆ ತಂದರು. ಸಾರ್ವಜನಿಕರ ಆಹಾರದ ಲೂಟಿ ಮಾಡಿರುವವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಕೋರಿಕೊಂಡರು. ಆಹಾರ ಮಂತ್ರಿಗಳೂ ಒಪ್ಪಿ, ಸಿ.ಒ.ಡಿ. ತನಿಖೆಗೂ ಆದೇಶ ಮಾಡಿದರು. ಫಲಶೃತಿಯಾಗಿ ಉಪನಿರ್ದೇಶಕರು ಮತ್ತು ಫುಡ್ ಇನ್ಸ್ ಪೆಕ್ಟರರ ಬಂಧನವಾಯಿತು. ಎರಡು ದಿನಗಳ ಕಾಲ ಅವರು ಜೈಲಿನಲ್ಲಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದರು. 

     ೧೯೯೪ರಲ್ಲಿ ನಡೆದ ಈ ಪ್ರಕರಣದಲ್ಲಿ ೨೦೦೮ರವರೆವಿಗೂ ಸುಮಾರು ೧೪ ವರ್ಷಗಳ ಕಾಲ ವಿಚಾರಣೆ ನಡೆಯಿತು. ಸಿ.ಒ.ಡಿ. ತನಿಖೆಯಲ್ಲಿ ಉಪನಿರ್ದೇಶಕರು ಮಾಡಿದ ಅಪರಾಧ ರುಜುವಾತಾಗಿತ್ತು. ಸಿ.ಒ.ಡಿ.ಯವರು ತನಿಖೆ ನಡೆಸಬಹುದು, ತಪ್ಪಿತಸ್ಥರೆಂದು ತೀರ್ಮಾನಿಸಬಹುದು, ಆದರೆ ಅವರಿಗೆ ಶಿಕ್ಷೆ ಕೊಡಲು ಬರುವುದಿಲ್ಲ. ಕೇವಲ ಸರ್ಕಾರಕ್ಕೆ ವರದಿ ಸಲ್ಲಿಸಬಹುದಷ್ಟೆ. ಆ ಕೆಲಸವನ್ನು ಅವರು ಸರಿಯಾಗಿ ಮಾಡಿದರು. ನಂತರದಲ್ಲಿ ಸರ್ಕಾರದ ಕಡೆಯಿಂದ ಇಲಾಖಾ ವಿಚಾರಣೆ ನಡೆಯಿತು. ಅಧಿಕಾರಿಗಳು ಜಿಲ್ಲಾಧಿಕಾರಿಯವರನ್ನು (ಅಷ್ಟು ಹೊತ್ತಿಗೆ ಅವರು ಬಿಜಾಪುರದಿಂದ ಬೇರೆಡೆಗೆ ವರ್ಗವಾಗಿದ್ದರು) 'ಏನೋ ತಪ್ಪು ಮಾಡಿಬಿಟ್ಟಿದ್ದೇವೆ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಟ್ಟುಬಿಡಿ, ನಮ್ಮ ವಿರುದ್ಧ ಸಾಕ್ಷಿ ಹೇಳಬೇಡಿ' ಎಂದು ಪರಿಪರಿಯಾಗಿ ಬೇಡಿಕೊಂಡಿದ್ದರು. ಆದರೆ ಆ ಜಿಲ್ಲಾಧಿಕಾರಿಯವರು ಕರ್ತವ್ಯದ ದೃಷ್ಟಿಯಿಂದ ಮಾಡಬೇಕಾದ ಎಲ್ಲವನ್ನೂ ಮಾಡಿದರು. ಸಿ.ಒ.ಡಿ.ಯವರ ಮುಂದೆಯೂ, ಇಲಾಖಾ ವಿಚಾರಣಾಧಿಕಾರಿಯವರ ಮುಂದೆಯೂ ನೈಜ ಸಾಕ್ಷ್ಯ ಹೇಳಿದರು. ನಂತರದಲ್ಲಿ ಏನು ಆಯಿತೋ, ಹೇಗೆ ಆಯಿತೋ ಗೊತ್ತಿಲ್ಲ, ಅಧಿಕಾರಿಗಳು ನಿರ್ದೋಷಿಗಳಾಗಿ ಹೊರಬಂದರು! ಕಾನೂನುಗಳನ್ನು ಹೇಗೆ ತಿರುಚಬಹುದೆಂಬುದು ಮತ್ತು ಹೇಗೆ ಸುಲಭವಾಗಿ ಪಾರಾಗಬಹುದೆಂಬುದು ಜಾಹೀರಾಯಿತು. ವಿಶೇಷವೆಂದರೆ ಈ ಪ್ರಕರಣದಲ್ಲಿ ರಾಜಕಾರಣಿಗಳ ಹಸ್ತಕ್ಷೇಪವಿರಲಿಲ್ಲ. ಈ ಪ್ರಕರಣದಲ್ಲಿ ಸಾರ್ವಜನಿಕರಿಗೆ ಸೇರಬೇಕಾಗಿದ್ದ ಟನ್ನುಗಟ್ಟಲೆ ಅಕ್ಕಿ, ಗೋಧಿಗಳು ಕಾಳಸಂತೆಯ ಪಾಲಾಗಿದ್ದು ಸತ್ಯ, ಜಿಲ್ಲಾಧಿಕಾರಿಯವರು ಪ್ರಾಮಾಣಿಕವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಕ್ರಮ ಜರುಗಿಸಿದ್ದು ಸತ್ಯ, ಸಿ.ಒ.ಡಿ. ತನಿಖೆಯಲ್ಲಿ ಆರೋಪ ರುಜುವಾತಾಗಿದ್ದೂ ಸತ್ಯ, ಕೊನೆಗೆ ಇಲಾಖಾ ವಿಚಾರಣೆಯಲ್ಲಿ ಮಾತ್ರ ಸಂಬಂಧಿಸಿದವರು ನಿರ್ದೋಷಿಗಳೆಂದು ತೀರ್ಮಾನವಾಗಿ, ಅವರುಗಳು ಗೆಲುವಿನ ನಗೆ ಬೀರಿ, ಬರಬೇಕಾಗಿದ್ದ ಬಾಕಿ ಸಂಬಳ-ಸಾರಿಗೆಗಳನ್ನು ಪಡೆದುದಲ್ಲದೆ ಬಡ್ತಿಗಳನ್ನೂ ಪಡೆದು ಉನ್ನತ ಹುದ್ದೆಗೆ ಏರಿದ್ದೂ ಸತ್ಯವೇ!!

     ಭೂಗಳ್ಳತನ ಹೆಚ್ಚಾಗಿರುವುದಕ್ಕೆ ಕಾರಣ ಏನು, ಭೂಗಳ್ಳತನ ಮಾಡಿಯೂ ತಪ್ಪಿಸಿಕೊಳ್ಳುವುದು ಹೇಗೆ ಎಂದು ತಿಳಿಯಬೇಕೇ? ಈ ಪ್ರಕರಣ ನೋಡಿ. ಬಿಳಿಗಿರಿರಂಗನಬೆಟ್ಟದಲ್ಲಿ ಕಾಟ್ಟ ಅರಣ್ಯ ಪ್ರದೇಶದಲ್ಲಿ ೫೦ ಎಕರೆ ಜಾಗವನ್ನು ೫ ಜನರಿಗೆ ಭೂರಹಿತ ಕೃಷಿಕಾರ್ಮಿಕರಿಗೆ ಮಂಜೂರು ಮಾಡಿದ್ದರು. ಆ ಐದು ಜನ ಭೂರಹಿತ ಕೃಷಿಕಾರ್ಮಿಕರ ಪೈಕಿ ಸುಬ್ಬರಾವ್, ಕೃಷ್ಣಮೂರ್ತಿ, ರಜನೀಕಾಂತ್ ಇವರುಗಳೂ ಸೇರಿದ್ದರು. ಅವರೆಲ್ಲಾ ಬೆಂಗಳೂರಿನ ಸದಾಶಿವನಗರದಲ್ಲಿದ್ದವರು. ಸುಬ್ಬರಾವ್ ಅನ್ನುವವರು ಅಖಿಲ ಭಾರತ ಮಟ್ಟದ ಕೈಗಾರಿಕಾ ಸಂಸ್ಥೆಯೊಂದರ ಅಧ್ಯಕ್ಷರು. ಚಿತ್ರನಟ ರಜನೀಕಾಂತ್ ಬಗ್ಗೆ ತಿಳಿಯದವರಾರು? ಎಲ್ಲರೂ ಕೋಟ್ಯಾಧೀಶ್ವರರೇ. ಇವರುಗಳು ಭೂರಹಿತ ಕೃಷಿಕಾರ್ಮಿಕರು ಎಂದು ಪ್ರಮಾಣಪತ್ರ ಕೊಟ್ಟವರು, ಅದನ್ನು ಒಪ್ಪಿ ಜಮೀನು ಮಂಜೂರು ಮಾಡುವವರನ್ನು ಏನೆಂದು ಹೇಳಬೇಕು? ಇವರುಗಳು ಯಾರೂ ಭೂರಹಿತ ಕೃಷಿಕಾರ್ಮಿಕರಲ್ಲ, ಕೋಟ್ಯಾಧೀಶ್ವರರು, ಇವರುಗಳು ಭೂರಹಿತ ಕೃಷಿಕಾರ್ಮಿಕರು ಎಂದು ಧೃಢೀಕರಣ ಪತ್ರ ಪಡೆದಿದ್ದರೆ ಅದು ತಪ್ಪು ಎಂದು ಹೇಳಲು ಯಾವ ಕಾನೂನಿನ ತಿಳಿವಳಿಕೆಯೂ ಅಗತ್ಯವಿಲ್ಲ. ಸಾಮಾನ್ಯ ತಿಳುವಳಿಕಸ್ಥನಿರಲಿ, ಮೂರ್ಖನಿಗೂ ಗೊತ್ತಾಗುವ ಸಂಗತಿಯಿದು. ನಂಜನಗೂಡಿನ ಅಸಿಸ್ಟೆಂಟ್ ಕಮಿಷನರರ ಗಮನಕ್ಕೆ ಈ ವಿಷಯ ಗೊತ್ತಾಗಿ ಜಿಲ್ಲಾಧಿಕಾರಿಯವರಿಗೆ ಜಮೀನನ್ನು ವಾಪಸು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ವಿವರವಾದ ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಯವರು ಸಂಬಂಧಿಸಿದವರಿಗೆ ನೋಟೀಸು ಕೊಟ್ಟು ವಿಚಾರಣೆ ನಡೆಸಿ ಮಾಡಿದ ಆದೇಶವೆಂದರೆ ಮಂಜೂರಿದಾರರು ಮಂಜೂರಾದ ಜಮೀನನ್ನು ಸಾಗುವಳಿಗೆ ತರುವುದಕ್ಕೆ ಬಹು ದೊಡ್ಡ ಹಣವನ್ನು ವೆಚ್ಚ ಮಾಡಿದ್ದಾರೆ, ಆದ್ದರಿಂದ ಜಮೀನನ್ನು ಮರಳಿ ಸರ್ಕಾರಕ್ಕೆ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು! ಈ ನಿರ್ಧಾರ ಸರಿಯಾದುದಲ್ಲವೆಂದು ಪ್ರಕರಣದ ಅರಿವಿದ್ದ ಯಾರಿಗೇ ಆಗಲಿ ಗೊತ್ತಾಗದಿರದು. ಪ್ರೊಬೇಷನರಿ ಅಸಿಸ್ಟೆಂಟ್ ಕಮಿಷನರರು ಐ.ಎ.ಎಸ್. ಕೇಡರಿನವರಾಗಿದ್ದು, ಅವರಿಗೆ ಈ ಅದೇಶ ಸರಿಕಾಣದೇ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ದೂರು ಸಲ್ಲಿಸಿದರು. ಆ ದೂರು ಲೋಕಾಯುಕ್ತಕ್ಕೆ ಹೋಯಿತು. ಸಂಬಂಧಿಸಿದ ತಹಸೀಲ್ದಾರ್, ರೆವಿನ್ಯೂ ಇನ್ಸ್ ಪೆಕ್ಟರ್, ಸರ್ವೆಯರ್, ಗ್ರಾಮಲೆಕ್ಕಿಗರು ಎಲ್ಲರೂ ಅಮಾನತ್ತುಗೊಂಡರು. ಇಲಾಖಾ ವಿಚಾರಣೆಯೂ ನಡೆತು. ದೂರು ನೀಡಿದ್ದ ಅಸಿಸ್ಟೆಂಟ್ ಕಮಿಷನರರು ಸಾಕ್ಷ್ಯ ಸಹ ಹೇಳಿದ್ದರು, ಮಂಜೂರಾತಿಯಲ್ಲಿ ಅಕ್ರಮವಾಗಿದೆಯೆಂದು ತಿಳಿಸಿದ್ದರು. ಆದರೂ, ಕೆಲವು ವರ್ಷಗಳ ನಂತರ ಎಲ್ಲರೂ ನಿರಪರಾಧಿಗಳೆಂದು ಆದೇಶವಾಯಿತು. ಕ್ರಮೇಣ ಪ್ರಕರಣ ಮುಚ್ಚಿಹೋಯಿತು. ಆರೋಪಿಗಳಾಗಿದ್ದವರಿಗೆ ಬಡ್ತಿಯ ಬಹುಮಾನವೂ ಸಿಕ್ಕಿತು, ಎಲ್ಲರೂ ವಿಷಯವನ್ನು ಮರೆತೇಬಿಟ್ಟರು ಎಂಬಲ್ಲಿಗೆ ನಿರರ್ಥಕವೆನಿಸಿದ ಇಲಾಖಾ ವಿಚಾರಣಾ ಪ್ರಸಂಗಗಳ ಎರಡನೆಯ ಅಧ್ಯಾಯಕ್ಕೆ ಮಂಗಳವು.

 -ಕ.ವೆಂ.ನಾಗರಾಜ್. 

Comments

Submitted by makara Tue, 05/28/2013 - 22:28

ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಒಬ್ಬ ವ್ಯಕ್ತಿ ಒಂದು ಅಫಿಡವಿಟ್‌ ಮಾಡಿಸಿದ್ದ. ಅದರ ಪ್ರಕಾರ ಅವನು ಜೆ.ಹೆಚ್. ಪಟೇಲ್, ಉದ್ಯೋಗ: ಹಮಾಲಿ, ವಯಸ್ಸು - ೫೨ ಹೀಗೆ ವಿವರಗಳನ್ನು ಬರೆದು ಅಫಿಡವಿಟ್ ಮಾಡಿಸಿದ್ದ. ಒಬ್ಬ ಮುಖ್ಯಮಂತ್ರಿಯನ್ನೇ ಕೂಲಿ ಎಂದು ಬರೆದರೂ ಸಹ ಅದನ್ನು ಓದುವ ಗೋಜಿಗೆ ಹೋಗೆ ಅವನಿಂದ ಇಪ್ಪತ್ತೋ - ಮೂವತ್ತೋ ರೂಪಾಯಿಗಳನ್ನು ಕಿತ್ತುಕೊಂಡು ಅಫಿಡವಿಟ್‌ಗೆ ಸಹಿ ಮಾಡಿಕೊಟ್ಟ ನೋಟರಿಗಳಿರುವಾಗ ಇನ್ನು ರಜನೀಕಾಂತ್ ಜಮೀನು ರಹಿತ ಕೃಷಿ ಕಾರ್ಮಿಕನೆಂದು ಅಫಿಡವಿಟ್ ಮಾಡಿಸುವುದು ಕಷ್ಟವಾ. ನಿಜಕ್ಕೂ ಎಷ್ಟೋ ಸಿನಿಮಾಗಳಲ್ಲಿ ರಜನೀಕಾಂತ್ ಕೂಲಿ ಪಾರ್ಟ್ ಮಾಡಿಲ್ಲವಾ? ಇದನ್ಯಾಕೆ ಸುಳ್ಳು ಅಂತಾ ಹೇಳ್ತೀರ ಕವಿಗಳೆ! :))
Submitted by kavinagaraj Fri, 05/31/2013 - 12:37

In reply to by makara

:)) ರಜನೀಕಾಂತರಿಗೆ ಪ್ರಮಾಣ ಪತ್ರ ಕೊಟ್ಟವರು, ಅದನ್ನು ಸರಿಯೆಂದವರು, ಅವರಿಗೆ ಬಹಳ ಕಷ್ಟವಿದೆಯಾದ್ದರಿಂದ ಜಮೀನು ಅವರಲ್ಲೇ ಇರಲಿ ಎಂದವರು ಯಾರದೂ ತಪ್ಪಿಲ್ಲ. ಅದನ್ನು ತಪ್ಪು ಎಂದವರದೇ ತಪ್ಪು! :((
Submitted by lpitnal@gmail.com Tue, 05/28/2013 - 22:46

ನಾಗರಾಜ ಸರ್, ತುಂಬ ಜ್ವಲಂತ ಉದಾಯರಣೆ ಮೂಲಕ ಈ ನೆಲದಲ್ಲಿ ನಡೆಯುವ ಕೆಲಸ ಕಾರ್ಯಗಳ ಮೂಲಕ ಭ್ರಷ್ಟಾಚಾರದ ವಿರಾಟ ರೂಪವನ್ನೆ ತೆರೆದಿಟ್ಟಿರುವಿರಿ. ಈ ನಾಡನ್ನು ದೇವರೇ ಕಾಪಾಡಬೇಕು.
Submitted by nageshamysore Wed, 05/29/2013 - 02:52

ಕವಿನಾಗರಾಜರವರೆ, ಇಂತಹ ಉದಾಹರಣೆಗಳ ಅಡ್ಡ ಪರಿಣಾಮವೆಂದರೆ, ಹಾಗೆಯೆ ಮಾಡುತ್ತಿರುವ ಇನ್ನು ಎಷ್ಟೊ ಜನರಿಗೆ ಇನ್ನಷ್ಟು ಹೆಚ್ಚುವ ಧೈರ್ಯ - ಯಾವುದಾದರು ದಾರಿ ಸಿಗುವುದೆನ್ನುವ ಭಂಡತನ. ಹೇಗೂ ಅಲ್ಲಿ ಗಳಿಸಿದ್ದನ್ನೆ ಚೆಲ್ಲಿ ಹೊರಬರಬಹುದಲ್ಲ ಎನ್ನುವ ನಿರಾಳತೆ. ಕೊನೆಗೂ ಅಪಹಾಸ್ಯಕ್ಕಿಡಾಗುವುದು ಪ್ರಾಮಾಣಿಕತೆ, ಮತ್ತು ಅದನ್ನು ಪಾಲಿಸುವ ಪ್ರಾಮಾಣಿಕ ಮಂದಿ - ನಾಗೇಶ ಮೈಸೂರು , ಸಿಂಗಪುರದಿಂದ
Submitted by kavinagaraj Fri, 05/31/2013 - 12:40

In reply to by nageshamysore

ನಾನಂತೂ ಆಶಾವಾದಿ. ಇಷ್ಟನ್ನೆಲ್ಲಾ ನೋಡುತ್ತಿದ್ದರೂ, ಅರಿವಿಗೆ ಬರುತ್ತಿದ್ದರೂ ಸರಿ ಹೋಗುತ್ತದೆ ಎನ್ನುವವನ ಭಂಡರ ಗುಂಪಿಗೆ ಸೇರುವವನು ನಾನು!! :) ಧನ್ಯವಾದ, ನಾಗೇಶರೇ.