ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ?

ಹೆಚ್ಚು ಬೆಲೆಯೆಂದರೆ ಶ್ರೇಷ್ಟ ಗುಣಮಟ್ಟವಿರಬೇಕೆಂದೇನಿಲ್ಲ, ಗೊತ್ತಾ?

ಮಾರಾಟದರ ಲೆಕ್ಕಿಸುವ ಲೆಕ್ಕಾಚಾರ....!

ವಾಣಿಜ್ಯ ಜಗತ್ತಿನಲ್ಲಿ ಕೆಲಸ ಮಾಡುವವರು ಏನು ಕೆಲಸ ಮಾಡುತ್ತಾರೆಂಬ ಕುತೂಹಲ, ಆ ಜಗದಲಿ ತಡಕಾಡದ ಎಷ್ಟೊ ಜನಗಳಿಗಿರಬಹುದು. ಅಲ್ಲೆ ಕೆಲಸ ಮಾಡುವ ಎಷ್ಟೊ ಜನಗಳಿಗೂ ಎಲ್ಲ ತಿಳಿದಿರುವುದೆಂದು ಹೇಳುವಂತಿಲ್ಲ. ಅವರವರ ಪಾಲಿನ ಕೆಲಸ ಅವರು ಮಾಡಿಕೊಂಡು ಹೋಗುವ ಪ್ರವೃತ್ತಿ / ಪ್ರಕೃತಿಯಿಂದಾಗಿ ಹಾಗೂ ಕಾರ್ಯಭಾರದ ಒತ್ತಡದ ನಡುವೆ ತಿಳಿಯುವ ಸಾಧ್ಯತೆಯೂ ಕಡಿಮೆ. ಅದನ್ನು ತಿಳಿದುಕೊಂಡೇನು ಮಾಡಬೇಕಿದೆಯೇನು, ಅನ್ನುವಿರಾ? ಕೊಂಚ ತಾಳಿ! ಈ ಜಗದಲಿ ನಡೆಯುವ ಎಷ್ಟೊ ಪ್ರವರಗಳು, ಲೆಕ್ಕಾಚಾರಗಳು ನಿಮಗರಿಯದ ರೀತಿಯಲಿ, ನಿಮ್ಮ ಮೇಲೂ ಪರಿಣಾಮ ಬೀರಿರುತ್ತದೆ, ಪ್ರತ್ಯಕ್ಷವಾಗಿ ಇಲ್ಲ ಪರೋಕ್ಷವಾಗಿ!

ಉದಾಹರಣೆಗೆ, ನೀವೊಂದು ಟಿವಿ ಖರೀದಿಸಬೇಕೆಂದುಕೊಂಡಿದ್ದಿರೆನ್ನಿ. ಮಾರುಕಟ್ಟೆಯಲ್ಲಿ, ಎಷ್ಟೊಂದು ತರದ ಬ್ರಾಂಡುಗಳು, ಮಾಡೆಲ್ಲುಗಳು ಸಾಗರೋಪಾದಿಯಲಿ ಲಭ್ಯವಿರುತ್ತದೆ - ಆಯ್ಕೆಯೆ ತೊಡಕಾಗುವಷ್ಟು. ಆದರೆ, ಬೆಲೆಗಳ ವಿಷಯಕ್ಕೆ ಬಂದರೆ ಅಧೋಮುಖಿಯಿಂದಿಡಿದು, ಉರ್ಧ್ವಮುಖಿಯವರೆಗೆ ಎಲ್ಲಾ ಬೆಲೆಯ ಆಯ್ಕೆಗಳು ಲಭ್ಯ. ಅವುಗಳ ಅಂತರವೆ ಗೊಂದಲಹುಟ್ಟಿಸಿ ಸಕಾರಣ, ಅಕಾರಣ, ವಿನಾಕಾರಣ ಅನೇಕ ತರಹದ ಅನಿಸಿಕೆ, ಕಲ್ಪನೆಗಳಿಗೆ ಕಾರಣವಾಗುವುದೂ ಸಹಜ. ಉದಾಹರಣೆಗೆ, ಸಾಮಾನ್ಯವಾಗಿ ಜನಸಾಮಾನ್ಯರಲ್ಲಿರುವ ಒಂದು ಅನಿಸಿಕೆ - ಹೆಚ್ಚು ಬೆಲೆಯುಳ್ಳದ್ದೆಂದರೆ ಹೆಚ್ಚಿನ ಗುಣಮಟ್ಟದ್ದೆಂಬ ಭ್ರಾಂತಿ; ಗುಣಮಟ್ಟದ ಸ್ತರ ಬೆಲೆಯ ಮೇಲೆ ಪರಿಣಾಮ ಬೀರುವುದಾದರೂ, ಹೆಚ್ಚು ಬೆಲೆಯುಳ್ಳದ್ದು ಶ್ರೇಷ್ಟ ಗುಣಮಟ್ಟದ್ದಿರಬೇಕೆಂದೇನೂ ಇಲ್ಲ. ವಸ್ತುಗಳ ಬೆಲೆ ನಿಗದಿಪಡಿಸುವ ಲೆಕ್ಕಾಚಾರವೆ ಬೇರೆಯದೆ ಒಂದು ಶಾಸ್ತ್ರದ ನಿಯಮಾವಳಿ ಪಾಲಿಸುವುದರಿಂದ ಅಲ್ಲಿ ಕೆಲಸ ಮಾಡುವ ಕ್ರಿಯಾಶಾಸ್ತ್ರದ ಸರಕುಗಳೆ ಬೇರೆಯ ಸರಹದ್ದಿಗೆ ಸೇರಿದ್ದು. ಆದರೂ, ಸ್ಥೂಲವಾಗಿ ಈ ಲೆಕ್ಕಾಚಾರ ಹೇಗೆ ನಡೆಯುವುದೆಂಬ ಪರಿಕಲ್ಪನೆ ನೀಡುವ ಉದ್ದೇಶ, ಈ ಪುಟ್ಟ ಬರಹದ್ದು. ಒಂದು ವಸ್ತುವಿನ ಬೆಲೆ ಹೇಗೆ ನಿರ್ಧಾರವಾಗುತ್ತದೆಂಬ ಸರಳ ಪರಿಚಯ ಮಾಡಿಕೊಡುವ ಯತ್ನ.

ಅರ್ಥ ಮಾಡಿಕೊಳ್ಳಲು ಸುಲಭವಾಗಲೆಂದು ಒಂದು ಸರಳಿಕರಿಸಿದ ಉದಾಹರಣೆಯೊಂದಿಗೆ ಈ ಪ್ರಕ್ರಿಯೆಯನ್ನು ಅರಿಯಲೆತ್ನಿಸೋಣ. ಪಾದರಕ್ಷೆಯನ್ನು ತಯಾರಿಸುವ ಒಂದು ಸಣ್ಣ ಅಥವಾ ಮಧ್ಯಮ ಗಾತ್ರದ ಗಿರಣಿಯೊಂದನ್ನು (ಫ್ಯಾಕ್ಟರಿ) ಪರಿಗಣಿಸೋಣ. ಅಲ್ಲಿ ನಡೆಯುವ ಪ್ರಕ್ರಿಯೆಗಳಿಗೆ ಬೇಕಾದ ಕೆಲ ಮೂಲಭೂತ ಅಂಶಗಳನ್ನು ಹಾಗೂ ಚಟುವಟಿಕೆಗಳನ್ನು  ಈ ಕೆಳಕಂಡಂತೆ ವಿಂಗಡಿಸಿ ಪಟ್ಟಿ ಮಾಡೋಣ. 

1. ಎಲ್ಲಾ ತರಹದ ಕಾರ್ಯಚಟುವಟಿಕೆಗೂ ಮುಖ್ಯ ಬೇಕಾದ್ದು 'ದುಡ್ಡೆ ದೊಡ್ಡಪ್ಪ' - ಅರ್ಥಾತ್ ಬಂಡವಾಳಾವಾಗಿ ಮೂಲಧನ. ಕೈಯಿಂದಾದರೂ ಹಾಕಿ, ಬ್ಯಾಂಕಿದಾದರೂ ಬಡ್ಡಿಗೆ ಸಾಲ ತನ್ನಿ (ಆ ಕಟ್ಟುವ ಬಡ್ಡಿಯು ವೆಚ್ಚದೊಳಕ್ಕೆ ಹೇಗೋ ಒಂದು ತರದಲಿ ನುಸುಳಿ, ನಾವು ತೆತ್ತು ತರುವ ಪಾದರಕ್ಷೆಯೊಳಗೆ ಅಂತರ್ಗತವಾಗಿರುತ್ತದೆಂಬುದು ಕಣ್ಣಿಗೆ ಕಾಣಿಸದು, ಅದು ಬೇರೆ ವಿಷಯ ಬಿಡಿ!)

2. ಕೂರಲೊಂದು ಛೇರು, ನೆಲೆಗೊಂದು ಸೂರು ಎನ್ನುವಂತೆ - ಈ ಎಲ್ಲಾ ಚಟುವಟಿಕೆ ನಡೆಸಲೊಂದು ಸೂರು ಬೇಕಲ್ಲಾ? ಅಂದಮೇಲೆ ಷೆಡ್ದೊಂದನ್ನಾದರೂ ಬಾಡಿಗೆ ಹಿಡಿಯಬೇಕಲ್ಲವೆ ( ನಿಮ್ಮ ಹಿತ್ತಲೊ, ಗ್ಯಾರೇಜೊ ಆಗಬದಿತ್ತೇನೊ - ಅದರೆ ನಾವಿರುವ ಕಿಷ್ಕಿಂಧಾಕಾಂಡದಲ್ಲಿ, ಅವುಗಳಿಗೆ ಜಾಗವಿರುವುದೆ ಅನುಮಾನ ಬಿಡಿ; ಇದ್ದರೂ ಅಲ್ಲಿ ಗಿರಣಿ ನಡೆಸುವಂತಿಲ್ಲ ಅನ್ನುವ ನೂರಿಪ್ಪತ್ತೆಂಟು ಕಾಯಿದೆ, ಕಾನೂನುಗಳು ಹೇಗೂ ಕಾಡುತ್ತವೆ). ಅಲ್ಲಿಗೆಮತ್ತೊಂದು ಬಾಡಿಗೆ ಖರ್ಚಿನ ಬಾಬ್ತು ವೆಚ್ಚಕ್ಕೆ ಸೇರಿಕೊಂಡಿತು! (ಅರ್ಥಾತ್ ನಾವ್ತೆರುವ ಪಾದರಕ್ಷೆಯ ಬೆಲೆಗೆ)

3. ಜನರಿಲ್ಲದ ಮನೆ ಮಸಾಣಕೆ ಸಮ - ಎಂದನಂತೆ ಯಾವನೊ ಮಹಾನುಭಾವ. ನಮ್ಮ ಪುಟ್ಟ ಗಿರಣಿಯೂ ಅದಕ್ಕೆ ಹೊರತೆ? ಬಾಗಿಲು ಕಾಯುವ ದ್ವಾರಪಾಲಕರಿಂದ ಹಿಡಿದು, ಗುಮಾಸ್ತೆ, ಕಾರ್ಮಿಕ, ಮೇಲ್ವಿಚಾರಕ, ಉಗ್ರಾಣ ಜವಾಬ್ದಾರಿಯ ಉಗ್ರ, ಖಂಡುಗ ಸರಕ ಕೊಳ್ಳುಗ, ವಿತರಣೆ ಹಾಗು ಮಾರಾಟದ ಲಾಗ, ಹಣಾಕಾಸಿಗ - ಹೀಗೆ ಎಷ್ಟೊ ತರದ ಕೆಲಸಕ್ಕೆ ಸರಿಯಾದ ಜನರಿಲ್ಲದೆ ಆಗುವುದೆ? ಪುಟ್ಟ ಕಾರ್ಖಾನೆಗೆಲ್ಲಿಂದ ತರುವುದಷ್ಟು ಮಂದಿ ಎಂದಿರಾ? ನಿಜ, ನಿಜ ವೆಚ್ಚವೆ ಭರಿಸಲಾಗದೆ ಅಂಗಡಿ ಮುಚ್ಚುವಂತಾಗಬಾರದು ನೋಡಿ. ಇದರಲ್ಲರ್ಧ ಕೆಲಸದ ಟೋಪಿಗೆ ನಿಮ್ಮ ತಲೆಯನ್ನೆ ಇಡಿ. ಮಿಕ್ಕಿದ್ದನ್ನು ಒಬ್ಬೊಬ್ಬರಿಗೆ ತಲಾ ಎರಡು, ಮೂರರಂತೆ ಶಕ್ತಾನುಸಾರ ಹಂಚಿಬಿಡಿ (ನೆನಪಿರಲಿ - ಕೆಲಸ ಮಾತ್ರ, ಹೆಚ್ಚು ಸಂಬಳವಲ್ಲ...ಹಾಗೇನಾದರೂ ಆದರೆ ಗೊತ್ತಲ್ಲ - ಏರುವ ವೆಚ್ಚ, ಏರುವ ಪಾದರಕ್ಷೆ ಬೆಲೆ, ಕೊಳ್ಳದ ಗ್ರಾಹಕ..ಯಾಕೆ, ಇಲ್ಲದ ತಲೆನೋವು!). ಆದರೆ ದೊಡ್ಡ ಗಿರಣಿಗಳ ಕಥೆಯೇನು? ಆಡಿಟ್ಟು, ಉದ್ಯೋಗಿಯ ಕಾರ್ಯಕ್ಷಮತೆ, ನ್ಯಾಯಬದ್ದ ಕೆಲಸದ ಹಂಚಿಕೆ, ಕಾರ್ಮಿಕ ಸಂಘದ ಒಪ್ಪಂದ - ಹೀಗೆ ಯಾವ್ಯಾವುದೊ ವೆಚ್ಚದ ಭೂತಗಳೆಲ್ಲಾ ಸೇರಿ ಹೆಚ್ಚು ಜನರಿರುವ ಅನಿವಾರ್ಯವನ್ನು ಸೃಷ್ಟಿಸಿಬಿಡುತ್ತವೆ. ಪಾಪ! ಅವರು ಬೇರೇನು ತಾನೆ ಮಾಡಿಯಾರು, ಆ ವೆಚ್ಚಗಳೆಲ್ಲಾ ಪಾದರಕ್ಷೆಯ ಮೇಲೆ ಹಾಕದೆ? ಕಡೆಗೆ, ಆ ವೆಚ್ಚವನ್ನೆಲ್ಲ ತೆರಬೇಕಾದವರೂ, ನೀವೆ (ಗ್ರಾಹಕ) ಎಂದು ಗೊತ್ತಿದೆ..ಆದರೂ...ಇಲ್ಲಿ ಹೆಚ್ಚಿನ ಗುಣಮಟ್ಟವೆಲ್ಲಿಂದ ಬಂತು, ಬರಿ ಹೆಚ್ಚಿನ ವೆಚ್ಚವಷ್ಟೆ ಎಂದಿರಾ? ಪ್ರಾಮಾಣಿಕವಾಗಿ, ನನದೂ ಅದೇ ಅನಿಸಿಕೆ!

4. ಜಾಗವಾಯ್ತು, ಜನವಾಯ್ತು ಅವರಿಗೆಲ್ಲ ತೆರುವ ಕಾಸಿನ ವ್ಯವಸ್ಥೆಯೂ ಆಯ್ತು. ಇನ್ನೇನು ಬಾಕಿ - ಕೆಲಸ ಆರಂಭಿಸುವುದು ತಾನೆ? ಅರೆ, ಬರಿ ಜನಗಳಿದ್ದರೆ ಸಾಕಾಗದಲ್ಲ - ಜನಗಳಿಂದಾಗದ ಕೆಲಸಕ್ಕೆ ಅಥವಾ ಹೆಚ್ಚು ದಕ್ಷತೆ, ವೇಗದಿಂದ ಮಾಡುವ ಸಲುವಾಗಿ ಯಂತ್ರಗಳ ಮೊರೆ ಹೊಕ್ಕದಿದ್ದಾರಾದೀತೆ? ಸರಿ, ಸುರಿದು ಕೋಟಿಗಟ್ಟಲೆ ಸಾಲ, ಬ್ಯಾಂಕಿನ ಬಡ್ಡಿ, ಕಂತುಗಳ ಸರಕಿನ ಚಕ್ರ - ಫ್ಯಾಕ್ಟರಿಯಲಿ ಶುರು, ಮೆಷೀನೂಗಳ ದುಡಿಯುವ ಸದ್ದು. ಈ ಹಣದ ಹೊರೆಯೆಲ್ಲ ಕೊನೆಗೆ ಯಾರು ಹೊರುವುದು? ಛೆ!ಛೆ! ಎಲ್ಲವನ್ನು ನೀವೆ ಹೊತ್ತುಕೊಳ್ಳಲಾದೀತೆ? ಕೊಳ್ಳುವವರೆಲ್ಲರಿಗೂ ತುಸುತುಸುವೆ ಹಂಚಿಬಿಟ್ಟು ಸಮಾಜವಾದದ ಸಮನ್ವಯ ಜಾಗಟೆ ಬಾರಿಸಿದೆನೆನ್ನುತ್ತದೆ ಈ ಹಂಚಿಕೆಯ ಹೊಂಚಾಟ. ಅಂದಹಾಗೆ ಮರೆಯಬೇಡಿ, ಬರಿ ಹೊಸಯಂತ್ರದ ವೆಚ್ಚ ಭರಿಸಿದರೆ ಮಾತ್ರ ಸಾಲದು; ಅದಕ್ಕೂ ಆಯಸ್ಸು ಕಳೆದು, ಮುದಿಯಾದಾಗ ಹೊಸ ಯುವಕ ಯಂತ್ರ ಬರಬೇಕಲ್ಲ? ಅದಕ್ಕೆ ಹಣ ಬೇಡವೆ? ಅದಕ್ಕಾಗಿ ಸವಕಳಿಯ ದರವನ್ನು ನಿಗದಿಪಡಿಸಿ ಆ ಹಣವನ್ನು ಸವಕಳಿ ಅವಧಿ ಮುಗಿಯುವವರೆಗೂ ಎತ್ತಿಡುತ್ತಾ ಬರುತ್ತಾರೆ (ಇಳಿತಾಯ ನಿಧಿ, ಡಿಪ್ರಿಸಿಯೆಷನ್ ಫಂಡ್). ಅದೂ ಯಾವುದೊ ರೀತಿಯಲ್ಲಿ ಒಟ್ಟಾರೆ ಪರಿಣಾಮದಡಿ ಗ್ರಾಹಕನಿಗೆ ತಾಗದಿರುವುದಿಲ್ಲ.

5. ಹಾಳಾಗಲಿ ಬಿಡಿ, ಮುಂದೇನು ಎಂದು ನೋಡೋಣ. ಇಲ್ಲಿ ತಯರಾಗುವ ವಸ್ತುಗಳಿಗೆ ಮುಖ್ಯ ಮೂಲಸರಕುಗಳು ಚರ್ಮದ ಪಟ್ಟಿಗಳು, ಮರ, ರಬ್ಬರು, ಪ್ಲಾಸ್ಟಿಕ್ಕು, ಅಂಟು, ಹೊಲಿಗೆಯ ದಾರ, ಬಣ್ಣ, ಸೌಂದರ್ಯವರ್ಧಕಗಳು ಇತ್ಯಾದಿ. ಬರಿ ನಡೆದಾಡುವ ಚಪ್ಪಲಿಗೆ ಬೇಕಾದ್ದು ಸರಳ ಸರಕಾದರೂ, ಫ್ಯಾಷನಿನ ಸರಕಾದರೆ ಏನೇನೊ ಬೇಕಲ್ಲ? ಒಂದು ವೇಳೆ ನೀವು ಕುಳ್ಳರಿದ್ದರೆ, ಎತ್ತರ ಕಾಣುವ ಹೈ ಹೀಲ್ಡ್ ಬೇಕೆಂದರೆ ಸಿಗುವಂತಿರಬೇಕಲ್ಲ? (ಹಾಗೆಯೆ ತೀರ ಎತ್ತರದವರಿಗೆ ಚಪ್ಪಟೆಯಟ್ಟೆಯದು) ಅದಕ್ಕೆ, ಬೇಕಿದ್ದ, ಬೇಡದ ಎಲ್ಲ ಸಾಮಾಗ್ರಿಗಳನ್ನು ತಂದಿಡಬೇಕು. ತರಲು ಸುಮ್ಮನೆ ಬರುವುದಿಲ್ಲವಲ್ಲ - ಮತ್ತೆ ವರ್ತಕನಿಂದ ಸಾಲವೊ, ನಗದೊ ತರುವಾಟ. ತಂದಿದ್ದು ಜತನದಲಿ ಕಾಯಲು ಉಗ್ರಾಣದಲಿ ಜಾಗ, ಲೆಕ್ಕಾಚಾರದ ನಿಗ, ಕದ್ದೊಯದ ಹಾಗೆ ಕಾಯುವ ಬೀಗ..ಹೀಗೆ ಏನೆ ಮಾಡಿದರೂ ಎಲ್ಲಾ ಸರಕಿನ ಸುರಕ್ಷೆಗಾಗಿ, ಅದು ಸುಸ್ಥಿತಿಯಲ್ಲಿ ಹೊಸ ಪಾದರಕ್ಷೆಯಾಗಿ ನಿಮ್ಮ ಕೈ ಸೇರಿಸುವ ಸಲುವಾಗಿ. ಅಂದಮೇಲೆ ಹಾಗಿಡಲು ಖರ್ಚಾಗುವ ವೆಚ್ಚವನ್ನು ಕಡೆಗಣಿಸಲಾಗದಲ್ಲಾ...ಅದನ್ನು ವೆಚ್ಚದ ರೂಪದಲಿ ಸೇರಿಸಿ ಹಂಚಿಬಿಟ್ಟು ಎಲ್ಲರು ತುಸುತುಸೆ ಹೆಗಲ ಕೊಡುವಂತೆ ಮಾಡುವುದೊಳಿತಲ್ಲವೆ? ನೀವದೆಲ್ಲಾ ಕಾಣುವುದಿಲ್ಲ ಬಿಡಿ - ಅಂಗಡಿಯಲಿ ಕೊಂಡಾಗ ಕಾಣುವುದು ಬರಿ ಒಂದೇ ಬೆಲೆಯಷ್ಟೆ!

6. ಚರ್ಮ ಹದ ಮಾಡಬೇಕು, ಸಂಸ್ಕರಿಸಬೇಕು, ಗಾತ್ರ ಮತ್ತು ಆಕಾರಕ್ಕೆ ಕತ್ತರಿಸಬೇಕು, ಹೊಲಿಯಬೇಕು, ಅಂಟಿಸಬೇಕು - ಹೀಗೆ ಮೂಲ ಸರಕನ್ನು (ರಾ ಮೆಟೀರಿಯಲ್ಸ್) ಚೆನ್ನಾಗಿ ಬೆಂಡೆತ್ತಿ, ಸಿದ್ದ (ಪಾದ)ರಕ್ಷೆಯಾಗಿಸುವತನಕ ಮಾಡುವ ಏನೇನೊ ಸರ್ಕಸ್ಸಿಗೆ ಮತ್ತೆ ವಿದ್ಯುತ್, ಕಾರ್ಮಿಕರ ಸಮಯ, ನೀರು, ಪರಿಕರ, ಸಲಕರಣೆಗಳು, ಗುಣಮಟ್ಟ ವಿಚಕ್ಷಣೆ - ಎಲ್ಲಾ ಮತ್ತಷ್ಟು ಖರ್ಚು ವೆಚ್ಚದ ದಾರಿ ತೋರಿಸಿ ಸಿದ್ದ ಸರಕಿನ ಮೂಲ ದರಕ್ಕೆ ಸೇರುಗಡೆಯಾಗುತ್ತದೆ. ಕೊನೆಗೆ ತಯಾರಿಸಿದ ಸಿದ್ದರಕ್ಷೆಗಳನ್ನು ಸರಿಯಾದ ಪ್ಯಾಕೇಜುಗಳಲಿ ತುಂಬಿಸಿ, ಸಾಗಾಣಿಕಾ ಚಕ್ರವ್ಯೂಹದಲಿ ಬೇಕಾದ ಕಡೆಗೆ ರವಾನಿಸಿ ಶೋರೂಮಿನ ಶೆಲ್ಪುಗಳಲ್ಲಿ ಕೂರಿಸುವ ತನಕದ ಎಲ್ಲಾ ವೆಚ್ಚವೂ ಮೂಲ ದರದ ಪಾಲಿಗೆ ಸೇರಿಕೊಳ್ಳುತ್ತವೆ. ಈಗಲೂ ಅದೆ ಭರವಸೆ - ನೀವು ಕೊಳ್ಳುವ ಬೆಲೆಯಲ್ಲಾಗಲೆ ಅದು ಸೇರಿಕೊಂಡು ಬಿಟ್ಟಿರುವ ಕಾರಣ, ನಿಮಗದು ಅರಿವೆ ಆಗುವುದಿಲ್ಲ!

7. ಇದರಲ್ಲೇನಿದೆ ಹೊಸತು - ಎಂದಿರಾ? ಅದಕ್ಕೆ ಮೊದಲು, ಇನ್ನು ಸ್ವಲ್ಪ ಮಿಕ್ಕಿದೆ - ಅದನ್ನು ಮುಗಿಸಿಬಿಡುವ ತಾಳಿ. ಈ ಮೇಲಿನದೆಲ್ಲ ಒಂದು ರೀತಿಯಲಿ ನ್ಯಾಯಬದ್ದವಾಗಿ ಸಂಭವಿಸಿದ ವೆಚ್ಚಗಳೆ. ಈ ಜಗದಲ್ಯಾವುದು ಪುಕ್ಕಟೆ ಸಿಗದಲ್ಲಾ - ಖರ್ಚು ವೆಚ್ಚ ಮಾಡಿದ್ದೆಲ್ಲಾ ನಿಮ್ಮ ಸುಂದರ ಪಾದರಕ್ಷೆ ತಯಾರಿಸುವುದಕ್ಕಾಗಿ ತಾನೆ? ಆದರೆ ತಮಾಷೆಯಿರುವುದು ಇಲ್ಲೆ. ಮೂಲ ಸರಕಿನ ವೆಚ್ಚ, ಕೂಲಿ ಕಂಬಳಿ ವೆಚ್ಚ - ಇತ್ಯಾದಿ ನೇರ ವೆಚ್ಚಗಳು ತಯಾರಿಸುವ ವಸ್ತುವಿಗೆ ನೇರವಾಗಿ ಸೇರಿಕೊಳ್ಳುತ್ತವೆ ಅಥವಾ ಬಳಸಲ್ಪಡುತ್ತವೆ. ಇದೆ ಸಮಯದಲ್ಲಿ, ಈ ಇಡೀ ವ್ಯವಸ್ಥೆಯೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವ ಆಧಾರ ವ್ಯವಸ್ಥೆಯ ವೆಚ್ಚಗಳನ್ನು ಭರಿಸಬೇಕಲ್ಲ? ಆಡಳಿತದ ಉಸ್ತುವಾರಿಕೆ, ಲೆಕ್ಕಪತ್ರದವರ ಕಾಯಕ, ಕೊಳ್ಳುವವರ ಮತ್ತು ಮಾರುವವರ ಶ್ರಮ, ಸಂಬಳ ಸವಲತ್ತುಗಳ ಲೆಕ್ಕಾಚಾರ, ಮಾನವ ಸಂಪನ್ಮೂಲ ವ್ಯವಸ್ಥಿಕರಣ - ಹೀಗೆ ಎಲ್ಲದರ ಒಟ್ಟು ವೆಚ್ಚ ಲೆಕ್ಕ ಹಾಕಿ, ತಲೆಗಿಷ್ಟಿಷ್ಟು ಎಂದು ಹರಿದು ಹಂಚಿದ ವೆಚ್ಚವು "ತಲೆ ಭಾರದ" (ಓವರ್ಹೆಡ್ ಕಾಸ್ಟ್ - ಮೇಲಾಡಳಿತ ವೆಚ್ಚ ಅಥವ ಮೇಲುವೆಚ್ಚ) ಲೆಕ್ಕದಲ್ಲಿ ಬಂದು ಸೇರಿಕೊಳ್ಳುತ್ತವೆ. ಈ ದರ ನಿಗದಿ ಮಾಡುವ ಒಟ್ಟಾರೆ ಲೆಕ್ಕಾಚಾರದಲ್ಲಿ ಈ ಮೇಲಾಡಳಿತ ವೆಚ್ಚವೆ ಬಹುಪಾಲು ಖಳನಾಯಕನ ಪಾತ್ರ ವಹಿಸುತ್ತದೆ. ಎಷ್ಟೊ ಬಾರಿ ಈ ವೆಚ್ಚವೆ ಸರಕಿನ ನೇರ ವೆಚ್ಚಗಳಿಗಿಂತ ಎಷ್ಟೊಪಟ್ಟು ಹೆಚ್ಚಿರುವುದರಿಂದ ಇದು ಮಾಡುವ ಪರಿಣಾಮ ಕಡೆಗಣಿಸುವಂತದ್ದಲ್ಲ. ಅದರಲ್ಲೂ ಬಹು ದೊಡ್ಡ ಸಂಸ್ಥೆ / ಕಾರ್ಖಾನೆಗಳಾದರೆ ಈ ರೀತಿಯ 'ತಲೆಭಾರಗಳು' ಸಣ್ಣ ಅಥವಾ ಮಧ್ಯಮ ಗಾತ್ರದ ಕಾರ್ಖಾನೆ / ಸಂಸ್ಥೆಗಳಿಗಿಂತ ತೀಷ್ಣ ಮಟ್ಟದಲ್ಲಿರುವುದರಿಂದ ಉತ್ಪಾದನ ವೆಚ್ಚದಲ್ಲಿ ಇದು ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸವುಂಟು ಮಾಡುತ್ತದೆ. 

ಇದರ ಪರಿಣಾಮವನ್ನು ಅರಿಯಲು ಈ ಸಣ್ಣ ವಿಶ್ಲೇಷಣೆಯ ಮೂಲಕ ನೋಡೋಣ. ಒಂದು ಮಧ್ಯಮ ಗಾತ್ರದ ಕಾರ್ಖಾನೆ ಮತ್ತು ಒಂದು ದೊಡ್ಡ ಗಾತ್ರದ ಕಾರ್ಖಾನೆ ಒಂದೆ ಬಗೆಯ ಪಾದರಕ್ಷೆಗಳನ್ನು ತಯಾರಿಸುತ್ತಿದೆಯೆಂದು ಭಾವಿಸಿ. ಎರಡೂ ಒಂದೇ ಬಗೆಯ ಮೂಲಸರಕನ್ನು ಕೊಂಡುಕೊಳ್ಳುವುದರಿಂದ ಅದರ ದರದಲ್ಲಿ ಅಷ್ಟೇನು ವ್ಯತ್ಯಾಸವಿರದೆಂದು ಅಂದುಕೊಳ್ಳೋಣ (ಅಥವ ಇದ್ದರೂ ತೀರ ಕ್ಷುಲ್ಲಕ ವ್ಯತ್ಯಾಸವೆಂದು ಕಡೆಗಣಿಸೋಣ); ಹಾಗೆಯೆ ಕಾರ್ಮಿಕರ ದುಡಿತದ ವೆಚ್ಚವೂ (ಲೇಬರ ಚಾರ್ಜಸ್) ಸರಿಸುಮಾರು ಒಂದೆ ಇದೆಯೆಂದುಕೊಳ್ಳೋಣ. ಸ್ಪಷ್ಟ ಅರಿಯುವಿಕೆಗಾಗಿ ಈ ಕೆಳಕಂಡ ವೆಚ್ಚಗಳನ್ನು ಊಹಿಸಿಕೊಳ್ಳೋಣ (ಎರಡು ಕಾರ್ಖಾನೆಗಳಿಗು ಒಂದೆ ವೆಚ್ಚ):

1. ಮೂಲ ಸರಕು / ಸಾಮಾಗ್ರಿ ವೆಚ್ಚ: ರೂ. 100 /- (ಡೈರೆಕ್ಟ್ ಮೆಟೀರಿಯಲ್ಸ್ ಕಾಸ್ಟ್)
2. ನೇರ ಕಾರ್ಮಿಕ ದುಡಿಮೆ / ಗೇಯ್ಮೆ ವೆಚ್ಚ: ರೂ. 050 /- (ಡೈರೆಕ್ಟ್ ಲೇಬರ ಕಾಸ್ಟ್)
   ಒಟ್ಟು ಉತ್ಪಾದನಾ ವೆಚ್ಚ: ರೂ. 100 + 50 = 150 /-

ಇಲ್ಲಿಯತನಕದ ವೆಚ್ಚದಲ್ಲಿ ಎರಡು ಸಮಸ್ಥಿತಿಯಲ್ಲಿವೆ. ಗುಣಮಟ್ಟವೂ ಸಹ ಎರಡು ಒಂದೆ ಮಟ್ಟದಲ್ಲಿದೆಯೆಂದು ಭಾವಿಸಿಕೊಳ್ಳೋಣ. ಗ್ರಾಹಕನಾಗಿ, ಈ ಪರಿಸ್ಥಿತಿಯಲ್ಲಿ ತೂಗಿದರೆ ಎರಡು ಕಾರ್ಖಾನೆಗಳ ಮಾರಾಟ ದರದಲ್ಲಿ ಅಂತಹ ತೀಕ್ಷ್ಣ ವ್ಯತ್ಯಾಸ ಕಾಣಬಾರದು.

ಈಗ ಮೇಲಾಡಳಿತ ವೆಚ್ಚಕ್ಕೆ ಬರೋಣ. ಮೊದಲಿನ ಮಧ್ಯಮ ಗಾತ್ರದ ಕಾರ್ಖಾನೆಯಲ್ಲಿ ಇದು ರೂ. 100 /- ಎಂದು ಭಾವಿಸಿಕೊಳ್ಳಿ (ಕಾರ್ಖಾನೆ ಗಾತ್ರ ಸಣ್ಣದಿರುವುದರಿಂದ, ಮೇಲ್ವೆಚ್ಚವು ದೊಡ್ಡದಕ್ಕಿಂತ ಕಡಿಮೆಯಿರಲೆಬೇಕು - ತಾರ್ಕಿಕವಾಗಿ). ಗಾತ್ರ ಮತ್ತಿತರ ಪರಿಮಾಣಗಳಿಂದಾಗಿ ದೊಡ್ಡ ಕಾರ್ಖಾನೆಯ ಮೇಲಾಡಳಿತ ವೆಚ್ಚ ಸಹಜವಾಗೆ ಹೆಚ್ಚಾಗಿರುವುದರಿಂದ ಅದನ್ನು ರೂ. 300 /- ಎಂದು ಊಹಿಸಿಕೊಳ್ಳೋಣ. ಈ ಆಧಾರದ ಮೇಲೆ ಎರಡು ಕಾರ್ಖನೆಗಳ ಗಿರಣಿ ದರವನ್ನು  (ಫ್ಯಾಕ್ಟರಿ ಕಾಸ್ಟ್) ಲೆಕ್ಕ ಹಾಕೋಣ.

ಗಿರಣಿ ವೆಚ್ಚ (ಮಧ್ಯಮ ಕಾರ್ಖಾನೆ) : ರೂ. 150 /- + ರೂ. 100 /- = ರೂ. 250 /-
ಗಿರಣಿ ವೆಚ್ಚ (ದೊಡ್ಡ ಕಾರ್ಖಾನೆ) : ರೂ. 150 /- + ರೂ. 300 /- = ರೂ. 450 /-

ಇನ್ನೂ ಇದು ಅಂತಿಮ ಬೆಲೆಯಲ್ಲ. ಗಿರಣಿಯಿಂದ ಸರಕನ್ನು ಸಾಗಿಸಿ ಬೇರೆ ಬೇರೆ ದೂರಗಳಿಗೆ ಮುಟ್ಟಿಸಬೇಕು (ಸಾಗಾಣಿಕೆ ವೆಚ್ಚ), ನಂತರ ಉಗ್ರಾಣದಲ್ಲಿಡಬೇಕು (ದಾಸ್ತಾನು ಶೇಖರಣಾ ವೆಚ್ಚ), ಗ್ರಾಹಕನ ಅಣತಿಯಂತೆ ಸರಬರಾಜು ಮಾಡಿ ದುಂಬಾಲು ಬಿದ್ದು ಹಣ ಸಂಗ್ರಹಿಸಬೇಕು (ಮತ್ತಷ್ಟು ಆಡಾಳೀತಾತ್ಮಕ ವೆಚ್ಚಗಳು), ಮಾರಾಟದ ಮುಂಚೂಣಿಯಲಿ ಗ್ರಾಹಕರ ಜತೆ ಕೊಂಡಿಯಾದವರ ವೆಚ್ಚವನ್ನು ಸೇರಿಸಬೇಕು. ಇದೆಲ್ಲಾ ಸೇರಿಸಿದರೆ:

ಒಟ್ಟು ಸಂಸ್ಥಾ ವೆಚ್ಚ (ಮಧ್ಯಮ ಕಾರ್ಖಾನೆ) : ರೂ. 250 /- + ರೂ. 50 /- = ರೂ. 300 /-
ಒಟ್ಟು ಸಂಸ್ಥಾ ವೆಚ್ಚ (ದೊಡ್ಡ ಕಾರ್ಖಾನೆ) : ರೂ. 450 /- + ರೂ. 150 /- = ರೂ. 600 /-

ಇದರ ಮೇಲೆ ಲಾಭವಿಲ್ಲದೆ ಮಾರಲಾದೀತೆ? ಲೆಕ್ಕಾಚಾರಕ್ಕೆ ಶೇಕಡ 15 ರಂತೆ ಪರಿಗಣಿಸಿದರೆ:

ಗ್ರಾಹಕ ಮಾರಾಟ ದರ (ಮಧ್ಯಮ ಕಾರ್ಖಾನೆ) : ರೂ. 300 /- + ರೂ. 45 /- = ರೂ. 345 /- (+ ತೆರಿಗೆ ಪ್ರತ್ಯೇಕ)
ಗ್ರಾಹಕ ಮಾರಾಟ ದರ (ದೊಡ್ಡ ಕಾರ್ಖಾನೆ) : ರೂ. 600 /- + ರೂ. 90 /- = ರೂ. 690 /- (+ ತೆರಿಗೆ ಪ್ರತ್ಯೇಕ)

ಶೇಕಡಾ 10 ರಂತೆ ತೆರಿಗೆ ಲೆಕ್ಕಹಾಕಿದರೆ ಮಧ್ಯಮಕ್ಕೆ ತೆರಬೇಕಾದ ಮೊತ್ತ = 345.00 + 34.50 = ರೂ. 379.50 /- ಮತ್ತು ದೊಡ್ಡದಕ್ಕೆ ತೆರಬೇಕಾದ ಮೊತ್ತ = 690.00 + 69.00 = ರೂ. 759.00 /-.

ಈಗ ಎರಡರ ಮಾರುಕಟ್ಟೆ ದರ ಹೋಲಿಸಿದರೆ ದೊಡ್ಡ ಸಂಸ್ಥೆಯ ಮಾರುವ ದರ ಮಧ್ಯಮಕ್ಕಿಂತ ಎರಡು ಪಟ್ಟು ಹೆಚ್ಚು!

ಈಗ ಯೋಚಿಸಿ ನೋಡಿ - ಎರಡು ಕಂಪನಿಗಳ ಬೆಲೆಯ ಅಂತರ ತೀರಾ ಆಳವಿದ್ದಾಗ ಅದರಲ್ಲಿ (ಅನಗತ್ಯ?) ಮೇಲ್ವೆಚ್ಚದ ಪಾಲೆಷ್ಟು ಮತ್ತು ಉಚ್ಚ ಗುಣಮಟ್ಟದ ಪಾಲೇಷ್ಟು ಎಂದು ಹೇಗೆ ಹೇಳುವುದು? 

ಇದೊಂದು ಸರಳ ಸ್ಥಿತಿಯ ವಿಡಂಬನೆ. ಬೇರೆ ಬೇರೆ ಕಾರಣಗಳಿಗೆ ದರಗಳು , ಬೆಲೆಗಳು ಹೆಚ್ಚಿರಬಹುದು - ಉದಾಹರಣೆಗೆ, ಶ್ರೀಮಂತ ಖಯಾಲಿ ಮಾರುಕಟ್ಟೆಯ ವಸ್ತುಗಳಲ್ಲಿ ಬೆಲೆಯಲ್ಲಾ ಮುಖ್ಯ, ಅಲ್ಲಿ ಪ್ರತಿಷ್ಟೆ, ಘನತೆಯೆ ಪ್ರಮುಖ. ನಾವಿಲ್ಲಿ ಮಾತಾಡುತ್ತಿರುವುದು ಸಾಮಾನ್ಯ ವರ್ಗದ ವಿಷಯ. ಇಲ್ಲಿ ಬೆಲೆ ಒಂದು ಮುಖ್ಯ ಹಾಗೂ ಸೂಕ್ಷ್ಮ ಅಂಶವಾದ್ದರಿಂದ 'ಬೆಲೆಯ ಚಲನ ಶಾಸ್ತ್ರ'ದ ರೀತಿನೀತಿಗಳನ್ನು ಸ್ಥೂಲವಾಗಿ ಅರಿಯುವುದು ಮುಖ್ಯ. ಅದಕ್ಕಾಗಿ, ಈ ಪುಟ್ಟ ಬರಹದ ಯತ್ನ!

ಮುಂದಿನ ಸಾರಿ ಟಿವಿಯೊ, ಪಾದರಕ್ಷೆಯೊ, ತಂಗಳು ಪೆಟ್ಟಿಗೆಯನ್ನೊ ಇಲ್ಲ ಬಿಸಿ ಪೆಟ್ಟಿಗೆಯನ್ನೊ ಖರೀದಿಸುವಾಗ ಬೆಲೆಗಳನ್ನು ಗಮನಿಸಿ. ಬೆಲೆಯಲ್ಲಿನ ವ್ಯತ್ಸಾಸ ಬರಿ ಗುಣಮಟ್ಟದ ಮಾನಕ ಮಾತ್ರವಲ್ಲ ಆಯಾ ಕಂಪನಿಗಳ ವೆಚ್ಚ ನಿರ್ವಹಣಾ ನೀತಿಯ / ಗತಿಯ ಸೂಚಕವೂ ಇರಬಹುದೆಂಬುದನ್ನು ನೆನಪಿನಲಿಟ್ಟುಕೊಂಡು, ನಂತರ ಕೊಳ್ಳುವ ನಿರ್ಧಾರ ಮಾಡಿ!

ಹೆಚ್ಚು ಬೆಲೆಯೆಂದ ಮಾತ್ರಕ್ಕೆ ಹೆಚ್ಚು ಗುಣಮಟ್ಟವಾಗಿರಬೇಕೆಂದೇನಿಲ್ಲವೆಂಬುದು ಗಮನದಲ್ಲಿರಲಿ!

-----------------------------------------------------------------------------------------------------------------------------------
ನಾಗೇಶ ಮೈಸೂರು, ೩೧.೦೩.೨೦೧೩, ಸಿಂಗಾಪುರ
-----------------------------------------------------------------------------------------------------------------------------------

Comments

Submitted by lpitnal@gmail.com Tue, 05/28/2013 - 22:38

ಆತ್ಮೀಯ ನಾಗೇಶ ಜಿ, ಒಂದು ವಸ್ತುವಿನ ತಯಾರಿಕೆ, ಸಾಗಾಟ, ಮಾರಾಟ, ಮೇಲ್ಖರ್ಚು ಇತ್ಯಾದಿಗಳ ಬಗ್ಗೆ ತಿಳಿಸಿದ ಬರಹ. ನಿಜಕ್ಕೂ ನಮಗೆಲ್ಲ ಪ್ರಚಲಿತ ಮಾರುಕಟ್ಟೆಯ ನಿಜರೂಪ ತಿಳಿಸಿದ ತಮಗೆ ಧನ್ಯವಾದಗಳು
Submitted by nageshamysore Wed, 05/29/2013 - 03:29

In reply to by lpitnal@gmail.com

ಇಟ್ನಾಳರಿಗೆ ನಮಸ್ಕಾರ, ತಮ್ಮ ಎಂದಿನ ಪ್ರೋತ್ಸಾಹಕರ ಉತ್ತೇಜನಕ್ಕೆ ಧನ್ಯವಾದಗಳು. ಇಂತಹ ವಸ್ತುಗಳ ಕುರಿತು ಜನಸಾಮಾನ್ಯರಿಗೆ ಇರುವ ಮಾಹಿತಿ ಕಮ್ಮಿ ಅಥವಾ ಅಪೂರ್ಣ. ಆದರೆ ತಮಗರಿವಿಲ್ಲದೆಯು, ಎಲ್ಲರು ಇದರ ಜಾಲದಲ್ಲಿ ಸಿಕ್ಕಿಕೊಂಡಿರುವುದರಿಂದ (ಮುಕ್ತ ಮಾರುಕಟ್ಟೆಯ ಪರಿಣಾಮವಾಗಿ), ಕನಿಷ್ಟ ಅದು ಹೇಗೆ ಕೆಲಸ ಮಾಡುವುದೆಂಬ ಅರಿವಿದ್ದರೆ ಕೊಳ್ಳುವ ನಿರ್ಧಾರ ಮಾಡುವಾಗ ಸಹಾಯಕವಾದೀತೆಂಬ ಆಶಯದಿಂದ ಬರೆದ ಬರಹ. ಇದೆ ರೀತಿಯ ಬೇರೆ ವಸ್ತುಗಳನ್ನಾಯ್ದು ಬರೆವ ಆಲೋಚನೆಯೂ ಇದೆ, ಆ ನಿಟ್ಟಿನಲ್ಲೊಂದು ಆರಂಭಿಕ ಯತ್ನ - ನಾಗೇಶ ಮೈಸೂರು, ಸಿಂಗಪುರದಿಂದ
Submitted by makara Wed, 05/29/2013 - 08:07

ನಾಗೇಶರೆ, ಇದೇ ನಿಯಮವನ್ನು ನಾವು ಎಲ್ಲಾ ಸರಕುಗಳಿಗೂ ಅನ್ವಯಿಸಿಕೊಳ್ಳಬಹುದೆನಿಸುತ್ತದೆ. ಒಂದು ತಳ್ಳು ಗಾಡಿಯ ಹೋಟಲಿನಲ್ಲಿ ಕ್ಯಾಷಿಯರ್, ಅಡಿಗೆಯವನು, ಸಪ್ಲಯರ್, ಕ್ಲೀನರ್ ಸಹ (ಹಲವು ವೇಳೆ) ಹೀಗೆ ಅವನೇ ಎಲ್ಲಾ ಕೆಲಸಗಳನ್ನು ಮಾಡುವುದರಿಂದ ಮತ್ತು ಅವನು ಇಟ್ಟುಕೊಂಡಿರುವ ಗಾಡಿಗೆ ನಿರ್ವಹಣಾ ವೆಚ್ಚ ಮತ್ತು ಸ್ಥಳಕ್ಕೆ ಕೊಡುವ ಬಾಡಿಗೆಯೂ ಬಹಳ ಅಲ್ಪವಾಗಿರುತ್ತದೆ. ಹೀಗಾಗಿ ಅವನ ಉತ್ಪಾದನಾ ವೆಚ್ಚವೂ ಕಡಿಮೆಯಾಗಿ ಅವನಿಗೆ ಹೆಚ್ಚು ಲಾಭವುಂಟಾಗುತ್ತದೆ. ದೊಡ್ಡ ಹೋಟೆಲ್ಲುಗಳಂತೆ ಬಿಲ್ಲು, ಕಂಪ್ಯೂಟರಿಗಳಿಗಾಗಿ ಮತ್ತು ಇನ್‌ಕಂ ಟ್ಯಾಕ್ಸ್, ಪ್ರಾಪರ್ಟಿ ಟ್ಯಾಕ್ಸ್ ಮುಂತಾದವುಗಳು ಇರುವುದಿಲ್ಲ. ಕೆಲವೊಮ್ಮೆ ಪೋಲೀಸ್ ಮಾಮೂಲು ಮತ್ತು ಮುನಿಸಿಪಾಲಿಟಿಯವರಿಗೆ ಸ್ಥಳದ ಬಾಡಿಗೆ ಮತ್ತು ಕೆಲವೊಂದು ವೇಳೆ ಹಫ್ತಾ ಕೊಟ್ಟರೂ ಸಹ ಅವನ ಉತ್ಪಾದನಾ ವೆಚ್ಚ ಖಂಡಿತಾ ಕಡಿಮೆ ಇರುತ್ತದೆ. ಹೀಗಾಗಿ ಅವನಿಗೆ ನಿಖರ ಲಾಭ ಹೆಚ್ಚು ಅವನು ಕಡಿಮೆ ಧರಕ್ಕೆ ಮಾರಿದರೂ ಸಹ. ನಾವು ಸ್ವಚ್ಛತೆಯ ಕಾರಣಗಳಿಗಾಗಿ ಅಲ್ಲಿ ತಿನ್ನುವುದಿಲ್ಲ ಅದು ಬೇರೆ ಮಾತು. ಅಥವಾ ಅವನು ಸ್ವಚ್ಛವಾಗಿಟ್ಟರೂ ಸಹ ನಮ್ಮಲ್ಲನೇಕರು ನೀವು ಗಮನಿಸಿದಂತೆ ಪ್ರತಿಷ್ಠೆಗಾಗಿ ದೊಡ್ಡ ಹೋಟಲ್ಲುಗಳಿಗೆ ಹೋಗಿ, ತಿಂದದ್ದಕ್ಕೆ ವ್ಯಾಟ್, ಮತ್ತು ಅದರ ಮೇಲೆ ಬರೆ ಎಳೆದಂತೆ ಸರ್ವರನಿಗೆ ಟಿಪ್ಸ್ ಸಹ ಕೊಟ್ಟು ಬರುತ್ತೇವೆ. ಎಲ್ಲದಕ್ಕೂ ಒಂದು ಮಧ್ಯಮ ಮಾರ್ಗವಿರುತ್ತದೆ ಅದನ್ನು ಕಂಡುಕೊಂಡು ಒಳ್ಳೆಯ ಸರಕು ಸಿಗುವ ಜಾಗವನ್ನು ಹುಡುಕಿಕೊಳ್ಳಬೇಕಷ್ಟೆ. ಬ್ರಾಂಡೆಡ್ ಐಟಮ್ಸ್ ಕೊಳ್ಳುವ ಮುಂಚೆ ಒಮ್ಮೆ ಈ ರೀತಿ ತುಲನೆ ಮಾಡಿ ತೆಗೆದುಕೊಳ್ಳುವುದು ಒಳಿತು. ಅಂದ ಹಾಗೆ, ಷೋರೂಮಿನ ಬಾಡಿಗೆಗಳು ಮತ್ತು ಅಲ್ಲಿನ ನಿರ್ವಹಣಾ ವೆಚ್ಚಗಳು ಸಹ ಗ್ರಾಹಕನ ತಲೆಯ ಮೇಲೇ ಬೀಳುತ್ತವೆ. ಒಟ್ಟಿನಲ್ಲಿ ನಿಮ್ಮ ಸರಳ ಲೇಖನ ಹಲವಾರು ವಿಧವಾಗಿ ಆಲೋಚಿಸುವಂತೆ ಮಾಡಿದೆ, ಒಳ್ಳೆಯ ಲೇಖನಕ್ಕೆ ಧನ್ಯವಾದಗಳು. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by nageshamysore Wed, 05/29/2013 - 18:59

In reply to by makara

ನಮಸ್ಕಾರ ಶ್ರೀಧರರೆ, ಒಂದು ಪುಟ್ಟ ಪ್ರತಿಕ್ರಿಯೆಯಲ್ಲಿ ಎಷ್ಟೆಲ್ಲ ವಿಷಯವನ್ನು ಅಮೂಲಾಗ್ರವಾಗಿ ನುಸುಳಿಸಿಬಿಟ್ಟಿದ್ದೀರಿ :-) ನಾನು ಉದ್ದೇಶಪೂರ್ವಕವಾಗಿ ಸಣ್ಣ ಮಾತು ರಸ್ತೆಬದಿ ವ್ಯಾಪಾರಿಗಳನ್ನು ಸೇರಿಸಲಿಲ್ಲ - ಲೇಖನದ ಉದ್ದಕ್ಕೆ ನ್ಯಾಯ ಒದಗಿಸೋಣವೆಂದು. ಅದೃಷ್ಟವಶಾತ್ ನೀವು ಆ ಭಾಗವನ್ನು ಸೇರಿಸಿದಿರಿ, ಪ್ರತಿಕ್ರಿಯೆ ಮೂಲಕ! ಒಂದು ಕಡೆ ರಸ್ತೆ ಬದಿಯ ದೋಸೆ ಕ್ಯಾಂಪು, ಚುರುಮುರಿ-ಪಾನಿಪುರಿ ಅಂಗಡಿಗಳನ್ನು ನೆನೆದರೆ - ಅದೆ ತಿಂಡಿಗೆ ದೊಡ್ಡ ರೆಸ್ಟೊರೆಂಟಿನ ಅಥವಾ ಹೋಟೆಲಿನ ಒಳಗೆ ಹತ್ತಾರು ಪಟ್ಟು ಕೊಟ್ಟು ತಿಂದುಬರುವ ವಿಪರ್ಯಾಸ ಇನ್ನೊಂದೆಡೆ (ಅಲ್ಲೇನು ಶುಚಿ ರುಚಿಯೆಲ್ಲ ಸರಿಯಿತ್ತೆಂದು ಹೇಗೆ ಹೇಳುವುದು? ನಾವಾರು ಒಳಗೆ ಹೋಗಿ ಏನೂ ನೋಡುವುದಿಲ್ಲವಲ್ಲ! ಹೊರಗಿನ ಏಸಿ, ಶೋ ಗಳಿಗೆ ಮಾರು ಹೋಗುವ ಸಾಧ್ಯತೆ ಹೆಚ್ಚು - ಎಲ್ಲೊ ಕೆಲವರು ಅದನ್ನೆಲ್ಲ ನೈತಿಕ ನಂಬಿಕೆಯ ದೃಷ್ಟಿಯಿಂದ ಪರಿಪಾಲಿಸುತ್ತಿರಬಹುದೆ ವಿನಃ, ಅವರು ಮಾಡದೆ ಇದ್ದಾಗ ಗೊತ್ತಾಗುವ ಸಾಧ್ಯತೆಯು ಕಡಿಮೆಯೆ).  ಈ ಕಡೆ ಸಾಧಾರಣ ಒಂದು ಮಾತಿದೆ - ಯಾವುದೆ ಅಂಗಡಿ, ಶಾಪು, ಹೋಟೆಲಿನ ಮುಂದೆ ಚೈನಿಯರ ದೊಡ್ಡ ಸಾಲು / ಗುಂಪು ನಿಂತಿದೆಯೆಂದರೆ ಅಲ್ಲಿ ಗುಣಮಟ್ಟ , ಬೆಲೆ ಎಲ್ಲವು ಸರಿಯಾದ ಪ್ರಮಾಣದಲ್ಲಿರುತ್ತದೆಂದು ಅರ್ಥ. ಹೀಗೆ ಗಿಜಿಗುಡುತ್ತಿರುವ ರೆಸ್ಟೊರೆಂಟೊ, ಶಾಪೊ ಕಂಡರೆ ಮುಕ್ಕಾಲು ಪಾಲು ಹಾಕಿದ ದುಡ್ಡಿಗೆ ಮೋಸವಿಲ್ಲ ಅನ್ನಬಹುದು. ಇದು ಒಂದು ರೀತಿ ನೀವು ಹೇಳಿದ ಮಧ್ಯದ ಹಾದಿಯ ತರವೆ :-) - ನಾಗೇಶ ಮೈಸೂರು, ಸಿಂಗಪುರ
Submitted by spr03bt Wed, 05/29/2013 - 16:05

ಉತ್ತಮ ಬರಹ ನಾಗೇಶರೆ. ಜಾಹಿರಾತುಗಳಿಗೆ ಮರುಳಾಗಿ ಬ್ರಾ೦ಡೆಡ್ ವಸ್ತುಗಳನ್ನೇ ಕೊಳ್ಳಬೇಕೆ೦ಬ ಈ ಜಮಾನದ ಜನತೆ ನಿಮ್ಮ ಲೇಖನದಿ೦ದ ತಿಳಿಯುವುದು ಬಹಳಷ್ಟಿದೆ.
Submitted by nageshamysore Wed, 05/29/2013 - 18:18

In reply to by spr03bt

ನಮಸ್ಕಾರ ಶಿವಪ್ರಕಾಶರೆ,  ನಿಮ್ಮ ಮಾತು ನಿಜ - ಅದರಲ್ಲೂ ಈಗಿನ ದಿನಗಳಲ್ಲಿ, ಹೆಚ್ಚುಕಡಿಮೆ ಎಲ್ಲಾ 'ಬ್ರಾಂಡೆಡ್ ಕಂಪನಿಗಳು', ತಯಾರಿಕಾ ವೆಚ್ಚಕ್ಕೆ ಕಡಿವಾಣ ಹಾಕಲು ಬೇರೆ ಯಾರದೊ ಕೈಯಲ್ಲಿ ತಯಾರಿಸಿ ತಮ್ಮ ಲೇಬಲ್ ಹಾಕಿ ಮಾರುವುದು ಸಾಮಾನ್ಯ. ಹೀಗಾಗಿ, ಬ್ರಾಂಡಿನ ಹೆಸರೂ ಸಹ ಎಷ್ಟೊ ಸಾರಿ ಒಳಗಿನ ಕಥೆಯನ್ನೆಲ್ಲ ಹೇಳುವುದಿಲ್ಲ. ಆದರೆ ಅದರ ಬೆಲೆಯೇನೂ ಕಡಿಮೆಯಾಗುವುದಿಲ್ಲ - ಯಾಕೆಂದರೆ, ಬೇರೆ ಯಾರೊ ಉತ್ಪಾದನೆ ಮಾಡಿದಾಗ ನೇರ ಹತೋಟಿ, ನಿಯಂತ್ರಣ ಸಿಗದ ಕಾರಣ ಬ್ರಾಂಡಿನ ಇಮೇಜಿಗಾಗಿ ಮತ್ತು ಗುಣಮಟ್ಟದ ಉಳಿಕೆಗಾಗಿ ಇನ್ನೂ ಏನೇನೊ ಸರ್ಕಸ್ಸು ಮಾಡಬೇಕಾಗುತ್ತದೆ. ಆ ಸರ್ಕಸ್ಸು ಹೊಸ ತರದ ವೆಚ್ಚಕ್ಕೆ ಕಾರಣವಾಗಿ, ಒಟ್ಟು ಬೆಲೆಯೇರಿಕೆಗೆ ಕಾರಣವಾಗಿ ವಿಷವರ್ತುಲ ಆಗುವ ಸಾಧ್ಯತೆಯೆ ಹೆಚ್ಚು - ವೆಚ್ಚಕ್ಕೆ ಕಡಿವಾಣ ಹಾಕುವುದೆ ಮೂಲೋದ್ದೇಶವಾಗಿದ್ದರೂ ಸಹ! ಇನ್ನೊಂದು ಪ್ರತಿಕ್ರಿಯೆಯಲ್ಲಿ ಶ್ರಿಧರರವರು ಹೇಳಿದ ಹಾಗೆ - ಕನಿಷ್ಟ ಒಂದು ಸುವರ್ಣ ಮಧ್ಯದ  ಹಾದಿಯನ್ನಾದರೂ ಹಿಡಿಯದಿದ್ದರೆ, ಅಂತಹ ಜನ ಅವರನ್ನೆ ಮೂರ್ಖರನ್ನಾಗಿಸಿಕೊಳ್ಳುತ್ತಾರಷ್ಟೆ - ಬರಿ ಒಣ ಪ್ರತಿಷ್ಟೆಗಾಗಿ! - ನಾಗೇಶ ಮೈಸೂರು, ಸಿಂಗಪುರ
Submitted by partha1059 Wed, 05/29/2013 - 21:53

ನಾಗೇಶರೆ ನಮಸ್ಕಾರ ಇಂತ ಪ್ರಶ್ನೆ ಬೇರೆ ಬೇರೆ ರೂಪದಲ್ಲಿ ನಮ್ಮನ್ನು ಕಾಡುತ್ತದೆ. ಸಾದಾರಣ ಕ್ಲಿನಿಕ್ ಇಟ್ಟಿರುವ ಡಾಕ್ಟರ್ ಒಬ್ಬ ನೂರು ರೂಪಾಯಿಗೆ ಕೊಡುವ ಸೇವೆ ದೊಡ್ಡ ಡೊಡ್ಡ ನರ್ಸಿಂಗ್ ಕೇರ್ ಗಳಲ್ಲಿ ಸಾವಿರಾರು ರೂಪಾಯಿ ಕೊಡುವೆವು. ಸ್ವಲ್ಪ ವರ್ಷಗಳ ಹಿಂದಿನ ಸಮಾಚಾರ ಆಗೆಲ್ಲ ಚೀನ ಮೇಡ್ ವಾಚ್ ಗಳು ಬರುತ್ತ ಇದ್ದವು, ವಿಷ್ಯ ಅಂದರೆ ಅವೆಲ್ಲ ಸುಮಾರು ಆಗಲೆ ಇಪ್ಪತ್ತು ಇಪತೈದು ರುಪಾಯಿಗೆ ಸಿಗುತ್ತಿತ್ತು, ಮತ್ತು ಸರಿಯಾಗಿಯೆ ಸಮಯ ತೋರಿಸುತ್ತ ಇತ್ತು. ಆಗ ನಮ್ಮ ಹೆಚ್ ಎಮ್ ಟಿ ಅನ್ನುವ ವಾಚು ಸುಮಾರು ಕನಿಷ್ಟ ಅಂದರೆ 650-700 ರೂಗಳಿದ್ದವು. ಅದನ್ನು ಹೇಳಿದರೆ ಬೇರೆಯವರು ಹೇಳುತ್ತಿದ್ದರು, ಈ ಕ್ವಾಲಿಟಿ ಬರಲ್ಲ ಬಿಡಿ ಆದರೆ ನನ್ನದು ಒಂದೆ ಪ್ರಶ್ನೆ ಇತ್ತು 'ನನಗೆ ಹೆಚ್ಚು ಕ್ವಾಲಿಟಿ ಬೇಡ, ಚೈನಾದ ವಾಚಿನಲ್ಲಿರುವ ಕ್ವಾಲಿಟಿಗಿಂತ ಸ್ವಲ್ಪ ಸಹ ಹೆಚ್ಚು ಬೇಡ , ಆದರೆ ಅಷ್ಟೆ ಕ್ವಾಲಿಟಿ ವಾಚನ್ನು , ಅಂತಹುದೆ ವಾಚನ್ನು ಹೆಚ್ ಎಮ್ ಟಿ ೨೫-೩೦ ರೂಪಾಯಿಗೆ ಕೊಡಲು ಸಾದ್ಯವೆ ಎನ್ನುವುದು, ಉತ್ತರ ಎಂದಿಗು ಸಾದ್ಯವಿಲ್ಲ ಎಂದೆ ಆಗಿತ್ತು. ನನಗೆ ಅರ್ಥವಾಗದ ವಿಷ್ಯವೆಂದರೆ ಚೀನದಿಂದ ಭಾರತಕ್ಕೆ ಬರಿ ಸರಕು ಸಾಗಣಿಕೆ ಖರ್ಚನ್ನು ಲೆಕ್ಕ ಹಾಕಿದರು ಸಹ ಅದನ್ನು ಆ ಬೆಲೆಗೆ ಕೊಡಲು ಸಾದ್ಯವಿಲ್ಲ ಅನ್ನಿಸುವಾಗ ಅವರು ಅಷ್ಟು ಕಡಿಮೆ ಬೆಲೆಗೆ ಕೊಡುತ್ತಾರೆ ಆದರೆ ನಮ್ಮ ಹೆಚ್ ಎಮ್ ಟಿಗೆ ಏಕೆ ಸಾದ್ಯವಿಲ್ಲ, ಇಲ್ಲಿ ನಾನು ಕ್ವಾಲಿಟಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಗಮನಿಸಿ ವ್ಯಾಪಾರದ ನಿಯಮವೆಂದರೆ ಹೆಚ್ಚು ಹೆಚ್ಚು ಮಾಲು ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಅವನು ಸಹಜವಾಗಿ ದರ ತಗ್ಗಿಸಬೇಕು ಆದರೆ ದೊಡ್ಡ ದೊಡ್ಡ ಕಂಪನಿಗಳ ವಿಷ್ಯದಲ್ಲಿ ಹಾಗೆ ಆಗುವದಿಲ್ಲ. ಸಾದಾರಣ ಭಾರತದ ಕಂಪನಿಯೊಂದು ಜ್ವರದ ಮಾತ್ರೆ ಒಂದು ರುಪಾಯಿಗೆ ಕೊಟ್ಟಾರೆ ಅದನ್ನು ಮಾರುಕಟ್ಟೆಯಲ್ಲಿರುವ ಪ್ರತಿಷ್ಟಿತ ಕಂಪನಿ ೫೦ , ೧೦೦ ರೂಪಾಯಿಗು ಕೊಡುತ್ತದೆ, ಎರಡು ಸಹ ಒಂದೆ ಕೆಲಸ ಮಾಡುತ್ತದೆ ಅನ್ನುವುದೆ ವಿಚಿತ್ರ. ಕೇಳಿದರೆ 'ಸೈಡ್ ಎಫೆಕ್ಟ್' ಅನ್ನುತ್ತಾರೆ ....... ವಾಟ್ ಅ ಜೋಕ್
Submitted by nageshamysore Thu, 05/30/2013 - 06:39

In reply to by partha1059

ಪಾರ್ಥ ಸಾರ್ ನಮಸ್ಕಾರ, ನಿಮ್ಮ ಉದಾಹರಣೆಯಲ್ಲಿ ವ್ಯವಸ್ಥೆಯ ಮತ್ತೊಂದು ವಿಶ್ವರೂಪವನ್ನೆ ಬಿಚ್ಚಿಟ್ಟಿದ್ದೀರಿ. ವಾಚಿನ ಉದಾಹರಣೆಯಲ್ಲಿ - ಗಡಿಯಾರ ಬೇಕಿರುವುದು ಸಮಯ ನೋಡಲು ಮಾತ್ರ ಎಂದಾದರೆ , ಅದನ್ನು ಸರಿಯಾಗಿ ಮಾಡಬಲ್ಲ ಯಾವುದೆ ವಾಚಿದ್ದರೂ ಸರಿ - ಹೆಚ್ಚಿನ ಬೆಲೆಯದೆ ಬೇಕೆಂದೇನೂ ಇಲ್ಲ. ಆದರೆ ಕೊಳ್ಳುವ ನಿರ್ಧಾರ ಆ ಲೆಕ್ಕಾಚಾರದಲ್ಲಿ ಆಗುವುದು ಬಹಳ ಅಪರೂಪ! ಅಂದಹಾಗೆ ಒಂದು ದೇಶ ಅಥವಾ ಆರ್ಥಿಕ ವ್ಯವಸ್ಥೆ ಹೇಗೆ ಅತಿ ಕಡಿಮೆ ಬೆಲೆಯಲ್ಲಿ ಮಾರಲು ಸಾಧ್ಯವೆಂಬ ಕೆಲವು ಸನ್ನಿವೇಶಗಳನ್ನು ಪುಸ್ತಕವೊಂದರಲ್ಲಿ ಓದಿದ್ದೆ. ಮುಂದೊಮ್ಮೆ ಆ ಕುರಿತು ಬರೆಯಲೆತ್ನಿಸುತ್ತೇನೆ. ನಿಮ್ಮ ಅಪೂರ್ವವಾದ ಅಂಶಗಳನ್ನು ಪ್ರತಿಕ್ರಿಯೆಯ ರೂಪದಲ್ಲಿ ಸೇರಿಸಿದ್ದಕ್ಕೆ ಧನ್ಯವಾದಗಳು! - ನಾಗೇಶ ಮೈಸೂರು, ಸಿಂಗಪುರದಿಂದ
Submitted by ramvani Thu, 05/30/2013 - 03:43

ನಮಸ್ಕಾರ ನಾಗೇಶ್, ದೊಡ್ಡ ಅಂಗಡಿ, ಹೆಚ್ಚು ಹಣ ತೆತ್ತಲ್ಲಿ ಒಳ್ಳೆಯ ಸರಕು ಎಂಬುದು ಹಲವಾರು ಮಂದಿಯ ಅನಿಸಿಕೆ. ಹೆಚ್ಚು ಬೆಲೆ ತೆತ್ತು ಬ್ರಾಂಡೆಡ್ ಮೊರೆ ಹೋಗುವವರು ಇನ್ನಷ್ಟು ಮಂದಿ. ಮಾರುಕಟ್ಟೆಯ ಮಾರಾಟ, ಸಾಗಾಟಗಳ ಬಗ್ಗೆ ಸಾಕಷ್ಟು ಮಾಹಿತಿ ತಿಳಿಸಿದ್ದೀರ. ಬಹಳ ಒಳ್ಳೆಯ ಬರಹ. ವಿಶ್ವಾಸದಿಂದ ವಾಣಿ.
Submitted by nageshamysore Thu, 05/30/2013 - 06:25

In reply to by ramvani

ನಮಸ್ಕಾರ ವಾಣಿ, ಕೆಲವರಿಗೆ (ಉದಾಹರಣೆಗೆ ಸೆಲೆಬ್ರಿಟಿಗಳಿಗೆ, ಪ್ರಸಿದ್ಧ ಚಿತ್ರನಟ, ನಟಿಯರಿಗೆ) ಗುಂಪು ಗದ್ದಲದಿಂದ ತಪ್ಪಿಸಿಕೊಳ್ಳುವ ಅನಿವಾರ್ಯಕೊ ಅಥವ ವೃತ್ತಿ ಪ್ರೇರಿತ ಕಾರಣಗಳಿಂದಲೊ ಸಾಮಾನ್ಯ ಜನರು ಧಾಳಿಯಿಕ್ಕದ ಕಡೆ ತುಟ್ಟಿವಸ್ತುಗಳ ದುಂಬಾಲು ಬೀಳುವುದು ಮಾಮೂಲು ಮತ್ತು ಅವರ ಸಂಪಾದನೆಯ ಲೆಕ್ಕದಲ್ಲಿ ಭರಿಸುವ ತಾಕತ್ತು ಇರುತ್ತದೆ. ವಿಷಾದವೆಂದರೆ ಅಂಧಾನುಕರಣೆಯ ಪ್ರಭಾವ, ಹುಸಿ ಪ್ರತಿಷ್ಟೆಗಳ ದೆಸೆಯಿಂದ ಹಾಸಿಗೆ ಇದ್ದಷ್ಟು ಕಾಲು ಚಾಚದೆ ಮುನ್ನುಗ್ಗುವವರೊಂದು ಕಡೆ; ಕೊಳ್ಳುವ ತಾಕತ್ತಿದೆಯೆಂದು ಎಗ್ಗು ಸಿಗ್ಗಿಲದೆ ಖರ್ಚು ಮಾಡುವರು ಇನ್ನೊಂದು ಕಡೆ. ಆ ಬೆಲೆಯ ಹಿಂದಿರುವ ಸಾಮಾನ್ಯ ವಿಜ್ಞಾನವನ್ನು ಅರಿತರೆ ಕೊಳ್ಳುವ ಮೊದಲು ವಿವೇಚನೆಯಾದರೂ ಇದ್ದಿತೆಂಬ ಆಶಯ ಈ ಬರಹದ್ದು. ತಮ್ಮ ಎಂದಿನ, ಮೆಚ್ಚುಗೆ, ಪ್ರೋತ್ಸಾಹಕ್ಕೆ ಚಿರಋಣಿ - ನಾಗೇಶ ಮೈಸೂರು, ಸಿಂಗಪುರದಿಂದ
Submitted by Vasant Kulkarni Thu, 05/30/2013 - 15:18

ನಾಗೇಶ್ ಅವರೆ, ತುಂಬಾ ಚೆನ್ನಾಗಿದೆ ನಿಮ್ಮ ವಿಶ್ಲೇಷಣೆ. ಬಹಳ ಮಾಹಿತಿಪೂರ್ಣವಾದದ್ದು ಕೂಡ. ಆದರೆ ಗುಣಮಟ್ಟವನ್ನು ಕಂಡು ಹಿಡಿಯುವ ಬಗ್ಗೆ ಅಷ್ಟಾಗಿ ಅರಿವಿರದ ಗ್ರಾಹಕರಿಗೆ, ಬ್ರ್ಯಾಂಡ್ ದೊಡ್ಡದಾದಷ್ಟು, ಅದರ ಗುಣಮಟ್ಟ ಕೂಡ ದೊಡ್ಡದು ಎಂಬ ನಂಬಿಕೆ. ಒಂದು ರೀತಿಯಲ್ಲಿ ನೋಡಿದರೆ, ಇದರಲ್ಲಿ ಸ್ವಲ್ಪ ತಥ್ಯವಿದೆ. ಏಕೆಂದರೆ ದೊಡ್ಡ ಬ್ರ್ಯಾಂಡ್‍ಗಳು ತಮ್ಮ ಹೆಸರನ್ನು ಕಾಪಾಡಿಕೊಳ್ಳಲು "Basic Minimum quality"ಯನ್ನು ಯಾವಾಗಲೂ ಕಾದುಕೊಳ್ಳುತ್ತವೆ. ಇದರಿಂದ ಜನರ ನಂಬಿಕೆ ಬೆಳೆಯುತ್ತದೆ ಮತ್ತ್ತು ಬ್ರ್ಯಾಂಡ್‍ಗಳು ಕೂಡ ಎಂದು ನನ್ನ ಅನಿಸಿಕೆ. ಹೀಗೆಯೇ ಒಳ್ಳೇ ಮಾಹಿತಿ ಪೂರ್ಣ ಲೇಖನಗಳನ್ನು ಬರೆಯುತ್ತಿರಿ.
Submitted by nageshamysore Thu, 05/30/2013 - 19:31

In reply to by Vasant Kulkarni

ವಸಂತರವರೆ, "ಕನಿಷ್ಟ ಖಚಿತ / ಖಾತರಿ ಗುಣಮಟ್ಟ (Basic Minimum quality)" ದ ಕುರಿತಾದ ನಿಮ್ಮ ಮಾತು ನಿಜ. ಆರಕ್ಕೇರದ ಮೂರಕ್ಕಿಳಿಯದ ಸುವರ್ಣ ಮಧ್ಯಮ ಖಾತರಿಯನ್ನು ಕಾದುಕೊಳ್ಳುವುದು ಮಾರುಕಟ್ಟೆಯಲ್ಲಿ ಬದುಕುಳಿಯಲು ಅವಶ್ಯಕ ಸಹ.  ಆದರೆ ಈಚಿನ ದಿನಗಳಲ್ಲಿನ ಬದಲಾವಣೆಯ ಗತಿಯನ್ನು ಗಮನಿಸಿದರೆ, ಎಲ್ಲಾ ದೊಡ್ಡ ಕಂಪನಿಗಳು ಆ ಮಟ್ಟವನ್ನು ಹಾಗೆ ಉಳಿಸಿಕೊಳ್ಳಬಲ್ಲವೆ ಎಂಬುದೆ ಯಕ್ಷಪ್ರಶ್ನೆ! ಈಗಿನ ಅಂತರ್ಜಾಲಪ್ರೇರಿತ ಯುಗದಲ್ಲಿ, ವ್ಯವಹಾರಕ್ಕೆ ಇದ್ದ "ಪ್ರವೇಶ ನಿರ್ಭಂಧಗಳು (entry barriers)" ಒಂದೊಂದಾಗಿ ಕುಸಿದು ಅಥವ ಸುಲಭವಾಗಿ,ಹೊಸ ಮಾದರಿಯ "ವಾಣಿಜ್ಯ ನಮೂನೆ / ವ್ಯವಹಾರ ಮಾದರಿಗಳೆ" (business models) ಹುಟ್ಟಿಕೊಂಡು , ದೊಡ್ಡ ಕಂಪನಿಗಳಿಗೂ ಸವಾಲಾಗುತ್ತಿವೆ (ಇತ್ತೀಚೆಗೆ ಸೋಲಾರ ಇಂಡಸ್ಟ್ರಿಯಲ್ಲಿ ಆಗುತ್ತಿರುವ ಗತಿ ಗಮನಿಸಿದರೆ, ಇದರ ಪರಿಣಾಮದ ಅಂದಾಜು ಸಿಕ್ಕೀತು). ಇದನ್ನು ದೊಡ್ಡ ದೊಡ್ಡ ಬ್ರಾಂಡುಗಳು ಹೇಗೆ ನಿವಾರಿಸಿಕೊಳ್ಳುತ್ತವೆಂಬುದನ್ನು ಕಾದು ನೋಡಬೇಕಿದೆ! ಅಂದಹಾಗೆ, ಬಿಜಿನೆಸ್ಸ್ ಮಾಡೆಲ್ಲಿನ ಪ್ರಶ್ನೆ ಬಂದಾಗ - "ಸಂಪದ" ನಮೂನೆಯೆ ಒಂದು ವಿಶಿಷ್ಟ ಹಾಗೂ ವಿನೂತನ ಮಾದರಿ ಎಂದು ನನ್ನ ಅನಿಸಿಕೆ. ಇಲ್ಲಿ ಎಲ್ಲರು ಓದುಗರು, ಎಲ್ಲರು ಪ್ರಕಾಶಕರು, ಎಲ್ಲರು ವಿಮರ್ಶಕರು ಆಗಬಹುದಾದ ಸಾಧ್ಯತೆ - ಹಾಗೆಯೆ ಸಿಕ್ಕಿದ ಸ್ವಾತಂತ್ರ ದುರುಪಯೋಗಪಡಿಸಿಕೊಳ್ಳದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಸಮುದಾಯ - ಹೀಗೆ ಪರಸ್ಪರರಿಂದ, ಪರಸ್ಪರರಿಗಾಗಿ, ಪರಸ್ಪರರಿಗೋಸ್ಕರವೆ ನಡೆಸಲ್ಪಡುವ ಈ ಮಾದರಿಯಲ್ಲಿ - ನಿಮಗೆ ಬೇಕೆನಿಸಿದಾಗ ಪ್ರಕಟಿಸಬಹುದು, ತಕ್ಷಣವೆ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಬಹುದು - ಒಂದು ರೀತಿ ಅದೆ ಕ್ಷಣದಲ್ಲಿ. ಕೆಲವು ವರ್ಷಗಳ ಹಿಂದೆ ಇದನ್ನು ಊಹಿಸಲೂ ಸಾಧ್ಯವಿರಲಿಲ್ಲವೆನಿಸುತ್ತದೆ. ಒಟ್ಟಾರೆ ಈ ಸ್ಥಿತ್ಯಂತರವೆ ಕುತೂಹಲಕಾರಿ ಹಾಗೆ ಆತಂಕಕಾರಿ ಸಹ, ಅದರ ತಾರ್ಕಿಕ ಕೊನೆ ತಲಪುವ ತನಕ - ನಾಗೇಶ ಮೈಸೂರು, ಸಿಂಗಾಪುರದಿಂದ