೩೮. ಶ್ರೀ ಲಲಿತಾ ಸಹಸ್ರನಾಮ ೯೭ನೇ ನಾಮದ ವಿವರಣೆ

೩೮. ಶ್ರೀ ಲಲಿತಾ ಸಹಸ್ರನಾಮ ೯೭ನೇ ನಾಮದ ವಿವರಣೆ

Samayāntasthā समयान्तस्था (97)

೯೭. ಸಮಯಾಂತಸ್ಥಾ

          ದೇವಿಯು ಸಮಯಾ ತತ್ವದ ಕೇಂದ್ರವಾಗಿದ್ದಾಳೆ. ಸಮಯಾ ಎಂದರೆ ಮಾನಸಿಕ ಪೂಜೆ, ಕುಲಾ ಎಂದರೆ ಬಾಹ್ಯ ಪೂಜೆ. ಮಾನಸಿಕ ಪೂಜೆಯು ಬಾಹ್ಯ ಪೂಜೆಗಳಿಗಿಂತ ಹೆಚ್ಚು ಶಕ್ತಿಯುತವಾದುದು. ಆಂತರಿಕ ಪೂಜೆಯನ್ನು ಐದು ಮಹಾನ್ ಋಷಿಗಳು ಒತ್ತು ಕೊಟ್ಟು ಹೇಳಿದ್ದಾರೆ - ವಶಿಷ್ಠ, ಶುಕ, ಸನಕ, ಸನಂದನ ಮತ್ತು ಸನತ್ಕುಮಾರ. ಅವರು ಆಂತರಿಕ ಪೂಜೆಗಳ ಪದ್ಧತಿಗಳನ್ನು ಕುರಿತಾಗಿ ಬರೆದ ಶಾಸ್ತ್ರ ಗ್ರಂಥಗಳನ್ನು ’ತಂತ್ರ ಪಂಚಕ’ ಅಂದರೆ ಐದು ತಂತ್ರಗಳೆಂದು ಕರೆದಿದ್ದಾರೆ. ಈ ನಾಮವು ಶಿವ ಮತ್ತು ಶಕ್ತಿಯರಿಗಿರುವ ಸಮಾನತೆಯನ್ನು ಒತ್ತಿ ಹೇಳುತ್ತದೆ. ಈ ಸಮಾನತೆಯನ್ನು ಐದು ಶೀರ್ಷಿಕೆಗಳಲ್ಲಿ ವಿಭಾಗಿಸಲಾಗಿದೆ. ಸಂಸ್ಕೃತ ವ್ಯಾಕರಣ ರೀತ್ಯಾ ಶಿವನು ’ಸಮಯಃ’ ಎಂದು ಕರೆಯಲ್ಪಟ್ಟರೆ ಶಕ್ತಿಯು ’ಸಮಯಾ’ ಆಗುತ್ತಾಳೆ. ಐದು ವಿಧವಾದ ಸಮಾನತೆಗಳು ಹೀಗಿವೆ -

೧) ಅವರನ್ನು ಪೂಜಿಸುವ ಸ್ಥಳಗಳ ಬಗ್ಗೆ ಹೇಳಬೇಕೆಂದರೆ; ಅವರನ್ನು ಶ್ರೀ ಚಕ್ರ ಅಥವಾ ಲಿಂಗ ಎರಡೂ ರೂಪಗಳಲ್ಲಿ ಪೂಜಿಸಬಹುದು. ಶ್ರೀ ಚಕ್ರದ ’ಬಿಂದು’ವಿನಲ್ಲಿ ಇಬ್ಬರನ್ನೂ ಪೂಜಿಸಲಾಗುತ್ತದೆ. ಕುಂಡಲಿನೀ ಮೊದಲಾದ ಮಾನಸಿಕ ಚಕ್ರಗಳಲ್ಲಿ ಕೂಡಾ ಅವರನ್ನು ಪೂಜಿಸುತ್ತಾರೆ - ಸಹಸ್ರಾರದಲ್ಲಿ ಶಕ್ತಿಯು ಶಿವನೊಂದಿಗೆ ಸಮಾಗಮವಾಗುತ್ತಾಳೆ. ಶ್ರೀ ಚಕ್ರ ಪೂಜೆಯು ಬಹುತೇಕ ಬಾಹ್ಯಾಚರಣೆಯಾಗಿದ್ದು, ಕುಂಡಲಿನೀ ಪೂಜೆಯು ಯಾವಾಗಲೂ ಆಂತರಿಕವಾಗಿರುತ್ತದೆ.

೨) ಕ್ರಿಯೆಗಳ ವಿಷಯಕ್ಕೆ ಅಂದರೆ ಸೃಷ್ಟಿ, ಸ್ಥಿತಿ ಮತ್ತು ಲಯಗಳು. ಅವರಿಬ್ಬರ ನಡುವೆ ಸಮಾನತೆ ಇರುವುದರಿಂದ, ಅವರಿಬ್ಬರ ಕ್ರಿಯೆಗಳು ಒಂದೇ ಆಗಿವೆ. ಅವರನ್ನು ಈ ಜಗದ ಮಾತಪಿತರೆಂದು ಕರೆಯಲಾಗಿದೆ. ಆದ್ದರಿಂದ ಅವರನ್ನು ಯಾವುದೇ ಸಂದರ್ಭದಲ್ಲೂ ಬೇರ್ಪಡಿಸಲಾಗದು.

೩. ನೃತ್ಯದ ವಿಷಯವನ್ನು ತೆಗೆದುಕೊಳ್ಳೋಣ. ಅವರಿಬ್ಬರ ನೃತ್ಯದ ವಿಷಯವಾಗಿ ಹೆಚ್ಚಿನ ವಿವರಗಳನ್ನು ಮುಂದಿನ ನಾಮಗಳಲ್ಲಿ ನೋಡೋಣ. ಸ್ತ್ರೀಯರ ನೃತ್ಯವನ್ನು ನಾಟ್ಯ ಎಂದು ಕರೆಯುತ್ತಾರೆ ಮತ್ತು ಪುರುಷರ ನೃತ್ಯವನ್ನು ತಾಂಡವ ಎನ್ನುತ್ತಾರೆ. ಶಿವ ತಾಂಡವವು ಪ್ರಸಿದ್ಧವಾಗಿದೆ.

೪. ಹೆಸರುಗಳ ಕುರಿತಾಗಿ ಮಾತನಾಡಿದರೆ, ಉದಾಹರಣೆಗೆ ಭೈರವ ಮತ್ತು ಭೈರವೀ, ಪರಮೇಶ್ವರ ಮತ್ತು ಪರಮೇಶ್ವರೀ, ರಾಜರಾಜೇಶ್ವರ ಮತ್ತು ರಾಜರಾಜೇಶ್ವರೀ, ಶಿವ ಮತ್ತು ಶಿವಾ (ಲಲಿತಾಂಬಿಕೆಯನ್ನು ೫೩ನೇ ನಾಮಾವಳಿಯಲ್ಲಿ ಶಿವಾ ಎಂದು ಸಂಬೋಧಿಸಲಾಗಿದೆ); ಕಾಮೇಶ್ವರ ಮತ್ತು ಕಾಮೇಶ್ವರೀ ಮೊದಲಾದವು. (ಒಬ್ಬರು ಶಿವ ಶಿವಾ ಎಂದಾಗ ಅದು ಕೇವಲ ಶಿವನನ್ನು ಮಾತ್ರ ಕುರಿತಾಗಿರದೆ ಎರಡನೆಯದಾದ ಶಿವಾ (ಒಂದು ಮಾತ್ರೆಯು ಹೆಚ್ಚಾಗಿದೆ) ಎನ್ನುವುದು ಒಂದು ಹೆಚ್ಚಾದ ’ಅ’ ಅಕ್ಷರದಿಂದ ಕೂಡಿದೆ. ಶಿವ ಪರಮಾತ್ಮನೆಂದರೆ, ಭಾಗ್ಯಶಾಲಿ, ಸಂತೋಷ, ಸಮೃದ್ಧಿ, ಬಿಡುಗಡೆ, ಅಂತಿಮ ಮುಕ್ತಿ, ಮಂಗಳಕರವಾದದ್ದು ಎನ್ನುವ ಹಲವಾರು ಅರ್ಥಗಳಿವೆ. ಶಿವಾ ಎಂದರೆ ಶಿವನ ಅರ್ಧಾಂಗಿಯಾಗಿರುವ ಅವನ ಶಕ್ತಿಯ ಮೂರ್ತರೂಪ. ಆದ್ದರಿಂದ ಒಬ್ಬನು ಶಿವ-ಶಿವಾ ಎಂದರೆ ಅದು ಶಿವ ಮತ್ತು ಶಕ್ತಿ ಇಬ್ಬರನ್ನೂ ಒಳಗೊಂಡಿರುತ್ತದೆ. ದೇವಿಗೆ ಮಾತ್ರವೇ ಸ್ವತಂತ್ರ್ಯ ಅಭಿವ್ಯಕ್ತಿಯ ಶಕ್ತಿ ಇದೆ (ಸ್ವಾತಂತ್ರ್ಯ ಶಕ್ತಿ) ಮತ್ತು ಶಿವನು ಅವಳಿಗೆ ತನ್ನ ಸ್ವಾತಂತ್ರ್ಯ ಶಕ್ತಿಯನ್ನು ಅಭಿವ್ಯಕ್ತಗೊಳಿಸಲು/ಉಪಯೋಗಿಸಲು ದೇವಿಗೆ ಸಂಪೂರ್ಣ ಅಧಿಕಾರವನ್ನು ಕೊಟ್ಟಿದ್ದಾನೆ. 

೫. ಅವರಿಬ್ಬರ ಮೈಕಾಂತಿ ಮತ್ತು ಆಯುಧಗಳ ಕುರಿತಾಗಿ ಮಾತನಾಡುವುದಾದರೆ; ಅವರಿಬ್ಬರ ಮೈಕಾಂತಿಯು ಕೆಂಪು ಬಣ್ಣದಂತೆ ತೋರುತ್ತದೆ. ಶ್ರೀ ಲಲಿತೆಯು ಕೆಂಪು ಮೈಕಾಂತಿಯುಳ್ಳವಳಾಗಿದ್ದಾಳೆ. ಶಿವನದು ಸ್ಪಟಿಕದಂತೆ ಶುಭ್ರ ಶ್ವೇತ ವರ್ಣದವನು. ಸ್ಪಟಿಕದ ವಿಶೇಷತೆ ಏನೆಂದರೆ ಅದು ತನ್ನ ಸನಿಹವಿರುವ ವಸ್ತುಗಳ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ. ಯಾವಾಗ ಶ್ರೀ ಲಲಿತೆಯು ಶಿವನ ಸನಿಹದಲ್ಲಿ ಅಥವಾ ಅವನ ತೊಡೆಯ ಮೇಲೆ ಕುಳಿತಿರುತ್ತಾಳೋ, ಅವನ ಅರೆಪಾರದರ್ಶಕ ಮೈಕಾಂತಿಯು ಕೆಂಪುಬಣ್ಣದಂತೆ ಕಾಣಿಸುತ್ತದೆ. ಈ ವೈಭವಯುತವಾದ ದೃಶ್ಯವನ್ನು ವೀಕ್ಷಿಸುವ ದೇವಾನು ದೇವತೆಗಳು ಇದನ್ನು ಉದಯಿಸುವ ಸೂರ್ಯನಿಗೆ ಹೋಲಿಸುತ್ತಾರೆ. ಈ ದೃಶ್ಯವು ಶಕ್ತಿಯು ಶಿವನಿಗಿಂತ ಹೆಚ್ಚು ಶಕ್ತಳಾದವಳೆನ್ನುವ ನಿರ್ಣಯಕ್ಕೆ ಕೊಂಡೊಯ್ಯಬಹುದು ಏಕೆಂದರೆ ಇಲ್ಲಿ ಶಿವನು ಕೇವಲ ಶಕ್ತಿಯ ಬಣ್ಣವನ್ನು ಪ್ರತಿಫಲಿಸುತ್ತಿದ್ದಾನೆ. ಇವರಿಬ್ಬರೂ ಒಂದೇ ವಿಧವಾದ ಆಯುಧಗಳನ್ನು ಧರಿಸಿದ್ದಾರೆ.

          ಆದ್ದರಿಂದ ಶಿವ ಮತ್ತು ಶಕ್ತಿಯರನ್ನು ಒಟ್ಟಾಗಿ ಪೂಜಿಸುವುದು ಯಾವಾಗಲೂ ಶ್ರೇಯಸ್ಕರ. ಅವರಿಬ್ಬರನ್ನೂ ಪೂಜೆಯಲ್ಲಾಗಲಿ ಅಥವಾ ಧ್ಯಾನದಲ್ಲಾಗಲಿ ಪ್ರತ್ಯೇಕಗೊಳಿಸಬಾರದು. ವಿಷ್ಣುವಿನ ಪೂಜೆಯಲ್ಲಿ ಲಕ್ಷ್ಮಿಯನ್ನು ಅವನಿಂದ ಬೇರ್ಪಡಿಸಬಾರದು. ಲಲಿತೆಯು ಶಿವನ ಎಡತೊಡೆಯ ಮೇಲೆ ಕುಳಿತುಕೊಂಡರೆ ಲಕ್ಷ್ಮಿಯು ವಿಷ್ಣುವಿನ ವಕ್ಷಸ್ಥಳದಲ್ಲಿ ಆಸೀನಳಾಗಿದ್ದಾಳೆ ಆದ್ದರಿಂದ ಅವನು ಶ್ರೀವತ್ಸನಾಗಿದ್ದಾನೆ. ಲಕ್ಷ್ಮಿಯು ಮಹಾ ವಿಷ್ಣುವಿನ ತೊಡೆಯ ಮೇಲೆ ಕುಳಿತಿರುವ ರೂಪವೊಂದಿದೆ ಅದನ್ನು ಲಕ್ಷ್ಮೀ ನಾರಾಯಣ ರೂಪವೆನ್ನುತ್ತಾರೆ.

ಕುಲ ಮತ್ತು ಕೌಲದ ಕುರಿತಾದ ಹೆಚ್ಚಿನ ವಿವರಣೆಗಳು -  ಕುಲ ಎಂದರೆ ವಂಶ, ಪಂಗಡ, ಮೊದಲಾದವು. ಯಾರು ಶಕ್ತಿಯ ಆರಾಧಕರೋ ಅವರನ್ನು ಕುಲ ಎಂದು ಕರೆಯುತ್ತಾರೆ ಅಥವಾ ಅವರನ್ನು ಶಾಕ್ತರೆಂದೂ ಅನ್ನುತ್ತಾರೆ; ಅವರ ತತ್ವ ಸಿದ್ಧಾಂತಗಳು ನಮಗೆ ತಂತ್ರಶಾಸ್ತ್ರಗಳಲ್ಲಿ ದೊರೆಯುತ್ತವೆ. ಅವರ ಆರಾಧನಾ ಪದ್ಧತಿಗಳು ಎರಡು ವಿಧಗಳಲ್ಲಿರುತ್ತವೆ; ಅಶುದ್ಧವೆನಿಸುವವು ವಾಮಾಚಾರ ಎಂದು ಕರೆಯಲ್ಪಟ್ಟರೆ ಶುದ್ಧವೆನಿಸುವುವನ್ನು ದಕ್ಷಿಣಾಚಾರವೆಂದು ಕರೆಯುತ್ತಾರೆ. ಕೌಲವನ್ನು ಸಾಮಾನ್ಯವಾಗಿ ಶಕ್ತಿಯ ಆರಾಧಕರನ್ನು ಕುರಿತಾಗಿ ಹೇಳುವಾಗ ಉಪಯೋಗಿಸುತ್ತಾರೆ ಅದರಲ್ಲೂ ವಿಶೇಷವಾಗಿ ವಾಮಾಚಾರಿಗೆ ಈ ಹೆಸರು ಅಂಟಿಕೊಂಡಿದೆ.

******

           ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 97
http://www.manblunder.com/2009/08/lalitha-sahasranamam-97.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 

 

Rating
Average: 5 (1 vote)

Comments

Submitted by nageshamysore Wed, 05/29/2013 - 14:55

ಶ್ರೀಧರರೆ, 'ಶಿವ ಶಿವಾ' ಎಂದಾಗ 'ಶಿವಾ' ಎನ್ನುವುದು ದೇವಿಯ ಕುರಿತಾಗಿ ಹೇಳಲ್ಪಟ್ಟಿದೆಯೆನ್ನುವ ವಿಷಯ ಹೊಸದು. ನಮಗರಿವಿಲ್ಲದೆ ಶಿವಶಕ್ತಿಯರಿಬ್ಬರನ್ನು ಪೂಜಿಸುವ ಈ ಬಗ್ಗೆ, ಅವರಿಬ್ಬರನ್ನು ಒಂದಾಗಷ್ಟೆ ನೋಡಬಹುದಲ್ಲದೆ ಬೇರೆ ಬೇರೆಯಾಗಲ್ಲಾ ಅನ್ನುವುದನ್ನು ಮತ್ತೆ ಸ್ಪಷ್ಟಪಡಿಸಿತು. ಜತೆಗೊಂದು ಪುಟ್ಟ ಸಾರಾಂಶ ಟಿಪ್ಪಣಿ ಕೆಳಗಿದೆ:

97. ಸಮಯಾಂತಸ್ಥಾ
ದೇವಿ ಸಮಯಾತತ್ವ ಕೇಂದ್ರೆ ಪೂಜಿತೆ ಬಾಹ್ಯ ಮಾನಸಿಕ
ಸಮಯಾಂತರಿಕ ಪೂಜಾಶಾಸ್ತ್ರ ತಂತ್ರ ಪಂಚಕ ಶಕ್ತಿಸ್ತುತ
ಶಿವನೆ ಸಮಯಃ ಶಕ್ತಿಯೆ ಸಮಯಾ ಸಮಾನತೆ ಶಿವಶಕ್ತಿ
ರೂಪ ಕ್ರಿಯೆ ನೃತ್ಯ ನಾಮ ಆಯುಧಕಾಂತಿ ಸಮತೆಯುಕ್ತಿ!

ನಾಗೇಶ ಮೈಸೂರು, ಸಿಂಗಪುರದಿಂದ

Submitted by makara Fri, 05/31/2013 - 11:44

In reply to by nageshamysore

ಮೊನ್ನೆಯ ದಿವಸ ನಮ್ಮ ಬಡಾವಣೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಇಂಟರ‍್ನೆಟ್ ಕೈಕೊಟ್ಟಿತ್ತು. ಈಗ ಸರಿಹೋಗಿರುವುದರಿಂದ ಎರಡು ಕಂತುಗಳನ್ನು ಒಂದೇ ದಿನ ಪ್ರಕಟಿಸುತ್ತೇನೆ. ತಡವಾದುದಕ್ಕೆ ಕ್ಷಮೆ ಇರಲಿ, ನಾಗೇಶರೆ.