ಆಶಾವಾದ ಮತ್ತು ಧನಾತ್ಮಕ ದೃಷ್ಟಿ
ಮೊನ್ನೆ ಮಧ್ಯಾಹ್ನ ಹೀಗೇ ಏನೋ ಕೆಲಸದಲ್ಲಿ ತೊಡಗಿದ್ದಾಗ ನನ್ನ ಮೊಬೈಲು ಗುಣುಗುಟ್ಟಿತು. ಮತ್ತೇನೋ ಹೊಸ ಜಾಹೀರಾತಿನ ಎಸ್ ಎಮ್ ಎಸ್ ಇರಬಹುದು ಅನಿಸಿ ಅದನ್ನು ತಕ್ಷಣ ನೋಡಲಿಲ್ಲ. ನಂತರ ನೋಡಿದಾಗ ಮಿತ್ರನೊಬ್ಬ ಒಂದು ಮೆಸೇಜ್ ಅನ್ನು ಕಳುಹಿಸಿದ್ದ. ಅದು ಹೀಗಿತ್ತು.
“ನಮ್ಮೆಲ್ಲರ ಗುರಿ, ಆಕಾಂಕ್ಷೆ ಮತ್ತು ಕೆಲಸಗಳು, ನಮ್ಮ ಗ್ರಹಿಕೆ (Perception), ನಂಬಿಕೆ (Belief) ಮತ್ತು ಶ್ರದ್ಧೆ(Faith)ಗಳ ಸಂಕೀರ್ಣ ಮಿಶ್ರಣಗಳಾಗಿರುತ್ತವೆ. ಯಾವಾಗ ಈ ಮೂರೂ ಅಂಶಗಳು ಮನಸ್ಸಿನಲ್ಲಿ ಧನಾತ್ಮಕ (Positive) ಮಾರ್ಗವನ್ನು ಪಡೆಯುತ್ತವೆಯೋ, ಆವಾಗ ಗ್ರಹಿಕೆಯು, ಜ್ಞಾನ ಮತ್ತು ಜಾಣ್ಮೆಯಾಗಿಯೂ, ನಂಬಿಕೆಯು, ಮನಃಶಕ್ತಿ ಮತ್ತು ಉತ್ಸುಕತೆಯಾಗಿಯೂ ಹಾಗೂ ಶ್ರದ್ಧೆಯು, ಸಾಮರ್ಥ್ಯ ಮತ್ತು ಪ್ರೇರಣೆಯಾಗಿಯೂ ಪರಿವರ್ತನೆಗೊಳ್ಳುತ್ತವೆ. ಆದರೆ ಈ ಮೂರು ಅಂಶಗಳು ಋಣಾತ್ಮಕ (Negative) ಮಾರ್ಗವನ್ನು ಪಡೆದರೆ, ತಪ್ಪು ಗ್ರಹಿಕೆ (Misperception)ಯು, ಅಜ್ಞಾನ ಮತ್ತು ಅಸಮರ್ಥತೆಯಾಗಿ, ಅಪನಂಬಿಕೆ (Disbelief)ಯು, ದುರ್ಬಲತೆ ಮತ್ತು ನ್ಯೂನತೆಗಳಾಗಿ ಹಾಗೂ ಸಂಶಯ (Cynicism), ದೌರ್ಬಲ್ಯತೆಯಾಗಿ ಪರಿವರ್ತನೆಗೊಳ್ಳುತ್ತವೆ”.
“ಎಂಥಾ ಸತ್ಯವಾದ ಹೇಳಿಕೆ !” ಎಂದು ಅನಿಸಿತು. ಎಲ್ಲವೂ ಒಳ್ಳೆಯದಾಗಬೇಕೆಂಬುದು ನಮ್ಮೆಲ್ಲರ ಆಶಯ. ಆದರೆ ಅದಕ್ಕೆ ಬೇಕಾಗುವ ಧನಾತ್ಮಕ ಅಂಶಗಳನ್ನು ನಾವು ಬೆಳೆಸಿಕೊಳ್ಳುತ್ತಿದ್ದೇವೆಯೆ ಎಂಬುದನ್ನು ಆಗಾಗ ನಮ್ಮ ಆಂತರ್ಯವನ್ನು ಕೆದಕಿ ನೋಡುತ್ತಿರಬೇಕಲ್ಲವೆ? ಆಶಾವಾದ ಅಥವಾ ಧನಾತ್ಮಕ ದೃಷ್ಟಿ ನಮ್ಮನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕರೆದೊಯ್ಯುವ ಸಾಧನ. ಗ್ರಹಿಕೆ, ನಂಬಿಕೆ ಮತ್ತು ಶ್ರದ್ಧೆಗಳ ಸರಿಯಾದ ದಿಗ್ದರ್ಶನ ನಮ್ಮನ್ನು ಆಕಾಶಕ್ಕೆತ್ತಿದರೆ, ಅವುಗಳ ತಪ್ಪು ದಿಶೆಯಿಂದ ನಾವು ಪಾತಾಳ ಸೇರುವದು ನಿತ್ಯ ಸತ್ಯ.
ಆದರೆ ದಿನ ನಿತ್ಯದ ಭೀಭತ್ಸ, ಭಯಂಕರ ಆಗು ಹೋಗುಗಳು ನಮ್ಮನ್ನು ಸದಾ ಅಪ್ಪಳಿಸುತ್ತಿರುವಾಗ, ಸದಾ ಆಶಾವಾದಿಯಾಗಿರುವದು ಹೇಗೆ ಸಾಧ್ಯ ಎಂಬ ಭಾವನೆ ಮೂಡುವದು ಸಹಜ. ಅದಕ್ಕೆ ಪರಿಹಾರವಾಗಿ ಯೋಗಸೂತ್ರವೊಂದು ಹೀಗೆ ಹೇಳುತ್ತದೆ ಯಾವಾಗ ಋಣಾತ್ಮಕ ವಿಚಾರಗಳು ಮನವನ್ನು ಘಾಸಿಗೊಳಿಸುತ್ತಿರುವಾಗ ಅದಕ್ಕೆ ವಿರುದ್ಧವಾದ (ಧನಾತ್ಮಕ) ಅಂಶಗಳತ್ತ ಮನವನ್ನು ಬಲವಂತವಾಗಿ ಪ್ರೇರೇಪಿಸಬೇಕು. ಧ್ಯಾನ, ವ್ಯಾಯಾಮ, ಯೋಗಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಬಹುದು. ಒಳ್ಳೆಯ ಆಟಗಳಲ್ಲಿ ತೊಡಗಿಸಿಕೊಂಡು ಮನಸ್ಸನ್ನು ಪ್ರಫುಲ್ಲಿತಗೊಳಿಸಬಹುದು. ಸಾಹಿತ್ಯ, ಸಂಗೀತ, ಸಂಶೋಧನೆಗಳಂತಹ ರಚನಾತ್ಮಕ ಕ್ರಿಯೆಗಳಲ್ಲಿ ಮನಸ್ಸನ್ನು ತೊಡಗಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಋಣಾತ್ಮಕ ಭಾವನೆಗಳ ಮೂಲವನ್ನು ಶೋಧಿಸಿ, ಅದಕ್ಕೊಂದು ಒಳ್ಳೆಯ ಪರಿಹಾರ ಹುಡುಕುವುದು. ಈ ಎಲ್ಲ ಕಾರ್ಯಗಳಿಂದ ನಾವು ಋಣಾತ್ಮಕ ಭಾವನೆಗಳಿಂದ ಮುಕ್ತರಾಗಲು ಪ್ರಯತ್ನಿಸಬಹುದು.
ಹಿಂದಿಯಲ್ಲೊಂದು ಹೇಳಿಕೆ ಉಂಟು, ‘उमीद पे दुनिया कायम है’ ಸತ್ಯ ಅಲ್ಲವೇ? ಎಲ್ಲ ನಂಬಿಕೆ, ಭರವಸೆಗಳನ್ನು ಕಳೆದುಕೊಂಡು ಜೀವಿಸುವುದು ಹೇಗೇ ? ಪ್ರಸಿದ್ಧ ಲೇಖಕ ಮತ್ತು ಚಿಂತಕ (‘You can win’ ಖ್ಯಾತಿಯ) ಶಿವ ಖೇರಾ ಅವರ ಜೀವನ ಒಂದು ದೊಡ್ಡ ಉದಾಹರಣೆ. ಹತ್ತನೇ ತರಗತಿಯಲ್ಲಿ ಫೇಲಾದ ಅವರು, ಮುಂದೆ ತಮ್ಮ ತರುಣ ವಯಸ್ಸಿನಲ್ಲಿಯೇ ತಮ್ಮೆಲ್ಲ ಆಸ್ತಿ ಪಾಸ್ತಿಯನ್ನು ಕಳೆದುಕೊಂಡರು. ಭಾರತ ಬಿಟ್ಟು ಕೆನಡಾಕ್ಕೆ ಬಂದು ಅಲ್ಲಿ ಜೀವನವನ್ನು ಹೊಸದಾಗಿ ಆರಂಭಿಸಿದರು. ಕಾರುಗಳನ್ನು ತೊಳೆಯುವುದುರಿಂದ ಆರಂಭಿಸಿ ಜೀವನವಿಮೆಯ ಏಜೆಂಟರಾಗಿ, ಸೇಲ್ಸ್ ಮ್ಯಾನ್‌ರಾಗಿ ದುಡಿದರು. ತಮ್ಮ ಜೀವನದ ಕಷ್ಟದ ಗಳಿಗೆಗಳಲ್ಲಿ ಅವರು ಧೃತಿಗೆಡಲಿಲ್ಲ. Motivational ಗುರು ನಾರ್ಮನ್ ವಿನ್ಸೆಂಟ್ ಪೀಲೆಯವರಿಂದ ಪ್ರೇರೇಪಿಸಲ್ಪಟ್ಟು ಕಷ್ಟದಲ್ಲಿದ್ದ ಜನರನ್ನು ಪ್ರೇರೇಪಿಸಿ ಮಾರ್ಗದರ್ಶನ ಮಾಡಿದರು. ಅನೇಕ ಜನರಿಗೆ ಸಲಹೆ ಕೊಟ್ಟು ಅವರ ಬದುಕಿನ ಮಾರ್ಗವನ್ನು ಬದಲಿಸಿದರು. ಇಂದು ಅವರು ವಿಶ್ವದ ಖ್ಯಾತ Motivational author/speaker ಆಗಿ ಹೊರಹೊಮ್ಮಿದ್ದಾರೆ. ತಾರುಣ್ಯದಲ್ಲಿಯ ಸಂಕಟಗಳೆದುರು ಸೋತು ಕೈ ಚೆಲ್ಲಿದ್ದರೆ, ಅವರು ಖ್ಯಾತ Motivational author/speaker ಆಗುತ್ತಿರಲಿಲ್ಲ ಮತ್ತು ಸಾವಿರಾರು ಜನರಿಗೆ ನೆರವಾಗುತ್ತಿರಲಿಲ್ಲ. ಅವರು ತಮ್ಮ ಗ್ರಹಿಕೆ, ನಂಬಿಕೆ ಮತ್ತು ಶ್ರದ್ಧೆಗಳನ್ನು ಧನಾತ್ಮಕ ಮಾರ್ಗದಲ್ಲಿ ನಡೆಸಿದ್ದುದರಿಂದ ನೂರಾರು ಜನರಿಗೆ ದಾರಿದೀಪವಾದರು. ನಮ್ಮ ಗ್ರಹಿಕೆ, ನಂಬಿಕೆ ಮತ್ತು ಶ್ರದ್ಧೆಗಳನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುವವರು ನಾವೇ. ಬೇರೆ ಯಾರೂ ಅಲ್ಲ. ಆದುದರಿಂದ ನಮ್ಮ ಆಶಾವಾದವನ್ನು ನಾವೆಂದೂ ಬಿಡಬಾರದು.
ಕನ್ನಡದ ಮೇರು ಕವಿ ಡಿ.ವಿ.ಜಿ ಅವರಂತೂ ಆಶಾವಾದ ಮನುಷ್ಯನ ಜೀವ ಗುಣ ಎಂದು ಬಣ್ಣಿಸಿದ್ದಾರೆ;
ಕ್ಲೇಶ ನೂರಾಗಿರೆಯುಮಾಶೆಗಳ ಪುನರುದಯ|
ಬೇಸರದ ನುಡಿಯೊಳಂ ಲೇಸುಗಳ ನೆನಪು||
ಆಶೆ ಸಾಯ್ತೆಂದೊಡಂ ಚೆಲುವೆನಲು ಕಣ್ಣಲೆತ|
ಮಾಸದೀ ಜೀವಗುಣ-ಮಂಕುತಿಮ್ಮ||
ಈ ಜೀವಗುಣವನ್ನು ಸದಾ ಜೀವಂತವಾಗಿಟ್ಟು, ಅದನ್ನು ಸರಿಯಾದ ದಿಶೆಯಲ್ಲಿ ಪ್ರವಹಿಸುವಂತೆ ನೋಡಿಕೊಳ್ಳುವ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕಲ್ಲವೆ ?
(ಚಿತ್ರ ಕೃಪೆ: http://www.flickr.com/photos/rkramer62)
Comments
ಧನಾತ್ಮಕ ವಿಚಾರಗಳನ್ನು ತುಂಬುವ
In reply to ಧನಾತ್ಮಕ ವಿಚಾರಗಳನ್ನು ತುಂಬುವ by makara
ತಮ್ಮ ಪ್ರೋತ್ಸಾಹಕ್ಕೆ ತುಂಬಾ
ವಸಂತರವರೆ,
In reply to ವಸಂತರವರೆ, by nageshamysore
ತುಂಬಾ ಧನ್ಯವಾದಗಳು ನಾಗೇಶ್ ಅವರೆ.
ಆತ್ಮೀಯ ವಸಂತ ಕುಲಕರ್ಣಿರವರೆ,
ನಮಸ್ಕಾರ ಲಕ್ಷ್ಮೀಕಾಂತ ಅವರೆ,