ವಿದ್ಯಾರ್ಥಿಗಳು ಮತ್ತು ಮೊಬೈಲ್!!

ವಿದ್ಯಾರ್ಥಿಗಳು ಮತ್ತು ಮೊಬೈಲ್!!

ಚಿತ್ರ

ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ಅದರದ್ದೆ ಆದ ಛಾಪನ್ನು ಮೂಡಿಸುವುದರಲ್ಲಿ ಯಶಸ್ವಿಯಾಗಿದೆ. ಈ ಮೊಬೈಲ್ ಕಂಡು ಹಿಡಿದ ಹೆಗ್ಗಳಿಕೆ 'ಮಾರ್ಟಿನ್ ಕೂಪರ್'ಗೆ ಸಲ್ಲಬೇಕು. ಜನರು ಅವನ ಹೆಸರನ್ನು ಕೂಡ ಕೇಳಿರ್ಲೀಕ್ಕಿಲ್ಲ ಆದರೆ ಅವನು ಕಂಡುಹಿಡಿದ ಮೊಬೈಲನ್ನು ಮಾತ್ರ ಕ್ಷಣ ಕ್ಷಣಕ್ಕೂ ಬಳಸುತ್ತಾರೆ. ಮನೆಯಲ್ಲಿ ನಾಲ್ಕು ಜನರಿಗೆ ನಾಲ್ಕು ಜೊತೆ ಚಪ್ಪಲಿ ಇರಬಹುದು ಆದರೆ ಮೊಬೈಲ್ ಮಾತ್ರ ನಾಲ್ಕಕ್ಕಿಂತ ಹೆಚ್ಚೇ ಇರುವಂತಹ ಕಾಲ ಇದಾಗಿದೆ.

ಮೊಬೈಲ್ ಎಲ್ಲರ ಅವಶ್ಯಕತೆ ಹೌದೇ? ಅಥವ ಎಲ್ಲರ ಅವಶ್ಯಕತೆ ಮೊಬೈಲ್ ಕಂಪೆನಿಗಳಿಗಿದೆಯೊ? ಎರಡೂ ಪ್ರಶ್ನೆಗೆ ಉತ್ತರ ಹೌದು ಎಂದೇ ಇರಬೇಕು. ಇದೆಲ್ಲದರ ಮಧ್ಯೆ 'ಅಲ್ಲ ವಿದ್ಯಾರ್ಥಿಗಳಿಗೆ ಮೊಬೈಲ್ ಅವಶ್ಯಕತೆ ಇದ್ಯಾ??' ಅಂತ ಹಲವು ಮಂದಿ ಕೇಳುವುದುಂಟು.. ಇದಕ್ಕೆ ಮಾತ್ರ ಉತ್ತರ ಕೊಡೋದು ಬಹಳ ಕಷ್ಟ ಇದೆ. ಹಿರಿಯರಿಗೆ, ಜೀವನ ಬಲ್ಲವರಿಗೆ ವಿದ್ಯಾರ್ಥಿ ಮತ್ತು ಮೊಬೈಲ್ ಪದಗಳು ಹೊಂದುವುದಿಲ್ಲ ಅಂತ ಅನ್ಸತ್ತೆ. ಆದರೆ ವಿದ್ಯಾರ್ಥಿಗಳಿಗೆ ಹಿರಿಯರಿಗೆ ನಮ್ ಕಷ್ಟ ಅರ್ಥಾನೆ ಆಗೊಲ್ಲ ಅನ್ಸತ್ತೆ.  ಇದರಲ್ಲಿ ಯಾರ್ ಸರಿನೊ, ಯಾರ್ ತಪ್ಪೊ ದೇವ್ರೇ ಬಲ್ಲ. ಆದರೆ ಅವನು ಜನರನ್ನು ಆಲಿಸುತ್ತಾನೆಯೇ ಹೊರ್ತು ಮಾತಾಡೋಲ್ಲ. ಹಾಗಾಗಿ ಇದಕ್ಕೆ ನಾವೇ ಉತ್ತರ ಕಂಡ್ಕೊಬೇಕಾಗಿದೆ.

'ಓದೊ ಹುಡುಗ್ರಿಗೆ ಮೊಬೈಲಲ್ಲಿ ಏನ್ ಕೆಲ್ಸ', 'ಇಪ್ಪತ್ನಾಲ್ಕು ಗಂಟೆ ಮೊಬೈಲಲ್ಲಿ ಏನ್ ಮಾಡ್ತೀಯ', 'ಓದುವಾಗ ಮೊಬೈಲ್ ಪಕ್ಕದಲ್ಲಿ ಯಾಕೆ', 'ನಿಮ್ ವಯಸ್ಸಲ್ಲಿ ನಾವ್ ಮೊಬೈಲ್ ನೋಡೂ ಇರ್ಲಿಲ್ಲ, ಈಗ ನಿಮ್ಗೆ ಮೊಬೈಲ್ ಬಿಟ್ ಪ್ರಪಂಚ ಇಲ್ಲ' - ಇವು ಎಲ್ಲರು ಹೇಳುವಂತಹ ಹಾಗು ಕೇಳುವಂತಹ ಸಾಮಾನ್ಯ ವಾಕ್ಯಗಳು. ಹಿರಿಯರಿಗೆ ಹೀಗನಿಸುವುದು ಸಹಜವೂ ಕೂಡ ಹಾಗು ಅದನ್ನು ತಪ್ಪು ಅನ್ನೊಕ್ ಅಗೋಲ್ಲ. ಅವರು ಜೀವನ ಅರಿತವ್ರು, ಅರಿದು ಕುಡಿದವ್ರು, ಅವರಿಗೆ ಅನುಭವ ಹೆಚ್ಚು, ಹಾಗಾಗಿ ಹೀಗೆ ಅನಿಸ್ತದೆ. ಆದರೆ ವಿದ್ಯಾರ್ಥಿಗಳಿಗೆ ಇದು ಅರಿವಾಗುವ ಹೊತ್ತಿಗೆ, ಅವರ ಮಕ್ಕಳಿಗೆ ಇದನ್ನು ಬೋಧಿಸುವ ಕಾಲ ಬಂದಿರುತ್ತದೆ.

ಹಾಗಿದ್ರೆ ವಿದ್ಯಾರ್ಥಿಗಳು ತಪ್ಪೆ?? ಓಡುತ್ತಿರುವ ಆಧುನಿಕ ಯುಗಕ್ಕನುಗುಣವಾಗಿ ಅವರು ಜೀವಿಸುವುದು ಸರಿಯಲ್ಲವೆ? ಕಾಲ ಕಳೆದಂತೆ ಮಕ್ಕಳು ಆಧುನಿಕತೆಯ ಸ್ಪರ್ಧೆಗೊಳಗಾಗಿ ಹೆಚ್ಚು ಅಂಕ ತೆಗೆಯಬೇಕು ಎನ್ನುವ ಪೋಷಕರು ಮಕ್ಕಳು ಆಧುನಿಕತೆಯ ಮೊಬೈಲ್ ಬಳಸಿದ್ರೆ ಯಾಕ್ ಒಪ್ಪೋಲ್ಲ? ಈ ಸ್ಪರ್ಧೆಗಳ ಸೆಣಸಾಟದಲ್ಲಿ ಮುಂದು ಬರಬೇಕೆಂಬ ತವಕ ವಿದ್ಯಾರ್ಥಿಗಳಿಗೂ ಇರುವುದು. ಹಿರಿಯರಿಗೆ ಕಾಳಾಜಿ ನಿಜ ಆದರೆ ಮಕ್ಕಳಿಗೆ ಆಸೆ ಇರೋದಿಲ್ವ ಹೇಳಿ. ಸ್ನೇಹಿತ ಮೊಬೈಲ್ ಹಿಡಿದಾಗ, ತಾನು ಬಳಸಬೇಕೆಂಬ ಹಂಬಲ ಸಹಜ. ಮೊಬೈಲ್ನಲ್ಲಿ ಏನ್ ಇದೆ ಎಂಬ ಕುತೂಹಲ ಸರ್ವೇಸಾಮಾನ್ಯ. ದೊಡ್ಡವರಿಗೇ ಈ ಕುತೂಹಲ ಬರುವಾಗ ಇನ್ನು ಎಳೆಯರಿಗೆ ಬರುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ವಿದ್ಯಾರ್ಥಿಗಳ ತಪ್ಪು ಅಂತಲೂ ಪರಿಗಣಿಸಲು ಆಗುವುದಿಲ್ಲ.

ಇದಕ್ಕೆ ಉತ್ತರ ಒಂದೆ- 'ಅತಿ ಸರ್ವತ್ರ ವರ್ಜಯೇತ್' ಅಥವ 'ಅತಿಯಾದರೆ ಅಮೃತವೂ ವಿಷ'. ದೊಡ್ಡವ್ರು ಹೇಳೋದೂ ತಪ್ಪಲ್ಲ ಹಾಗೂ ಚಿಕ್ಕವ್ರು ಮಾಡೋದೂ ಸರಿಯಲ್ಲ. ಎಲ್ಲವು ಮಿತಿಯಲ್ಲಿದ್ದರೆ, ಉಪಯೋಗವೇ ಹೌದು. ದಿನವಿಡೀ ಮೊಬೈಲ್ ಹಿಡಿದು ಕಟ ಕಟ ವೊತ್ತಿ ಮೆಸೇಜ್ ಮಾಡುವೂದೂ ಸರಿಯಲ್ಲ ಹಾಗು ಮಕ್ಕಳು ಮೊಬೈಲ್ ಹಿಡಿದ ಕೂಡಲೆ ಬೈಯ್ಯುವುದೂ ಸಮಂಜಸವಲ್ಲ ಎಂದು ನನಗನಿಸುತ್ತೆ. ಹಾಗಾಗಿ ವಿದ್ಯಾರ್ಥಿಗಳಾಗಿ ಎಷ್ಟು ನಾವು ಬಳಸಬೇಕು ಎಂದು ತಿಳಿದುಕೊಳ್ಳಬೇಕು ಹಾಗು ಪೋಷಕರಾಗಿ ಹೆಚ್ಚು ಬಳಸಿದಲ್ಲಿ ನಾವು ತಿದ್ದಬೇಕು. ಸಕಾರಾತ್ಮಕ ಕೆಲಸಗಳಲ್ಲಿ ಮೊಬೈಲ್ ಬಳಕೆಯಾಗಬೇಕು ಆಗ ಮೊಬೈಲ್ ಮಾರಕವಾಗೊಲ್ಲ.

ಇದನ್ನೆಲ್ಲ ಹೇಳಿದ ನಾನೂ ಸಹ ಮೊಬೈಲ್ ಎಂಬ ಆಧುನಿಹತೆಗೆ ಮರುಳಾದವನೆ, ತುತ್ತಾದವನೇ ಹೌದು ಆದರೆ ಮಿತಿಯನ್ನು ಅರಿತವನು ಅಥವ ಅರಿಯುವ ಪ್ರಯತ್ನದಲ್ಲಿರುವವನು. ಈ ಬ್ಲಾಗ್ ಮಾರ್ಟಿನ್ ಕೂಪರ್ ಅವರನ್ನು ಪರಿಚಯಿಸುವ ಹಾಗು ನೆನಪಿಸಿಕೊಳ್ಳೊ ಒಂದು ಮುಗ್ಧ ಪ್ರಯತ್ನ.

Rating
Average: 5 (1 vote)