೪೨. ಶ್ರೀ ಲಲಿತಾ ಸಹಸ್ರನಾಮ ೧೦೮ ರಿಂದ ೧೧೧ನೇ ನಾಮಗಳ ವಿವರಣೆ

೪೨. ಶ್ರೀ ಲಲಿತಾ ಸಹಸ್ರನಾಮ ೧೦೮ ರಿಂದ ೧೧೧ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೦೮ - ೧೧೧

Ṣaṭcakropari-samsthitā षट्चक्रोपरि-सम्स्थिता (108)

೧೦೮. ಷಟ್ಚಕ್ರೋಪರಿ-ಸಂಸ್ಥಿತಾ

          ದೇವಿಯು, ಮೂಲಾಧಾರ ಚಕ್ರದಿಂದ ಪ್ರಾರಂಭಿಸಿ ಆಜ್ಞಾಚಕ್ರದವರೆಗೆ ಆರು ಚಕ್ರಗಳ ಮೇಲೆ ಉಪಸ್ಥಿತಳಾಗಿದ್ದಾಳೆ. ಈಗ ಆಕೆಯು ಚಕ್ರವಲ್ಲದ ಸಹಸ್ರಾರದಲ್ಲಿದ್ದಾಳೆ. ಸಹಸ್ರಾರವು ಷಟ್ಚಕ್ರಗಳ ಮೇಲೆ ಇರುವುದರಿಂದ ಈ ನಾಮವನ್ನು ಬಳಸಾಗಿದೆ. ಇದಕ್ಕೆ ಇನ್ನೊಂದು ರೀತಿಯ ವ್ಯಾಖ್ಯಾನವನ್ನು ಕೊಡಬಹುದು. ಈ ಮುಂಚಿನ ಚರ್ಚೆಗಳಲ್ಲಿ, ದೇವಿಯು ಶಿವನೊಂದಿಗೆ ಐಕ್ಯವಾಗಿರುವ ಪರಬ್ರಹ್ಮವೆಂದು ತಿಳಿದುಕೊಂಡಿದ್ದೇವೆ. ಸಹಸ್ರಾರದಲ್ಲಿರುವ ಈ ಪರಬ್ರಹ್ಮವನ್ನು ಅರಿಯಲು ಪ್ರಾಪಂಚಿಕ ವ್ಯವಹಾರಕ್ಕೆ ಸಂಭಂದಪಟ್ಟ ಕೆಳಗಿನ ಆರು ಚಕ್ರಗಳನ್ನು ದಾಟಬೇಕು ಮತ್ತು ಸಹಸ್ರಾರವು ಈ ಪ್ರಾಪಂಚಿಕೆ ಕ್ರಿಯೆಗಳಿಗೆ (ಪ್ರಾಪಂಚಿಕತೆಗೆ) ಅತೀತವಾಗಿದೆ. ಆದ್ದರಿಂದ ದೇವಿಯು ಈ ಷಟ್ಚಕ್ರಗಳ ಮೇಲಿದ್ದಾಳೆ ಅಂದರೆ ಆಕೆಯು ಆರು ಚಕ್ರಗಳಿಗೆ ಅತೀತವಾಗಿರುವ ಪರಬ್ರಹ್ಮವಾಗಿದ್ದಾಳೆ.

Mahāsaktiḥ महासक्तिः (109) 

೧೦೯. ಮಹಾಸಕ್ತಿಃ

           ‘ಮಹ’ ಅಂದರೆ ಉತ್ಸವ ಮತ್ತು ಆಸಕ್ತಿ ಎಂದರೆ ಬಹಳವಾಗಿ ಇಷ್ಟಪಡುವುದು. ದೇವಿಯು ಉತ್ಸವಗಳನ್ನು ಬಹುವಾಗಿ ಇಷ್ಟಪಡುತ್ತಾಳೆ. ಇಲ್ಲಿ ಉತ್ಸವವೆಂದರೆ ದೇವಿಯು ಶಿವನೊಂದಿಗೆ ಹೊಂದುವ ಸಮಾಗಮ. ಉತ್ಸವಗಳು ಎರಡು ರೀತಿಯವಾಗಿವೆ. ಒಂದು ಆಂತರಿಕವಾಗಿ ಕೈಗೊಳ್ಳುವುದು (ಅಂದರೆ ಮನಸ್ಸಿಗೆ ಸಂಭಂದಪಟ್ಟದ್ದು) ಮತ್ತೊಂದು ಬಾಹ್ಯವಾಗಿ ಆಚರಿಸುವುದು (ದೇಹಕ್ಕೆ ಸಂಭಂದಪಟ್ಟದ್ದು). ಈ ನಾಮವನ್ನು ಸೌಂದರ್ಯ ಲಹರಿಯ ೯ನೇ ಶ್ಲೋಕದ ಆಧಾರದ ಮೇಲೆ ಅರ್ಥೈಸಿದರೆ,”ಮಹೀಮ್ ಮೂಲಾಧಾರೆ’ (ಅಂದರೆ ಭೂಮಿಯು ಮೂಲಾದಾರದಲ್ಲಿ ಇದೆ) ಆಗ ಈ ನಾಮವು ಆಂತರಿಕ ಉತ್ಸವದ ಬಗ್ಗೆ ಹೇಳುತ್ತದೆ ಅಂದರೆ ದೇವಿಯ ಸೂಕ್ಷ್ಮಾತಿಸೂಕ್ಷ್ಮ ರೂಪವಾದ ಕುಂಡಲಿನಿಯ ಪೂಜೆಯನ್ನು ಕುರಿತಾಗಿ ಹೇಳುತ್ತದೆ. ಆಕೆಯು ಆಂತರಿಕ ಪೂಜೆಯನ್ನು ಇಷ್ಟಪಡುತ್ತಾಳೆ. ‘ಮಹ’ ಎಂದರೆ ಅಧಿಪತ್ಯ ಮತ್ತು ‘ಆ’ ಎಂದರೆ ಎಲ್ಲಾ ಕಡೆ ಮತ್ತು ‘ಸಕ್ತಿ’ ಅಂದರೆ ಪರಮೋನ್ನತವಾದದ್ದು. ಅವಳ ಪರಮೋನ್ನತ ಶಕ್ತಿಯು ಎಲ್ಲಾ ಕಡೆ ಹರಡಿದೆ ಎಂದು ಹೇಳಬಹುದು. ಈ ಸಂದರ್ಭದಲ್ಲಿ ದೇವಿಯು ಸರ್ವಶಕ್ತಳೆಂದು ಅರ್ಥೈಸಬಹುದು.

Kuṇḍalinī कुण्डलिनी (110)

೧೧೦. ಕುಂಡಲಿನೀ

            ದೇವಿಯು ಮೂಲಾಧಾರ ಚಕ್ರದಲ್ಲಿ ಮೂರುವರೆ ಸುರುಳಿಯಂತೆ ಸುತ್ತಿಕೊಂಡ ಸರ್ಪದ ರೂಪದಲ್ಲಿರುತ್ತಾಳೆ. ಆಕೆಯ ಸೂಕ್ಷ್ಮಾತಿಸೂಕ್ಷ್ಮ ರೂಪದ ಬಗ್ಗೆ ಇಲ್ಲಿ ವರ್ಣಿಸಲಾಗಿದೆ. ಆಕೆಯ ಕಾಮಕಲಾ (ನಾಮ ೩೨೨) ರೂಪವನ್ನು ಕೂಡಾ ಒಂದೇ ಒಂದು ನಾಮದಲ್ಲಿ ವರ್ಣಿಸಲಾಗಿದೆ. ಆದರೆ ವಾಕ್ ದೇವಿಗಳು ಆಕೆಯ ಸೂಕ್ಷ್ಮರೂಪವನ್ನು ೧೩ರಿಂದ ೫೪ ನಾಮಗಳವರೆಗೆ ವರ್ಣಿಸಿದ್ದಾರೆ. ಇದರಿಂದ ಬಾಹ್ಯ ಪೂಜೆಗಳಿಗಿಂತ ಮಹತ್ವವಾದದ್ದು ಮಾನಸಿಕ ಪೂಜೆ ಎನ್ನುವುದನ್ನು ಮನಗಾಣುತ್ತೇವೆ. ಮುಖ್ಯ ಪ್ರಾಣ ಶಕ್ತಿಯನ್ನು ಕುಂಡಲಿನೀ ಎನ್ನುತ್ತಾರೆ. ಕುಂಡಲಿನಿಯು ದೇಹವನ್ನು ಬೆಚ್ಚಗಿಡುವ ಅಗ್ನಿಯ ಮಧ್ಯದಲ್ಲಿರುವ ಮೂಲಾಧಾರ ಚಕ್ರದಲ್ಲಿರುತ್ತದೆ. ಈ ಅಗ್ನಿಯ ಪ್ರಮಾಣದಲ್ಲಿ ವ್ಯತ್ಯಯವುಂಟಾದಾಗ ಅದು ಅಸೌಖ್ಯವನ್ನುಂಟು ಮಾಡುತ್ತದೆ. ಕುಂಡಲಿನೀ ಶಕ್ತಿಯನ್ನು ಯಾರು ಬೇಕಾದರೂ ಕೇಳಿಸಿಕೊಳ್ಳಬಹುದು. ಒಬ್ಬರು ಎರಡೂ ಕಿವಿಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡರೆ, ಒಳಗಿರುವ ಕುಂಡಲಿನಿಯ ಶಕ್ತಿಯು ಅವರಿಗೆ ಬುಸುಗುಟ್ಟುವ ಶಬ್ದದಂತೆ ಕೇಳಿಸುತ್ತದೆ. ಈ ಬುನಾದಿ ಚಕ್ರವು ತ್ರಿಕೋಣಾಕಾರದಲ್ಲಿದ್ದು ಅದರ ಪಾರ್ಶ್ವಗಳು ಇಚ್ಛಾ, ಜ್ಞಾನ ಮತ್ತು ಕ್ರಿಯಾಶಕ್ತಿಗಳಾಗಿವೆ. ಈ ಮೂರು ಶಕ್ತಿಗಳ (ಸುಪ್ತಚೇತನದಿಂದ) ’ಓಂ’ಕಾರದ ಅ, ಉ ಮತ್ತು ಮ ಅಕ್ಷರಗಳು ಉತ್ಪನ್ನವಾಗಿವೆ. ಯೋಗಾ ವಾಶಿಷ್ಠದ (ಮಹರ್ಷಿ ವಶಿಷ್ಠರು ರಾಮನಿಗೆ ನೀಡಿದ ಉಪದೇಶಗಳ ಸಂಗ್ರಹ ಗ್ರಂಥ) ನಿರ್ವಾಣ ಪ್ರಕರಣದಲ್ಲಿ (ಕಡೆಯ ಆರು ಆಧ್ಯಾಯಗಳಲ್ಲಿ) ಕುಂಡಲಿನಿಯ ಕುರಿತಾಗಿ ಹೇಳುತ್ತದೆ. ಮಹರ್ಷಿ ವಶಿಷ್ಠರು ಶ್ರೀ ರಾಮನಿಗೆ ಹೇಳುತ್ತಾರೆ, "ಮಲಗಿದ ಸರ್ಪದ ದೇಹದಂತೆ ಸುತ್ತಿಕೊಂಡು.......ಬಾಳೆಯ ಹೂವಿನಂತೆ ಅದು ಒಳಗಡೆ ಅತ್ಯಂತ ಸೂಕ್ಷ್ಮವಾಗಿರುತ್ತದೆ........... ಕೋಪಗೊಂಡ ಸ್ತ್ರೀ ಸರ್ಪದಂತೆ ಬುಸುಗುಡುತ್ತಾ......... ಮನಸ್ಸಿನಲ್ಲಿ ಏರಿಳಿತಗಳನ್ನು ಉಂಟು ಮಾಡುತ್ತಿರುತ್ತದೆ. ಎಲ್ಲಾ ನಾಡಿಗಳು ಇದರೊಂದಿಗೆ ಸಂಪರ್ಕ ಹೊಂದಿರುತ್ತವೆ. ಇದು ಕೇವಲ ಜ್ಞಾನ ಅಥವಾ ಅರಿವಿನಿಂದಷ್ಟೇ ಪರಿಶುದ್ಧವಾಗಬಲ್ಲುದು.......... ಆದ್ದರಿಂದ ಶಕ್ತಿಯು ಪೂರ್ಯಾಷ್ಟಕದ ಹೆಸರಿನಲ್ಲಿ ಸಂತೋಷಗೊಳ್ಳುತ್ತದೆ. ಕುಂಡಲಿನೀ ಶಕ್ತಿಯ ಮೇಲ್ಮುಖ ಮತ್ತು ಕೆಳಮುಖ ಚಲನೆಗಳನ್ನು ಪ್ರಾಣದ ನಿಯಂತ್ರಣದ (ಪ್ರಾಣಾಯಾಮದ) ಮೂಲಕ ನಿರ್ಭಂದಿಸಿ ಅದನ್ನು ಹೃದಯದಲ್ಲಿ ನೆಲಸುವಂತೆ ಯಾರು ಮಾಡಬಲ್ಲರೋ ಅಂತಹವರಿಗೆ ಯಾವುದೇ ವಿಧವಾದ ರೋಗಗಳು ಉಂಟಾಗುವುದಿಲ್ಲ". ಯೋಗಾ ವಾಶಿಷ್ಠವು ಸಿದ್ಧಿಗಳ ಕುರಿತಾಗಿಯೂ ತಿಳಿಸುತ್ತದೆ.

         ಕಂಚಿ ಪರಮಾಚಾರ್ಯರು ತಮ್ಮ ಮೇರು ಕೃತಿಯಾದ  ‘Voice of God’ (ಭಗವದ್ವಾಣಿ) ಕೃತಿಯಲ್ಲಿ ಕುಂಡಲಿನೀ ಯೋಗದ ಕುರಿತಾಗಿ ಈ ರೀತಿ ಹೇಳುತ್ತಾರೆ, "ಸಾಧಕರಿಗೆ ಕೇವಲ ಕುಂಡಲಿನೀ ಯೋಗವೊಂದೇ ಅಲ್ಲ ಇರುವುದು, ಅವರು ಯಾವುದೇ ಮಾರ್ಗವನ್ನು ಬೇಕಾದರೂ ಅನುಸರಿಸಲಿ; ಆದರೆ ಅವರು ಅದಕ್ಕೆ ಏಕಾಗ್ರತೆ, ನಂಬಿಕೆ ಮತ್ತು ವಿಶ್ವಾಸಗಳಿಂದ ಅಂಟಿಕೊಳ್ಳಬೇಕು. ಈ ಹಾದಿಯಲ್ಲಿ ನೀವು ಮುಂದುವರೆದಂತೆಲ್ಲಾ, ನಿಮ್ಮ ಉಸಿರಾಟವು ತನ್ನಷ್ಟಕ್ಕೇ ತಾನೇ ಬದಲಾಗಿ ಅದು ಯೋಗಗಳನ್ನು ಅಭ್ಯಸಿಸುವವರ ಉಸಿರಾಟದ ಕ್ರಮಕ್ಕೆ ಸಮಾನವಾಗುತ್ತದೆ. ನೀವು ಅದನ್ನು ಗಮನಿಸಿರಬಹುದು; ಉಸಿರಾಟವು ತನ್ನಷ್ಟಕ್ಕೇ ತಾನೇ ಬದಲಾಗುತ್ತದೆ" ಮತ್ತೆ ಹೀಗೆ ಒಬ್ಬರ ಉಸಿರಾಟ ಕ್ರಮವು ಬದಲಾಗುತ್ತದೆಂದು ಹೇಳುತ್ತಾ ಶ್ರೀಗಳು ಹೀಗೆ ಮುಂದುವರಿಯುತ್ತಾರೆ, "...........“ಉಸಿರಾಟದ ಚಲನೆಯು ತಲೆಯ ಛಾವಣಿಯ ನರಗಳನ್ನು ಪ್ರಚೋದಿಸುವುದಲ್ಲದೇ ಅಂಬಾಳ್ ತಾಯಿಗೆ (ಅಂದರೆ ಶಕ್ತಿಗೆ) ಸೋಕಿ ಅದು ಅಮೃತವು ಹರಿಯುವಂತೆ ಮಾಡುತ್ತದೆ. ಪ್ರಾಪಂಚಿಕ ಜೀವನವನ್ನು ನಡೆಸುತ್ತಿದ್ದಾಗ್ಯೂ ಕೂಡಾ ನಾವು ಸಂತೋಷದಿಂದ ಪರವಶರಾದಾಗ ನಮ್ಮ ಉಸಿರಾಟವು ನಿಂತು ನಾವು ಪ್ರಜ್ಞೆ ತಪ್ಪುತ್ತೇವೆ. ಈ ಸಂದರ್ಭದಲ್ಲಿ ಕುಂಭಕ ಕ್ರಿಯೆಯಲ್ಲಿ (ಉಸಿರನ್ನು ಹಿಡಿದಿಡುವ ಕ್ರಮ) ಉಂಟಾಗುವ ಅನುಭವದ ಪ್ರತಿಫಲನವು ನಮ್ಮಲ್ಲಿ ಉಂಟಾಗುತ್ತದೆ. ಆಗ ನಾವು ಉದ್ಗರಿಸುತ್ತೇವೆ: ಆಹ್ಞ್! ನನ್ನ ಶಿರೋ ಭಾಗದಲ್ಲಿ ತಣ್ಣನೆಯ ಶೀತದ ಅನುಭವವಾಗುತ್ತಿದೆ". ಇದರಿಂದ ತಿಳಿಯುವುದೇನೆಂದರೆ ಅಮೃತದ ಒಂದು ಸಣ್ಣ ಬಿಂದುವು ನಮ್ಮ ಶಿರಸ್ಸಿನ ನರಮಂಡಲದ ಮೂಲಕ ಹರಿಯುತ್ತದೆ. ಇದನ್ನು ನಾನು ನಿಮಗೆ ಭಕ್ತಿ ಮಾರ್ಗದ ಮೂಲಕ ಉಂಟಾಗುವ ರೋಚಕ ಅನುಭವಗಳ ಕುರಿತಾಗಿ ಹೇಳುತ್ತಿದ್ದೇನೆ". ವಿಷ್ಣು ಸಹಸ್ರನಾಮದ ೯೦೭ನೇ ನಾಮವು ಕುಂಡಲಿ ಆಗಿದೆ.

 ಪೂರ್ವಾಷ್ಟಕದ ಕುರಿತು ಇನ್ನಷ್ಟು ಮಾಹಿತಿ:

            (ಇದನ್ನು ಮಹರ್ಷಿ ವಶಿಷ್ಟರು ಶ್ರೀ ರಾಮನಿಗೆ ಯೋಗಾವಾಶಿಷ್ಠದ ೬ನೇ ಅಧ್ಯಾಯದ ೫ನೇ ಪರಿಚ್ಛೇದದಲ್ಲಿ ಹೇಳಿದ್ದಾರೆ). ಬ್ರಹ್ಮಕ್ಕೆ ಆದಿ ಅಥವಾ ಅಂತ್ಯಗಳಿಲ್ಲ ಮತ್ತು ಅದು ವಿಶ್ವಕ್ಕೆ ಬೀಜವಾಗಿದೆ, ಅದು ಜೀವವಾಗಿ (ಆತ್ಮವಾಗಿ) ಮಾರ್ಪಾಟುಗೊಳ್ಳುತ್ತದೆ; ಅದು ತನ್ನಷ್ಟಕ್ಕೆ ತಾನೇ ಬೇರೆಯೆನ್ನುವ ಆಲೋಚನೆಗೆ ಈಡಾಗುತ್ತದೆ; ಅದು ಅಹಂಕಾರವಾಗಿ ಮನನದೊಂದಿಗೆ ಸೇರಿಕೊಂಡು ’ಮನಸ್’ ಆಗುತ್ತದೆ; ಅರಿವಿನ ನಿಖರತೆಯೊಂದಿಗೆ ಅದು ಬುದ್ಧಿ (ಅರಿವು) ಆಗುತ್ತದೆ ಮತ್ತು ಇಂದ್ರಿಯಗಳ ಮೂಲಕ ಐದು ಧಾತುಗಳಾಗುತ್ತದೆ (ಶಬ್ದ, ರೂಪ, ರಸ, ಗಂಧ, ಸ್ಪರ್ಷ). ದೇಹದ ಆಲೋಚನೆಯಿಂದಾಗಿ ಅದು ದೇಹವೇ ಆಗುತ್ತದೆ; ಪಾತ್ರೆಯ ಆಲೋಚನೆಯಿಂದ ಅದು ಪಾತ್ರೆಯೇ ಆಗುತ್ತದೆ. ಸೂಕ್ಷ್ಮರೂಪದ ಒಂದು ವಸ್ತುವು ಹೀಗಿದ್ದರೆ ಅದನ್ನು ಪೂರ್ಯಾಷ್ಟಕ ಅಥವಾ ಎಂಟು ಅಂಶಗಳುಳ್ಳ ದೇಹವೆಂದು ಕರೆಯುತ್ತಾರೆ. ಈ ಎಂಟು ಅಂಶಗಳೆಂದರೆ ಮನಸ್, ಅಹಂಕಾರ, ಬುದ್ಧಿ, ಶಬ್ದ, ರೂಪ, ರಸ, ಗಂಧ, ಸ್ಪರ್ಷ (ಕೊನೆಯ ಐದು ವಸ್ತುಗಳನ್ನು ತನ್ಮಾತ್ರಗಳೆಂದು ಕರೆಯುತ್ತಾರೆ.

Bisatantu-tanīyasī बिसतन्तु-तनीयसी (111)

೧೧೧. ಬಿಸತಂತು-ತನೀಯಸೀ

            ದೇವಿಯು ಕಮಲದ ದಂಟಿನ ಅತ್ಯಂತ ಸೂಕ್ಷ್ಮ ಎಳೆಯಂತಿದ್ದಾಳೆ. ಇದು ಆಕೆಯ ಸೂಕ್ಷ್ಮಾತಿಸೂಕ್ಷ್ಮ ರೂಪವನ್ನು ವಿವರಿಸುವ ಕಡೆಯ ನಾಮವಾಗಿದೆ. ಇಲ್ಲಿಯ ಕೆಳಗಿನ ಚಕ್ರಗಳಲ್ಲಿ ದೇವಿಯು ಚಿಕ್ಕ ಹುಡುಗಿಯಂತಿರುತ್ತಾಳೆ; ಏಕೆಂದರೆ ಆಕೆಯು ಮೂಲಾಧಾರ ಚಕ್ರದಲ್ಲಿ ಶಬ್ದವನ್ನು ಮಾಡುತ್ತಾಳೆ, ಮಣಿಪೂರಕ (ನಾಭಿ) ಚಕ್ರದಲ್ಲಿ ವಧುವಿನಂತೆ ಸಿಂಗರಿಸಿಕೊಳ್ಳುತ್ತಾಳೆ ಮತ್ತು ತನ್ನ ಸಂಗಾತಿಯಾದ ಶಿವನನ್ನು ಸಹಸ್ರಾರದಲ್ಲಿ ಕೂಡಿಕೊಳ್ಳಲು ಹೊರಡುತ್ತಾಳೆ. ಈ ರೀತಿಯ ವಿವರಣೆಗಳಿಗೆ ಹಲವಾರು ಆಕರಗಳಲ್ಲಿ ನಮಗೆ ಮಾಹಿತಿಯು ದೊರೆಯುತ್ತವೆ. ಈ ಎಲ್ಲಾ ವಿವರಣೆಗಳು ಅಂತಿಮವಾಗಿ ಕುಂಡಲಿನಿಯ ಮಾರ್ಗದತ್ತ ಬೊಟ್ಟು ಮಾಡಿ ತೋರಿಸುತ್ತವೆ; ಅದೆಂದರೆ ನರಮಂಡಲದ ಬೆನ್ನಹುರಿಯ (Spinal Cord) ಅತ್ಯಂತ ಸೂಕ್ಷ್ಮ ನಾಡಿಗಳಲ್ಲಿ ಹುದುಗಿದ್ದು ಬಹುತೇಕ ಅಗೋಚರವಾಗಿರುವುದು. ಯಾವಾಗ ಕುಂಡಲಿನಿಯು ಈ ರೀತಿಯ ಮಧ್ಯದಲ್ಲಿರುವ ಕಾಲುವೆಯ ಮೂಲಕ ಯಾವುದೇ ಅಡೆ-ತಡೆಗಳಿಲ್ಲದೆ ಮೇಲೇರುತ್ತದೆಯೋ ಆಗ ಅದು ಮಿಂಚಿನಂತೆ ಪ್ರಜ್ವಲಿಸುತ್ತದೆ. ಅದಕ್ಕೆ ಅಂತಹ ಸುಪ್ತ ಶಕ್ತಿಗಳಿರುವುದರಿಂದ ಅದು ಸಹಸ್ರಾರವನ್ನು ತಲುಪುವ ಮುನ್ನ ಸಾಧನಕನಿಗೆ ಹಲವಾರು ಸಿದ್ಧಿಗಳನ್ನು ಪ್ರಸಾದಿಸುತ್ತದೆ. ಆದರೆ ಸಾಧಕನು ಇಂತಹ ಶಕ್ತಿಗಳನ್ನು ದುರುಪಯೋಗ ಪಡಿಸಿಕೊಂಡರೆ ಅವನಿಗೆ ಬ್ರಹ್ಮಸಾಕ್ಷಾತ್ಕಾರವಾಗುವುದಿಲ್ಲ ಮತ್ತು ಅವನು ಶಿಕ್ಷೆಗೆ ಒಳಗಾಗುತ್ತನೆ. ದೇವಿಗೆ ತನ್ನ ಸಂಗಾತಿಯನ್ನು ಸೇರಬೇಕೆನ್ನುವ ಅದಮ್ಯ ಬಯಕೆಯಿದ್ದರೂ ಕೂಡಾ, ಅವಳು ಸಾಧಕನ ಚಕ್ರಗಳ ಮೂಲಕ ಕೈಗೊಳ್ಳುವ ಯಾತ್ರೆಯಲ್ಲಿ ತನ್ನ ಶಕ್ತಿಯನ್ನು ಸಾಧಕನು  ಹೇಗೆ ಉಪಯೋಗಿಸಿದ್ದಾನೆ ಎನ್ನುವುದು ಖಂಡಿತವಾಗಿ ಗೊತ್ತಿರುತ್ತದೆ. ತನಗೆ ಶಿವನಿಂದ ಆದೇಶಿಸಲ್ಪಟ್ಟಿರುವ ಕರ್ತವ್ಯಕ್ಕೆ ಆಕೆ ಎಂದೂ ಚ್ಯುತಿ ತಾರಳು.

            ಬಹುಶಃ ವಾಕ್ ದೇವಿಗಳು ದೇವಿಯ ಸೂಕ್ಷ್ಮ ರೂಪ (ಈ ನಾಮ) ಮತ್ತು ಅವಳ ಮಹತ್ ಅಥವಾ ಪರಮೋನ್ನತ ರೂಪ (ನಾಮ ೧೦೯ ಮಹಾಸಕ್ತಿಃ) ಇವೆರಡೂ ರೂಪಗಳ ಮಹತ್ವವನ್ನು ಒತ್ತಿ ಹೇಳಲು ಎರಡು ನಾಮಗಳನ್ನು ಉಪಯೋಗಿಸಿರುವಂತೆ ಕಾಣುತ್ತದೆ; ಏಕೆಂದರೆ ಅವಳ ಸೂಕ್ಷ್ಮಾತಿಸೂಕ್ಷ್ಮವಾದ ಕುಂಡಲಿನೀ ರೂಪವನ್ನು ವಿವರಿಸಿದ ಮೇಲೆ (ನಾಮ ೧೧೦) ಅವರು ಬೇರಿನ್ನೇನೂ ಹೇಳುವ ಅವಶ್ಯಕತೆಯಿರಲಿಲ್ಲ.

             ನಾರಾಯಣ ಸೂಕ್ತವು ಕುಂಡಲಿನಿಯನ್ನು ಹೀಗೆ ವಿವರಿಸುತ್ತದೆ; "ಅವನ ಧ್ಯಾನಕ್ಕೆ ಸೂಕ್ತವಾದ ಜಾಗವೆಂದರೆ ಆಕಾಶವಿರುವ ಹೃದಯ; ಮತ್ತು ಈ ಹೃದಯವು ತಲೆಕೆಳಗಾಗಿರುವ ಕಮಲದ ಮೊಗ್ಗಿನಂತಿದೆ. ಹೃದಯವು ಇಂಗ್ಲೀಷಿನಲ್ಲಿ Adam’s apple ಎಂದು ಕರೆಯಲ್ಪಡುವ ಗಂಟಲಿನ ಉಬ್ಬು ಪ್ರದೇಶದಿಂದ ಒಂದು ಗೇಣಿನಷ್ಟು ಕೆಳಗಡೆ ಮತ್ತು ನಾಭಿಯಿಂದ ಒಂದು ಗೇಣು ಮೇಲುಗಡೆ ಇದ್ದು ಅದು ಇಡೀ ವಿಶ್ವದ ಆವಾಸ ಸ್ಥಾನವಾಗಿದೆ. ಹೃದಯವು ರಕ್ತನಾಳಗಳಿಂದ ಕೂಡಿದ್ದು ಅದು ದಂಟಿನಿಂದ ಕೂಡಿದ ತಲೆಕೆಳಗಾಗಿ ನೇತಾಡುವ ಕಮಲದ ಮೊಗ್ಗಿನಂತಿದೆ. ಹೃದಯದಲ್ಲಿ ಅಥವಾ ಅದಕ್ಕೆ ಬಹು ಸಮೀಪದಲ್ಲಿ ಕಿರಿದಾದ ಸ್ಥಳವಿದ್ದು ಅದನ್ನು ಸುಷುಮ್ನವೆನ್ನುತ್ತಾರೆ. ಅದರೊಳಗೆ ಎಲ್ಲವೂ ಆಧಾರಿತವಾಗಿವೆ. ಅದರ ಮಧ್ಯದಲ್ಲಿ ಕೊಳೆತು ಹೋಗದಿರುವ, ಸಕಲವನ್ನು ತಿಳಿದಿರುವ, ಬಹುಮುಖವಾದ, ಮಹತ್ ಅಗ್ನಿ - ಎಲ್ಲಾ ಕಡೆಗಳಲ್ಲಿಯೂ ಜ್ವಾಲೆಯುಳ್ಳದ್ದು, ಯಾವುದು ತನ್ನ ಮುಂದಿರಿಸಿದ ಆಹಾರವನ್ನು ಆಸ್ವಾದಿಸುತ್ತದೆಯೋ, ಯಾವುದು ತನಗೆ ಸಮರ್ಪಿಸಿದ ಆಹಾರವನ್ನು ಸ್ವೀಕರಿಸುತ್ತಾ ಮತ್ತು ಯಾವುದು ತನ್ನ ಸ್ವಂತ ದೇಹವನ್ನು ಅಡಿಯಿಂದ ಮುಡಿಯವರೆಗೆ ಒಳಗಿನಿಂದ ಬೆಚ್ಚಗಿಡುತ್ತದೆಯೋ ಅದು ನಿವಸಿಸುತ್ತದೆ. ಅದರ ಮಧ್ಯದಲ್ಲಿರುವ ಆ ಅಗ್ನಿಯು, ಯಾವುದು ಪೂರ್ಣ ದೇಹದಲ್ಲಿ ವ್ಯಾಪಿಸುತ್ತದೆಯೋ, ಅಲ್ಲಿ ಒಂದು ಬೆಂಕಿಯ ನಾಲಿಗೆಯಿದ್ದು, ಅದರ ಬಣ್ಣವು ಹೊಳೆಯುವ ಬಂಗಾರದಂತಿದೆ, ಮತ್ತು ಇದು ಸೂಕ್ಷ್ಮಗಳಲ್ಲಿ ಅತ್ಯುನ್ನತವಾದುದಾಗಿದ್ದು, ಯಾವುದು ಮಳೆ ಸುರಿಸಲಿರುವ ಮೋಡಗಳ ಮಧ್ಯದಲ್ಲಿರುವ ಮಿಂಚಿನಂತೆ ಪ್ರಜ್ವಲಿಸುತ್ತಿರುತ್ತದೆಯೋ, ಯಾವುದು ಬತ್ತದ ಕಾಳಿನ ಮೇಲಿರುವ ಮುಳ್ಳಿನಂತೆ ಇದ್ದು; ಸೂಕ್ಷ್ಮವನ್ನು ತಿಳಿಸುವುದಕ್ಕೆ ಹೋಲಿಸಬಹುದೋ"

            ಬಹುಶಃ ಈ ನಾಮವು ಚಿತ್ರಿಣೀ ನಾಡಿಯನ್ನು ಕುರಿತಾಗಿಯೂ ಹೇಳುತ್ತಿರಬಹುದು; ಏಕೆಂದರೆ ಈ ನಾಡಿಯು ನರಮಂಡಲದ ಮಧ್ಯದಲ್ಲಿದ್ದು ಇದರ ಮೂಲಕ ಕುಂಡಲಿನಿಯು ಮೇಲೆಕ್ಕೆ ಮತ್ತು ಕೆಳಕ್ಕೆ ಚಲನೆಯನ್ನು ಕೈಗೊಳ್ಳುತ್ತದೆ. ಈ ನಾಮದೊಂದಿಗೆ ದೇವಿಯ ಕುಂಡಲಿನೀ ರೂಪದ ವರ್ಣನೆಯು ಕೊನೆಗೊಳ್ಳುತ್ತದೆ ಮತ್ತು ಮುಂದಿನ ನಾಮದಿಂದ ಆಕೆಯ ಆಶೀರ್ವಾದಗಳ ವಿವರಣೆಯು ಪ್ರಾರಂಭವಾಗುತ್ತದೆ.

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 108-111 http://www.manblunder.com/2009/08/lalitha-sahasranamam-108-111.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.

Rating
Average: 5 (1 vote)

Comments

Submitted by nageshamysore Mon, 06/03/2013 - 20:24

ಶ್ರೀಧರರವರೆ, 108 ರಿಂದ 111 ರ ಸಾರಾಂಶ...

೧೦೮. ಷಟ್ಚಕ್ರೋಪರಿ-ಸಂಸ್ಥಿತಾ 
ಐಹಿಕ ಪ್ರಾಪಂಚಿಕ ಭೌತಿಕಾತೀತ ಸಹಸ್ರಾರ ಪ್ರಕ್ರಿಯ 
ಶಿವೈಕ್ಯ ದೇವಿ ತಾ ಪರಬ್ರಹ್ಮ ಷಟ್ಚಕ್ರೋನ್ನತ ಉಪಸ್ಥಿತ
ಅರಿಯೆ ಪರಬ್ರಹ್ಮವ ದಾಟುತೆ ಷಟ್ಚಕ್ರ ಬಂಧ ವಿಸ್ತಾರ
ಮೂಲಾಧಾರದಿಂದಾಜ್ಞಾಚಕ್ರಾತೀತ ಪರಬ್ರಹ್ಮ ದ್ವಾರ!

೧೦೯. ಮಹಾಸಕ್ತಿಃ  
ಶಿವ ಸಮಾಗಮೋತ್ಸವಾಸಕ್ತೇ ದೇವಿ ಆಂತರೀಕಾ ಮಾನಸ
ಪೂಜಾ ಸೂಕ್ಶ್ಮಾತಿಸೂಕ್ಷ್ಮರೂಪ ಕುಂಡಲಿನಿಸ್ವರೂಪ ಮನಸಾ
ಮೂಲಾಧಾರಸ್ಥವಸುಂಧರೆ ಸರ್ವಾಧಿಪತ್ಯ ಪರಮೊನ್ನತಶಕ್ತಿ
ಪ್ರಸರಿತವೆಲ್ಲೆಡೆ ನಿಭಿಡ ದೇವಿ ಸರ್ವಶಕ್ತಿ ಸಂಪನ್ನೆ ಸ್ತುತಿ ಭಕ್ತಿ!

೧೧೦. ಕುಂಡಲಿನೀ  
ತ್ರಯಾರ್ಧಾವೃತ್ತಾ ನಾಗಿಣಿ ಉಪಸ್ಥಿತೆ ಮೂಲಾಧಾರೆ
ಸೂಕ್ಷಾತಿಸೂಕ್ಷ್ಮರೂಪೆ ಮಾನಸ ಪೂಜಾ ಪ್ರಸನ್ನಿತವಿರೆ
ಮುಖ್ಯ ಪ್ರಾಣಶಕ್ತಿ ಕುಂಡಲಿನಿ ಮೂಲಾಧಾರಾಗ್ನಿ ಮಧ್ಯ
ಸೌಖ್ಯಾಸೌಖ್ಯ ಕಾರಣ ವೈಪರಿತಾಗ್ನಿ ಕರ್ಣರಂಧ್ರೆ ಶ್ರಾವ್ಯ!

೧೧೧. ಬಿಸತಂತು-ತನೀಯಸೀ  
ಸೂಕ್ಷ್ಮಾತಿಸೂಕ್ಷ್ಮ ಅಂತಿಮನಾಮ ಬಾಲರೂಪಿಣಿ ಸುಕಮಲೆ
ಅಗೋಚರಾಸೂಕ್ಷ್ಮನಾಡಿ ಕುಂಡಲಿನೀ ಪ್ರವಾಹೆ ಪ್ರಜ್ವಲಸೆಲೆ
ಸುಪ್ತಶಕ್ತಿ ವಿತರಣಾ ಪಯಣೆ ಶುದ್ಧ ಸಾಧಕ ಸಿದ್ದಿ ಪ್ರಸಾಧಿತ
ಅಪಾತ್ರಾಬ್ರಹ್ಮಸಾಕ್ಷಾತ್ಕಾರಶಿಕ್ಷಿತ ದೇವಿ ಶಿವೇಚ್ಛೆ ಅಭಾದಿತ!

- ನಾಗೇಶ ಮೈಸೂರು, ಸಿಂಗಪುರ