ಕಾಡೋ ಕಡ್ಡಿಪುಡಿ ಕತೆ...!

ಕಾಡೋ ಕಡ್ಡಿಪುಡಿ ಕತೆ...!

ಕಡ್ಡಿಪುಡಿ ಸಿನಿಮಾ ಶುರುವಾಗೋದೇ ಒಬ್ಬ ಪೊಲೀಸ್  ಅಧಿಕಾರಿ ಕತೆ ಹೇಳೋ ಮೂಲಕ. ಒಂದೂರಲ್ಲಿ ಒಬ್ಬ ರೌಡಿ ಇದ್ದ ಅಂತ ಕತೆಯ ನಿರೂಪಣೆ ಇಲ್ಲಿ ಇಲ್ಲದೇ ಇದ್ದರೂ, ಹೇಳೋ ಕತೆ ಕಾಲ್ಪನಿಕ ಸ್ಪರ್ಶ  ಇಲ್ಲದೇನೆ ಸಾಗುತ್ತದೆ. ಆದ್ರೆ, ಪೊಲೀಸ್ ಹೇಳೋ ಕತೆಯನ್ನ ಕೇಳ್ತಾ ಹೋದಂತೆ, ಆ ಕ್ಯಾರೆಕ್ಟರ್ ಸತ್ತು ಹೋಗಿದೆ. ನಿದೇರ್ಶಕ ಸೂರಿ ಪೊಲೀಸ್ ಅಧಿಕಾರಿಯಿಂದಲೇ  ಕಡ್ಡಿಪುಡಿಯ ಫ್ಲಾಷ್ ಬ್ಯಾಕ್ ಕತೆ ಹೇಳಿಸುತ್ತಾರೆ ಅನಿಸುತ್ತದೆ. ಹಾಗೆ ಒಮ್ಮೆ ಯೋಚಿಸುತ್ತ ಕುಳಿತ ಪ್ರೇಕ್ಷಕರಿಗೂ ಒಂದು ಆಶ್ಚರ್ಯ. ಅಧಿಕಾರಿ ಹೇಳೋ  ಆ ರೌಡಿ ತೆರೆ ಮೇಲೆ ಬರುತ್ತಾನೆ. ಆತನೇ ಶಿವಣ್ಣ..ಅಲಿಯಾಸ್ ಆನಂದ್ ಅಲಿಯಾಸ್ ಕಡ್ಡಿಪುಡಿ...

ಕಡ್ಡಿಪುಡಿ ರೌಡಿಯಲ್ಲದ ರೌಡಿ ಸಿನಿಮಾ. ರೌಡಿಗಳು ಆಗಲೂ ಕಾರಣಗಳೇ ಇರೋದಿಲ್ಲ. ರೌಡಿ ಆಗಿ ಬಿಡ್ತಾರೆ.ಇನ್ನೂ ಕೆಲವರು ರೌಡಿಗಳ ಹಾಗೆ ಪೋಜ್ ಕೊಡ್ತಾರೆ. ಇಲ್ಲಿ ಬರೋ ಕಡ್ಡಿಪುಡಿ ರೌಡಿನೂ ಹೌದು. ರೌಡಿಯಾಗಿಯೇ ಇರದೇ ಇರೋನೂ ಹೌದು.! ಇಷ್ಟು ಹೌದುಗಳ ಕಡ್ಡಿಪುಡಿ ಆನಂದ್ ಗೆಳತನಕ್ಕೆ ಕಟ್ಟು ಬಿದ್ದು, ಗೆಳೆಯನಿಗಾಗಿ ಜೀವನ ಕೊಡಲೂ ಸಿದ್ಧನಾಗಿರೋ ಸಿಡುಕು ಮನುಷ್ಯ. ಇಷ್ಟು ಬಿಟ್ಟರೇ, ರೌಡಿಯಾಗೋ ಯಾವ ಕ್ವಾಲಿಟಿನೂ ಕಾಣೋದಿಲ್ಲ. ಡಾನ್ ಆಗೋ ಲಕ್ಷಣವೂ ಇಲ್ಲ. ಆದ್ರೂ ಕಡ್ಡಿಪುಡಿ ಆನಂದ್ ರೌಡಿ ಲಿಸ್ಟ್ ನಲ್ಲಿರುತ್ತಾನೆ. ರೌಡಿ ಲಿಸ್ಟ್ ನಲ್ಲಿ ಇರೋದ್ರಿಂದಲೇ ಏರಿಯಾದಲ್ಲಿ ತನ್ನಷ್ಟಕ್ಕೆ ತಾನೇ ಹವಾ ಮೆಂಟೇನ್ ಆಗಿರುತ್ತದೆ.

ಕಡ್ಡಿಪುಡಿ ಲಾಂಗು, ಮಂಚಿನಿಂದ ದೂರವೇ ಉಳಿಯಲು ಇಷ್ಟಪಡೋ ಮನುಷ್ಯ. ಸಂದರ್ಭ ರೌಡಿ ಪಟ್ಟಕಟ್ಟುತ್ತದೆ. ಪೊಲೀಸರ್  ಜತೆಗೂ, ರಾಜಕೀಯ ವ್ಯಕ್ತಿಗಳ ಮಧ್ಯೆನೂ ಇರೋ ಈ ಆನಂದನ ಕತೆಯನ್ನ ಒಬ್ಬ ಪೊಲೀಸ್ ಅಧಿಕಾರಿ ಹೇಳೋದು ವಿಶೇಷ. ಅದೇ ಆನಂದ್ ನಿಗೆ ಇದೇ ಕಥೆಗಾರ ಪೊಲೀಸ್ ಅಧಿಕಾರಿ ಮದುವೆಯಾಗು ಅಂತ ಸಲಹೆ ನೀಡೋದು, ರೌಡಿಗಳನ್ನ ಎನ್ ಕೌಂಟರ್ ಮಾಡೋ ಪೊಲೀಸ್ ಅಧಿಕಾರಿಗಳ ಇನ್ನೊಂದು ಮುಖವನ್ನೂ ತೋರುತ್ತದೆ..

ಪೊಲೀಸ್  ಅಧಿಕಾರಿಯ ಮಾತಿಗೂ ಅಲ್ಲದೇ. ಗೆಳೆಯರ ಒತ್ತಾಯಕ್ಕೂ ಅಲ್ಲದೇನೆ. ಆನಂದ್ ಅಲಿಯಾ ಕಡ್ಡಿಪುಡಿ ಬದುಕಿನಲ್ಲಿ ಉಮಾ ಎಂಬ ಹುಡುಗಿಯ ಪ್ರವೇಶವಾಗುತ್ತದೆ. ಆಕೆಯ ಆಗಮನದಿಂದ ಆನಂದನ ಬದುಕು ಇನ್ನಷ್ಟು ಚೆಂದಗಾಣುತ್ತದೆ. ಆದರೆ, ಇದೇ ಚಂದದ ಬದುಕಿನಿಂದ ಹುಟ್ಟಿರೋ ಆಸೆಗಳು,ಆಕಾಂಕ್ಷೆಗಳ ಸುಳಿಯಲ್ಲಿ ಸಿಲುಕೋ ಆನಂದ್ ನ ಕತೆ ಈಗಲೇ ದಯನೀಯವಾಗುತ್ತದೆ. ಅದರಿಂದ ಹೇಗೆ ಹೊರ ಬರುತ್ತಾನೆ ಈ ಆನಂದ. ಇಡೀ ಕತೆ ಎಲ್ಲಿಗೆ ಬಂದು ನಿಲ್ಲುತ್ತದೆ. ಹ್ಯಾಪಿ ಎಂಡಿಂಗಾ..? ಸ್ಯಾಡ್ ಎಂಡಿಂಗಾ..? ಇದನ್ನ ಥಿಯೇಟರ್ ನಲ್ಲಿಯೇ ನೋಡಿ..

ಅನಂತ್ ನಾಗ್  ಪೊಲೀಸ್  ಅಧಿಕಾರಿಯಾಗಿ ತುಂಬಾ ಇಷ್ಟವಾಗುತ್ತಾರೆ. ಅತ್ಯುತ್ತಮ ಅಧಿಕಾರಿಯೊಬ್ಬ ರೌಡಿಸಂನ್ನ ತನ್ನ ಒಳ್ಳೆತನದಿಂದಲೂ ತಡೆಯಬಹುದು. ಕೇವಲ ಎನ್ ಕೌಂಟರ್ ಇದಕ್ಕೆ ಹಾದಿಯಲ್ಲ  ಎಂಬುದನ್ನ ಹೇಳೋ ಪಾತ್ರವನ್ನ ಅನಂತ್ ನಾಗ್ ನಿಭಾಹಿಸಿದ್ದಾರೆ. ರಾಧಿಕಾ ಪಂಡಿತ್ ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಬಡತನದ ಬೇಗೆಗಳನ್ನ ಅನುಭವಿಸುತ್ತಿರೋವಾಗ್ಲೇ ರೌಡಿಯೊಬ್ಬನ ಜತೆ ಮದುವೆಯಾದಾಗ ಆಗೋ ನೋವುಗಳನ್ನ ತಮ್ಮ ಈ ಪಾತ್ರದ ಮೂಲಕ, ರಾಧಿಕಾ ಎಲ್ಲರಿಗೂ ಇಷ್ಟವಾಗೋ ಹಾಗೆ ಅಭಿನಯಿಸಿ ತೋರುತ್ತಾರೆ. ರಂಗಾಯಣ್  ರಘು ನಿರ್ವಹಿಸಿರೋ ಜಿಂಕೆ ಅನ್ನೋ ಅಡ್ಡ ಹೆಸರಿನ ಪಾತ್ರದ ಕಾಮಿಡಿ ಕಿಕ್ ಆಗೊಮ್ಮೆ, ಈಗೊಮ್ಮೆ ನಗಿಸುತ್ತಲೇ ಇರುತ್ತದೆ. ನಿರ್ಮಾಪಕ ನಾಯಿ ಚಂದ್ರ ಪಾತ್ರ ಚಿಕ್ಕದಾದ್ರೂ ಕಾಡುತ್ತದೆ.

ನಿದೇರ್ಶಕ ಸೂರಿ ಅವ್ರೂ ಕಡ್ಡಿಪುಡಿ ಎಂಬ ರೌಡಿಯಲ್ಲದ ರೌಡಿಯ ಕತೆಯನ್ನ  ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಮೊದಲಾರ್ಧದಲ್ಲಿ ಆನಂದ್ ನ ಹಿನ್ನೆಲೆ ಮತ್ತು ಮುನ್ನೆಲೆ ಹೇಳ್ತಾರೆ. ದ್ವಿತಿಯಾರ್ಧದಲ್ಲಿ ದಾಂಪತ್ಯ ಗೀತೆ ಮತ್ತು ನಟಿ ಐಂದ್ರಿತಾ ಕತೆ ಮತ್ತು ಸೌಂದರ್ಯ ಸಮರ ಹಾಡನ್ನ ಬರುತ್ತದೆ. ಈ ಹಾಡಿನ ನಂತರ ಚಿತ್ರದ ಕತೆ ಮತ್ತೆ ಶೃತಿ ಹಿಡಿಯುತ್ತದೆ. ಅಪಶೃತಿ ಅಂತ ಅನಿಸದೇ ನೀಟಾಗಿ ಸಾಗಿ ಅತ್ತ್ಯುತ್ತಮ ಎಂಡ್ ಅನ್ನೊ ಭಾವ ಮೂಡಿಸುತ್ತದೆ. ವಿ.ಹರಿಕೃಷ್ಣರ ಸಂಗೀತವೂ ಪ್ರೇಕ್ಷಕರನ್ನ ಕಂಡಿತ ತಾಕುತ್ತದೆ..

-ರೇವನ್