ಮೊದಲ ದಿನ..

ಮೊದಲ ದಿನ..

“ಮೊದಲ ದಿನ ಅಳುವೇ ಕಡಲುಕ್ಕಿ ಬಂದಂತೆ, ದುಃಖ ಕಾರ್ಮೋಡ ಕವಿದಂತೆ.. ಹತ್ತು ಕಡೆ ಕಣ್ಣು ಜೀವ ಜಾತ್ರೆಯಲ್ಲಿ ಒಂಟಿಯಾದಂತೆ..” ಕೆ.ಎಸ್‍.ನರಸಿಂಹ ಸ್ವಾಮಿಯವರಲ್ಲಿ ಅವರ ಸಾಲುಗಳನ್ನು ಹೀಗೆ ಬದಲಾಯಿಸಿ ಬರೆಯುತ್ತಿರುವುದಕ್ಕಾಗಿ ಕ್ಷಮೆಯಾಚಿಸುತ್ತೇನೆ.

ನಾನೀಗ ಹೇಳ ಹೊರಟಿರುವುದು ಜೂನ್‍ ತಿಂಗಳ ಮೊದಲ ದಿನಗಳಲ್ಲಿ ಶಾಲೆಗೆ ಸೇರಿದ ಮೊದಲ ದಿನಗಳಲ್ಲಿನ ಪುಟ್ಟ ಕಂದಮ್ಮಗಳ ಬಗ್ಗೆ. ನಮ್ಮಲ್ಲೂ ಶಾಲೆಗೆ ಹೋದ ಮೊದಲ ದಿನ ಹೀಗೆ ಅನ್ನಿಸಿತ್ತಲ್ಲ. ತಿಂದುಡು, ಆಟ ತುಂಟಾಟಗಳಲ್ಲಿ ಮುಳುಗಿ ಅಮ್ಮ-ಅಪ್ಪ, ಅಜ್ಜಿ-ತಾತ, ಅಣ್ಣ-ಅಕ್ಕ ಹೀಗೆ ಮನೆಮಟ್ಟಿಗೆ ಮನೆಸನಿಹಕೆ ಮಾತ್ರ ಸೀಮಿತವಾಗಿದ್ದ ಪುಟ್ಟ-ಪುಟ್ಟಿಯರು ಇದ್ದಕ್ಕಿದ್ದಂತೆ ಹೊಸ ಜಾಗಕ್ಕೆ ಬದುಕಿನ ಬಹುಭಾಗವನ್ನು ಆಕ್ರಮಿಸಲಿರುವ ಶಾಲೆಯ ದಿನಗಳಿಗೆ ಕಾಲಿಡುವ ಗಳಿಗೆ ಮನೆಯಲ್ಲಿ ಸಂಭ್ರಮ ಶಾಲೆಗೆ ಹೋಗುವವರೆಗೂ ಪುಟ್ಟ-ಪುಟ್ಟಿಗೂ ಸಂಭ್ರಮವೇ ಆದರೆ ಗೇಟಿನೊಳಗಡೆ ಕಾಲಿಟ್ಟು ಅಮ್ಮ ತನ್ನ ಬೆರಳು ಬಿಡಿಸಿಕೊಳ್ಳುತ್ತಿದ್ದ ಹಾಗೆ.. ಶುರು.. ದಾಖಲೆ ಮಳೆ.. ಕಣ್ಣೀರ ಧಾರೆ..

‘ನೀನು ಜಾಣ/ಜಾಣೆ ಅಲ್ವಾ ಸ್ಕೂಲಿಗೆ ಗಲಾಟೆ ಮಾಡದೆ ಹೋಗ್ತಿಯಾ ಅಲ್ವಾ’ ಅಂತ ಶಾಲೆ ಆರಂಭಕ್ಕೂ ಮುನ್ನ 3 ತಿಂಗಳಿಂದಲೂ ಹೇಳತ್ತಾ ‘ಹೋಗ್ತಿಯಾ ತಾನೆ’ ಅಂದಾಗ ಮೂಡಿದ್ದಂತೆ ಮಾದೇವ ಅನ್ನೋ ಹಾಗೆ ಕೆಲವೊಮ್ಮೆ ‘ಹೂಂ’ ಎಂದರೆ ಕೆಲವೊಮ್ಮೆ ‘ಊಹೂಂ’ ಉತ್ತರಗಳನ್ನು ಕೊಡುತ್ತಾ ಚಂಗನೆ ಜಿಗಿದು ಹೋಗುತ್ತಿದ್ದ ಮಗು ಶಾಲೆಯ ಬಾಗಿಲಲ್ಲಿ ನಿಂತಾಗ...

ಎಲ್ಲ ಮಕ್ಕಳು ಅಳುತ್ತಾರೆ ಎಂದೇನಿಲ್ಲ. ಕೆಲವರು ಏನಿದು ಹೊಸ ರೀತಿಯಿದೆಯಲ್ಲ ಎಂದು ಆರಾಮವಾಗಿ ಗುಂಪಲ್ಲಿ ಬೆರೆತು ಹೊಸ ಮಿಸ್‍ಗಳಿಗೆ ಹೊಂದಿಕೊಂಡು ಬಿಡುತ್ತಾರೆ. ಮಗು ಶಾಲೆಗೆ ಸೇರಿತು ಮೊದಲ ದಿನ ಹೋಗಿ ಬಂತು ಅಂದಾಕ್ಷಣ ಅದರ ಅಮ್ಮನಿಗೆ ದಿನವೆಲ್ಲ ಮತ್ತೆ ಮತ್ತೆ ಕೇಳಲಾಗುವ ಪ್ರಶ್ನೆ ‘ಮಗು ಅಳದೆ ಸ್ಕೂಲಿಗೆ ಹೋಯ್ತಾ?’ ಸ್ಕೂಲ್‍ ಹತ್ತಿರ ಅಮ್ಮಂದಿರ ಆವತ್ತಿನ ಮಾತುಕತೆ ಕೂಡ ಇದರ ಸುತ್ತವೇ. ಅಳದೆ ಸ್ಕೂಲಿಗೆ ಹೋದ ತಮ್ಮ ಮಗುವಿನ ಬಗ್ಗೆ ಒಬ್ಬ ಅಮ್ಮ ಖುಷಿ ಪಡುತ್ತಿದ್ದರೆ ಏನು ಮಾಡಿದರೂ ಅಳು ನಿಲ್ಲಿಸದ ಮಗುವಿನ ಅಮ್ಮ ‘ಹೊಸ ಜಾಗ ಅಲ್ವಾ ಹೊಂದಿಕೊಳ್ಳಕ್ಕೆ ಟೈಂ ಬೇಕು. ಅಷ್ಟು ಬೇಗ ಹೊಸಬರ ಹತ್ತಿರ ಹೋಗೋಲ್ಲ ನೋಡಿ ಅದಕ್ಕೆ ಗಾಬರಿಯಾಗಿದೆ’ ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಾ ಮಗುವಿನ ವರ್ತನೆಗೆ ಹೀಗೆ ಕಾರಣ ಕೊಡುತ್ತಾ, ಪಾಪ ಎಷ್ಟು ಅತ್ತಿದೆ ಅಂತ ಬೇಜಾರು ಮಾಡಿಕೊಳ್ಳುತ್ತಾ ಎರಡನೇ ದಿನ ಶಾಲೆಗೆ ಬಿಡಲು ಸಿದ್ಧಳಾಗುತ್ತಾಳೆ.

ಶಾಲೆಯ ಒಳಗೆ ಇನ್ನೊಂದು ಲೋಕ. ಶಾಲೆ ಶುರುವಾಗಿ ಸರಿಸುಮಾರು 15 ದಿನ ಕೆಲವೊಮ್ಮೆ ತಿಂಗಳಾದರೂ ಬೇಕು ಮಿಸ್‍ಗಳಿಗೆ ಹೊಸ ಮಕ್ಕಳ ನಂಬಿಕೆ ಗಳಿಸಲು. ಮೊದಲ ದಿನವಂತೂ ಪಾಪ ಅವರ ಪಾಡು ದೇವರೇ!!! ‘ಅಮ್ಮ ಬೇಕು’ ಅನ್ನೋ ಮಕ್ಕಳ ಕೀರ್ತನೆಯಲ್ಲಿ ಮಿಂದೇಳುವ ಶುಭದಿನ. ಕಂಕುಳೇರಿದ ಮಕ್ಕಳನ್ನು ಸಮಾಧಾನ ಮಾಡಲು ಯತ್ನಿಸುತ್ತಾ, ಸುಮ್ಮನಾಯಿತಲ್ಲ ಎಂದು ಕಂಕುಳಿಂದ ಇಳಿಸಿದ ತಕ್ಷಣ ಮತ್ತೆ ಅಳು ಶುರುಮಾಡುವ ಮಕ್ಕಳನ್ನು ಸಂತೈಸುತ್ತಾ, ಕೆಲವೊಮ್ಮೆ ಸುಮ್ಮನಿದ್ದ ಮಕ್ಕಳು ಅಳುತ್ತಿರುವ ಮಕ್ಕಳನ್ನು ನೋಡಿ ಅಳಲು ಶುರುಮಾಡಿದಾಗ ಅವರನ್ನು ಸಂತೈಸುತ್ತಾ ‘ಅಳಬಾರದು ಜಾಣ ಅಲ್ವಾ. ಈ ಬೊಂಬೆ ನೋಡು, ಆ ಬೊಂಬೆ ನೋಡು, ಜಾರೆಬಂಡೆ ಆಡಿಸಲಾ’ ಅಂತ ಇನ್ನಿಲ್ಲದ ಹಾಗೆ ಅವರ ಅಳುವಿಗೆ ಅಣೆಕಟ್ಟು ಕಟ್ಟಲು ಯತ್ನಿಸುತ್ತಾರೆ. ‘ಗೇಟಿನೊಳಗೆ ಬಂದೆವು ಇನ್ನು ಒಳಗೆ ಬಾರೆವು’ ಅಂತ ಮುಷ್ಕರ ನಿರತ ಮಕ್ಕಳ ಜೊತೆ ಅವರನ್ನು ರಮಿಸುವಾಟದಲ್ಲಿ ಮಿಸ್‍ಗಳು ತಲ್ಲೀನ.

‘ಅಮ್ಮ ಎಷ್ಟುಹೊತ್ತಿಗೆ ಬರ್ತಾಳೋ’ ಅಂತ ಗೇಟಲ್ಲೇ ಅಳು ತುಂಬಿದ ಕಣ್ಣಲ್ಲಿ ಕಾದು ಕೂತ ನಿರೀಕ್ಷೆ.. ಗೇಟು ತೆಗೆದು ಅಮ್ಮ ಬಂದ ತಕ್ಷಣ ಅವಳ ಸೊಂಟವೇರಿ ಕುತ್ತಿಗೆ ಬಳಸಿ ಹೆಗಲಲ್ಲಿ ಮುಖ ಹುದುಗಿಸಿದ ಮೇಲೆಯೇ ಸಮಾಧಾನ. ಶಾಲೆಗಿಂತ ಶಾಲೆಯ ಗೇಟು ಯಾವಾಗಲೂ ಇಷ್ಟವಾಗುತ್ತಲ್ಲ. ಒಳಗೆ ಇರುವುದಕ್ಕಿಂತ ಅಲ್ಲಿಂದ ಹೊರಗೆ ಹೋಗುವ ಕ್ಷಣವೇ ಆನಂದದ ಕ್ಷಣವಾಗಿರುತ್ತದ್ದಲ್ಲ. ಶಾಲೆಯದು ಮಾತ್ರವಲ್ಲ, ಕಾಲೇಜು, ಆಫೀಸು, ಆಸ್ಪತ್ರೆ.. ಹೀಗೆ ಹಲವು ಕಡೆ ಗೇಟಿನ ಕಡೆಗೆ ನಮ್ಮ ಕಣ್ಣು ನೆಟ್ಟಿರುತ್ತಲ್ಲ. ಅದರ ಮೊದಲ ಅನುಭವ ಮೊದಲ ದಿನದ ಶಾಲೆಯಲ್ಲಿ ಇರುಬಹುದಾ?