ಶಾಲೆಯಲ್ಲಿ ಮಕ್ಕಳಿದ್ದಾರೆ ಹುಷಾರ
ಮೇಲಿನ ಮಾತಿನಿಂದ ಯಾರಿಗೆ ಹೆದರಿಸುತ್ತಿದ್ದಾರೆ? ಅಂದುಕೊಂಡಿರಾ ಹೌದು ಇದು ಎಲ್ಲರಿಗೂ ಎಚ್ಚರಿಕೆ ಕೊಡುವ ಮಾತು ನಾವೆಲ್ಲಾ ತುಂಬಾ ತಿಳಿದು ಇಲ್ಲಿಯವರೆಗೂ ತುಂಬಾ ತಪ್ಪುಗಳನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ ಹಾಗೆ ಆಗಲು ಬಿಡುವುದು ಅಪಾಯಕಾರಿ ಏಕೆಂದರೆ ನಾವೆಲ್ಲಾ ಈಗ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಅಡಿಯಲ್ಲಿ ಇದ್ದೇವೆ.
ಮರೆಯದಿರಿ ನಮ್ಮ ಮಕ್ಕಳ ಮುಂದೆ ಮಾತಾಡುವ ಸಮಯದಲ್ಲಿ ಹುಷಾರಾಗಿರಿ ಈಗ ನಮ್ಮ ಮಕ್ಕಳಿಗೂ ಒಂದು ಕಾನೂನು ಇದ್ದು ಅದು ಎಲ್ಲರ ಗಮನ ಸೆಳೆದಿದೆ. ಅದರ ಹಿನ್ನಲೆಯಲ್ಲಿ ನಾವೆಲ್ಲ ವಿಚಾರಿಸಬೇಕಾದ ಅಗತ್ಯವಿದೆ. ಈ ಕಾನೂನಿನ ಪ್ರಕಾರ ಮಕ್ಕಳಿಗೆ ಶಿಕ್ಷಿಸುವಂತಿಲ್ಲಾ, ದಂಡಿಸುವಂತಿಲ್ಲಾ, ವಾರೆಗಣ್ಣಿನಿಂದ ನೋಡುವಂತಿಲ್ಲಾ, ಯಾವುದೆ ಮಗುವಿಗೆ ಹೆದರಿಸಿ ಮಾತಾಡುವಂತಿಲ್ಲಾ,
ಅದರ ಪರಿಣಾಮವಾಗಿ ನಾವು ನಮ್ಮ ಭವಿಷ್ಯವನ್ನು ಉಳಿಸಿಕೊಳ್ಳುವ ಹಾದಿ ಈಗ ಸುಗಮವಾಗಿದೆ. ನಮ್ಮ ಮಕ್ಕಳಿಗೆ ನಾವೆಲ್ಲ ಬರಿ ಪ್ರೀತಿ ಕೊಟ್ಟರೆ ಸಾಲದು ಅವರ ಹಕ್ಕುಗಳು ಕೊಡುವುದು ಅಷ್ಟೆ ಅವಶ್ಯಕತೆಯ ಕೆಲಸವಾಗಿದೆ. ಅವರಿಗೆ ಅನುಕಂಪದ ಅವಶ್ಯಕತೆಯ ಜೊತೆಗೆ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಈ ಕಾನೂನು ಸಹಾಯ ಮಾಡುತ್ತದೆ. ಯಾರೇ ಇರಲಿ ಮಕ್ಕಳನ್ನು ಒಬ್ಬ ವ್ಯಕ್ತಿಯಾಗಿ ಮಾನವ ಕುಲದ ಶಕ್ತಿಯಾಗಿ ಇಂದು ಮಕ್ಕಳನ್ನು ನಾವು ನೋಡಬೇಕಿದೆ.
ಅದರ ಹಿನ್ನಲೆಯಲ್ಲಿ ನಾವೆಲ್ಲಾ ಈ ಕಾನೂನು ನಮ್ಮ ಮಕ್ಕಳನ್ನು ರಕ್ಷಿಸುವ ಒಂದು ಬಲವಾದ ಅಸ್ತ್ರವಾಗಿದೆ. ಆದರೆ ಅದನ್ನು ಕೆಲವು ಜನ ತಪ್ಪಾಗಿ ಅರ್ಥಮಾಡಿಕೊಂಡು ಮಕ್ಕಳಿಗೆ ಬುದ್ದಿವಾದ ವಿದ್ಯೆ ಕಲಿಸುವ ಪರಿಪಾಠವನ್ನು ಬಿಡುತ್ತಿದ್ದಾರೆ ಜೊತೆಗೆ ಕುಂಟು ನೆಪ ಹೇಳಿ ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ.
ನಮಗೆ ಕಾನೂನು ಇರುವುದು ಇನ್ನೊಬ್ಬರ ಉದ್ಧಾರಕ್ಕಾಗಿಯೆ ಹೊರತು ಅವರ ಅವಹೇಳನ ಮಾಡಿ ಅವರ ಹಕ್ಕಿನ ಜೊತೆಗೆ ಅವರ ಬದುಕು ಕಸಿದುಕೊಳ್ಳಲು ಅಲ್ಲಾ ಎಂಬುದು ತಿಳಿದುಕೊಳ್ಳಬೇಕಿದೆ. ಈ ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ. ಮಕ್ಕಳೊಂದಿಗೆ ಕೆಲಸ ಮಾಡುವ ಮಕ್ಕಳನ್ನು ಹೆರುವ ಪ್ರತಿಯೊಬ್ಬರಿಗೂ ಈ ಕಾನೂನು ಅನ್ವಯಿಸುತ್ತದೆ.
ಮೊನ್ನೆ ಶಾಲೆಯೊಂದರಲ್ಲಿ ಮನೆಗೆಲಸ ಮಾಡಿಲ್ಲ ಎಂದು ಮಗುವನ್ನು ಶಿಕ್ಷಕಿಸಿದ ಶಿಕ್ಷಕಿಗೆ ಆದ ಗತಿ ಎಲ್ಲರಿಗೂ ಗೊತ್ತೆ ಇದೆ. ಆದರೆ ಅದರ ತಾತ್ಪರ್ಯ ಇಷ್ಟೆ ನಮ್ಮ ಮಕ್ಕಳನ್ನು ಕಾಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದರ ಫಲ ನಾವೆಲ್ಲ ಪಡೆಯಬೇಕು ಎನ್ನುವುದು ಅದರ ಆಶೆಯವಾಗಿದೆ. ನಮ್ಮ ಮಕ್ಕಳಿಗಾಗಿ ನಾವು ಸಾವಿರಾರು ಎಕರೆ ಜಮೀನು ಮಾಡುವದು ಆಸ್ತಿ ಪಾಸ್ತಿ ಮಾಡುವುದು ಬೇಡ ನಾವು ನಮ್ಮ ಮಕ್ಕಳನ್ನು ಶಾಲೆಗೆಕಳುಹಿಸಿ ಕಳುಹಿಸಿದ ಮಕ್ಕಳಿಗೆ ಸರಿಯಾಗಿ ವಿದ್ಯೆಕಲಿಸಿ ಅವರನ್ನೇ ಆಸ್ತಿಯಾಗಿ ಮಾಡೋಣ.
ನಮ್ಮ ಪ್ರೀತಿಯ ಮಕ್ಕಳನ್ನು ನಾವೆಲ್ಲ ಪ್ರೀತಿಯಿಂದ ಗೆಲ್ಲೋಣ ಅವರ ಆಸೆ ಆಕಾಂಕ್ಷೆಯನ್ನು ಈಡೇರಿಸಲು ಪ್ರಯತ್ನಿಸೋಣ ಅವರತ್ತ ನಮ್ಮ ಚಿತ್ತ ಹರಿಸೋಣ ಅವರ ಬದುಕು ಹಸನಾಗಿಸಲು ನಾವೆಲ್ಲ ಶ್ರಮಿಸೋಣ ಏಕೆಂದರೆ ನಮ್ಮ ಮಕ್ಕಳೇ ಮುಂದಿನ ಭವಿಷ್ಯವಲ್ಲವೆ.
ಈ ಕಾನೂನು ನಮ್ಮ ದೇಶದ ಜಮ್ಮು ಕಾಶ್ಮೀರ ಹೊರತುಪಡೆಸಿ ಉಳಿದ ಎಲ್ಲಾ ರಾಜ್ಯಗಳ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಅನ್ವಯಿಸುತ್ತದೆ . ಈ ಕಾನೂನಿನಲ್ಲಿ ಪಾಲಕರ ಸ್ಪಷ್ಟ ಜವಾಬ್ದಾರಿಗಳನ್ನು ತಿಳಿಸಲಾಗಿದೆ . ಪ್ರತಿಯೊಬ್ಬರು ತಮ್ಮ ಕೆಲಸದ ಕರ್ತವ್ಯದ ಭಾಗವನ್ನು ಈ ಕಾನುನು ಒತ್ತಿ ಹೇಳುತ್ತದೆ.
ಈ ಕಾನೂನಿನ ಅನ್ವಯ ಖಾಸಗಿ ಶಾಲೆಗಳು ದುರ್ಬಲ ವರ್ಗದ ಮಕ್ಕಳಿಗೆ ವಿಶೇಷ ಮೀಸಲಾತಿಯನ್ನು ನೀಡಬೇಕು ಅವರಿಗಾಗಿಯೆ ಶೇಕಡಾ 25 ರಷ್ಟು ಸ್ಥಾನಗಳನ್ನು ಕೊಡಬೇಕು ಎಂದು ಸ್ಪಷ್ಟವಾದ ನಿರ್ದೇಶನ ನೀಡುತ್ತದೆ . ಇದು ಶಿಕ್ಷಣ ಶ್ರೀಮಂತರ ಸ್ವತ್ತು ಅಲ್ಲ ಮತ್ತು ಇದು ಸಮಾನತೆಯನ್ನು ಎತ್ತಿ ತೋರಿಸುತ್ತದೆ . ಸಾರ್ವಜನಿಕ ವಲಯದಲ್ಲಿ ಈ ಕಾನೂನು ಈಗ ತುಂಬಾ ಚರ್ಚೆಗೆ ಈಡಾಗುತ್ತಿದ್ದೆ.
ಮಗು ತನಗೆ ಬೇಕಾದಾಗ ಶಾಲೆಗೆ ಸೇರಿಸಿಕೊಳ್ಳುವ ಹಾಗೂ ಬೇರೆ ಶಾಲೆಗೆ ವರ್ಗಾವಣೆ ಹೊಂದುವ ಹಕ್ಕನ್ನು ಈ ಕಾನೂನು ಎತ್ತಿ ಹಿಡಿದಿದೆ ಈ ಕಾನೂನಿನ ಅನ್ವಯ ಮಕ್ಕಳಿಗೆ ಎಲಿಮೆಂಟರಿ ಶಿಕ್ಷಣ ಮುಗಿಯುವತನಕ ನಪಾಸು ಮಾಡುವಂತಿಲ್ಲ ಅವನ ಸಾಮರ್ಥ್ಯಕ್ಕೆ ತಕ್ಕಂತೆ ಬೋಧನೆಯನ್ನು ಒತ್ತಿ ಹೇಳುತ್ತದೆ . ಆಟದ ಮೂಲಕ ಚಟುವಟಿಕೆಯ ಮೂಲಕ ಕಲಿಕೆಯನ್ನು ಶುದ್ಧಗೊಳಿಸಿ ಅವನ ಬದುಕಿನ ಶಿಕ್ಷಣ ನೀಡಬೇಕು ಎಂದು ಈ ಕಾನೂನು ತಿಳಿಸುತ್ತದೆ.
ಈ ಕಾನೂನಿನ ನಿಯಮದ ಪ್ರಕಾರ ಶಾಲೆಗಳ ಶಿಕ್ಷಕರ ಮತ್ತು ಮಕ್ಕಳ ಅನುಪಾತ 25 ಮಕ್ಕಳಿಗೆ ಒಬ್ಬ ಶಿಕ್ಷಕ ಬೋದಿಸಬೇಕು , ತರಗತಿವಾರು , ವಿಷಯವಾರು ಶಿಕ್ಷಕರು , ಸೂಕ್ತ ತರಗತಿ ಕೋಣೆ ಇರಬೇಕು ಎಂದು ಹೇಳುತ್ತದೆ. ಆದರೆ ವಿಪರ್ಯಾಸವೆಂದರೆ ಸರ್ಕಾರವೆ ಇದಕ್ಕೆ ತಕ್ಕುದಾಗಿ ನಡೆಯುತ್ತಿಲ್ಲ ಅದಕ್ಕಾಗಿಯೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಬದುಕು ಸರ್ಕಾರವೆ ಕೊಲ್ಲುತ್ತಿದೆ ಎಂದು ಕೆಲವೊಮ್ಮೆ ಅನಿಸುತ್ತದೆ.
ಬುದ್ಧಿವಂತರಾದ ಶಿಕ್ಷಕರು , ಪಾಲಕರು, ಸಮುದಾಯ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಈ ಕಾನೂನನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಮಕ್ಕಳ ಭವಿಷ್ಯ ದೃಷ್ಟಿಯಿಂದ ಅವರನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವ ದೃಷ್ಟಿಯಿಂದ ಅವರ ಉತ್ತಮ ಬದುಕಿಗೆ ನಾವೆಲ್ಲ ಸಾಕ್ಷಿಯಾಗಲು ಉತ್ತಮ ಮತ್ತು ಗುಣಾತ್ಮಕ ಶಿಕ್ಷಣ ನೀಡಬೇಕಾಗಿದೆ ಈ ಕಾನೂನುನನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕಿದೆ.
ಕೆ.ಎಂ.ವಿಶ್ವನಾಥ (ಮಂಕವಿ ) ಮರತೂರ.
ಲೇಖಕರು, ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪುರಸ್ಕೃತರು.