ಹೀಗೂ ಒಂದು ಪ್ರತಿಭಟನೆ ಮಾಡಿದೆ!

ಹೀಗೂ ಒಂದು ಪ್ರತಿಭಟನೆ ಮಾಡಿದೆ!

      ಆತ್ಮೀಯರೇ, ನಿವೃತ್ತನಾದರೂ ನನ್ನ ಸರ್ಕಾರೀ ಸೇವಾಪುರಾಣ ಮುಗಿದಿಲ್ಲ. ನಾನು 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಇನ್ನೂ ಎರಡು ವರ್ಷಗಳ ಸೇವಾವಧಿ ಉಳಿದಿದ್ದಂತೆ ಸ್ವ ಇಚ್ಛಾ ನಿವೃತ್ತಿ ಪಡೆದು ಸುಮಾರು ನಾಲ್ಕು ವರ್ಷಗಳಾಗುತ್ತಾ ಬಂದಿವೆ. ಆದರೂ ಸೇವೆಗೆ ಸಂಬಂಧಿಸಿದಂತೆ ನಮ್ಮ ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಕಛೇರಿಯಲ್ಲಿ ನನ್ನ ಎರಡು ನ್ಯಾಯಯುತ ಕೋರಿಕೆಗಳಿಗೆ ಮುಕ್ತಿ ಸಿಕ್ಕಿಲ್ಲ. 

        ಒಂದು: ನನಗಿಂತ ಸೇವಾಜೇಷ್ಠತೆಯಲ್ಲಿ ಕೆಳಗಿದ್ದ 6 ನೌಕರರಿಗೆ 25-09-1992ರಿಂದ ಜಾರಿಗೆ ಬರುವಂತೆ ತಹಸೀಲ್ದಾರ್ ಹುದ್ದೆಗೆ ಪೂರ್ವಾನ್ವಯವಾಗುವಂತೆ ಬಡ್ತಿ ಸಿಕ್ಕಿ ಬಾಕಿವೇತನವನ್ನೂ ಪಾವತಿಸಿದ್ದರೆ ನನಗೆ 19-08-2002ರಿಂದ ಜಾರಿಗೆ ಬರುವಂತೆ ಬಡ್ತಿ ನೀಡಿದ್ದಾರೆ. ಇದನ್ನು ಸರಿಪಡಿಸಲು ಹಾಗೂ ನನ್ನ ವೇತನವನ್ನು ಅವರ ವೇತನಕ್ಕೆ ಸಮಾಂತರದಲ್ಲಿ ನಿಗದಿಸಲು ಕೋರಿದ ಬೇಡಿಕೆ 15 ವರ್ಷಗಳಿಗೂ ಹೆಚ್ಚು ಕಾಲದಿಂದ ಇತ್ಯರ್ಥ ಪಡಿಸಿಲ್ಲ. ಉಚ್ಛ ನ್ಯಾಯಾಲಯ, ಅಪೆಲೇಟ್ ಟ್ರಿಬ್ಯೂನಲ್ ಗಳಲ್ಲಿ ನನ್ನ ಪರವಾಗಿ ಆದೇಶಗಳಾದರೂ ಗಣನೆಗೆ ತೆಗೆದುಕೊಳ್ಳದೆ ಇರುವುದಕ್ಕೆ ಇರುವ ಕಾರಣ ನನಗಂತೂ ಇಂದಿಗೂ ಗೊತ್ತಾಗಿಲ್ಲ. ಬಹುಷಃ ಲಂಚ ಕೊಡದೆ ಇರುವುದೇ ಇರಬಹುದು. ಮಾಹಿತಿ ಹಕ್ಕು ಕಾಯದೆ ಅನ್ವಯ ಕೇಳಿದ ಮಾಹಿತಿಗಳಿಗೂ ನನಗೆ ಸಿಕ್ಕಿದ್ದು ಅಪೂರ್ಣ ಮತ್ತು ಅಸ್ಪಷ್ಟ ಉತ್ತರ.

    ಎರಡು: ಕಂದಾಯ ಇಲಾಖಾ ಪ್ರಧಾನ ಕಛೇರಿಯಿಂದಲೇ ಪ್ರಕಟವಾದ ತಹಸೀಲ್ದಾರ್-ಗ್ರೇಡ್1ರಲ್ಲಿ ನನಗೆ ನೀಡಿದ ಅರ್ಹತಾ ದಿನಾಂಕಕ್ಕೆಅನುಗುಣವಾಗಿ ನನ್ನ ವೇತನ ನಿಗದಿಸಲು ಕೋರಿದ ಬೇಡಿಕೆ ಮೂರು ವರ್ಷಗಳಿಂದಲೂ ಈಡೇರಿಲ್ಲ. ಮಹಾಲೇಖಾಪಾಲಕರು ಈ ಬಗ್ಗೆ ವಿವರ ಕೇಳಿ ಬರೆದ ಪತ್ರಕ್ಕೆ ಉತ್ತರಿಸಲು ಎರಡು ವರ್ಷಗಳಾದರೂ ಅವರಿಗೆ ಪುರುಸೊತ್ತು ಸಿಕ್ಕಿಲ್ಲ.

     ಸ್ವತಃ ಹಲವಾರು ಸಲ ಹೋಗಿ ವಿಚಾರಿಸಿಯಾಯಿತು. ಲೋಕಾಯುಕ್ತರಿಗೆ, ಮುಖ್ಯ ಕಾರ್ಯದರ್ಶಿಯವರಿಗೆ ದೂರುಗಳನ್ನು ಸಲ್ಲಿಸಿದ್ದಾಯಿತು. ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ತಿಳಿಸಿದ್ದಾಯಿತು. ಮಾಧ್ಯಮಗಳ ಗಮನಕ್ಕೆ ತರುವೆನೆಂದು ಹೇಳಿದ್ದಾಯಿತು. ಯಾವುದಕ್ಕೂ ಕುಗ್ಗದೆ, ಜಗ್ಗದೆ ಬಂಡೆಯಂತೆ ಬಕಧ್ಯಾನ ಮಾಡುತ್ತಾ ಕುಳಿತ ಅಲ್ಲಿನ ಸಿಬ್ಬಂದಿಯ ಗಟ್ಟಿತನಕ್ಕೆ ತಲೆದೂಗಲೇಬೇಕಾಯಿತು. ಬಾಹ್ಯ ಪ್ರಭಾವ ಬೀರದೆ ಸಹಜವಾಗಿ ಕೆಲಸ ಮಾಡಿಸಲು ನಡೆಸಿದ ನನ್ನ ಪ್ರಯತ್ನ ಫಲ ಕೊಡಲಿಲ್ಲ. 

     ಹೊಸ ರೀತಿಯಲ್ಲಿ ಪ್ರತಿಭಟಿಸಬೇಕೆಂಬ ನನ್ನ ಇಚ್ಛೆಗೆ ಹರಿಹರಪುರ ಶ್ರೀಧರ ಸ್ಪಂದಿಸಿದರು. ಇಬ್ಬರೂ ಕೂಡಿ "ಕಂದಾಯ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ಕಛೇರಿಯ ಕಾರ್ಯದಕ್ಷತಾ ಸುಧಾರಣಾ ಯಜ್ಞ"ದ ರೂಪು ರೇಷೆ ಸಿದ್ದಪಡಿಸಿದೆವು. ಅಗ್ನಿಗೆ ಸಮಿತ್ತುಗಳನ್ನು ಅರ್ಪಿಸುವಾಗ 'ಇದಂ ನ ಮಮ' (ಇದು ನನಗಾಗಿ ಅಲ್ಲ) ಎಂದು ಉಚ್ಛರಿಸುತ್ತೇವೆ. ಆದ್ದರಿಂದ.  ಪ್ರಾರಂಭಕ್ಕೆ ಮುನ್ನ ಪ್ರಾಸ್ತಾವಿಕವಾಗಿ ಉದಾಹರಣೆಯಾಗಿ ನನ್ನ ಮೇಲಿನ ಅನುಭವಗಳನ್ನು ಉಲ್ಲೇಖಿಸಿದರೂ, ಈ ಯಜ್ಞದ ಸಂಕಲ್ಪದಲ್ಲಿ ನನ್ನ ವೈಯಕ್ತಿಕ ಬೇಡಿಕೆಗಳನ್ನು ಸೇರಿಸದೆ, "ಕಛೇರಿಯ ಕಾರ್ಯದಕ್ಷತೆ ಹೆಚ್ಚಲಿ, ಸೇವಾಕಾಯದೆ, ಕಾನೂನುಗಳನ್ನು ಗೌರವಿಸಲಿ, ಮಾಹಿತಿ ಹಕ್ಕು ಕಾಯದೆಯ ನೈಜ ಅನುಷ್ಠಾನ ಮಾಡುವಂತಾಗಲಿ, ವಿಳಂಬರಹಿತ, ಜನಪರ, ನಿಷ್ಪಕ್ಷಪಾತ ಕೆಲಸಗಳಾಗಲಿ" ಎಂಬ ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾದ ಸಂಕಲ್ಪಗಳನ್ನು ಮಾತ್ರ ಮಾಡಿ ಒಂದು ಯಜ್ಞವನ್ನು ಸುಮಾರು 50 ಹಿತೈಷಿಗಳ ಸಮ್ಮುಖದಲ್ಲಿ ಮಾಡಿಯೇಬಿಟ್ಟೆವು. ಯಜ್ಞಕ್ಕೆ ಸುತ್ತಲಿನ ಪರಿಸರ ಶುದ್ಧತೆಗೆ ಸಹಕಾರಿಯಾಗುವ ತಾನಾಗಿ ಒಣಗಿ ಬಿದ್ದ ಔಷಧಿಯುಕ್ತ ಸಮಿತ್ತುಗಳು ಮತ್ತು ಶುದ್ಧ ತುಪ್ಪವನ್ನು ಮಾತ್ರ ಬಳಸಿದ್ದು ಇದಕ್ಕಾಗಿ ತಗುಲಿದ ವೆಚ್ಚ 50 ರೂ.ಗಳಿಗೂ ಹೆಚ್ಚಲ್ಲ. ಯಜ್ಞದ ಫಲವೋ ಎಂಬಂತೆ ದೃಷ್ಟ ಹಾಗೂ ಪತ್ರಿಕಾ ಮಾಧ್ಯಮದವರಿಗೆ ವಿಷಯ ತಿಳಿದು ಅವರುಗಳು ನಮ್ಮ ಸಂದರ್ಶನವನ್ನೂ ಮಾಡಿದರು. ನಿನ್ನೆ ಮತ್ತು ಇಂದು ದೂರದರ್ಶನದ ಹಲವಾರು ಚಾನೆಲ್ಲುಗಳಲ್ಲಿ ಯಜ್ಞದ ದೃಷ್ಯಗಳು,  ಸುದ್ದಿಗಳು ಬಿತ್ತರಗೊಂಡವು. ಟಿವಿ 9ರಲ್ಲಿ ನನ್ನ ವಿಸ್ತೃತ ಸಂದರ್ಶನವನ್ನೂ ಮಾಡಿ ಸುದ್ದಿ ಪ್ರಚುರಪಡಿಸಿದರು. ಪತ್ರಿಕೆಗಳಲ್ಳೂ ವಿಷಯ ಜಾಹೀರಾಯಿತು. ಸರ್ಕಾರಕ್ಕೂ ಈ ಯಜ್ಞದ ವಿಡಿಯೋ ಕಳುಹಿಸಿರುವೆ. ಇನ್ನಾದರೂ ಸಂಬಂಧಿಸಿದವರು ಎಚ್ಚರಗೊಳ್ಳುವರೋ, ಇಲ್ಲವೋ ಎಂಬುದನ್ನು ನೋಡಬೇಕು.

ದಕ್ಷತಾ ಸುಧಾರಣಾ ಯಜ್ಞದ ವಿಡಿಯೋ ಇಲ್ಲಿ ನೋಡಬಹುದು: http://kavimana.blogspot.in/2013/06/blog-post_545.html

 

 

Comments

Submitted by venkatb83 Fri, 06/14/2013 - 19:01

ಅನುಭವಿಗಳು - ಸರಕಾರೀ ಅಧಿಕಾರಿಗಳು -ಅಲ್ಲಿನ ವಿಧಿ ವಿಧಾನಗಳ ಬಗ್ಗೆ ಮಾಹಿತಿ ಇರುವ ನಿಮ್ಮಂತವರಿಗೆ ಹೀಗಾದರೆ ಇನ್ನು ಸಾಮಾನ್ಯ ಜನರ ಸರಕಾರೀ ಕಛೇರಿಗಳ ಬಗೆಗಿನ ಅನುಭವ ಹೇಗಿರಬಹ್ದು- ಊಹಿಸಬಹುದು ..! ಕೊನೆಗೂ ಅವರಿಗೆ ಎಚ್ಚ್ಚರವಾಗಿದೆ ಈಗ ಮುಂದೇನು? ಕಾದು ನೋಡುವ ,ಇದಕ್ಕೂ ಜಗ್ಗದಿದ್ದರೆ ನಾವ್ ಸಂಪದಿಗರೂ ನಿಮಗೆ ಸಾಥ್ ಕೊಡುವೆವು .. ವಿಭಿನ್ನ ಪ್ರತಿಭಟನೆ .. ಶುಭವಾಗಲಿ .. \। /
Submitted by nageshamysore Fri, 06/14/2013 - 20:02

ಕವಿ ನಾಗರಾಜರೆ, ನಿಮ್ಮ ಈ ವಿನೂತನ ಹಾಗು ವಿಭಿನ್ನ ಯತ್ನಕ್ಕೆ, ಯಜ್ಞ ಮಾಡಿದ ಮೇಲಾದರೂ ಫಲಸಿಗಲಿ - ನಾಗೇಶ ಮೈಸೂರು , ಸಿಂಗಪುರದಿಂದ
Submitted by partha1059 Fri, 06/14/2013 - 21:53

ಈ ವಿಷಯಕ್ಕೆ ಸೇರಿದಂತೆ ಯೂ-ಟ್ಯೂಬ್ ನಲ್ಲಿ ಲಿಂಕ್ ಕಳೆದವಾರವೆ ನೋಡಿದ್ದೆ ಹಾಗು ಅದನ್ನು ಪತ್ರಿಕೆಗಳಲ್ಲಿ ಪ್ರಚುರಪಡಿಸುವಂತೆ ಶ್ರೀದರರಲ್ಲಿ ಕೇಳಿದ್ದೆ , ಜನ ಕ್ರಿಕೇಟ್ ನಲ್ಲಿ ಭಾರತ ಗೆಲ್ಲಲ್ಲಿ ಎಂದೆಲ್ಲ ಹೋಮ ಮಾಡಿರುವುದು ನೋಡಿರುವೆವು ಆದರೆ ಇಂತ ಉದ್ದೇಶಕ್ಕಾಗಿ ಮಾಡಿರುವುದು ನೋಡುತ್ತಿರುವುದು ಇದೆ ಪ್ರಥಮ. ನಿಮ್ಮ ಹೋಮದ ಉದ್ದೇಶ ಖಂಡಿತ ನೆರವೇರಲಿ ಎಂದು ಆಶಿಸುತ್ತೇನೆ
Submitted by kavinagaraj Fri, 06/14/2013 - 23:37

In reply to by partha1059

ಧನ್ಯವಾದ ಪಾರ್ಥರೆ.ನೀವು ಹೇಳಿದ ಕಾರಣಕ್ಕಾಗಿಯೇ ಇದನ್ನು ವಿನೂತನ ಪರ್ತಿಭಟನೆಯೆಂದು ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಬಂದಿದೆ.
Submitted by ksraghavendranavada Sat, 06/15/2013 - 18:05

ಹಿರಿಯರೇ.. ನಿಮ್ಮ ಈ ಉತ್ತಮ ಸಾತ್ವಿಕ ಪ್ರತಿಭಟನೆಯೊ೦ದು ಹಕ್ಕುಗಳಿಗೆ ಹೋರಾಡುವ ಉಳಿದವರೆಲ್ಲರಿಗೂ ಮಾದರಿಯಾಗಲಿ.. ಈ ಪ್ರತಿಭಟನಾ ಮಾದರಿ ಇನ್ನಷ್ಟು ಹೆಚ್ಚಿ ಅದರಿ೦ದ ಉತ್ತಮ ಪ್ರತಿಫಲವೂ ದೊರಕಲೆ೦ಬುದು ಈ ಕಿರಿಯನ ಹಾರೈಕೆ.. ನಿಮ್ಮ ಹೋರಾಟದಲ್ಲಿ ಜಯ ಸಿಗಲೆ೦ದು ಶ್ರೀಮಾತೆಯವರಲ್ಲಿ ನಾನು ನಿಮಗಾಗಿ ಪ್ರಾರ್ಠಿಸುತ್ತೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
Submitted by kavinagaraj Sun, 06/16/2013 - 08:40

In reply to by ksraghavendranavada

ಧನ್ಯವಾದಗಳು ರಾಘವೇಂದ್ರ ನಾವಡರೇ. ನಾನೇ ನಿರೀಕ್ಷಿಸಿರದಷ್ಟು ಪ್ರೋತ್ಸಾಹ, ಬೆಂಬಲ ಸಿಗುತ್ತಿದೆ. ನೋಡೋಣ, ಈಗಲಾದರೂ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಛೇರಿಗೆ ಎಚ್ಚರವಾದೀತೇನೋ!
Submitted by H A Patil Sat, 06/22/2013 - 20:24

ಕವಿ ನಾಗರಾಜ ರವರಿಗೆ ವಂದನೆಗಳು ' ಹೀಗೂ ಒಂದು ಪ್ರತಿಭಟನೆ ಮಾಡಿದೆ ' ಬರಹ ಓದಿದೆ, ಒಬ್ಬ ನಿವೃತ್ತ ತಾಲೂಕು ದಂಡಾಧಿಕಾರಿಗಳನ್ನೆ ವ್ಯವಸ್ಥೆ ನಡೆಸಿಕೊಂಡ ರೀತಿ ವಿಷಾದ ವನ್ನುಂಟು ಮಾಡಿತು. ನಮ್ಮ ಎಲ್ಲ ವ್ಯವಸ್ಥೆಗಳು ಸೂಕ್ಷ್ಮತೆಯನ್ನು ಕಳೆದುಕೊಂಡು ದಶಕಗಳೇ ಸಂದಿವೆ, ಈಗ ಏನಿದ್ದರೂ ಹಣ ಪ್ರಭಾವ ಅಧಿಕಾರಸ್ಥರ ಮರ್ಜಿ ಮೇಲೆ ಎಲ್ಲ ನಿಂತಿದೆ, ಆದರೂ ಹೋರಾಟದ ನಿಮ್ಮ ಕೆಚ್ಚು ಮೆಚ್ಚುವಂತಹುದು, ನಿಮ್ಮ ನ್ಯಾಯುತು ಬೇಡಿಕೆ ಅಧಿಕಾರಿಶಾಹಿಯ ದಪ್ಪ ಚರ್ಮಕ್ಕೆ ನಾಟಲಿ ನಿಮ್ಮ ಸಮಸ್ಯ ಬಗೆಹರಿಯಲಿ ಎನ್ನುವುದು ನನ್ನ ಆಶಯ, ಮೂರು ವಾರಗಳ ಲಾಗಾಯ್ತಿನಿಂದ ನಾನು ಸಂಪದಕ್ಕೆ ಕಾರಣಾಂತರದಿಂದ ಬರಲಾಗಿರಲಿಲ್ಲ, ಈ ದಿನ ನೋಡಿದೆ. ನಾನೂ ಸಹ ಈ ತೊಂದರೆ ಅನುಭವಿಸಿ ನ್ಯಾಯಯುತ ಬೇಡಿಕೆಗಳನ್ನು ಪಡೆಯಲಾರದೆ ಮರೆತು ಬಿಟ್ಟಿದ್ದೇನೆ, ನನಗಿಂತ ಎರಡು ವರ್ಷ ಜ್ಯೂನಿಯರ್ ಗಳಿಗೆ ನನ್ನ ಮೂಲವೇತನಕ್ಕಿಂತ ಎರೆಡು ಇನ್‍ಕ್ರೀಮೆಂಟ್‍ ನೀಡಿದ ಇಲಾಖೆ ಎಂಟು ವರ್ಷಗಳ ನನ್ನ ಕೋರಿಕೆಯನ್ನು ಮನ್ನಿಸಲಿಲ್ಲ, ನನ್ನ ನಿವೃತ್ತಿಯ ನಂತರ ಒಂದು ವಾರದಲ್ಲೆ ಇನ್ನುಳಿದವರಿಗೆ ಆ ನೂನ್ಯತೆ ಸರಿಪಡಿಸಿದರು ನಿವೃತ್ತನಾದ ನನಗೆ ನ್ಯಾಯ ದೊರೆಯಲಿಲ್ಲ. ನಿವೃತ್ತಿಯ ಒಂದು ವರ್ಷ ಮೊದಲು ನನಗೆ ಒಂದು ಮುಂಭಡ್ತಿ ದೊರೆಯ ಬೇಕಿತ್ತು, ವಾರ್ಷಿಕ ತಪಾಸಣೆಯ ದಿನ್ನ ನನ್ನ ಮೇಲಾಧಿಕಾರಿ ಜಿಲ್ಲಾ ಮಟ್ಟದ ಅಧಿಕಾರಿಗೆ ಕೇಳಿದರೆ ಬಂದ ಉತ್ತರ ಪ್ರೊಮೋಶನ್‍ ಕೊಡಲೆ ಬೇಕೆಂಬ ನಿಯಮವೆಲ್ಲಿದೆ ಎಂದರು, ನನ್ನ ನಿವೃತ್ತಿಯ ದಿನವೆ ನನಗಿಂತ ಜ್ಯನಿಯರ್‍ಗಳಿಗೆ ನಾಲ್ಕು ಜನರಿಗೆ ಅದೇ ಅಧಿಕಾರಿ ಮುಂಭಡ್ತಿ ನೀಡಿ ಆಜ್ಞೆ ಹೊರಡಿಸಿದ್ದರು. ಈ ಧೋರಣೆ ಯಾಕೆ ಎಂಬುದು ನನಗೆ ಇಂದಿಗೂ ಅರ್ಥವಾಗಿಲ್ಲ. ನಿಮ್ಮ ಹೋರಾಟ ನನ್ನ ಗತ ವೃತ್ತಿ ಜೀವನದ ನೆನಪುಗಳು ಬಿಚ್ಚಿಟ್ಟಿತು, ನಿಮ್ಮ ಹೋರಾಟಕ್ಕೆ ಯಶ ಸಿಗಲಿ ಎಂದು ಹಾರೈಸುವೆ, ಧನ್ಯವಾದಗಳು.
Submitted by kavinagaraj Tue, 06/25/2013 - 14:02

In reply to by H A Patil

ಪಾಟೀಲರೇ, ನಿಮ್ಮ ಕಳಕಳಿಗೆ ಧನ್ಯವಾದಗಳು. ನಾನು ನನ್ನ ಹೋರಾಟವನ್ನು ನಿಲ್ಲಿಸಿರಲಿಲ್ಲ. ದಪ್ಪ ಚರ್ಮದವರಿಗೆ ನೇರ ಹೋರಾಟ ನಾಟದೆಂದು ಮನವರಿಕೆಯಾದಾಗ ಅದನ್ನು ಈಗ ಸಾರ್ವಜನಿಕರಿಗೆ ಬಹಿರಂಗಗೊಳಿಸಿದೆ, ಅಷ್ಟೆ. ಈಗ ಕಡತದ ಧೂಳು ಕೊಡವುತ್ತಿದ್ದಾರೆ.
Submitted by ಗಣೇಶ Mon, 06/24/2013 - 00:21

ಕವಿನಾಗರಾಜರೆ, ಹೋಮದ "ಬಿಸಿ" ಇಲಾಖೆಗೆ ತಟ್ಟಿತಾ? ತಮ್ಮ ಬೇಡಿಕೆಗಳು ಈಡೇರಲಿ ಎಂದು ಹಾರೈಸುವ-ಗಣೇಶ. -ನಮ್ಮಲ್ಲೂ "ಪೆನ್ಷನ್ ಸಾಂಕ್ಷನ್ ಹೋಮ", " ಪೆನ್ಷನ್ ತಡೆ ನಿವಾರಣ ಹೋಮ"...ಹೀಗೇ ಹಲವು ಹೋಮ ಮಾಡುತ್ತೇವೆ. ಅಲ್ಲದೇ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ...ಬೇರೆ ಬೇರೆ ಇಲಾಖೆಗಳಿಗೆ ಹೊಂದುವಂತೆ ಸಪರೇಟ್ ಹೋಮ ಮಾಡುವೆವು. ನಿಮ್ಮ ಇಲಾಖೆ ಹಾಗೂ ದಾನ ಧರ್ಮ ಮಾಡುವ ತಮ್ಮ ಶಕ್ತಿಯನುಸಾರ ರೂ ೧೦,೦೦೦ದಿಂದ ಒಂದು ಒಂದೂವರೆ ಲಕ್ಷದವರೆಗೆ ಖರ್ಚು ಬೀಳಬಹುದು. ಅಗತ್ಯವಿದ್ದವರು ತಮ್ಮ ನಕ್ಷತ್ರ, ರಾಶಿ, ಕೆಲಸ ಮಾಡುತ್ತಿದ್ದ ಇಲಾಖೆ, ಮೂರು ವರ್ಷದ ಬ್ಯಾಂಕ್ ಬ್ಯಾಲೆನ್ಸ್ ವಿವರದೊಂದಿಗೆ ನಮ್ಮನ್ನು ಮುಖತಃ ಭೇಟಿಯಾಗಬಹುದು.:) -ಅಂ.ಭಂ.ಸ್ವಾಮಿ.
Submitted by kavinagaraj Tue, 06/25/2013 - 14:04

In reply to by ಗಣೇಶ

ಅರಣ್ಯ ಇಲಾಖೆಯ ಅಧಿಕಾರಿ ಒಬ್ಬರು ಇದೇ ರೀತಿ ಹೋಮ ಮಾಡಿಸಬೇಕೆಂದು ನನ್ನ ಬಳಿ ಬಂದಿದ್ದರು. ನಿಮ್ಮ ಬಳಿಗೆ ಕಳಿಸಿರುವೆ. :)