ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ!

ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ!

ದುರಭಿಮಾನದ ದುರ್ಯೋಧನ ಗೊತ್ತಾ, ಈ ಡುರಿಯಣ್ಣನ ಸುಗಂಧದುರಿತ!

ನೀವು ಛಲದಂಕ ಮಲ್ಲರೆ ಆಗಿದ್ದರೆ ನಿಮಗೊಂದು ಪಂಥ - ಜೀವನದಲಿ ಒಮ್ಮೆಯಾದರೂ ಒಂದೆ ಒಂದು ಡುರಿಯನ್ ಹಣ್ಣು ತಿಂದು ಜಯಿಸಿಬಿಟ್ಟರೆ ನೀವೆ ಗೆದ್ದಂತೆ! ಹಾಗೆಂದು ಇದೇನು ಮಹಾ ಎಂದು ಹಗುರವಾಗೆಣಿಸಬೇಡಿ - ಅದೇಕೆಂದು ತಿಳಿಯಲಿದ್ದರೆ ಬನ್ನಿ ನೀವೆ ಓದಿ ನೋಡಿ ಈ ಮುಳ್ಳುಹಂದಿ ಮೈಯಿನವನ ವೈಯಾರ!

ಡುರಿಯನ್ ಅಂದ ತಕ್ಷಣ ಈ ಭಾಗದಲ್ಲಿ ಎರಡು ತರದ ಪ್ರತಿಕ್ರಿಯೆಯನ್ನು ಕಾಣಬಹುದು - ಒಂದು, ಹೆಸರು ಕೇಳುತ್ತಿದ್ದಂತೆ ಬಿಟ್ಟ ಬಾಯಿ ಬಿಟ್ಟಹಾಗೆ ಬಾಯಿ, ಮೂಗರಳಿಸಿ ಕಣ್ಣು ದೊಡ್ಡದು ಮಾಡಿ ನಾಲಿಗೆ ಚಪ್ಪರಿಸುವ ಮಂದಿ; ನಿಸ್ಸಂದೇಹವಾಗಿ ಅವರು ಆಗ್ನೇಯೇಷಿಯಾದ ಅಥವಾ ಪೂರ್ವ ಏಷಿಯಾದ ವಿನಮ್ರ ಪ್ರಜೆಗಳೆನುವುದರಲ್ಲಿ ಸಂದೇಹವೆ ಇಲ್ಲ. ಇನ್ನು ಎರಡನೆಯ ಗುಂಪಿಗೆ ಮಿಕ್ಕವರನ್ನೆಲ್ಲ ಸೇರಿಸಿಬಿಡಬಹುದು - ಹೆಸರು ಕೇಳುತ್ತಿದ್ದಂತೆ ತಟ್ಟನೆ ಮುಖಭಾವದಲ್ಲಿ ಓಂದು ವಿಧದ ಆಘಾತ , ದಿಗ್ಬ್ರಮೆ, ಉದ್ಗಾರ, 'ಅಯ್ಯೊ! ದೇವರೆ' ಎಂಬ ಭಾವನೆ ಸಾರುವ ಮುಖದ ಜತೆಗೆ ಬರಿ ಹೆಸರಿಗೇ, ಸುಮಾರು ಹತ್ತಡಿ ದೂರ ನೆಗೆಯುವ ಗುಂಪು! ಅಂದ ಹಾಗೆ ಈ ಭಾಗಕ್ಕೆ ಬಂದು ನೆಲೆಸಿರುವ ನಮ್ಮ ಭಾರತೀಯ ಬಂಧುಗಳಲ್ಲಿ ಕೇಳಿ ನೋಡಿ -' ಈ ಹಣ್ಣೇನಾದರೂ ತಿಂದಿದ್ದಾರೆಯೆ' ಎಂದು. ನೂರಕ್ಕೆ ತೊಂಬತ್ತೊಂಭತ್ತು ಭಾಗ ಸಿಗುವ ಪ್ರತಿಕ್ರಿಯೆ - ಕಿವುಚಿದ ಮುಖ ಮತ್ತು ಉತ್ತರ -  'ಊಉಹೂಉಹೂಊಉ...ಇಲ್ಲಪ್ಪಾ! ವ್ಯಾ...' ಎಂದೆ ಆಗಿರುತ್ತದೆ! ನೀವು ಕೇಳಿದ ವ್ಯಕ್ತಿ ಆ ಉಳಿದ ಒಂದು ಶೇಕಡಾ ಗುಂಪಿಗೆ ಸೇರಿದ್ದರೆ - ನೀವವರಿಗೆ ಧಾರಾಳವಾಗಿ 'ಛಲದಂಕಮಲ್ಲನ' ಪಟ್ಟ ಕಟ್ಟಬಹುದು!

ವಾಸನೆಯ ಜಂಜಾಟದಿಂದಾಗಿ ಪ್ರೀತಿಯಿಂದಲೆ ಬೈಸಿಕೊಳ್ಳುವ, 'ಹಣ್ಣುಗಳ ರಾಜನೆಂದೆ' ಪ್ರೀತಿಪಾತ್ರರ ಕೈಯಲ್ಲಿ ಕರೆಸಿಕೊಳ್ಳುವ ಈ ಹಣ್ಣಿನ ಸೀಸನ್ ಬಂತೆಂದರೆ ಸುಪರು ಮಾರ್ಕೆಟ್ಟಿನಲೆಲ್ಲ ಹಳದಿ ತಿರುಳಿನ ಹಸಿರು ಮೈ ಮುಳ್ಳಂದಿಯ ದರ್ಶನ ಶತಃಸಿದ್ದ! (ಅಂದಹಾಗೆ ಈ ಹಣ್ಣಿನ ರಾಜನಿಗೆ, 'ಭಾನುಮತಿ' ರಾಣಿ ಯಾರಾದರೂ ಇರಬೇಕೆಂಬ ಕುತೂಹಲವಿರಬೇಕಲ್ಲವೆ? ಇದ್ದಾಳೆ, ಇದ್ದಾಳೆ - ಮ್ಯಾಂಗೊಸ್ಟೀನ್ (ಮಂಗುಸ್ಟಿನು) ಹಣ್ಣನ್ನು ಇಲ್ಲಿನವರು ಹಣ್ಣುಗಳ ರಾಣಿ ಎನ್ನುತ್ತಾರೆ. ಆದರೆ ಸೈಜಿನ ಲೆಕ್ಕದಲ್ಲಿ ನೋಡಿದರೆ ಡುರಿಯನ್ನು ನಮ್ಮ ಹಲಸಿನ ಹಣ್ಣಿನ ಹಾಗೆ (ಅದಕ್ಕಿಂತ ಸ್ವಲ್ಪ ಚಿಕ್ಕದೆ ಅನ್ನಿ) ಅಂದುಕೊಂಡರೆ, ಈ ಮ್ಯಾಂಗೋಸ್ಟೀನು ಒಂದು ಮಾಮೂಲಿ ನಿಂಬೆಹಣ್ಣಿನ ಗಾತ್ರಕ್ಕಿಂತ ತುಸು ದೊಡ್ಡದಿರಬಹುದು - ಲಾರೆಲ್ ಮತ್ತು ಹಾರ್ಡಿಯ ಹಾಗೆ! (ಈ ಗಜರಾಜ ಹಾಗೂ ಸಪೂರ ತೆಳು ಸುಂದರಿ ಅದೇಗೆ ಡ್ಯುಯೆಟ್ ಹಾಡಲು, ಸಂಸಾರ ಮಾಡಲು ಸಾಧ್ಯ ಅಂತ ನೀವಂದುಕೊಂಡರೆ ಅಚ್ಚರಿಯೇನೂ ಇಲ್ಲ. ರಾಜಾರಾಣಿಯರ ಮದುವೆಗೆ ಸೈಜು, ಲವ್ವಷ್ಟೆ ಅಲ್ಲದ ಎಷ್ಟೊಂದು ಬೇರೆ ರಾಜಕಾರಣಗಳು ಇರಬಹುದಾದ ಕಾರಣ, ಇವರಿಬ್ಬರನ್ನು ಇಲ್ಲಿನ ರಾಜಾರಾಣಿ ಅಂತ ಒಪ್ಪಿಕೊಂಡು ಮುಂದುವರೆಯುವುದು ಕ್ಷೇಮವಲ್ಲವೆ?)

ಇನ್ನು 'ಡ್ರಾಗನ್ ಪ್ರೂಟಿಣಿಯ' ಹಾಗೆ ಸೊಗಸಾದ 'ಬಾಟಿಕ್' ಸೂಟು ಹಾಕಿರದಿದ್ದರೂ, ಈ ಡುರಿಯಣ್ಣನೇನು ಕಮ್ಮಿಯವನೆಂದುಕೊಳ್ಳಬೇಡಿ. ಅಪ್ಪಟ ಮುಳ್ಳು ಹಂದಿಯ ಚರ್ಮ ಸುಲಿದು ಸೂಟು ಮಾಡಿಸಿ ಹೊದ್ದುಕೊಂಡ ಹಾಗೆ, ಒಳಗಿನ ತಿರುಳನೆಲ್ಲ ದಪ್ಪನೆಯ ಭದ್ರ ಕವಚದಡಿ ಜೋಪಾನ ಮಾಡಿಕೊಂಡಿರುವ ವೀರಾಗ್ರಣಿ - ಬಿಲ್ಕುಲ್ ನಮ್ಮ ಹಲಸಿನ ಹಣ್ಣಿನ ಹಾಗೆ. ಆದರೆ ನಮ್ಮ ಹಲಸಣ್ಣ ಆಕಾರದಲ್ಲಿ ಡುರಿಯಣ್ಣನಿಗಿಂತ ಡುಮ್ಮಣ್ಣ. ಇಲ್ಲಿ ನಾನು ನೋಡಿದ ಡುರಿಯಣ್ಣಗಳೆಲ್ಲ ನಮ್ಮ ಮರಿ ಹಲಸಣ್ಣಗಳಂತೆಯೆ ಕಂಡವು - ಇನ್ನು ದೊಡ್ಡ ವೆರೈಟಿ ಇರಬಹುದೋ ಏನೊ, ನನಗಂತೂ  ಕಾಣಲಿಲ್ಲ (ಇನ್ನು ತಿನ್ನುವ ಧೈರ್ಯ ಮಾಡಿಲ್ಲವಾಗಿ ಹೆಚ್ಚಿನ 'ಸ್ವಯಂಶೋಧನೆ' ಸಾಧ್ಯವಾಗಿಲ್ಲ). ಆದರೆ ಸೂಟು ಬಿಚ್ಚುವ ವಿಚಾರಕ್ಕೆ ಬಂದರೆ ಮಾತ್ರ ಹಲಸಣ್ಣನಿಗೆ ಹೋಲಿಸಿದರೆ ಇದು ಸರಿಯಮ್ಮನೆ! ಹಿಂದೆ ಮನೆಯಲ್ಲಿ ಹಲಸಿನಣ್ಣು ಕೊಯ್ದು ಬಿಚ್ಚುತ್ತಿದ್ದರೆ ಒಂದು 'ಹಲಸೇಶ್ವರ ವೈಭವವೆ' ನಡೆದು ಹೋಗುತ್ತಿತ್ತು - ಕೈಗೆ ಚಾಕುವಿಗೆಲ್ಲಾ ಎಣ್ಣೆ ಹಚ್ಚಿ (ಮತ್ತಷ್ಟು ಮಧ್ಯೆ ಮಧ್ಯೆ ಹಚ್ಚಲು ಪಕ್ಕದಲ್ಲೆ ಎಣ್ಣೆ ಬಟ್ಟಲು ರೆಡಿಯಿಟ್ಟುಕೊಂಡು), ತಳಾರವಾದ ಸರಿ ಜಾಗವೊಂದರಲ್ಲಿ ಕೂತು, ಕತ್ತಿಯಿಡಿದು ಹೊರಟ ವೀರಾಗ್ರಣಿ ಸಮರದಲ್ಲಿ ಸಿಕ್ಕಿದ ಅರಿಗಳನ್ನೆಲ್ಲ ತರಿದು ಕೊಚ್ಚಿ ಅವರ ಮೈ ಮೇಲಿನ ಬೆಲೆಬಾಳುವ ವಸ್ತುಗಳನ್ನು ಹೆಕ್ಕುತ್ತಿದ್ದ ಹಾಗೆ, ಒಂದೊಂದೆ ತೊಳೆ ಕಿತ್ತು ತೆಗೆದು ನಾರು ಬಿಚ್ಚಿ ತಟ್ಟೆಗಿಡುತ್ತಿದ್ದರು ತಾತಾ, ಸುತ್ತಲೂ ಅವಾಕ್ಕಾಗಿ ಬಾಯ್ಬಿಟ್ಟುಕೊಂಡು ನೋಡುತ್ತಿದ್ದ ನಮ್ಮ ಬಾಯಿಗೂ ಒಂದೊಂದು ತುಂಡನ್ನು ನಡುನಡುವೆ ನೂಕುತ್ತ. ಆದರೆ ಡುರಿಯಣ್ಣನ ಕವಚ ಛೇಧನಕ್ಕೆ  ಇಷ್ಟೆಲ್ಲ ಪಾಡುಪಡುವ ಹಂಗಿಲ್ಲ - ಕೈಗೊಂದು ತೆಳು ಪ್ಲಾಸ್ಟಿಕ್ಕಿನ ಚೀಲ ಧರಿಸಿದ ಸೂಪರಮಾರ್ಕೆಟ್ಟಿಗ 'ಏಕ್ ಮಾರ ದೋ ತುಕುಡಾ' ಅನ್ನುವ ಹಾಗೆ ಗಳಿಗೆಗೊಂದರಂತೆ ಬಲಿಹಾಕಿ ಒಳಗಿನ ಹಣ್ಣು ಬಿಚ್ಚಿ ಜೋಡಿಸುವುದನ್ನು ಕಂಡರೆ - ಇಲ್ಲಿ 'ದುಶ್ಯಾಸನ-ಕೌಶಲರಿಗೆ' ಕೆಲಸ ಸಿಗುವ ಛಾನ್ಸು ಕಮ್ಮಿಯೆಂದು ಧಾರಾಳವಾಗಿ ಹೇಳಬಹುದು!

ಹಲಸಿಗೆ ಹೋಲಿಕೆಯಲ್ಲಿ ಜಿಡ್ಡಿಲ್ಲದೆ ಸುಲಭದಲಿ ಬಿಚ್ಚುವ ಚಲ್ಲಣ ಸುತ್ತಿಕೊಂಡಿದ್ದರೂ , ವಾಸನೆಯ ವಿಷಯಕ್ಕೆ ಬಂದರೆ ಮಾತ್ರ ನಮ್ಮ ಹಲಸಣ್ಣನೆ ಸೂಪರ್; ಗಮ್ಮೆನುವ ವಾಸನೆಯೊಡನೆ , ಬಣ್ಣದ ಸಂಪಿಗೆಯ ಹಾಗೆ ನೋಡಲು, ತಿನ್ನಲು ಸೊಗದ ವಾಸನಯುಕ್ತ ಸುಂದರಿಯ ತರ - ಎಲ್ಲಕ್ಕು ಸೈಯೆನಿಸುವ ಹಾಗಿದ್ದರೆ, ಈ ಡುರಿಯಣ್ಣ ಮಾತ್ರ ವಾಸನೆಯಿಂದಲೆ ಮೈಲಿ ದೂರಕಟ್ಟಿಬಿಡುವ ಪುಢಾರಿ. (ಆಳು ನೋಡಿದರೆ ಆಕಾರ, ಬಾಳು ನೋಡಿದರೆ ಭಂಡ ಬಾಳು ಅನ್ನುವಾ ಹಾಗೆ) ಒಳಗಿನ ತೆಳು ಹಳದಿಯ ತಿರುಳು ನಾರುಗಳ ಗೊಡವೆಯಿಲ್ಲದೆ (ಹಲಸಣ್ಣನಿಗಿಂತ) ದೊಡ್ಡದಾಗಿ, ತೊಟ್ಟಿಲಲಿ ಸುಖವಾಗಿ ಮಲಗಿದ ಮಗುವಿನ ಹಾಗಿರುವ ಮುದ್ದು ಕಂದನ ಹತ್ತಿರ ಹೋಗಬೇಕೆಂದರೆ ಮಾತ್ರ 'ನಾಸಿಕ ಬಂಧಾಸನ' ಮಾಡದೆ ವಿಧಿಯಿಲ್ಲ (ಹಣ್ಣಿನ ಒಳಮನೆ ಎಷ್ಟು ಸೊಗಸಾಗಿದೆಯೆಂದರೆ - ನಾವು ಬೆಲೆಬಾಳುವ ಒಡವೆಗಳನ್ನು ಹಾಕಿಡುವ ಜ್ಯುಯೆಲ್ ಬಾಕ್ಸನ್ನು ನೆನಪಿಸುತ್ತದೆ - ಕವಚದಲ್ಲಿ ಅದನ್ನೂ ಮಾಡಿ ಮಾರುತ್ತಾರೊ, ಏನೊ ಗೊತ್ತಿಲ್ಲ!). ಇದು ಎಂಥಾ ಘಾಟು ವಾಸನೆಯೆಂದರೆ ಹಣ್ಣಿನ ಕವಚ  ಬಿಚ್ಚದಿದ್ದರೂ ಎಲ್ಲೆಡೆ ಕಮಟಾಗಿ ಹರಡುವ ತಾಕತ್ತಿನ ಗಣಿ. ಹೀಗಾಗಿ, ನೀವೇನಾದರೂ ಸರಿಯಾದ 'ಡೈಯಪರ್' ಹಾಕಿ ಮಗುವನ್ನು ವಾಸನಾ-ಬಂಧವಾಗಿಸುವಂತೆ , ಇದಕ್ಕು ಚೀಲಕ್ಕೆ ಕಟ್ಟಿ ಹಾಕಿ ಬುದ್ಧಿ ಕಲಿಸುವೆನೆಂದರೆ ಅದು ಸಾಧ್ಯವಾಗದ ಮಾತು. ಇದರಿಂದಲೊ ಏನೊ, ಆಗ್ನೇಯೇಷಿಯಾದ ಸುಮಾರು ದೇಶಗಳಲ್ಲಿ ಡುರಿಯಣ್ಣನನ್ನು ಹೊತ್ತುಕೊಂಡು ಸಾರ್ವಜನಿಕ ಬಸ್ಸು, ಟ್ರೈನುಗಳಲ್ಲಿ ಓಡಾಡುವಂತಿಲ್ಲ - ಅಷ್ಟರ ಮಟ್ಟಿಗೆ ಸರ್ಕಾರಗಳನ್ನೆ ಹದ್ದು ಬಸ್ತಿನಲ್ಲಿಟ್ಟಿದ್ದಾನೆ, ಈ ಡುರಿಯಣ್ಣ! ಇನ್ನು ಸಿಂಗಪುರದಲ್ಲಂತೂ ಮಾತಾಡುವ ಹಾಗೆ ಇಲ್ಲ - 'ಫೈನ್ ಸಿಟಿ'ಯಲ್ಲಿ 'ಫೈನು' ಹಾಕುವ ಮೂಲಗಳಿಗೆ ಕೊರತೆಯೆ? ಅದರಲ್ಲಿ ಇದೂ ಆ ಫೈನಿನ ಮೂಲ ಲಿಸ್ಟಿನಲಿ ಸೇರಿದ್ದೆ...ಏನೊ ತಿನ್ನೊ ಅವಸರದಲ್ಲಿ ಟ್ರೈನಿಗೊ ಬಸ್ಸಿಗೊ ಜತೆಯಲ್ಲೆ ತಂದುಬಿಟ್ಟೀರಿ ಹುಷಾರು-ಫೈನು ಕಟ್ಟಬೇಕಾದೀತು! (ಹಿಂದೊಮ್ಮೆ ಟ್ರೈನಿನಲ್ಲೊ, ಬಸ್ಸಿನಲ್ಲೊ 500 ಡಾಲರ್ ಫೈನು ಎಂದು ಗೋಡೆಯ ಬರಹ ನೋಡಿದ್ದಂತೆ ನೆನಪು - ಈಗ ಇನ್ನು ಜಾರಿಯಿದೆಯಾ, ಬದಲಾಗಿದೆಯ ಗೊತ್ತಿಲ್ಲ - ಆದರೆ ಬಸ್ಸು ಟ್ರೈನುಗಳಲ್ಲಂತೂ ಒಯ್ಯಲು ಖಂಡಿತ ಬಿಡುವುದಿಲ್ಲ!).

ಗೊಮ್ಮಟನ ಹಾಗೆ ತೊಟ್ಟ ಕವಚ ಬಿಚ್ಚಿದರೆ ಉದ್ದನೆಯ ತೆಳು ಹಳದಿ ಹಣ್ಣಿನ (ಅಪರೂಪದ ಕೆಂಪಿನದೂ ಉಂಟು) ಅನಾವರಣವಾಗುವ ಈ ಹಣ್ಣು ತಕ್ಕದ್ದೊ ಅಲ್ಲವೊ ಎಂದು ಗುರುತಿಸಲೆ ಹಲವಾರು ರೀತಿಗಳಿವೆಯಂತೆ - ಒಟ್ಟಾರೆ ರೇಷ್ಮೆಯಂತೆ ನುಣುಪಾದ ನವಿರಾದ ಆದರೆ ಬಿರುಸು ಬಾಡಿಲ್ಲದ ಮೈಯಿರಬೇಕಂತೆ; 'ಸುವಾಸನಾ' ಶ್ರೀಮಂತಿಕೆಯ ಬಗ್ಗೆ ಈಗಾಗಲೆ ಓದಿದಿರಿ; ಚಿಕ್ಕದಾದ ಬೀಜವಿದ್ದರೆ ಹೆಚ್ಚು ಹಣ್ಣು; ಮತ್ತು ಪ್ರಮುಖವಾಗಿ ಸರಿಯಾದ ಹದದಲ್ಲಿ ಬೆರೆತ 'ಸಿಹಿ-ಕಹಿ' ಮಿಶ್ರಿತವಾದ ರುಚಿ! ಇದೆಲ್ಲವನ್ನು ಹಣ್ಣನ್ನು ಬಿಚ್ಚುವ ಮೊದಲೆ ಪತ್ತೆ ಮಾಡಲು ಅನುಭವಿಗಳು ಹಣ್ಣನ್ನು ಅಲ್ಲಾಡಿಸಿ, ಮೂಸಿ, ಎತ್ತಿ, ಇಳಿಸಿ ಏನೆಲ್ಲಾ ಸರ್ಕಸ್ಸು ಮಾಡಿಸುವರಂತೆ! ಸಾಲದಕ್ಕೆ ಕೊಂಚ ಭೌಗೋಳಿಕ ಜ್ಞಾನವೂ ಇರಬೇಕಂತೆ - ಯಾವ ದೇಶದ / ಬ್ರಾಂಡು / ಹೆಸರಿನ ಡ್ಯುರಿಯಣ್ಣನ ಬಂಡವಾಳ ಎಷ್ಟೆಷ್ಟು ಅಂತ ಹೇಳಲು. ಆ ಜಾತಕದ ವಿವರ ಹಾಗೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಲೇಖನದ ಕೊನೆಯಲ್ಲಿರುವ ಕೊಂಡಿಗಳನ್ನು ಗಿಂಡಿ ನೋಡಿ!

ರುಚಿಯೆ ಸರ್ವಸ್ವವಾಗಿರುವಂತೆ ಕಾಣುವ ಈ ಹಣ್ಣಿನ ಕುರಿತೆ ಒಂದೆ ವಾಕ್ಯದಲ್ಲಿ ಹೇಳುವುದಾದರೆ - "ರುಚಿಗೆ ರಾಜಾ, ವಾಸನೆಯೆ ಗಾರ್ಬೇಜಾ!" ಎಂದೆ ಬಣ್ಣಿಸಬಹುದೆಂದು ಕಾಣುತ್ತದೆ. ಸಿಕ್ಕಾಪಟ್ಟೆ ಸಕ್ಕರೆಯ ಅಂಶ, ವಿಟಮಿನ್ 'ಸಿ', ಪೊಟಾಸಿಯಂ, ಕಾರ್ಬೊಹೈಡ್ರೇಟುಗಳು, ಪ್ರೋಟೀನುಗಳು ಮತ್ತು ಕೊಬ್ಬಿನಿಂದ ಸಮೃದ್ದವಾದ ಈ ಹಣ್ಣಿಗನನ್ನು ಆ ಕಾರಣಕ್ಕೊ ಏನೊ -  ತಿನ್ನಲು ಸಲಹೆ ಮಾಡುವಷ್ಟೆ, ಹತೋಟಿಯಲಿ ತಿನ್ನಲು ಉಪದೇಶಿಸುವ ಎರಡು ಬಣಗಳಿವೆ. ಆದರೆ ಇದನ್ನು ತಿಂದೆ ತಿನ್ನಬೇಕೆನ್ನುವ ಇಲ್ಲಿನ ಜನಪದಕ್ಕೆ ಅದೆಲ್ಲ ಲೆಕ್ಕಕ್ಕಿಲ್ಲ - ಅತೀ ಉಷ್ಣದ ಹಣ್ಣಾದ್ದರಿಂದ ಗರ್ಭಿಣಿಯರು ತಿನ್ನಬಾರದೆನ್ನುವ ಸರಳ ನಿಯಮವನ್ನು ಬಿಟ್ಟರೆ! ಅಂದ ಹಾಗೆ ಡುರಿಯಣ್ಣನನ್ನು ತಿಂದು ಬಿಯರನ್ನೆನಾದರೂ ಕುಡಿದರೆ, ನೇರ ಪರಂಧಾಮಕ್ಕೆ ರವಾನಿಸಿ ಬಿಡುತ್ತದೆಂಬ ಗಾಢ ಮೂಢನಂಬಿಕೆಯು ಇವರಲ್ಲಿದೆ. ಮೂಢವೊ ಅಲ್ಲವೊ - ನೀವು ಮಾತ್ರ ಪ್ರಯೋಗಿಸಿ ಪ್ರಯತ್ನ ಪಡಲು ಹೋದರೆ ಆಗುವ ಅಥವಾ ಆಗದಿರುವ ಅನಾಹುತಕ್ಕೆಲ್ಲ ನೀವು ಮಾತ್ರ ಹೊಣೆಯೆಂದು ಮರೆಯದಿರಿ!

ಕೊನೆಯದಾಗಿ ಇನ್ನು ಹೆಚ್ಚಿನ ನೇರ ಮಾಹಿತಿಗೆ ಕೆಳಗಿನ ಕೊಂಡಿಗಳಿಂದಾಗಾಗಲಿ ಅಥವ ಅಂತರ್ಜಾಲದಲಾಗಲಿ ಯಥೇಚ್ಛ ಮಾಹಿತಿ ಲಭ್ಯ - ಗಿಂಡಿ, ಜಾಲಾಡಿ! ಈ ಲೇಖನದ ಚಿತ್ರ (ಒಂದು ಚಿತ್ರ - ವಿಕಿಯಿಂದ; ಮಿಕ್ಕೆಲ್ಲ ಇಲ್ಲಿನ ಸೂಪರ ಮಾರ್ಕೆಟ್ಟೊಂದರಲ್ಲಿ ಕ್ಲಿಕ್ಕಿಸಿದ್ದು) -ಹಾಗೂ ಮಾಹಿತಿ ಕೂಡಾ ಅಲ್ಲಿಂದಲೆ ಹೆಕ್ಕಿ ತೆಗೆದಿದ್ದು - ಹೀಗಾಗಿ ಲೇಖನದ ಮಾಹಿತಿ ಕೃಪೆ, ಸರಿ ತಪ್ಪಿನ ಜತೆ ಎಲ್ಲಾ ತರದ ಮಾಹಿತಿ ಮೂಲಹಕ್ಕು ಆಯಾ ಮೂಲಗಳಿಗೆ ಸಲ್ಲುತ್ತವೆ ( ವಿಶೇಷವಾಗಿ ಕೆಳಕಾಣಿಸಿದ ಕೊಂಡಿಗಳಿಗೆ)
 
ವಿಶೇಷ ಸೂಚನೆ : ಈ ಹಣ್ಣಿನ ನೇರ ಅನುಭವ ನಮ್ಮ ಭಾರತೀಯ ಮೂಲದಿಂದಲೆ ಬೇಕೆಂದರೆ - ದಯವಿಟ್ಟು ಗುಬ್ಬಣ್ಣನನ್ನು ನೇರಾ ಸಂಪರ್ಕಿಸಿ; ಸದ್ಯಕ್ಕೆ ನಮ್ಮಲ್ಲಿ ಅವನೊಬ್ಬನೆ ಈ ಹಣ್ಣನ್ನು ತಿನ್ನುವ ಧೈರ್ಯ ಮಾಡಿರುವ ಸರದಾರ - ನನಗೆ ತಿಳಿದ ಮಟ್ಟಿಗೆ! ಗುಬ್ಬಣ್ಣನ ಮಾಹಿತಿ, ಹಲಸಿನ ಹೋಲಿಕೆಯ ಮಟ್ಟಕ್ಕೆ ಮೀರದ ಕಾರಣ ನೀವು ಸಂತೃಪ್ತರಾಗದಿದ್ದರೆ, ಮಿಕ್ಕ ಕೊಂಡಿಗಳು ಹೇಗೂ ಇದ್ದೆ ಇವೆ!

- ನಾಗೇಶ ಮೈಸೂರು, ಸಿಂಗಾಪುರದಿಂದ
ಲೇಖನದ ಚಿತ್ರ ಮಾಹಿತಿ ಕೃಪೆ, ಇನ್ನು ಹೆಚ್ಚಿನ ನೇರ ಮಾಹಿತಿ:

Comments

Submitted by nageshamysore Sat, 06/15/2013 - 13:14

In reply to by hema hebbagodi

ಹೇಮಾರವರೆ ನಮಸ್ಕಾರ. ಹಣ್ಣುಗಳ ಬಗೆಯ ವಿವರ ಈಗ ಯಾರು ಬೇಕಾದರು ಅಂತರ್ಜಾಲದಲ್ಲಿ ಹುಡುಕಾಡಿಕೊಳ್ಳಬಹುದು. ಹೀಗಾಗಿ, ಲೇಖನವನ್ನು ಬರಿಯ ಮಾಹಿತಿ ವಿವರಣೆಗೆ ಮಾತ್ರ ನಿಷ್ಠವಾಗಿಸಿದರೆ, ಸಪ್ಪೆಯಾದ ಭಾಷಾಂತರ ಮಾತ್ರವೆ ಆಗುತ್ತದೆ. ಅದಕ್ಕಾಗಿ ತುಸು ಹಾಸ್ಯದ ಶೈಲಿಯಲ್ಲಿ, ನಮಗೆ ತಿಳಿದ ಪಾತ್ರ ವಾತಾವರಣ ಹಣ್ಣುಗಳೊಡನೆ ಆದಷ್ಟೂ ಸಮೀಕರಿಸಿ ಬರೆಯಲೆತ್ನಿಸಿದ್ದೇನೆ. ಈ ಹಣ್ಣುಗಳೆಲ್ಲ ನಮ್ಮಲ್ಲಿ ಸಾಧಾರಣ ಸಿಗದ ಕಾರಣ ನೆನಪಿನಲ್ಲುಳಿಯಲು ಹಾಸ್ಯದ ಶೈಲಿಯಿದ್ದರೆ ಸುಲಭವೆಂದು ನನ್ನ ಅನಿಸಿಕೆ. ಜತೆಗೆ ತೀರ ಒಣ ವಸ್ತುವನ್ನು ಈ ತೆಳು ಹಾಸ್ಯದ ಲಹರಿ ಓದಲು ಸಹನೀಯವಾಗಿಸೀತೆಂಬ ಆಶಯ. ಪಕ್ವ ಬರಹಗಾರರಾದ ನಿಮ್ಮಂತಹವರಿಗೂ ಇದು ಓದಲು ಚಂದವೆನಿಸಿತೆಂದರೆ, ಸಾಮಾನ್ಯ ಓದುಗರಿಗೂ ಮೆಚ್ಚುಗೆಯಾದೀತೆಂದುಕೊಳ್ಳುವೆ, ಈ ಶೈಲಿ. ತಮ್ಮ ಮೆಚ್ಚುಗೆಯ ಅನಿಸಿಕೆಗೆ ಧನ್ಯವಾದಗಳು :-) - ನಾಗೇಶ ಮೈಸೂರು , ಸಿಂಗಪುರದಿಂದ
Submitted by ಗಣೇಶ Thu, 07/04/2013 - 23:52

In reply to by nageshamysore

ಈ ಹಣ್ಣು ಅದು ಹೇಗೋ ನನ್ನ ಕಣ್ಣು ತಪ್ಪಿಸಿತು. ವಾಸನೆ ಎಂದು ಏನೋ..:) ನಿಮ್ಮ ಬರಹದ ಶೈಲಿಯಿಂದಾಗಿ, ಮೂಗು ಮುಚ್ಚಿಯೇ ಓದಿದೆ.. ವ್ಹಾ.. ಹೀಗೇ ಇನ್ನಷ್ಟು ಹಣ್ಣು ಹೂಗಳ ವಿವರ ನಿಮ್ಮಿಂದ ನಿರೀಕ್ಷಿಸುತ್ತಿರುವೆ.
Submitted by nageshamysore Fri, 07/05/2013 - 12:33

In reply to by ಗಣೇಶ

ಗಣೇಶ್ ಜೀ, ಈ ಹಣ್ಣಿನ ಮಹಾತ್ಮೆಯೆ ಅಂತದ್ದು. ನಾನೆ 1998 ರಿಂದ ನೋಡುತ್ತಿದ್ದರೂ ಇದುವರೆಗೂ ತಿನ್ನುವ ಧೈರ್ಯವಾಗಿಲ್ಲ. ಬಹುಶಃ ಅದೆ ಭೂತ ಲೇಖನಕ್ಕು ಕಾಡಿ, ನಿಮ್ಮ ಕಣ್ತಪ್ಪಿಸಿರಬೇಕು! ಆದರೂಕೊನೆಗೆ ಹಿಡಿದುಹಾಕೆ ಬಿಟ್ಟಿರಲ್ಲಾ - ನಿಮ್ಮನ್ನೆ ಛಲದಂಕ ಮಲ್ಲ ಎಂದು ಬಿಡಬಹುದು :-) - ನಾಗೇಶ ಮೈಸೂರು
Submitted by H A Patil Fri, 07/05/2013 - 18:48

ನಾಗೇಶ ಮೈಸೂರು ರವರಿಗೆ ವಂದನೆಗಳು ' ರುಚಿಗೆ ರಾಜಾ ವಾಸನೆಯ ಗಾರ್ಬೇಜಾ' ಲೇಖನ ಓದಿದೆ. ಡುರಿಯನ್ ಹಣ್ಣನ್ನು ಕುರಿತು ಸೊಗಸಾಗಿ ಬರೆದಿದ್ದೀರಿ. ಈ ಡುರಿಯನ್ ಹಣ್ಣಿನ ದುರ್ವಾಸನೆಯ ಬಗೆಗೆ ಪ್ರೋ.ಬಿ.ಜಿ.ಎಲ್.ಸ್ವಾಮಿಒಯವರು ತಮ್ಮ ಪುಸ್ತಕವೊಂದರಲ್ಲಿ ಬರೆದಿದ್ದು ಅದನ್ನು ಓದಿದನೆನಪು. ಆ ಪುಸ್ತಕದ ಹೆಸರು ನೆನಪಿಗೆ ಬರುತ್ತಿಲ್ಲ. ಅವರು ಮದ್ರಾಸ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದಾಗ ಬೊಟ್ಯಾನಿಕಲ್ ಟೂರ್ ಗಾಗಿ ವಿದ್ಯಾರ್ಥಿಗಳ ಜೊತೆಗೆ ಆಗುಂಬೆಯ ಕಾಡಿಗೆ ಬಂದಾಗ ಈ ಹಣ್ಣಿನ ಮತ್ತು ಅದರ ದುರ್ವಾಸನೆಯ ಕುರಿತಾಗಿ ಹಾಸ್ಯಮಯವಾಗಿ ಸೊಗಸಾಗಿ ಬರೆದಿದ್ದಾರೆ ಅಂತ ನೆನಪು. ಇದು ಆ ಡುರಿಯನ್ ಹಣ್ಣೊ ಮತ್ತೆ ಬೇರೆಯದೋ ನನಗೆ ನೆನಪಿಲ್ಲ. ನಿಮ್ಮ ಡುರಿಯನ್ ಹಣ್ಣು ನನಗೆ ಪ್ರೋ.ಬಿ.ಜಿ.ಎಲ್.ಸ್ವಾಮಿಯವರನ್ನು ನೆನಪಿಸಿ ಕೊಳ್ಳುವಂತೆ ಮಾಡಿತು. ಸೊಗಸಾದ ಲೇಖನ ಓದಿದ ಸಂತಸ ನನಗಾಯಿತು, ಧನ್ಯವಾದಗಳು.
Submitted by smitha melkote Sat, 07/06/2013 - 18:42

Neevu moogu muchhiye photo clickkisidaagiddare, naanu moogu muchhiye lekhana odi ishata pattiddu aayitu.
Submitted by nageshamysore Sat, 07/06/2013 - 22:50

In reply to by smitha melkote

ಸ್ಮಿತಾಜಿ, ನೀವು ಉಪ್ಪಿಟ್ಟಿನಿಂದ ಕಪ್ಪಿಡಿಸಿದ ಹಾಗೆ, ಇದು 'ವಾಸನೆಯಿಂದ ದೂಷಣೆ' :-) ಚಿತ್ರ ತೆಗೆಯೊ ಸಾಹಸ ನೀವು ವರ್ಣಿಸಿದ ಹಾಗೆ ಇತ್ತು ನೋಡಿ - ಅದರ ವಿವರ ಕೆಳಗಿದೆ ! - ನಾಗೇಶ ಮೈಸೂರು ತೆಗೆಯಬೇಕಾದರೆ ಡುರಿಯಣ್ಣನ ಕೆಲ ಚಿತ್ರ ನಿಂತಿದ್ದೆ ನೋಡಿ - ರಕ್ಷಣಾತ್ಮಕ 'ಸರಿ ದೂರ' ವಾಸನೆಗೆ ತಲೆ ತಿರುಗಿ ಬೀಳದಂತಿರಬೇಕು ಅತಿ ದೂರಕೆ ಚಿತ್ರ ಬ್ಲರ್ ಆಗದಂತಿರಬೇಕು!
Submitted by bhalle Sat, 07/06/2013 - 23:08

ಹೊರ ಮೈಯಲ್ಲಿ ಮುಳ್ಳನ್ನೇ ಹೊತ್ತರೂ ಅಂತರಾತ್ಮದಲ್ಲಿ ಮೃದು ಈ ಹಲಸು ಒಳಮೈ ಕ್ಲಿಷ್ಟವಾಗಿದ್ದು ಸುಲಭದಿ ಕೈಗೆಟುಕದ ಗುಣದ ಈ ಹಲಸು ಒಳ್ಳೆಯತನವ ದುರುಪಯೋಗ ಪಡೆವರ ದೂರವಿಡು ಎಂದು ನುಡಿವ ಈ ಹಲಸು ನನಗೆ ಬಹಳ ಪ್ರಿಯ :-)
Submitted by nageshamysore Sun, 07/07/2013 - 05:12

In reply to by bhalle

ಭಲ್ಲೆಯವರೆ, ತೊಗೊಳ್ಳಿ ನಿಮ್ಮ ಪ್ರಿಯ ಡುರಿಯನ್ನು.. ಶಕುನಿ ದುರ್ಯೋಧನಗಳ ದೂರವಿಡೆ ದುರ್ವಾಸನೆ ಕೈಯಿಕ್ಕೊ ದುಶ್ಯಾಸನರ್ಹತೋಟಿಗೆ ಮುಳ್ಳಿನ ಮನೆ ನಡುವೆ ಗೆದ್ದೆಲ್ಲ ಬಳಿಸಾರಿದ ಶಿಷ್ಟರಿಗಷ್ಟೇ ಸೋಪಾನ ಮೃದುಮಧುರ ರುಚಿಸುತ ಫಲ - ತೂಕ ಜೋಪಾನ! - ನಾಗೇಶ ಮೈಸೂರು