"ನಾವು ಬೆಳೆಸಿದ್ದಕ್ಕೆ ನಮ್ಮದೇ ರೇಟು"

"ನಾವು ಬೆಳೆಸಿದ್ದಕ್ಕೆ ನಮ್ಮದೇ ರೇಟು"

"ಮಾರ್ಕೆಟ್ ರೈತನ ಕೈಯಲ್ಲಿಲ್ಲ, ದಲಾಲಿಗಳ ಕೈಯಲ್ಲಿದೆ ಅಂತಾರೆ. ಯಾರು ಕೊಟ್ಟದ್ದು? ರೈತರಾದ ನಾವೇ ಅವರ ಕೈಗೆ ಕೊಟ್ಟದ್ದು! ಯಾರೇ ರೈತನನ್ನ್ಜು ಕೇಳಿ. ಬೆಳೆ ಬೆಳೆದಿದ್ದೀಯಲ್ಲ, ಎಷ್ಟು ಖರ್ಚಾಯಿತು? ಗೊತ್ತಿಲ್ಲ ಅಂತಾರೆ. ಮಾರ್ಕೆಟಿಂಗ್ನಲ್ಲಿ ರೈತರ ಸೋಲಿನ ಮೂಲ ಇಲ್ಲಿದೆ.

ನಾವು ರೈತರು ಪಕ್ಕಾ ಲೆಕ್ಕ ಇಡಬೇಕು. ನಾವು ಬೆಳೆಸಿದ ಫಸಲಿಗೆ ನಮ್ಮದೇ ರೇಟು ಹೇಳಬೇಕು. ತರಕಾರಿ ಬೆಳೆಸಲಿಕ್ಕೆ ಕಿಲೋಕ್ಕೆ ೫೦ ರೂಪಾಯಿ ಖರ್ಚಾದರೆ, ಅದನ್ನು ಮಾರುವಾಗ ೬೫ರಿಂದ ೭೦ ರೂಪಾಯಿ ರೇಟು ಇಡಬೇಕು. ಹೀಗೆ ಮಾಡಿದರೆ ನಷ್ಟ ಹ್ಯಾಗೆ ಆಗುತ್ತದೆ ಹೇಳಿ. ದಲಾಲಿ ಹೇಳಿದ ರೇಟಿಗೆ ಫಸಲು ಮಾರೋದೇ ರೈತರು ಮಾಡುವ ತಪ್ಪು."

ಹೀಗೆ ಜ್ನಾನೇಶ್ವರ ಬೋಡ್ಕೆ ಹೇಳುತ್ತಲೇ ಇದ್ದರು - ತಮ್ಮ ಹಸಿಹಸಿ ಅನುಭವಗಳನ್ನು.. ..... "ಪುಣೆಯಲ್ಲಿ ೧೭ ಹೋಟೆಲುಗಳಿಗೆ ವಿದೇಶೀ ಮೂಲದ ತರಕಾರಿ ಬೇಕು. ಐಸ್ ಬರ್ಗ್ ಲೆಟ್ಯೂಸ್, ರೆಡ್ ಕ್ಯಾಪ್ಸಿಕಂ, ್ರಕೊಲಿ, ಸೆಲ್ಲರಿ ಇತ್ಯಾದಿ. ಕೆಲವು ಹೋಟೆಲಿನವರು ಅದನ್ನು ಮುಂಬೈಯಿಂದ ವಿಮಾನದಲ್ಲಿ ತರಿಸ್ತಾ ಇದ್ದರು. ಹಾಗೆ ತರಿಸುವ ಖರ್ಚು ಕಿಲೋಕ್ಕೆ ೨೪ ರೂಪಾಯಿ. ಇನ್ನು ಕೆಲವರು ಮುಂಬೈಗೆ ಕಾರು ಕಳಿಸಿ, ಅದರಲ್ಲಿ ತರಕಾರಿ ತರಿಸ್ತಾ ಇದ್ದರು. ಪುಣೆಯಿಂದ ಮುಂಬೈಗೆ ಹೋಗಿ ಬರಲಿಕ್ಕೆ ಕಾರಿಗೆ ,೦೦೦ ರೂಪಾಯಿ ಪೆಟ್ರೋಲ್ ಬೇಕು. ಅದಲ್ಲದೆ ಡ್ರೈವರಿಗೆ ಒಂದು ಟ್ರಿಪ್ಪಿಗೆ ೫೦೦ ರೂಪಾಯಿ ಕೊಡಬೇಕು. ಅಂತೂ ಹೋಟೆಲಿನವರಿಗೆ ಒಂದು ಕಿಲೋ ತರಕಾರಿಗೆ ೭೦ ರೂಪಾಯಿ ಖರ್ಚು ಬೀಳುತ್ತಿತ್ತು.

ನಾವು ವಿದೇಶೀ ಮೂಲದ ತರಕಾರಿಗಳನ್ನು ಬೆಳೆಸಿ ಕೊಡಲು ಒಪ್ಪಂದ ಮಾಡಿಕೊಂಡೆವು - ನಮ್ಮ ಅಭಿನವ ಕೃಷಿಕರ ಕ್ಲಬ್ಗಳ ಮೂಲಕ. ಕ್ಲಬ್ ಸ್ಥಾಪನೆಗೆ ನಮಗೆ ಪ್ರೋತ್ಸಾಹ ಕೊಟ್ಟವರು ಕೆನರಾ ಬ್ಯಾಂಕಿನ ಮೆನೇಜರ್ ಭೋಗಲೆ ಅವರು.

ನಮ್ಮ ಅಭಿನವ ಕೃಷಿಕರ ಕ್ಲಬ್ಗಳ ಸದಸ್ಯರು ಪಾಲಿಹೌಸ್ ಮಾಡಿದೆವು. ೫೩ ಎಕ್ರೆಯಲ್ಲಿ ಆಧುನಿಕ ತಂತ್ರಜ್ನಾನ ಅಳವಡಿಸಿಕೊಂಡು ಕೃಷಿ ಮಾಡಿದೆವು. ಅದಕ್ಕಾಗಿ ರೂಪಾಯಿ ೭೩ ಕೋಟಿ ಸಾಲ ತೆಗೆದೆವು. ಕಳೆದ ಐದು ವರುಷದಲ್ಲಿ ಸಾಲವನ್ನೆಲ್ಲ ಮರುಪಾವತಿ ಮಾಡಿದ್ದೇವೆ. ನಾವು ಟೈಅಪ್ ಮಾಡಿಕೊಂಡು ಕಿಲೋಕ್ಕೆ ೪೫ ರೂಪಾಯಿಗೆ ತರಕಾರಿ ಮಾರುತ್ತೇವೆ. ನಮ್ಮ ಖರ್ಚು ಕಿಲೋಕ್ಕೆ ೧೭ ರೂಪಾಯಿ.

ಕೃಷಿಯಿಂದ ನನಗೆ ತಿಂಗಳಿಗೆ ೨೫,೦೦೦ ರೂಪಾಯಿ ಆದಾಯ ಬರುತ್ತಿದೆ. ನಮ್ಮ ಮನೆ ಖರ್ಚಿಗೆ ,೦೦೦ ರೂಪಾಯಿ ಸಾಕು. ನಮ್ಮ ಎಲ್ಲರದ್ದೂ ಆದಾಯ - ಖರ್ಚು ಹೀಗೇ ಇದೆ. ಹಾಗಾಗಿ ನಾವು ಹಲವರು ಹೊಸ ಮನೆ ಕಟ್ಟಿದ್ದೇವೆ. ನಾವು ಎಲ್ಲರೂ ಮಾರುತಿ- ೮೦೦ ಕಾರು ಖರೀದಿಸಿದ್ದೇವೆ. ಮಕ್ಕಳನ್ನು ಒಳ್ಳೆಯ ಶಾಲೆಗೆ ಕಳಿಸುತ್ತಿದ್ದೇವೆ. ಇನ್ನೇನಾಗಬೇಕು ಹೇಳಿ.

ಇದೆಲ್ಲ ಸಾಧ್ಯವಾಗಲು ಮುಖ್ಯ ಕಾರಣ ನಾವು ಬೆಳೆ ಬೆಳೆಸುವ ವೆಚ್ಚ ಕಡಿಮೆ ಮಾಡಿದ್ದು. ಸುಲಭವಾಗಿ ಕೃಷಿ ಮಾಡೋದು ಹೇಗೆ ಅನ್ನೋದನ್ನು ನಾವು ವಿದೇಶದವರಿಂದ ಕಲಿಯಬೇಕು. ಅಲ್ಲಿಯ ಕೃಷಿಕ ಮನೆಯಲ್ಲಿ ೂತು ರಿಮೋಟ್ ಬಟನ್ ಒತ್ತಿದರೆ ೨೦,೦೦೦ ಸಸಿಗಳಿಗೆ ಡ್ರಿಪ್ ಪೈಪಿನ ಜಾಲದಲ್ಲಿ ನೀರು ಹನಿಯುತ್ತದೆ. ನಾವೇನು ಮಾಡುತ್ತೇವೆ? ಇಡೀ ಹೊಲಕ್ಕೆ ಅಥವಾ ತೋಟಕ್ಕೆ ನೀರು ಹಾಯಿಸಿ, ಮಣ್ಣನ್ನೆಲ್ಲ ಒದ್ದೆ ಮಾಡುತ್ತೇವೆ. ಇದರಿಂದ ನೀರು ಪೋಲು. ಅದಲ್ಲದೆ, ಹೊಲದಲ್ಲಿ, ತೋಟದಲ್ಲಿ ಕಳೆಗಿಡಗಳು ಸೊಕ್ಕಿ ಬೆಳೀತಾವೆ. ಅದರಿಂದಾಗಿ, ಕಳೆ ೆಗೆಸಲಿಕ್ಕೂ ಖರ್ಚು. ಡ್ರಿಪ್ ನೀರಾವರಿ ಅಳವಡಿಸಿದರೆ ಬೆಳೆ ಬೆಳೆಸುವ ಖರ್ಚಿನಲ್ಲಿ ಭಾರೀ ಉಳಿತಾಯ. ಅದೇ ಡ್ರಿಪ್ ಪೈಪಿಗೆ ಗೊಬ್ಬರದ ದ್ರಾವಣ ಬೆರೆಸಿದರೆ, ಪ್ರತಿಯೊಂದು ಗಿಡಕ್ಕೆ ಗೊಬ್ಬರ ಹಾಕುವ ವೆಚ್ಚವೂ ಉಳಿತಾಯ.

ಬೆಳೆ ಬೆಳೆಸುವ ಖರ್ಚು ಕಡಿಮೆ ಮಾಡದಿದ್ದರೆ ರೈತರಿಗೆ ಉಳಿಗಾಲವಿಲ್ಲ. ಡ್ರಿಪ್ ನೀರಾವರಿ ಮತ್ತು ಫರ್ಟಿಗೇಷನ್ ಎಲ್ಲ ರೈತರೂ ಅಳವಡಿಸಿಕೊಳ್ಳಬೇಕು. ನಮ್ಮ ಹಳ್ಳಿಯ ಹತ್ತಿರದ ಮಾರ್ಕೆಟಿಗೆ ದೂರದೂರದಿಂದ ಬರುವ ಹೂಹಣ್ಣುತರಕಾರಿ ನಾವು ಬೆಳೆದು ಮಾರಬೇಕು. ದೂರದೂರದಲ್ಲಿ ಅವನ್ನು ಬೆಳೆಸುವವರು ನಮ್ಮೊಂದಿಗೆ ರೇಟಿನಲ್ಲಿ ಸ್ಪರ್ಧಿಸಲು ಸಾಧ್ಯವೇ ಇಲ್ಲ. ಯಾಕೆಂದರೆ ಅವರಿಗೆ ಸಾಗಾಟ ವೆಚ್ಚವೇ ದುಬಾರಿ ಆಗುತ್ತದೆ. ನಾವು ಮಾಡಿದ ಹಾಗೆ ಮಾರ್ಕೆಟ್ ಸರ್ವೆ ಮಾಡಿ, ಬೇಡಿಕೆ ಇರುವ ಹೂಹಣ್ಣುತರಕಾರಿ ಬೆಳೆಸಿ, ನಮ್ಮ ರೇಟಿನಲ್ಲಿ ಮಾರಿದರೆ ಕೃಷಿಯಲ್ಲಿ ಲಾಭ ಖಂಡಿತ."

ಜ್ನಾನೇಶ್ವರ ಬೋಡ್ಕೆಯವರ ಮಾತಿನಲ್ಲಿ ಕೃಷಿಯ ಯಶಸ್ಸಿನ ನಾಡಿ ಮಿಡಿಯುತ್ತಿತ್ತು. (ಅವರ ಸಂಪರ್ಕ ೦೯೪೨೨೦೦೫೫೬೯ ಹೆಚ್ಚಿನ ಮಾಹಿತಿ www.abhinavfarmersclub.org)

 

 

 

Comments

Submitted by makara Wed, 06/19/2013 - 07:39

ಅಡ್ಡೂರ್ ಕೃಷ್ಣಾರಾವ್ ಸರ್, ನಿಮ್ಮ ಮತ್ತೊಂದು ವಿವೇಚನಾಯುಕ್ತ ಬರಹಕ್ಕೆ ಅಭಿನಂದನೆಗಳು. ಲೇಖನದಲ್ಲಿ ಪ್ರಸ್ತಾವಿಸಿರುವಂತೆ ನಾವೂ ಸಹ ’ಫಸಲು ಕೊಳ್ಳುವಿಕೆಯ ಒಪ್ಪಂದ’ ಮಾಡಿಕೊಂಡರೆ ಲಾಭದಾಯಕ ಕೃಷಿ ಮಾಡಬಹುದೆನ್ನುವುದನ್ನು ಚೆನ್ನಾಗಿ ತಿಳಿಸಿಕೊಟ್ಟಿದ್ದೀರ. ಇದೇ ವಿಧವಾಗಿ ಭತ್ತ, ರಾಗಿ, ಜೋಳ ಮೊದಲಾದ ಬೆಳೆಗಳನ್ನು ಬೆಳೆಯುವ ರೈತರೂ ಸಹ ಸಂಘಗಳನ್ನು ಏರ್ಪಡಿಸಿಕೊಂಡರೆ ಅವರೂ ಸಹ ತಮ್ಮ ಬೆಳೆಗೆ ಸೂಕ್ತ ಬೆಲೆಯನ್ನು ನಿಗದಿ ಪಡಿಸಿಕೊಳ್ಳಬಹುದು.
Submitted by spr03bt Thu, 06/20/2013 - 10:36

ಅಡ್ಡೂರರೆ, ನನ್ನ೦ಥ ಕೃಷಿ ಹಿನ್ನಲೆಯಿ೦ದ ಬ೦ದ ಯುವಕರಿಗೆ ನಿಮ್ಮ ಬರಹಗಳು ಚೈತನ್ಯ ನೀಡುತ್ತವೆ. ನಿಮ್ಮನ್ನು ಸ೦ಪದ ಸಮ್ಮಿಲನದಲ್ಲಿ ಭೇಟಿಯಾಗಿ, ಸ್ವತಃ ನಿಮ್ಮ ಕೈಯಿ೦ದಲೇ ಹಸುರು ಹೆಜ್ಜೆ ಪುಸ್ತಕ ಕೊ೦ಡಿದ್ದೆ. ಆ ಪುಸ್ತಕದ ಪ್ರತಿಯೊ೦ದು ಲೇಖನವೂ ಬಹಳ ಚೆನ್ನಾಗಿದೆ. ಅ೦ಥ ಒ೦ದು ಪುಸ್ತಕ ಬರೆದ ನಿಮಗೆ ರೈತ ಸಮಾಜದ ಪರವಾಗಿ ವ೦ದನೆಗಳು.
Submitted by addoor Tue, 06/25/2013 - 15:51

In reply to by spr03bt

ಪ್ರಿಯರೇ, ನಿಮ್ಮಿಬ್ಬರ ಪ್ರತಿಕ್ರಿಯೆ ಗಮನಿಸಿದೆ. ನಮ್ಮ ಹಳ್ಳಿಗಳಲ್ಲಿ ಇಂದು ದೊಡ್ಡ ಸ್ಥಿತ್ಯಂತರ ಆಗುತ್ತಿದೆ. ಕೃಷಿಕರು ಕೃಷಿಯನ್ನು ಮುಂದುವರಿಸಲು ಕಷ್ಟಸಾಧ್ಯವಾದ ಸ್ಥಿತಿ ನಿರ್ಮಾಣವಾಗುತ್ತಿದೆ. ಹಾಗಿರುವಾಗ, ಬೋಡ್ಕೆ ಅವರಂತೆ ಕೃಷಿಯಲ್ಲಿ ಕಾಲೂರಿ, ವಿಶ್ವಾಸದಿಂದ ಮುನ್ನಡೆಯುವ ಹೆಚ್ಚೆಚ್ಚು ಕೃಷಿಕರ ಸಾಧನೆಗಳನ್ನು ದಾಖಲಿಸಬೇಕಾಗಿದೆ.