ಹೀಗೊಂದು facebook ಪರಿಣಯ ಪ್ರಸಂಗ

ಹೀಗೊಂದು facebook ಪರಿಣಯ ಪ್ರಸಂಗ

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ Fb mania ಮತ್ತು ಇದರಂತಹ ಸಾಮಾಜಿಕ ತಾಣಗಳು ವ್ಯಕ್ತಿಯ ವೈಯುಕ್ತಿಕ ಬದುಕಿನಲ್ಲಿ ವಹಿಸುತ್ತಿರುವ ಪಾತ್ರಗಳನ್ನು ನೋಡಿದಾಗ ಗಾಬರಿಯಾಗುತ್ತದೆ.  ನಮ್ಮ ಬದುಕಿನ ಹಲವು ವಿಷಯಗಳನ್ನು ಇವು ನಿರ್ದೇಶಿಸುತ್ತಿವೆ ಎಂದರೆ ಇದರ ಪ್ರಭಾವಕ್ಕೆ ನಾವು ಇನ್ನೆಷ್ಟು ಒಳಗಾಗಿರಬೇಡ? ಇತ್ತೀಚಿನ ಪತ್ರಿಕೆಯ ವರದಿಯೊಂದರಲ್ಲಿ ಓದಿದ ನೆನಪು ಯಾವದೋ ದೇಶದ ಮನಃಶಾಸ್ತ್ರ ವಿಭಾಗದ ಪೋಸ್ಟ್‍ ಡಾಕ್ಟರಲ್‍ ತಂಡದ ವೈದ್ಯರು ಫೇಸ್‍ಬುಕ್‍ನಲ್ಲಿ ದಂಪತಿಗಳು ತಮ್ಮ ಜೋಡಿ ಫೋಟೋಗಳನ್ನು ಹಾಕಿಕೊಳ್ಳುವುದು ಅವರ ದಾಂಪತ್ಯದ ಬಗ್ಗೆ ಏನು ಹೇಳುತ್ತವೆ ಎಂದು ಅಧ್ಯಯನ ಮಾಡಿದರಂತೆ. ಅವರ ಅಧ್ಯಯನದ ಫಲಿತಾಂಶವನ್ನು ಅಂತರ್ರಾಷ್ಟ್ರೀಯ ಮನಃಶಾಸ್ತ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟಿಸಿರುವರಂತೆ. ಇದನ್ನು ಓದುತ್ತಿದ್ದ ಹಾಗೆ ನನಗೆ ‍Fb ಪರಿಚಯವಾದದ್ದು, ಅದರ ಬಗ್ಗೆ ನನಗೆ ಯಾವಾಗಲೂ ಇರುವ ಪ್ರಶ್ನೆಗಳು, ನನ್ನ ಸ್ನೇಹಿತರೊಬ್ಬರ ಬಾಳಿನಲ್ಲಿ fbಯಿಂದಾಗಿ ನಡೆದ ಘಟನೆ ಎಲ್ಲ ನೆನಪಾಗಿ ಇದನ್ನು ಬರೆಯಬೇಕೆನಿಸಿತು.

 Fbಯೊಂದಿಗಿನ ನನ್ನ ಒಡನಾಟ ಶುರುವಾದದ್ದು ನನ್ನ ಕಾಲೇಜಿನ ಕೊನೆಯ ದಿನಗಳಲ್ಲಿ. ಕಾಲೇಜು ಶುರುವಾಗಿ ಸ್ವಲ್ಪದಿನಗಳಿಗೆ ಮುದುಡಿಕೊಂಡಿದ್ದ ಮೈಮನಸುಗಳು ಮೆಲ್ಲಗೆ ಹರಡಿಕೊಳ್ಳಲಾರಂಭಿಸಿತು. ಕ್ರಮೇಣ ಜೊತೆಯವರೊಂದಿಗೆ ಸ್ನೇಹ, ಸಲಿಗೆ ಬೆಳೆಯಿತು. ಹಳೆಯ ಸ್ನೇಹಿತರು ಮರೆವೆಗೆ ಸರಿದಂತೆ ಹೊಸ ಸ್ನೇಹಿತರು ಪರಿಚಯವಾದರು. ನನಗೇನೂ ಅಂಥ ಹೇಳಿಕೊಳ್ಳುವಂತ ಆರ್ಥಿಕ ಹಿನ್ನಲೆಯಿರಲಿಲ್ಲ. ಹಾಗಾಗಿ ಸಣ್ಣ ಊರೊಂದರ ಸಣ್ಣ ಶಾಲೆಯಲ್ಲಿ ಓದಿ ಬಂದ ನನಗೆ ಬೆಂಗಳೂರಿನ ಮಕ್ಕಳು ಅವರಾಡುವ ಮಾತು ಎಲ್ಲ ಅರ್ಥವಾಗಲು ಸಾಕಷ್ಟು ಸಮಯ ಹಿಡಿದಿತ್ತು. ಕಂಪ್ಯೂಟರ್‍ ನೋಡಿದ್ದ ನನಗೆ ಇಂಟರ್ನೆಟ್‍ ಅನ್ನೋ ಪ್ರಂಪಚದ ಮೊದಲ ಪರಿಚಯ ಸರಿಯಾಗಿ ಆದದ್ದು ಇಲ್ಲಿಗೆ ಬಂದ ನಂತರವೇ. ನನ್ನ ಈ-ಮೇಲ್‍ ಐಡಿ ಕೂಡ ನಾನು ಮಾಡಿಕೊಂಡಿದ್ದು ಪಿಯುಸಿ 2ನೇ ವರ್ಷದಲ್ಲಿ.ಮೊದಲಿನಿಂದಲೂ ನನಗೆ ಹೆಚ್ಚು ಸ್ನೇಹಿತರಿರಲಿಲ್ಲ. ಇಲ್ಲಿ ಕೂಡ ಇದ್ದವರು ಕೆಲವೇ ಮಂದಿ. ಅವರೆಲ್ಲ ಇಲ್ಲಿನವರೇ ಮತ್ತು ನೆಟ್‍ಕಿಂಗ್ಸ್‍ ಅಂದರೆ ಇಂಟರ್ನೆಟ್‍ ಎಕ್ಸ್‍ಪರ್ಟ್ಸ್‍. ನಾನು ಕೂಡ ಇವರಿಂದಲೇ ಇಂಟರ್ನೆಟ್‍ ಪರಿಚಯಮಾಡಿಕೊಂಡಿದ್ದು.

Sms  ಮತ್ತು fb ಇವರುಸಿರು. ಬೆಳಗಾಗುತ್ತಿದ್ದುದು ಅಜ್ಜಿ ಕೋಳಿಯಿಂದಲ್ಲ ಮೊಬೈಲು ಮತ್ತು fb ಮೆಸೇಜ್‍ಗಳಿಂದ. ರಾತ್ರಿಯಾಗುತ್ತಿದ್ದುದು ಹೀಗೆ. ಮನೆಯಾದರೇನು, ‘ಕಾಲೇಜಾದರೇನು ಯಾರಿದ್ದರೇನು ಇಲ್ಲದಿದ್ದರೇನು ಜೊತೆಯಿರಲು ನೀನು ಬೇಕು ನಂಗಿನ್ನೇನು’ ಅನ್ನೋಷ್ಟು ಲವ್‍ ಇವರಿಗೆ ಮೊಬೈಲು ಮತ್ತು ಫೇಸ್‍ಬುಕ್‍ ಬಗ್ಗೆ. ನನಗೆ ಯಾವಾಗಲೂ ಕೊರೆಯುತ್ತಿದ್ದ ಪ್ರಶ್ನೆಯೆಂದರೆ ಇವರ fb friends.

ಏನಿಲ್ಲವೆಂದರೂ ಇವರಲ್ಲಿ ಪ್ರತಿಯೊಬ್ಬರಿಗೂ 500-1000ದಷ್ಟು ಸ್ನೇಹಿತರು. ಕೆಲವರಿಗೆ ಇನ್ನೂ ಹೆಚ್ಚು! ಇದು ಹೇಗೆ ಸಾಧ್ಯ? ಅನ್ನೋದು ನನಗೆ ಆಶ್ಚರ್ಯ. ಆ ಲಿಸ್ಟಿನಲ್ಲಿ ಇರುವ ಎಷ್ಟೋ ಮಂದಿಯನ್ನ friend requrest accept ಮಾಡಿ ಅಥವ friend request ಕಳಿಸಿ ಲಿಸ್ಟ್‍ಗೆ ಸೇರಿಸಿಕೊಂಡಿದ್ದು ಬಿಟ್ಟರೆ ಅವರನ್ನು ವೈಯುಕ್ತಿಕವಾಗಿ ಭೇಟಿ ಮಾಡಿರುವುದು ಅಥವ ಪರಿಚಯ ಮಾಡಿಕೊಂಡಿರುವುದು ಬಹಳ ಕಡಿಮೆ ಅಥವ ಇಲ್ಲವೇ ಇಲ್ಲ. ಅವರಲ್ಲಿ ಕೆಲವರೊಡನೆ ಆಗೀಗ ಚಾಟ್‍ ಮತ್ತು ಅವರು ಮಾಡುವ updateಗಳ ಮುಖಾಂತರ ಅವರ ಲೋಕದಲ್ಲಿ ಅವರು ನಮಗೆ ತೆರೆದಿಟ್ಟದ್ದನ್ನ ನೋಡುವುದಷ್ಟೇ. ಹೀಗಿದ್ದೂ ಅವರೆಲ್ಲ ನಮ್ಮ ಫ್ರೆಂಡ್ಸ್‍ friend in fb is a friend in a list only!!

ನಾವೆಲ್ಲ ಕಾಲೇಜು ಮುಗಿಸಿ ಚದುರಿಹೋದ ಮೇಲೂ fbಯಲ್ಲಿ contactನಲ್ಲಿ ಇರೋಣ ಅಂತ ಕಾಲೇಜಿನ ಕೊನೆಯ ದಿನ ಮಾತು ಕೊಟ್ಟುಕೊಂಡು ಚದುರಿದೆವು. ಓದು ಮುಗಿಯಿತು. ಕೆಲಸದ ಬೇಟೆ ಆರಂಭವಾಯಿತು. ಹಾಗೂ ಹೀಗೂ ಕಾಲೂರಲು ನೆಲೆ ಕಂಡುಕೊಂಡೆವು. ಆಗೊಮ್ಮೆ fb ಯಲ್ಲಿ ಅಕಸ್ಮಾತ್ತಾಗಿ ಹಿಂದಿನ ಕಾಲೇಜಿನ ಗೆಳೆಯ ಒಮ್ಮೆ ಮಾತಿಗೆ ಸಿಕ್ಕ. ಪರಸ್ಪರ ಹಾಯ್‍ ಹಲೋಗಳ ನಂತರ ಸದ್ಯದ ನಮ್ಮ ನಮ್ಮ ಬದುಕಿನ status update ಮಾಡಿದ ನಂತರ ಹಾಗೇ ಮಾತು ಊರು ಕೇರಿ ಅಲೆದು ಯಾರ್ಯಾರದೋ ಕತೆಗಳನ್ನು ಸುತ್ತಿಹಾಕಿ ಬರುವಾಗ ನಮ್ಮೊಡನೆ ಓದುತ್ತಿದ್ದ ನಮ್ಮ ಸ್ನೇಹಿತನೊಬ್ಬನ ವಿಷಯ ಕೂಡ ಬಂತು. ಮೊದಲೇ ಹೇಳಿದೆನಲ್ಲ ಆ ಗೆಳೆಯ ಹೇಳಿದ ಕತೆಯೇ ನಾನೀಗ ಇದನ್ನು ಬರೆಯಲು ಕಾರಣ.

ಆ ಗೆಳೆಯನಿಗೆ ಮದುವೆ ಮಾಡಲು ಮನೆಯಲ್ಲಿ ಹುಡುಕಾಟ ಆರಂಭಿಸಿದ್ದರು. ಅವನಿಗೆ ಪ್ರೀತಿಸಿ ಮದುವೆಯಾಗಬೇಕೆಂದು ಆಸೆ. ಆದರೆ ಅವನ ಪ್ರೇಮ ಪ್ರಯತ್ನಗಳು ವಿಫಲವಾಗಿದ್ದವು. ಹಾಗಾಗಿ ಅವನು ಮನೆಯವರ ಒತ್ತಾಯಕ್ಕೆ ಮಣಿದು ಅವರು ತೋರಿಸಿದ ಹುಡುಗಿಯರನ್ನು ನೋಡಲು ಶುರುಮಾಡಿದ್ದ. ಹೀಗೆ ಶುರುವಾದ ನೋಡುವ ಕಾರ್ಯಕ್ರಮ ಯಶಸ್ವಿಯಾಗಿ 50 ಕಂತುಗಳನ್ನು ಪೂರೈಸಿತ್ತು. ಯಾವುದೇ ಸಂಬಂಧ ಮದುವೆಯಲ್ಲಿ ಸಮಾಪ್ತಿಗೊಳ್ಳುವ ಸೂಚನೆಗಳು ಕಾಣದೇ ಮನೆಯವರು ಕಂಗಾಲಾಗಿದ್ದರು. ಜಗದೊಳಗೆ ನಮ್ಮ ಸುಪುತ್ರನ ಮನಸೆಳೆವ ಚೆಲುವೆ ಎಲ್ಲಿಹಳು ಅಂತ ಹುಡುಕಿ ಹುಡುಕಿ ಹೈರಾಣಾಗಿದ್ದರು. ಈ ಭೂಪತಿ ಗಂಡು ಹೀಗೆ ಬಂದ ಹುಡುಗಿಯರನ್ನೆಲ್ಲ ನಿರಾಕರಿಸಲು ಕಾರಣವೇನು ಅನ್ನುವುದು ಎಲ್ಲರಿಗೂ ಯಕ್ಷಪ್ರಶ್ನೆಯಾಗಿತ್ತು. ಏನಾದ್ರೂ ಲವ್ವುಗಿವ್ವು ಮಾಡಿದ್ದರೆ ಹೇಳಪ್ಪ ಎಂದು ಪರಿಪರಿಯಾಗಿ ಕೇಳಿದರೂ ಉತ್ತರ ನಕಾರವೇ ಆಗಿರುತ್ತಿತ್ತು.

ಇಂತಿಪ್ಪ ಗಂಡಿಗೆ ಕಡೆಗೂ ಒಬ್ಬಳು ಹುಡುಗಿಯನ್ನು ಒಪ್ಪಿಕೊಳ್ಳುವ ಮನಸ್ಸಾಯಿತು. ಮನೆಯಲ್ಲಿ ಎಲ್ಲರೂ ಈ ಮಾತು ಕೇಳಿ ಕುಣಿದಾಡುವುದೊಂದೇ ಬಾಕಿ ಆಗ ಹುಡುಗಿಯ ಮನೆಯಿಂದ ಫೋನ್‍ ಬಂತು ‘ನಮ್ಮ ಹುಡುಗಿ ಒಪ್ಪಿಲ್ಲ’ ಅಂತ. ಕಾರಣವೇನು ತಿಳಿಯದೆ ನಿರಾಶರಾದರು. ಆ ಹುಡುಗಿ ಕೂಡ ಇವನ ಹಾಗೇ ಅರ್ಧಶತಕವನ್ನು ಪೂರೈಸಿದ್ದವಳೇ. ಅವರ ಮನೆಯ ಪರಿಸ್ಥಿತಿಯೇನು ಇವರದಕ್ಕಿಂತ ಭಿನ್ನವಾಗಿರಲಿಲ್ಲ. ಕಡೆಗೆ ಎರಡೂ ಮನೆಯವರು ಸೇರಿ ಇವರಿಬ್ಬರ ಈ ನಿರಾಕರಣ ಕ್ರಿಯೆಯ ಹಿಂದೆ ಅಡಗಿರುವ ರಹಸ್ಯವನ್ನು ಭೇದಿಸುವ ಪಣತೊಟ್ಟು ಇವರಿಬ್ಬರ ಸ್ನೇಹಿತರ ಬೆಂಬತ್ತಿದರು. ಆಗ ತಿಳಿದು ಬಂದ ವಿಷಯವೇನೆಂದರೆ ಇಬ್ಬರಿಗೂ fbಯ ಗೀಳು ಎಷ್ಟಿತ್ತೆಂದರೆ ತಮಗೆ ಬಂದ ಹೆಣ್ಣು/ಗಂಡುಗಳ ಜಾತಕವನ್ನು ಇವರು fbಯಲ್ಲಿ ಹುಡುಕುವ ಅಭ್ಯಾಸ ಇಟ್ಟುಕೊಂಡಿದ್ದರಂತೆ. ತನಗೆ ಬಂದ ಹುಡುಗಿಯ ಬಗ್ಗೆ ತಿಳಿಯಲುಇವನು ತನಗೆ ಬಂದ ಹುಡುಗನ ಬಗ್ಗೆ ಅವಳು ತಿಳಿಯಲು fbಯಲ್ಲಿ ನೋಡಿ ಆ ಹುಡುಗ/ಹುಡುಗಿಯ ಗೆಳೆಯರು, ಫೋಟೋಗಳು, ಅವರಿಷ್ಟದ ಹಲವು ಸಂಗತಿಗಳು ಇವನ್ನೆಲ್ಲ ನೋಡಿ ಅವರನ್ನು ಮದುವೆಯಾಗುವುದೋ ಬೇಡವೋ ಎಂದು ನಿರ್ಧರಿಸುತ್ತಿದ್ದರಂತೆ. ಈ ರಹಸ್ಯ ಕಾರ್ಯಾಚರಣೆಯಿಂದ ತಾವು ತಿಳಿದ ಬಂದ ಈ ಸತ್ಯದಿಂದ ಹಿರಿಯರು ಇವರನ್ನು ತಿದ್ದುವ ಪ್ರಯತ್ನಕ್ಕೆ ಕೈಹಾಕಿದರಂತೆ. ಆದರೇನು ಮಾಡುವುದು Fb rehabilitation centerಗಳು ಇನ್ನೂ ಹುಟ್ಟಿಕೊಂಡಿಲ್ಲವಲ್ಲ. ಹಾಗಾಗಿ ಇವರುಗಳನ್ನು ಈ ಅಭ್ಯಾಸದಿಂದ ಮುಕ್ತಗೊಳಿಸಲು ಸಾಕಷ್ಟು ಕಷ್ಟಪಟ್ಟರಂತೆ. ಕಡೆಗೆ ಹಾಗೂ ಹೀಗೂ ಸಮಸ್ಯೆ ಬಗೆಹರಿದು ಅವರಿಬ್ಬರು ಮದುವೆಗೆ ಒಪ್ಪಿ ತಮ್ಮ ಮದುವೆಯ ಕರೆಯೋಲೆಯನ್ನು fbಯಲ್ಲಿ ಹಾಕಿ ಶುಭಾಷಯಗಳನ್ನು ಪಡೆಯುವ ಮೂಲಕ ಈ fb ಪರಿಣಯ ಮುಗಿಯಿತಂತೆ. ಈಗ ಇಬ್ಬರ profile picture ಅವರ ಮದುವೆಯ ಫೋಟೋನಂತೆ. ಹುಚ್ಚಲ್ಲ ಬೆಪ್ಪಲ್ಲ ಎಲ್ಲ fb ಲೀಲೆ!! ನೀವೇನಂತೀರಿ?

Comments

Submitted by venkatb83 Mon, 06/17/2013 - 16:23

ಹೇಮಾ ಅವರೇ ಫೇಸ್ಬುಕ್ ಇಂದು ಜಗತ್ತಿನಾದ್ಯಂತ ಜನಪ್ರಿಯವಾಗಿ ಹಲವು ಜನರನ್ನು ನಿಯಂತ್ರಿಸುತ್ತಿದೆ -ಇದು ಕಹಿ ಸತ್ಯ ..' ಫೇಸ್ಬುಕ್ ಎಲ್ಲರಿಗೂ ಸಹಾಯಕಾರಿ ಉಪಯೋಗಕಾರಿ - ಅರಿಯದೆ ಉಪಯೋಗಿಸಿದರೆ ಆಘಾತಕಾರಿ -ಅಪಾಯಕಾರಿ ಕೂಡ ..!! ಫೇಸ್ಬುಕ್ ಬಗ್ಗೆ ಇರುವ ದಂಥ ಕಥೆಗಳು - ಜೋಕುಗಳಿಗೆ ಕಡಿಮೆ ಇಲ್ಲ .. ನೋಡಿ ಇಲ್ಲಿ http://www.myindiap… http://blog.thought… http://businessboom… http://politicalhum… >>ಫೆಸ್ಬುಕ್ಕು ಮೂಲಕ ಪರಿಚಯವಾಗಿ ಪ್ರಣಯವಾಗಿ ಮದುವೆ ಆಗಿ ಸುಖವಾಗಿರುವವರು ಇರುವರು - ಕಡಿಮೆ ...! >>>ಅಲ್ಲಿ ಪತ್ತೆದಾರಿಕೆ ಮಾಡಿ ಪರಸ್ಪರರ ಹುಳುಕು ಬಯಲ್ಗೆ ಬಿದ್ದು ದಾಂಪತ್ಯಗಳು ಮುರಿದಿವೆ .. ;(( >>>>ಪೊಲೀಸರು ಕೆಲ ಸಣ್ಣ ಪುಟ್ಟ ದೊಡ್ಡ ಕಳ್ಳರನ್ನು ಪತ್ತೆ ಹಚ್ಚಿದ್ದು ಇಲ್ಲಿಯೇ ,...!! <<<<ಕೆಲವೊಮ್ಮೆ ಕೆಲವರ ಸ್ಟೇಟಸ್ -ನೋಡಿ ಕಳ್ಳರು ಕನ್ನ ಹಾಕಿದ್ದು ಉಂಟು ( ನಾವ್ ನಾಳೆ ಊಟಿಗೆ ಹೋಗ್ತಿದಿವಿ ಅಂತ ಸ್ಟೇಟಸ್ ಅಪ್ಡೇಟ್ ಮಾಡಿರುವವರು ತಮ್ಮ ಅಡ್ದ್ರೆಸ್ಸು ಸಹಾ ಕೊಟ್ಟಿರುವರು ).. >>>>>ಫೇಸ್ಬುಕ್ ರಿಹ್ಯಾಬ್ ಸೆಂಟರ್ ತೆಗೆಯುವ ಅವಶ್ಯಕತೆ ಬರಲಿದೆ .. !! ಮಿತವಾಗಿ ಹಿತವಾಗಿ ಬಳಸಿದರೆ ಫೇಸ್ಬುಕ್ ಈಗಲೂ ಮುನ್ದೋಒ ಎಂದೂ ಉಪಯೋಗಕಾರಿ .... >>> ಅಂದ್ ಹಾಗೆ ಈ ಬರಹ ವಿಶೇಷವಾಗಿ ನನ್ನನ್ನು ಸೆಳೆದದ್ದು ಇದರ ಬರಹದ ಹೂರಣ (ಫೇಸ್ಬುಕ್ ಪ್ರೀತಿ )ಕಾರಣಕ್ಕಾಗಿ ಮತ್ತು ನಮ್ಮದು ಫೇಸ್ಬುಕ್ನಲಿ ಉಂಟಾದ ಪ್ರೀತಿ ..!! ಆ ಬಗ್ಗೆ ನಾನೇ ಒಂದು ಬರಹ ಬರೆವ ಇರಾದೆ ಇತ್ತು -ಆದರೆ ಈಗ ನೀವೇ ಬರೆದಿರುವಿರಿ .. !!! ಶುಭವಾಗಲಿ \। /