ಕಾಲದ ಅರಿವು.
ಏಪ್ರಿಲ್ ತುಷಾರ, ೨೦೦೭ ಯುಗಾದಿಯ ವಿಶೇಷಸಂಚಿಕೆ. ಅದು ಕಾಲಕ್ಕೆ ಮೀಸಲಾಗಿರುವ ಅನೇಕ ರೋಚಕ ಸತ್ಯಗಳನ್ನು ಹೊರಗೆಡಹಿದೆ. ಅವೇನು ಹೊಸ ಸತ್ಯಗಳಲ್ಲ. ವರುಷ ವರುಷವೂ ನಾವು ಅನುಭವಿಸುವ ನಮ್ಮ ಜೀವನದ ಕಾಲ ಪರಿಧಿಯ ಒಂದು ಸಮಗ್ರ ನೋಟವನ್ನು ಈ ಬಾರಿಯೂ ಪುನಃ ಓದಬಹುದು. ಸಂಪಾದಕೀಯ ಯುಗಾದಿಯ ಸಮಯದಲ್ಲಿ ಕಾಲಗಣನೆ, ಜ್ಯೋತಿಷದ ಸಂವೇದನೆಗಳು ಸಂಚಿಕೆಯಲ್ಲಿ ಪ್ರಧಾನವಾದ ವಿಷಯಗಳು. ಮೊದಲ ಪುಟದಲ್ಲಿ ಸಂಪಾದಕೀಯ ಹೇಳುವುದು ಸಮಯೋಚಿತವಾಗಿದೆ. ಕಾಲವನ್ನು ತನ್ನ ತೆಕ್ಕೆಯೊಳಗಿರಿಸಿರುವೆವೆಂದು ಬೀಗಿದವರು ವಿಶ್ವದಾದ್ಯಂತ ಅದೆಷ್ಟೋ ಮಂದಿ. ಆದರೆ ಯಾರಿಗೂ ಕಾಲ, ತನ್ನ ರಹಸ್ಯದ ಸುಳಿವನ್ನು ಕೊಟ್ಟಿಲ್ಲ. ಅದನ್ನು ಅದು ಕೊಡುವುದೂ ಇಲ್ಲ. ಆದರೆ ಯುಗಾದಿ ಒಂದು ಪರ್ವಕಾಲವಲ್ಲವೇ ? ಅಂದು ನಾವೆಲ್ಲಾ ಕುಳಿತು ಮತ್ತೆ ಆ ಕಾಲನ, ಮಾಯಾಜಾಲದ ಪರಿವೆಯನ್ನು ಸ್ಮರಿಸಿಕೊಳ್ಳೋಣ. ಮಾನವನ ಅನುಭವಗಳ ಸರಣಿಯನ್ನು ಸಕ್ರಮವಾಗಿ ಪೋಣಿಸುವ ಒಂದು ದಾರ -ಕಾಲ. ನಮ್ಮ ನಿತ್ಯಜೀವನದ ವ್ಯವಹಾರಗಳಲ್ಲಿನ ಕ್ಷಣಗಳನ್ನು ಕಾಲದ ಮೂಲಧಾತುಗಳೆಂದು ಪರಿಗಣಿಸುತ್ತೇವೆ ನಾವು. ನಮ್ಮ ಜೀವನದ ಪ್ರತಿ ಕ್ಷಣವೂ ಒಂದಲ್ಲ ಒಂದು ಘಟನೆಯಿಂದ ಜೀವಂತವಾಗಿಯೇ ಇರುತ್ತದೆ. ಆದರಿಂದ ಎಕಮುಖದ ನಿತ್ಯನೂತನವೆನ್ನುವಂತೆ ತೋರುವ ಈ ಕಾಲಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ನಾವು ಇದನ್ನು ಭೂತಕಾಲ, ವರ್ತಮಾನಕಾಲ, ಮತ್ತು ಭವಿಷ್ಯತ್ ಕಾಲವೆಂದು ಗುರುತಿಸುತ್ತೇವೆ. ಭವಿಷ್ಯತ್ ಕಾಲ ವರ್ತಮಾನಕಾಲದ ಮುಲಕವೇ ಭೂತಕ್ಕೆ ಜಾರುವುದರಿಂದ ಮಾನವನ ದೃಷ್ಟಿ, ಸದಾ ವರ್ತಮಾದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದೇ ಸರಿಯಾಗಿದೆ.
ಮಾನವ ತನ್ನ ಜ್ಞಾನದ ಪರಿಧಿಗೆ ತಕ್ಕಂತೆ ಕಾಲವನ್ನು ಲೆಕ್ಕಹಾಕತೊಡಗಿದನು. ಕಾಲವನ್ನು ಈ ಮಾನವ ಪ್ರಪಂಚದಲ್ಲಿ ಗ್ರಹಗಳ ಚಲನೆಯ ಲೆಕ್ಕಾಚಾರದಿಂದ, ವಿಶೇಷ ಸಿದ್ಧಿಯಿಂದ, ಕಾಲಜ್ಞಾನದಿಂದ, ದೇಹಶಾಸ್ತ್ರದಿಂದ ಭವಿಷ್ಯಹೇಳುವ ಜನವರ್ಗದಿಂದ ಈ ವಿದ್ಯೆಯನ್ನು ಪೂರ್ಣಗೊಳಿದಿಸ್ದಾತ ಪ್ರಾಂಆಣಿಕನಾಗಿರುವಹ್ಟು ಕಾಲ ಎಲ್ಲವೂ ನಿರಾತಂಕವಾಗಿ ನಡೆಯುತ್ತದೆ. ಸ್ವಾರ್ಥ, ಅಸೂಯೆ, ದ್ವೇಷ, ಮಹತ್ವಾಕಾಂಕ್ಶೆ ಅಪೂರ್ಣ ಅಧ್ಯಯನ ಎಡತಾಕಿದಾಗ ಹೇಳುವ ಜ್ಯೋತಿಷ ಹಳಿತಪ್ಪುತ್ತದೆ. ಆಗ ಹೇಳುವವನ ಮನಸ್ಥಿತಿಯಿಂದಾಗಿ ಕೇಳುವವನಿಗೆ ಈ ವಿದ್ಯೆಯಮೇಲಿನ ನಂಬಿಕೆ ಕುಸಿಯುತ್ತದೆ. ಇಲ್ಲಿ ಇನ್ನೊಂದು ವಿಷಯವನ್ನು ಪರಿಗಣಿಸುವುದು ಮುಖ್ಯ. ನಮಗೆ ಸಿಕ್ಕಿರುವ, ಕಲಿತಿರುವ ವಿದ್ಯೆಯ ಸಹಾಯದಿಂದ ಸರಿ-ತಪ್ಪುಗಳನ್ನು ನಾವು ನಿರ್ಧರಿಸಲು ಸಮರ್ಥರಾಗಿದ್ದೇವೆ. ವಿಜ್ಞಾನದ ಹಲವು ತಥ್ಯಗಳು ಸತ್ಯಕ್ಕೆ ಸಮೀಪ ಹಾಗೂ ಅದನ್ನು ಯಾರು ಬೇಕಾದರೂ ಪುನರಾವರ್ತಿಸಿ ಅದೇ ಫಲಿತಾಂಷಗಳನ್ನು ಪಡೆಯಬಹುದು. ಅಂದಮಾತ್ರಕ್ಕೆ ನಮ್ಮ ದೇಶದ ಕಾಲನಿರ್ಣಯದ ಪರಿಕರಗಳು ಸಮರ್ಪಕವಾದದ್ದಲ್ಲ ಎಂದು ಯಾರೂ ಹೇಳುತ್ತಿಲ್ಲ. ಅವುಗಳ ವ್ಯಾಪ್ತಿ , ಸೀಮಿತ ಎಂದು ಮಾತ್ರ ಇಲ್ಲಿ ಹೇಳಬಹುದು.
ಬೆಂಗಳೂರಿನ ಗಾಯತ್ರಿಮೂರ್ತಿ ಮತ್ತು ಎಸ್. ಪಿ. ಶ್ಯಾನಭಾಗರು ತಮ್ಮ ಲೇಖನಗಳಲ್ಲಿ ಕಾಲಕ್ಕೆ ತಕ್ಕಂತೆ ನಮ್ಮ ಮಾರ್ಪಾಟು ಹೇಗಿರಬೇಕು, ಹಾಗೂ ಕಾಲದ ಅರಿವು ಎಷ್ಟು ಮುಖ್ಯ ಎನ್ನುವುದನ್ನು ಸೊಗಸಾಗಿ ತಿಳಿಯಹೇಳಿದ್ದಾರೆ. ವರ್ತಮಾನದ ಮಹತ್ವವನ್ನು ಅಮಿತಾಬ್ ಬೇಚ್ಚನ್ ರವರ ಹೆಳಿಕೆಯೊಂದರಿಂದ ಪ್ರಾರಂಭಿಸುತ್ತಾರೆ. ಇದರ ಜೊತೆಗೆ ಚಿಂತನಶೀಲರು ಕಾಲವನ್ನು ಕಂಡ ಬಗೆ, ಈ ಲೇಖನಕ್ಕೆ ಸರಿಯಾಗಿ ಒಪ್ಪುತ್ತದೆ.
ಜ್ಯೋತಿಷದ ಬಗ್ಗೆ ಭಾರತೀಯರಿಗೆಲ್ಲ ಅತೀವ ಗೌರವ. ಅದಕ್ಕೆ ಎರಡು ಮಾತಿಲ್ಲ. ಆದರೆ ಜ್ಯೋತಿಷದ ಪರಿಣಾಮಗಳನ್ನು ಕುರಿತು ಅವರವರ ಅಭಿಪ್ರಾಯಗಳು ಅವರವರದೇ ಆಗಿರುವುದರಿಂದ, ಬೇರೆಯವರು ಅವರ ಅಭಿಪ್ರಾಯಗಳನ್ನು ಗೌರವಿಸುತ್ತಾರೆ. ಎಲ್ಲರ ಅಭಿಪ್ರಾಯಗಳೂ ಒಂದೇ ಎಂದು ಹೇಳುವುದು ಕಠಿಣ !
ನಮ್ಮಲ್ಲೇ ಕೆಲವು ವ್ಯಕ್ತಿಗಳು ಜೀವನ ರಂಗದಲ್ಲಿ ಸ್ವಲ್ಪ ಯಶಸ್ಸನ್ನು ಹೊಂದಿ ನಮಗೆ ಹೇಳುವ ತಿಳುವಳಿಗೆ ಸ್ಥಿತಿಯಲ್ಲಿದ್ದಾರೆ. ಅವರೇನು ಹೇಳುತ್ತಾರೆ ನೋಡುವ !
'ಸಮಯದ ಉಪಯೋಗವನ್ನು ಬುದ್ಧಿವಂತಿಕೆಯಿಂದ ಮಾಡಿ. ಸೂಕ್ತ ಕೆಲಸಕ್ಕಾಗಿ ಸೂಕ್ತ ಸಮಯದ ನಿರೀಕ್ಷೆ ಮಾಡುವುದೇ ಜಾಣತನದ ಲಕ್ಷಣ.- ನೆಲ್ಸನ್ ಮಂಡೇಲ.
ಸಮಯದ ಉಪಯೋಗವನ್ನು ಸದಾ ಒಂದು ಸಲಕರಣೆಯಂತೆ ಮಾಡಿಕೊಳ್ಳಿ. ಆದರೆ ಆರಾಮದಾಯಕ ಉಪಕರಣದಂತಲ್ಲ. -ಜಾನ್ ಎಫ್. ಕೆನಡಿ.
ಕಳೆದು ಹೋದ ಅಮೂಲ್ಯ ಸಮಯ ಮತ್ತೆಂದೂ ತಿರುಗಿ ಬಾರದು- ಬೆಂಜಮಿನ್ ಫ್ರಾಂಕ್ಲಿನ್
ಸಮಯ ಸರಿದು ಹೋಯಿತು ಎಂದು ನೀನು ಹೇಳುತ್ತಿ. ಆದರೆ ಸಮಯ ಇಲ್ಲೇ ಇದೆ. ನೀನೇ ಸರಿದು ಹೋಗಿಬಿಟ್ಟೆ.- ಡಾಬ್ಸನ್
ಕಳೆದು ಹೋದ ಕ್ಷಣಗಳಲ್ಲಿ ಜೀವಿಸಬೇಡ. ಭವಿಷ್ಯದ ಕನಸು ಕಟ್ಟಬೇಡ. ನೀನು ವರ್ತಮಾನದ ಕ್ಷಣಗಳಲ್ಲಿ ಜೀವಿಸಲು ಯೋಗ್ಯನಾಗಿಸಿಕೋ- ಗೌತಮ ಬುದ್ಧ.
1. ಕಾಲವನ್ನು ತಡೆಯೋರು... ಗಾಯತ್ರಿ ಮೂರ್ತಿ, ಬೆಂಗಳೂರು [ಪುಟ ೨೫] ಚೆನ್ನಾಗಿದೆ.
ಕಾಲದ ಸ್ವರೂಪ ಯಾರಿಗೂ ಗೊತ್ತಿಲ್ಲ. ಆದರೆ ಒಂದು ಮಾತು ನಿಜ. ಕಾಲ ಒಬ್ಬ ಹರಿಕಾರನ ತರಹ, ಮುಂದೆ ಮುಂದೆ ಸಾಗುತ್ತಲೇ ಇರುತ್ತದೆ. ನಾವೆಲ್ಲ ಅದರ ಹಿಂದೆ ! ಕಳೆದ ಬಾಲ್ಯ, ಯೌವನ ತಿರುಗಿ ಬರುತ್ತದೆಯೇ ?
ಶ್ರೀ ಆದಿಶಂಕರರು ಹೇಳಿದಂತೆ ಕಾಲ 'ಜಗದ್ಭಕ್ಷಕ'. ಸಜೀವ ನಿರ್ಜೀವ ವಸ್ತುಗಳು- ಎಲ್ಲರ ಮೇಲೂ ತನ್ನ ಛಾಪನ್ನು ಹೇರುತ್ತಾ ಮುನ್ನಡೆಯುತ್ತದೆ.
ಕಾಲ ಕೆಡುತ್ತಿದೆಯೇ ?
ಇದನ್ನು ನಮಗೆ ಬುದ್ಧಿಬಂದಂದಾಗಿನಿಂದ ನಾವೆಲ್ಲ ಕೇಳುತ್ತಾ ಬಂದಿದ್ದೇವೆ. ಅದನ್ನು ನಮ್ಮ ಮಕ್ಕಳೂ ಕೇಳುವರೆಂಬ ಭರವಸೆ ನಮಗಿದೆ ! ವಿಶ್ವದ ಎಲ್ಲಾ ಇಷ್ಟ ಅನಿಷ್ಟಗಳನ್ನು ತನ್ನ ಕಾಲಗರ್ಭದಲ್ಲಿ ಹಾಕಿಕೊಳ್ಳುತ್ತಾ ಕಾಲ ಹೋಗುತ್ತಿರುತ್ತದೆ. ಕಾಲದ ಒಂದು ವಿಶೇಷಗುಣವನ್ನು ನಾವೆಲ್ಲಾ ಮೆಚ್ಚಬೇಕು. ಇಂದು ಎಲ್ಲರಿಗೂ ಬೇಡವಾದದ್ದು ಮುಂದೆ ಅದೇ ಪ್ರಿಯವಾಗುತ್ತದೆ. ನಮ್ಮ ಮನಸ್ತಾಪಗಳನ್ನು ಮರೆಯಲು ಮುಲಾಮಿನಂತೆ ಅದು ಕೆಲಸಮಾದುತ್ತದೆ. ಇದು ಕಾಲದ ಮಹಿಮೆಗಳಲ್ಲೊಂದು.
ಕಾಲದ ವಿವರಣೆ ; ಕಾಲವೆಂದರೇನು ?
ಯಾರಿಗೂ ಅದರ ಪ್ರತಿಪದಾರ್ಥ ಇಂದಿಗೂ ಸಿಕ್ಕಿಲ್ಲ. ಬಹುಶಃ ಕಾಲ ಮತ್ತು ಬದಲಾವಣೆ ಪೂರಕವಾದ ಪದಗಳಿರಬಹುದು.
ನಿಘಂಟು ಕಾಲದ ಬಗ್ಗೆ ಅವಧಿ [A period] ಯೆಂದಿದೆ. ಮತ್ತೆ ಅವಧಿ, ಯೆಂದರೆ ಕಾಲ. ಅದರ ಬದಲು ಕಾಲಮಾಪನ ಹೇಗೆ ಮಾಡಬೇಕು ಎನ್ನುವುದನ್ನು ತಿಳಿಯುವುದು ಸೂಕ್ತ.
ಕಾಲಕ್ಕೆ ಆದಿಯುಂಟೆ ?
ವಿಶ್ವವು ಹುಟ್ಟಿನಿಂದಲೂ ಕಾಲವಿದೆ. Big Bang 'ಮಹಾಸ್ಪೊಟ'ದ ದಂತರ ಕಾಲದ ಕಲ್ಪನೆ ಬಂದಿರಬಹುದು.
ಕಾಲ ನಿರಪೇಕ್ಷಕ ವಾದುದು [Absolute ] ಎಂದು ಖ್ಯಾತ ವಿಜ್ಞಾನಿ ಐಸಾಕ್ ನ್ಯೂಟನ್ ಹೇಳಿದರೆ, ಇಪ್ಪನೆಯ ಶತಮಾನದ ಮೇಧಾವಿ ಯೆಂದೇ ಗುರುತಿಸಲ್ಪಟ್ಟ ವಿಜ್ಞಾನಿ ಆಲ್ಬರ್ಟ ಐನ್ ಸ್ಟೈನ್, ೧೯೦೫ ಅಲ್ಲಿ ತನ್ನ ಸಾಪೇಕ್ಷವಾದ ಮಂಡಿಸಿ, ಮೊದಲಿನ ಕಾಲದ ಪರಿಕಲ್ಪನೆಯನ್ನು ಬುಡಮೇಲು ಮಾಡಿತು. ನಾವು ನಮ್ಮ ಜೀವನದಲ್ಲಿ ಸಾಪೇಕ್ಷತೆಯ ಅನುಭವವನ್ನು ಕಾಣುತ್ತೇವೆ. ಉದಾ: ಟ್ರಾಫಿಕ್ ಸಿಗ್ನಲ್ ನಲ್ಲಿ ಕೇವಲ ೧೨೦ ಸೆಕೆಂಡ್ ನಿಂತಾಗಲೂ ನಮಗೆ ಪ್ರತಿಸೆಕೆಂಡ್ ಹೋಗುವುದೂ ಅತಿ ಕಷ್ಟವಾಗಿ ಕಾಣುತ್ತದೆ. ಅದೇ ಪ್ರಿಯತಮ[ತಮೆ]ಯ, ಬರುವಿಕೆಯನ್ನು ಇದಿರು ನೋಡುವಾಗ ನಮಗೆ ಆಶ್ಚರ್ಯವಾಗುತ್ತದೆ. ಪ್ರತಿ ಕ್ಷಣವನ್ನು ಅವರು ತಮ್ಮ ಗಡಿಯಾರದಲ್ಲಿ ನಿರೀಕ್ಷಿಸುವುದನ್ನು ನಮಗೆ ನೋಡಲು ಸಾಧ್ಯವಿಲ್ಲ. ಸ್ಟೀಫನ್ ಹಾಕಿಂಗ್ ಕೂಡ ತಮ್ಮ ಪುಸ್ತಕ 'A Brief History of Time' ನಲ್ಲಿಪ್ರತಿಪಾದಿಸುತ್ತಾರೆ. ವರ್ತಮಾನದಲ್ಲಿರುವ ನಾವು ಭೂತ ಕಾಲಕ್ಕೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಆದರೆ, ಭವಿಷ್ಯಕಾಲ ಮಾತ್ರ ತಂತಾನೇ ಬದ್ಲಾಗುತ್ತಾ ಹೋಗುತ್ತದೆ. ಒಟ್ಟಿನಲ್ಲಿ ಮೇಲಿನ ಎಲ್ಲಾ ಮಾತಿನ ಸಾರಾಂಷ ಹೀಗಿರಬಹುದೇ ?
೧. ಕಾಲದ ಅರಿವಾಗಿರುವ ನಮಗೆ ನಾವು ಹಿಂದೆ ಎಸಗಿದ ದುಷ್ಕೃತ್ಯಗಳನ್ನು ಮತ್ತೆ ಮರುಕಳಿಸದಂತೆ ಶ್ರದ್ಧೆ ವಹಿಸುವ ಅಗತ್ಯವಿದೆ.
೨. ವರ್ತಮಾನದ ಮುಷ್ಟಿಯಲ್ಲಿರುವ ನಾವು ಭವಿಷ್ಯತ್ ಕಾಲವು ನಮ್ಮ ಪಾಲಿಗೆ ಏನನ್ನು ನೀಡಬಲ್ಲದು ಎಂಬುದನ್ನು ಪ್ರತಿ ಕ್ಷಣವೂ ನಿರೀಕ್ಷಿಸುತ್ತಿದ್ದು, ನಮಗೆ ಒಳಿತೇ ಸಂಭವಿಸಲಿ ಎಂದು ಆಶಿಸುವುದನ್ನು ಮಾತ್ರ ಮಾಡಬಹುದು ಅಷ್ಟೆ.
2. ಲಹರಿ- ಕಾಲ-ಮಾನ ಎಸ್. ಪಿ ಶ್ಯಾನಭೋಗ್ [ಪುಟ ೧೫೦]
" ಬದುಕಿನ ಅತ್ಯುತ್ತಮ ಕಾಲವೆಂದರೆ ವರ್ತಮಾನಕಾಲ. ಹಾಗಂತ ಅಂದುಕೊಳ್ಳುವುದು ಒಳ್ಳೆಯದು. ಒಳ್ಳೆಯ ಕಾಲ ಗತಿಸಿಹೋಯಿತು ಅಂದುಕೊಂಡರೆ ಬೇಸರವಾಗುತ್ತದೆ. ಒಳ್ಳೆಯ ಕಾಲ ಎಂದೋ ಬರಲಿದೆ ಎಂದರೆ ಕಾಯಬೇಕಾಗುತ್ತದೆ.- ಅಮಿತಾಬ್ ಬಚ್ಚನ್.
ದಿನಬಳಕೆಯ ವಸ್ತುಗಳ ಬೆಲೆಯೇರಿಕೆ, ರಾಜಕೀಯ ಅವ್ಯವಸ್ಥೆ, ಲೂಟಿ, ದರೋಡೆ, ಜನರಲ್ಲಿ ಮೌಲ್ಯಗಳ ಕೊರತೆ, ಇವು ನಾವು ಒಬ್ಬರಬ್ಬರು ಬೆಟ್ಟಿಯಾದಾಗ ಚರ್ಚಿಸುವ ವಸ್ತು ವಿಶೇಷಗಳು.
೧. ಕಾಲ ಕೆಟ್ಟಿದೆ.
ಕಾಲ ಒಂದೇ ಇತ್ತು. ಮಾನವನ ಸ್ವಭಾವ ಬದಲಾಗುತ್ತಿದೆ. ಅದಕ್ಕೆ ಕಾರಣಗಳು ನೂರಾರು. ಹಿಂದಿನದೇ ಚೆನ್ನಾಗಿತ್ತು. ಈದಿನ ಬೇಸರ. ನಾಳೆಯೋ ದೇವರೇ ಬಲ್ಲ. ಕೆಲವು ಮಾತುಗಳು ಸತ್ಯಕ್ಕೆ ಹತ್ತಿರ. ನಮಗೆ ಹಣ ಸಿಕ್ಕಿದೆ. ವಿದ್ಯೆ ಸಿಕ್ಕಿದೆ. ಜೀವನ ಸಾಮಗ್ರಿಗಳು ಲಭ್ಯವಾಗಿವೆ. ವಿಜ್ಞಾನ ತಂತ್ರಜ್ಞಾನ ನಮ್ಮ ಜೀವನದಲ್ಲಿ ಗಮನಾರ್ಹ ಸುಲಭ್ಯಗಳನ್ನು ಒದಗಿಸಿದೆ. ದೂರವಾಣಿ ದೂರ ಸಂಚಾರಗಳಲ್ಲಿ ಒಂದು ಕ್ರಾಂತಿಯೇ ಆಗಿದೆ. ಎಲ್ಲವು ನಮ್ಮ ಬೆರಳಿನ ಅಡಿಯಲ್ಲಿರುವ ಗುಂಡಿ ಒತ್ತುತ್ತಿದ್ದಂತೆಯೇ, ನಮಗೆ ಹೇಳಿದ ಕೆಲಸಮಾಡಿ ಕೊಡುತ್ತವೆ. ಆದರೆ, ನಿಜವಾಗಿಯೂ ಇಂದು ನಾವು ಸುಖಿಗಳಾಗಿದ್ದೇವೆಯೇ ? ಇದು ಬಿಲಿಯನ್ ಡಾಲರ್ ಪ್ರಶ್ನೆ.
ಆದರೂ ನಾವು ಧ್ರುತಿಗೆಡಬೇಕಾಗಿಲ್ಲ. ನಿರ್ವೀರ್ಯರಾಗಬೇಕಾಗಿಲ್ಲ. ಪ್ರಪ್ರಥಮವಾಗಿ ನಾವು ನಮ್ಮ ಇತಿ-ಮಿತಿಗಳನ್ನು ಅರಿತುಕೊಳ್ಳಬೇಕು. ನಮ್ಮ ಅತಿ ಬಯಕೆಗಳಿಗೆ ಸಾಧ್ಯವಾದಷ್ಟು ಕಡಿವಾಣ ಹಾಕುವುದು ಒಳ್ಳೆಯದು. ಕಾಲಕ್ಕೆ ತಕ್ಕಂತೆ ಮರ್ಪಾಡಾಗುತ್ತ ಹೊಸತನ್ನು ಸಾಧ್ಯವಾದಷ್ಟುಮಟ್ಟಿಗೆ ಅಳವಡಿಸಿಕೊಳುತ್ತಾ ಹಳೆಯದನ್ನು [ಒಳ್ಳೆಯದನ್ನು] ನೆನೆಸಿಕೊಳ್ಳುತ್ತ ಸಾಗಿದರೆ ಬದುಕು ಹಸನಾಗುತ್ತದೆ.
ಇಂದಿನ ನೋವನ್ನು ಇಂದೇ ಸಹಿಸಿಕೊಳ್ಳಬೇಕು. ನಿನ್ನೆಯದಕ್ಕೆ ಅದನ್ನು ಸೇರಿಸಬಾರದು. ಅಷ್ಟೇ ಅಲ್ಲ. ನಾಳೆಯದನ್ನು ಇಂದೇ ಹೊರಲು ಪ್ರಯತ್ನಿಸಬಾರದು. ಏಕೆಂದರೆ ನಾಳೆ ಏನು, ಹೇಗೆ ಎನ್ನುವುದು ನಮಗೆ ಗೊತ್ತಿಲ್ಲ. ಯಾರಿಗೂ ಅದು ಅಗೋಚರ. ಆದ್ದರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದು ನಿಜವಾಗಿಯೂ ಮೂರ್ಖತನ. ಹಾಗೆಯೇ ಭವಿಷ್ಯದಿಂದ ಭೂತಕ್ಕೆ ಬರುವುದೂ ಅಸಾಧ್ಯ. ಆದರೆ ಭೂತದಿಂದ ಭವಿಷ್ಯಕ್ಕೆ ಹೋಗಬಹುದು. ಅಂದರೆ ಕಾಲವು ಸದಾ ಮುಂದಕ್ಕೆ ಸರಿಯುತ್ತಾ ಹೋಗುತ್ತಿರುತ್ತದೆ. ಯುವಕ, ಯುವತಿ ಮುದುಕ/ಮುದುಕಿಯರಾಗುತ್ತಾರೆ. ಸಾಧ್ಯವಾದಷ್ಟು ವರ್ತಮಾನದಲ್ಲಿ ಸಕ್ರಿಯವಾಗಿ ಬದುಕುವುದನ್ನು ಕಲಿಯೋಣ.
ನಾವು ಹೇಗೋ ಹಾಗೆ ನಮ್ಮ ಕಾಲವೂ ಕೂಡ. ತೀವ್ರವಾಗಿ ರೊಗಪೀಡಿತನಾಗಿರುವವನಿಗೆ ಒಂದೊಂದು ಗಳಿಗೆಯೂ ಯುಗದಂತೆ ಭಾಸವಾಗುತ್ತದೆ. ಮರಸುತ್ತುವ ಯುವ ಪ್ರೇಮಿಗಳಿಗೆ ಗಂಟೆಗಳೂ ಕ್ಷಣಮಾತ್ರದಂತೆ ಉರುಳಿಹೋಗುತ್ತದೆ. ಒಂದೊಂದು ಕಾಲದಲ್ಲಿ ಒಂದೊಂದು ರೀತಿಯಲಿ, ಒಂದೊಂದು ತರನಾದ ಸುಖವಿರುತ್ತದೆ, -ಹಾಗೆಯೇ ದುಃಖವೂ ಸಹಿತ.
ಏರುಯವ್ವನದಲ್ಲಿ ಡ್ರಮ್ ವಾದ್ಯದ ಗಡಚಿಕ್ಕುವ ಅಲೆಗಳ ಭೋರ್ಗರೆತ ಮೈ ಮನವನ್ನು ಮತ್ತೇರಿಸಿಕುಣಿದು ಕುಪ್ಪಳಿಸಲು ಪ್ರಚೋದಿಸಿದರೆ, ಅದೇ ವಾದ್ಯ ವೃದ್ಧಾಪ್ಯದಲ್ಲಿ ತಲೆ ಚಿಟ್ಟುಹಿಡಿಸುವ ಶಬ್ದವಾಗುತ್ತದೆ. ಆದ್ದರಿಂದ ಕಾಲ-ಕಾಲಕ್ಕೆ ಸಿಗುವ ಒಳ್ಳೆಯದನ್ನು ಸ್ವೀಕರಿಸಿ ಸುಖಿಸಬೇಕು. ವೃಥಾ ಕಾಲಹರಣ ಸಲ್ಲದು ಮತ್ತು ಅದರ ಸದ್ಬಳಕೆ ಬಹು ಮುಖ್ಯ. ನಾವು ಆಕಾಲಕ್ಕೆ ಸಹಜವಾಗಿ ಸ್ಪಂದಿಸಿ ನೆಮ್ಮದಿಯಿಂದ ನಮ್ಮ ಜೀವದ ಉಳಿದ ಕಾಲವನ್ನು ಸಕ್ರಿಯವಾಗಿ ಕಳೆಯೋಣ.