ಜಲಪಾತ

ಜಲಪಾತ

ಬರಹ

ಜರಿ ಜರಿಯಾಗಿ ಧರೆಗಿಳಿವ ರಮಣೀಯ ಜಲಧಾರೆ
ಬೆಳ್ಳನೆ ಬೆಳದಿಂಗಳೋಪಾದಿ ದುಮ್ಮುಕ್ಕಿ ಹರಿಯುತಿರೆ.
ದಟ್ಟಡವಿಯಲ್ಲಿ, ಬೆಟ್ಟದತಡಿಯಲ್ಲಿ ಸಾಗುತಿರೆ ಭರದಿ ಮುಂದೆ ಮುಂದೆ
ನಾ ಒಲ್ಲೆನೆನದೆ ಯಾರಿಗೂ, ಸೆಳೆದುಕೊಳ್ಳುತ್ತಾ ಎಲ್ಲವ ತನ್ನ ಹಿಂದೆ ಹಿಂದೆ.

ಕಡಲ ಮಡಿಲ ಸೇರುವಾಗ ನೀ ತಾಳಿದರೇನಿಲ್ಲ ರೌದ್ರವ ರೂಪವ ಅತಿಶಯೋಕ್ತಿ
ಆದರೂ ಅದು ಎನಿತು ಸಾಧ್ಯ ಪ್ರಶಾಂತವಾಗಿ ಹರಿವ ನಿನ್ನೀ ಆ ಶಕ್ತಿ.
ಬೋರ್ಗರೆವ ಮಳೆಯಂತೆ ನೀ ಸ್ರಸ್ಟಿಸುವೆ ಸುಂದರ ಜಲಪಾತ
ನಿನ್ನ ಭಾವನೆಗಳೇ ನೀರ ಹನಿಗಳಾಗಿ ನಿರ್ಮಿಸಿದೆ ಅಗಾಧ ಪ್ರಪಾತ.

ಕಣ ಕಣವಾಗಿ ತತ್ತರಿಸುತ್ತಿವೆ ತರಗೆಲೆಯಂತೆ ಸಿಕ್ಕಿ ಕಲ್ಲುಗಳ ನಡುವೆ
ನೋವ ಮರೆತೂ ನಿಂತು ನೀ ನಗುತಿರುವೆ ಕಾರಂಜಿಯ ಚಿಲುಮೆಯಂತೆ ಚೆಲುವೆ.
ಈ ಭಾವನೆಗಳೇ ಹೀಗೆ!, ಕೆಡಿಸುವದು ಪ್ರಶಾಂತವಾಗಿರುವ ಮನಸ್ಸ ನೀರವತೆ
ನಿಂತ ನೀರ ಕಲಕಿ ಅಲೆಯೆಬ್ಬಿಸುವ ಕಲ್ಲಿನಂತೆ.

ನಿನಗಿರುವ ಸಹನೆ, ಶಕ್ತಿ ನನಗೆಲ್ಲಿ? ಭಾವನೆಗಳ ಹಿಡಿತಕ್ಕೆ ಸಿಕ್ಕಿ ಬಳಲುತಿರೆ ನಾನು
ಎಲ್ಲವ ಸೇರಿಸಿ ತನ್ನ ಗರ್ಭದೊಳಗೆ, ಮತ್ತೆ ಮುಂದೆ ಹರಿದು ಬಳಕುತಿರೆ ನೀನು.
ಅಂಕು ಡೊಂಕಾಗಿ ಹರಿವ ನಿನ್ನ ನೋಡಲೊಂದು ಹಬ್ಬ ಆರಾಧಕನ ಕಣ್ಣಲ್ಲಿ
ನಿನ್ನ ನಿರ್ಮಲ ಮೈಯ ಮೇಲೊಂದು ನೀರ ಹನಿಯಾಗಿ ಹರಿಯುವಾಸೆ ನನ್ನಲ್ಲಿ.