೪೪. ಶ್ರೀ ಲಲಿತಾ ಸಹಸ್ರನಾಮ ೧೧೫ ರಿಂದ ೧೧೯ನೇ ನಾಮಗಳ ವಿವರಣೆ

೪೪. ಶ್ರೀ ಲಲಿತಾ ಸಹಸ್ರನಾಮ ೧೧೫ ರಿಂದ ೧೧೯ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೧೫-೧೧೯

Bhadrapriyā भद्रप्रिया (115)

೧೧೫. ಭದ್ರಪ್ರಿಯಾ

           ದೇವಿಯು ತನ್ನ ಕೃಪೆ ತೋರುವ ಕ್ರಿಯೆಯನ್ನು ಬಹುವಾಗಿ ಇಷ್ಟಪಡುತ್ತಾಳೆ; ಆಕೆಯು ತನ್ನ ಭಕ್ತರ ಮೇಲೆ ಆಶೀರ್ವಾದದ ಮಳೆಗರೆಯಲು ಕಾತುರಳಾಗಿದ್ದಾಳೆ. ಭಕ್ತರೆಂದರೆ ಈ ಮುಂಚಿತವಾಗಿ ಯಾವುದಾದರೊಂದು ವಿಧಾನದಿಂದ ಅವಳನ್ನು ಹೊಂದಲು ಪ್ರಯತ್ನಿಸುವವರು. ಕೃಪೆದೋರುವ ಕ್ರಿಯೆಯು ಆಕೆಯ ಪಾದಗಳಿಂದ ಮಾಡಲ್ಪಡುತ್ತದೆ.

Bhadramūrtiḥ भद्रमूर्तिः (116)

೧೧೬. ಭದ್ರಮೂರ್ತಿಃ

ದೇವಿಯು ಪವಿತ್ರತೆಯ ಮೂರ್ತರೂಪವಾಗಿದ್ದಾಳೆ (ನಾಮ ೨೦೦); ಏಕೆಂದರೆ ಆಕೆಯನ್ನು ನಾಮ ೯೯೮ರಲ್ಲಿ ’ಶ್ರೀ ಶಿವಾ’ ಎಂದರೆ ಮಂಗಳೆಯೆಂದು ಸಂಭೋದಿಸಲಾಗಿದೆ. ಬ್ರಹ್ಮವೊಂದೇ ಪವಿತ್ರವಾದದ್ದು, ಆದ್ದರಿಂದ ಆಕೆಯನ್ನು ಇಲ್ಲಿ ಬ್ರಹ್ಮವೆಂದು ಸಂಭೋದಿಸಲಾಗಿದೆ. ವಿಷ್ಣು ಸಹಸ್ರನಾಮವು ಕೂಡಾ ಮಂಗಳಾನಾಮ್ ಚ ಮಂಗಳಮ್ ಅಂದರೆ ಪವಿತ್ರದಲ್ಲಿ ಪವಿತ್ರನು ಎಂದು ಹೇಳುತ್ತದೆ. ಆಕೆಯ ರೂಪವೇ ಮಂಗಳಕರವಾದುದು. 

Bhakta-saubhāgya-dāyinī भक्त-सौभाग्य-दायिनी (117)

೧೧೭. ಭಕ್ತ-ಸೌಭಾಗ್ಯ-ದಾಯಿನೀ

          ದೇವಿಯು ತನ್ನ ಭಕ್ತರಿಗೆ ಸಂಪದವನ್ನು ಕರುಣಿಸುತ್ತಾಳೆ. ಅಗ್ನಿ ಪುರಾಣದಲ್ಲಿ ಸೌಭಾಗ್ಯ ಅಷ್ಟಕಂ ಎನ್ನುವ ಉಲ್ಲೇಖವಿದೆ. ಅವೆಂದರೆ ಕಬ್ಬು, ಅರಳೀ ಮರ, ಮೊಳೆಕೆಯೊಡದ ಜೀರಿಗೆ ಬೀಜಗಳು, ಕೊತ್ತಂಬರಿ, ಆಕಳ ಹಾಲು (ಮತ್ತದರ ರೂಪಾಂತರಗಳಾದ ಮೊಸರು, ಬೆಣ್ಣೆ ಮತ್ತು ತುಪ್ಪ),  ಹಳದಿಯಾದ ಎಲ್ಲಾ ವಸ್ತುಗಳು, ಹೂವುಗಳು ಮತ್ತು ಉಪ್ಪು. ಇವೆಲ್ಲಾ ಸೌಭಾಗ್ಯ ಮತ್ತು ಸಂಪತ್ತನ್ನು  ಸಂಕೇತಿಸುತ್ತವೆ.

          ಮುಂದಿನ ಮೂರು ನಾಮಗಳು ಭಕ್ತಿಯ ಕುರಿತಾಗಿ ಚರ್ಚಿಸುತ್ತವೆ.

Bhakti-priyā भक्ति-प्रिया (118)

೧೧೮. ಭಕ್ತಿ-ಪ್ರಿಯಾ

          ದೇವಿಯು ಭಕ್ತಿಯ ಬಗ್ಗೆ ಬಹಳ ಅಕ್ಕರೆಯುಳ್ಳವಳಾಗಿದ್ದಾಳೆ. ಶಿವಾನಂದ ಲಹರಿಯ ೬೧ನೇ ಶ್ಲೋಕವು (ಲಹರಿ ಎಂದರೆ ನೀರಿನಲ್ಲಿ ಏಳುವ ಅಲೆ) ಭಕ್ತಿಯ ಕುರಿತಾಗಿ ವಿವರಿಸುತ್ತದೆ. "ಯಾವ ರೀತಿ ಸೂಜಿಯು ಸೂಜಿಗಲ್ಲನ್ನು ಬಯಸುತ್ತದೆಯೋ, ಯಾವ ರೀತಿ ಲತೆಯು ಮರವನ್ನು ಬಯಸುತ್ತದೆಯೋ, ಯಾವ ರೀತಿ ನದಿಯು ಸಾಗರವನ್ನು ಸೇರುತ್ತದೆಯೋ ಅದೇ ರೀತಿ ಮನಸ್ಸು ಶಿವನ ಪಾದಪದ್ಮಗಳನ್ನು ಬಯಸುವುದನ್ನೇ ಭಕ್ತಿ ಎನ್ನುತ್ತಾರೆ". ನಾರದ ಮಹರ್ಷಿಗಳು, ಭಕ್ತಿ ಎನ್ನುವುದು ತ್ರಿಗುಣಗಳಾದ - ಸತ್ವ, ರಜೋ ಮತ್ತು ತಮೋ ಗುಣಗಳಿಗೆ ಅತೀತವಾದದ್ದು. ಅದು ಆಸೆಗೆ ಅತೀತವಾದದ್ದು ಮತ್ತು ಪ್ರತಿಕ್ಷಣವೂ ಅದು ಬೆಳೆಯುತ್ತಲೇ ಇರುತ್ತದೆ. ಅದು ಬ್ರಹ್ಮದೊಂದಿಗೆ ಸಂಭಂದ ಹೊಂದಿದೆ. ಅದು ಬಹಳ ಸೂಕ್ಷ್ಮವಾಗಿದ್ದು ಅದನ್ನು ಕೇವಲ ಅನುಭವಿಸಬಹುದಷ್ಟೇ. ಒಮ್ಮೆ ಅರಿವುಂಟಾದರೆ ಅವನು ಅದರಲ್ಲೇ ಸದಾ ತನ್ಮಯನಾಗುತ್ತಾನೆ, ಎಂದು ಹೇಳಿದ್ದಾರೆ. ಶ್ರೀ ರಾಮಕೃಷ್ಣರು, ಹರಿವನ್ನು ತಡೆಯಲು ಕಟ್ಟಲ್ಪಟ್ಟ ಆಣೆಕಟ್ಟುಗಳನ್ನು ದಾಟಿ ಸಾಗರವನ್ನು ಸೇರುವ ರಭಸವುಳ್ಳ ನದಿಯೊಂದಿಗೆ ಭಕ್ತಿಯನ್ನು ಹೋಲಿಸುತ್ತಾರೆ. ಅವರು ಮುಂದುವರಿಯುತ್ತಾ, "ನಮ್ಮ ಮನಸ್ಸು ಹರಿಯುತ್ತಿಲ್ಲ ಆದರೆ ಮಡುವಿನಲ್ಲಿ ನಿಂತ ನೀರಿನಂತಾಗಿದೆ. ನಮ್ಮ ಮನಸ್ಸು ಭಕ್ತಿಯಲ್ಲಿ ನಿಲ್ಲುವುದಲ್ಲದೆ ಪ್ರತಿ ಕ್ಷಣವೂ ಬೆಳೆಯುತ್ತಿರಬೇಕು" ಎಂದು ಹೇಳುತ್ತಾರೆ. ವಿವೇಕ ಚೂಡಾಮಣಿಯ ೩೧ನೇ ಶ್ಲೋಕವು ಹೀಗೆ ಹೇಳುತ್ತದೆ, "ಮುಕ್ತಿಗೆ ಸಾಧನವಾಗಿರುವ ಹಲವಾರು ವಸ್ತುಗಳಲ್ಲಿ, ಭಕ್ತಿಯೊಂದೇ ಅತ್ಯುನ್ನತ ಸ್ಥಾನವನ್ನು ಹೊಂದಿದೆ. ತನ್ನ ನಿಜವಾದ ಸ್ವರೂಪವನ್ನು ಅನ್ವೇಷಿಸುವುದನ್ನೇ ಭಕ್ತಿಯೆಂದು ನಿರ್ವಚಿಸಲಾಗಿದೆ. ಕೆಲವರು ತನ್ನನ್ನು ತಾನು ಅರಿಯುವ ಸತ್ಯಾನ್ವೇಷಣೆಯೇ ಭಕ್ತಿಯೆಂದು ಸಾರುತ್ತಾರೆ".

          ಒಟ್ಟಾರೆಯಾಗಿ ಈ ನಾಮವು ಹೇಳಹೊರಟಿರುವುದೇನೆಂದರೆ, ನಿಜವಾದ ಭಕ್ತನಿಗೆ ಯಾವುದೇ ರೀತಿಯ ಅಡೆತಡೆಗಳು ತಾಯಿಯನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ಅಡ್ಡಿಯಾಗುವುದಿಲ್ಲ. ಆಕೆಯು ಅಂತಹ ಭಕ್ತಿ ಮತ್ತು ಭಕ್ತರ ಬಗ್ಗೆ ಸಂತೋಷಗೊಳ್ಳುತ್ತಾಳೆ. ಭಕ್ತರೆಂದರೆ ತನ್ನೊಳಗೆ ಅಡಗಿರುವ ಆಕೆಯನ್ನು ಮನಸ್ಸಿನ ಮೂಲಕ ಹೊಂದುವುದೇ ಆಗಿದೆ.

Bhakti-gamyā भक्ति-गम्या (119)

೧೧೯. ಭಕ್ತಿ-ಗಮ್ಯಾ

          ಆಕೆಯು ಕೇವಲ ಭಕ್ತಿಯಿಂದ ಮಾತ್ರವೇ ಹೊಂದಲ್ಪಡುತ್ತಾಳೆ. ಹಿಂದಿನ ನಾಮದಲ್ಲಿ ನೋಡಿದಂತೆ, ಆಕೆಯು ಶುದ್ಧವಾದ ಭಕ್ತಿಯನ್ನು ಇಷ್ಟಪಡುವುದರಿಂದ; ದೇವಿಯನ್ನು ಆ ರೀತಿಯ ಭಕ್ತಿಯಿಂದ ಮಾತ್ರವೇ ಹೊಂದಬಹುದು. ಉಪನಿಷತ್ತುಗಳು ಭಕ್ತಿಯನ್ನು ವಿಶೇಷವಾಗಿ ವಿವರಿಸುತ್ತವೆ.

           ಬ್ರಹ್ಮಸೂತ್ರವು (೩.೨.೨೪) ಹೀಗೆ ಹೇಳುತ್ತದೆ, "ಬ್ರಹ್ಮವು ಸಮಾಧಿ ಸ್ಥಿತಿಯಲ್ಲಿ ಅನುಭವಕ್ಕೆ ಬರುತ್ತದೆ, ಪ್ರತ್ಯಕ್ಷ ಅನಾವರಣಗೊಳ್ಳುವಿಕೆ ಮತ್ತು ವಿಶ್ಲೇಷಣೆಯ ಮೂಲಕ ತಿಳಿದಂತೆ". (ಇಲ್ಲಿ ಬ್ರಹ್ಮದ ಕುರಿತಾಗಿ ಗುರುವು ತಿಳಿಸಿ ಕೊಡುತ್ತಾನೆ ಮತ್ತು ಗುರುವಿನ ಮಾತಿನಲ್ಲಿ ವಿಶ್ವಾಸವಿರಿಸಿ ಗುರುವಿನ ಆಣತಿಯಂತೆ ನಡೆದುಕೊಂಡಾಗ ಶಿಷ್ಯನಿಗೆ ಗುರುವು ತಿಳಿಸಿದ ಪ್ರಕಾರ ಬ್ರಹ್ಮವು ಅನಾವರಣಗೊಳ್ಳುತ್ತದೆ ಮತ್ತು ಗುರುವು ವಿಶ್ಲೇಷಣೆಯ ಮೂಲಕ ತಿಳಿಸಿಕೊಟ್ಟಂತಹ ಬ್ರಹ್ಮದ ಸಾಕ್ಷಾತ್ಕಾರವುಂಟಾಗುತ್ತದೆ. ಒಮ್ಮೆ ಆತ್ಮಸಾಕ್ಷಾತ್ಕಾರವಾದಾಗ ಕೂಡಲೇ ಶಿಷ್ಯನಿಗೆ ತಾನೇ ಸ್ವಯಂ ಬ್ರಹ್ಮವೆನ್ನುವುದರ ಅರಿವುಂಟಾಗುವುದಲ್ಲದೇ ತನ್ನ ಸುತ್ತಲಿರುವ ಎಲ್ಲದೂ ಸಹ ಬ್ರಹ್ಮವೇ ಎನ್ನುವುದು ಅನುಭವಕ್ಕೆ ಬಂದು ಅವನು ಬ್ರಹ್ಮದ ದೃಷ್ಟಿಯಿಂದ ಈ ಪ್ರಪಂಚವನ್ನು ನೋಡುತ್ತಾನೆ ಅಥವಾ ಅವನಿಗೆ ಬ್ರಹ್ಮಾನುಭವವಾಗುತ್ತದೆ).

          ಛಾಂದೋಗ್ಯ ಉಪನಿಷತ್ತು (೨.೨೩.೧) ಹೀಗೆ ಹೇಳುತ್ತದೆ, "ಬ್ರಹ್ಮಸ್ಮಸ್ತೋಮೃತತ್ವಮೇತಿ" ಅಂದರೆ ಒಬ್ಬನು ಬ್ರಹ್ಮಕ್ಕೆ ನಿಷ್ಠನಾಗಿದ್ದನಲ್ಲಿ ಅವನು ಅಮೃತತ್ವವನ್ನು ಹೊಂದುತ್ತಾನೆ. ಅಮೃತತ್ವವನ್ನು ಹೊಂದುವುದೆಂದರೆ ಸಾಯುಜ್ಯವನ್ನು ಹೊಂದುವುದು (ನಾಮ ೧೧೨ರಲ್ಲಿ ಚರ್ಚಿಸಿದಂತೆ). ಇದು ಕೇವಲ ಭಕ್ತಿಯ ಮೂಲಕವಷ್ಟೇ ಸಾಧ್ಯವಾಗುತ್ತದೆ.

          ಕಠ ಉಪನಿಷತ್ತು (೨.೧.೧.) ಹೀಗೆ ಹೇಳುತ್ತದೆ, "ಸ್ವಯಂ ಸೃಷ್ಟಿಗೊಂಡ ದೇವರು, ನಮಗೆ ಹೊರಹೋಗುವ ಅಂತರ್ಗತ ದೋಷಗುಣ ಹೊಂದಿರುವ ಗ್ರಹಣೇಂದ್ರಿಯಗಳನ್ನೂ ಸೃಷ್ಟಿಸಿದ್ದಾನೆ. ಆದ್ದರಿಂದ ಜೀವಿಗಳು ಹೊರಗಿನ ವಸ್ತುಗಳನ್ನಷ್ಟೇ ನೋಡಲು ಸಾಧ್ಯವಾಗುತ್ತದೆ ಮತ್ತು ತನ್ನೊಳಗಿರುವ ಅಂತರಾತ್ಮವನ್ನು ಗ್ರಹಿಸಲು ಸಾಧ್ಯವಿಲ್ಲ.

          ತೈತ್ತರೀಯ ಉಪನಿಷತ್ತು (೨.೧) ಹೀಗೆ ಹೇಳುತ್ತದೆ, "ಸತ್ಯಂ, ಜ್ಞಾನಂ, ಅನಂತಂ ಬ್ರಹ್ಮಮ್" ಅಂದರೆ ಸತ್ಯವಾದದ್ದು, ಜ್ಞಾನವುಳ್ಳದ್ದು ಮತ್ತು ಅನಂತವಾದದ್ದೇ ಬ್ರಹ್ಮವು.

ಪತಂಜಲಿಯು ತನ್ನ ಯೋಗಸೂತ್ರದಲ್ಲಿ (೧.೨೩) ಹೀಗೆ ಹೇಳುತ್ತಾನೆ, "ಈಶ್ವರಪ್ರಣಿಧಾನಾದ್ವಾ" ಅಂದರೆ ಈಶ್ವರನಲ್ಲಿ ಭಕ್ತಿಯಿಡುವುದರಿಂದಲೂ ಸಮಾಧಿ ಮತ್ತು ಕೈವಲ್ಯಗಳನ್ನು ಹೊಂದಬಹುದು".

          ಇದನ್ನೇ ಕೃಷ್ಣನೂ ಭಗವದ್ಗೀತೆಯಲ್ಲಿ (೨೮.೫೫) ಹೀಗೆ ಹೇಳುವುದರೊಂದಿಗೆ ಅನುಮೋದಿಸುತ್ತಾನೆ, "ಒಬ್ಬನು ಭಕ್ತಿ ಮಾರ್ಗದ ಮೂಲಕ ನನ್ನನ್ನು ತಿಳಿಯಬಹುದು ಮತ್ತು ಅಂತಹ ಭಕ್ತಿಯಿಂದ ಯಾವಾಗ ನನ್ನ ಬಗ್ಗೆ ಪೂರ್ಣ ಪ್ರಜ್ಞೆಯನ್ನು ಹೊಂದುತ್ತಾನೆಯೋ ಆವಾಗ ಅವನು ನನ್ನ ರಾಜ್ಯವನ್ನು ಪ್ರವೇಶಿಸಬಹುದು". "ಕೇವಲ ಅಕುಂಠಿತ ಭಕ್ತಿಯಿಂದ ಮಾತ್ರವೇ ನನ್ನ ಮೂಲ ಸ್ವರೂಪವನ್ನು ತಿಳಿಯಬಹುದು........ಮತ್ತು ನನ್ನನ್ನು ಹೀಗೆ ಪ್ರತ್ಯಕ್ಷವಾಗಿ ನೋಡಬಹುದು.......” (ಭಗವದ್ಗೀತೆ, ೧೧.೫೪).

          ಲಲಿತಾ ತ್ರಿಶತಿಯ ೧೯೨ನೇ ನಾಮವೂ ಕೂಡಾ ಅವಳನ್ನು ಕೇವಲ ಭಕ್ತಿಯಿಂದ ಮಾತ್ರವೇ ಹೊಂದಬಹುದು ಎಂದು ಹೇಳುತ್ತದೆ.

ಭಕ್ತಿಯ ಕುರಿತಾಗಿ ಇನ್ನಷ್ಟು ವಿವರಗಳು:

ಬ್ರಹ್ಮವನ್ನು ಭಕ್ತಿ ಮಾರ್ಗದ ಮೂಲಕವಾಗಲಿ ಅಥವಾ ಜ್ಞಾನ ಮಾರ್ಗದ ಮೂಲಕವಾಗಲಿ ಅರಿಯಬಹುದು. ಭಕ್ತಿ ಮಾರ್ಗದಲ್ಲಿ ದೈವಕೃಪೆಯು ನಿಶ್ಚಿತವಾಗಿ ಇರಬೇಕು. ಆದರೆ ಜ್ಞಾನ ಮಾರ್ಗವನ್ನು ಅನುಸರಿಸುವಾಗ ಮೂಲಭೂತವಾಗಿ ಸ್ವಪ್ರಯತ್ನ ಅತ್ಯವಶ್ಯಕ. ಭಕ್ತಿ ಮಾರ್ಗದಲ್ಲಿ ಒಬ್ಬನು ಈ ಪ್ರಪಂಚನ್ನು, ತನ್ನನ್ನು ಮತ್ತು ತನ್ನ ಜೀವನ ಹಾಗೂ ಕೆಲಸವನ್ನು ತನ್ನ ಇಷ್ಟದೇವತೆಯನ್ನು ನೆನೆಯುತ್ತಾ ನಿಷ್ಠೆಯಿಂದ ಕೈಗೊಳ್ಳುತ್ತಾನೆ. ಎಲ್ಲಾ ವಿಧವಾದ ಮಾರ್ಗಗಳಲ್ಲಿ ಭಕ್ತಿಯು ಅತ್ಯಂತ ಶ್ರೇಷ್ಠವಾದದ್ದೆಂದು ಪರಿಗಣಿಸಲಾಗಿದೆ. ಇಷ್ಟ ದೇವತೆಯ ಬಗ್ಗೆ ವ್ಯಾಕುಲತೆ ಮತ್ತು ಅನನ್ಯ ಪ್ರೀತಿಯನ್ನೇ ಭಕ್ತಿ ಎನ್ನುತ್ತಾರೆ. ನಮ್ಮ ನಿಜವಾದ ಸ್ವರೂಪ ತಿಳಿಯ ಬಯಸುವ ತೀವ್ರವಾದ ಹುಡುಕಾಟವೇ ಭಕ್ತಿ. ಭಕ್ತಿ ಮತ್ತು ಜ್ಞಾನಗಳಲ್ಲಿ ಖಚಿತವಾಗಿ ಹೇಳಬಹುದಾದ ವ್ಯತ್ಯಾಸವೆಂದರೆ ಪರಬ್ರಹ್ಮದ ಕಲ್ಪನೆ. ಭಕ್ತಿಯಲ್ಲಿ ಒಬ್ಬನು ತನ್ನ ಇಷ್ಟದೇವತೆಯನ್ನು ಗ್ರಹಿಸಿದರೆ, ಜ್ಞಾನದಲ್ಲಿ ಅವನು ನಿರಾಕಾರ ಬ್ರಹ್ಮದ ಅನ್ವೇಷಣೆಯಲ್ಲಿ ತೊಡಗುತ್ತಾನೆ.

******

ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 115-119 http://www.manblunder.com/2009/08/lalitha-sahasranamam-115-119.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 

 

Rating
Average: 5 (1 vote)

Comments

Submitted by hariharapurasridhar Tue, 06/18/2013 - 10:20

[ಮನಸ್ಸು ಶಿವನ ಪಾದಪದ್ಮಗಳನ್ನು ಬಯಸುವುದೇ ಭಕ್ತಿ ] ಅದ್ಭುತ ವಿವರಣೆ. ಶಿವನನ್ನು ಬಯಸುತ್ತಾ ಶಿವನಾಗುವುದೇ ಪೂಜೆ, ಅಲ್ಲವೇ?

Submitted by nageshamysore Tue, 06/18/2013 - 12:15

(115-119 ) - ನಾ ಗ್ರಹಿಸಿದ ಸಾರ

115. ಭದ್ರಪ್ರಿಯಾ
ಹಾತೊರೆವ ಭಕ್ತ ಜನ ಓಲಿಸೆ ನಾನಾ ವಿಧಾನ
ಭಕ್ತಪಾತ್ರರನಾಶೀರ್ವದಿಸೆ ಕಾತುರ ದೇವಿಮನ
ಪಾದಕಮಲಾ ಚರಣ ಶರಣಾಗತ ಕೃಪಾಭರಣ
ಸುಪ್ರೀತೆ ವರ್ಷಿಸುತೆ ಲಲಿತೆ ಭಕ್ತರಿಗೆಲ್ಲ ಕರುಣ!

116. ಭದ್ರಮೂರ್ತಿಃ
ಮಂಗಳಕರ ದೇವಿ ರೂಪ ಪವಿತ್ರಾತಿ ಪವಿತ್ರ
ಬ್ರಹ್ಮವೆ ಅನ್ವರ್ಥಿಸಿದ ಲಲಿತ ಲೀಲಾಪಾತ್ರ
ಪವಿತ್ರತೆಯೆ ಮೂರ್ತಿವೆತ್ತ ಶಕ್ತಿ ಭದ್ರಮೂರ್ತಿ
ತ್ರಿಮೂರ್ತಿಗಳಿಗು ಮಿಗಿಲೆನೆ ದೇವಿ ಪರಾಶಕ್ತಿ!

117. ಭಕ್ತ-ಸೌಭಾಗ್ಯ-ದಾಯಿನೀ
ಅರಿಶಿನ ಹಚ್ಚಿದ ಹಳದಿ ಬಳಿದಿದ್ದೆಲ್ಲ ಸೌಭಾಗ್ಯ ನಿಧಿ
ನಂಬಿದ ಭಕ್ತಗೆಲ್ಲ ಸಂಪದ ಕರುಣಿಸೊ ಕರುಣಾನಿಧಿ
ಸೌಭಾಗ್ಯಾಷ್ಟಕದಿಂ ಹರಸೆ ಸಂಪತ್ತು ಸಮೃದ್ಧಿ ಭಾಗ್ಯ
ಕೊಟ್ಟು ಕಾಯುವಳೆ ನಮಿಸೆ ತೊಳೆದೆಲ್ಲ ದೌರ್ಭಾಗ್ಯ!

118. ಭಕ್ತಿ-ಪ್ರಿಯಾ
ಶಿವ ಪಾದ ಪದ್ಮಕೆ ಭಕ್ತಿ ನದಿ ಸಾಗರ ಪ್ರೀತಿ
ಸೂಜಿಗಲ್ಲಿಗೆ ಸೂಜಿ ಲತೆ ಮರವಪ್ಪಿದ ರೀತಿ
ತ್ರಿಗುಣಾತೀತ ಭಕ್ತಿ ಬೆಳೆಯುತೇ ಅನವರತ
ಭಕ್ತಿಪ್ರಿಯಾ ಸಾಕ್ಷಾತ್ಕಾರ ಅಡ್ಡಿ ಆತಂಕವೆತ್ತ!

118. ಭಕ್ತಿ-ಗಮ್ಯಾ
ಶುದ್ಧ ಭಕ್ತಿಯ ಪ್ರೀತಿಯೆ ದೇವಿಯೊಲಿಸೆ ದಾರಿ
ಭಕ್ತಿ ಮಾರ್ಗದ ಪ್ರಜ್ಞೆ ಬ್ರಹ್ಮವರಿಯೇ ರಹದಾರಿ
ಸಾಕಾರ ನಿರಾಕಾರ ಬ್ರಹ್ಮಾನ್ವೇಷಣೆಗೆ ಎರಡಾಗ
ದೈವಕೃಪೆಗೆ ಭಕ್ತಿ ಸ್ವಪ್ರಯತ್ನವಿರೆ ಜ್ಞಾನ ಮಾರ್ಗ!

Submitted by makara Tue, 06/18/2013 - 18:23

In reply to by nageshamysore

ಲಲಿತಾ ಸಹಸ್ರನಾಮದಲ್ಲಿ ನೀವು ಅಂತರ್ಲೀನವಾಗಿ ಕಾವ್ಯಗಳನ್ನು ಹೊಸೆಯುತ್ತಿರುವುದು ನಿಜಕ್ಕೂ ಸಂತಸವುಂಟು ಮಾಡುತ್ತಿದೆ ನಾಗೇಶರೆ. ೧೧೭. ಕವಿತೆಯ ಮೊದಲನೇ ಸಾಲು ಸ್ವಲ್ಪ ಭಿನ್ನ ಅರ್ಥವನ್ನು ಕೊಡುತ್ತಿದೆ ಆದ್ದರಿಂದ ಅದನ್ನು ಅರಿಶಿನದೊಂದಿಗೆ ಹಳದಿ ಬಣ್ಣವುಳ್ಳ ವಸ್ತುಗಳೆಲ್ಲಾ ಸೌಭಾಗ್ಯ ನಿಧಿ ಎನ್ನುವ ಅರ್ಥ ಬರುವಂತೆ ಮಾರ್ಪಡಿಸಿದರೆ ಹೆಚ್ಚು ಸೂಕ್ತವಾಗಿರುತ್ತದೆ. ಇದನ್ನು ನಿಮ್ಮ ಕಾವ್ಯಾತ್ಮಕ ಭಾಷೆಯಲ್ಲಿ ಸರಿಪಡಿಸಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Tue, 06/18/2013 - 18:44

In reply to by makara

ಶ್ರೀಧರರೆ, ಮಾರ್ಪಡಿಸಿದ ಸಾಲು ಕೆಳಗಿದೆ. ಈಗ ಭಾವಾರ್ಥ ಸರಿಯಾಯಿತೆಂದು ಕಾಣುತ್ತದೆ :-) - ನಾಗೇಶ ಮೈಸೂರು, ಸಿಂಗಾಪುರ

117. ಭಕ್ತ-ಸೌಭಾಗ್ಯ-ದಾಯಿನೀ
ಅರಿಶಿಣ ಹಳದಿ ವರ್ಣದ್ದೆಲ್ಲ ಸೂಚಕ ಸೌಭಾಗ್ಯನಿಧಿ
ನಂಬಿದ ಭಕ್ತಗೆಲ್ಲ ಸಂಪದ ಕರುಣಿಸೊ ಕರುಣಾನಿಧಿ 
ಸೌಭಾಗ್ಯಾಷ್ಟಕದಿಂ ಹರಸೆ ಸಂಪತ್ತು ಸಮೃದ್ಧಿ ಭಾಗ್ಯ
ಕೊಟ್ಟು ಕಾಯುವಳೆ ನಮಿಸೆ ತೊಳೆದೆಲ್ಲ ದೌರ್ಭಾಗ್ಯ!