ಎಲ್ಲರಿಗಾಗಿ ವೇದ-5

ಎಲ್ಲರಿಗಾಗಿ ವೇದ-5

          “ಎಲ್ಲರಿಗಾಗಿ ವೇದ” ಬರಹದ ಸರಣಿಯಲ್ಲಿ ವರ್ಣಾಶ್ರಮದ ಬಗ್ಗೆ ಲೇಖನವನ್ನು ಓದಿದ ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ಅದೇ ಕಾಲಮ್ ನಲ್ಲಿ ಉತ್ತರಿಸುವುದೇ ಸೂಕ್ತವೆಂದು ಇಲ್ಲಿ ಬರೆಯುತ್ತಿರುವೆ.

ಪ್ರಶ್ನೆ:

ನೀವು ಬ್ರಾಹ್ಮಣರ ಹಲವು ಕರ್ತವ್ಯಗಳನ್ನು ಬರೆದಿದ್ದೀರಿ, ಅದೆಲ್ಲಾ ಇಂದಿನ ಕಾಲಕ್ಕೆ ಎಷ್ಟು ಪ್ರಸ್ತುತ?

ಉತ್ತರ:

ಒಂದು ಸುಂದರ ಸಮಾಜದ ಕಲ್ಪನೆಯಲ್ಲಿ ಸಮಾಜದ ವ್ಯವಸ್ಥೆಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಅವರವರ ಗುಣ ಕರ್ಮ ಸ್ವಭಾವಗಳಂತೆ ವರ್ಣವನ್ನು ಸ್ವೀಕರಿಸುತ್ತಿದ್ದರು. ಇದರಿಂದ ಸಮಾಜದ ಕೆಲಸವೂ ವಿಂಗಡಿಸಲ್ಪಟ್ಟು ಸ್ವೀಕರಿಸಿದವನೂ ಸಂತೋಷದಿಂದ ಅವನ ಕರ್ತವ್ಯವನ್ನು ನಿರ್ವಹಿಸುತ್ತಿದ್ದ. ಹೀಗೆ ನಡೆಯುತ್ತಿದ್ದ ಸಮಾಜದಲ್ಲಿ ಅಪ್ಪ ಸ್ವೀಕರಿಸಿ ನಿರ್ವಹಿಸುತ್ತಿದ್ದ ವರ್ಣವನ್ನು ಸಹಜವಾಗಿ ಮಕ್ಕಳು ಅನುಸರಿಸುತ್ತಾ ಬಂದು ಕ್ರಮೇಣ ಅವರವರ ಸ್ವಭಾವಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬೇಕಾದ ವರ್ಣವು   ಅರ್ಥವನ್ನು ಕಳೆದುಕೊಂಡು ತಂದೆಯಂತೆ ಮಕ್ಕಳು ಮುಂದುವರೆಸಿರುವುದರಿಂದ ಬಹುಶ: ವರ್ಣವು ಇಂದಿನ ಜಾತಿಯಾಗಿ ಬದಲಾಗಿರಬಹುದು. ಆದರೂ  ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಈ ಮೂರು ವರ್ಣಗಳು ಇಂದಿನ ಜಾತಿಗೆ ಸಮೀಕರಿಸಲ್ಪಟ್ಟರೂ ಶೂದ್ರ ವರ್ಣವನ್ನು ಜಾತಿಗೆ ಸಮೀಕರಿಸುವುದು ಉಚಿತವಾಗುವುದಿಲ್ಲ. ಕಾರಣ ಉಳಿದ ಮೂರು ವರ್ಣಗಳ ತೆಕ್ಕೆಯಲ್ಲಿ ಬರದ ನೂರಾರು ಜಾತಿಗಳಿವೆ. ಹಾಗಾಗಿ ಇಂದಿನ ಜಾತಿಯನ್ನು ಅಂದಿನ ವರ್ಣಕ್ಕೆ ಸಮೀಕರಿಸುವುದು ಸರಿಯಲ್ಲ.

ನಾವು ಯಾವುದೇ ಜಾತಿಗೆ ಸೇರಿದ್ದರೂ ಬದಲಾದ ಸಮಾಜದಲ್ಲಿ ನಾವೆಲ್ಲರೂ ನಾಲ್ಕೂ ವರ್ಣದ ಕೆಲಸವನ್ನೂ  ಮಾಡುತ್ತಿರುವುದನ್ನು ಗಮನಿಸಬೇಕು. ಇಂದಿನ ರಾಜ್ಯವಾಳುವವರಲ್ಲಿ, ವಿದ್ವಾಂಸರುಗಳಲ್ಲಿ, ವ್ಯಾಪಾರಸ್ತರಲ್ಲಿ, ಶ್ರಮಿಕ ವರ್ಗದಲ್ಲಿ ಎಲ್ಲಾಜಾತಿಯ ಜನರೂ ಹಂಚಿ ಹೋಗಿರುವುದು ಸುಳ್ಳಲ್ಲ, ತಾನೇ? ಆದ್ದರಿಂದ ಇಂದಿನ ಸಮಾಜದಲ್ಲಿ ಜ್ಞಾನಪ್ರಸಾರಮಾಡುವ ಸ್ವಭಾವ ಮತ್ತು ಅರ್ಹತೆ ಇರುವ   ಯಾವುದೇ ವ್ಯಕ್ತಿಗಾಗಲೀ ಬ್ರಾಹ್ಮಣ ಎನ್ನಲಡ್ಡಿ ಇಲ್ಲ. ಇಂದಿಗೆ ಅದೊಂದು ಪದವಿಯಷ್ಟೆ.

ಇಂದು ಕೂಡ ಬ್ರಾಹ್ಮಣ ವರ್ಣೀಯ  ಎನಿಸಿಕೊಳ್ಳಬೇಕಾದರೆ ಬ್ರಾಹ್ಮಣನ ಕರ್ತವ್ಯವನ್ನು ವೇದದ ಆಶಯದಂತೆ ನಿರ್ವಹಿಸುವುದು ಅನಿವಾರ್ಯ. ಇದು ಎಲ್ಲರಿಗೂ ಅನ್ವಯ. ಇಂದಿನ ಕಾಲಕ್ಕೆ ಎಷ್ಟು ಪ್ರಸ್ತುತ?ಎಂಬ ವಿಚಾರ ಬಂದಾಗ ಸುಂದರ ಸಮಾಜದ ಕನಸು ಕಾಣುವವರಿಗೆ ಇದು ಹೆಚ್ಚು ಪ್ರಸ್ತುತ.ಬ್ರಾಹ್ಮಣ ಜಾತಿಯಲ್ಲಿ ಜನಿಸಿ  ವೇದದ ಆಶಯದಂತೆ ಬ್ರಾಹ್ಮಣ ವರ್ಣೀಯನಾಗಿ ಉಳಿಯಬೇಕೆಂದರೆ ಬ್ರಾಹ್ಮಣನ ಗುಣಸ್ವಭಾವವನ್ನು ಮೈಗೂಡಿಸಿಕೊಳ್ಲಬೇಕಾದ್ದು ಅವನ ಕರ್ತವ್ಯ, ಅಷ್ಟೆ. ಇಂದಿನ ದಿನಕ್ಕೆ ಇದು ಸಾಧ್ಯವಿಲ್ಲ ಎಂದರೆ ಅರ್ಹತೆ ಇಲ್ಲಾ ಎಂದೇ ಅರ್ಥ. [ವಿ.ಸೂ: ಇಲ್ಲಿ ಇಂದಿನ ರೂಢಿಯಂತೆ ಜಾತಿ ಪದ ಬಳಸಲಾಗಿದೆ. ವೇದದಲ್ಲಿ ಜಾತಿ ಎಂದರೆ ಅರ್ಥವೇ ಬೇರೆ]

ಕಳೆದ ವಾರ ಕ್ಷತ್ರಿಯ ವರ್ಣದ ಬಗ್ಗೆ ವಿಚಾರಮಾಡಿದ್ದೆವು. ಈ ವಾರ ವೈಶ್ಯ ವರ್ಣದ ಬಗ್ಗೆ ವಿಚಾರ ಮಾಡೋಣ.

ಇಂದ್ರಮಹಂ ವಣಿಜಂ ಚೋದಯಾಮಿ  ಸ ನ ಐತು ಪುರಏತಾ ನೋ ಅಸ್ತು|

ನುದನ್ನರಾತಿಂ ಪರಿಪಂಥಿನಂ ಮೃಗಂ ಸ ಈಶಾನೋ ಧನದಾ ಅಸ್ತು ಮಹ್ಯಮ್ ||

 [ ಋಕ್. 10.94.11]

ಅಹಮ್= ನಾನು

ಇಂದ್ರಂ ವಣಿಜಮ್ = ಐಶ್ವರ್ಯಶಾಲಿಯಾದ ವೈಶ್ಯನನ್ನು

ಚೋದಯಾಮಿ = ಸತ್ಕರ್ಮಕ್ಕೆ ಪ್ರೇರಿಸುತ್ತೇನೆ

ಸ: ನ: ಆ ಏತು = ಅವನು ನಮಗೆ ಪ್ರಾಪ್ತನಾಗಲಿ

ನ: ಪುರ: ಏತಾ ಅಸ್ತು= ನಮ್ಮೆಲ್ಲರನ್ನೂ ಆರ್ಥಿಕ ದೃಷ್ಟಿಯಿಂದ ಸಂಮೃದ್ಧಿಯೆಡೆಗೆ ನಡೆಯಿಸಲಿ

ಅರಾತಿಮ್ = ಸ್ವಾರ್ಥ ಭಾವನೆಯನ್ನೂ

ಪರಿಪಂಥಿನಂ ಮೃಗಮ್ = ದಾರಿಗೆ ಅಡ್ದ ಬರುವ ಚೌರ್ಯವೃತ್ತಿಯನ್ನೂ

ನುದನ್ = ದೂರತಳ್ಳುತ್ತಾ

ನ: ಈಶಾನ: = ಆ ಸಂಪದ್ವಂತನು

ಮಹ್ಯಮ್ = ನನಗೆ

ಧನದಾ ಅಸ್ತು = ಧನ ದಾನ ಮಾಡುವವನಾಗಲಿ

ಭಾವಾರ್ಥ :

ಸಂಪದ್ವರ್ಧನ,ಸ್ವಾರ್ಥತ್ಯಾಗ,ಕಳ್ಳತನದ ಬಹಿಷ್ಕಾರ, ಉದಾರ ದಾನ ಭಾವನೆ-ಇವು ವೈಶ್ಯನ ಲಕ್ಷಣಗಳು

ಎಂತಹ ಮಹತ್ತರ ಜವಾಭ್ದಾರಿ! ಅಲ್ಲವೇ?

ಸಮಾಜದ  ಸಂಪತ್ತನ್ನು ಹೆಚ್ಚಿಸುವುದು, ಸಮಾಜದ ಸಂಪತ್ತನ್ನು ಹೆಚ್ಚಿಸುವಾಗ ತನ್ನ ಸ್ವಂತಕ್ಕೆ ಮಾಡಿಕೊಳ್ಳದಿರುವುದು, ಕಳ್ಳತನದ ಬಹಿಷ್ಕಾರ, ಸ್ವಾರ್ಥದ ತ್ಯಾಗ, ಉದಾರ ಭಾವನೆಯಿಂದ ಸತ್ಕಾರ್ಯಗಳಿಗೆ ದಾನ ಮಾಡುವುದು-ಇವೆಲ್ಲವೂ ವೈಶ್ಯನ ಕರ್ತವ್ಯ. ವೈಶ್ಯನು ಸಂಪತ್ತಿಗೆ ಒಬ್ಬ ಟ್ರಸ್ಟೀ ಆಗಿರಬಹುದೇ ಹೊರತು ಅದನ್ನು ಸ್ವಾರ್ಥಕ್ಕೆ ಬಳಸುವಂತಿಲ್ಲ.

ಇಂದಿನ ಸಾಮಾಜಿಕ ವ್ಯವಸ್ಥೆಗೂ ವೇದದ ಆಶಯಕ್ಕೂ ಸ್ವಲ್ಪ ತುಲನೆ ಮಾಡಿದರೆ!! ನಿಜವಾಗಿ ಒಂದು ಸುಂದರ ಸಮಾಜವನ್ನು ಕಟ್ಟಬೇಕೆಂದರೆ ವೇದದಲ್ಲಿ ಹೇಳಿರುವ ನಾಲ್ಕೂ ವರ್ಣದ ಕರ್ತವ್ಯಗಳನ್ನು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ  ಅನ್ಯಾನ್ಯ ಸರ್ಕಾರೀ ಇಲಾಖೆಯ  ಅಧಿಕಾರಿಗಳು ಪಾಲಿಸುವಂತಾದರೆ!!! ವೇದದ ಆಶಯವನ್ನು  ಇಂದಿನ ಸರ್ಕಾರಗಳ ಸಲಹೆಗಾರರು ಅಧ್ಯಯನ ಮಾಡಿ ಸರ್ಕಾರ ನಿರ್ವಹಣೆಯಲ್ಲಿ ಸೂಕ್ತ ಸಲಹೆಯನ್ನು ನೀಡಿದ್ದೇ ಆದರೆ ನಮ್ಮ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವವರ ಸಂಖ್ಯೆ ಕಡಿಮೆಯಾಗಲಾರದೇ?  

Rating
No votes yet

Comments

Submitted by makara Tue, 06/18/2013 - 08:11

ಶ್ರೀಧರ್ ಸರ್,
ನಮ್ಮ ಕಾನೂನಿನಲ್ಲಿಯೂ ಅದೆಷ್ಟೋ ವಿಷಯಗಳನ್ನು ಹೇಳಿರುತ್ತಾರೆ. ಉದಾಹರಣೆಗೆ ನಾಗರೀಕರ ಹಕ್ಕುಗಳು ಮತ್ತು ಕರ್ತವ್ಯ ಮುಂತಾದವುಗಳು. ಆದರೆ ಅದನ್ನು ನಾವು ಎಷ್ಟರ ಮಟ್ಟಿಗೆ ಪಾಲಿಸುತ್ತೇವೆ; ಎಲ್ಲರೂ ತಮ್ಮ ಹಕ್ಕಿಗಾಗಿ ಹೋರಾಡಬೇಕೆಂದು ಕರೆನೀಡುತ್ತಾರೆಯೇ ಹೊರತೂ ಯಾರೂ ತಮ್ಮ ಕರ್ತವ್ಯಕ್ಕಾಗಿ ಹೋರಾಡುವಂತೆ ಕರೆ ನೀಡುವುದಿಲ್ಲ. ಕಾನೂನು ರೀತ್ಯಾ ತಪ್ಪು ಮಾಡಿದರೆ ಅವರಿಗೆ ತ್ವರಿತವಾಗಿ ತಕ್ಕ ಶಿಕ್ಷೆಯಾಗಬೇಕು. ಆದರೆ ಅದನ್ನು ಉಳ್ಳವರು (ಹಣ, ಪ್ರಭಾವ) ದುರ್ಬಳಕೆ ಮಾಡಿಕೊಂಡು ಅದಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಹಾಗಾಗಿ ಇಂದು ಕಾನೂನು ಎನ್ನುವುದು ಒಂದು ಅರ್ಥವಿಲ್ಲದ ಕಂತೆಗಳ ಕಟ್ಟಾಗಿದೆ. ಇದೇ ದೃಷ್ಟಿಯಿಂದ ಶ್ರುತಿ-ಸ್ಮೃತಿಗಳನ್ನೂ ನೋಡುವ ಮನಃಸ್ಥಿತಿಯನ್ನು ಜನಮಾನಸವು ಬೆಳೆಸಿಕೊಂಡಿದೆ. ಹಾಗಾಗಿ ವೇದಶಾಸ್ತ್ರಗಳಲ್ಲಿ ಹೇಳಿರುವುದನ್ನು ಅನುಸರಿಸದಿದ್ದರೆ ಏನೂ ಶಿಕ್ಷೆಯಾಗುವುದಿಲ್ಲವಲ್ಲ; ಹಾಗಾಗಿ ಅವೂ ಕೂಡ ಅಂತೆ-ಕಂತೆಗಳ ಬೊಂತೆಯಾಗಿ ಬಿಟ್ಟಿದೆ ಎನ್ನುವುದೇ ವಿಪರ್ಯಾಸ. ಇಂದಿನ ಪರಿಸ್ಥಿತಿ ಏನೇ ಇರಲಿ, ಇನ್ನೂ ಸಾಕಷ್ಟು ಜನ ಸಹೃದಯರು ಇರುವುದರಿಂದ ಪರಿಸ್ಥಿತಿ ಮುಂದೊಂದು ದಿವಸ ತಿಳಿಯಾಗುತ್ತದೆ; ಎಲ್ಲರೂ ತಮ್ಮ ತಮ್ಮ ಕೈಲಾದ ಕರ್ತವ್ಯವನ್ನು ಮಾಡಬೇಕಷ್ಟೇ. ವೇದಗಳಲ್ಲಿ ಎಲ್ಲರಿಗೂ ಅವರವರ ಕರ್ತವ್ಯಗಳ ಕುರಿತು ಒತ್ತು ಕೊಟ್ಟು ಹೇಳಲಾಗಿದೆಯೇ ಹೊರತು ಅವರ ಹಕ್ಕುಗಳ ಕುರಿತು ಅಲ್ಲ. ಎಲ್ಲರೂ ತಮ್ಮ ಪಾಲಿನ ಕರ್ತವ್ಯವನ್ನು ಸರಿಯಾಗಿ ಪಾಲಿಸಿದ್ದೇ ಆದರೆ ಎಲ್ಲರೂ ತಮ್ಮ ಪಾಲಿನ ಹಕ್ಕನ್ನು ಅಯಾಚಿತವಾಗಿ ಅನುಭವಿಸಬಹುದು, ಎನ್ನುವುದನ್ನು ಇಂದಿನ ಸಮಾಜ ಗುರುತಿಸಬೇಕು.
ಸರಣಿ ಚೆನ್ನಾಗಿ ಮುಂದುವರೆಯುತ್ತಿದೆ;
ವಂದನೆಗಳೊಂದಿಗೆ
ಶ್ರೀಧರ್ ಬಂಡ್ರಿ

Submitted by nageshamysore Tue, 06/18/2013 - 08:38

ವೈಶ್ಯ

ಸ್ವಹಿತಕಿರದ ಸಂಪತ್ತಿನ ಸಮೃದ್ಧಿಯೆ ಸಮಾಜಕೆ ಘನ
ನಿಸ್ವಾರ್ಥ ಉದಾರಭಾವ ದಾನಧರ್ಮ ಮಾಡುವ ಜನ
ಮೋಸ ವಂಚನೆ ಚೋರತನ ವ್ಯವಹಾರದಲಿ ವರ್ಜನ
ಕಟ್ಟಿಡೆ ದ್ರವ್ಯ ಲೋಕೋಪಕಾರ್ಯ ವೈಶ್ಯನಲ್ಲವೆ ಸಜ್ಜನ!

-ನಾಗೇಶ ಮೈಸೂರು