೪೬. ಶ್ರೀ ಲಲಿತಾ ಸಹಸ್ರನಾಮ ೧೨೧ ರಿಂದ ೧೨೩ನೇ ನಾಮಗಳ ವಿವರಣೆ

೪೬. ಶ್ರೀ ಲಲಿತಾ ಸಹಸ್ರನಾಮ ೧೨೧ ರಿಂದ ೧೨೩ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೨೧-೧೨೩

Bhayāpahā भयापहा (121)

೧೨೧. ಭಯಾಪಹಾ

             ದೇವಿಯು ಭಯವನ್ನು ಹೋಗಲಾಡಿಸುತ್ತಾಳೆ.

             ತೈತ್ತರೀಯ ಉಪನಿಷತ್ತು (೨.೯) ಹೀಗೆ ಹೇಳುತ್ತದೆ, "ಬ್ರಹ್ಮವನ್ನು ತಿಳಿದವನಾಗಿ, ಅವನು ಯಾವುದಕ್ಕೂ ಹೆದರುವುದಿಲ್ಲ ಏಕೆಂದರೆ ಅವನ ಬಳಿಯಲ್ಲಿ ಯಾರೂ ಇಲ್ಲ". ಅವನು ಬ್ರಹ್ಮನೊಂದಿಗಿದ್ದಾಗ ಅವನೇ ಯಾವಾಗಲೂ ಸಾಕ್ಷಿಯಾಗುತ್ತಾನೆ; ಆದ್ದರಿಂದ ಉಪನಿಷತ್ತು ಅವನ ಬಳಿ ಯಾರೂ ಇಲ್ಲ ಎಂದು ಹೇಳುತ್ತದೆ. ಬೃಹದಾರಣ್ಯಕ ಉಪನಿಷತ್ತು (೧.೪.೨) ಹೇಳುತ್ತದೆ, "ನನ್ನನ್ನು ಹೊರತಾಗಿ ಬೇರೆ ಏನೂ ಇಲ್ಲ ಎಂದ ಮೇಲೆ ಹೆದರಿಕೆಯ ಪ್ರಶ್ನೆ ಎಲ್ಲಿದೆ"? ಭಯಕ್ಕೆ ಕಾರಣವೆಂದರೆ ಎರಡನೆಯ ವ್ಯಕ್ತಿಯ ಇರುವಿಕೆ. ಎರಡನೆಯ ವ್ಯಕ್ತಿಯ ಇರುವಿಕೆಯ ಅನುಭವವು ಕೇವಲ ಅಜ್ಞಾನದಿಂದ ಉಂಟಾಗುತ್ತದೆ. ವಾಸ್ತವವಾಗಿ ಪ್ರಪಂಚದಲ್ಲಿ ಎರಡನೆಯದು ಎನ್ನುವುದೇ ಇಲ್ಲ. ಅದು ಆ ಒಂದೇ ಪರಮ ಆತ್ಮವೇ ಎಲ್ಲರೊಳಗಿದ್ದು ಅದನ್ನು ಎರಡನೆಯದೆನ್ನುವುದು ತಪ್ಪು ತಿಳುವಳಿಕೆಯಿಂದ ಉಂಟಾಗಿದೆ. ಇದು ಮಾಯೆಯ ಪ್ರಭಾವದಿಂದ ಉಂಟಾಗುತ್ತದೆ.

            ಕೇವಲ ಆಕೆಯ ನಾಮೋಚ್ಛಾರಣೆಯಿಂದಲೇ ಹೆದರಿಕೆಯು ದೂರವಾಗುತ್ತದೆ. ವಿಷ್ಣು ಸಹಸ್ರನಾಮದ ೯೩೫ನೇ ನಾಮವೂ ಸಹ ಭಯಾಪಹಾ.

           ಸೌಂದರ್ಯ ಲಹರಿಯ ೪ನೇ ಶ್ಲೋಕವು ಹೇಳುತ್ತದೆ, "ಕೇವಲ ನಿನ್ನ ಪಾದಗಳು ತಮ್ಮಷ್ಟಕ್ಕೇ ತಾವೇ ಶಕ್ತಿಯುತವಾಗಿದ್ದು ಯಾರು ಭಯದ ಹಿಡಿತದಲ್ಲಿದ್ದಾರೋ ಅವರನ್ನು ರಕ್ಷಿಸಲು ಸಾಕು". ಆದರೆ ಶಂಕರರು ಹೇಳುತ್ತಾರೆ, ಜನನ-ಮರಣಗಳ ಚಕ್ರವೆಂಬ ಸಂಸಾರದ ಸುಳಿಗೆ ಸಿಲುಕುವುದು (ಬಂಧನಕ್ಕೊಳಗಾಗುವುದು) ಕೂಡಾ ಭಯವೇ ಆಗುತ್ತದೆ. ಆದಿ ಶಂಕರರ ಈ ವ್ಯಾಖ್ಯಾನಕ್ಕೆ ಮಹರ್ಷಿ ದೂರ್ವಾಸರ ಶ್ರೀ ಶಕ್ತಿ ಮಹಿಮ್ನಃ ಸ್ತೋತ್ರದಲ್ಲೂ ಪುರಾವೆ ಸಿಗುತ್ತದೆ. ಅವರು ಹೇಳುತ್ತಾರೆ, "ಜರಾಮೃತಿ ನಿವಾರಯ", ಅಂದರೆ ಜನನ ಮರಣಗಳ ಭಯದಿಂದ ನಮ್ಮನ್ನು ಮುಕ್ತಗೊಳಿಸು.

           ಆಕೆಯ ಪೂಜೆಯನ್ನು ಮಾಡುವವರಿಗೆ ಜನನ ಮರಣಗಳ ಭಯವಿರುವುದಿಲ್ಲ. ಕೇವಲ ಆಕೆಯ ನಾಮೋಚ್ಛಾರಣೆಯೇ ಭಯವನ್ನು ಹೋಗಲಾಡಿಸುತ್ತದೆ. 

ಭಯದ ಬಗ್ಗೆ ಇನ್ನಷ್ಟು ವಿವರಣೆ

          ಭಯವೆನ್ನುವುದು ಆಧ್ಯಾತ್ಮಿಕತೆಯನ್ನು ನಾಶ ಮಾಡುವ ಅತಿ ಕೆಟ್ಟ ಸಂಗತಿ. ಭಯವೆನ್ನುವುದು ಮನಸ್ಸಿನ ಉತ್ಪನ್ನ. ಅದು ಕೇವಲ ಆಧ್ಯಾತ್ಮಿಕ ಹಾದಿಯನ್ನು ಅಡಚಣೆಗೊಳಪಡಿಸುವುದಷ್ಟೇ ಅಲ್ಲ ಅದು ಸಾಧಿಸಿದ ಪ್ರಗತಿಯನ್ನೂ ಕೂಡಾ ನಾಶ ಮಾಡುತ್ತದೆ. ಭಯವೆನ್ನುವುದು ಬಹುತೇಕ ಭೌತಿಕ ದೇಹಕ್ಕೆ ಸಂಭಂದಿಸಿದ್ದು. ಉದಾಹರಣೆಗೆ, ಅಪಘಾತದ ಭಯ, ಅನಿರೀಕ್ಷಿತವಾಗಿ ಕೆಳಗೆ ಬೀಳುವ ಭಯ, ಗಾಯ ಅಥವಾ ರೋಗದ ಭಯ, ಶತ್ರುವಿನ ಭಯ ಮೊದಲಾದವು. ಕೆಲವೊಮ್ಮೆ ಭಯವು ಅಹಂಕಾರದಿಂದ ಉಂಟಾಗುತ್ತದೆ. ಸಮಾಜದಲ್ಲಿ ಒಬ್ಬನ ಮರ್ಯಾದೆಗೆ ದಕ್ಕೆಯಾಗುವುದು, ಘನತೆಗೆ ಕುಂದು ಬರುವುದು ಮೊದಲಾದವು ಈ ವರ್ಗದಲ್ಲಿ ಬರುತ್ತವೆ. ಮೂಲಭೂತವಾಗಿ ತಿಳಿಯಬೇಕಾದದ್ದೇನೆಂದರೆ ಭಯವೆನ್ನುವುದು ಈ ಭೌತಿಕ ಕಾಯ ಅಥವಾ ಅಹಂಕಾರದ ಬಗೆಗಿನ ಭಯದಿಂದ ಉದ್ಭವವಾಗುತ್ತದೆ. ಎರಡನೆಯ ರೀತಿಯ ಭಯವು ಆರ್ಥಿಕ ನಿರ್ವಹಣೆಯನ್ನೂ ಒಳಗೊಂಡಿದೆ. ಒಬ್ಬರು ಆಲೋಚಿಸಿದರೆ ಇದಕ್ಕೆ ಎರಡು ರೀತಿಯ ಪರಿಹಾರಗಳು ಮಾತ್ರವೇ ದೊರೆಯುತ್ತವೆ. ಒಂದು ಈ ಭಯದ ವ್ಯಥೆಯನ್ನು ಅನುಭವಿಸುವುದು ಮತ್ತು ಎರಡನೆಯದೆಂದರೆ ಈ ಭಯದ ಮೂಲವೇನೆಂದು ಗ್ರಹಿಸುವ ಮೂಲಕ ಅದನ್ನು ನಾಶಗೊಳಿಸುವುದು. ಯಾವಾಗ ಭಯವು ಇರುತ್ತದೆಯೋ ಆಗ ಎಲ್ಲಾ ಶಕ್ತಿಯು ಸೋರಿ ಹೋಗುತ್ತದೆ. ಎಲ್ಲವೂ ಕರ್ಮದಿಂದಾಗಿ ಪೂರ್ವ-ನಿಯೋಜಿತವಾಗಿರುವುದರಿಂದ ಏನು ಆಗಬೇಕಾಗಿದೆಯೋ ಅದು ಆಗಿಯೇ ತೀರುತ್ತದೆ. ಒಬ್ಬನು ಧನಾತ್ಮಕ ಆಲೋಚನೆಗಳನ್ನು ರೂಢಿಸಿಕೊಂಡರೆ, ಧನಾತ್ಮಕ ಕ್ರಿಯೆಗಳು ಉದ್ಭವಿಸುತ್ತವೆ ಮತ್ತು ಒಂದು ವೇಳೆ ಋಣಾತ್ಮಕ ಆಲೋಚನೆಗಳನ್ನು ಪೋಷಿಸಿದರೆ, ದುಃಖ ಮತ್ತು ಯಾತನೆಗಳು ಉದ್ಭವವಾಗುತ್ತವೆ. ಧನಾತ್ಮಕ ಆಲೋಚನೆಗಳ ಮೂಲಕ ಬಹುತೇಕ ಭಯವನ್ನು ಹೋಗಾಲಾಡಿಸಿಕೊಳ್ಳ ಬಹುದು. ಆಲೋಚನೆಗಳು ಯಾವಾಗಲೂ ಶಕ್ತಿಯುತವಾಗಿರುತ್ತವೆ.

          ನಾವೆಲ್ಲರೂ ಭಯದ ಹಿಡಿತದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ, ಆದರೆ ನಮ್ಮಲ್ಲಿ ಬಹುತೇಕರು ಭಯವನ್ನು ಎದುರಿಸಿ ಅದನ್ನು ಬಲಹೀನವಾಗಿಸುತ್ತೇವೆ. ಭಯಕ್ಕೆ ಒಂದು ಕಾರಣವಿರ ಬೇಕು. ಒಬ್ಬನು ಆ ಕಾರಣವನ್ನು ನಾಶ ಮಾಡಲು ಶಕ್ತನಾದರೆ, ಭಯದ ಪ್ರಭಾವವು ಉತ್ಪನ್ನವಾಗುವುದಿಲ್ಲ. ಈಗ ನಾವೊಂದು ಸರಳ ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಬ್ಬನು ಗ್ಯಾರೇಜಿನಿಂದ ಒಂದು ಕಾರನ್ನು ಹೊರತೆಗೆಯುತ್ತಾ ಅಪಘಾತ ಸಂಭವಿಸ ಬಹುದೆಂದು ಭಯಪಡುತ್ತಿದ್ದರೆ, ಆ ಭಯವು ರೂಪಾಂತರ ಹೊಂದಿ ಅದು ಅಪಘಾತದಲ್ಲಿ ಪರ್ಯಾವಸಾನಗೊಳ್ಳಬಹುದು. ಈ ಸಂದರ್ಭದಲ್ಲಿ ಆಲೋಚನೆಯು ಕ್ರಿಯೆಯ ರೂಪವನ್ನು ಪಡೆಯಿತು. ಅದಕ್ಕೆ ವಿರುದ್ಧವಾಗಿ ಒಂದು ವೇಳೆ ಈ ದಿನವು ಸುರಕ್ಷಿತವಾದದ್ದೆಂದು ಒಬ್ಬನು ಆಲೋಚಿಸಿದರೆ ಆ ದಿನವು ಸುರಕ್ಷಿತವಾಗಿರುವ ಸಾಧ್ಯತೆಯಿದೆ. ಈಗ ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ಒಬ್ಬನ ಮೇಲಧಿಕಾರಿಯು ಅವನ ಬಡ್ತಿಯ ಬಗ್ಗೆ ವರದಿ ಕೊಡುತ್ತಿದ್ದಾನೆ  ಮತ್ತು ಈ ಮುಂಚಿನ ಕೆಲವು ಸಂದರ್ಭಗಳಲ್ಲಿ ಅವನ ಮೇಲಧಿಕಾರಿ ಮತ್ತು ಅವನಿಗೆ ತಪ್ಪಾಭಿಪ್ರಾಯಗಳು ಉಂಟಾಗಿ ಅವನ ಮೇಲಧಿಕಾರಿಗೆ ಇವನ ಧೋರಣೆಯು ಇಷ್ಟವಾಗಿರಲಿಲ್ಲ ಎಂದಿಟ್ಟುಕೊಳ್ಳಿ. ಬಹುಶಃ ಅವನು ಇವನ ಬಡ್ತಿಯ ಬಗ್ಗೆ ಒಳ್ಳೆಯ ಅಭಿಪ್ರಾಯ ಕೊಡದೇ ಇರಬಹುದು. ಒಂದು ವೇಳೆ ಅವನು ಧ್ಯಾನದ ಮೂಲಕ ಧನಾತ್ಮಕ ಶಕ್ತಿಯನ್ನು ಅವನ ಮೇಲಧಿಕಾರಿಗೆ ಸಂವಹನಗೊಳ್ಳುವಂತೆ ಮಾಡಿದರೆ ಅವನು ತನ್ನ ಮೇಲಧಿಕಾರಿಯು ಅವನ ಬಗ್ಗೆ ಕೆಟ್ಟದಾದ ವರದಿಯನ್ನು ಕೊಡದೆ ಒಳ್ಳೆಯ ಅಭಿಪ್ರಾಯ ಕೊಡಬಹುದೆಂಬುದರ ಬಗ್ಗೆ ನಿಶ್ಚಿಂತೆಯಿಂದ ಇರಬಹುದು; ಏಕೆಂದರೆ ಅವನ ಧನಾತ್ಮಕ ಶಕ್ತಿಗಳು ಅವನ ಮೇಲಧಿಕಾರಿಯು ಒಳ್ಳೆಯ ಅಭಿಪ್ರಾಯವನ್ನು ಕೊಡಲು ಪ್ರೇರೇಪಿಸುತ್ತವೆ. ಧನಾತ್ಮಕ ಶಕ್ತಿಗಳನ್ನು ಸಂವಹನೆ ಮಾಡಿದಾಗ ಬಹುತೇಕ ಸಂದರ್ಭಗಳಲ್ಲಿ ಧನಾತ್ಮಕ ಫಲಿತಗಳೇ ಉಂಟಾಗುತ್ತವೆ. ಭಯದ ಕಾರಣವನ್ನು ಮಾನಸಿಕವಾಗಿ ಅರಿತು ಒಬ್ಬರು ಭಯದ ಕಾರಣವನ್ನು ಸುಟ್ಟು ಹಾಕಬಹುದು. ಈ ರೀತಿಯ ಧ್ಯಾನವನ್ನು ಅಭ್ಯಸಿಸುವುದೇ ಸಫಲತೆಗೆ ಖಚಿತವಾದ ಹಾದಿ. ಧ್ಯಾನಕ್ಕೆ ಯಾವುದೇ ಪ್ರತ್ಯೇಕ ಸ್ಥಳದ ಅವಶ್ಯಕತೆ ಇಲ್ಲ. ಒಬ್ಬನು ಒಂದು ಅಥವಾ ಎರಡು ನಿಮಿಷಗಳನ್ನು ತೆಗೆದುಕೊಂಡು, ಒಳ್ಳೆಯ ಗಾಳಿ ಸಿಗುವ ಪ್ರದೇಶವನ್ನು ಗುರುತಿಸಿ, ಕಣ್ಣು ಮುಚ್ಚಿಕೊಂಡು ಭಯದ ಕಾರಣವು ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಬೂದಿಯಾಗುವಂತೆ ಕಲ್ಪಿಸಿಕೊಳ್ಳಬೇಕು.

            ಒಂದು ವಿಷಯವನ್ನು ಸದಾ ಜ್ಞಾಪಕದಲ್ಲಿ ಇರಿಸಿ ಕೊಳ್ಳಬೇಕು. ಯಾರೂ ನಮಗೆ ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ಹಾನಿಯುಂಟು ಮಾಡಲಾರರು. ನೀವು ಒಬ್ಬ ದೈವ ಜೀವಿಯಾಗಿದ್ದು ನಿಮಗೆ ಅಮಿತವಾದ ದೈವೀ ಶಕ್ತಿಗಳಿವೆ ಮತ್ತು ಅವು ಸದಾ ನಿಮ್ಮ ಸುತ್ತಲಿದ್ದು ನಿಮ್ಮನ್ನು ರಕ್ಷಿಸುತ್ತವೆ. ಈ ದೈವೀ ಶಕ್ತಿಗಳು ನಾವು ಕುಕೃತ್ಯಗಳನ್ನು ಮಾಡುವುದನ್ನು ತಪ್ಪಿಸಿ ನಮ್ಮನ್ನು ದುಷ್ಟ ಶಕ್ತಿಗಳಿಂದ ಕಾಪಾಡುತ್ತವೆ. ಎಷ್ಟೆಂದರೂ ನೀವು ಏನು ಬಿತ್ತುತ್ತೀರೋ ಅದನ್ನೇ ನೀವು ಕುಯ್ಲು ಮಾಡುತ್ತೀರಿ.

Śāṃbhavī शांभवी (122)

೧೨೨. ಶಾಂಭವೀ

            ಶಿವನನ್ನು ಶಂಭು ಎಂದು ಕರೆಯುತ್ತಾರೆ ಮತ್ತು ಅವನ ಸತಿಯು ಶಾಂಭವಿಯಾಗಿದ್ದಾಳೆ. ವಿಷ್ಣು ಸಹಸ್ರನಾಮದ ೩೮ನೇ ನಾಮವು ಶಾಂಭವೇ; ಇದನ್ನು ’ಯಾರು ತನ್ನ ಭಕ್ತರಿಗೆ ಸುಖವನ್ನು ಕರುಣಿಸುತ್ತಾನೆಯೋ’ ಅವನು ಎಂದು ವ್ಯಾಖ್ಯಾನಿಸಲಾಗಿದೆ. ಈ ಅರ್ಥದಲ್ಲಿ ಶಿವ ಮತ್ತು ಲಲಿತಾಂಬಿಕೆ ಇಬ್ಬರೂ ಸುಖಗಳನ್ನು ತಮ್ಮ ಭಕ್ತರಿಗೆ ದಯಪಾಲಿಸುವವರು.

          ‘ಶಾಂಭವೀ ಮುದ್ರಾ’ ಎನ್ನುವ ಮುದ್ರೆ ಇದೆ; ಅದನ್ನು ಸಾಮಾನ್ಯವಾಗಿ ಕುಂಡಲಿನೀ ಧ್ಯಾನದಲ್ಲಿ ಉಪಯೋಗಿಸುತ್ತಾರೆ. ಎರಡೂ ಕಣ್ಣು ಗುಡ್ಡೆಗಳನ್ನು ಆಂತರಿಕವಾಗಿ ಆಜ್ಞಾ ಚಕ್ರದ ಮೇಲೆ ಕೇಂದ್ರೀಕರಿಸಿ ಪ್ರಜ್ಞೆಯನ್ನು ಮೇಲೆಕ್ಕೆತ್ತುವುದು ಮತ್ತು ಅದೇ ರೀತಿ ಕಣ್ಣುಗುಡ್ಡೆಗಳನ್ನು ಮೇಲೇರಿಸುವುದು ಶಾಂಭವೀ ಮುದ್ರಾ. ಈ ನಾಮದ ಬಗೆಗೆ ಇತರೇ ವ್ಯಾಖ್ಯಾನಗಳೂ ಕೂಡಾ ಇವೆ. ಮೂರು ವಿಧವಾದ ದೀಕ್ಷೆಗಳಿವೆ ಮತ್ತು ಅದರಲ್ಲಿ ಒಂದು ಶಾಂಭವೀ ದೀಕ್ಷೆಯಾದರೆ ಮತ್ತೆರಡು ಶಾಕ್ತಿ ಮತ್ತು ಮಾಂತ್ರಿ ದೀಕ್ಷೆಗಳಾಗಿವೆ. ಶಿವನ ಆರಾಧಕರನ್ನು ಶಾಂಭವರೆಂದು ಕರೆದಿದ್ದಾರೆ. ದೇವಿಯು ಶಾಂಭವರ ತಾಯಿಯಾಗಿದ್ದಾಳೆ. ಸೌಂದರ್ಯ ಲಹರಿಯ ೩೪ನೇ ಶ್ಲೋಕವು, "ಶರೀರಂ ತ್ವಂ ಶಂಭೋ" ಅಂದರೆ ನೀನು (ಶಕ್ತಿ) ಶಿವನ ದೇಹವಾಗಿದ್ದೀಯಾ ಎಂದು ಹೇಳುತ್ತದೆ. ಮುಂದಿನ ಶ್ಲೋಕವು ’ಶಿವಾ ಯುವಾತಿ ಭಾವೇನ’ ಅಂದರೆ ’ಶಿವನ ಹೆಂಡತಿಯ ಪಾತ್ರವನ್ನು ವಹಿಸಿ’ ಎಂದು ಹೇಳುತ್ತದೆ. ಈ ರೀತಿಯಾದ ಹಲವಾರು ಉದ್ಘೋಷಗಳು ಎರಡೂ ವಿಧಧಲ್ಲಿ ಅಂದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆಕೆಯು ಸದಾಶಿವನ ಭಾಗವಾಗಿದ್ದಾಳೆ ಎನ್ನುವುದನ್ನು ದೃಢಪಡಿಸುತ್ತವೆ.

          ಶಾಂಭವೀ ಎನ್ನುವುದು ಎಂಟು ವರ್ಷದ ಹುಡುಗಿ ಎನ್ನುವ ಅರ್ಥವನ್ನೂ ಸೂಚಿಸುತ್ತದೆ. ದೇವಿ ಭಾಗವತದಲ್ಲಿ (೩.೨೫ ಮತ್ತು ೩.೨೬) ಕನ್ಯಾ ಪೂಜಾ ಎನ್ನುವ ಒಂದು ಪೂಜಾ ಪದ್ಧತಿಯನ್ನು ವಿವರಿಸಿದ್ದಾರೆ ಅದರಲ್ಲಿ ದೇವಿಯನ್ನು ವಿವಿಧ ವಯಸ್ಸಿನ ಬಾಲಕಿಯರ ರೂಪದಲ್ಲಿ ಪೂಜಿಸುವದರ ಕುರಿತಾಗಿ ಹೇಳಲಾಗಿದೆ. ಶಾಸ್ತ್ರಬದ್ಧವಾಗಿ ಈ ರೀತಿಯ ಪೂಜೆಯನ್ನು ಕೈಗೊಂಡರೆ, ಭಕ್ತನು ಸಿರಿ ಸಂಪತ್ತನ್ನು ಉಳ್ಳವನಾಗುತ್ತಾನೆ ಎಂದು ಹೇಳಲಾಗುತ್ತದೆ.

Śāradārādhyā शारदाराध्या (123)

೧೨೩. ಶಾರದಾರಾಧ್ಯಾ

            ಶಾರದಾ ಎಂದರೆ ವಾಗ್ದೇವಿಯಾದ (ಮಾತನ್ನು ಕರುಣಿಸುವ) ಸರಸ್ವತೀ. ದೇವಿಯನ್ನು ಸರಸ್ವತಿಯು ಆರಾಧಿಸುತ್ತಾಳೆ. ಶಾರದಾ ಎಂದರೆ ಸಹಸ್ರನಾಮವನ್ನು ರಚಿಸಿರುವ ವಾಕ್-ದೇವಿಗಳೂ ಆಗಬಹುದು.

            ದೇವಿಯನ್ನು ನವರಾತ್ರಿ ಅಥವಾ ಶಾರದಾ ನವರಾತ್ರಿ ಎಂದು ಕರೆಯಲ್ಪಡುವ ಒಂಭತ್ತು ರಾತ್ರಿಗಳಂದು ಪೂಜಿಸುತ್ತಾರೆ; ಈ ಒಂಭತ್ತು ದಿನಗಳು ಇಂಗ್ಲೀಷ ಕ್ಯಾಲೆಂಡರಿನ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ (ಭಾದ್ರಪದ ಮಾಸದಲ್ಲಿ) ಬರುತ್ತವೆ. ತಂತ್ರ ಶಾಸ್ತ್ರದ ಪ್ರಕಾರ ಶಕ್ತಿಯ ಆರಾಧನೆಯನ್ನು ಯಾವಾಗಲೂ ರಾತ್ರಿ ವೇಳೆಯಲ್ಲಿಯೇ ಕೈಗೊಳ್ಳಲಾಗುತ್ತದೆ. ವಿಷ್ಣುವನ್ನು ಬೆಳಗಿನ ಜಾವದಲ್ಲಿ, ಶಿವನನ್ನು ಸಾಯಂಕಾಲದ ವೇಳೆಯಲ್ಲಿ ಮತ್ತು ಲಲಿತಾಂಬಿಕೆಯನ್ನು ರಾತ್ರಿಯ ವೇಳೆಯಲ್ಲಿ ಪೂಜಿಸಬೇಕೆಂದು ಹೇಳುತ್ತಾರೆ. ಶಾರದಾ ನವರಾತ್ರಿಯನ್ನು ಹೊರತು ಪಡಿಸಿ ಮತ್ತೊಂದು ನವರಾತ್ರಿಯೂ ಇದೆ ಅದನ್ನು ವಸಂತ ನವರಾತ್ರಿ ಎಂದು ಕರೆಯಲಾಗುತ್ತದೆ ಮತ್ತು ಅದು ಏಪ್ರಿಲ್-ಮೇ ತಿಂಗಳಿನಲ್ಲಿ (ಚೈತ್ರ ಮಾಸದಲ್ಲಿ) ಬರುತ್ತದೆ. ಆದ್ದರಿಂದ ಬಹುಶಃ ಈ ನಾಮವು ಶಾರದಾ ನವರಾತ್ರಿ ಎನ್ನುವುದನ್ನು ಸೂಚಿಸಬಹುದು. "ಒಮ್ಮೆ ಒಂದು ವಸಂತ ಕಾಲದಲ್ಲಿ, ಒಂಭತ್ತನೆಯ ದಿನದಂದು ನೀನು ದೇವತೆಗಳಿಂದ ಎಚ್ಚರಿಸಲ್ಪಟ್ಟೆ”. ಆದ್ದರಿಂದ ನೀನು ಪ್ರಪಂಚಕ್ಕೆ ಶಾರದಾ ಎಂದು ಪರಿಚಿತಳಾದೆ” ಎಂದು ಕಾಳಿಕಾ ಪುರಾಣವು ಹೇಳುತ್ತದೆ.

           ಈ ನಾಮವು ದೇವಿಯು ಜ್ಞಾನವಂತರಿಂದ ಆರಾಧಿಸಲ್ಪಡುತ್ತಾಳೆ (ವೇದ ಮತ್ತು ಶಾಸ್ತ್ರಗಳಿಂದ ಪಡೆಯಲ್ಪಟ್ಟ ಜ್ಞಾನ) ಎಂದು ಹೇಳುತ್ತದೆ.

******

            ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 121-123 http://www.manblunder.com/2009/08/lalitha-sahasranamam-121-123.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ.ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 

 

Rating
Average: 5 (1 vote)

Comments

Submitted by nageshamysore Wed, 06/19/2013 - 22:22

ಶ್ರೀಧರರೆ, 121-123 ನಿಮ್ಮ ಅವಗಾಹನೆ ಮತ್ತು ಪರಿಷ್ಕರಣಾ ಸಲಹೆಗೆ :-) - ನಾಗೇಶ ಮೈಸೂರು

೧೨೧. ಭಯಾಪಹಾ
ಬ್ರಹ್ಮವರಿತವ ನಿರ್ಭೀತ ಸ್ವಯಂಸಾಕ್ಷೀಭೂತ
ಮಾಯೆ ಅಜ್ಞಾನವಷ್ಟೆ ಎರಡಾಗಿ ಹೆದರಿಸುತ
ಸಂಸಾರಚಕ್ರ ಬಂಧನ ಭಯ ಬಿಡಿಸೊ ಚರಣ
ನಾಮೋಚ್ಛಾರಣೆಯೆ ಬಲ ಭೀತಿಯೆ ನಿತ್ರಾಣ!

ಭಯದ ಬಗ್ಗೆ ಇನ್ನಷ್ಟು ವಿವರಣೆ:

ಭೀತ ಮನವೆ ಶಕ್ತಿಗೆ ಬವಣೆ, ಕನ್ನಡಿ ಸುಖದುಃಖ ಪ್ರತಿಫಲನೆ
ಕರ್ಮಾರ್ಜಿತ ಪೂರ್ವಾರ್ಜಿತಾ, ಕೊರಗೆ ಋಣಾತ್ಮಕ ಯಾತನೆ
ಆಧ್ಯಾತ್ಮಿಕತೆ ಔನ್ನತ್ಯ ವಿನಾಶ, ಅರ್ಥಿಕ ಭೌತಿಕ ಅಹಂ ಜಾಲ
ಧನಾತ್ಮಕ ಪೋಷಣೆ ತಾನೆ, ಮೂಲೋತ್ಪಾಟನೆ ಭಯ ಮೂಲ!

ಬಿತ್ತಿದ ಬೀಜದ ಫಸಲು ಭಯ ಭೀತಿಯ ಹೊಸಿಲು
ದೈವಿ ಶಕ್ತಿಯೆ ಸುತ್ತಲೂ ನಂಬೆ ರಕ್ಷಿಸಿ ಹಗಲಿರುಳು
ಭಯಕೆ ಅಂಜದೆ ಕಪಿಮುಷ್ಟಿಯಲ್ಹಿಡಿದಿಡುತೆ ಕಾರಣ
ಕ್ಷಿಪ್ರಧ್ಯಾನ ಕಾರಣ ಭಸ್ಮ, ಭಯ ಪ್ರಭಾವ ನಿರ್ನಾಮ!

೧೨೨. ಶಾಂಭವೀ 
ಭಕ್ತಗೆ ಸುಖ ದಯಪಾಲಿಸುತ ಶಿವ ಶಂಭು ಲಲಿತೆ ಶಾಂಭವಿ
ಆಜ್ಞಾಚಕ್ರ ಕಣ್ಗುಡ್ಡೆ ಗಮನ ಶಾಂಭವಿ ಮುದ್ರೆ ಪ್ರಜ್ಞಾರೋಹಣ
ತ್ರಿದೀಕ್ಷಾ ವ್ಯಾಖ್ಯಾನ ಶಾಕ್ತಿ, ಮಾಂತ್ರಿ, ಶಾಂಭವಿ ಅರಾಧನೆಗೆ
ಶಾಂಭವ ಮಾತೆ ಶಾಂಭವಿ ತನುಮನವೆಲ್ಲಾ ಸದಾಶಿವವಾಗೆ!       

೧೨೩. ಶಾರದಾರಾಧ್ಯಾ 
ಅರಾಧಿತೆ ಮಾತೆ ವೇದ ಶಾಸ್ತ್ರ ಪಾರಂಗತ ಜ್ಞಾನವಂತ
ವಾಗ್ಡೇವಿ ರೂಪದ ಶಾರದೆ ಸರಿ ಮಾತನು ಕರುಣಿಸುತ
ಆರಾಧಿಸುವಳೆ ಸರಸ್ವತಿ ವಾಕ್- ದೇವಿ ಸಹಸ್ರನಾಮ
ಶಾರದಾ ನವರಾತ್ರಿ ಪೂಜೆಗೆ ಲಲಿತಾಂಬಿಕೆ ಸಂಭ್ರಮ!

Submitted by ಗಣೇಶ Wed, 06/19/2013 - 23:45

In reply to by nageshamysore

>>>ಯಾರೂ ನಮಗೆ ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ಹಾನಿಯುಂಟು ಮಾಡಲಾರರು. ನೀವು ಒಬ್ಬ ದೈವ ಜೀವಿಯಾಗಿದ್ದು ನಿಮಗೆ ಅಮಿತವಾದ ದೈವೀ ಶಕ್ತಿಗಳಿವೆ ಮತ್ತು ಅವು ಸದಾ ನಿಮ್ಮ ಸುತ್ತಲಿದ್ದು ನಿಮ್ಮನ್ನು ರಕ್ಷಿಸುತ್ತವೆ. ಆಕೆಯ ಪೂಜೆಯನ್ನು ಮಾಡುವವರಿಗೆ ಜನನ ಮರಣಗಳ ಭಯವಿರುವುದಿಲ್ಲ. ಕೇವಲ ಆಕೆಯ ನಾಮೋಚ್ಛಾರಣೆಯೇ ಭಯವನ್ನು ಹೋಗಲಾಡಿಸುತ್ತದೆ. --ನಾಮೋಚ್ಛಾರಣೆಯೆ ಬಲ ಭೀತಿಯೆ ನಿತ್ರಾಣ! ಕವನ ಚೆನ್ನಾಗಿದೆ.೧೦/೧೦ :)
>>>ಲಲಿತಾಂಬಿಕೆಯನ್ನು ರಾತ್ರಿಯ ವೇಳೆಯಲ್ಲಿ ಪೂಜಿಸಬೇಕೆಂದು ಹೇಳುತ್ತಾರೆ.->ನನ್ನ ಹಾಗೆ. :)

Submitted by makara Thu, 06/20/2013 - 10:40

In reply to by ಗಣೇಶ

ಲಲಿತಾಂಬಿಕೆಯನ್ನು ರಾತ್ರಿಯ ವೇಳೆಯಲ್ಲಿ ಪೂಜಿಸಬೇಕೆಂದು ಹೇಳುತ್ತಾರೆ.->ನನ್ನ ಹಾಗೆ. :)
ಇನ್ನು ಮುಂದೆ ರಾತ್ರಿಯ ಹೊತ್ತು ಎಚ್ಚರವಿದ್ದುಕೊಂಡು ಕೆಲಸ ಮಾಡಲಿಕ್ಕೆ ಮತ್ತು ನಿಮ್ಮ ಶ್ರೀಮತಿಯವರಿಗೆ ಹೇಳಲಿಕ್ಕೆ ಹೊಸ ನೆಪವೊಂದು ಸಿಕ್ಕಿತಲ್ಲವೇ ....? ಗಣೇಶ್.ಜಿ :))

Submitted by makara Thu, 06/20/2013 - 10:38

In reply to by nageshamysore

ಕ್ಲಿಷ್ಟವಾದ ಸಂಗತಿಗಳನ್ನು ಜೀರ್ಣಿಸಿಕೊಂಡು ಅವನ್ನು ಹಿಡಿದಿಡುವ ನಿಮ್ಮ ಪರಿ ನಿಜಕ್ಕೂ ಅದ್ಭುತವಾದದ್ದು ನಾಗೇಶರೆ. ಆ ದೇವಿಯೇ ನಿಮ್ಮಿಂದ ಈ ಕಾರ್ಯ ಮಾಡಿಸುತ್ತಿದ್ದಾಳೆಂದೆನಿಸುತ್ತಿದೆ. ಶುಭವಾಗಲಿ.