೪೭. ಶ್ರೀ ಲಲಿತಾ ಸಹಸ್ರನಾಮ ೧೨೪ ರಿಂದ ೧೨೮ನೇ ನಾಮಗಳ ವಿವರಣೆ

೪೭. ಶ್ರೀ ಲಲಿತಾ ಸಹಸ್ರನಾಮ ೧೨೪ ರಿಂದ ೧೨೮ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೨೪ - ೧೨೮

Śarvāṇī शर्वाणी (124)

೧೨೪. ಶರ್ವಾಣೀ

           ಶಿವನಿಗೆ ಎಂಟು ವಿಶ್ವರೂಪಗಳಿವೆ; ಅವು ಮೂಲ ಧಾತುಗಳಾದ ಪಂಚಭೂತಗಳು (ಆಕಾಶ, ವಾಯು, ಅಗ್ನಿ, ನಿರುತ್ ಮತ್ತು ಭೂಮಿ), ಆತ್ಮ, ಸೂರ್ಯ ಮತ್ತು ಚಂದ್ರ ಇವುಗಳ ಪ್ರತೀಕವಾಗಿವೆ ಎಂದು ಲಿಂಗಪುರಾಣವು (೧.೨೮.೧೫ - ೧೭) ಹೇಳುತ್ತದೆ. ಭೀಮ ರೂಪವು ಆಕಾಶ, ಉಗ್ರ ರೂಪವು ವಾಯು, ರುದ್ರವು ಅಗ್ನಿಯಾಗಿದೆ, ಭವ ರೂಪವು ನಿರುತ್ ಮತ್ತು ಶರ್ವ ರೂಪವು ಭೂಮಿಯಾಗಿದೆ, ಪಶುಪತಿ - ಆತ್ಮ, ಈಶಾನ - ಸೂರ್ಯ ಮತ್ತು ಮಹಾದೇವ - ಚಂದ್ರನಾಗಿದೆ. ಶರ್ವ ರೂಪವು ಪಂಚಭೂತಗಳಲ್ಲಿ ಒಂದಾದ ಭೂಮಿಯನ್ನು ಪ್ರತಿನಿಧಿಸುತ್ತದೆ ಮತ್ತು ಶರ್ವಾಣಿಯು ಶರ್ವನ ಪತ್ನಿಯಾಗಿದ್ದಾಳೆ. ಅವರ ಪುತ್ರನು ಮಂಗಳ; ನವಗ್ರಹಗಳಲ್ಲಿ ಒಬ್ಬನಾಗಿದ್ದಾನೆ.

ಗ್ರಹ ಶಾಂತಿಯ ಕುರಿತಾಗಿ ಕೆಲವೊಂದು ವಿವರಗಳು

           ನೀಚ ಸ್ಥಾನದಲ್ಲಿರುವ ಗ್ರಹಗಳಿಂದ ಉಂಟಾಗುವ ಗ್ರಹದೋಷಗಳಿಂದ ಮುಕ್ತರಾಗಲು ಬಯಸುವವರು ಆ ದೋಷಗ್ರಸ್ತ ಗ್ರಹಗಳ ಸ್ಥಿತಿ-ಗತಿಗಳನ್ನು ಕೂಲಂಕುಷವಾಗಿ ಅಭ್ಯಸಿಸಿದ ನಂತರ ಅದರ ಪ್ರಕಾರ ದೋಷ ಪರಿಹಾರ ಕ್ರಿಯೆಗಳನ್ನು ಕೈಗೊಳ್ಳಬೇಕು. ಗ್ರಹದೋಷಗಳು ಕೇವಲ ಶಾಸ್ತ್ರವಿಧಿತ ಹೋಮ-ಹವನಗಳನ್ನು ಕೈಗೊಳ್ಳುವುದರಿಂದಾಗಿ ಅಥವಾ ನಿಗದಿಸಲ್ಪಟ್ಟ ಕೆಲವೊಂದು ದೇವಸ್ಥಾನಗಳನ್ನು ದರ್ಶಿಸುವುದರಿಂದ ಸಂಪೂರ್ಣವಾಗಿ ನಶಿಸಲಾರವು. ಆ ಶಾಂತಿ ಹೋಮವನ್ನು ಕೈಗೊಳ್ಳುವ ಮೊದಲು ಅದನ್ನು ಮಾಡಬೇಕಾದ ದಿನ ಮತ್ತು ವೇಳೆಯನ್ನು ನಿಗದಿ ಪಡಿಸುವುದಕ್ಕಿಂತ ಮುಂಚೆ ಆ ನಕ್ಷತ್ರದ ಅಧಿಪತಿ ಮತ್ತು ಉಪ-ಅಧಿಪತಿ ಇವರನ್ನು ಗಣನೆಗೆ ತೆಗೆದುಕೊಳ್ಳಬೇಕು. ಉದಾಹರಣೆಗೆ, ಒಂದು ಜಾತಕದಲ್ಲಿ ಮಂಗಳನು ದೋಷಗ್ರಸ್ತನಾಗಿದ್ದರೆ, ಮಂಗಳವಾರ ಶಾಂತಿ ಪ್ರಕ್ರಿಯೆಗಳನ್ನು ಕೈಗೊಳ್ಳುವುದು ಸರಿಯಾಗದೇ ಇರಬಹುದು. ಆದರೆ ಸೂಕ್ತವಾದ ದಿನ ಮತ್ತು ಮುಹೂರ್ತವು ಮಂಗಳ ಗ್ರಹಕ್ಕೆ ಸಂಭಂದಿಸಿದ ನಕ್ಷತ್ರಾಧಿಪತಿ ಮತ್ತು ಉಪನಕ್ಷತ್ರಾಧಿಪತಿಗೆ ಸಂಭಂದಪಟ್ಟ ದಿವಸವು ಹೆಚ್ಚು ಸೂಕ್ತವಾಗುತ್ತದೆ. ಅನ್ನದಾನ ಮತ್ತು ಪ್ರಾಣಿಗಳಿಗೆ ಆಹಾರವನ್ನು ಕೊಡುವುದು ಗ್ರಹದೋಷವನ್ನು ಹೋಗಲಾಡಿಸುವುದರಲ್ಲಿ ಬಹಳ ಮಹತ್ವದ ಸ್ಥಾನವನ್ನು ಪಡೆದಿದೆ. ಅನಾಥಾಶ್ರಮಗಳಿಗೆ ಭೇಟಿಯಿತ್ತು ಅವರಿಗೆ ಕೈಯ್ಯಾರೆ ಉಣಬಡಿಸುವುದು ಅತ್ಯಂತ ಸರಿಯಾದ ಕ್ರಮ. ಅವರ ಮುಖದಲ್ಲಿ ಕಾಣುವ ಹೊಟ್ಟೆ ಹಸಿವನ್ನು ಹಿಂಗಿಸಿಕೊಂಡ ತೃಪ್ತಿಯು ಯಾವುದೇ ವಿಧವಾದ ಗ್ರಹದೋಷಗಳನ್ನು ನಿವಾರಿಸುವುದರಲ್ಲಿ ಶಕ್ತವಾಗಿವೆ. ಮಂತ್ರ ಜಪವೂ ಕೂಡಾ ಗ್ರಹಗಳ ದೋಷವನ್ನು ನಿವಾರಿಸುವಲ್ಲಿ ಅತ್ಯಂತ ಉಪಯುಕ್ತ ಕ್ರಮವಾಗಿದೆ. ಗ್ರಹದೋಷ ಪೂಜೆಗಳನ್ನು ಸ್ವತಃ ಮಾಡಬೇಕು ಮತ್ತು ಬೇರೊಬ್ಬರ ಮೂಲಕ ಅಲ್ಲ. ಯಾರಿಗೆ ಭಗವಂತನಲ್ಲಿ ಅಚಲವಾದ ಭಕ್ತಿಯಿರುತ್ತದೆಯೋ ಅವರಿಗೆ ಯಾವುದೇ ರೀತಿಯಾದ ದೋಷಗಳನ್ನು ಉಂಟು ಮಾಡಲು ಗ್ರಹಗಳು ಅಸಮರ್ಥವಾಗಿವೆ.

Śarmadāyinī शर्मदायिनी (125)

೧೨೫. ಶರ್ಮದಾಯಿನೀ

           ಶರ್ಮ ಎಂದರೆ ಸಂತೋಷ. ದೇವಿಯು ತನ್ನ ಭಕ್ತರ ಮೇಲೆ ಸಂತೋಷವನ್ನು ಕರುಣಿಸುತ್ತಾಳೆ. ಸಂತೋಷವನ್ನು ಕೊಡಮಾಡುವುದು ದೇವಿಯ ಹವ್ಯಾಸವಾಗಿದೆ ಏಕೆಂದರೆ ಆಕೆಯು ಜಗಜ್ಜನನಿಯಾಗಿದ್ದಾಳೆ. ಹೆಚ್ಚಿನ ವಿವರಗಳನ್ನು ಇದೇ ಅರ್ಥವನ್ನು ಕೊಡುವ ೧೯೨, ೯೫೩ ಮತ್ತು ೯೬೮ ನಾಮಾವಳಿಗಳ ಚರ್ಚೆಗಳಲ್ಲಿ ನೋಡಬಹುದು.

Śāṃkarī शांकरी (126)

೧೨೬. ಶಾಂಕರೀ

          ಶಿವನ ಒಂದು ರೂಪವಾದ ಶಂಕರನ ಹೆಂಡತಿಯಾಗಿರುವುದರಿಂದ ಆಕೆ ಶಾಂಕರೀ. ಶಮ್ ಎಂದರೆ ಸಂತೋಷ ಮತ್ತು ಕರಾ ಎಂದರೆ ಉಂಟುಮಾಡುವವನು. ಆದ್ದರಿಂದ ಶಂಕರನು ಸಂತೋಷವನ್ನು ಉಂಟು ಮಾಡುವುದಕ್ಕೆ ಹೆಸರಾಗಿದ್ದರೆ ಅವನ ಪತ್ನಿಯಾದ ಶಾಂಕರಿಯೂ ಅದೇ ಗುಣವುಳ್ಳವಳಾಗಿದ್ದಾಳೆ. ಶಿವ ಮತ್ತು ಶಕ್ತಿಯರ ಗುಣಗಳಲ್ಲಿ ಯಾವುದೇ ರೀತಿಯ ಭೇದವಿಲ್ಲ. ಆದ್ದರಿಂದ ಶಿವ ಮತ್ತು ಪಾರ್ವತಿಯರನ್ನು ಈ ಜಗದ ತಂದೆ ಮತ್ತು ತಾಯಿಯರೆಂದು ಹೇಳಲಾಗಿದೆ.

Śrīkarī श्रीकरी (127)

೧೨೭. ಶ್ರೀಕರೀ

         ‘ಶ್ರೀ’ ಎಂದರೆ ಎಲ್ಲಾ ವಿಧವಾದ ಅಭಿವೃದ್ಧಿ. ಅದಕ್ಕೆ ಸಂಪತ್ತು, ಸಂತೋಷ, ಸೌಂದರ್ಯ, ಆಕರ್ಷಣೆ, ಶುಭಪ್ರದತೆ, ಮೊದಲಾದ ಅರ್ಥಗಳಿವೆ. ದೇವಿಯು ಈ ಎಲ್ಲಾ ಗುಣಗಳ ಮೂರ್ತರೂಪವಾಗಿರುವುದರಿಂದ ಮತ್ತು ಆಕೆಯು ತನ್ನ ಭಕ್ತರಿಗೆ ಈ ಎಲ್ಲಾ ಗುಣಗಳನ್ನು ದಯಪಾಲಿಸುವುದರಿಂದ ಅವಳು ಶ್ರೀಕರೀ ಎಂದು ಕರೆಯಲ್ಪಟ್ಟಿದ್ದಾಳೆ. ವಿಷ್ಣು ಸಹಸ್ರನಾಮದ ೬೧೧ನೇ ನಾಮವು ಶ್ರೀಕರಾ ಎಂದಿದ್ದು ಅದು ತನ್ನ ಭಕ್ತರಿಗೆ ಸಂಪದವನ್ನು ಪ್ರಸಾದಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ. ವಾಸ್ತವವಾಗಿ ವಿಷ್ಣು ಮತ್ತು ಲಲಿತಾಂಬಿಕೆಯರಲ್ಲಿ ಯಾವುದೇ ಭೇದವಿಲ್ಲ. ವಿಷ್ಣುವೂ ಕೂಡಾ ಶುಭ ಮೊದಲಾದವುಗಳನ್ನು ಉಂಟು ಮಾಡುವುದಕ್ಕೆ ಪ್ರಸಿದ್ಧನಾಗಿದ್ದಾನೆ. ವಿಷ್ಣು ಮತ್ತು ಲಲಿತಾಂಬಿಕೆಯರಲ್ಲಿ ಸಹೋದರತ್ವವಿದ್ದು ವಿಷ್ಣುವು ಆಕೆಯ ಅಣ್ಣನಾಗಿದ್ದಾನೆ. ಈ ನಾಮಾವಳಿಯಲ್ಲಿರುವ ಇತರೇ ನಾಮಗಳು ಇದನ್ನು ದೃಢಪಡಿಸುತ್ತವೆ. ಅವೆಂದರೆ ಗೋವಿಂದರೂಪಿಣಿ - ನಾಮ ೨೬೭, ನಾರಾಯಣೀ - ನಾಮ ೨೯೮, ವಿಷ್ಣು ರೂಪಿಣೀ ಮೊದಲಾದವು. ’ಶ್ರೀಕರಾ’ ಇವನ ಸಹೋದರಿಯು ’ಶ್ರೀಕರೀ’ ಆಗಿದ್ದಾಳೆ.

Sādhvī साध्वी (128)

೧೨೮. ಸಾಧ್ವೀ

          ಆಕೆಯು ಪತಿವ್ರತೆ (ನಾಮಾವಳಿ ೭೦೯ರಲ್ಲಿ ಹೆಚ್ಚಿನ ವಿವರಗಳನ್ನು ನೋಡೋಣ). ಯಾರಾದರೂ ಬಹಳಷ್ಟು ಸಂಪತ್ತನ್ನು ಹೊಂದಿದ್ದರೆ ಅವನನ್ನು ಲಕ್ಷ್ಮೀಪತಿ, ಅಂದರೆ ಲಕ್ಷ್ಮಿಯ ಪತಿ ಅಥವಾ ಶ್ರೀ ಮಹಾವಿಷ್ಣು ಎಂದು ಕರೆಯುವ ರೂಢಿಯಿದೆ. ಪತಿ ಎನ್ನುವುದನ್ನು ಸಾಮಾನ್ಯವಾಗಿ ಹೆಂಗಸೋರ್ವಳ ಗಂಡನನ್ನು ಕುರಿತಾಗಿ ಪ್ರಯೋಗಿಸಲಾಗುತ್ತದೆ. ಪ್ರಾಚೀನ ಸಂಸ್ಕೃತದಲ್ಲಿ ಪತಿ ಎನ್ನುವುದನ್ನು ಶುಭ ಚಿಹ್ನೆ, ಶುಭ ಶಕುನ, ಸಂಪದಭಿವೃದ್ಧಿ, ಯಶಸ್ಸು, ಸಂತೋಷವನ್ನು ಸೂಚಿಸಲು ಬಳಸಲಾಗುತ್ತಿತ್ತು. ಲಕ್ಷ್ಮಿಯು ವಿಷ್ಣುವಿನ ವಕ್ಷಸ್ಥಳದಲ್ಲಿ ನಿವಸಿಸುತ್ತಾಳೆ. ಲಲಿತಾಂಬಿಕೆ ಮತ್ತು ಶಿವ ಒಬ್ಬರಿಗೊಬ್ಬರು ಎಷ್ಟು ಆಳವಾಗಿ ಬೆಸಗೊಂಡಿದ್ದಾರೆಂದರೆ, ಒಬ್ಬರ ಸಹಾಯವಿಲ್ಲದೆ ಮತ್ತೊಬ್ಬರು ತಮ್ಮ ಕಾರ್ಯಗಳನ್ನು ಸಹ ಕೈಗೊಳ್ಳಲು ಅಸಮರ್ಥರಾಗಿದ್ದಾರೆ.

          ಸೌಂದರ್ಯ ಲಹರಿಯ ೯೬ನೇ ಶ್ಲೋಕವು ಈ ನಾಮವನ್ನು ವಿವರಿಸುತ್ತದೆ. "ಓಹ್ಞ್! ಪರಮ ಪತಿವ್ರತೆಯೇ! ಬ್ರಹ್ಮನ ಹೆಂಡತಿಯ ಸಾಂಗತ್ಯವನ್ನು (ಜ್ಞಾನ/ಪಾಂಡಿತ್ಯವನ್ನು ಸೂಚಿಸುತ್ತದೆ) ಎಷ್ಟು ಜನ ಕವಿಗಳು ಮಾಡುವುದಿಲ್ಲಾ? ಎಷ್ಟು ಜನ ಕೆಲವೇ ಸಿರಿಗಳನ್ನು ಹೊಂದಿ ಲಕ್ಷ್ಮೀ ಪತಿಗಳಾಗುವುದಿಲ್ಲ. ಆದರೆ, ಶಿವನನ್ನು ಹೊರತು ಪಡಿಸಿ ನಿನ್ನನ್ನು ಯಾರೂ ಹೊಂದಲಾರರು". ಇಲ್ಲಿ ವ್ಯಾಖ್ಯಾನಕಾರರು ಲಲಿತಾಂಬಿಕೆಯು ಇತರೇ ದೇವ-ದೇವಿಯರಂತಲ್ಲದೇ ಆಕೆಯು ಇವರೊಂದಿಗಿನ ಹೋಲಿಕೆಗೆ ಅತೀತಳಾಗಿದ್ದಾಳೆ, ಎಂದು ಹೇಳುತ್ತಿದ್ದಾರೆ. ಈ ಶ್ಲೋಕದಲ್ಲಿನ ಸಂಸ್ಕೃತದ ಪತಿ ಎನ್ನುವ ಶಬ್ದವನ್ನು ವಿಶ್ಲೇಷಿಸುವಲ್ಲಿ ಸಮಸ್ಯೆಯುಂಟಾಗುತ್ತದೆ ಏಕೆಂದರೆ ಅದು ಗಂಡ ಎನ್ನುವ ಸಾಮಾನ್ಯ ಅರ್ಥವನ್ನು ಕೊಡುತ್ತದೆ. ಆದರೆ ಈ ಶಬ್ದಕ್ಕೆ ಇತರೇ ಅರ್ಥಗಳಾದ ಒಡೆಯ, ಆಧಿಪತ್ಯ ಹೊಂದಿದವನು, ಪ್ರಭುತ್ವ ಹೊಂದಿದವನು, ಉಳ್ಳವನು ಮೊದಲಾದ ಅರ್ಥಗಳಿವೆ. ಆದ್ದರಿಂದ ಈ ಸಂದರ್ಭದಲ್ಲಿ ಪತಿ ಎನ್ನುವುದು ಗಂಡ ಎನ್ನುವ ಅರ್ಥವನ್ನು ಕೊಡುವುದಿಲ್ಲ ಆದರೆ ಯಾರು ಸಂಪತ್ತನ್ನು ಹೊಂದಿದ್ದಾರೋ ಅಥವಾ ಜ್ಞಾನ ಮತ್ತು ವಿವೇಕವನ್ನು ಹೊಂದಿದವರು, ಅಥವಾ ಭಾಷಣ ಕಲೆಯ ಮೇಲೆ ಪ್ರಭುತ್ವ ಸಾಧಿಸಿದವನು ಎಂದಾಗುತ್ತದೆ. ಸೌಂದರ್ಯಲಹರಿಯ ಈ ಪಂಕ್ತಿಯು ಕಾವ್ಯಾಲಂಕಾರವಾಗಿದೆ.

         ಲಲಿತಾಂಬಿಕೆಯನ್ನು ಸಾಧ್ವೀ ಎಂದು ಕರೆಯಲಾಗಿದೆ, ಏಕೆಂದರೆ ಆಕೆಯು ಯಾವಾಗಲೂ ಶಿವನೊಂದಿಗೇ ಇರುತ್ತಾಳೆ. ಆಕೆಯು ಶಿವನನ್ನು ಪತಿದೇವ ಅಂದರೆ ತನ್ನ ಪತಿಯನ್ನು ದೈವಸ್ವರೂಪವೆಂದು ಭಾವಿಸುವವಳು. ಈ ವಿವರಣೆಯು ಈ ನಾಮಕ್ಕೆ ಹೆಚ್ಚು ಸೂಕ್ತವಾಗಿದೆ; ಏಕೆಂದರೆ ಆಕೆಯು ಶಿವನಿಂದ ಸೃಜಿಸಲ್ಪಟ್ಟಿದ್ದರಿಂದ ಆಕೆಯು ಶಿವನನ್ನು ದೈವೀಪತಿ ಎಂದು ಪರಿಗಣಿಸುತ್ತಾಳೆ. ’ಪತಿ ವೇದನಃ’ ಎಂದರೆ ಶಿವ. ವೇದನಃ ಎಂದರೆ ಗ್ರಹಿಕೆ ಅಥವಾ ಜ್ಞಾನ ಮತ್ತು ಪತಿ ವೇದನಃ ಅಂದರೆ ಜ್ಞಾನವನ್ನು ಹೊಂದಿದವನು.

******

         ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 124-128 http://www.manblunder.com/2009/08/lalitha-sahasranamam-124-128.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 

Rating
Average: 5 (1 vote)

Comments

Submitted by nageshamysore Thu, 06/20/2013 - 05:43

ಶ್ರೀಧರರೆ, 124-128 ಸಹ ತಮ್ಮ ಅವಗಾಹನೆ, ಪರಿಷ್ಕರಣೆಗೆ ಸಿದ್ದ :-) - ನಾಗೇಶ ಮೈಸೂರು

೧೨೪. ಶರ್ವಾಣೀ 
ಮೂಲಧಾತುಗಳೆಂಟಂತೆ ಶಿವನ ವಿಶ್ವರೂಪದ ಪ್ರತೀಕ 
ಭೀಮರೂಪಿ ಅಕಾಶ ಉಗ್ರವಾಯು ರುದ್ರಾಗ್ನಿ ಉಲ್ಲೇಖ 
ಭವರೂಪ ನಿರುತ್ ಪಶುಪತಿ ಆತ್ಮ ಚಂದ್ರ ಮಹದೇವ
ಈಶಾನಸೂರ್ಯ ಶರ್ವವೆ ಭೂಮಿ ಸತಿಶರ್ವಾಣಿ ಶಿವಾ!

೧೨೫. ಶರ್ಮದಾಯಿನೀ 
ಶರ್ಮವೆನೆ ಸಂತೋಷ ದೇವಿ ವರ್ಷಿಸಿ ಹರ್ಷ
ಭಕ್ತಜನರ ಮೇಲೆ ಕರುಣಾಳು ಲಲಿತಾಸ್ಪರ್ಶ
ಜಗಜ್ಜನನಿಯಲ್ಲವೆ ಮಾತೆಗೆ ಕೊಟ್ಟೆ ಹವ್ಯಾಸ
ಭವ ಶರ್ಮದಾಯಿನಿಯ ಓಲೈಸೆ ಪೀಯೂಷ!

೧೨೬. ಶಾಂಕರೀ
ಜಗನ್ಮಾತಪಿತರೆ ಶಿವ ಪಾರ್ವತಿ ಅದ್ಭುತ
ಶಿವಶಕ್ತಿಗುಣ ಭೇದವೆಲ್ಲಿ ಏಕವಾಗೇ ವ್ಯಕ್ತ
ಸಂತೋಷ ಸೃಷ್ಟಿ ಶಂಕರನ ಸಹಜ ಗುಣ
ಶಾಂಕರೀ ಸಹಸೃಷ್ಟಿ ನಿಜಗುಣವೆ ದ್ವಿಗುಣ!

೧೨೭. ಶ್ರೀಕರೀ 
ಶ್ರೀಕರಾ ವಿಷ್ಣು ಶ್ರೀಕರೀ ಸಹೋದರಿ ರೂಪ
ಶುಭದಾಯಿನಿಯೆ ಶುಭಕರನಂತೆ ಸ್ವರೂಪ
ಸಕಲಾಭಿವೃದ್ಧಿ ಮೂಲ ರೂಪ ಲಲಿತಾಂಬೆ
ಭಕ್ತದಾಯಿ ಸರ್ವ ಸಂಪದ ಶ್ರೀಕರೀ ಅಂಬೆ!

೧೨೮. ಸಾಧ್ವೀ 
ಜ್ಞಾನದೊಡೆಯರಿರಬಹುದೆಷ್ಟೊ ಅಂತೆ ಸಿರಿಗಧಿಪತಿ
ಶಿವನಲೆ ಅಂತರ್ಗತೆ ಶಕ್ತಿ ಸೃಜಿಸಿದವನೆ ದೈವೀಪತಿ
ಶಿವನಲ್ಲದೆ ಬೇರಿಲ್ಲ ಶಕ್ತಿಗೆ ಜತೆ ಬೆಸೆದಷ್ಟೆ ಸಾಮರ್ಥ್ಯ
ಸದಾ ಶಿವಾಂತರ್ಗತೆ ಸಾಧ್ವೀ ಶಿವ ಸೃಜಿತೆ ಸಾಂಗತ್ಯ!

Submitted by makara Thu, 06/20/2013 - 10:27

In reply to by nageshamysore

"ಜಗಜ್ಜನನಿಯಲ್ಲವೆ ಮಾತೆಗೆ ಕೊಟ್ಟೆ ಹವ್ಯಾಸ
ಭವ ಶರ್ಮದಾಯಿನಿಯ ಓಲೈಸೆ ಪೀಯೂಷ!"

ಮೇಲಿನವು ಅತ್ಯುತ್ತಮ ಸಾಲುಗಳು. ಒಟ್ಟಾರೆಯಾಗಿ ಹಿಂದಿನ ನಾಮಗಳಿಗಿಂತ ಈ ಕಂತಿನ ಕಾವ್ಯಗಳು ಅತ್ಯಂತ ಸುಂದರವಾಗಿ ಮೂಢಿ ಬಂದಿದೆ. ನೀವು ನಿಜಕ್ಕೂ ಲಲಿತಾಸಹಸ್ರನಾಮದಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿದ್ದೀರ, ನಾಗೇಶರೆ. ಶಂಕರಾಚಾರ್ಯರು ನರಜನ್ಮವೇ ಶ್ರೇಷ್ಠವೆನ್ನುತ್ತಾರೆ, ಅದಕ್ಕಿಂತ ಹೆಚ್ಚಿನದು ಆಧ್ಯಾತ್ಮಿಕ ದಾಹ ಮತ್ತದಕ್ಕಿಂತಲೂ ಹೆಚ್ಚಿನದು ಅದನ್ನು ಕಾವ್ಯವಾಗಿಸುವುದು. ನಿಮ್ಮ ಈ ಗುಣಕ್ಕೆ ನನ್ನ ನಮನಗಳು.

Submitted by partha1059 Thu, 06/20/2013 - 08:49

ಶ್ರೀದರ ಬಂಡ್ರಿಯವರಿಗೆ ನಮಸ್ಕಾರ ನಿಮ್ಮ ವಿವರಣೆ ಉತ್ತಮವಾಗಿ ಸಾಗಿದೆ. ಬಾಷಾಂತರ ಮಾಡುತ್ತಿದ್ದರು ಸಹ ಹಾಗೆ ಅನ್ನಿಸುತ್ತಿಲ್ಲ ಕನ್ನಡದಲ್ಲಿಯೆ ನೀವೆ ಬರೆದಂತಿದೆ. ಶುಭವಾಗಲಿ