೪೮. ಶ್ರೀ ಲಲಿತಾ ಸಹಸ್ರನಾಮ ೧೨೯ ರಿಂದ ೧೩೩ನೇ ನಾಮಗಳ ವಿವರಣೆ

೪೮. ಶ್ರೀ ಲಲಿತಾ ಸಹಸ್ರನಾಮ ೧೨೯ ರಿಂದ ೧೩೩ನೇ ನಾಮಗಳ ವಿವರಣೆ

ಲಲಿತಾ ಸಹಸ್ರನಾಮ ೧೨೯ - ೧೩೩

Śaraccandranibhānanā शरच्चन्द्रनिभानना (129)

೧೨೯. ಶರಶ್ಚಂದ್ರನಿಭಾನನಾ

          ದೇವಿಯ ಮುಖವು ಶರತ್ ಕಾಲದ ಚಂದ್ರನಂತೆ ಕಂಗೊಳಿಸುತ್ತದೆ. ಶರದ್ ಋತುವು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳ ಎರಡನೇ ಪಕ್ಷದಿಂದ ಪ್ರಾರಂಭವಾಗಿ ಸಂಪೂರ್ಣ ನವೆಂಬರ್ ತಿಂಗಳು ಮತ್ತು ಡಿಸೆಂಬರ್ ತಿಂಗಳ ಮೊದಲನೇ ಪಕ್ಷದವರೆಗೆ ಇರುತ್ತದೆ. ಸಹಜವಾದ ಜಾತಕದಲ್ಲಿ ಪ್ರತಿಯೊಂದು ರಾಶಿಯೂ ಒಂದೊಂದು ಸೌರ ಮಾಸವನ್ನು ಪ್ರತಿನಿಧಿಸುತ್ತದೆ. ಎರಡು ಸೌರಮಾನ ತಿಂಗಳುಗಳು ಒಂದೊಂದು ಋತುವನ್ನು ಉಂಟುಮಾಡುತ್ತವೆ ಮತ್ತು ಇಂತಹ ಆರು ಋತುಗಳು ಒಂದು ವರ್ಷವನ್ನುಂಟು ಮಾಡುತ್ತವೆ. ಶರತ್ ಕಾಲದಲ್ಲಿ ಚಂದ್ರನು ಅತ್ಯಂತ ಶುಭ್ರವಾಗಿ ಹೊಳೆಯುತ್ತಾನೆ ಮತ್ತು ಯಾವುದೇ ರೀತಿಯ ಕಲೆಗಳು ಅವನಲ್ಲಿ ಇರುವುದಿಲ್ಲ. ನಾಮ ೧೩೩ರಲ್ಲಿ ಹೆಚ್ಚಿನ ವಿವರಗಳನ್ನು ನೋಡೋಣ.

          (ಅಶ್ವೀಜ ಮತ್ತು ಕಾರ್ತೀಕ ಮಾಸಗಳಲ್ಲಿ ಶರತ್ ಋತುವು ಬರುತ್ತದೆ ಎನ್ನುವುದು ಸಾಮಾನ್ಯವಾಗಿ ಚಾಂದ್ರಮಾನ ಪದ್ಧತಿಯನ್ನು ಅನುಸರಿಸುವವರಿಗೆ ತಿಳಿದ ಸಂಗತಿ, ಇಲ್ಲಿ ಮೂಲ ಲೇಖಕರು ಭಾರತೀಯ ಪಂಚಾಂಗ ಪದ್ಧತಿಯ ಪರಿಚಯವಿಲ್ಲದವರಿಗಾಗಿ ಈ ರೀತಿಯಾದ ವಿಶ್ಲೇಷಣೆಯನ್ನು ಕೊಟ್ಟಿದ್ದಾರೆ).

Śātodarī शातोदरी (130)

೧೩೦. ಶಾತೋದರೀ

          ದೇವಿಗೆ ಬಹಳ ಸಣ್ಣದಾದ ಸೊಂಟವಿದೆ. ಈ ಎರಡು ನಾಮಗಳು (೧೨೯ ಮತ್ತು ೧೩೦) ಅವಳ ಕಾಮಕಲಾ ರೂಪಕ್ಕೆ ಸಂಭಂದಿಸಿದವುಗಳಾಗಿವೆ; ಇದರ ಬಗೆಗಿನ ಹೆಚ್ಚಿನ ವಿವರಗಳನ್ನು ಆಕೆಯ ’ಕಾಮಕಲಾ ರೂಪಾ’ - ನಾಮ ೩೨೨ರ ವ್ಯಾಖ್ಯಾನದಲ್ಲಿ ನೋಡೋಣ.

Śantimatī शन्तिमती (131)

೧೩೧. ಶಾಂತಿಮತೀ

          ದೇವಿಯು ತನ್ನ ಭಕ್ತರಿಗೆ ಯಾವಾಗಲೂ ಕರ್ಕಶಳಾಗಿರುವುದಿಲ್ಲ. ಆಕೆಯು ಯೋಗ್ಯವೆನಿಸುವ ಭಕ್ತರ ಕೆಲವೊಂದು ಕೃತ್ಯಗಳನ್ನು ಸಹಿಸಿಕೊಳ್ಳುತ್ತಾಳೆ. ದೇವಿಯು ಶಾಂತಳಾಗಿದ್ದು, ತನ್ನ ಭಕ್ತರ ಕೆಲವೊಂದು ಕೃತ್ಯಗಳನ್ನು ಮಾತ್ರವೇ ಆಕೆಯು ಸಹಿಸಿಕೊಳ್ಳುತ್ತಾಳೆ. ಆಕೆಯ ಸಹನೆಗೂ ಒಂದು ಮಿತಿಯಿದೆ. ಒಮ್ಮೆ ಆ ಮಿತಿಯನ್ನು ಆಕೆಯ ಭಕ್ತರು ದಾಟಿ ಹೋದರೆ; ಅವರ ಅಕೃತ್ಯಗಳನ್ನು ತಿದ್ದುವ ಕಾರ್ಯವನ್ನು ಯಾವುದೇ ಅಳುಕಿಲ್ಲದೆ ಆಕೆಯು ಮಾಡುತ್ತಾಳೆ. ಈ ರೀತಿಯ ತಿದ್ದುವ ಕಾರ್ಯಗಳನ್ನು ದೇವಿಯು ತನ್ನ ಮಂತ್ರಿಗಳಾದ ಅಶ್ವಾರೂಢಾ ಅಥವಾ ವಾರಾಹಿ ದೇವಿಯರ ಮೂಲಕ ಕೈಗೊಳ್ಳುತ್ತಾಳೆ.

          ಈ ನಾಮದೊಂದಿಗೆ ದೇವಿಯ ಆಶೀರ್ವಾದದ ಕುರಿತಾದ ವಿವರಣೆಯು ಕೊನೆಗೊಳ್ಳುತ್ತದೆ. ೧೩೨ರಿಂದ ೧೫೫ನೇ ನಾಮಗಳು ಆಕೆಯ ನಿರ್ಗುಣ ಅಥವಾ ನಿರಾಕಾರ ರೂಪದ ಬಗ್ಗೆ ವಿವರಿಸುತ್ತವೆ. ಆಕೆಯನ್ನು ನಿರ್ಗುಣ ರೂಪದಲ್ಲಿ ಆರಾಧನೆ ಮಾಡುವುದನ್ನು ಬಹಳ ಮಹತ್ವದ ಸಂಗತಿಯಾಗಿ ಪರಿಗಣಿಸಲಾಗಿದೆ ಮತ್ತು ಈ ರೀತಿಯ ನಿರ್ಗುಣೋಪಾಸನೆಯ ಫಲಗಳ ಕುರಿತಾಗಿ ೧೫೬ರಿಂದ ೧೯೫ ನಾಮಗಳು ವಿಶೇಷವಾದ ವಿವರಣೆಯನ್ನು ಕೊಡುತ್ತವೆ. ಒಂದು ಆಸಕ್ತಿಕರ ವಿಷಯವೇನೆಂದರೆ ವಾಕ್ ದೇವಿಗಳು ಮೊದಲು ಆಕೆಯ ನಿರ್ಗುಣ ಉಪಾಸನೆಯ ಕುರಿತಾಗಿ ಚರ್ಚಿಸಿ ತದನಂತರ ಆಕೆಯ ಸಗುಣ ಉಪಾಸನೆಯ ಕುರಿತಾಗಿ (೧೯೬ ರಿಂದ ೨೪೮ ನಾಮಗಳಲ್ಲಿ) ಹೇಳಿರುವುದು.

Nirādhārā निराधारा (132)

೧೩೨. ನಿರಾಧಾರಾ

          ದೇವಿಯು ಯಾವುದೇ ರೀತಿಯ ಆಧಾರವಿಲ್ಲದವಳಾಗಿದ್ದಾಳೆ, ಆಕೆಯು ಯಾರ ಮೇಲೆಯೂ ಅವಲಂಭಿತಳಾಗಿಲ್ಲ. ಛಾಂದೋಗ್ಯ ಉಪನಿಷತ್ತು (೭.೨೪.೧) ಹೇಳುತ್ತದೆ, "ಯಾವುದು ಅನಂತವಾಗಿದೆಯೋ ಅದು ಮೃತಿಯಿಲ್ಲದ್ದಾಗಿದೆ ಮತ್ತು ಯಾವುದಕ್ಕೆ ಮಿತಯಿದೆಯೋ ಅದು ಮೃತಿ ಹೊಂದುತ್ತದೆ. ಅದು ತನ್ನ ಶಕ್ತಿಯ ಮೇಲೆ ನಿಲ್ಲುತ್ತದೆ - ಅಥವಾ ಆ ಶಕ್ತಿಯ ಮೇಲೆಯೂ ಅಲ್ಲ (ಅದು ಯಾವುದರ ಮೇಲೆಯೂ ಅವಲಂಭಿಸಿಲ್ಲ, ತನ್ನ ಬಲದ ಮೇಲೆಯೂ ಸಹ). ಇದನ್ನೇ ನಿರಾಧಾರ ಎನ್ನುತ್ತಾರೆ.

         ಶಕ್ತಿಯನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಎರಡೂ ವಿಧದಲ್ಲಿಯೂ ಆರಾಧಿಸುತ್ತಾರೆ; ಆದರೆ ಆಂತರಿಕ ಪೂಜೆಯು ಶೀಘ್ರವಾದ ಸಾಕ್ಷಾತ್ಕಾರಕ್ಕೆ ಎಡೆಮಾಡಿ ಕೊಡುತ್ತದೆ. ಬಾಹ್ಯ ಆಚರೆಣೆಯನ್ನು ಮುಂದೆ ಎರಡು ವಿಧವಾಗಿ ವಿಂಗಡಿಸಲಾಗಿದೆ - ವೈದಿಕ ಮತ್ತು ತಾಂತ್ರಿಕ. ಆಂತರಿಕ ಪೂಜೆಯನ್ನೂ ಸಹ ಎರಡು ವಿಧಗಳಾಗಿ ವಿಂಗಡಿಸಲಾಗಿದೆ, ಒಂದು ಸಾಕಾರ ಮತ್ತೊಂದು ನಿರಾಕಾರ. ಆಂತರಿಕವಾಗಿ ಯಾವುದೇ ರೂಪವನ್ನು ಆರೋಪಿಸದೆ ದೇವಿಯನ್ನು ಪೂಜಿಸುವ ಪದ್ಧತಿಯು ಆಶಿಸಿದ ಫಲಿತಗಳನ್ನು ಶೀಘ್ರವಾಗಿ ಉಂಟು ಮಾಡುವುದೆಂದು ತಿಳಿಯಲಾಗಿದೆ ಮತ್ತು ಇದು ಶೀಘ್ರವಾದ ಆತ್ಮ ಸಾಕ್ಷಾತ್ಕಾರಕ್ಕೆ ದಾರಿ ಮಾಡಿ ಕೊಡುತ್ತದೆ. ಪ್ರಜ್ಞೆಯ ಶುದ್ಧ ರೂಪವೇ ಶಕ್ತಿ. ಶಿವ ಸೂತ್ರ (೧.೧) ಇದನ್ನು ಚೈತನ್ಯಾತ್ಮಾ ಎಂದು ಕರೆಯುತ್ತದೆ. ಇದರ ಅರ್ಥ ಶುದ್ಧವಾದ ಪ್ರಜ್ಞೆಯು ಆತ್ಮವಾಗಿದೆ ಎಂದು. ಕೇವಲ ಆಕೆಯನ್ನು ಪೂಜಿಸುವದರಿಂದ ಮಾತ್ರವೇ ಸಂಸಾರ ಬಂಧನದಿಂದ ಬಿಡುಗಡೆಯು ಸಾಧ್ಯವಾಗಿ ಅದು ಅಂತಿಮವಾಗಿ ಮುಕ್ತಿಯೆಡೆಗೆ ಕೊಂಡೊಯ್ಯುತ್ತದೆ.

Nirañjanā निरञ्जना (133)

೧೩೩. ನಿರಂಜನಾ

           ಅಂಜನವೆಂದರೆ ಹೆಂಗಸರು ಕಣ್ಣಿಗೆ ಹಚ್ಚಿಕೊಳ್ಳುವ ಕಪ್ಪಾಗಿರುವ ಕಾಡಿಗೆ. ಹನುಮಂತನ ತಾಯಿಯ ಹೆಸರು ’ಅಂಜನಾ’ ಮತ್ತು ’ಅಂಜನಾ ನಂದನಮ್ ವೀರಂ’ ಎನ್ನುವ ಸ್ತುತಿಯೊಂದಿದೆ. ಅಂಜನವನ್ನು ಕಣ್ಣಿಗೆ ಹಚ್ಚಿಕೊಂಡಾಗ ಕಣ್ಣುಗಳು ಸುಂದರವಾಗಿ ಕಾಣುತ್ತವೆ. ದೇವಿಯ ಕಣ್ಣುಗಳು ಅಂಜನವಿಲ್ಲದೆಯೇ ಸುಂದರವಾಗಿ ಕಾಣುತ್ತವೆ ಎನ್ನುವುದು ಇಲ್ಲಿಯ ಸೂಚ್ಯಾರ್ಥ. ಆದರೆ ಅಂಜನವೆಂದರೆ ಅಜ್ಞಾನವೆನ್ನುವ ಅರ್ಥವೂ ಇದೆ; ಅಜ್ಞಾನವನ್ನು ಯಾವಾಗಲೂ ಕತ್ತಲೆಗೆ ಹೋಲಿಸುತ್ತಾರೆ ಮತ್ತು ಜ್ಞಾನವೆಂದರೆ ಬೆಳಕು. ನಿರ್ ಎಂದರೆ ಇಲ್ಲದಿರುವಿಕೆ, ಅಂದರೆ ಆಕೆಯು ಅಜ್ಞಾನವಿಲ್ಲದವಳಾಗಿದ್ದಾಳೆ. ವಾಕ್ ದೇವಿಗಳು ಬಹುಶಃ ಈ ನಾಮವನ್ನು ಆಕೆಯು ಅಜ್ಞಾನ ರಹಿತಳು ಎನ್ನುವುದನ್ನು ತಿಳಿಸಲು ರಚಿಸಿರಲಾರರು, ಏಕೆಂದರೆ ಜ್ಞಾನ ಮತ್ತು ಅಜ್ಞಾನಗಳು ಮಾನವರಿಗೆ ಸಂಭಂದಿಸಿದ್ದು ಜಗನ್ಮಾತೆಗೆ ಅಲ್ಲ ಏಕೆಂದರೆ ಆಕೆಯು ಜ್ಞಾನದ ಸ್ವರೂಪವೇ ಆಗಿದ್ದಾಳೆ. ಶ್ವೇತಾಶ್ವತರ ಉಪನಿಷತ್ತು (೬.೧೯) ಈ ರೀತಿಯ ವಿವಾದಕ್ಕೆ ಉತ್ತರವನ್ನು ಕೊಡುತ್ತದೆ. ಅದು ಹೀಗೆ ಹೇಳುತ್ತದೆ, "ನಿಷ್ಕಲಮ್, ನಿಷ್ಕ್ರಿಯಂ, ಶಾಂತಂ, ನಿರವಧ್ಯಮ್, ನಿರಂಜನಮ್". ಇದರ ಅರ್ಥ ಬ್ರಹ್ಮಕ್ಕೆ ರೂಪವಿಲ್ಲ, ಕ್ರಿಯೆಯಿಲ್ಲ, ಬಂಧನವಿಲ್ಲ, ಸುಲಭ ಗ್ರಾಹ್ಯವಲ್ಲದ್ದು ಮತ್ತು ಕಳಂಕ ರಹಿತವಾದದ್ದು". ಅದು ಮುಂದುವರಿಯುತ್ತಾ ನಿರಂಜನವೆಂದರೆ ಕಳಂಕವಿಲ್ಲದ್ದು ಎಂದು ಅರ್ಥೈಸುತ್ತದೆ. ಇದರಿಂದ ಲಲಿತಾಂಬಿಕೆಯು ಬ್ರಹ್ಮವೆಂದು ವಿಧಿತವಾಗುತ್ತದೆ. ಈ ನಾಮದ ಒಟ್ಟಾರೆ ಅರ್ಥವೇನೆಂದರೆ ಆಕೆಯ ನಿರ್ಗುಣ ಬ್ರಹ್ಮದ ರೂಪವು ಯಾವುದೇ ರೀತಿಯ ಕಳಂಕಗಳನ್ನು ಒಳಗೊಂಡಿಲ್ಲ.  ಹೆಚ್ಚಿನ ವಿವರಗಳನ್ನು ೩೫೪ನೇ ನಾಮದ ಚರ್ಚೆಯಲ್ಲಿ ನೋಡೋಣ.

           ಕುಂಡಲಿನೀ ಧ್ಯಾನದಲ್ಲಿ, ಒಬ್ಬರು ಆಜ್ಞಾ ಚಕ್ರವನ್ನು ತಲುಪಿದಾಗ ಅವರು ಬೆಳಕನ್ನು ನೋಡಲು ಸಾಧ್ಯವಾಗುತ್ತದೆ. ಪ್ರಾರಂಭಿಕ ಹಂತಗಳಲ್ಲಿ ಈ ಬೆಳಕಿನಲ್ಲಿ ಕೆಲವು ಕಳಂಕಗಳು (ಕಲೆಗಳು) ಇರಬಹುದು ಮತ್ತು ಈ ರೀತಿಯ ಕಲೆಗಳು ಅಭ್ಯಾಸವು ಪ್ರಗತಿಗೊಂಡಂತೆಲ್ಲಾ ಇಲ್ಲವಾಗುತ್ತವೆ. ಇದನ್ನೇ ದೇವಿಯ ಕಳಂಕ ರಹಿತ ರೂಪವೆನ್ನುವುದು ಮತ್ತು ಕುಂಡಲಿನೀ ರೂಪವು ಆಕೆಯ ಸೂಕ್ಷ್ಮಾತಿಸೂಕ್ಷ್ಮ ರೂಪವಾಗಿದೆ.

*******

          ವಿ.ಸೂ.:  ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 129-133 http://www.manblunder.com/2009/08/lalitha-sahasranamam-129-133.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 
 
Rating
Average: 5 (1 vote)

Comments

Submitted by nageshamysore Thu, 06/20/2013 - 21:34

ಶ್ರೀಧರರೆ, 129-133ರ ವರೆಗಿನ ನಾಮಾವಾಳಿ, ತಮ್ಮ ಅವಗಾಹನೆ ಹಾಗೂ ಪರಿಷ್ಕರಣೆಗೆ - ನಾಗೇಶ ಮೈಸೂರು

೧೨೯. ಶರಶ್ಚಂದ್ರನಿಭಾನನಾ 
ಶರತ್ಕಾಲೆ ಚಂದ್ರಮ ಅತಿ ಪ್ರಜ್ವಲ ಉಜ್ವಲ ಶುಭ್ರ
ಕಲಾಹೀನ ಕಳಾಪೂರ್ಣ ಬೆಳಗೊ ಆಕಾಶ ನಿರಭ್ರ
ಶರದೃತು ಸದಾ ಸರ್ವದ ದೇವೀ ಶಶಾಂಕ ವದನ
ಪ್ರತಿಋತುವೂ ತಿಂಗಳ ಕಂಗೊಳಿಸೊ ಲಲಿತಾನನ!

೧೩೦. ಶಾತೋದರೀ 
ಲಲಿತಾ ಸಿಂಹವಾಹಿನಿ ದೈತ್ಯದಮನಾಗ್ರಣಿ
ಸಿಂಹ ಕಟಿಯನುಟ್ಟೆ ಅಡಗಿಸೇ ದುಷ್ಟರ ದನಿ
ಕಾಮಕಲಾರೂಪಚಿತ್ರಣ ಕಾಮವನೆ ಗೆದ್ದವನ
ಕೈ ಹಿಡಿದೆತ್ತಿ ದೇವಿ ಪರಬ್ರಹ್ಮಕೊಯ್ಯೆ ಜತನ!

೧೩೧. ಶಾಂತಿಮತೀ 
ಭಕ್ತವತ್ಸಲೆ ಲಲಿತೆ ಮೃದುಲ ಭಾವದೆ ಸಹಿಸುತೆ
ಶಾಂತಮತಿಯಲೆ ಯೋಗ್ಯ ಭಕ್ತಕೃತ್ಯ ಸೈರಿಸುತೆ
ಸಹನಾತೀತ ಮಿತಿ ದಾಟಿದರಾಗದಿಹರೆ ಆಹುತಿ
ಅಳುಕದೆ ತಿದ್ದೆ ಅಶ್ವಾರೂಢ ವಾರಾಹಿಗಳ ಸನ್ಮತಿ!

೧೩೨. ನಿರಾಧಾರಾ 
ಅನಂತಕೆಲ್ಲಿದೆ ಅಂತ ಮಿತಿಗಷ್ಟೇ ಮೃತ್ಯು ಸ್ವಂತ
ಧಿಕ್ಕರಿಸಿ ಸ್ವಯಂಬಲಸಹಿತ ನಿರಾಧಾರಾಧ್ಭುತ
ಅಂತೆ ಶಕ್ತಿಪೂಜೆ ಆಂತರಿಕ ಸಾಕಾರ ನಿರಾಕಾರ
ಬಾಹ್ಯಪೂಜೆಗೆ ಮಿಗಿಲೆ ಶೀಘ್ರ ಆತ್ಮ ಸಾಕ್ಷಾತ್ಕಾರ!

೧೩೩. ನಿರಂಜನಾ
ಅಂಜನಕೆ ಅಂಜನ ನಿರಂಜನಾಕ್ಷಿ ಲಲಿತಾಂಬಿಕೆ
ಅಜ್ಞಾನಾಂಜನರಹಿತೆ ನಿರಂಜನ ಹೆಸರೆ ಬೆಳಕೆ
ಕಳಂಕರಹಿತೆ ನಿರ್ಗುಣ ಬ್ರಹ್ಮರೂಪೆ ಕುಂಡಲಿನಿ
ಆಜ್ಞಾಚಕ್ರದೇ ನಿಷ್ಕಳಂಕ ಛವಿ ತೋರಳೆ ಜನನಿ!

Submitted by makara Fri, 06/21/2013 - 18:42

In reply to by nageshamysore

೧೩೦ನೇ ನಾಮವಾದ ಶಾತೋದರೀ ವಿವರಣೆಯನ್ನು ಬಹಳ ಸ್ವಲ್ಪವೇ ಕೊಟ್ಟಿದ್ದೆ ಅದರ ಕುರಿತು ಕವನವನ್ನ ಹೇಗೆ ಹೊಸೆಯುತ್ತೀರೋ ಎನ್ನುವ ಕುತೂಹಲವಿತ್ತು. ಎಂದಿನಂತೆ ನಿಮ್ಮ ಉತ್ಕೃಷ್ಟತೆಯನ್ನು ಎತ್ತಿ ಹಿಡಿದಿದ್ದೀರ ನಾಗೇಶರೆ, ಅಭಿನಂದನೆಗಳು.