ಗಂಗಾವತರಣ...!

ಗಂಗಾವತರಣ...!

ಪಾರ್ಥರ ಚಿತ್ರಗಳು ಪ್ರೇರೇಪಿಸಿದ ಗಂಗೆಯ ದೃಷ್ಟಿಕೋನದಿಂದ ಬಂದ ಕವನದ ಜತೆಗೆ ಬಂದ ಮತ್ತೊಂದು ಭಾವ -  ನಿಜ ಗಂಗಾವತರಣವನ್ನು ಕುರಿತದ್ದು. ಇಲ್ಲಿ ಗಂಗೆಯ ಮತ್ತೊಂದು ವಿಭಿನ್ನ ವ್ಯಾಖ್ಯಾನದ ಯತ್ನ, ತುಸು ಸಮಗ್ರ ರೂಪದಲ್ಲಿ - ನಾಗೇಶ ಮೈಸೂರು, ಸಿಂಗಪುರದಿಂದ


ಗಂಗಾವತರಣ
-----------------

ಹರಿಪಾದದಿಂದ 
ಹರಿದ ಬ್ರಹ್ಮಾನಂದ
ರೊಚ್ಚು ತಡೆಯಲೆಲ್ಲಿ 
ಗಂಗೆ ಗಂಡುಭೀರಿ ತರಂಗ
ಟೊಂಕಕಟ್ಟಿ ಹರನೆ
ನಿಲಬೇಕಾದ ಪ್ರಸಂಗ
ಜಟೆಯೊಳಗೆ ಸುಳಿದೆದ್ದು 
ತಣ್ಣಗಿಳಿದಾ ಗಂಗಾ...!

ತ್ರಿಮೂರ್ತಿಗಳನೆ ಕಾಡಿಸಿ
ಮೂರು ಪೀಳಿಗೆ ಗೋಳಾಡಿಸಿ
ದಿಲೀಪ ಅಂಶುಮನ ಭಗೀರತ
ಸದ್ಗತಿ ಸಗರ ಪುತ್ರರ ಬೂದಿಗೆ  
ಬಂದಳೆ ಹಠಮಾರಿ ಪ್ರಯತ್ನ
ಚಂಡಿ ಹಿಡಿದವಳ ಬಿಡದೆ ಜತನ
ಗಲಿರುಗಲಿರೆಂದು ಹರಿದವಳ 
ಅರೆಮನಸಲೆ ಇಳೆಗಿಳಿದವಳಾ!

ಇಳಿದ ಬಿಂಕವೊ ದೋಣಿ
ಮೊಸಳೆಯೇರಿದ ತರುಣಿ 
ಕಡೆಗೂ ಬಂದಳೆ ಶರಣ
ಏನೇನೆಲ್ಲ ಕಾರ್ಯಕಾರಣ
ಪ್ರಸಾದಿಸುತ ಸಗರ ಮುಕ್ತಿ
ಶಂತನು ಮರುಳಾಗು ಕುಯುಕ್ತಿ
ಶಾಪ ವಿಮೋಚನೆಗೆ ಅಷ್ಟಾವಸು
ಭೀಷ್ಮನ ಹೆತ್ತೇ ಕರುಣಿಸು!

ನಮ್ಮ ಪುರಾಣಗಳೆ ಹೀಗೆ
ಶಾಪ ವಿಮೋಚನೆ ಸೊಬಗೆ
ಕೊಟ್ಟಾರೊ ಉರಿದು ಶಾಪಾರ್ಥ
ಪರಿಹಾರ ಲೋಕಸೇವಾರ್ಥ
ಹೆಜ್ಜೆಜ್ಜೆಗೂ ನೀತಿ ನಿಯತಿ
ಕಥೆಗಳೆ ಗೊಂದಲದೊಡತಿ
ದೇವವ್ರತ ಮಹಾಭಾರತ
ನಡೆಸಿದ್ದಕ್ಕೂ ಕಾರಣವಿತ್ತ?

ಆದರೀಗೇಕೊ ಭಾಗೀರಥಿ
ಬಿರುಸು ಕಳಚಿದ ಯುವತಿ
ವಯಸಾಯಿತೆ ಮುರುಟಿ
ಮಕರಗಳ ಮೊಗ ಮೊಗುಚಿ
ಈಗ ಹರಿದೆಲ್ಲೆಡೆ ಕಶ್ಮಲ
ಕಂಡೂ ಕಾಣದ ನಿಶ್ಚಲ
ದಿನಗಳೆಣಿಸಿದಂತೆ ಮಗನೆ
ಕಾದಿರುವೆಯ ಹಿಂತಿರುಗೆ ಮನೆ?

ಗಂಗಾವತಣದ ಹೊತ್ತು
ವೈಭವವೆ ಹೇಗಿತ್ತು
ಅಖಂಡ ಭೂಶಿರ ಪೂರ
ಬರಿ ನಿನ್ನದಾಗಿತ್ತು
ಈಗಿದ್ದರೂ ಹಾಹಾಕಾರ
ಬಿಡದಲ್ಲ ಗ್ರಹಚಾರ
ಕೃಷ್ಣ ಕಾವೇರಿ ಗಂಗಾ ತರ್ಕ
ಸಮಷ್ಟಿಗು ಚಿಂತಿಸೊ ಲೋಕ!
 
- ಧನ್ಯವಾದಗಳೊಂದಿಗೆ, ನಾಗೇಶ ಮೈಸೂರು
 

 

Comments

Submitted by nageshamysore Sun, 06/23/2013 - 07:49

In reply to by partha1059

ಪಾರ್ಥಾ ಸಾರ್, ನಮ್ಮ ವ್ಯವಸ್ಥೆ ಸ್ವಾರ್ಥಲಾಲಸೆ, ರಾಜಕೀಯಗಳನ್ನು ಬದಿಗಿಟ್ಟು ಆಧುನಿಕ ಭಗೀರತರನ್ನು ಬರಲು ಬಿಟ್ಟರೆ, ಭಗೀರತಗೇನೂ ಕೊರತೆಯಿಲ್ಲ - :-) ನಾಗೇಶ ಮೈಸೂರು
Submitted by H A Patil Sat, 06/22/2013 - 18:54

ನಾಗೇಶ ಮೈಸೂರು ರವರಿಗೆ ವಂದನೆಗಳು " ಗಂಗಾವತರಣ " ಕವನ ಓದಿದೆ, ಇದೊಂದು ಅದ್ಭುತ ರಚನೆ.ಗಂಗೆಯ ಸಮಗ್ರ ಪೌರಾಣಿಕ ಚರಿತ್ರೆಯ ದರ್ಶನ ಮಾಡಿಸಿದ್ದೀರಿ, ಆದಿ ಕಾಲದಿಂದ ವರ್ತಮಾನದ ವರೆಗೆ ಆಕೆ ಸಾಗಿಬಂದ ಬದುಕು ಆಕೆಯ ಮುನಿಸು ಆಕೆ ಮಾಡಿದ ಅನಾಹುತ ಎಲ್ಲ ಕಣ್ಮುಂದೆ ತೇಲಿ ಬಂದವು. ಇದೊಂದು ಸಾರ್ವಕಾಲಿಕ ಕವನ ಇಂದೂ ಮುಂದೂ ಎಲ್ಲ ಕಾಲಕ್ಕೂ ಪ್ರಸ್ತುತ ವಾಗುವಂತಹುದು, ಅತ್ಯುತ್ತಮ ಕವನ ಓದಿದ ತೃಪ್ತಿ ನನಗಾಯಿತು, ಧನ್ಯವಾದಗಳು.
Submitted by nageshamysore Sun, 06/23/2013 - 08:04

In reply to by H A Patil

ಹಿರಿಯರಾದ ಪಾಟೀಲರಿಗೆ ನಮಸ್ಕಾರ. ತಮ್ಮ ಆರೋಗ್ಯ ಸುಧಾರಿಸಿ ಮತ್ತೆ ಇಲ್ಲಿ ಸಕ್ರೀಯವಾಗಿದ್ದು ಗಂಗಾವತರಣವಾದ ಹಾಗೆ ಸಂತಸ. ಸಮಗ್ರವಾಗಿ ಆದಿಯಿಂದ ನೋಡಿದರೆ ಗಂಗೆಯ ಆಗಮನ ಬರಿ ಸಗರ ಸುತರ ಮುಕ್ತಿಗೆ ಮಾತ್ರವಲ್ಲದೆ, ಬೇರೆಲ್ಲಾ ಉದ್ದೇಶ - ಗಮ್ಯಗಳನ್ನು ಒಟ್ಟುಗೂಡಿಸಿದ ವಿಧಾತನ ನಡೆಯಾಗಿ ಕಂಡಿತು (ಅಷ್ಟಾವಸು ಶಾಪ, ಅವರೆಲ್ಲ ಗಂಗೆಯ ಉದರದಲ್ಲಿ ಜನಿಸಿ ಶಾಪವಿಮುಕ್ತರಾಗಿದ್ದು - ಭೀಷ್ಮನಾಗಿ ಜನಿಸಿದ ಒಬ್ಬ ವಸು ಎಲ್ಲರ ಪರವಾಗಿ ಶಾಪ ಭರಿಸಿದ್ದು, ಮಹಾಭಾರತದ ಭೀಷ್ಮನ ಭೂಮಿಕೆ - ಹೀಗೆ ಹೊರ ನೋಟಕ್ಕೆ ಬಿಡಿಯಾಗಿ ಕಂಡರೂ ಒಟ್ಟಾರೆ ನೋಟದಲ್ಲಿ ಬೇರೆಯದೆ ಚಿತ್ರಣವೆನಿಸಿತು. ಅದರ ಫಲಿತ ನಿಮಗೆ ಮೆಚ್ಚಿಗೆಯಾದದ್ದು ಸಂತಸದ ವಿಷಯ  :-) ನಾಗೇಶ ಮೈಸೂರು